ಚಂದನವನದಲ್ಲಿ ಬೀಸಿದೆ ಕರಾವಳಿಯ ಚಂದದ ಗಾಳಿ..!

ಚಂದನವನದಲ್ಲಿ ಬೀಸಿದೆ ಕರಾವಳಿಯ ಚಂದದ ಗಾಳಿ..!

ಕನ್ನಡ ಚಿತ್ರರಂಗವೆಂದರೆ ರಾಜಧಾನಿ ಬೆಂಗಳೂರಿಗೆ ಸೀಮಿತ ಎನ್ನುವ ಕಾಲವೊಂದಿತ್ತು. ಆದರೆ ಆ ಕಾಲದಲ್ಲಿಯೂ ಪರದೆಯ ಮೇಲೆ ಹೆಸರು ಮಾಡುವವರು ಮೈಸೂರು ಮೂಲದವರಾಗಿದ್ದರು. ಇಂದಿಗೂ ಚಿತ್ರರಂಗದ ಪರದೆಯ ಹಿಂದಿನ ಕೆಲಸಗಳಲ್ಲಿ ಮಂಡ್ಯದ ಮಂದಿಯೇ ಅಧಿಕವಿರುವುದನ್ನು ಕಾಣಬಹುದು. ಆದರೆ ಮಂಗಳೂರು ಕರಾವಳಿಗೆ ಸಂಬಂಧಿಸಿದಂತೆ ಒಂದು ವಿಶೇಷ ಸ್ಥಾನವಿದೆ. ಈ ಕುರಿತು ಶಶಿಕರ ಪಾತೂರು ವಿಶ್ಲೇಷಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಪ್ರತಿ ಬಾರಿ ಪ್ರಯೋಗಾತ್ಮಕ ಚಿತ್ರಗಳ ವಿಚಾರಕ್ಕೆ ಬಂದರೆ ಅಲ್ಲಿ ಮಂಗಳೂರು ಕರಾವಳಿಯ ಪ್ರತಿಭೆಗಳು ಕಾರ್ಯ ನಿರ್ವಹಿಸಿರುವುದನ್ನು ಕಾಣುತ್ತೇವೆ. ಇದು ಎಪ್ಪತ್ತರ ದಶಕದಲ್ಲಿ ವಂಶವೃಕ್ಷದ ಚಿತ್ರದ ಮೂಲಕ ಹೊಸ ಅಲೆಯ ಚಿತ್ರಗಳಿಗೆ ನಾಂದಿ ಹಾಡಿದ ಬಿವಿ ಕಾರಂತ, ಚೋಮನ ದುಡಿಯ ಶಿವರಾಮ ಕಾರಂತರಿಂದ ಹಿಡಿದು, ಎಂಬತ್ತರಲ್ಲಿ ಕಾಶೀನಾಥ್, ತೊಂಬತ್ತರಲ್ಲಿ ಉಪೇಂದ್ರ, ಎರಡು ಸಾವಿರದಲ್ಲಿ ಯೋಗರಾಜ್ ಭಟ್, ಬಳಿಕ ರಕ್ಷಿತ್ ಶೆಟ್ಟಿ, ಅನೂಪ್ ಭಂಡಾರಿ ಹೀಗೆ ಕನ್ನಡ ಚಿತ್ರರಂಗದ ಪ್ರತಿಯೊಂದು ದಶಕದ ಪ್ರಮುಖ ಬದಲಾವಣೆಯಲ್ಲಿ ಒಬ್ಬ ಕರಾವಳಿ ಮೂಲದ ವ್ಯಕ್ತಿಯ ಪಾತ್ರ ಎದ್ದು ಕಾಣುತ್ತಿರುತ್ತದೆ. ಆದರೆ ಕಳೆದ ಒಂದು ದಶಕದಲ್ಲಿ ಅದರಲ್ಲಿ ಕೂಡ ರಕ್ಷಿತ್ ಶೆಟ್ಟಿ ಮತ್ತು ರಿಷಭ್ ಶೆಟ್ಟಿಯವರ ಗೆಲುವು ಕರಾವಳಿಯ ಒಂದು ಯುವ ಸಮುದಾಯವನ್ನೇ ಬೆಂಗಳೂರಿನ ಗಾಂಧಿನಗರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. ಇತ್ತೀಚೆಗೆ ತೆರೆಕಂಡ ಮತ್ತು ತೆರೆಕಾಣಲಿರುವ ಗಮನಾರ್ಹ ಚಿತ್ರಗಳ ಕುರಿತಾದ ಮಾಹಿತಿಗಳು ಇವು.

ಯಶಸ್ವಿ ಚಿತ್ರಗಳಲ್ಲಿದ್ದಾರೆ ಕರಾವಳಿಯ ಕಲಾವಿದರು!

ಈ ವರ್ಷದ ಯಶಸ್ವೀ ಚಿತ್ರ ಎಂದು ಗುರುತಿಸಿಕೊಂಡಿರುವ ಸಿನಿಮಾ ಬೆಲ್ ಬಾಟಂ. ಚಿತ್ರದ ನಿರ್ದೇಶಕ ಜಯತೀರ್ಥ ಆಗಿದ್ದರೂ, ಚಿತ್ರದ ಬಹುತೇಕ ಕ್ರೆಡಿಟ್ ಸಮರ್ಪಣೆಯಾಗುವುದು ನಾಯಕ ರಿಷಭ್ ಶೆಟ್ಟಿಗೆ. ಅದಕ್ಕೆ ಕಾರಣ, ಅವರು ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಂಥ ಚಿತ್ರವನ್ನು ನೀಡಿದ ನಿರ್ದೇಶಕ ಎನ್ನುವ ಕಾರಣದಿಂದಲೇ ಇರಬಹುದು. ಅದರ ಜತೆಯಲ್ಲೇ ನಾಯಕರಾಗಿ ಅವರು ಗಮನ ಸೆಳೆದಿರುವ ರೀತಿ ಕೂಡ ಕಾರಣ ಎಂದು ಹೇಳಲೇಬೇಕು.

ವರ್ಷದ ಪ್ರಥಮಾರ್ಧದಲ್ಲೇ ಗಮನ ಸೆಳೆದಿರುವ ಮತ್ತೊಂದು ಚಿತ್ರ ಪ್ರೀಮಿಯರ್ ಪದ್ಮಿನಿ. ಜಗ್ಗೇಶ್ ನಾಯಕರಾಗಿರುವ ಈ ಚಿತ್ರದ ದ್ವಿತೀಯಾರ್ಧದಲ್ಲಿ ಅವರ ಪಾತ್ರಕ್ಕೆ ಒಂದು ಸ್ಫೂರ್ತಿಯಾಗುವ ಪದ್ಮಿನಿ ಎನ್ನುವ ಪ್ರಮುಖ ಪಾತ್ರವನ್ನು ನಿರ್ವಹಿಸಿರುವುದು ಕೃತಿ ಶೆಟ್ಟಿ. ನೃತ್ಯಗಾತಿಯಾಗಿ ಗುರುತಿಸಿಕೊಂಡಿರುವ ಕೃತಿಯವರು ಮೂಲತಃ ಉಡುಪಿಯಯವರಾಗಿದ್ದು ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಅವರ ಪತ್ನಿಯೂ ಹೌದು.
ಈ ವರ್ಷದ ಕಮರ್ಷಿಯಲ್ ಹಿಟ್ ಎಂದು ಘಂಟಾಘೋಷವಾಗಿ ಸಾರಿಕೊಂಡಿರುವ ಚಿತ್ರ ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಐ ಲವ್ ಯು. ಇದು ಚಂದ್ರು ನಿರ್ದೇಶನದ ಸಿನಿಮಾವಾದರೂ ಟ್ರೇಲರ್ ನಲ್ಲಿ ಉಪೇಂದ್ರರ ಶೈಲಿ ಎದ್ದು ಕಾಣುತ್ತಿತ್ತು. ಅಂತಿಮವಾಗಿ ಚಿತ್ರ ಹೇಗಿತ್ತು ಎನ್ನುವುದಕ್ಕಿಂತಲೂ ರಿಯಲ್ ಸ್ಟಾರ್ ಮುಕುಟಕ್ಕೆ ಮತ್ತೊಂದು ಯಶಸ್ವಿ  ಗರಿ ತಂದು ಕೊಟ್ಟಂಥ ಸಿನಿಮಾ ಇದು.

ಮೇಕಿಂಗ್ ವಿಚಾರದಲ್ಲಿಯೂ ಕಿಂಗ್ ಗಳು

ಇವಿಷ್ಟು ಯಶಸ್ವಿ ಸಿನಿಮಾಗಳ ಕತೆಯಾದರೆ, ಮೇಕಿಂಗ್ ಮತ್ತು ಕಥಾ ವಸ್ತುಗಳಿಂದಲೇ ಗಮನ ಸೆಳೆದ ಒಂದಷ್ಟು ಚಿತ್ರಗಳಲ್ಲಿಯೂ ಕರಾವಳಿಯ ಮಂದಿಯೇ ಹೆಸರು ಮಾಡಿದ್ದಾರೆ.  ಅವುಗಳಿಗೆ ಕಳೆದ ತಿಂಗಳು ತೆರೆಕಂಡಿರುವ ಮಹಿರ ಉತ್ತಮ ಉದಾಹರಣೆ. ಚಿತ್ರದ ನಿರ್ದೇಶಕ ಮಹೇಶ್ ಅವರನ್ನು ಹೊರತು ಪಡಿಸಿದರೆ, ನಾಯಕಿ ವರ್ಜಿನಿಯಾ ರಾಡ್ರಿಗಸ್, ವಿಶೇಷ ಪಾತ್ರಧಾರಿ ರಾಜ್ ಬಿ ಶೆಟ್ಟಿ ಸೇರಿದಂತೆ ಚಿತ್ರತಂಡದ ಬಹುತೇಕ ಮಂದಿ ಮಂಗಳೂರಿನವರೇ ಎನ್ನುವುದು ವಿಶೇಷವಾಗಿತ್ತು. ಸಿನಿಮಾ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲವಾದರೂ  ಚಿತ್ರೋದ್ಯಮದ ಗಮನ ಸೆಳೆದಿದ್ದು ಮಾತ್ರ ನಿಜ. ಜೈಜಗದೀಶ್ ಮತ್ತು ವಿಜಯಲಕ್ಷ್ಮೀ ಸಿಂಗ್ ತಮ್ಮ ಮೂರು ಮಂದಿ ಹೆಣ್ಣು ಮಕ್ಕಳನ್ನು ಒಂದೇ ಚಿತ್ರದ ಮೂಲಕ ತೆರೆಗೆ ತಂದ ಮಹತ್ವಾಕಾಂಕ್ಷೆಯ ಚಿತ್ರ ಯಾನ. ಆಯ್ದುಕೊಂಡ ಸಬ್ಜೆಕ್ಟ್ ವಿಚಾರದಲ್ಲಿ ಬಹಳ ಸುದ್ದಿಯಾದ ಯಾನ ಚಿತ್ರದ ನಿರ್ಮಾಣದಲ್ಲಿ ಭಾಗಿಯಾದವರು ‘ಮಾರ್ಚ್ 22’ ಎನ್ನುವ ಪ್ರಶಸ್ತಿ ವಿಜೇತ ಚಿತ್ರದ ನಿರ್ಮಾಪಕ ಹರೀಶ್ ಶೇರಿಗಾರ್. ಅವರು ಕೂಡ ಕರಾವಳಿಯ ಉದ್ಯಮಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲವಲ್ಲ?
 
ಯಶಸ್ಸಿನ ಅಲೆ ಮುಂದುವರಿದಿದೆ

ಪ್ರಸ್ತುತ ಆಗಸ್ಟ್ ತಿಂಗಳ ವಿಚಾರಕ್ಕೆ ಬಂದರೆ, ಮೊದಲ ವಾರದಲ್ಲೇ ನೀತು ಶೆಟ್ಟಿ ಕೇಂದ್ರ ಪಾತ್ರದಲ್ಲಿ ಅಭಿನಯಿಸಿರುವ ವಿಭಿನ್ನ ರೀತಿಯ ಹಾರರ್ ಸಿನಿಮಾ ವಜ್ರಮುಖಿ ತೆರೆಕಂಡಿತು. ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಯಶಸ್ವಿ ನಿರ್ಮಾಪಕ ಟಿ ಆರ್ ಚಂದ್ರಶೇಖರ್ ನಿರ್ಮಿಸಿ ತೆರೆಕಂಡಿರುವ ಚಿತ್ರ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ರಾಜ್ ಬಿ ಶೆಟ್ಟಿಯವರ ನಟನೆ ವ್ಯಾಪಕ ಪ್ರಶಂಸೆ ಪಡೆಯುತ್ತಿದೆ. ಅಂದಹಾಗೆ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿರುವವರು ಮಣಿಕಾಂತ್ ಕದ್ರಿ.

ಇವಷ್ಟೇ ಅಲ್ಲ, ಈ ವರ್ಷ ಬಿಡುಗಡೆಯಾಗಲಿರುವ ಬಹು ನಿರೀಕ್ಷಿತ ಕನ್ನಡ ಚಿತ್ರಗಳ ಪಟ್ಟಿ ತೆಗೆದರೂ ಅಲ್ಲಿ ಮಂಗಳೂರು ಕರಾವಳಿಯ ಅಲೆ ಎದ್ದು ಕಾಣುವಂತಿರುವುದು ನಿಜ. ಅಂಥ ಚಿತ್ರಗಳ ಪಟ್ಟಿಯಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರವೂ ಕೂಡ ಸೇರಿದೆ. ಕಳೆದ ತಿಂಗಳು ತೆರೆಕಂಡ ಡಿಚ್ಕಿ ಡಿಸೈನ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿರುವ ಕರಾವಳಿ ಹುಡುಗಿ ನಿಮಿಕಾ ರತ್ನಾಕರ ನಾಯಕಿಯಾಗಿರುವ ಬಹುನಿರೀಕ್ಷಿತ ಚಿತ್ರ ರವಿಚಂದ್ರದಲ್ಲಿ ಪ್ರಥಮ ಬಾರಿಗೆ ಉಪೇಂದ್ರ ಮತ್ತು ರವಿಚಂದ್ರನ್ ಜೋಡಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ರವಿ ಬೋಪಣ್ಣದಲ್ಲಿ ಕಾವ್ಯಾ ಶೆಟ್ಟಿ ನಟಿಸಿದ್ದಾರೆ. ರವಿಚಂದ್ರನ್ ಅವರದೇ ‘ಆ ದೃಶ್ಯ’ ಸಿನಿಮಾದಲ್ಲಿ ‘ಸೂಜಿದಾರ’ ಖ್ಯಾತಿಯ ನಾಯಕ ಯಶ್ ಶೆಟ್ಟಿ ಪ್ರಧಾನ ಪಾತ್ರ ನಿರ್ವಹಿಸಿದ್ದಾರೆ. ಟ್ರೇಲರ್ ಮೂಲಕ ಸಂಚಲನ ಮೂಡಿಸಿರುವ ಸಂಚಾರಿ ವಿಜಯ್ ನಟನೆಯ ಚಿತ್ರ `ಆಟಕ್ಕುಂಟು ಲೆಕ್ಕಕ್ಕಿಲ್ಲ’ ಸಿನಿಮಾದಲ್ಲಿ ದುನಿಯಾ ರಶ್ಮಿ ಪ್ರಧಾನ ಪಾತ್ರ ವಹಿಸಿದ್ದು, ಅವರ ರೀ ಎಂಟ್ರಿಯ ಬಗ್ಗೆ ಕುತೂಹಲ ಮೂಡಿದೆ.

ಟ್ರೆಂಡ್ ಹಿಂದೆ ಹೋದರೆ ಇವರಿಗೂ ಸೋಲೇ ಗತಿ!

ಇದೇ ವಾರ ತೆರೆಕಾಣಲಿರುವ ಫ್ಯಾನ್ ಚಿತ್ರದ ನಿರ್ದೇಶಕ ದರ್ಶಿತ್ ಭಟ್ ಕೂಡ ಕರಾವಳಿಯದೇ ತಂಡದೊಂದಿಗೆ ಆಗಮಿಸಿದ್ದಾರೆ. ಚಿತ್ರದ ನಾಯಕಿ ಅದ್ವಿತಿ ಶೆಟ್ಟಿ ಸೇರಿದಂತೆ ಬಹಳಷ್ಟು ಮಂದಿ ಕರಾವಳಿಯ ಕಲಾವಿದರಿದ್ದಾರೆ. ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ನಿರ್ದೇಶಿಸಿ ನಾಯಕರಾಗಿರುವ ಸವರ್ಣದೀರ್ಘ ಸಂಧಿ ಚಿತ್ರದಲ್ಲಿ ಕರಾವಳಿಯ ಚೆಲುವೆ ವಿನಯ ಪ್ರಸಾದ್ ಅವರ ಸಹೋದರನ ಪುತ್ರಿ ನಾಯಕಿಯಾಗಿದ್ದಾರೆ. ಅಕ್ಷಿತ್ ಶೆಟ್ಟಿ ನಿರ್ದೇಶನದ ಲುಂಗಿ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಹಾಗಂತ ಕರಾವಳಿಯ ಚಿತ್ರಗಳೆಲ್ಲ ಉತ್ತಮ ಎನ್ನಲಾಗದು. ಅಲ್ಲಿನ ಮಂದಿಗೂ ಟ್ರೆಂಡ್ ಹಿಂದೆ ಹೋಗುವ ಹಾವಳಿ ಹೆಚ್ಚಿದೆ. ಬಂದವರೆಲ್ಲ ರಕ್ಷಿತ್ ಶೆಟ್ಟಿಯಂತೆ ಮಂಗಳೂರು ಕನ್ನಡದಲ್ಲೇ ಮಾತನಾಡಿ ಮನಸೆಳೆಯುವ ವ್ಯರ್ಥ ಪ್ರಯತ್ನ ಮಾಡುವುದು ಮತ್ತು ಅನೂಪ್ ಭಂಡಾರಿಯಂತೆ ರಂಗಿತರಂಗ ಮಾದರಿಯ ಭೂತಕೋಲದ ಹಿನ್ನೆಲೆಯಲ್ಲೇ ಕತೆ ಹೇಳುತ್ತಾ ಕುಳಿತರೆ ಸಿನಿಮಾಗಳು ಹೆಸರು ಅಥವಾ ಯಶಸ್ಸು ಮಾಡುವುದು ಕಷ್ಟ ಎಂದು ಈಗಾಗಲೇ ಸಾಬೀತಾಗಿದೆ. ಉದಾಹರಣೆಗೆ ಕಾರ್ತಿಕ್ ನಟಿಸಿದಂಥ ಅನುಕ್ತ ಎನ್ನುವ ವೆಲ್ಮೇಡ್ ಚಿತ್ರವನ್ನೇ ತೆಗೆದುಕೊಳ್ಳಬಹುದು. ಅದೇ ರೀತಿ ನಿರೂಪ್ ಭಂಡಾರಿಯಂಥ ನಾಯಕ, ರಾಧಿಕಾ ಪಂಡಿತ್ ರಂಥ ನಾಯಕಿಯಿದ್ದೂ ಫ್ಲಾಪ್ ಆದ ಆದಿಲಕ್ಷ್ಮಿ ಪುರಾಣವನ್ನೂ ನೆನಪಿಸಿಕೊಳ್ಳಬಹುದು. ಮಾತ್ರವಲ್ಲ, ಗ್ರಂಥಸ್ಥ ಕನ್ನಡ ಮಾತನಾಡುವವರೆಂದೇ ಪರಿಗಣಿಸಲ್ಪಟ್ಟಿದ್ದರೂ ಕನ್ನಡದಲ್ಲಿ ಸಾರ್ವಕಾಲಿಕ ದಾಖಲೆಯಾಗಿ ಗುರುತಿಸುವಂಥ ಚಿತ್ರವಾದ ‘ಮುನಿರತ್ನ ಕುರುಕ್ಷೇತ್ರ’ದಲ್ಲಿ ಯಾವುದೇ ಕರಾವಳಿ ಕನ್ನಡಿಗನ ಪ್ರಾತಿನಿಧ್ಯವಿಲ್ಲ ಎನ್ನುವುದು ಕೂಡ ನಿಜ.

ಪ್ರತಿಭೆಗಳಷ್ಟೇ ಪರ್ಮನೆಂಟು

ಆದರೆ ಏನೇ ಹೇಳಿ ಅನೂಪ್ ಭಂಡಾರಿ, ನಿರೂಪ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮೊದಲಾದವರ ಮುಂದಿನ ಚಿತ್ರಗಳ ಬಗ್ಗೆ ಕನ್ನಡವಷ್ಟೇ ಅಲ್ಲ, ಪರಭಾಷಾ ಚಿತ್ರರಂಗದ ಮಂದಿಯೂ ನಿರೀಕ್ಷೆ ತೋರಿಸುತ್ತಿರುವುದು ಇದು ಕರಾವಳಿಯ ಗಾಳಿ ಬಲವಾಗಿದೆ ಎಂದು ತೋರಿಸುತ್ತಿರುವ ಸೂಚನೆಯಾಗಿದೆ. ಸಿನಿಮಾಗಳಿಗೆ ಭಾಷೆಯಿಲ್ಲ ಎನ್ನುವುದನ್ನು ತುಸು ಹೆಚ್ಚೇ ನಂಬಿಕೊಂಡು ಪರಭಾಷಾ ಚಿತ್ರಗಳನ್ನು ಕೂಡ ನೋಡಿ ಪ್ರೋತ್ಸಾಹಿಸುವ ನಾವು ಕನ್ನಡ ಸಿನಿಮಾಗಳಲ್ಲಿ ಮೈಸೂರು, ಕರಾವಳಿ ಎಂದು ಮಾತ್ರವಲ್ಲ ಎಲ್ಲೆಡೆಯ ಪ್ರತಿಭೆಗಳನ್ನು ಕೂಡ ಕೈನೀಡಿ ಸ್ವೀಕರಿಸುವುದರಲ್ಲಿ ಸಂದೇಹವಿಲ್ಲ ಎನ್ನುವುದಂತೂ ವಾಸ್ತವ. 

                                                                                                                                                                                           -ಶಶಿಕರ ಪಾತೂರು