ಅಕ್ಕಿ ಆಸೆ, ನೆಂಟರ ಪ್ರೀತಿಯಾಚೆ...!

ಅಕ್ಕಿ ಆಸೆ, ನೆಂಟರ ಪ್ರೀತಿಯಾಚೆ...!

ಜಗದ್ವಿಖ್ಯಾತ ಕಲಾವಿದ ವಿನ್ಸೆಂಟ್ ವ್ಯಾನ್‌ಗೋನಿಗೆ ಒಬ್ಬ ಪ್ರೀತಿಯ ತಮ್ಮ ಇದ್ದ. ಥಿಯೋ ಅಂತ ಅವನ ಹೆಸರು. ಜೀವನಪೂರ್ತಿ ಅಲೆದಾಟ, ಚಿತ್ರಗಳ ಖಯ್ಯಾಲಿ ಮತ್ತು ದೊರಕದ ಪ್ರೀತಿಯ ಹಪಾಹಪಿಗೆ ಬಿದ್ದ ವ್ಯಾನ್‌ಗೋನನ್ನು ಪ್ರತಿ ತಿಂಗಳು ನೂರು ಫ್ರಾಂಕ್ ಕೊಟ್ಟು ಸಲುಹಿದ್ದೇ ಈ ಥೀಯೋ. ನಮ್ಮ ಮುರಿಗೆಪ್ಪಜ್ಜ ವ್ಯಾನ್ಗೋ ಗೇ ಹೋಲಿಸುವಷ್ಟು ದೊಡ್ಡ ಕಲಾವಿದ ಹೌದೋ ಅಲ್ಲವೋ ನನಗೆ ತಿಳಿಯದು. ಆದರೆ, ಮುರುಗೆಪ್ಪಜ್ಜನ ಬದುಕಿನಲ್ಲಿನ ಕೆಲವು ಸಂಗತಿಗಳಿಂದಾಗಿ ನನಗೆ ವ್ಯಾನಗೋ ನೆನಪಾಗುತ್ತಾನೆ. ಇಲ್ಲಿ ಸಾದೃಶ್ಯಗಳು ಇರುವಂತೆ ವೈದೃಶ್ಯಗಳೂ ಇವೆ. 

 

ಚಿತ್ರಕಲೆಗೆ ಅವನು ತನ್ನನ್ನು ಹೇಗೆ ಸಮರ್ಪಿಸಿಕೊಂಡಿದ್ದನೆಂದರೆ, ತನ್ನ ಕುಟುಂಬದವರಿಂದಲೇ ಅವನು ತಿರಸ್ಕಾರವನ್ನು ಉಣ್ಣಬೇಕಾಗಿತ್ತು. ಬರಿ ಊರೂರು ಅಲೆಯುತಿದ್ದ ಅವನು ಮನೆಯ ಜವಾಬ್ದಾರಿಯ ವಿಷಯ ಬಂದಾಗೆಲ್ಲ ಅದಕ್ಕೆ ಹೊರತಾಗಿ ನಿಲ್ಲುತಿದ್ದ.

 

ತಾರುಣ್ಯದಲ್ಲಿರುವಾಗಲೇ ವೈರಾಗಿಯಂತೆ ಯೋಚಿಸುತಿದ್ದ ಮುರುಗೆಪ್ಪನಿಗೆ ಸಾಧು ಸಂತರು, ಸಿದ್ಧರು ಅಂದರೆ  ಅದೇನೋ ಆಕರ್ಷಣೆ. ಹೀಗಾಗಿ ಅವನು ಆಗಾಗ ಶಿಶುನಾಳ, ಮುಕ್ತಿಮಂದಿರ, ಹುಬ್ಬಳ್ಳಿಯ ಸಿದ್ಧಾರೂಢ ಮಠಗಳನ್ನು ಸುತ್ತುವುದು ಸಾಮಾನ್ಯವಾಗಿತ್ತು.. ಹಬ್ಬ ಹರಿದಿನಗಳಲ್ಲಿ ನಡೆಯುತಿದ್ದ ಪ್ರವಚನ ಕೇಳುವುದು ಅನುಮಾನ ಹುಟ್ಟಿಸಿದ ಪ್ರಶ್ನೆಗಳನ್ನೆ ಬೆನ್ನುಹತ್ತಿ ಉತ್ತರಿಸಬಲ್ಲವರನ್ನು ಹುಡುಕಿ ಅಲೆಯುವುದು ಕೂಡ ಅವನ ಜೀವನದ ಭಾಗವೇ ಆಗಿಬಿಟ್ಟಿತ್ತು. `ಈ ಕ್ಷಣದಲ್ಲಿ ಇಲ್ಲಿದ್ರೆ ಇನ್ನೊಂದು ಕ್ಷಣಕ್ಕೆ ಎಲ್ಲಿರ್ತಾನೋ' ಎಂದು ಅವನ ಒಡನಾಡಿಗಳೇ ಆಡಿಕೊಳ್ಳುತಿದ್ದ ಮಾತು ಮುರುಗೆಪ್ಪನಿಗೆ ಅನ್ವರ್ಥಕವೇ ಆಗಿತ್ತು. ಎದುರಾದ ಎಲ್ಲ ಪ್ರಶ್ನೆಗಳಿಗೂ ತನ್ನದೇ ಉತ್ತರವನ್ನು ಕಂಡುಕೊಳ್ಳಬಯಸುತಿದ್ದ ಅವನಿಗೆ ಬದುಕೇ ಒಂದು ಪ್ರಶ್ನೆಯಾಗಿ ಧುತ್ತೆಂದು ನಿಲ್ಲುತಿತ್ತು. ಮುರುಗೆಪ್ಪ ಇದ್ಯಾವುದಕ್ಕೂ ಧೃತಿಗೆಟ್ಟವನೇ ಅಲ್ಲ. ಏಕೆಂದರೆ, ಈ ಅಲೆದಾಟ, ಜಿಜ್ಞಾಸೆಗಳೆಲ್ಲ  ಅವನೊಳಗೊಬ್ಬ ಸಂತನನ್ನೂ ಹುಟ್ಟುಹಾಕಿದ್ದವು.  

 

ಇಂಥದೇ ಅಲೆದಾಟದ ಮಧ್ಯೆ, ಒಮ್ಮೆ ಮುರುಗೆಪ್ಪ ರಜೆಯನ್ನೂ ಹಾಕದೇ, ನಾಲ್ಕೈದು ದಿನ ಶಾಲೆಗೆ ಹೋಗಲೇ ಇಲ್ಲ.  ಮುಖ್ಯೋಪಾಧ್ಯಾಯರು ಹೀಗೆ ಮಾಡಿದರೆ ಹೇಗೇ ? ಎಂದು ಪ್ರಶ್ನಿಸಿ ಇವನಿಗೆ ಛೀಮಾರಿ ಹಾಕಿದರು. 

 

ಮುರುಗೆಪ್ಪನಿಗೆ ಏನು ಅನಿಸಿತೋ, ಅಲ್ಲೇ ಕೂತು ಕೆಲಸಕ್ಕೆ ರಾಜೀನಾಮೆ ಬರೆದುಕೊಟ್ಟು `ನಾನಿನ್ನ ಬರ್ತೀನ್ರೀ ಗುರುವೇ, ಸಾಲೀನ ಸರಿಯಾಗಿ ನಡಿಸಿಕೊಂಡ್ ಹೋಗ್ರೀ' ಎಂದು ಹೇಳಿ ಬಂದುಬಿಟ್ಟ. ಮುಖ್ಯೋಪಾಧ್ಯಾಯ‌ರಿಗೆ ಹರಿ ಸವರಲು ಹೋಗಿ ಕೊಂಬೆಯನ್ನೆ ಮೈಮೇಲೆ ಕೆಡುವಿಕೊಂಡ ಅನುಭವವಾಗಿತ್ತು.

 

ಮುರುಗೆಪ್ಪನ ತಮ್ಮ ಶಿವಪ್ಪನಿಗೆ ನಾಟಕದ ಖಯ್ಯಾಲಿ. ಗುಡಗೇರಿ ಎನ್. ಬಸವರಾಜರ ನಾಟಕ ಕಂಪನಿಯ ಸಿಂಧೂರ ಲಕ್ಷ್ಮಣ, ರೈತನ ಮಕ್ಕಳು ನಾಟಕಗಳು ಜನಪ್ರಿಯತೆಯ ತುತ್ತ ತುದಿಗೇರಿದ್ದ ದಿನಗಳವು. ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿದ್ದ ಶಿವಪ್ಪ, ಊರಿಗೆ ಬಂದಿದ್ದ ನಾಟಕ ಕಂಪನಿ ದೇಖರೇಖಿಯಲ್ಲಿ ಅದರ ಮಾಲಕನೇ ಆಗುವ ಅವಕಾಶ ಕಂಡುಕೊಂಡ. ಸೊಸೈಟಿ ಹಣವನ್ನೆಲ್ಲ ತಂದು ಕಂಪನಿಗೆ ಸುರುವಿದ. ಇತ್ತ ಕಂಪನಿ ಎದ್ದೇಳುವಷ್ಟರಲ್ಲಿ ಅತ್ತ ಸೊಸೈಟಿ ಕಣ್ಮುಚ್ಚುವ ಸ್ಥಿತಿ ತಲುಪಿತ್ತು. ತನಿಖೆ ಸುರುವಾಗಿ ಗೋಲ್‌ಮಾಲ್ ಮಾಡಿ ಸೊಸೈಟಿ ಹಣ ಲಪಟಾಯಿಸಿದ ಶಿವಪ್ಪನನ್ನು ಕೆಲಸದಿಂದ ಅಮಾನತು ಮಾಡಿದ್ದಲ್ಲದೇ, ವಂಚಿಸಿದ ಹಣವನ್ನು ಮರಳಿ ಪಾವತಿಸುವಂತೆ ಆಡಳಿತ ಮಂಡಳಿ ತಾಕೀತು ಮಾಡಿತು.

 

ಶಿವಪ್ಪ ನಾಟಕ ಕಂಪನಿಯೊಂದಿಗೇ ಕಾಣೆಯಾಗಿದ್ದ. ಮುರುಗೆಪ್ಪ ಸೊಸೈಟಿಯ ಸಾಲ ತೀರಿಸಲು ಮನೆ ಮಾರಲು ಮುಂದಾದ, ಆದರೆ ಅರಮನೆಯಂಥ ಆ ಮನೆಯನ್ನು ಕೊಳ್ಳಲು ಯಾರೂ ಧೈರ್ಯ ಮಾಡಲಿಲ್ಲ. ಬೇರೆ ಉಪಾಯಗಾಣದೇ ಮುರುಗೆಪ್ಪ ಆ ಮನೆಯನ್ನು ಕೆಡವಿ ಆ ಮನೆಯ ಕಂಬ, ಜಂತಿ, ತೊಲಿ ಹೀಗೆ ಬಹುಬೆಲೆ ಬಾಳುವ ಎಲ್ಲವನ್ನೂ ಮಾರಿ ಸೊಸೈಟಿಯ ಸಾಲ ಹರಿದ. ಅಲ್ಲಿಗೆ ಮುರುಗೆಪ್ಪ ಅಕ್ಷರಶಃ ಬೀದಿಗೆ ಬಿದ್ದಿದ್ದ. ಅಲ್ಲಿದ್ದು ಮುಂದೇನು ಎಂಬುದು ತೋಚದೆ ಅವನ ಹೆಂಡತಿ ನೀಲಮ್ಮ ಮಕ್ಕಳನ್ನು ಕರೆದುಕೊಂಡು ತವರೂರು ಸೇರಿದಳು‌.

 

ಶ್ರೀಮಂತ ಮನೆತನದಲ್ಲಿ ಹುಟ್ಟಿದ್ದ ಮುರುಗೆಪ್ಪ ಬೀದಿಗೆ ಬಿದ್ದದ್ದು , ಭಿಕ್ಷಾನ್ನವನ್ನುಂಡು ಮೂರ್ತಿಗಳನ್ನು ಸೃಷ್ಟಿಸಿ‌ದ್ದು ಈ ಎಲ್ಲ ಏರಿಳಿತಗಳೂ, ಸ್ತುತಿನಿಂದೆ, ಕಷ್ಟಸುಖಗಳ ಮಧ್ಯೆ ಸ್ಥಿತಪ್ರಜ್ಞನಾಗಿಯೇ ಬದುಕಿದ್ದು ಒಂದು ವಿಸ್ಮಯವೆ!

 

ಕಲಾಮಾಸ್ತರಿಕೆಯ ನೌಕರಿಯನ್ನು ಕೈಬಿಟ್ಟ ಮೇಲೆ ಒಂದು ಬಗೆಯ ಸ್ವಾತಂತ್ರ್ಯ ಅನುಭವಿಸಿದ್ದ ಮುರುಗೆಪ್ಪ, ಮನೆ ಕಳೆದುಕೊಂಡ ಮೇಲೆ ನೊಗವಿಳಿಸಿದ ಎತ್ತಿನಂತಾಗಿದ್ದ. ಹೆಂಡ್ತಿಯೂ ತವರೂರು ಸೇರಿದ್ದರಿಂದ ಅವನಿಗಿನ್ನು ಅವರ ಚಿಂತೆಯೂ ಇರಲಿಲ್ಲ. ಉತ್ತರ ಕರ್ನಾಟಕದ ಮಠಗಳು ಮತ್ತು ಅಲ್ಲಿನ ಸ್ವಾಮಿಗಳೊಂದಿಗೆ ಒಡನಾಟವಿಟ್ಟುಕೊಂಡಿದ್ದ ಅವನು ತನ್ನ ಅಧ್ಯಾತ್ಮಿಕ ಹಸಿವನ್ನು ಇಂಗಿಸಿಕೊಳ್ಳಲು ಅಲ್ಲೆಲ್ಲಾ ಸುತ್ತುತಿದ್ದ. ಬೇರೆ ಬೇರೆ ಮಠಾದೀಶರ ಜೊತೆಗೆ ಇಂಥ ಚರ್ಚೆ, ವಾಗ್ವಾದಗಳು ನಡೆಯುತ್ತಲೇ ಇದ್ದವು. ಅಪರಿಚಿತ ಊರುಗಳನ್ನು ತಿರುಗುತಿದ್ದ ಮುರುಗೆಪ್ಪ, ಚಂದದ ಪರಿಸರವಿದ್ದಲ್ಲಿ ಅಲ್ಲಿನ ಪ್ರಾಕೃತಿಕ ಸೌಂದರ್ಯ ಸವಿಯುತ್ತ ಅಲ್ಲೇ ಮುಕ್ಕಾಂ ಹೂಡುತಿದ್ದ.

 

ಇಂಥ ತಿರುಗಾಟದಲ್ಲೊಮ್ಮೆ ಮುರುಗೆಪ್ಪ

ತನ್ನ ಒಂದಿಬ್ಬರು ಶಿಷ್ಯರೊಂದಿಗೆ ಹರಿಹರ ಸಮೀಪದ ಹರಲಹಳ್ಳಿಗೆ ಬಂದ. ಅಲ್ಲಿಯ ಜನರ ಸೌಹಾರ್ದದ, ಸಾಮರಸ್ಯದ ಬದುಕಿನಿಂದ ಪ್ರಭಾವಿತನಾದ. ಇಂಥ ಸಾಮರಸ್ಯದ ಸಾಮಾಜಿಕ ಬದುಕಿಗೊಂದು ರೂಪ ಕೊಡುವ ಕುರಿತು ಯೋಚಿಸತೊಡಗಿದ. ವಿವಿಧ ಜಾತಿ, ಮತ ಧರ್ಮಗಳಿಗೆ ಸೇರಿದ್ದರೂ ಸೌಹಾರ್ದಯುತವಾಗಿ ಬದುಕುತಿದ್ದ ಆ ಹಳ್ಳಿಯ ಜನರೇ ಮುರುಗೆಪ್ಪನ ಇಂಥ ಆಲೋಚನೆಗೆ ಸ್ಫೂರ್ತಿಯಾಗಿದ್ದರು. ಈ ವಿಚಾರವನ್ನು ಅಲ್ಲಿನ ಮುಖಂಡರೊಂದಿಗೆ ಹಂಚಿಕೊಂಡಾಗ ಗ್ರಾಮಸ್ಥರು ಅದಕ್ಕೆ ಒಪ್ಪಿಗೆ ಸೂಚಿಸಿದರು. ಈ ಕಾರ್ಯ ಮುಗಿಯುವವರಿಗೂ ಮುರುಗೆಪ್ಪನ ಊಟ, ವಸತಿ ವ್ಯವಸ್ಥೆ  ಕುರಿತು ಚರ್ಚಿಸಿ, ದಿನಂಪ್ರತಿ ಒಬ್ಬರ ಮನೆಯಿಂದ ಮುರುಗೆಪ್ಪನ ತಂಡಕ್ಕೆ ಊಟ  ತಂದು ಕೊಡುವ ನಿರ್ಧಾರವೂ ಆಯಿತು.  ಗ್ರಾಮಸ್ಥರ ಎಲ್ಲ ಸಹಕಾರ, ಸೇವೆಯೊಂದಿಗೆ ಅಲ್ಲಿ ಶಿಶುನಾಳ ಶರೀಫರು ಮತ್ತು ಗೋವಿಂದಭಟ್ಟರ ಮಂಟಪ ಎದ್ದು ನಿಂತಿತು. ಗ್ರಾಮಸ್ಥರು ಮುರುಗೆಪ್ಪನ ಕಲಾಚಾತುರ್ಯಕ್ಕೆ ಸಂಭ್ರಮಪಟ್ಟರು. ಮುರುಗೆಪ್ಪ ತಮ್ಮೂರಿನವನೆ ಎಂಬಷ್ಟು ಅಭಿಮಾನ ತೋರಿದರು. 

 

ಹೀಗಿರುತ್ತಲಾಗಿ, ಒಂದು ದಿನ ಮುರುಗೆಪ್ಪ ಮಂಟಪದ ಅಂಗಳದಲ್ಲಿ ಕೂತಿದ್ದ. ಅನಿರೀಕ್ಷಿತವಾಗಿ ಅಲ್ಲಿಗೆ ಹೆಣ್ಣುಮಗಳೊಬ್ಬಳು ಬಂದಳು. ಅವಳ ಬಗಲಲ್ಲಿ ವರ್ಷದ ಕೂಸು. ಹರಿದ ಸೀರೆ, ಕೆದರಿದ ಕೇಶರಾಶಿ. ಅಳುತಿದ್ದ ಕೂಸಿಗೆ `ಪಾಪದ ಕೂಸು, ಪಾಪದ ಜನ್ಮ..' ಎಂದೇನೋ ಬಯ್ಯುತ್ತ, ತನ್ನನ್ನೂ ಬಯ್ದುಕೊಳ್ಳುತ್ತ ಆ ಮಗುವನ್ನು ಸಮಾಧಾನಿಸುತ್ತ ಅಲ್ಲಿಯೇ ಸಮೀಪದಲ್ಲಿದ್ದ ಮರವೊಂದರ ಬುಡದಲ್ಲಿ ಕೂತು ಮೊಲೆಕುಡಿಸ ಹತ್ತಿದಳು. ಮಗು ಅಳುತ್ತಲೇ ಇತ್ತು. ಇದರಿಂದ ಕೋಪಗೊಂಡಂತೆ ಕಂಡ ಅವಳು ಕೂಸನ್ನು ಹೊಡೆಯತೊಡಗಿದಳು. ಇದೆಲ್ಲವನ್ನು ಗಮನಿಸುತಿದ್ದ ಮುರುಗೆಪ್ಪಜ್ಜನಿಗೆ ಆ ತಾಯಿ ಹಸುಗೂಸಿಗೆ ಹೊಡೆಯುವುದನ್ನು ನೋಡಿ ಕರುಳು ಚುರುಕ್ ಅನ್ನಿಸಿತು. `  ಯಾಕ ಹೊಡೀತಿದಿಬೇ ಆ ಕೂಸ...ಏನಾಗಿದೆ ನಿನಗ?' ಎಂದು ಸ್ವಲ್ಪ ಸಿಡುಕಿನಿಂದಲೆ ಕೇಳಿದ.

 

ಇದ್ದಕ್ಕಿದ್ದಂತೆ ಕಣ್ಣೀರಾದ ಅವಳು ದುಸುದುಸು ಅಳಲಿಕ್ಕೆ ಸುರುವಿಟ್ಟುಕೊಂಡಳು. ತನ್ನ ಜನ್ಮಕ್ಕೆ ತಾನೇ ಶಾಪ ಹಾಕಿಕೊಳ್ಳುತ್ತ ತನ್ನ ಪಾಡನ್ನು ಹೇಳಿಕೊಳ್ಳತೊಡಗಿದಳು. ಶಿಕಾರಿಪುರದ ಕಡೆಯವಳಾದ ಅವಳ ಗಂಡ ಕೆಲದಿನಗಳ ಹಿಂದೆ ತೀರಿಕೊಂಡಿದ್ದ. ಇವಳಿಗೆ ಆಸ್ತಿ ಕೊಡಬೇಕಾಗುತ್ತದೆ ಎಂದು ಮೈದುನರು  ಹೊಡೆದು ಬಯ್ದು ಕಾಟ ಕೊಡತೊಡಗಿದರು. ತಂದೆತಾಯಿಗಳನ್ನೂ ಕಳೆದುಕೊಂಡಿದ್ದ ಅವಳು ತವರಿಗೆ ಹೋಗುವುದೂ ಕಷ್ಟವಿತ್ತು. ಹಂಗಿನರಮನೆಗಿಂತ ವಿಂಗಡದ ಗುಡಿ ಲೇಸೆಂದು ಯೋಚಿಸಿದ ಆಕೆ, ವರ್ಷದ ಕೂಸಿನೊಂದಿಗೆ ಆ ಮನೆ ತೊರೆದಿದ್ದಳು. ಎಲ್ಲಿಯಾದರೂ ಆಸರೆ ಸಿಕ್ಕೀತು ಎಂದು ಊರೂರು ಅಲೆಯುತ್ತ ಅವತ್ತು ಹರಲಹಳ್ಳಿಗೆ ಬಂದಿದ್ದಳು. 

 

ಆ ನಿರ್ಗತಿಕ ಹೆಣ್ಣುಮಗಳ ಕಷ್ಟ ಪರಂಪರೆಯನ್ನು ಕೇಳಿ ತಿಳಿದು ನಿಟ್ಟುಸಿರಿಟ್ಟ ಮುರುಗೆಪ್ಪ ' ಸರಿ, ತಾಯಿ  ನೀನಿಲ್ಲೆ ಇರು. ಏನಾದರೂ ಏರ್ಪಾಡು ಮಾಡೋಣ. ಕೊಲ್ಲುವ ಕೈ ಒಂದಿದ್ರ ಕಾಯೋವು ಹತ್ತಿರ್ತಾವು' ಅಂತ ಹೇಳಿ ಅವಳನ್ನು ಸಮಾಧಾನಿಸಿ ಊರೊಳಗೆ ಹೊರಟ. ಊರ ಮುಖಂಡರನ್ನು ಭೇಟಿಯಾಗಿ ಸಂಜೆ ಗ್ರಾಮಸ್ಥರ ಸಭೆ ಕರೆಯಲು ಹೇಳಿದ.

 

ಸಂಜೆಗೆ ಗ್ರಾಮಸ್ಥರೆಲ್ಲ ಒಂದೆಡೆ ಸಭೆ ಸೇರಿದರು.  ಸಭೆಗೆ ಆ ಹೆಣ್ಣುಮಗಳನ್ನು ಕರೆದುಕೊಂಡು ಬಂದ ಮುರುಗೆಪ್ಪ, ಎಲ್ಲರಿಗೂ ಅವಳಿಗೆದುರಾಗಿರುವ ಸಂಕಷ್ಟವನ್ನು ವಿವರಿಸಿ, ಮುಂದುವರೆದು ಹೇಳಿದ `ನೀವೆಲ್ಲರೂ ಇಷ್ಟು ದಿನ  ನನಗೆ ಅನ್ನವಿಕ್ಕಿ ಮನೆಯ ಮಗನಂತೆ ನೋಡಿಕೊಂಡಿದ್ದೀರಿ. ಇನ್ನು ಮುಂದೆ ಮಂಟಪದ ಉಸ್ತುವಾರಿ ಈ ತಾಯಿಯದು. ಅವಳಿಗೂ ಅನ್ನವಿಕ್ಕಿ ನಿಮ್ಮ ಮಗಳಂತೆ ನೋಡಿಕೊಳ್ಳಿ. ಎಂದ.

 

ಗ್ರಾಮಸ್ಥರೆಲ್ಲ ಮುರುಗೆಪ್ಪನ ಮನವಿಗೆ ಮರುಮಾತಾಡದೆ ಒಪ್ಪಿಕೊಂಡರು. ಇದರಿಂದ ಹರ್ಷಚಿತ್ತನಾದ ಮುರುಗೆಪ್ಪ ಮಂಟಪದ ಜವಾಬ್ದಾರಿಯನ್ನು ಆ ಹೆಣ್ಣುಮಗಳಿಗೆ ಒಪ್ಪಿಸಿ ಆ ಊರಿನಿಂದ ಹೊರಟು ಹೋದ. 

 

ಇದಾಗಿ ವರುಷಗಳೆಷ್ಟೋ ಉರುಳಿದವು. ತವರೂರಿನಲ್ಲಿ ಕೂಲಿನಾಲಿ ಮಾಡಿ ಜೀವನ ಸಾಗಿಸಿದ್ದ ಮುರುಗೆಪ್ಪನ ಹೆಂಡತಿ ನೀಲವ್ವಳಿಗೂ ಈ ಸುದ್ದಿ ತಿಳಿದಿತ್ತು. ಇವರೂ ಅಲ್ಲಿಗೆ ಹೋಗಿಬಂದು ಮಾಡುತಿದ್ದರು. ಒಮ್ಮೆ ತನ್ನ ಹಿರೀಮಗ ಬಸವನನ್ನು ಕರೆದು, ` ಹರಲಳ್ಳಿ ಜನ ನಿಮ್ಮ ಅಪ್ಪ ಅಂದ್ರ ಭಾಳ ಅಭಿಮಾನ ಪಡ್ತಾರ. ಅದು ಹೆಂಗಿದ್ರೂ ಭತ್ತದ ಸೀಮಿ. ನೀನೂ ಒಮ್ಮೆ ಹೋಗಿ ನಿಮ್ಮ ಅಕ್ಕನ ಕೇಳಿ ಒಂದಿಷ್ಟು ಅಕ್ಕೀನಾದರೂ ತಗೊಂಡ್ ಬಾ' ಎಂದಳು. 

 

ಅವ್ವನ ಮಾತಿನಂತೆ ಬಸವ ಹರಲಹಳ್ಳಿ ತಲುಪಿದ. ಮುರುಗೆಪ್ಪನಿಂದ ಮಂಟಪದ ಉಸ್ತುವಾರಿಗೆ ಉಳಿದಿದ್ದ ಅದೇ ಹೆಣ್ಣುಮಗಳು ಬಸವನಿಗೆ ಅಕ್ಕ ಆಗಿದ್ದಳು. ಬಂದವನೆ ಅವನು ಅಕ್ಕನಿಗೆ ತಾನು ಬಂದ ಉದ್ದೇಶವನ್ನು ತಿಳಿಸಿದ. ಬಸವನನ್ನು ತನ್ನ ಇನ್ನೊಬ್ಬ ಮಗನೆಂದೇ ಸಂಭ್ರಮಿಸುತಿದ್ದ ಅವಳು `ಸರಿ ಬಿಡು ತಮ್ಮ ನಾನೆಲ್ಲ ವ್ಯವಸ್ಥಾ ಮಾಡ್ತೀನಿ' ಅಂದು ಊರಲ್ಲಿ ಕೆಲ ರೈತರನ್ನು ಭೇಟಿಯಾದಳು. ವಿಷಯ ತಿಳಿದು ಎಲ್ಲರೂ ನಾ ಮುಂದೆ ತಾ ಮುಂದೆ ಎಂಬಂತೆ ಅಕ್ಕಿ ಕೊಟರು. ನೋಡು ನೋಡುತ್ತಿದ್ದಂತೆ ಹತ್ತಿಪ್ಪ್ಪತ್ತು ಚೀಲ ಅಕ್ಕಿ ಸಂಗ್ರಹವಾದವು. ಅವುಗಳನ್ನೆಲ ಒಂದು ಚಕ್ಕಡಿಗೆ ಹೇರಿ, ಚಕ್ಕಡಿಯನ್ನೇ ಹೊಡೆದು ಕಳಿಸುವ ವ್ಯವಸ್ಥೆ ಆಯಿತು. 

 

ಒಬ್ಬ ರೈತ ಚಕ್ಕಡಿಯನ್ನು ಹೊಡೆದುಕೊಂಡು ಅಕ್ಕಿಚೀಲಗಳನ್ನು ಊರಿಗೆ ತಲುಪಿಸಲೂ ಅಣಿಯಾದ. ಆ ಪ್ರಕಾರ ಚಕ್ಕಡಿಗೆ ಎತ್ತು ಹೂಡಿ ಚಕ್ಕಡಿ ಇನ್ನೇನು ಅಲ್ಲಿಂದ ಹೊರಡಬೇಕು.

 

ಎಲ್ಲಿಂದ ಬಂದನೋ ಏನೋ ಮುರುಗೆಪ್ಪ ಅಲ್ಲಿ ಒಮ್ಮೆಗೆ ಪ್ರತ್ಯಕ್ಷನಾಗಿಬಿಟ್ಟ. ವಿಷಯ ತಿಳಿದು ಸಿಟ್ಟು ನೆತ್ತಿಗೇರಿದವನಂತೆ ಚೀರಾಡತೊಡಗಿದ. ಆ ಹೆಣ್ಣುಮಗಳನ್ನು ಹತ್ತಿರಕ್ಕೆ ಕರೆದು ` ನಾನು ನಿನಗ ಕೈ ಎತ್ತಿ ಕೊಟ್ಟ ಅಕ್ಕಿ ಇವು. ತಿರುಗಿ ಅವನ್ನ ನೀನು ನನಗ ಕೊಡೋ ಮಟ್ಟಕ್ಕ ಬಂದ್ಯಾ?!' ಎಂದು ಜರಿದ. ತಪ್ಪು ಮಾಡಿ ಸಿಕ್ಕಿ ಬಿದ್ದ ಮಗುವಿನಂತೆ ಅಧೀರಳಾದ ಆಕೆ, ತಪ್ಪಾಯಿತೆಂದು ಕ್ಷಮೆ ಕೇಳಿದಳು. ಚಕ್ಕಡಿಯಲ್ಲಿದ್ದ ಅಕ್ಕಿಚೀಲಗಳನ್ನೆಲ್ಲ ಕೆಳಗಿಳಿಸಿ ಆಯಾ ರೈತರಿಗೆ ಒಪ್ಪಿಸಲು ಹೇಳಿದ. ಮುರುಗೆಪ್ಪನ ಈ ನಡೆಯಿಂದ ಎಲ್ಲರಿಗೂ ಸಖೇದಾಶ್ಚರ್ಯವಾಯಿತು. ಜೊತೆಗೆ ಮುರುಗೆಪ್ಪನ ಮೇಲಿನ ಅಭಿಮಾನವೂ ಇಮ್ಮಡಿಯಾಯಿತು.

 

`ಊರಿಂದ ಹಸಿದು ಬಂದಿರುವ ಈ ಮಗನಿಗೆ ಉಣ್ಣಿಸಿ ಕಳಿಸಲಾದರೂ ಒಪ್ಪಿಗೆ ಕೊಡಿ' ಎಂದು ಆಕೆ ಮುರುಗೆಪ್ಪನಲ್ಲಿ ಆಂಗಲಾಚಿದಳು. 'ಸರಿ ತಂಗಿ, ಅದು ನಿನ್ನ ಪ್ರೇಮ. ಉಣ್ಣಿಸಿ ಕಳಿಸು' ಎಂದ ಮುರುಗೆಪ್ಪ ಅಲ್ಲಿಂದ ತೆರಳಿಯೇ ಬಿಟ್ಟ. ಅಕ್ಕಿ ಮೇಲಿನ ಆಸೆಯಿರದ,  ನೆಂಟರ ಮೇಲೆ  ಪ್ರೀತಿಯನ್ನೂ  ತೋರದ ಮುರುಗೆಪ್ಪ ಅದರಾಚೆಗಿನ ಮತ್ತೇನನ್ನೋ ಹುಡುಕಿ ಹೊರಟಿದ್ದ! ಬರಿಗೈಯಲ್ಲಿ ಬಂದಿದ್ದ ಬಸವ ಬರಿಗೈಯಲ್ಲೇ ಊರಿನ ದಾರಿ ಹಿಡಿದಿದ್ದ!