ಪದ್ಮಶ್ರೀ ಪ್ರಶಸ್ತಿ ನಿರಾಕರಿಸಲು ಬಯಸಿದ್ದೆ : ಸೈಫ್ ಅಲಿ ಖಾನ್

ಪದ್ಮಶ್ರೀ ಪ್ರಶಸ್ತಿ ನಿರಾಕರಿಸಲು ಬಯಸಿದ್ದೆ : ಸೈಫ್ ಅಲಿ ಖಾನ್

ಬೆಂಗಳೂರು : ‘ನನಗೆ ಸಿಕ್ಕಿರುವ ಪದ್ಮಶ್ರೀ ಪ್ರಶಸ್ತಿಯನ್ನು ಆರಂಭದಲ್ಲಿ ನಿರಾಕರಿಸಲು ಬಯಸಿದ್ದೆ’ ಎಂದು ಬಾಲಿವುಡ್‌ ‍ನಟ ಸೈಫ್‌ ಅಲಿ ಖಾನ್‌ ಅವರು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ದೇಶದ ನಾ‍ಲ್ಕನೇ ಉನ್ನತ ಪ್ರಶಸ್ತಿಯಾಗಿರುವ ಪದ್ಮಶ್ರೀ 2010 ರಲ್ಲಿ ಸೈಫ್‌ ಅಲಿ ಖಾನ್‌ ಗೆ ಲಭಿಸಿತ್ತು. ಈ ಪ್ರಶಸ್ತಿಯ ಕುರಿತು ಅರ್ಬಾಝ್‌ ಖಾನ್‌ ಅವರ ‘ಪಿಂಚ್’ ಎನ್ನುವ ದೂರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿರುವ ಸೈಫ್ ‘ ನಾನು ಪ್ರಶಸ್ತಿ ಪಡೆದುಕೊಳ್ಳುವಷ್ಟು ದೊಡ್ಡ ವ್ಯಕ್ತಿ ಅಲ್ಲ ಎಂದು ನನಗೆ ಅನಿಸಿತ್ತು. ನನಗಿಂತ ಹಿರಿಯ ನಟರು ಬಾಲಿವುಡ್‌ನಲ್ಲಿ ಇರುವಾಗ ಪದ್ಮಶ್ರೀ ಪ್ರಶಸ್ತಿ ಪಡೆಯುವುದು ಸಮಂಜಸವಲ್ಲ ಎಂದು ನನಗೆ ಅನಿಸಿತ್ತು’ ಎಂದು ಹೇಳಿದ್ದಾರೆ.

ಪ್ರಶಸ್ತಿಗೆ ಆಯ್ಕೆಯಾಗಿರುವ ಕುರಿತು ಸೈಫ್‌ ಅವರ ತಂದೆ ಮನ್ಸೂರ್‌ ಖಾನ್‌ ಬಳಿ ಚರ್ಚಿಸಿದಾಗ ‘ ಭಾರತ ಸರ್ಕಾರದ ನಿರ್ಧಾರವನ್ನು ತಿರಸ್ಕರಿಸುವಷ್ಟು ದೊಡ್ಡವನಲ್ಲ ನೀನು’ ಎಂದು ಪ್ರತಿಕ್ರಿಯಿಸಿದ್ದರು. ನಂತರ ತಾನು ಸಂತೋಷದಿಂದ ಪ್ರಶಸ್ತಿ ಸ್ವೀಕರಿಸಲು ಒಪ್ಪಿಕೊಂಡಿದ್ದೆ ಎಂದು ಸೈಫ್‌ ಹೇಳಿದ್ದಾರೆ.

ಪ್ರಶಸ್ತಿ ನಿರಾಕರಣೆ ಕುರಿತ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸೈಫ್ ‘ನಾನು ಪ್ರಶಸ್ತಿಗಿಂತಲೂ ಹೆಚ್ಚಾಗಿ ಸಿನಿಮಾದಲ್ಲಿ ಅಭಿನಯಿಸುವುದನ್ನು ಹೆಚ್ಚು ಆನಂದಿಸುತ್ತೇನೆ. ನಾನು ಪದ್ಮಶ್ರೀ ಪ್ರಶಸ್ತಿಗೆ ಅರ್ಹ ಎಂದು ಜನಗಳಿಗೇ ಅನಿಸಿದಾಗ ಇನ್ನಷ್ಟು ಸಂತೋಷದಿಂದ ಒಪ್ಪಿಕೊಳ್ಳುತ್ತಿದ್ದೆ’ ಎಂದು ಹೇಳಿದ್ದಾರೆ.