ಒಳ ಉಡುಪು ಧರಿಸದೇ ಬನ್ನಿ, ಹಣ ಎಣಿಸಿ ಅಯ್ಯಪ್ಪ ದೇವಾಲಯ ಸಿಬ್ಬಂದಿ ಆಕ್ರೋಶ

ಕಳ್ಳತನ ತಪ್ಪಿಸಲು ದೇವಾಲಯ ಮಂಡಳಿಯ ಸಿಬ್ಬಂದಿಗಳು, ಯಾವ ಒಳ ಉಡುಪನ್ನು ಧರಿಸಿಬಾರದು , ಬರೀ ಧೋತಿ ಕಟ್ಟಿಕೊಂಡು ಬರಬೇಕೆಂಬ ನಿಯಮ ಅನುಸರಿಸುತ್ತಿದ್ದು, ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ದೇವಾಲಯದ ಸಿಬ್ಬಂದಿಗಳು ವ್ಯಾಪಕ ಅಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಒಳ ಉಡುಪು ಧರಿಸದೇ ಬನ್ನಿ, ಹಣ ಎಣಿಸಿ ಅಯ್ಯಪ್ಪ ದೇವಾಲಯ ಸಿಬ್ಬಂದಿ ಆಕ್ರೋಶ

ಮಹಿಳೆಯರಿಗೂ ಪ್ರವೇಶದ ಅವಕಾಶವಿದೆ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ಕೊಟ್ಟಿದ್ದರೂ, ಶಬರಿಮಲೈ ಅಯ್ಯಪ್ಪ ದೇಗುಲ ಆಡಳಿತ ಮಂಡಳಿಯಾಗಲಿ, ಕೇರಳ ಸರ್ಕಾರವಾಗಲಿ ಸಮರ್ಥ ಕ್ರಮಗಳನ್ನು ತೆಗೆದುಕೊಂಡಿಲ್ಲ. ಇದು ಎಷ್ಟು ವಾಸ್ತವವೋ ಹಾಗೇ ದೇವಾಲಯದ ಹುಂಡಿಯ ಹಣ ಎಣಿಸುವ ಸಿಬ್ಬಂದಿ ಬರೀ ಪಂಚೆ ಮಾತ್ರ ಸೊಂಟಕ್ಕೆ ಸುತ್ತಿಕೊಂಡು ಬರಬೇಕು, ಒಳ ಉಡುಪುಗಳನ್ನು ಹಾಕುವಂತಿಲ್ಲ ಎಂದು ಮಾಡಿರುವ ನಿಯಮವನ್ನು ಮಾನವ ಹಕ್ಕುಗಳ ಆಯೋಗ ತೆಗೆಯುವಂತೆ ಆದೇಶಿಸಿದ್ದರೂ ಅದನ್ನು ಇವತ್ತಿಗೂ ಪಾಲಿಸುತ್ತಿಲ್ಲ ಎಂಬುದೂ ಅಷ್ಟೇ ವಾಸ್ತವ.

ಪ್ರತೀ ಮಕರ ಸಂಕ್ರಾಂತಿಯಂದು ಜ್ಯೋತಿ ಕಾಣಿಸುತ್ತದೆ ಎಂಬುದರ ಸತ್ಯವನ್ನು ಹೊರಗೆಡವಿದ್ದರೂ, ಭಕ್ತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ದಕ್ಷಿಣ ಭಾರತದಲ್ಲಿ ತಿರುಪತಿ ನಂತರ, ಅತಿಹೆಚ್ಚು ಆದಾಯ ಬರುವ ಶಬರಿಮಲೈಯಲ್ಲಿ ಈ ವರ್ಷ ಒಟ್ಟು 69.39 ಕೋಟಿ ರು.ಗಳಷ್ಟು ಭಂಡಾರ ತುಂಬಿದೆ. ಇದು ಕಳೆದ ಸಾಲಿಗಿಂತ 27.55 ಕೋಟಿ ರು.ಗಳಷ್ಟು ಹೆಚ್ಚು. ಹುಂಡಿ ಹಣ ಎಣಿಸುವ ಟ್ರಾವಂಕೂರು ದೇವಾಲಯ ಮಂಡಳಿಯ ಸಿಬ್ಬಂದಿಗಳು, ನೋಟು ನಾಣ್ಯವನ್ನು ಅಡಗಿಸಿಕೊಳ್ಳದಿರಲಿ, ಕದಿಯದಿರಲಿ ಎಂಬುದಕ್ಕಾಗಿ ಯಾವ ಒಳ ಉಡುಪು ಇರಬಾರದು, ಬರೀ ಧೋತಿ ಕಟ್ಟಿಕೊಂಡು ಬರಬೇಕೆಂಬ ನಿಯಮ ಅನುಸರಿಸುತ್ತಿದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಸಿಬ್ಬಂದಿ ಕೊಟ್ಟಿದ್ದ ದೂರಿನ ಮೇರೆಗೆ, ಮಾನವ ಹಕ್ಕುಗಳ
ಆಯೋಗ ಅದನ್ನು ಆಚರಿಸಬಾರದು ಎಂದು 2008 ರಲ್ಲೇ ಆದೇಶ ಕೊಟ್ಟಿದೆ.

ಕಳ್ಳತನ ತಪ್ಪಿಸುವುದಕ್ಕಾಗಿ ಸಿಸಿ ಕ್ಯಾಮೆರಾ, ತಪಾಸಣೆ, ಪರಿಶೋಧಕ ಯಂತ್ರ ಇತ್ಯಾದಿ ವ್ಯವಸ್ಥೆಗಳಿದ್ದರೂ, ಒಳ ಉಡುಪು ಧರಿಸಬಾರದೆಂಬ ನಿಯಮವನ್ನು ಆಯೋಗದ ಆದೇಶ ಧಿಕ್ಕರಿಸಿಯೂ ಈ ವರ್ಷವೂ ಅನುಸರಿಸಿರುವುದರ ವಿರುದ್ದ ಸಿಬ್ಬಂದಿ ಮತ್ತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಕ್ರಮ ಮತ್ತು ಕಳ್ಳತನ ತಡೆಯಲು ತಪಾಸಣೆ ನಡೆಸಿ ಅದಕ್ಕೇನೂ ವಿರೋಧವಿಲ್ಲ. ಆದರೆ ಒಳ ಉಡುಪು ಧರಿಸಬಾರದು ಎಂಬ ಅಮಾನವೀಯ ಪದ್ದತಿ ಕೈಬಿಡಿ ಎಂದು ಒತ್ತಾಯಿಸಿದೆ.

ಅಂದಹಾಗೆ, ಕೇರಳದ ಪ್ರಾಚೀನ ಇತಿಹಾಸ ಕೆದಕಿದರೂ, ನಿಮ್ನ ವರ್ಗದ ಮಹಿಳೆಯರು ಕುಪ್ಪುಸ ತೊಡಲು ನಿರ್ಬಂಧಗಳಿದ್ದವು. ಅದಕ್ಕಾಗಿ ತೀವ್ರ ಹೋರಾಟ ಸಂಘರ್ಷಗಳೇ ನಡೆದಿವೆ. ಮಹಿಳೆಯರ ಕುಪ್ಪಸವನ್ನು ಬಿದಿರು ಬೊಂಬಿನಿಂದ ಅಳೆದು ಅದಕ್ಕನುಸಾರವಾಗಿ ತೆರಿಗೆ ಕಟ್ಟಿಸಿಕೊಳ್ಳುತ್ತಿದ್ದಂಥ ಪದ್ದತಿಗೆ ಟಿಪ್ಪು ಸುಲ್ತಾನ್ ಅಂತ್ಯವಾಗುವಂತೆ ಮಾಡಿದ್ದ ಘಟನೆಗಳಿವೆ. ಅಂಥದ್ದರ ಮುಂದುವರಿದ ಭಾಗವೇನೋ ಎಂಬಂತೆ ಹುಂಡಿ ಎಣಿಸುವವರು ಒಳ ಉಡುಪು ಧರಿಸುವಂತಿಲ್ಲ ಎಂಬ ಆಚರಣೆ ನಡೆದುಕೊಂಡು ಬರುತ್ತಿರುವುದು ಮತ್ತೊಮ್ಮೆ ವಿವಾದಕ್ಕೀಡಾಗಿದೆ.