ಮಾದರಿ ಗ್ರಾಮದ ಹೆಸರಲ್ಲಿ ಅಧಿಕಾರಿಗಳಿಂದ  ಅನುದಾನ ‘ಸ್ವಚ್ಛ’, ವಿಕೇಂದ್ರೀಕರಣಕ್ಕೆ ಕಳಂಕ 

ಮಾದರಿ ಗ್ರಾಮದ ಹೆಸರಲ್ಲಿ ಅಧಿಕಾರಿಗಳಿಂದ  ಅನುದಾನ ‘ಸ್ವಚ್ಛ’, ವಿಕೇಂದ್ರೀಕರಣಕ್ಕೆ ಕಳಂಕ 

ಅಧಿಕಾರ ವಿಕೇಂದ್ರೀಕರಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇರಿಸಿ ದೇಶಕ್ಕೆ ಕರ್ನಾಟಕ ಮಾದರಿಯಾಗಿತ್ತು. ಆದರೆ  ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯತ್ ಗಳು ಆ ಹೆಮ್ಮೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಲೇ ಇವೆ. ಅಧಿಕಾರ ವಿಕೇಂದ್ರೀಕರಣದ ನಂತರ ಗ್ರಾಮ ಪಂಚಾಯತ್ಗಳಿಗೆ ಲಕ್ಷಾಂತರ ರು.ಅನುದಾನ ನೇರವಾಗಿ ಹಂಚಿಕೆಯಾಗುತ್ತಿದೆ. ಅನುದಾನವನ್ನು ಸದ್ಬಳಕೆ ಮಾಡಿಕೊಂಡು ಮಾದರಿ ಗ್ರಾಮಗಳನ್ನಾಗಿಸಬೇಕಿದ್ದ ಅಧಿಕಾರಿಗಳು, ಅನುದಾನವನ್ನು ದುರುಪಯೋಗಪಡಿಸಿಕೊಂಡು ಕಳಂಕ ಮೆತ್ತಿದ್ದಾರೆ. ಈ ಸಾಲಿಗೀಗ ಸ್ವಚ್ಛ ಭಾರತ್ ಮಿಷನ್, ಸಂಪೂರ್ಣ ಸ್ವಚ್ಛತಾ ಆಂದೋಲನವೂ ಸೇರಿದೆ. ಜಿ.ಮಹಂತೇಶ್ ವಿಶೇಷ ವರದಿ ಇಲ್ಲಿದೆ.

ನಿರ್ಮಲ್ ಭಾರತ್ ಅಭಿಯಾನ್ ಯೋಜನೆಯಡಿ ಸಂಪೂರ್ಣ ಸ್ವಚ್ಛತಾ ಆಂದೋಲನ ಮತ್ತು ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ರಾಜ್ಯದ 12 ಜಿಲ್ಲೆಗಳಿಗೆ ಬಿಡುಗಡೆಯಾಗಿದ್ದ ಲಕ್ಷಾಂತರ ರು.ಮೊತ್ತದ ಅನುದಾನ ನಿಯಮಬಾಹಿರವಾಗಿ ಮಾರ್ಗಪಲ್ಲಟವಾಗಿರುವುದು ಸೇರಿದಂತೆ ಇನ್ನಿತರೆ ವಿಭಾಗಗಳಲ್ಲಿ ಅವ್ಯವಹಾರ ನಡೆದಿರುವುದು ಸಾಬೀತಾಗಿದೆ. ನಿಯಮಬಾಹಿರ ಚಟುವಟಿಕೆ, ಅನುದಾನ ದುರುಪಯೋಗ, ಮಾರ್ಗಪಲ್ಲಟ ಪ್ರಕರಣಗಳು ನಡೆದಿರುವುದು ಬಿ ಎಸ್ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಡಿ ವಿ ಸದಾನಂದಗೌಡ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಂಬುದು ವಿಶೇಷ. 

ಕರ್ನಾಟಕವೂ ಸೇರಿದಂತೆ ಗುಜರಾತ್, ಮಹಾರಾಷ್ಟ್ರ, ಒಡಿಶಾ, ಆಂಧ್ರಪ್ರದೇಶ, ಅಸ್ಸಾಂ, ಮಧ್ಯ ಪ್ರದೇಶ, ಪಂಜಾಬ್, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಕಾಶ್ಮೀರ್, ಹರ್ಯಾಣ ಮತ್ತು ತ್ರಿಪುರ ರಾಜ್ಯಗಳಲ್ಲಿಯೂ ಅನುದಾನ ಮಾರ್ಗಪಲ್ಲಟವಾಗಿರುವುದು ದೃಢಪಟ್ಟಿದೆಯಲ್ಲದೆ ವೈಯಕ್ತಿಕ ಶೌಚಾಲಯ ಹೊಂದಿದ ಫಲಾನುಭವಿಗಳಿಗೆ ಪ್ರೋತ್ಸಾಹಕ ಹೆಸರಿನಲ್ಲಿ  ಎರಡೆರಡು ಬಾರಿ ಹಣ ಪಾವತಿಯಾಗಿರುವುದು ಲೆಕ್ಕ ಪರಿಶೋಧನೆಯಿಂದ ತಿಳಿದು ಬಂದಿದೆ. 

ರಾಜ್ಯದ ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ಮೈಸೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ರಾಮನಗರ, ಬೆಳಗಾವಿ, ಧಾರವಾಡ, ಗದಗ್, ದಕ್ಷಿಣ ಕನ್ನಡ, ಹಾಸನ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಬಿಡುಗಡೆಯಾಗಿದ್ದ ಲಕ್ಷಾಂತರ ರು.ಮೊತ್ತದ ಅನುದಾನ ಮಾರ್ಗಪಲ್ಲಟವಾಗಿರುವುದು ಖಚಿತಪಟ್ಟಿದೆ. ಅಲ್ಲದೆ, ಕೆಲ ಜಿಲ್ಲೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಎರಡೆರಡು ಬಾರಿ ಹಣ ಪಾವತಿ, ಅನುದಾನವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿರುವುದು, ಅನುದಾನ ದುರುಪಯೋಗವಾಗಿರುವುದು, ಆಸ್ತಿ ಸೃಜನೆಯಾಗಿದೆ ಎಂದು ಸುಳ್ಳು ದಾಖಲಾತಿ ನೀಡಿರುವುದು ಸೇರಿದಂತೆ ಇನ್ನಿತರೆ ಸ್ವರೂಪದಲ್ಲಿ ಅವ್ಯವಹಾರಗಳು ನಡೆದಿರುವುದು ಕಾರ್ಯಕ್ಷಮತೆ ಲೆಕ್ಕ ಪರಿಶೋಧನೆಯಿಂದ(Performence Audit)ನಿಂದ ತಿಳಿದು ಬಂದಿದೆ.

2014ರ ಮಾರ್ಚ್ 31ಕ್ಕೆ ಅಂತ್ಯಗೊಂಡಿರುವ ಸಿಎಜಿ ವರದಿ ಕಂಡಿಕೆಗಳಿಗೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ಇತ್ತೀಚೆಗೆ ಕೈಗೊಂಡಿರುವ ಕ್ರಮಗಳ ವರದಿ ಮತ್ತು ಅನುದಾನವನ್ನು ಹಿಂಪಡೆದಿರುವ ಬಗ್ಗೆ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ಅಧೀನ ಕಾರ್ಯದರ್ಶಿ 2019ರ ಜೂನ್ 24ರಂದು ಪತ್ರ ಬರೆದಿದ್ದರು.  ಇದಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತರು ದಾವಣಗೆರೆ, ಚಿತ್ರದುರ್ಗ, ಮಂಡ್ಯ, ಚಿಕ್ಕಬಳ್ಳಾಪುರ, ಹಾಸನ, ಉತ್ತರ ಕನ್ನಡ ಸೇರಿದಂತೆ ಇನ್ನಿತರೆ ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ 2019ರ ಜುಲೈ 3ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪತ್ರಿ 'ಡೆಕ್ಕನ್ನ್ಯೂಸ್’ಗೆ ಲಭ್ಯವಾಗಿದೆ.

"ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಕೆಲವು ಜಿಲ್ಲೆಗಳಲ್ಲಿ ಅವ್ಯವಹಾರ ನಡೆದಿರುವುದು ಕಾರ್ಯಕ್ಷಮತೆ ಲೆಕ್ಕ ಪರಿಶೋಧನೆ ಪ್ರಕಾರ ದೃಢಪಟ್ಟಿರುತ್ತದೆ. ಇನ್ನು ಮುಂದೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಯಾವುದೇ ಹಣಕಾಸು ಅವ್ಯವಹಾರ ಆಗಿದ್ದು ಕಂಡುಬಂದಲ್ಲಿ ವಾರ್ಷಿಕ ಲೆಕ್ಕ ಪರಿಶೋಧನೆ ವರದಿಯಲ್ಲಿ ತಪ್ಪದೇ ಕಡ್ಡಾಯವಾಗಿ ನಮೂದಿಸಬೇಕು. ಹಾಗೆಯೇ ಸಿ ಎ ಜಿ ವರದಿಯಲ್ಲಿ ಉಲ್ಲೇಖಿಸಿರುವ ಜಿಲ್ಲೆಗಳಲ್ಲಿ ತೆಗೆದುಕೊಂಡಿರುವ ಕ್ರಮದ ಬಗ್ಗೆ ಅನುಪಾಲನ ವರದಿಯನ್ನು ಪ್ರಥಮ ಆದ್ಯತೆ ಮೇರೆಗೆ  ರಾಜ್ಯ ಕಚೇರಿಗೆ ಸಲ್ಲಿಸಬೇಕು," ಎಂದು ಆಯುಕ್ತರು ಸೂಚಿಸಿದ್ದಾರೆ.

ಈ ಪೈಕಿ ಕೆಲ ಜಿಲ್ಲಾ ಪಂಚಾಯತ್ಗಳು ಸಿಎಜಿ ವರದಿಯನ್ನೇ ತಳ್ಳಿ ಹಾಕಿದೆಯಲ್ಲದೆ, ಅನುದಾನ ಮಾರ್ಗಪಲ್ಲಟಗೊಂಡಿಲ್ಲ, ದುರುಪಯೋಗವಾಗಿಲ್ಲ ಎಂದು ಸಮರ್ಥಿಸಿಕೊಂಡಿವೆ. ಇನ್ನು ಹಲವು ಜಿಲ್ಲಾ ಪಂಚಾಯತ್ಗಳು 2 ವರ್ಷದಿಂದಲೂ ಹಣ ವಸೂಲಿಗೆ ಮುಂದಾಗಿದೆಯಾದರೂ ಈವರೆವಿಗೂ ಹಣ ಮರಳಿ ಪಡೆಯುವಲ್ಲಿ ಸಾಫಲ್ಯ ಕಂಡಿಲ್ಲ ಎಂಬುದು ವರದಿಯಿಂದ ಗೊತ್ತಾಗಿದೆ. 

ದಾವಣಗೆರೆ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಯಲ್ಲಿ ಅನುದಾನ ದುರುಪಯೋಗವಾಗಿದ್ದರೆ, ಹಾಸನ ಜಿಲ್ಲೆಯಲ್ಲಿ ಬೇರೆ ಯೋಜನೆಗಳಿಗೆ ಅನುದಾನ ಮಾರ್ಗಪಲ್ಲಟವಾಗಿದೆ. ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಫಲಾನುಭವಿಗಳಿಗೆ ಪ್ರೋತ್ಸಾಹಕ(iಟಿಛಿeಟಿಣive) ಎಂದು ಎರಡೆರಡು ಬಾರಿ ಹಣ ಪಾವತಿಯಾಗಿದೆ. ಆದರೆ ಈ 6 ಜಿಲ್ಲಾ  ಪಂಚಾಯತ್ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈವರೆವಿಗೂ  ಹಣ ವಸೂಲಿ ಮಾಡಿಲ್ಲದಿರುವುದು ವರದಿಯಿಂದ ಗೊತ್ತಾಗಿದೆ.

ದಾವಣಗೆರೆ ಜಿಲ್ಲೆಯ ಚಿಕ್ಕಕಡದಕಟ್ಟೆ, ಕಂಕೋವಾ, ಪಲವನಹಳ್ಳಿ ಮತ್ತು ಟಿ ಗೋಪಗೊಂಡನಹಳ್ಳಿ ಗ್ರಾಮ ಪಂಚಾಯತ್ಗಳು 2009-14ರ ಅವಧಿಯಲ್ಲಿ 11.60 ಲಕ್ಷ ರು.ಗಳನ್ನು ಡ್ರಾ ಮಾಡಿಕೊಂಡಿವೆ. ಈ ಸಂಬಂಧ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರಾದರೂ ಹಣ ವಸೂಲು ಮಾಡುವಲ್ಲಿ ವಿಫಲರಾಗಿದ್ದಾರೆ. ಆದರೆ ಪ್ರಕರಣ ಸಂಬಂಧ ಈ ಮೂರು ಗ್ರಾಮ ಪಂಚಾಯತ್ ಗಳ ಅಧ್ಯಕ್ಷರುಗಳ ವಿರುದ್ಧ ಕ್ರಮ ಕೈಗೊಳ್ಳಲು ಆದೇಶಿಸಿ ಕೈತೊಳೆದುಕೊಂಡಿದ್ದಾರೆ.

ಅದೇ ರೀತಿ ದಾವಣಗೆರೆ ಜಿಲ್ಲೆಯ ಕೊಕ್ಕನೂರು, ರಾಜನಹಳ್ಳಿ, ಎಳೆಹೊಳೆ, ಕೆ ಬೇವಿನಹಳ್ಳಿ, ಮಂಡ್ಯ ಜಿಲ್ಲೆಯ ಅರಳಿಕುಪ್ಪೆ, ನಾರಾಯಣಪುರ, ಚಿತ್ರದುರ್ಗ ಜಿಲ್ಲೆಯ ಜಾನಕೊಂಡ ಗ್ರಾಮ ಪಂಚಾಯತ್ ಗಳ ವ್ಯಾ ಪ್ತಿಯಲ್ಲಿ 2.88 ಲಕ್ಷ ರು.ಗಳು ದುರುಪಯೋಗವಾಗಿತ್ತು. ಈ ಪೈಕಿ ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆ ಗ್ರಾ.ಪಂ.ಗಳಿಂದ ಹಣ ವಸೂಲಿ ಆಗಿದ್ದರೆ ದಾವಣಗೆರೆ ಜಿಲ್ಲೆಯ 4 ಪಂಚಾಯತ್ ಗಳಿಂದ 1,66,000 ರು. ಮತ್ತು ಚಿತ್ರದುರ್ಗದ ಜಾನಕೊಂಡ ಗ್ರಾ.ಪಂ.ನಿಂದ 1.18 ಲಕ್ಷ ರು. ಈವರೆವಿಗೂ ವಸೂಲಾಗಿಲ್ಲ ಎಂಬುದು ವರದಿಯಿಂದ     ತಿಳಿದು ಬಂದಿದೆ.

ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ 21.00 ಲಕ್ಷ ರು., ಹಾಸನ ಜಿಲ್ಲೆಗೆ 25.50 ಲಕ್ಷ ರು. ಅನುದಾನವನ್ನು ಬೇರೆ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದ ನಿರ್ಮಿತಿ ಕೇಂದ್ರಕ್ಕೆ ಮಾರ್ಗಪಲ್ಲಟಗೊಳಿಸಲಾಗಿತ್ತು. 21 ಲಕ್ಷ ರು.ಗಳಿಗೆ ಬಡ್ಡಿಯನ್ನೂ ಸೇರಿಸಿ ವಾಪಸ್ ಮಾಡಬೇಕು ಎಂದು ಚಿತ್ರದುರ್ಗ ಮತ್ತು ಹಾಸನ ಜಿ.ಪಂ. ಸಿಇಒ 2  ವರ್ಷದ ಹಿಂದೆಯೇ ಸೂಚಿಸಿದ್ದರೂ  ನಿರ್ಮಿತಿ ಕೇಂದ್ರ ಈವರೆವಿಗೂ ಹಣ ವಾಪಸ್ ಮಾಡಿಲ್ಲದಿರುವುದು ಗೊತ್ತಾಗಿದೆ. 

ಹಾಗೆಯೇ ಕರ್ನಾಟಕ, ಬಿಹಾರ, ಛತ್ತೀಸ್ ಘಡ್, ಗುಜರಾತ್, ಹರ್ಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ಪಂಜಾಬ್, ರಾಜಸ್ಥಾನ ಮತ್ತು  ಉತ್ತರ ಪ್ರದೇಶ ರಾಜ್ಯದಲ್ಲಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಒದಗಿಸಿದ್ದ ಒಟ್ಟು ಅನುದಾನದ ಪೈಕಿ 364.26 ಕೋಟಿ ರು.ಗಳನ್ನು ಬೇರೆ ಯೋಜನೆಗಳಿಗೆ ಮಾರ್ಗಪಲ್ಲಟಗೊಳಿಸಲಾಗಿತ್ತು.