ರೋಷನ್ ಬೇಗ್ ತಲೆ ಮೇಲೆ  ಐಎಂಎ ಟೋಪಿ

ರೋಷನ್ ಬೇಗ್ ತಲೆ ಮೇಲೆ  ಐಎಂಎ ಟೋಪಿ

ಐಎಂಎ ಎಂಬ ದೋಖಾ ಸಂಸ್ಥೆಯಿಂದ ಹಣ ಕಳೆದುಕೊಂಡವರು ಗೋಳಾಡುತ್ತಿದ್ದರೆ, ಇನ್ನೊಂದೆಡೆ ಪ್ರಕರಣದ ರಾಜಕೀಯ ದುರ್ಲಾಭ ಪಡೆಯುವ ಸಂಚುಗಳು ರೂಪುಗೊಳ್ಳುತ್ತಿವೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವರದಿ.
  
ನೂರಾರು ಕೋಟಿ ರುಪಾಯಿಗಳಿಗೆ ನಾಮ ತಿಕ್ಕಿರುವ ಐಎಂಎ ಸಂಸ್ಥೆಯಿಂದ ಹಣ ಕಳೆದುಕೊಂಡವರು ಬಾಯಿ ಬಡಿದುಕೊಂಡು ಕಂಗಾಲಾಗಿ ಕೂತಿದ್ದರೆ, ಸದ್ದಿಲ್ಲದೆ ನುಗ್ಗಿರುವ ರಾಜಕೀಯದಲ್ಲಿ ಆಗದವರನ್ನ ಸಿಲುಕಿಸುವ ಬೇಕಾದವರನ್ನ ರಕ್ಷಿಸಿಕೊಳ್ಳುವ ಜಂಗೀ ಕುಸ್ತಿ ನಡೆಯುತ್ತಿದೆ.


ದಳ ಬಿಟ್ಟು ಕಾಂಗ್ರೆಸ್‍ನಲ್ಲಿ ಮೊದಲು ಬಂದು ಕೂತಿದ್ದು ರೋಷನ್ ಬೇಗ್. ಇವರಿಗಿಂತ ತಡವಾಗಿ ಬಂದಿದ್ದು ಸಿದ್ದರಾಮಯ್ಯ. ಹೀಗಾಗಿ ಇವರಿಗಿಂತ ನಾನೇ ಪಕ್ಷದಲ್ಲಿ ಸೀನಿಯರ್ ಜತೆಗೆ ಜಾಫರ್ ಷರೀಪ್ ಡೋಲಾಯಮಾನ ಮನೋಸ್ಥಿತಿ ತೋರಿಸುತ್ತಿದ್ದರಿಂದ, ಅಮಾನತ್ ಬ್ಯಾಂಕ್ ಪ್ರಕರಣದಲ್ಲಿ ರೆಹಮಾನ್ ಖಾನ್  ತಗಲಾಕಿಕೊಂಡಿದ್ದರಿಂದ, ಸಿ.ಎಂ. ಇಬ್ರಾಹಿಂ ಹೊಸದಾಗಿ ಬಂದವರಾದ್ದರಿಂದ ಕಾಂಗ್ರೆಸ್‍ನಲ್ಲಿ ಅಲ್ಪಸಂಖ್ಯಾತ ನಾಯಕನೂ ನಾನೇ, ಸೀನಿಯರ್ ನಾನೇ ಎಂಬ ನಂಬುಗೆಗಳನ್ನ ಇರಿಸಿಕೊಂಡಿದ್ದರು. ಆದರೆ ಇವರನ್ನ ಬದಿಗೆ ಸರಿಸಿ, ಜಮೀರ್ ಅಹ್ಮದ್‍ರನ್ನ ಸಿದ್ದು ಯಾವಾಗ ಮುಂದಕ್ಕೆ ತಂದರೋ, ಆವಾಗಿಂದ ಸಿದ್ದುವನ್ನ  ತಾರಾಮಾರಾ ತರಾಟೆಗೆ ತೆಗೆದುಕೊಂಡಿರುವ ರೋಷನ್ ಬೇಗ್ ಬಿಜೆಪಿ ಕಡೆಗೆ ಕಣ್ಣುಹೊಡೆಯುತ್ತಿದ್ದಾರೆ.


ಬೇಗ್ ಸಿಡಿಸುತ್ತಿರುವ ಮಾತುಗಳು ಸಿದ್ದು ಗ್ಯಾಂಗಿಗೆ ಸಹಿಸಲಸದಳವಾದಂಥವು. ಹೀಗಾಗಿಯೇ ಇವರನ್ನ ಹಣಿಯಬೇಕೆಂದು ಕೊಂಡವರಿಗೆ ಸುಖಾಸುಮ್ಮನೆ ಸಿಕ್ಕಿಬಿದ್ದಿರುವುದು ಐಎಂಎ ದೋಖಾ ಪ್ರಕರಣ. ಅಲ್ಪಸಂಖ್ಯಾತರಿಂದಲೇ ಹಣ ಹೂಡಿಸಿಕೊಂಡು ಅವರ ತಲೆಗೆ ಮಕ್ಮಲ್ ಟೋಪಿ ಇಟ್ಟಿರುವ ಇದರ ಮಾಲೀಕ, ರೋಷನ್  ಬೇಗ್ ಹೆಸರನ್ನೂ ಹೇಳಿಬಿಟ್ಟಿರುವ ಆಡಿಯೋ ತುಣುಕುಗಳು  ಜಮೀರ್ ಅಹ್ಮದ್‍ಗೆ ಪ್ರಬಲ ಅಸ್ತ್ರವಾಗಿಬಿಟ್ಟಿದೆ.  

ಮೂಲತ: ಜಮೀರ್ ಕೂಡ ದಳದವರು ಎಂಬುದಕ್ಕಿಂತ ಕುಮಾರಸ್ವಾಮಿಯ ಆಪ್ತ ವಲಯದಲ್ಲಿದ್ದವರು. ಈಗ ಸಿದ್ದು ಪರ ಗಟ್ಟಿ ದನಿ ಎತ್ತುವವರಾಗಿ ಬಿಟ್ಟಿದ್ದಾರೆ. ಜತೆಗೆ ಬೇಗ್ ಬಿರುನುಡಿಗಳು ಇವರಿಗೂ ತಾಕುತ್ತಿವೆ.


ಸಿದ್ದರಾಮಯ್ಯರನ್ನ ಟಾರ್ಗೆಟ್ ಮಾಡಿಕೊಂಡು ಮಾತಾಡುತ್ತಿದ್ದ ರೋಷನ್ ಬೇಗ್, ಈ ಹಗರಣದ ರೂವಾರಿಯ ಮಾತಿನಂತೆ ರೋಲ್ ಕಾಲ್ ಪಡೆಯುತ್ತಿದ್ದರು. ಇದಿಷ್ಟೇ ಸಾಕಾಗಿರುವ ಕಾಂಗ್ರೆಸ್ಸಿಗರು, ಅದರಲ್ಲೂ ಜಮೀರ್ ಖಾನ್ ಇದನ್ನೇ ಬಳಸಿಕೊಂಡು ಬೇಗ್ ರಾಜಕೀಯವಾಗಿ ಬರ್ಬಾದ್ ಆಗುವಂತೆ ಮಾಡಲು ಬೇಕಾಗಿರುವ ತಂತ್ರಗಳನ್ನೆಲ್ಲ ಹೆಣೆದಿದ್ದಾರೆ. ಇದರ ಫಲವಾಗಿಯೇ ಎಸ್.ಐ.ಟಿ.ಗೆ ಇದನ್ನ ಒಪ್ಪಿಸಿ, ಬೇಗ್‍ರನ್ನ ವಿಚಾರಣೆಗೊಳಪಡಿಸುವಂಥದ್ದೂ ನಡೆದು ಹೋಗಲಿದೆ.


ಎತ್ತಲಿಂದ ನೋಡಿದರೂ ಬೇಗ್ ಬಾಯಿ ಮುಚ್ಚಿಕೊಂಡು ಇರುವಂತೆ ಮಾಡಲು ಇದೇ ಹಗರಣವನ್ನ ಬಳಸಿಕೊಳ್ಳುವುದರ ಸಾಧ್ಯತೆಗಳು ಹೆಚ್ಚುತ್ತಿರುವಂತೆಯೇ, ಅಲ್ಪಸಂಖ್ಯಾತರ ಸಂಸ್ಥೆ ಇಂಥ ಯಾವುದೇ ದೋಖಾ ಸುದ್ದಿ ಸಿಕ್ಕಿದರೂ ಅದನ್ನ ಸಾರಾಸಗಟಾಗಿ ಬಳಸಿಕೊಳ್ಳುವ ಬಿಜೆಪಿಯವರು, ಅದ್ಯಾಕೋ ಈ ವಿಚಾರದಲ್ಲಿ ಮಾತ್ರ ರೋಷನ್ ಬೇಗ್ ವಿರುದ್ದ ತನಿಖೆ ನಡೆಸಿ ಎಂದು ಹೇಳುತ್ತಿಲ್ಲ. ಬದಲಿಗೆ ಅವರನ್ನ ರಕ್ಷಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದೆ, ಇದು ಬೇಗ್ ಕಮಲ ಪಾಲಾಗುತ್ತಾರೆ ಎಂಬ ವದಂತಿಗೆ ಪುಷ್ಟಿ ಕೊಡುವಂಥದ್ದು.

 
ಹನ್ನೊಂದು ಸಾವಿರಕ್ಕೂ ಹೆಚ್ಚು ದೂರುಗಳು ದಾಖಲಾಗಿರುವ ಐಎಂಎ ಅವ್ಯವಹಾರದ ವ್ಯಾಪ್ತಿ ಮೈಸೂರು ಸೇರಿದಂತೆ, ರಾಜ್ಯಾದ್ಯಂತ ಇದೆ. ಇಲ್ಲೆಲ್ಲ ಮೋಸ ಹೋಗಿರುವವರು ಅಲ್ಪಸಂಖ್ಯಾತರೇ ಎಂಬುದು ವಿಶೇಷ. ಕೋಟ್ಯಾಂತರ ರುಪಾಯಿಗಳನ್ನ ಸಂಗ್ರಹಿಸಿದ್ದು, ಪರಾರಿಯಾಗಿದ್ದು, ಇಂಥ ಹಲ್ಕಟ್ ದಂಧೆಗೆ ರಾಜಕಾರಣಿಗಳ ಸಹಕಾರವೂ ಇತ್ತೆಂಬ ಮಾತುಗಳು ಕೇಳಿಬರುತ್ತಿರುವುದನ್ನ ರಾಜಕಾರಣಕ್ಕೆ ಬಳಸಿಕೊಳ್ಳುವ ಎಲ್ಲಾ ಲಕ್ಷಣಗಳೂ ಕಾಣಸಿಗುತ್ತಿವೆ.


ಹಾಗೆ ನೋಡಿದರೆ ರಾಜಕೀಯ ಬಣ್ಣ ಬಳಿದುಕೊಂಡ ವಂಚನೆಯ ಪ್ರಕರಣ ಇದೇ ಮೊದಲೇನಲ್ಲ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಬಂದ ಹೊಸದರಲ್ಲೇ ಆಂಬಿಡೆಂಟ್ ಸಂಸ್ಥೆಯವರು, ಆವಾಗಿನ ಮಂತ್ರಿ ಗಾಲಿ ಜನಾರ್ದನ ರೆಡ್ಡಿ ಜತೆ ಸಂಬಂಧ ಹೊಂದಿದ್ದರು, ಹಣಕಾಸಿನ ವಹಿವಾಟು ನಡೆದಿವೆ ಎಂಬ ಕಾರಣದಿಂದ ರೆಡ್ಡಿಯವರನ್ನ ಆರಕ್ಷಕ ಪಡೆ ಬಂಧಿಸಿ, ವಿಚಾರಣೆಗೊಳಪಡಿಸಿತ್ತು. ಅದು ಕೂಡ ರೆಡ್ಡಿ ಬಳ್ಳಾರಿಗೆ ಹೋಗಲು ನ್ಯಾಯಾಲಯ ನಿಷೇಧಿಸಿದ್ದರಿಂದ ಗಡಿ ಭಾಗದಲ್ಲೇ ಕೂತು ರಾಜಕೀಯ ನೋಡಿಕೊಳ್ಳುವುದು, ಆಪರೇಷನ್ ಕಮಲಕ್ಕೆ ಹಣ ಸುರಿಯಲು ಮುಂದಾಗಿದ್ದಾರೆ ಎಂಬಂಥ ಸನ್ನಿವೇಶದಲ್ಲಿ ಆಂಬಿಡೆಂಟ್ ಅಸ್ತ್ರ ಬಳಸಿ, ಅವರನ್ನ ಬದಿಗೆ ಸರಿಸಲಾಗಿತ್ತು.


ಇದಕ್ಕಿಂತಲೂ ಹಿಂದೆ ಅಮಾನತ್ ಬ್ಯಾಂಕಿನ ಹಗರಣದಲ್ಲಿ ರಾಜ್ಯಸಭಾ ಸದಸ್ಯರಾಗಿದ್ದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯ ರೆಹಮನ್ ಖಾನ್ ರಾಜ್ಯಸಭಾ ಉಪಾಧ್ಯಕ್ಷರಾಗಿ (2004-12), 2012-14 ರವರೆಗೆ ಕೇಂದ್ರ ಸಚಿವರಾಗಿ ಹೆಸರಾಗಿದ್ದವರನ್ನ ಆರೋಪಿಯನ್ನಾಗಿ ನಿಲ್ಲಿಸಲಾಗಿತ್ತು. ಜಾಫರ್ ಷರೀಪ್ ನಂತರದಲ್ಲಿ ಕೇಂದ್ರದಲ್ಲಿ ಪ್ರಭಾವಿಯಾಗಿ ಬೆಳೆದಿದ್ದ ರೆಹಮಾನ್ ಖಾನ್ ರಾಜ್ಯ ವಿಧಾನ ಪರಿಷತ್ತಿಗೆ 1978 ರಲ್ಲಿ ಸದಸ್ಯರಾಗಿ, ಸಭಾಧ್ಯಕ್ಷರಾಗಿ 1982 ರಿಂದ 84 ರವರೆಗೆ ಇದ್ದವರು. ಅಲ್ಲದೆ 1993-94 ರಲ್ಲಿ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದಾಗ ಅಲ್ಪಸಂಖ್ಯಾತರ ಮನೆಮನೆಯನ್ನೂ ಸಮೀಕ್ಷೆ ಮಾಡಿಸಿ, ಶೇ. 4 ರಷ್ಟು ಶೈಕ್ಷಣಿಕ ಮತ್ತು ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕೊಡಬೇಕೆಂದು ಶಿಫಾರಸು ಮಾಡಿದ್ದವರು. ಸಮುದಾಯಕ್ಕೂ ಅಷ್ಟೇ ಕೆಲಸ ಮಾಡಿದ್ದ, ರಾಜಕೀಯವಾಗಿಯೂ ಬೆಳೆದಿದ್ದ ರೆಹಮಾನ್ ಖಾನ್ ರನ್ನ ಅಮಾನತ್ ಬ್ಯಾಂಕಿನ ಕೋಟ್ಯಾಂತರ ಹಣ ದುರ್ಬಳಕೆ ವಿಚಾರದಲ್ಲಿ ಹಣಿಯಲಾಗಿತ್ತು. ಆಗ ಇವರ ವಿರುದ್ದ ನಿಂತಿದ್ದು ಸ್ವಪಕ್ಷೀಯರೇ ಆಗಿದ್ದ ಜಾಫರ್ ಷರೀಪ್.


ಈಗಲೂ ರೋಷನ್ ಬೇಗ್‍ರನ್ನ ಹಣಿಯಲು ಸಧ್ಯಕ್ಕೆ ಅವರಿರುವ ಪಕ್ಷದವರೇ ಆದ ಜಮೀರ್ ಅಹ್ಮದ್ ಖಾನ್. ಇದರಿಂದಾಗಿಯೇ ಇಡೀ ದೋಖಾ ಪ್ರಕರಣದಲ್ಲಿ ಹಣ ಕಳೆದುಕೊಂಡವರ ಗೋಳಿಗಿಂತ, ರಾಜಕೀಯದ ಪ್ರಲಾಪಗಳೇ ಮೇಲುಗೈಯಾಗುವಂತೆ ಕಂಡುಬರುತ್ತಿದೆ. ಬೇಗ್ ಹಣಿಯಲು ಕಾಂಗ್ರೆಸ್, ರಕ್ಷಿಸಲು ಬಿಜೆಪಿ ನಿಂತಿರುವುದರಿಂದ ಆಗುವ ಮಜಾವನ್ನ ದಳ ಅನುಭವಿಸುವಂತಾಗಿದೆ.