ರೋಷನ್ ಬೇಗ್ ಎಬ್ಬಿಸಿದ ಹಾಲಾಹಲ, ಬಿಜೆಪಿ ಆಪರೇಷನ್ ಥಿಯೇಟರ್‌ಗೆ ಬಲ

ರೋಷನ್ ಬೇಗ್ ಎಬ್ಬಿಸಿದ ಹಾಲಾಹಲ, ಬಿಜೆಪಿ ಆಪರೇಷನ್ ಥಿಯೇಟರ್‌ಗೆ ಬಲ

ಮೈತ್ರಿ ಸರ್ಕಾರದಲ್ಲಿ ಯಾವುದೇ ಸ್ಥಾನ ಸಿಗದ ಹಿನ್ನೆಲೆ ರೋಷನ್‌ ಬೇಗ್‌ ಅವರು ಸಿದ್ದರಾಮಯ್ಯನವರ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಬೇಗ್‌ ಅವರನ್ನು ಕಡೆಗಣಿಸಿರುವುದೇ ಸಿದ್ದರಾಮಯ್ಯನವರನ್ನು ಟೀಕಿಸಲು ಕಾರಣ. ಇದರಿಂದ ಆಪರೇಷನ್‌ ಕಮಲಕ್ಕೆ ದಾರಿ ಮಾಡಿಕೊಟ್ಟಂತಾಗಿದೆ ಎಂದು ಜಿ.ಆರ್‌.ಸತ್ಯಲಿಂಗರಾಜು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಮೀಕ್ಷೆಗಳು ಬರಲಾರಂಭಿಸಿದಂತೆಯೇ, ಕಾಂಗ್ರೆಸ್‍ನೊಳಗಣ ಅಂತ:ಕಲಹ ಬಹಿರಂಗಕ್ಕೆ ಬರುತ್ತಿದ್ದು, ಇದಕ್ಕೆ ದಳದ ರಾಜ್ಯಾಧ್ಯಕ್ಷರೇ ತಿದಿಯೊತ್ತುತ್ತಿರುವುದು ರಾಜ್ಯ ರಾಜಕೀಯಕ್ಕೆ ನೂತನ ಮಜಲನ್ನು ಕಟ್ಟಿಕೊಡುತ್ತಿದೆ.

ಎಲ್ಲದಕ್ಕೂ ಸಿದ್ದರಾಮಯ್ಯ ಹೊಣೆ ಎಂಬ ಪರಿಸ್ಥಿತಿ ತಾನಾಗಿಯೇ ಕವಿಯುತ್ತಿದೆಯೋ, ಸಿದ್ದು ಮತ್ತವರ ಗುಂಪಿನಲ್ಲಿರುವವರ ನಡವಳಿಕೆಯೇ ಹಾಗೆನಿಸುತ್ತಿವೆಯೋ ಒಟ್ಟಿನಲ್ಲಿ ಎಲ್ಲದಕ್ಕೂ ಪಕ್ಕಾಗುತ್ತಿರುವುದು ಇವರೊಬ್ಬರೇ ಎಂಬುದು ನಿರ್ವಿವಾದ. ಯಾರ್ಯಾರದೋ ಮಾತಿನ ಕದನವನ್ನೆಲ್ಲ ಎದುರಿಸಿಕೊಂಡು ಬಂದ ಇವರಿಗೀಗ ಎದುರಾಗಿರುವುದು ರೋಷನ್ ಬೇಗ್.

ಹಾಗೆ ನೋಡಿದರೆ ರೋಷನ್ ಬೇಗ್ ಕೂಡ ಸಿದ್ದು ಅವರಂತೆ ಜನತಾದಳದವರೇ. ಅಧಿಕಾರದ ಲೆಕ್ಕಾಚಾರದಿಂದ ಕಾಂಗ್ರೆಸ್‍ಗೆ ಬಂದು ಮಂತ್ರಿಯೂ ಆದರು. ಜಾಫರ್ ಷರೀಪ್ ನೇಪಥ್ಯಕ್ಕೆ ಸರಿಯುತ್ತಿದ್ದಂತೆ ನಾನೇ ಈ ಪಕ್ಷದಲ್ಲಿನ ಅಲ್ಪಸಂಖ್ಯಾತ ನಾಯಕ ಎಂಬ ಒಳ ಲೆಕ್ಕವೂ ಅವರೊಳಗಿತ್ತು. ಆದರೆ, ಇದಕ್ಕೆ ಕೊಕ್ ಹಾಕಿದ್ದು ಸಿದ್ದರಾಮಯ್ಯ, ಅದು ದಳವನ್ನ ಛಿದ್ರಗೊಳಿಸುವ ಭರದಲ್ಲಿ ಜಮೀರ್ ಅಹ್ಮದ್ ಖಾನ್ ಎಂಬ ಕುಮಾರಸ್ವಾಮಿಯ ಖಾಸಾ ಗೆಳೆಯನನ್ನೂ ಕಾಂಗ್ರೆಸ್‍ನೊಳಕ್ಕೆ ಹಿಡಿದು ಹಾಕಿಕೊಂಡಾಗಲೇ ರೋಷನ್ ಬೇಗ್ ಅಸ್ತಿತ್ವ ಕುಸಿದು ಬಿದ್ದಿತ್ತು, ಇದಕ್ಕೂ ಮೊದಲು ಸಿ.ಎಂ.ಇಬ್ರಾಹಿಂ ಅವರನ್ನು ಕರೆದು ಕೊಂಡು ಜತೆಗೆ ತಿರುಗಿದರೂ ಸಿದ್ದು ಅವರು ರೋಷನ್‌ ಅವರಿಗೆ ಸರಿಯಾದ ಹುದ್ದೆ ಕೊಟ್ಟಿರಲಿಲ್ಲ. ಕೊನೆಗವರು ದಳದತ್ತ ವಾಪಸ್ ಮುಖ ಮಾಡಿದಾಗ ಎಂಎಲ್‍ಸಿ ಕೊಟ್ಟು ಸಮಾಧಾನಿಸಿದಾಗಲೇ ರೋಷನ್ ಅಸ್ತಿತ್ವ ಅಲುಗಾಡಿತ್ತು.

ಮುಂದೆ ಮೈತ್ರಿ ಸರ್ಕಾರದಲ್ಲಿ ಬೇಗ್‍ಗೆ ಕೈ ಕೊಟ್ಟು, ಜಮೀರ್‍ಗೆ ಮಂತ್ರಿಗಿರಿ ಕೊಟ್ಟಾಗಲೇ ರೋಷನ್ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಅಭಿಪ್ರಾಯ ಇಟ್ಟುಕೊಂಡಿರಲಿಲ್ಲ. ಇದು ಮುಂದುವರಿದುಕೊಂಡೇ ಬಂತು, ಈಗ ಸಮೀಕ್ಷೆಗಳು ಬಿಜೆಪಿ ಪರವಾಗಿ ಬರುತ್ತಿರುವಂತೆಯೇ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ವೇಣುಗೋಪಾಲ್ ಅವರಿಂದ ಕಾಂಗ್ರೆಸ್ ಅಧೋಗತಿಗೆ ಬಂದಿದೆ ಎಂದು ರಾಜಾರೋಷವಾಗಿಯೇ ಹೇಳಿಬಿಟ್ಟಿದ್ದಾರೆ. ಇದರ ಹಿಂದೆ ಸತ್ಯವೆಷ್ಟಿದೆಯೋ ಗೊತ್ತಿಲ್ಲ, ಆದರೆ, ಸಿದ್ದು ಬಗ್ಗೆ ಇದ್ದ ಧ್ವೆಷವಂತೂ ಬಯಲಿಗೆ ಬಂದಿದೆ.

ವಿಚಾರ ನಮ್ಮದಲ್ಲ ಎಂದು ದಳದ ವಿಶ್ವನಾಥ್ ಸುಮ್ಮನಿದ್ದರೆ ಆಗುತ್ತಿತ್ತು. ಆದರೆ, ಸಧ್ಯ ಈಗಾದರೂ ಅರ್ಥವಾಯಿತಲ್ಲ ಎಂದು ತಿದಿಯೊತ್ತುವ ಕೆಲಸ ಮಾಡಿಬಿಟ್ಟಿದ್ದಾರೆ. ಇವರೂ ಕೂಡ ಸಿದ್ದು ವಿರೋಧಿ ಎಂಬುದು ಗಮನಾರ್ಹ.

ಅಲ್ಪಸಂಖ್ಯಾತರ ಪರ ಕಾಂಗ್ರೆಸ್ ಎಂದು ಹೇಳಿಕೊಳ್ಳುವಾಗ, ಅದೇ ಸಮುದಾಯದ ನಾಯಕನೊಬ್ಬ ಕೊಟ್ಟಿರುವ ಹೇಳಿಕೆ ಡ್ಯಾಮೇಜ್ ತರುವಂಥದ್ದು ಎಂಬುದು ಗೊತ್ತಿರುವ ಸತ್ಯ. ಇದನ್ನು ಸರಿಪಡಿಸುವುದಕ್ಕಾಗಿ ಯು.ಟಿ.ಖಾದರ್, ರಿಜ್ವಾನ್ ಹರ್ಷದ್‌ರಂಥವರು ಮುಂದೆ ಬಂದು ಪ್ರತಿ ಹೇಳಿಕೆ ನೀಡುತ್ತಿದ್ದರೆ, ಅತ್ತ ರೋಷನ್ ಬೇಗ್ ಮತ್ತೆ ಜನತಾ ದಳದತ್ತ ಆಲೋಚಿಸುತ್ತಿದ್ದಾರೆ. ಏಕೆಂದರೆ ದಳದಲ್ಲಿ ಅಲ್ಪಸಂಖ್ಯಾತ ನಾಯಕ ಸ್ಥಾನ ಖಾಲಿಯಿದೆ. ವಿಶ್ವನಾಥ್ ಕೂಡ ಇಂಬು ಕೊಟ್ಟು ಮಾತನಾಡುತ್ತಿದ್ದಾರೆ. ಸಧ್ಯಕ್ಕೆ ಪಕ್ಷ ಬದಲಿಸುವುದು ಆಗುವುದಿಲ್ಲವಾದರೂ, ಜಮೀರ್, ಖಾದರ್, ಹರ್ಷದ್, ಸಿ.ಎಂ. ಇಬ್ರಾಹಿಂ  ಇರುವ ಕಾಂಗ್ರೆಸ್‍ಗಿಂತ ಅಲ್ಪಸಂಖ್ಯಾತರು ಇಲ್ಲದಿರುವ ಜನತಾ ದಳ ಸೇಫ್ ಎನಿಸುವಂತಾಗಿದೆ.

ರೋಷನ್ ಬೇಗ್ ಹೇಳಿಕೆಯಿಂದ ಬಿಜೆಪಿ ಸಂತಸದಲ್ಲಿ ಮಿಂದೇಳುತ್ತಿದೆ. ಮುಸ್ಲಿಂ ಪರ ಪಕ್ಷ ಎಂಬುದು ಸುಳ್ಳು ಎಂಬುದಕ್ಕೆ ಇದೇ ಸಾಕ್ಷಿ ಎಂದು ಸಾಬೀತುಗೊಳಿಸಲು ತುದಿಗಾಲಲ್ಲಿ ನಿಂತಿದೆ. ಯಾಕೋ ಮುಖ್ಯಮಂತ್ರಿಗೆ ಅಧಿಕಾರ ಚಲಾಯಿಸಲು ಬಿಡುತ್ತಿಲ್ಲ ಎಂಬುದು ಒಂದೆಡೆಯಾದರೆ, ಸಿದ್ದರಾಮಯ್ಯಗೂ ನೆಮ್ಮದಿಯಾಗಿರಲು  ಅವರ ಪಕ್ಷದವರೂ ಬಿಡುತ್ತಿಲ್ಲ.

ಫಲಿತಾಂಶಕ್ಕೂ ಮುನ್ನವೇ ಗೋಜಲು ಗೋಜಲು ಏಳುತ್ತಿದ್ದು, ಆಮೇಲೆ ಇನ್ನೇನೋ ಎಂದು ಕೌತುಕದಿಂದ ಎಲ್ಲರೂ ಇದ್ದರೆ, ಏನಾದರಾಗಲಿ ಸರ್ಕಾರವನ್ನು ಕಾಯುತ್ತೇನೆ ಎಂದು ರಕ್ಷಣೆಗೆ ನಿಂತಿದ್ದ ಡಿ.ಕೆ.ಶಿವಕುಮಾರ್ ಮಾತ್ರ ಈಗ ದೂರದ ಆಸ್ಟ್ರೇಲಿಯಾ ಸೇರಿಬಿಟ್ಟಿದ್ದಾರೆ. ಇವರಿಲ್ಲದಾಗಲೇ ಆಪರೇಷನ್ ಮಾಡಬೇಕೆಂದು ಬಿಜೆಪಿಯವರು ಕತ್ತರಿ ಚಾಕು ಸೂಜಿ ದಾರವನ್ನು ತೆಗೆದುಕೊಳ್ಳುತ್ತಿರುವಾಗಲೇ, ರೋಷನ್ ಬೇಗ್‍ರಂಥವರ ಹೇಳಿಕೆಗಳು ಆಪರೇಷನ್ ಥಿಯೇಟರ್‍ಗೆ ರೋಗಿಗಳನ್ನು ತಂದು ಮಲಗಿಸುವಂತಾಗುತ್ತಿದೆ.