ಅಭಿಯಾಗಿ ಅರಳಿದ ಅಂಬಿ ‘ಅಮರ’!

ಅಭಿಯಾಗಿ ಅರಳಿದ ಅಂಬಿ ‘ಅಮರ’!

ಅಂಬಿ ದೈಹಿಕವಾಗಿ ಕಣ್ಮರೆಯಾಗಿರಬಹುದು, ನಮ್ಮ ಅಂತರಂಗದಿಂದ ದೂರಾಗುವುದು ಅಷ್ಟು ಸುಲಭವಲ್ಲ. ಅಂಬಿಯ ವ್ಯಕ್ತಿತ್ವವೇ ಅಂಥದ್ದು. ಯಾಕೆಂದರೆ ಅಂಬಿಗೆ ಹೋಲಿಕೆಯೇ ಇಲ್ಲ. ಅಂಥ ವ್ಯಕ್ತಿತ್ವ ಇನ್ನೊಬ್ಬರಿಲ್ಲ. ವಿಷವಿಲ್ಲ, ಕಪಟತನವಿಲ್ಲ, ಆನೆ ನಡೆದದ್ದೇ ದಾರಿ ಎಂಬಂತೆ ಬದುಕಿದ ಸಾದಾಸೀದಾ ಮನುಷ್ಯ. ಇಂಥ ಅಂಬಿ ತಮ್ಮ ಕನಸಾದ ಅಭಿಷೇಕ್ ಅಭಿನಯಿಸಿರುವ ಅಮರ್ ಚಿತ್ರದಲ್ಲಿ ನಿಮಗೇ ಗೊತ್ತಿಲ್ಲದಂತೆ ಅಂತರಂಗವನ್ನು ಆವರಿಸಿಕೊಳ್ಳುವ ಬಗೆಯೇ ಅಚ್ಚರಿ ಉಂಟು ಮಾಡುತ್ತದೆ ಎನ್ನುತ್ತಾರೆ ಸ್ನೇಹಾ ನೀಲಪ್ಪಗೌಡ.

ಕಳೆದ ಒಂದೂವರೆ ವರ್ಷದಿಂದ ಅಂಬರೀಷ್ ಮಗ ನಟಿಸ್ತಿರೋ ಅಮರ್ ಸಿನಿಮಾದ ಬಗ್ಗೆ ಸಾಕಷ್ಟು ಮಾತುಗಳು ಆಗಿಂದಾಗ ಕೇಳಿ ಬರ್ತಿದ್ವು. ಅಮರ್ ಬರೀ ಸಿನಿಮಾ ಅಷ್ಟೇ ಆಗಿರಲಿಲ್ಲ  ರೆಬಲ್ ಸ್ಟಾರ್ ಅಂಬರೀಷ್ ಅವರ ಕನಸಾಗಿತ್ತು. ಮಗನನ್ನು ಸಿನಿಮಾ ಇಂಡಸ್ಟ್ರಿಗೆ ಪರಿಚಯಿಸಬೇಕು, ಅಭಿ ಒಳ್ಳೆಯ ನಟನಾಗಬೇಕು ಅನ್ನೋ ಮಹದಾಸೆ ಅಂಬರೀಷ್ ಅವರಿಗಿತ್ತು. ಇಂದು ಅಂಬರೀಷ್ ಸುಮಲತಾ ದಂಪತಿ ಕಂಡ ನನಸು ನನಸಾದ ದಿನ. ರಾಜ್ಯಾದ್ಯಂತ ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾ ತೆರೆಕಂಡಿದೆ.


ನಟನೆಯಲ್ಲಿ ಆಸಕ್ತಿಯೇ ಇಲ್ಲದ ಮಗನನ್ನು ನಟನಾಗಿಸಬೇಕು ಅನ್ನೋ ಸಾಹಸಕ್ಕೆ ಬಿದ್ದಿದ್ದ ಅಂಬರೀಷ್ ಅವ್ರು ಇವತ್ತು ಇದ್ದಿದ್ರೆ ಚೆನ್ನಾಗಿರ್ತಿತ್ತು. ಯಾಕಂದ್ರೆ ತೆರೆ ಮೇಲೆ ತಮ್ಮನ್ನೇ ನಾವು ನೋಡಿಕೊಂಡಂತೆ ಭಾಸವಾಗ್ತಿತ್ತೆನೋ. ೨೦ ಕಥೆಗಳಿಗೂ ಅಧಿಕ ಕಥೆಯನ್ನು ಕೇಳಿದ್ದ ಅಂಬಿ ಕೊನೆಗೊಂದು ದಿನ ನಿರ್ದೇಶಕ ನಾಗಶೇಖರ್ ಕಥೆಯನ್ನು ಓಕೆ ಮಾಡಿ ಮಗನನ್ನು ಅಭಿನಯಕ್ಕೆ ತೊಡಗಿಸಿದ್ರು. ಅಂಬರೀಷ್ ಅವ್ರು ತೀರಿಹೋಗೋ ಮೊದಲು ಸಿನಿಮಾ ಅರ್ಧಭಾಗವಷ್ಟೇ ಶೂಟಿಂಗ್ ಮುಗಿದಿತ್ತು. ಅದಷ್ಟೇ ದೃಶ್ಯಗಳನ್ನು ನೋಡಿ, ಅಭಿಗೆ ಬದುಕ್ಕತಿಯಾ ಬಿಡ್ಳಾ ಅಂದಿದ್ರಂತೆ. ಇವತ್ತು ಅಮರ್ ಸಿನಿಮಾ ನೋಡಿದಾಗ ನನಗನಿಸಿದ್ದು ಅದೇ.


ಅಂಬಿ ಮೇಲಿನ ಗೌರವವದಿಂದಲೋ, ಸುಮಲತಾ ಮೇಲಿನ ಅಭಿಮಾನದಿಂದಲೋ ಇಂದು ಅಭಿಷೇಕ್ ಅಂಬರೀಷ್ ನಟನೆಯ ಅಮರ್ ಸಿನಿಮಾ ನೋಡಲು ಜನಸಾಗರವೇ ಹರಿದುಬಂದಿತ್ತು. ರೋಡ್‌ ನಲ್ಲಿ ಅಭಿಷೇಕ್ ಕಾರ್ ಬರ್ತಿದ್ದಂತೆಯೇ ಅಭಿಮಾನಿಗಳು ಕಾರಿನಿಂದ ಕೆಳಕ್ಕಿಳಿಯಲು ಬಿಡದಂತೆ ಮುತ್ತಿಗೆ ಹಾಕಿದ್ರು. ಪಟಾಕಿ ಸದ್ದು, ಅಂಬಿ ನಟನೆಯ ಸಿನಿಮಾ ಹಾಡುಗಳು ಥಿಯೇಟರ್ ಮುಂಭಾಗದಲ್ಲಿ ಪ್ರತಿಧ್ವನಿಸುತಿದ್ವು. ಸಿನಿಮಾ ಆರಂಭ ಯಾವರೀತಿ ಆಯ್ತು ಅನ್ನೋದನ್ನು ನೋಡೋಕಾಗದಂತೆ ಬರೀ ಶಿಳ್ಳೆ ಚಪ್ಪಾಳೆಗಳೇ ಥಿಯೇಟರ್‌ ನಲ್ಲಿ ಕೇಳಿಬರ್ತಿತ್ತು.


ಅಮರ್ (ನಾಥ್), ಅಂಬರೀಷ್ ಅವರ ಪೂರ್ವ ಹೆಸರು. ಸದ್ಯ ನಾಗಶೇಖರ್ ನಿರ್ದೇಶನದ ಚಿತ್ರ. ಚಿತ್ರಮಂದಿರದಲ್ಲಿ ಸಿನಿಮಾ ಆರಂಭ ಆಯ್ತು ಕಿಕ್ಕಿರಿದ ಜನಸಂದಣಿಯಲ್ಲಿ ಸೀಟ್ ಗಿಟ್ಟಿಸಿಕೊಳ್ಳೋದೆ ಬಹುದೊಡ್ಡ ಸವಾಲಾಗಿತ್ತು. ಸಿನಿಮಾ ತೆರೆ ಮೇಲೆ ಮೂಡಿಯೇ ಬಿಡ್ತು. ಒಂದರೆಕ್ಷಣ ಅಂಬರೀಷ್ ಅವ್ರಿಂದಲೇ ವಾಯ್ಸ್ ಡಬ್ ಮಾಡಿಸಿದ್ರಾ ನಿರ್ದೇಶಕರೇನಾದ್ರೂ ಅನಿಸಿದ್ದು ಸುಳ್ಳಲ್ಲ. ಅಭಿಯ ನಡೆ-ನುಡಿ ಹಾವ-ಭಾವ ಪ್ರತಿಯೊಂದು ಥೇಟ್ ಅಂಬಿಯನ್ನೇ ಹೋಲುವಂತಿತ್ತು. ಒಂದು ಪ್ರೇಮಕಥೆಯಲ್ಲಿ ತಿಳಿಸಿಕೊಡಬಹುದಾದ ಸಾಕಷ್ಟು ಜೀವನದ ಮೌಲ್ಯಗಳು ಅಮರ್ ಸಿನಿಮಾದಲ್ಲಿತ್ತು. ನಿರ್ದೇಶಕರು ಅಭಿಯವರನ್ನೇ ಮನದಲ್ಲಿಟ್ಟುಕೊಂಡು ಕಥೆ ಬರೆದಿದ್ರೆನೋ ಅನ್ಸುತ್ತೆ.


ನಟ, ನಿರ್ದೇಶಕ, ನಿರ್ಮಾಪಕರ ಮಕ್ಕಳು ಸಿನಿಮಾ ಇಂಡಸ್ಟ್ರಿಗೆ ಬಂದು ಸಿನಿಮಾ ಮಾಡೋದೇನು ದೊಡ್ಡ ವಿಚಾರ ಅಲ್ಲ. ಫ್ಯಾಮಿಲಿ ಸಪೋರ್ಟ್ ನಿಂದ ಸಿನಿಮಾ ಮಾಡಿ ಗೆದ್ದವರು ಇದ್ದಾರೆ ಹಾಗೆಯೇ ಸೋತವರು ಕೂಡ. ಆದ್ರೆ ಯಾವ ಸಿನಿಮಾ ಗೆಲ್ಲಿಸಬೇಕು ಅನ್ನೋದು ಅಭಿಮಾನಿಗಳ ಮನಸ್ಸಿನಲ್ಲಿರತ್ತೆ. ಮೊದಲ ದಿನದ ಅಭಿಮಾನಿಗಳ ಪ್ರತಿಕ್ರಿಯೆ ನೋಡಿದ್ರೆ ಅಮರ್ ಸಿನಿಮಾ ಗೆಲ್ಲುವಲ್ಲಿ ಯಾವುದೇ ಅನುಮಾನ ಇಲ್ಲ. ಪ್ರೇಮಕಥೆಯಿರೋ ಸಿನಿಮಾಗಳನ್ನೇ ಮಾಡಿ ಗೆದ್ದಿರೋ ನಾಗಶೇಖರ್ ಅಮರ್ ಸಿನಿಮಾದ ನಿರ್ದೇಶಕರು. ಅಂಬಿಯ ಐವತ್ತು ವರ್ಷಗಳ ಸ್ನೇಹಿತ ಸಂದೇಶ್ ನಾಗರಾಜ್ ಪುತ್ರ ಅಮರ್ ಸಿನಿಮಾದ ನಿರ್ಮಾಪಕರು.


ಒಂದು ಪ್ರೇಮಕಥೆಯ ಮೇಲೆ ಸಾಗುವ ಚಿತ್ರ ಅಮರ್. ಅಮರ್ ಹಾಗೂ ಬಾಬಿ ಕಾಲೇಜು ದಿನಗಳಲ್ಲಿ ಒಬ್ಬರನೊಬ್ಬರು ತುಂಬಾ ಪ್ರೀತಿಸ್ತಾರೆ. ಅಮರ್ ಕೊಟ್ಟ ಮಾತಿಗೆ ಯಾವತ್ತು ಕೂಡ ತಪ್ಪುವವನಲ್ಲ. ಬಾಬಿ ಹುಟ್ಟಿನಿಂದಲೇ ಆಗರ್ಭ ಶ್ರೀಮಂತೆ. ಆಕೆಗೆ ಮಳೆಯಲ್ಲಿ ನೆನೆಯೋದಂದ್ರೆ ತುಂಬಾ ಇಷ್ಟ. ಪರಿಸರ ಜಾಗೃತಿ ಹಾಗೂ ಗಿಡ ನೆಡುವ ರ್ಯಾಲಿಯಲ್ಲಿ ಅಮರ್ ಹಾಗೂ ಬಾಬಿಗೆ ಪ್ರೀತಿಯಾಗತ್ತೆ. ಆರಂಭದಲ್ಲಿ ಬಾಬಿ ತನಗೆ ಕ್ಯಾನ್ಸರ್ ಇದೆ ಅಂಥ ಹೇಳಿ, ಅಮರ್ ಗೆ ತನ್ನ ಹಿಂದೆ ಬಾರದಂತೆ ಎಚ್ಚರಿಸಿರ್ತಾಳೆ. ಆದ್ರೆ ಕ್ರಮೇಣ ಒಂದಿಷ್ಟು ಟ್ವಿಸ್ಟ್ ಬಂದು ಅಮರ್ ಹಾಗೂ ಬಾಬಿ ಎಂಗೇಜ್ ಮೆಂಟ್ ಹಂತಕ್ಕೆ ತಲುಪ್ತಾರೆ. ಶ್ರೀಮಂತ ಕುಟುಂಬದಲ್ಲಿ ಬೆಳೆದ ಬಾಬಿಯನ್ನು ಶ್ರೀಮಂತ ಹುಡುಗನಿಗೆ ಮದುವೆ ಮಾಡಬೇಕು ಅಂಥ ಬಾಬಿ ತಂದೆ ನಿಶ್ಚಿತಾರ್ಥ ಫಿಕ್ಸ್ ಮಾಡ್ತಾರೆ. ಈ ವಿಚಾರವನ್ನು ಬಾಬಿ ಅಮರ್ ಗೆ ಹೇಳಿ ನಾವಿಬ್ರು ದೂರ ಓಡಿಹೋಗೋಣ ಅಂತಾಳೆ. ಆದ್ರೆ ಅಮರ್ ನಾನು ಹಾಗ್ ಮಾಡಲ್ಲ. ಅದೇ ದಿನ ನಾನೇ ನಿನ್ ಕೈಗೆ ಉಂಗುರ ತೊಡಿಸೋದು ಅಂಥ ಬಾಬಿಗೆ ಮಾತು ಕೊಡ್ತಾನೆ. ಅಮರ್ ಎಂಗೇಜ್‌ ಮೆಂಟ್ ಗೂ ಬರ್ತಾನೆ . ಆದ್ರೆ ರಿಂಗ್ ಬದಲಾಯಿಸೋ ಸಮಯದಲ್ಲಿ ಅಲ್ಲಿರಲ್ಲ. ಬಾಬಿ ಅಮರ್ ನನ್ನು ಹುಡುಕಿಕೊಂಡು ಬಂದು ನೀನ್ ನನಗೆ ಮಾತು ಕೊಟ್ಟಿದ್ದು ನೆನಪಿದೆ ಅಲ್ವಾ. ಬಾ ಹೋಗೋಣ ಅಂದ್ರೆ ಅಮರ್ ತನ್ನ ವರಸೆ ಬದಲಾಯಿಸ್ತಾನೆ. ನಾನು ನಿನ್ನನ್ನು ಪ್ರೀತಿಸಿದ್ದೇ ನಿನ್ನ ಆಸ್ತಿ, ಸಂಪತ್ತಿಗೋಸ್ಕರ, ನಿನ್ನ ಮುಖ ನೋಡಿದ್ರು ನನಗೆ ಅಸಹ್ಯ ಆಗತ್ತೆ ಅಂತ  ಬಾಬಿಯನ್ನು ನಿರಾಕರಿಸ್ತಾನೆ. ಆದ್ರೆ ಇದಾದ ಐದು ವರ್ಷದ ಬಳಿಕ ಮತ್ತೆ ಬಾಬಿ ಫೋಟೋ ನೋಡಿ ಅಮರ್ ಆಕೆಯನ್ನು ಹುಡಕಿಕೊಂಡು ಹೋಗ್ತಾನೆ. ಅಲ್ಲಿ ಏನೆಲ್ಲಾ ಆಗತ್ತೆ..? ಇಷ್ಟಕ್ಕೂ ಬಾಬಿಯನ್ನು ಅಮರ್ ನಿರಾಕರಿಸೋಕೆ ನಿಜವಾದ ಕಾರಣವೇನು.. ಅನ್ನೋದನ್ನು ನೀವು ಸಿನಿಮಾ ನೋಡಿಯೇ ತಿಳ್ಕೋಬೇಕು.


ಅಮರ್ ಸಿನಿಮಾ ಬರೀ ಕಮರ್ಷಿಯಲ್ ಸಿನಿಮಾ ಅಂಥ ಅನಿಸೋದೆ ಇಲ್ಲ. ಬದಲಾಗಿ ಸಾಕಷ್ಟು ಸಂದೇಶಗಳು ಈ ಸಿನಿಮಾದಲ್ಲಿವೆ. ಮರಗಿಡಗಳ ಸಂರಕ್ಷಣೆ , ಕೊಟ್ಟ ಮಾತನ್ನು ಉಳಿಸಿಕೊಳ್ಳೋ ನಾಯಕ, ಶ್ರೀಮಂತಿಕೆ ಇದ್ದರೂ ತೋರ್ಪಡಿಸದ ನಾಯಕಿ, ಮಕ್ಕಳ ಮೇಲಿರೋ ಪ್ರೀತಿ ಕಾಳಜಿ ಈ ಎಲ್ಲಾ ಅಂಶಗಳು ಸಿನಿಮಾದಲ್ಲಿ ಕಾಣಸಿಗ್ತಿತ್ತು. ಅಮರ್ ಪಾತ್ರದಲ್ಲಿ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಹಾಗೂ ಬಾಬಿಯ ಪಾತ್ರದಲ್ಲಿ ತಾನ್ಯಾ ಹೋಪ್‌ ಕಾಣಿಸಿಕೊಂಡಿದ್ದಾರೆ. ಅಭಿಯ ಮ್ಯಾನರಿಸಂ ಅಂಬರೀಷ್ ಅವರನ್ನೇ ಹೋಲುವಂತಿತ್ತು. ಪ್ರತಿ ಡೈಲಾಗ್‌ ಡೆಲಿವರಿಯಲ್ಲೂ,ವಾಕಿಂಗ್‌ ಸ್ಟೈಲ್‌ ನಲ್ಲೂ ಅಂಬರೀಷ್‌ ಅವ್ರನ್ನೇ ನೋಡ್ತಿದ್ದೀವಿ ಅನಿಸ್ತಿತ್ತು. ನೋ ವೇ ಚಾನ್ಸೇ ಇಲ್ಲ ಅನ್ನೋ ಡೈಲಾಗ್‌ ಹೇಳಿದಾಗಲೆಲ್ಲಾ ಜನ ಶಿಳ್ಳೆ ಚಪ್ಪಾಳೆಗಳಿಂದ ಸಂಭ್ರಮಿಸ್ತಿದ್ರು. ಇನ್ನು ತಾನ್ಯಾ ಹೋಪ್ ಕೂಡ ಉತ್ತಮ ನಟನೆ ಮ್ಯಾನರಿಸಂನಿಂದ ಗಮನ ಸೆಳೀತಾರೆ. ಸಿನಿಮಾದಲ್ಲಿರೊ ಬೈಕ್ ರೈಡಿಂಗ್ ದೃಶ್ಯಗಳಲ್ಲಿ ತಾನ್ಯಾ ತುಂಬಾನೇ ಸ್ಟೈಲೀಶ್ ಆಗಿ ಮಿಂಚಿದ್ದಾರೆ. ಚಾಲೆಂಜಿಂಗ್ ದರ್ಶನ್ ಕೂಡ ಸಿನಿಮಾದ ಮೂರು ದೃಶ್ಯಗಳಲ್ಲಿ ಪ್ರೇಕ್ಷಕರ ಎದುರಾಗ್ತಾರೆ. ‘ಅಮರ್ ನೀನ್ಯಾವತ್ತೂ ಸೋಲಬಾರದು ನಿನ್ನೊಂದಿಗೆ ಎಂದಿಗೂ ನಾನಿರ್ತೀನಿ’ ಅನ್ನೋ ಡೈಲಾಗ್ ನಿಜ ಜೀವನಕ್ಕೆ ತಾಳೆಯಾಗುವಂತಿತ್ತು. ಇನ್ನು ಅಭಿಷೇಕ್ ಅಪ್ಪ-ಅಮ್ಮನ ಪಾತ್ರದಲ್ಲಿ ದೀಪಕ್ ಶೆಟ್ಟಿ ಸುಧಾರಾಣಿ, ಮಾವನ ಪಾತ್ರದಲ್ಲಿ ಸಾಧುಕೋಕಿಲ, ಸ್ನೆಹಿತನಾಗಿ ಚಿಕ್ಕಣ್ಣ, ನಾಯಿ ಚಂದ್ರು, ತಾನ್ಯಾ ಅಪ್ಪನ ಪಾತ್ರದಲ್ಲಿ ದೇವರಾಜ್ ಹಾಗೂ ಸಂಬಂಧಿ ಪಾತ್ರದಲ್ಲಿ ಅರುಣ್ ಸಾಗರ್, ಕಾಣಿಸಿಕೊಂಡಿದ್ದಾರೆ.  ಸಾಧುಕೋಕಿಲ ಹಾಗೂ ಚಿಕ್ಕಣ್ಣ ಕಾಮಿಡಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ನಗುತರತ್ತೆ. ಸಾಧುಕೋಕಿಲ ಅವರು ಅದೆಷ್ಟೇ ಸಿನಿಮಾ ಮಾಡಿದ್ರು ೧೦೦ ಪರ್ಸೆಂಟ್ ಜೋಷ್, ಪೋಲಿತನ ಅವರ ಪಾತ್ರದಲ್ಲಿ ಇದ್ದೇ ಇರತ್ತೆ. ಚಿಕ್ಕಣ್ಣ ಕೂಡ ಎಂದಿನಂತೆಯೇ ಹಾಸ್ಯಮಯ ಪಾತ್ರಗಳಿಗೆ ಒಗ್ಗಿಕೊಂಡಿದ್ದಾರೆ.


ದರ್ಶನ್, ನಿರೂಪ್ ಭಂಡಾರಿ, ಅಭಿಷೇಕ್, ತಾನ್ಯಾ, ರಚಿತಾ ರಾಮ್, ದೇವರಾಜ್, ಅರುಣ್ ಸಾಗರ್, ಅರ್ಜುನ್ ಜನ್ಯಾ ಸ್ಟೆಪ್ ಹಾಕಿರೋ ಜೋರುಪಾಟು ಸಾಂಗ್ ಇಷ್ಟವಾಗತ್ತೆ. ಜೋರುಪಾಟು ಹಾಡಿನಲ್ಲಿಯೇ ಅಂಬಿಯ ಒಲವಿನ ಉಡುಗೊರೆ ಕೊಡಲೇನು… ಹಾಡನ್ನು ನಿರ್ದೇಶಕರು ಅಭಿಯ ಮೂಲಕ ಮತ್ತೆ ಕಟ್ಟಿಕೊಟ್ಟಿದ್ದಾರೆ. ಕೀ ಬೋರ್ಡ್ ನುಡಿಸುತ್ತಾ ಅಭಿ ಹಾಡೋ ರೀತಿ, ನಾಯಕಿಯಾಗಿ ಗಿಟಾರ್ ಬಾರಿಸುತ್ತಾ ಒಲವಿನ ಉಡುಗೊರೆ ಕೊಡಲೇನು ಹಾಡನ್ನು ಹೇಳ್ತಾ ಅಭಿನಯಿಸಿರೋ ರೀತಿ ಹಿತವಾಗಿದೆ. ಖಾಲಿ ಖಾಲಿ, ಮರೆತು ಹೋಯಿತೆ, ಸುಮ್ಮನೆ ಹೀಗೆ ನಿನ್ನನೇ ಹಾಡುಗಳೂ ತುಂಬಾನೆ ಸೊಗಸಾಗಿ ಮೂಡಿಬಂದಿವೆ. ಅಮರ್ ಸಿನಿಮಾ ಯಶಸ್ಸು ಕಾಣುವಲ್ಲಿ ಅರ್ಜುನ್ ಜನ್ಯಾರ ಮ್ಯೂಸಿಕ್ ಪಾತ್ರ ಬಹಳ ಇದೆ. ಇನ್ನು ಸಿನಿಮಾದ ಸಿನಿಮ್ಯಾಟೋಗ್ರಾಫಿ ತುಂಬಾನೆ ರಿಚ್ ಆಗಿದೆ. ಶೂಟಿಂಗ್ ಮಾಡಿರೋ ಒಂದೊಂದು ಲೊಕೇಷನ್ ಕೂಡ ಅತ್ಯದ್ಭುತವಾಗಿದೆ. ಸಿನಿಮಾದ ದೃಶ್ಯಗಳನ್ನು ಬೋಟ್‌ ನೊಳಗೆ, ಸಮುದ್ರದ ಮಧ್ಯೆ, ವಿದೇಶದಲ್ಲೂ ಶೂಟ್ ಮಾಡಲಾಗಿದೆ.  ಕ್ಯಾಮೆರಾ ಕೈಚಳಕ ಅಮರ್ ಸಿನಿಮಾದಲ್ಲಿ ಬಹಳಷ್ಟು ಮೋಡಿ ಮಾಡಿದೆ. ಯಾವುದೇ ನಟರ ಮೊದಲ ಸಿನಿಮಾ ಅಂದ್ರೆ ಅಲ್ಲಿ ನಿರೀಕ್ಷೆಗಳ ಸಾಕಷ್ಟಿರತ್ತೆ. ಸಿನಿಮಾ ನಿರ್ದೇಶಿಸುವವನ ಮೇಲೆ ಬಹುದೊಡ್ಡ ಸವಾಲಿರತ್ತೆ. ಪ್ರತಿಯೊಂದು ಪ್ರೇಮ್‌ ನಲ್ಲೂ ಹೊಸಬರನ್ನು ಆತ ತಿದ್ದಿ-ತೀಡೋ ಕೆಲಸ ಬಹಳ ಇರತ್ತೆ. ಆ ಕೆಲಸವನ್ನು ನಿರ್ದೇಶಕ ನಾಗಶೇಖರ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಿರ್ಮಾಪಕರ ಸಹಕಾರ ಕೂಡ ಸಿನಿಮಾದ ಅದ್ಧೂರಿತನದಲ್ಲಿ ಎದ್ದುಕಾಣಿಸತ್ತೆ.


ಇನ್ನೇನು ಸಿನಿಮಾ ಮುಗೀತು ಎದ್ದು ಬರೋಣ ಅಂಥ ಜನ ಸೀಟ್ ನಿಂದ ಮೇಲೆದ್ರು. ಆಗ ಅಂಬರೀಷ್ ಅವರ ಅಂತಿಮ ದರ್ಶನದ ತುಣುಕು ತೆರೆ ಮೇಲೆ ಪ್ರಸಾರವಾಯ್ತು. ಗಂಡನನ್ನು ಕಳೆದುಕೊಂಡು ಕಣ್ಣೀರಿಡ್ತಿದ್ದ ಸುಮಲತಾ ಅಂಬರೀಷ್ ಕಾಣಿಸಿದ್ರು. ಅಯ್ಯೋ ಈ ಸಂದರ್ಭದಲ್ಲಿ ಈ ವಿಡಿಯೋ ಯಾಕೆ ಅಂದುಕೊಳ್ಳುತ್ತಿರುವಾಗ್ಲೇ ಒಂದು ಹಿನ್ನೆಲೆ ದ್ವನಿ ಕೇಳಿಸ್ತು. ಅಂಬರೀಷ್ ಅಭಿನಯದ ಕೊನೆಯ ಸೀನ್ ಇದು ಅಂತ ಒಲವಿನ ಉಡುಗೊರೆ ಕೊಡಲೇನು ಅನ್ನೋ ಹಾಡಿಗೆ ಕೀ ಬೋರ್ಡ್ ನುಡಿಸ್ತಿದ್ದ ಅಂಬಿ ಅಭಿನಯದ ದೃಶ್ಯಗಳು ನಮ್ಮ ಮುಂದೆ ಬಂತು. ಕೊನೆಯ ಬಾರಿ ಜಲೀಲ ಅಭಿನಯಿಸಿದ ದೃಶ್ಯ ನೋಡಿದ್ವಿ ಅನ್ನೋ ಖುಷಿಯಲ್ಲೂ ಅಂಬಿಯಿಲ್ಲ ಅನ್ನೋ ದುಃಖ ಕಣ್ಣಂಚಿನಲ್ಲಿ ನೀರು ತರಿಸಿತು.


ಅಲ್ಲಿಗೆ ಅಭಿಷೇಕ್ ಸಿನಿಮಾ ಜತೆ ಅಂಬಿಯ ಅಭಿನಯದ ದೃಶ್ಯವನ್ನು ನೋಡೋ ಭಾಗ್ಯ ಸಿಗಲಿದೆ. ಸ್ಯಾಂಡಲ್‌ ವುಡ್‌ ನಲ್ಲಿ, ಅಭಿಮಾನಿಗಳ ಮನಸ್ಸಿನಲ್ಲಿ ಜಲೀಲ ಎಂದೂ ಮರೆಯಾಗೋಲ್ಲ ಅನ್ನೋದು ಖಾತ್ರಿಯಾಯ್ತು. ಯಾಕಂದ್ರೆ ಮಗನೊಳಗೆಯೇ ನೆಲೆಯೂರಿದ್ದಾರೆ ಅಂಬರೀಷ್ ಎಂಬ ದಿಗ್ಗಜ. ಅಮರ್‌ನಲ್ಲಿ ಅಂಬಿ ನಮ್ಮ ಅಂತರಂಗವನ್ನು ಗೊತ್ತಿಲ್ಲದಂತೆಯೇ ಆವರಿಸಿಕೊಳ್ಳುವ ಬಗೆಯೇ ಅಚ್ಚರಿ ಉಂಟುಮಾಡುತ್ತದೆ.