ಮಾರುಕಟ್ಟೆಯಲ್ಲಿಲ್ಲ ರೂಹ್‌ ಅಫ್ಜಾ? ಕಾರಣವೇನು?

ಮಾರುಕಟ್ಟೆಯಲ್ಲಿಲ್ಲ ರೂಹ್‌ ಅಫ್ಜಾ? ಕಾರಣವೇನು?

ಪ್ರತಿ ವರ್ಷ ಬೇಸಿಗೆ ಬಂತೆಂದರೆ ಸಾಕು ʼರೂಹ್‌ ಅಫ್ಜಾʼ ನೆನಪಿಗೆ ಬಂದುಬಿಡುತ್ತದೆ. ಒಂದು ವೇಳೆ ನಾವು ನೆನಪಿಸಿಕೊಳ್ಳಲಿಲ್ಲ ಎಂದರೂ ವಾಹಿನಿಗಳಲ್ಲಿ ಪ್ರಸಾರವಾಗುವ ಜಾಹೀರಾತುವಿನಂದಾಗಾದರೂ ರೂಹ್‌ ಅಫ್ಜಾ ನೆನಪಿನಂಗಳಕ್ಕೆ ಬರುತ್ತದೆ ಹಾಗೆಯೇ ಬೇಸಿಗೆ ದಣಿವಾರಿಸಲು ಮನೆಯನ್ನೂ ಸೇರಿಬಿಡುತ್ತದೆ. 1906 ರಿಂದ ಒಂದು ವರ್ಷವೂ ತಪ್ಪದಂತೆ ಮಾರುಕಟ್ಟೆಗೆ ಧುಮುಕಿ ಗ್ರಾಹಕರನ್ನು ಬಾಚಿಕೊಳ್ಳುತ್ತಿದ್ದ ರೂಹ್‌ ಅಫ್ಜಾ ಈ ಬಾರಿ ಸದ್ದೇ ಇಲ್ಲದೆ ಸುಮ್ಮನಾಗಿದೆ. ಯಾವುದೇ ಮಾರುಕಟ್ಟೆಯಲ್ಲೂ ರೂಹ್‌ ಅಫ್ಜಾ ಕಾಣಸಿಗುತ್ತಿಲ್ಲ, ಇಷ್ಟೊತ್ತಿಗೆ ಜಾಹಿರಾತುಗಳ ಮೂಲಕ ಗಮನ ಸೆಳೆಯಬೇಕಿದ್ದ ಕಂಪನಿ ಈ ಬಾರಿ ಗಪ್‌ಚುಪ್‌ ಆಗಿ ಕುಳಿತುಬಿಟ್ಟಿದೆ.

ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದ ರೂಹ್‌ ಅಫ್ಜಾ ಪಾನೀಯ ತಯಾರಿಸುತ್ತಿದ್ದ ಹ್ಯಾಮ್ಡಾರ್ಡ್ ಕಂಪನಿ ಈ ಬಾರಿ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದೆ. ಕಂಪನಿಗೆ ನಾನು ಮುಖ್ಯಸ್ಥ, ನೀನು ಮುಖ್ಯಸ್ಥ ಎನ್ನುವ ವಾಗ್ವಾದಗಳು ನಡೆಯುತ್ತಿವೆ. ಜ್ಯೂಸ್‌ ತಯಾರಿಸಲು ಸಾಮಾಗ್ರಿಗಳ ಕೊರತೆಯಿದೆ ಎಂದು ಗ್ರಾಹಕರೆಂದುಕೊಂಡಿದ್ದರೆ ಕಂಪನಿಯಲ್ಲಿರುವ ಸಂಕಷ್ಟವೇ ಬೇರೆ. ಏನದು ಸಂಕಷ್ಟು, ಮುಂದೆ ಓದಿ.

ಕಂಪನಿ ನಡೆದು ಬಂದ ಹಾದಿ:

ಹ್ಯಾಮ್ಡಾರ್ಡ್ ಕಂಪನಿಯನ್ನು ಸ್ಥಾಪಿಸಿದ್ದು ಹಾಕಿಮ್‌ ಹಫೀಝ್‌. 1906ರಲ್ಲಿ ಸ್ಥಾಪಿತವಾದ ಈ ಕಂಪನಿ 1922ರವರೆಗೆ ಹಾಕಿಮ್‌ನ ಮುಖ್ಯಸ್ಥಿಕೆಯಲ್ಲಿ ಕೆಲಸ ಮಾಡಿತ್ತು. 1922ರಲ್ಲಿ ಹಾಕಿಮ್‌ನ ಮೃತ್ಯು ನಂತರ ಅವನ ಹೆಂಡತಿ ಮತ್ತು ಇಬ್ಬರು ಮಕ್ಕಳು ಕಂಪನಿಯನ್ನು ನೋಡಿಕೊಳ್ಳುತ್ತಿದ್ದರು. ಕಂಪನಿಯ ಮುಖ್ಯಸ್ಥರೆಲ್ಲ ಸೇರಿ 1948ರಲ್ಲಿ ವಿಲ್‌ ಒಂದನ್ನು ತಯಾರಿಸಿದರು. ಅದರ ಪ್ರಕಾರ ಕಂಪನಿಯ ಯಾವುದೇ ಟ್ರಸ್ಟಿ ಮರಣಹೊಂದಿದಲ್ಲಿ ಅವರ ದೊಡ್ಡ ಮಗ ಟ್ರಸ್ಟಿಯಾಗಿ ಜವಬ್ದಾರಿ ಪಡೆದುಕೊಳ್ಳುತ್ತಾನೆ. ಅದೇ ನಿಟ್ಟಿನಲ್ಲಿ ಹಾಕಿಮ್‌ನ ದೊಡ್ಡ ಮಗ ಹಜಿ ಹಾಕಿಮ್‌ ಮುಖ್ಯ ಟ್ರಸ್ಟಿಯಾಗಿ (ಸ್ಥಾಪಕ ಮುಖ್ಯಸ್ಥ) ಜವಬ್ದಾರಿ ಪಡೆದಕೊಂಡರು. ತಮ್ಮ ಮಕ್ಕಳಾದ ಅಬ್ದುಲ್‌ ಮ್ಯುಯೆದ್‌ ಮತ್ತು ಹಮ್ಮದ್‌ ಅಹ್ಮದ್‌ರನ್ನು 1964ರಲ್ಲಿ ಟ್ರಸ್ಟಿಗಳಾಗಿ ಆತ ಮಾಡಿದರು. ಇದಾದ ನಂತರ 1995ರಲ್ಲಿ ಮೊಮ್ಮಕ್ಕಳಾದ ಅಬ್ದುಲ್‌ ಮಜೀದ್‌ (ಅಬ್ದುಲ್‌ ಮ್ಯುಯೆದ್‌ರ ಮೊದಲನೆ ಮಗ) ಮತ್ತು ಹಮೀದ್‌ ಅಹಮದ್‌( ಹಮ್ಮದ್‌ ಅಹ್ಮದ್‌ರ ಮೊದಲನೇ ಮಗ)ರನ್ನು ಕಂಪನಿಯ ಸಂಸ್ಥೆಯ ಟ್ರಸ್ಟಿಗಳನ್ನಾಗಿ ನೇಮಿಸಿದರು. 1999ರಲ್ಲಿ ಹಜಿ ಹಾಕಿಮ್‌ ಮರಣ ನಂತರ ಅಬ್ದುಲ್‌ ಮ್ಯುಯೆದ್‌ ಮುಖ್ಯಸ್ಥ ಸ್ಥಾನಕ್ಕೇರಿ ತಮ್ಮ ಇನ್ನೊಬ್ಬ ಮಗ ಅಸಾದ್‌ ಮ್ಯುಯೆದ್‌ನ್ನು ಟ್ರಸ್ಟಿಯಾಗಿ ನೇಮಿಸಿದರು. 

ಸಂಕಷ್ಟವೇನು?

2015ರವರೆಗೆ ಎಲ್ಲಾ ಸುಸೂತ್ರವಾಗಿ ನಡೆದಿದೆ. ಆದರೆ 2015ರಲ್ಲಿ ಮುಖ್ಯಸ್ಥನೆನೆಸಿಕೊಂಡಿದ್ದ ಅಬ್ದುಲ್‌ ಮ್ಯುಯೆದ್‌ ಮರಣ ಹೊಂದಿದ ನಂತರ ಸಂಸ್ಥೆಯಲ್ಲಿ ವಾದ-ವಿವಾದ, ಜಗಳ ಆರಂಭವಾಯಿತು. ಯಾರು ಮುಖ್ಯಸ್ಥರಾಗಬೇಕು ಎನ್ನುವುದು ದೊಡ್ಡ ತಲೆ ನೋವು ತರಿಸಿದ ಸಮಸ್ಯೆಯಾಗಿ ಕಾಡಿತು.

ಮುಖ್ಯಸ್ಥನಾಗಿದ್ದ ಅಬ್ದುಲ್‌ ಮ್ಯುಯೆದ್‌ನ ತಮ್ಮ ಹಮ್ಮದ್‌ ಅಹ್ಮದ್‌ ನಾನು ಮುಖ್ಯಸ್ಥ ಪಟ್ಟಕ್ಕೇರಬೇಕು ಎಂದು ಹಠ ಹಿಡಿದರು. ಆದರೆ ನಿಯಮ ಪ್ರಕಾರ ನಾನು ಮುಖ್ಯಸ್ಥನಾಗಬೇಕು ಎಂದು ಅಬ್ದುಲ್‌ ಮ್ಯುಯೆದ್‌ರ ಮಗ ಅಬ್ದುಲ್‌ ಮಜೀದ್‌ ವಾದಿಸಲಾರಂಭಿಸಿದರು. ಈ ಸಂಬಂಧ ಹಲವು ಮೊಕದ್ದಮೆಗಳು ದೆಹಲಿ ಹೈ ಕೋರ್ಟ್‌ನಲ್ಲಿ ದಾಖಲಾಗಿತ್ತು.

ಕುಟುಂಬದ ಹಿರಿಯ ಹಮ್ಮದ್‌ ಅಹ್ಮದ್‌ ಎನ್ನುವ ಕಾರಣದಿಂದಾಗಿ 2017ರ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ನ ಏಕ ನ್ಯಾಯಾಧೀಶ ಪೀಠವು  ಹಮ್ಮದ್‌ ಪರವಾಗಿ ತೀರ್ಪನ್ನು ನೀಡಿತು. ಆದರೆ ಹಮ್ಮದ್‌ ವಿರುದ್ಧ ಹಲವು ಅರಪಾಧ ಪ್ರಕರಣಗಳು ದಾಖಲಾಗಿದ್ದರಿಂದ ಆ ತೀರ್ಪನ್ನು ಪ್ರಶ್ನಿಸಲಾಗಿತ್ತು. 2018ರಲ್ಲಿ ವಿಭಾಗೀಯ ಪೀಠವು ಹೈಕೋರ್ಟ್‌ನ ತೀರ್ಪನ್ನು ತಳ್ಳಿ ಹಾಕಿದ್ದು, ಹಮ್ಮದ್‌ ಅಹ್ಮದ್‌ಗೆ ಮಧ್ಯಂತರ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಹೋಗಲು ಪ್ರೇರೇಪಿಸಿತು.

ವಿಭಾಗೀಯ ಪೀಠದಿಂದ ಸಿಕ್ಕ ಪ್ರೇರಣೆಯಂತೆ ಹಮ್ಮದ್‌ ಅಹ್ಮದ್‌ ಸುಪ್ರೀಂ ಕೋರ್ಟ್‌ನ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್‌ನಲ್ಲಿ ವಕೀಲ ಕೈಲಾಶ್‌ ಯಾದವ್‌ ಹಮ್ಮದ್‌ ಪರವಾಗಿ ವಾದಿಸಿದರೆ ಮುಕಲ್‌  ರೋಹ್ಗತಿ ಅಬ್ದುಲ್‌ ಮಜೀದ್‌ ಪರವಾಗಿ ವಾದ ಮಂಡಿಸಿದ್ದರು. ಸುಪ್ರೀಂ ಕೋರ್ಟ್‌, ವಿಭಾಗೀಯ ಪೀಠದ ತೀರ್ಪನ್ನು ತಳ್ಳಿ ಹಾಕಿ ಹಮ್ಮದ್‌ ಅಹ್ಮದ್‌ ಪರವಾಗಿ ತೀರ್ಪು ನೀಡಿದೆ.  ಹೈ ಕೋರ್ಟ್‌ನಿಂದ ಮುಖ್ಯ ಮೊಕದ್ದಮೆಯ ತೀರ್ಪು ಬರುವವರೆಗೂ ಸಂಸ್ಥೆಯ ಮುಖ್ಯಸ್ಥನಾಗಿ ಕಾರ್ಯನಿರ್ವಹಿಸಲು ಹಮ್ಮದ್‌ಗೆ ಅನುಮತಿ ನೀಡಲಾಗಿದೆ.

ಆದಷ್ಟ ಬೇಗ ಪ್ರಕರಣದ ತೀರ್ಪು ನೀಡುವಂತೆ ಹೈ ಕೋರ್ಟ್‌ಗೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸದ್ಯ ಕಂಪನಿ ಮತ್ತೆ ಕೆಲಸವಾರಂಭಿಸಿದ್ದು ಈ ತಿಂಗಳ ಕೊನೆಯೊಳಗೆ ರೂಹ್‌ ಆಫ್ಜಾ ಮಾರುಕಟ್ಟೆಗೆ ಬರುವ ಮುನ್ಸೂಚನೆಯನ್ನು ಕಂಪನಿ ನೀಡಿದೆ.