ರಿಮೇಕ್ ಸ್ಥಳಾಂತರಿಸಿದ ಡಬ್ಬಿಂಗ್ : ನೆಲ ಕಚ್ಚಿದ ಹೀರೋಗಳಿಗೂ ಹಿಂದಿಯಲ್ಲಿ ಬೇಡಿಕೆ

ರಿಮೇಕ್ ಸ್ಥಳಾಂತರಿಸಿದ ಡಬ್ಬಿಂಗ್ : ನೆಲ ಕಚ್ಚಿದ ಹೀರೋಗಳಿಗೂ ಹಿಂದಿಯಲ್ಲಿ ಬೇಡಿಕೆ

ವರ್ಷಗಳು ಉರುಳಿದಂತೆ ಸಿನಿಮಾ ಮಾರುಕಟ್ಟೆಯಲ್ಲಿ ರೀಮೇಕ್ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಯಿತು. ಆಗ ಮುನ್ನೆಲೆಗೆ ಬಂದಿದ್ದೇ  ಡಬ್ಬಿಂಗ್ ಟ್ರೆಂಡ್. ಹಿಂದಿಗೆ ರೀಮೇಕ್ ಆಗುತ್ತಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ದಕ್ಷಿಣ ಭಾರತೀಯ ಚಿತ್ರಗಳು ಈಗ ಹಿಂದಿಗೆ ಹೋಗುತ್ತಿವೆ. ಕನ್ನಡ, ತೆಲುಗು, ತಮಿಳು ಭಾಷೆಗಳ ನೂರಾರು ಚಿತ್ರಗಳು ಹಿಂದಿಗೆ ಡಬ್ ಆಗುತ್ತಿವೆ.

ಟೈಗರ್ ಪ್ರಭಾಕರ್ ಅವರ ಹೆಸರನ್ನು ಕೇಳದ, ಅವರ ಚಿತ್ರಗಳನ್ನು ನೋಡದ ಕನ್ನಡಿಗರು ಅಪರೂಪ. ಅವರ ಮಗ ವಿನೋದ್ ಪ್ರಭಾಕರ್ ಹೆಸರನ್ನು ಕೆಲವರಾದರೂ ಕೇಳಿರಬಹುದು ಇಲ್ಲವೇ ಅವರ ಬಗ್ಗೆ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಓದಿರಬಹುದು. ಆದರೆ, ಅವರ ಚಿತ್ರಗಳನ್ನು ನೋಡಿದವರು ಅಪರೂಪ. ಸುಮಾರು ಒಂದು ಡಜನ್ ಚಿತ್ರಗಳಲ್ಲಿ ಅಭಿನಯಿಸಿದ್ದರೂ ವಿನೋದ್ ಪ್ರಭಾಕರ್ ಅವರ ಯಾವ ಚಿತ್ರವೂ ದೊಡ್ಡ ಮಟ್ಟದ ಯಶಸ್ಸು ಗಳಿಸಿಲ್ಲ. ಆದರೂ ಅವರ ಚಿತ್ರಗಳು ಒಂದರ ನಂತರ ಮತ್ತೊಂದರಂತೆ ಸೆಟ್ಟೇರುತ್ತಲೇ ಇವೆ, ಬಿಡುಗಡೆಯಾಗುತ್ತಲೇ ಇವೆ. ಮರಿ ಟೈಗರ್ ಎಂದೇ ಕರೆಸಿಕೊಳ್ಳುವ ವಿನೋದ್ ಪ್ರಭಾಕರ್, ಹತ್ತಿರ ಹತ್ತಿರ ಒಂದು ಕೋಟಿ ರೂಪಾಯಿ ಸಂಭಾವನೆ ಕೇಳುತ್ತಿದ್ದಾರೆ. ಹಾಗಿದ್ದರೆ ಆ ಚಿತ್ರಗಳನ್ನು ಯಾರು ನೋಡುತ್ತಿದ್ದಾರೆ..? ಆ ಚಿತ್ರಗಳ ನಿರ್ಮಾಪಕರು ಹಾಕಿದ ಬಂಡವಾಳ ಹೇಗೆ ವಾಪಸ್ ಪಡೆಯುತ್ತಿದ್ದಾರೆ? ಯಾವ ಆಧಾರದ ಮೇಲೆ ವಿನೋದ್ ಪ್ರಭಾಕರ್ ಕೋಟಿ ರೂಪಾಯಿಗೆ ಬೇಡಿಕೆ ಇಡುತ್ತಿದ್ದಾರೆ? ಇವೆಲ್ಲ ಪ್ರಶ್ನೆಗಳು ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೂ ಒಂದೇ ಉತ್ತರ: ಹಿಂದಿ ಡಬ್ಬಿಂಗ್ 

ಸಾಯಿ ಧರ್ಮ ತೇಜ- ಈತ ತೆಲುಗಿನ ಮೆಗಾಸ್ಟಾರ್ ಚಿರಂಜೀವಿಯ ಸಹೋದರಿಯ ಮಗ. ಸ್ಟಾರ್ ಗಳಿಂದ ಕಿಕ್ಕಿರಿದಿರುವ ತೆಲುಗು ಚಿತ್ರರಂಗದಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವ ನಟ. ಆದರೆ, ಈತನಿಗೆ ಹಿಂದಿ ಪ್ರೇಕ್ಷಕರ ನಡುವೆ ಈಗಾಗಲೇ ಸ್ಟಾರ್ ಸ್ಟೇಟಸ್ ಪ್ರಾಪ್ತವಾಗಿಬಿಟ್ಟಿದೆ. ಈತನ ಸಿನಿಮಾಗಳು ಮೂವಿ ಚಾನೆಲ್ ಗಳಲ್ಲಿ ಹಾಗೂ ಯೂ ಟ್ಯೂಬ್ ನಲ್ಲಿ ಮಿಲಿಯಾಂತರ ಜನರನ್ನು ಸೆಳೆಯುತ್ತಿವೆ.  ಇದರ ಹಿಂದಿನ ಕಾರಣ: ಹಿಂದಿ ಡಬ್ಬಿಂಗ್. 

ಇಷ್ಟಕ್ಕೂ ಏನಿದು ಹಿಂದಿ ಡಬ್ಬಿಂಗ್..? ಹಿಂದಿಗೆ ಡಬ್ ಆದ ಚಿತ್ರಗಳು ಎಲ್ಲಿ, ಹೇಗೆ ಪ್ರದರ್ಶನಗೊಳ್ಳುತ್ತವೆ ಎನ್ನುವ ಪ್ರಶ್ನೆಗಳ ಬೆನ್ನು ಹತ್ತಿದರೆ, ನಮ್ಮೆದುರು ಚಲನಚಿತ್ರೋದ್ಯಮದ ಬೆರಗಿನ ಅಂಶವೊಂದು ಅನಾವರಣಗೊಳ್ಳುತ್ತದೆ.

ಇದು ಎಂಟ್ಹತ್ತು ವರ್ಷಗಳ ಹಿಂದಿನ ಮಾತು. ಕನ್ನಡದಲ್ಲಿ ಚಿತ್ರ ನಿರ್ಮಾಣ ಮಾಡುವವರಿಗೆ ಸ್ಯಾಟಲೈಟ್ ರೈಟ್ಸ್ ನಿಂದ ಉತ್ತಮವೆನ್ನಬಹುದಾದ ಒಂದಿಷ್ಟು ಹಣ ಸಿಗುತ್ತಿತ್ತು. ಆದರೆ, ಚಿತ್ರಗಳನ್ನು ಥಿಯೇಟರ್ ಗಳಲ್ಲಿ ರಿಲೀಸ್ ಮಾಡದೇ ಕೇವಲ ಟಿವಿ ಹಕ್ಕುಗಳಿಗಾಗಿಯೇ ಸಿನಿಮಾ ಮಾಡುವ ಜನ ಹುಟ್ಟಿಕೊಂಡರು. ಕಚಡಾ ಸರಕು ಹೆಚ್ಚಾದಂತೆ ಟಿವಿ ಪ್ರೇಕ್ಷಕರು ರಿಮೋಟ್ ಒತ್ತಿ ಚಾನೆಲ್ ಬದಲಿಸತೊಡಗಿದರು. ತಕ್ಷಣವೇ ಟಿ ವಿ ವಾಹಿನಿಗಳು ಎಚ್ಚೆತ್ತುಕೊಂಡವು. ಕೇವಲ ಸ್ಟಾರ್ ಗಳ ಸಿನಿಮಾಗಳನ್ನು ಮತ್ತು ಹಿಟ್ ಆದ ಚಿತ್ರಗಳನ್ನು ಮಾತ್ರವೇ ಕೊಂಡುಕೊಳ್ಳಲು ಚಾನೆಲ್ ಗಳು ನಿರ್ಧರಿಸಿದವು. ಅದರಿಂದಾಗಿ ಕನ್ನಡ ಚಿತ್ರ ನಿರ್ಮಾಪಕರ ಆದಾಯಕ್ಕೆ ದೊಡ್ಡ ಹೊಡೆತ ಬಿದ್ದಿತ್ತು. ಅಲ್ಲಿಗೆ ಕೆಲವರು ಚಿತ್ರ ಮಾಡುವುದನ್ನೇ ನಿಲ್ಲಿಸಿಬಿಟ್ಟರು. ಆಗ ನಿರ್ಮಾಪಕನ ತಿಜೋರಿ ತುಂಬುತ್ತಿದ್ದ ಸ್ಯಾಟಲೈಟ್ ಹಕ್ಕುಗಳ ಸ್ಥಾನಕ್ಕೆ ಈಗ ಹಿಂದಿ ಡಬ್ಬಿಂಗ್ ರೈಟ್ಸ್ ಬಂದಿವೆ.

ಏನಿದು ಹಿಂದಿ ಡಬ್ಬಿಂಗ್?

ಕೆಲವೇ ವರ್ಷಗಳ ಹಿಂದೆ ಹಿಂದಿ ಚಿತ್ರರಂಗದಲ್ಲಿ ರೀಮೇಕ್ ಟ್ರೆಂಡ್ ಜೋರಾಗಿತ್ತು. ತೆಲುಗು ಹಾಗೂ ತಮಿಳು ಚಿತ್ರಗಳು ಹೆಚ್ಚಾಗಿ ಹಿಂದಿಯಲ್ಲಿ ಪುನರ್ ನಿರ್ಮಾಣವಾಗುತ್ತಿದ್ದವು. ಸೋತು ಸುಣ್ಣವಾಗಿದ್ದ  ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳಿಗೆ ಮರುಜನ್ಮ ನೀಡಿದ್ದೇ ರೀಮೇಕ್ ಚಿತ್ರಗಳು. ರೌಡಿ ರಾಥೋಡ್,ವಾಂಟೆಡ್ ಘಜಿನಿ,ರೆಡಿ,ಸಿಂಗಂ ಮುಂತಾದ ಚಿತ್ರಗಳು ಹಿಂದಿಯಲ್ಲಿ ಧೂಳೆಬ್ಬಿಸಿದ್ದವು; ನಿರ್ಮಾಪಕರಿಗೆ ಹಣದ ಹೊಳೆಯನ್ನೇ ಹರಿಸಿದ್ದವು. ಸಲ್ಮಾನ್ ಖಾನ್, ಅಮೀರ್ ಖಾನ್, ಅಕ್ಷಯ್ಕುಮಾರ್ರಂಥ ನಟರಿಗೆ ರಿಮೇಕ್ ಚಿತ್ರಗಳು ದೊಡ್ಡ ಮಟ್ಟದ ಯಶಸ್ಸನ್ನು ತಂದುಕೊಟ್ಟಿದ್ದವು. ಇದು ಒಂದಷ್ಟು ವರ್ಷ ಜೋರಾಗಿಯೇ ನಡೆಯಿತು. ವರ್ಷಗಳು ಉರುಳಿದಂತೆ ಸಿನಿಮಾ ಮಾರುಕಟ್ಟೆಯಲ್ಲಿ ರೀಮೇಕ್ ಚಿತ್ರಗಳ ಅಬ್ಬರ ಕೊಂಚ ಕಡಿಮೆಯಾಯಿತು. ಆಗ ಮುನ್ನೆಲೆಗೆ ಬಂದಿದ್ದೇ  ಡಬ್ಬಿಂಗ್ ಟ್ರೆಂಡ್. ಹಿಂದಿಗೆ ರೀಮೇಕ್ ಆಗುತ್ತಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ದಕ್ಷಿಣ ಭಾರತೀಯ ಚಿತ್ರಗಳು ಈಗ ಹಿಂದಿಗೆ ಹೋಗುತ್ತಿವೆ. ಕನ್ನಡ, ತೆಲುಗು, ತಮಿಳು ಭಾಷೆಗಳ ನೂರಾರು ಚಿತ್ರಗಳು ಹಿಂದಿಗೆ ಡಬ್ ಆಗುತ್ತಿವೆ. ಇಲ್ಲೊಂದು ಮುಖ್ಯ ವಿಚಾರವಿದೆ. ರಿಮೇಕ್ ಆದ ಚಿತ್ರಗಳೆಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಂಥವು. ಥಿಯೇಟರ್ ಗಳಿಗೆ ಬರುತ್ತಿದ್ದ ಜನರನ್ನು ನಂಬಿಕೊಂಡಿದ್ದಂಥವು. ಆದರೆ ಈಗ ಹಿಂದಿಗೆ ಡಬ್ ಆಗುತ್ತಿರೋ ಹೆಚ್ಚಿನ ದಕ್ಷಿಣ ಭಾರತೀಯ ಚಿತ್ರಗಳು ನಂಬಿಕೊಂಡಿರುವುದು ಬೆಳ್ಳಿಪರದೆಯನ್ನಲ್ಲ.. ಕಿರುಪರದೆಯನ್ನು. 

ಭಾರತದ ಬಹುತೇಕ ಎಲ್ಲ ಪ್ರಮುಖ ಭಾಷೆಗಳಲ್ಲೂ ಸಿನಿಮಾಗಳನ್ನು ಪ್ರಸಾರ ಮಾಡುವ ಚಾನೆಲ್ ಗಳಿವೆ. ದೇಶದ ಅತಿ ಹೆಚ್ಚು ಜನ ಮಾತನಾಡುವ ಹಿಂದಿ ಭಾಷೆಯಲ್ಲಂತೂ ಸಿನಿಮಾ ವಾಹಿನಿಗಳ ಸಂಖ್ಯೆ ಕೊಂಚ ಹೆಚ್ಚಾಗಿಯೇ ಇದೆ. ಸೋನಿ ಮ್ಯಾಕ್ಸ್, ಸೋನಿ ವಾ, ಜೀ ಸಿನಿಮಾದಂಥ ಅನೇಕ ವಾಹಿನಿಗಳು ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಸಿನಿಮಾಗಳನ್ನು ಪ್ರಸಾರ ಮಾಡುತ್ತಲೇ ಇರುತ್ತವೆ.  ಅವುಗಳಿಗೆ ದಿನಕ್ಕೆ ಕನಿಷ್ಠ ಎಂದರೂ ಮೂರರಿಂದ ನಾಲ್ಕು ಸಿನಿಮಾಗಳು ಬೇಕು. ಹಾಗಾಗಿ ಅವರಿಗೆ ಕೇವಲ ಬಾಲಿವುಡ್ ನಲ್ಲಿ ತಯಾರಾಗುವ ಚಿತ್ರಗಳು ಸಾಕಾಗದೇ ಇರುವುದರಿಂದ ದಕ್ಷಿಣ ಭಾರತೀಯ ಚಿತ್ರಗಳಿಗೆ ಬೇಡಿಕೆ ಬಂದಿದೆ. ಇದು ಕನ್ನಡ, ತೆಲುಗು, ತಮಿಳು ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ಹಿಂದಿಯಲ್ಲಿ ಮಾರುಕಟ್ಟೆ ಸೃಷ್ಟಿಸಿದೆ. ಇದು ಯಾವ ಮಟ್ಟ ಮುಟ್ಟಿದೆಯೆಂದರೆ, ಹಿಂದಿ ಕಿರುತೆರೆಯಲ್ಲಿ ಬಾಲಿವುಡ್ ಸಿನಿಮಾಗಳಿಗಿಂತಲೂ ದಕ್ಷಿಣ ಭಾರತೀಯ ಚಿತ್ರಗಳೇ ಹೆಚ್ಚು ಜನಪ್ರಿಯವಾಗಿವೆ. 

ಹಿಂದಿ ಚಿತ್ರಗಳನ್ನು ಮೊದಲೇ ಬೆಳ್ಳಿಪರದೆಯಲ್ಲಿ ನೋಡಿರುವ ಸಿನಿಪ್ರಿಯರು ಮನೆಯ ಟಿವಿಗಳಲ್ಲಿ ಹೊಸ ಸಿನಿಮಾಗಳನ್ನು ನೋಡೋದಕ್ಕೆ ಬಯಸುತ್ತಾರೆ. ಈ ಅಂಶವೂ ಕೂಡ ಹಿಂದಿ ಮಾತನಾಡುವ ಜನರ ನಡುವೆ ದಕ್ಷಿಣ ಭಾರತದ ಚಿತ್ರಗಳ ಜನಪ್ರಿಯತೆಗೆ ಒಂದು ಕಾರಣವಾಗಿದೆ. ಸೌತ್ ಸಿನಿಮಾಗಳು ಸ್ಲಾಟ್ ತುಂಬುವುದರ ಜೊತೆಗೆ ಟಿಆರ್ ಪಿ ಗಳಿಕೆಯಲ್ಲೂ ಮುಂದಿವೆ. ಅಮೀರ್ ಖಾನ್ ಮುಂತಾದ ನಟರಿದ್ದ ಮಲ್ಟಿ ಸ್ಟಾರರ್ ಸಿನಿಮಾ ರಂಗ್ ದೇ ಬಸಂತಿಗಿಂತ ಚಿರಂಜೀವಿಯ ಅಂಜಿ ಚಿತ್ರದ ಡಬ್ಬಿಂಗ್ ಚಿತ್ರವು ಹೆಚ್ಚು ಹಣ ತಂದುಕೊಟ್ಟಿತ್ತು. ಅದೇ ಟರ್ನಿಂಗ್ ಪಾಯಿಂಟ್ ಆಗಿ, ಹಿಂದಿ ಚಾನೆಲ್ಗಳ ಕಣ್ಣು ದಕ್ಷಿಣ ಭಾರತದ ಚಿತ್ರಗಳ ಮೇಲೆ ಬಿತ್ತು. ಅದು ಇಲ್ಲಿನ ಚಿತ್ರ ನಿರ್ಮಾಪಕರ ಪಾಲಿಗೆ ವರವಾಗಿ, ಸಿನಿಮಾ ಮಾರುಕಟ್ಟೆಯ ಚಹರೆಯನ್ನೇ ಬದಲಿಸಿಬಿಟ್ಟಿತು. ಜೊತೆಗೆ  ಕನ್ನಡವೂ ಸೇರಿದಂತೆ ತೆಲುಗು, ತಮಿಳು ಚಿತ್ರಗಳ ಕಥಾವಸ್ತು ಹಾಗೂ ಅವುಗಳ ನಿರೂಪಣೆಗಳಲ್ಲೂ ದೊಡ್ಡ ಮಟ್ಟದ ಬದಲಾವಣೆಗಳಿಗೆ ಕಾರಣವಾಯಿತು. 

ಹೊಡಿ ಮಗ ಹೊಡಿ ಮಗ..!

ಕನ್ನಡ ಪ್ರೇಕ್ಷಕರು ಭಾರತದಲ್ಲಿಯೇ ಅತ್ಯಂತ ಪ್ರಬುದ್ಧರು ಅನ್ನುವ ಮಾತು ಬಹಳ ಹಿಂದಿನಿಂದಲೂ ಇದೆ. ಕನ್ನಡದಲ್ಲಿ ನಿರ್ಮಾಣವಾಗುವ ಚಿತ್ರಗಳನ್ನು ನೆರೆಯ ಚಿತ್ರರಂಗಗಳ ದಿಗ್ಗಜರು ಕೂಡ ಗಮನಿಸುತ್ತಿದ್ದರು. ಮಣಿರತ್ನಂರಂಥ ಪ್ರತಿಭಾವಂತ ನಿರ್ದೇಶಕ ತನ್ನ ಮೊದಲ ಚಿತ್ರ ನಿರ್ದೇಶಿಸಲು ಆಯ್ದುಕೊಂಡದ್ದು ಕನ್ನಡ ಚಿತ್ರರಂಗವನ್ನು. ಕನ್ನಡಿಗರ ಗುಣ- ಮೌಲ್ಯ ವಿವೇಚನೆಯನ್ನು, ತಾರತಮ್ಯ ಪ್ರಜ್ಞೆಯನ್ನು ದೇಶದ ಚಿತ್ರಪಂಡಿತರು ಕೊಂಡಾಡುತ್ತಿದ್ದರು. ಇಂಥ ಹಿನ್ನೆಲೆಯ ಕನ್ನಡ ಚಿತ್ರರಂಗದಲ್ಲಿ ಈಗ ಅರ್ಥಹೀನ ಹೊಡೆದಾಟದ, ಜಿಗುಪ್ಸೆ ಮೂಡಿಸುವ ಚಿತ್ರಗಳು ಹೆಚ್ಚು ತಯಾರಾಗ್ತಿವೆ ಹಾಗೂ ಅವಕ್ಕೆ ಬೇಡಿಕೆಯೂ ಇದೆ ಅಂದರೆ ಅದಕ್ಕೆ ಕಾರಣ ಹಿಂದಿ ಡಬ್ಬಿಂಗ್ ರೈಟ್ಸ್.   

ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಬಿಹಾರ ಮುಂತಾದವು ಹಿಂದಿ ಭಾಷಿಕರೇ ಹೆಚ್ಚಾಗಿರುವ ದೊಡ್ಡ ರಾಜ್ಯಗಳು. ಈ ರಾಜ್ಯಗಳ ಜನರ ಆರ್ಥಿಕ ಹಾಗೂ ಸಾಮಾಜಿಕ ಮಟ್ಟ ಭಾರತದ ಇತರ ರಾಜ್ಯಗಳಿಗೆ-ಅದರಲ್ಲೂ ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ-ಶೋಚನೀಯವಾಗಿದೆ. ಭಾರತದಲ್ಲಿ ಜನರ ಜೀವನ ಮಟ್ಟಕ್ಕೂ ಅವರ ಸಿನಿಮಾ ಅಭಿರುಚಿಗೂ ಹತ್ತಿರದ ನಂಟಿದೆ. ಇದನ್ನು ಸಿನಿಮಾ ಭಾಷೆಯಲ್ಲಿಯೇ ಹೇಳುವುದಾದರೆ, ಬಿ ಮತ್ತು ಸಿ ಸೆಂಟರ್ ಗಳ ಪ್ರೇಕ್ಷಕರೇ ಅಧಿಕವಾಗಿರುವ ರಾಜ್ಯಗಳಿವು. ಇವರಿಗೆ ಸಿನಿಮಾ ಅಂದರೆ ಭರ್ಜರಿ ಹೊಡೆದಾಟ ಇರಬೇಕು. ಕಣ್ಣು ಕುಕ್ಕುವ ಲೊಕೇಷನ್ ಗಳಿರಬೇಕು. ಜೊತೆಗಿಂದಿಷ್ಟು ಅಬ್ಬರ ಆರ್ಭಟ ಇರಬೇಕು. ಅಲ್ಲೆಲ್ಲಾ ಈಗ ಕನ್ನಡದ ಹೊಡಿಬಡಿ ಚಿತ್ರಗಳು ಭಾರಿ ಹಂಗಾಮ ಮಾಡುತ್ತಿವೆ. 

ಸಿನಿಮಾಗಳನ್ನು ಕೊಳ್ಳುವಾಗ ಹಿಂದಿ ವಾಹಿನಿಗಳು ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸುತ್ತಿವೆ. ಅವುಗಳಲ್ಲಿ ಮುಖ್ಯವಾದದ್ದು ಚಿತ್ರಗಳಲ್ಲಿ ಕನಿಷ್ಠ ಪಕ್ಷ ನಾಲ್ಕೈದಾದರೂ ಫೈಟ್ ಗಳಿರಬೇಕು. ಫೈಟ್ ಗಳು ಎಷ್ಟು ರೋಚಕವಾಗಿರುತ್ತವೋ ಆ ಚಿತ್ರಕ್ಕೆ ಅಷ್ಟು ಬೇಡಿಕೆ ಜಾಸ್ತಿ. ಕೆಲವೊಮ್ಮೆಯಂತೂ ಚಿತ್ರದ ಫೈಟ್ ಮಾಸ್ಟರ್ ಯಾರು ಅನ್ನುವುದರ ಆಧಾರದ ಮೇಲೆ ಚಿತ್ರದ ಬೆಲೆ ನಿರ್ಧಾರವಾಗುವುದೂ ಉಂಟು. ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದ ಸ್ಟಂಟ್ ಮಾಸ್ಟರ್ ಗಳ ಚಿತ್ರಗಳಿಗೆ ಕೊಂಚ ಹೆಚ್ಚು ಹಣ ಕೊಟ್ಟು ಕೊಂಡುಕೊಳ್ಳುತ್ತಾರೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಫೈಟ್ ಮಾಸ್ಟರ್ ರವಿವರ್ಮ ಕೆಲಸ ಮಾಡಿರುವ ಚಿತ್ರಗಳು ಹೆಚ್ಚಿನ ಮೌಲ್ಯಕ್ಕೆ ಮಾರಾಟವಾದ ನಿದರ್ಶನಗಳಿವೆ.ದಕ್ಷಿಣದ ಸ್ಟಾರ ನಟ, ನಟಿಯರಷ್ಟೇ ಅಲ್ಲದೆ ಟೆಕ್ನೀಷಿಯನ್ ಗಳೂ ಕೂಡ ಉತ್ತರ ಭಾರತದಲ್ಲಿ ಜನಪ್ರಿಯರಾಗಿದ್ದಾರೆ.

ಫೈಟ್ ಇದ್ದರೆ ರೈಟ್!

ದಕ್ಷಿಣದ ಚಿತ್ರಗಳಲ್ಲಿ ಉತ್ತಮ ಕಥೆ ಇರುವುದಷ್ಟೇ ಅಲ್ಲದೇ ಆಕ್ಷನ್ ಮತ್ತು ಡ್ರಾಮಾ ಹೈಡೋಸ್ ಇರುತ್ತದೆ. ಜೊತೆಗೆ ಉತ್ತಮ ಲೊಕೇಷನ್ಗಳು, ಗ್ಲಾಮರ್, ಕಾಮಿಡಿ ಎಲ್ಲ ಮಸಾಲೆಯೂ ಹದವಾಗಿ ಬೆರೆಸಿರುತ್ತಾರೆ. ಇದು ಹಿಂದಿ ವೀಕ್ಷಕರು ದಕ್ಷಿಣ ಭಾರತದ ಚಿತ್ರಗಳಿಗೆ ಹೆಚ್ಚು ಮಾರುಹೋಗಲು ಕಾರಣವಾಗಿದೆ. ಹೀಗಾಗಿಯೇ ನಮ್ಮ ದರ್ಶನ್, ಪುನೀತ್, ಸುದೀಪ್, ತೆಲುಗಿನ ನಾಗಾರ್ಜುನ, ಚಿರಂಜೀವಿ, ಅಲ್ಲು ಅರ್ಜುನ್, ಜೂನಿಯರ್ ಎನ್ ಟಿಆರ್, ತಮಿಳಿನ ಸೂರ್ಯ, ವಿಜಯ್ ಮುಂತಾದ ಸ್ಟಾರ್ಗಳ ಚಿತ್ರಗಳಿಗೆ ಹಿಂದಿಯಲ್ಲಿ ಈಗ ಹಿಂದೆಂದಿಗಿಂತ ಹೆಚ್ಚು ಬೇಡಿಕೆ ಸೃಷ್ಟಿಯಾಗಿದೆ. 

ಹಿಂದಿ ಡಬ್ಬಿಂಗ್ ಹಕ್ಕುಗಳಿಂದಾಗಿ ಕನ್ನಡದ ಚಿತ್ರ ಮಾರುಕಟ್ಟೆಯ ಲಾಭ-ನಷ್ಟದ ಲೆಕ್ಕಾಚಾರವೇ ಬದಲಾಗಿಹೋಗಿದೆ. ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆದ ಪುನೀತ್ ನಟನೆಯ ನಟಸಾರ್ವಭೌಮ ಚಿತ್ರವು ಇಲ್ಲಿ ಪ್ರೇಕ್ಷಕರನ್ನು ಸೆಳೆಯಲು ಸೋತರೂ ಹಿಂದಿ ಡಬ್ಬಿಂಗ್ ಹಕ್ಕುಗಳಿಂದ ನಿರ್ಮಾಪಕರಿಗೆ 7 ಕೋಟಿ ರೂಪಾಯಿ ತಂದುಕೊಟ್ಟಿದೆ. ಇನ್ನು ಆಕ್ಷನ್ ಪ್ರಿಯರ ನೆಚ್ಚಿನ ನಟನಾಗಿರುವ ದರ್ಶನ್ ಅವರ ಚಿತ್ರವೊಂದಕ್ಕೆ 7 ರಿಂದ 10 ಕೋಟಿ, ಶಿವರಾಜ್ ಕುಮಾರ್ ಅವರ ಚಿತ್ರಗಳಿಗೆ 3 ರಿಂದ 4 ಕೋಟಿ ಹಿಂದಿ ಹಕ್ಕುಗಳಿಂದ ಸಿಗುತ್ತಿದೆ.ಕೆಜಿಎಫ್ ಯಶಸ್ಸಿನ ನಂತರ ಯಶ್ ಅವರ ಎಲ್ಲ ಚಿತ್ರಗಳೂ ಹಿಂದಿಗೆ ಡಬ್ ಆಗುತ್ತಿವೆ. ವಿಶೇಷ ಅಂದರೆ, ಮೊದಲೆಲ್ಲಾ ಸ್ಟಾರ್ ಚಿತ್ರಗಳ ಡಬ್ಬಿಂಗ್ ರೈಟ್ಸ್ ಗೆ ಮಾತ್ರ ಒಂದಿಷ್ಟು ಬೇಡಿಕೆ ಇರುತ್ತಿತ್ತು. ಇದೀಗ ಹೆಸರೇ ಇಲ್ಲದ ನಟರ ಚಿತ್ರಗಳೂ ಹಣ ಮಾಡತೊಡಗಿವೆ. 

ಕನ್ನಡದಲ್ಲಿ ವಿನೋದ್ ಪ್ರಭಾಕರ್ ಅವರಂತೂ ಹಿಂದಿ ಡಬ್ಬಿಂಗ್ ಗಾಗಿಯೇ ಚಿತ್ರಗಳನ್ನು ಮಾಡುತ್ತಿದ್ದಾರೆ. ಥಿಯೇಟರ್ ಗಳಲ್ಲಿ ನೆಟ್ಟಗೆ ಮೂರು ದಿನ ಓಡದ ವಿನೋದ್ ಚಿತ್ರಕ್ಕೆ ಅಲ್ಲಿ ಒಂದೂವರೆಯಿಂದ ಎರಡು ಕೋಟಿ ಸಿಗುತ್ತಿದೆ. ಇದನ್ನೇ ಅವಕಾಶವನ್ನಾಗಿ ಮಾಡಿಕೊಂಡು ಕೆಲವು ನಿರ್ದೇಶಕರು ಒಂದರ ನಂತರ ಒಂದರಂತೆ ವಿನೋದ್ ಚಿತ್ರಗಳನ್ನು ಸುತ್ತುತ್ತಿದ್ದಾರೆ. ಅವುಗಳ ಪೈಕಿ ಹೆಚ್ಚಿನವು ಬಿ ಗ್ರೇಡ್ ಸಿನಿಮಾಗಳು. ರಾಮ್ನಾರಾಯಣ್ ಅವರೇ ವಿನೋದ್ಗಾಗಿ ಮೂರು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಟೈಸನ್. ಕ್ರ್ಯಾಕ್, ಹೋರಿ, ರಗಡ್, ಕಾಮನ್ ಮ್ಯಾನ್, ಸರ್ಕಲ್ ಇನ್ಸ್ಪೆಕ್ಟರ್, ಗಜೇಂದ್ರ, ಫೈಟರ್-ವಿನೋದ್ ಪ್ರಭಾಕರ್ ಅವರ ಈ ಚಿತ್ರಗಳ ಹೆಸರುಗಳನ್ನು ಗಮನಿಸಿದರೂ ಸಾಕು, ಅವು ಹೇಗಿರಬಹುದು ಅನ್ನುವ ಅಂದಾಜು ಸಿಗುತ್ತದೆ. ವಿನೋದ್ ಪ್ರಭಾಕರ್ ಈ ಟ್ರೆಂಡ್ ಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದು, ರಗಡ್ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದರು. ಒಂದೇ ಒಂದು ಚಿತ್ರ ಯಶಸ್ಸು ಕಾಣದಿದ್ದರೂ ವಿನೋದ್ ಪ್ರಭಾಕರ್ ಹತ್ತಿರ ಹತ್ತಿರ ಕೋಟಿ ರೂಪಾಯಿ ಡಿಮ್ಯಾಂಡ್ ಮಾಡುತ್ತಿರುವುದು ಹಿಂದಿ ಡಬ್ಬಿಂಗ್ನ ನ ಮಹಿಮೆಯಿಂದಾಗಿಯೇ.

ಹಿಂದಿ ಡಬ್ಬಿಂಗ್ ಹಕ್ಕುಗಳಿಂದಾಗಿಯೇ ವೃತ್ತಿಜೀವನದಲ್ಲಿ ಒಂದು ಸ್ಥಾನ ಪಡೆದಿರೋ ನಟರ ಪೈಕಿ ವಿನೋದ್ ನಂತರದ ಸ್ಥಾನ ಚಿರಂಜೀವಿ ಸರ್ಜಾ ಅವರದ್ದು. ಇವರ ಜೊತೆಗೆ ಉಗ್ರಂ ಚಿತ್ರದ ನಂತರ ಶ್ರೀಮುರುಳಿ ಕೂಡ ಹಿಂದಿ ವೀಕ್ಷಕರ ನಡುವೆ ಒಂದಿಷ್ಟು ಜನಪ್ರಿಯತೆ ಗಳಿಸಿದ್ದಾರೆ. 

ಕೆಲವೇ ವರ್ಷಗಳ ಹಿಂದೆ ಡಬ್ಬಿಂಗ್ ರೈಟ್ಸ್ ಅನ್ನೋದು ಕೆಲವೇ ಸಾವಿರಗಳ ವಿಚಾರವಾಗಿತ್ತು. ಈಗ ಇದು ಚಿತ್ರವೊಂದರ ಮುಖ್ಯ ಆದಾಯದ ಮೂಲವಾಗಿದೆ ಅಂದರೆ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬದಲಾಗಿದೆ ಎಂದು ಅರಿವಾಗುತ್ತದೆ. ಡಬ್ಬಿಂಗ್ನಿಂದಾಗಿಯೇ ಕೋಟಿ ಕೋಟಿ ಹಣ ಕೈ ಬದಲಾಯಿಸುತ್ತಿದೆ. ಇದರಿಂದ ಹೊಸ ನಿರ್ಮಾಪಕರಿಗೆ ಲಾಭವಾಗುತ್ತಿದೆ ಎನ್ನುವುದು ನಿಜವಾದರೂ, ಹಿಂದಿ ಡಬ್ಬಿಂಗ್ ಹಣದ ಆಸೆಗಾಗಿ ನಿರ್ಮಾಪಕರು ನಿರ್ದೇಶಕರು ಅನಗತ್ಯವಾಗಿಯಾದರೂ ಚಿತ್ರದಲ್ಲಿ ನಾಲ್ಕೈದು ಫೈಟ್ಸ್ ತುರುಕುತ್ತಿದ್ದಾರೆ. ಮಸಾಲಾ ಅಂಶಗಳಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಅನೇಕ ಸಲ ಸಿನಿಮಾ ಶೂಟಿಂಗ್ ಆರಂಭವಾಗುತ್ತಿದ್ದಂತೆಯೇ ಡಬ್ಬಿಂಗ್ ಮಾತುಕತೆ ಮುಗಿದುಹೋಗುತ್ತದೆ. ಹಿಂದಿ ಡಬ್ಬಿಂಗ್ನ ಈ ಟ್ರೆಂಡ್ ಚಿತ್ರಗಳ ಒಟ್ಟಾರೆ ಗುಣಮಟ್ಟದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದರೂ ಚಿತ್ರೋದ್ಯಮದ ವಹಿವಾಟಿನಲ್ಲಿ ದೊಡ್ಡ ಪಾತ್ರ ವಹಿಸುತ್ತಿರುವುದಂತೂ ಸುಳ್ಳಲ್ಲ.