ಅನ್ನ ಕೊಟ್ಟ ಮನೆಗೆ ದ್ರೋಹ ಬಗೆದರಾ ಅತೃಪ್ತರು ? 

ಅನ್ನ ಕೊಟ್ಟ ಮನೆಗೆ ದ್ರೋಹ ಬಗೆದರಾ ಅತೃಪ್ತರು ? 

ಮುಂದಿನ ದಿನಗಳಲ್ಲಿ ಸರ್ಕಾರ ರಚನೆ ನಂತರ ಯಾರಿಗೆ ತೃಪ್ತಿ, ಯಾರಿಗೆ ಅತೃಪ್ತಿ ಅಂತ ಗೊತ್ತಿಲ್ಲ. ಕೆಲವರಿಗೆ ಕುರ್ಚಿ ಎಂಬ ತೃಪ್ತಿ. ಈಗಿನ ವಿರೋಧ ಪಕ್ಷದವರ ಪ್ರಕಾರ ಕೆಲವರಿಗೆ ಹಣದ ತೃಪ್ತಿ. ಈ ಮಧ್ಯೆ ಪ್ರಧಾನಿ ಮೋದಿ ಭಯದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸೇರಿದಂತೆ ಯಾವೊಬ್ಬ ನಾಯಕರು ತುಟಿಕ್ ಪಿಟಿಕ್ ಎನ್ನಲಿಲ್ಲ. ಒಂದೊಮ್ಮೆ ಸರ್ಕಾರ ರಚನೆಯ ಹಂತಕ್ಕೆ ಬಂದರೂ, ಯಾರಿಗೆ ಯಾವ ಸ್ಥಾನ ಎಂಬುವುದು ಮೋದಿ YES ಎಂದ ಮೇಲೆ ಗೊತ್ತಾಗುತ್ತೆ.

ಏಕೆಂದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ಶಿಫಾರಸ್ಸು ಮಾಡಿದ ಬಹುತೇಕರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಆಗಲೇ ಬಿಜೆಪಿಯಲ್ಲಿ ಒಂದಷ್ಟು ಗೊಂದಲ ಉಂಟಾಗಿತ್ತು.ಹೀಗಾಗಿ ಈಗ ಸಿಕ್ಕಿರುವ ಆಡಳಿತ ಎಂಬ ಮಾಂಗಲ್ಯ ಸೂತ್ರ ಕಳೆದುಕೊಳ್ಳದ ರೀತಿಯಲ್ಲಿ, ನಿರ್ವಹಿಸಲು ಮೋದಿ ಸೂಚನೆ ನೀಡಬಹುದು.

ಈ ಮಧ್ಯೆ ಯಾವುದೇ ಕಾರಣಕ್ಕೂ ಅತೃಪ್ತರನ್ನ ಮತ್ತೆ ನಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಸಿದ್ದರಾಮಯ್ಯ ಕಡ್ಡಿಮುರಿದಂತೆ ಹೇಳಿದ್ದಾರೆ. ಇದು ಕೆಲವರಿಗೆ ಬರೆ ಎಳೆದಂತೆ ಆಗಿದೆ‌. ಈಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನ ಆಗಿರುವುದರಿಂದ, ಅತೃಪ್ತರು ಕೂಡ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಹೂ ‌ಕೂಡುವುದರಲ್ಲಿ ಹೂವಿನ ಎಸಳು ನಮ್ಮದು ಎಂದು ತಿಳಿದಿದ್ದಾರೆ.

ಈ ಅತೃಪ್ತರು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಸರ್ಕಾರದಲ್ಲೂ ತೃಪ್ತಿಗೊಳ್ತಾರೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಆದರೆ ನಮ್ಮ ಕ್ಷೇತ್ರದ ಕೆಲಸ ಆಗುತ್ತಿಲ್ಲ, ರೇವಣ್ಣ ಸಿಗುತ್ತಿಲ್ಲ, ಕುಮಾರಸ್ವಾಮಿ ಕೇಳಿಸಿಕೊಳ್ಳುತ್ತಿಲ್ಲ ಎಂದು ಅತೃಪ್ತರು ಬೊಬ್ಬೆ ಹೊಡೆದಿದ್ದರು. ಆದರೆ ಈಗ  ಈ ಮಹಾನ್ ನಾಯಕರ ಕ್ಷೇತ್ರಗಳಿಗೆ ಕೊಟ್ಟಿರುವ ಅನುದಾನಗಳ ಬಗ್ಗೆ ಸದನದಲ್ಲಿ ಕುಮಾರಸ್ವಾಮಿ ಬಹಿರಂಗ ಪಡಿಸಿದ್ದಾರೆ. ಆದರೆ ಈಗ ಅತೃಪ್ತರ ಇಷ್ಟವೇ ಬೇರೆಯಾಗಿತ್ತು ಎಂಬ ಸಂಶಯ ಎಲ್ಲರಲ್ಲೂ ಮನೆಮಾಡಿದೆ.  

ಸರ್ಕಾರ ಪತನವಾದ ನಂತರ  ಕೆಲವು ಮಾಧ್ಯಮಗಳು ಕುಮಾರಸ್ವಾಮಿಯನ್ನ ಹಗುರವಾಗಿ ಹೊಗಳುತ್ತಿವೆ. ಅಂತಹ ಧೀಮಂತ ಪತ್ರಕರ್ತರೊಬ್ಬರ ಬಗ್ಗೆ ಸದನದಲ್ಲಿ ಪ್ರಸ್ತಾಪ ಕೂಡ ಆಗಿತ್ತು. ಈಗ ತೃಪ್ತಿ ಯಾರಿಗೋ, ಅತೃಪ್ತಿ ಯಾರಿಗೋ ಅನ್ನುವ ಪ್ರಶ್ನೆ ಬಂದಾಗ, ನಾನು ಇಂತವರಿಗೆ ಮತ ಹಾಕಿದೆನಲ್ಲ, ನನ್ನ  ನಿರ್ಧಾರ ಸರಿಯಾಗಿ ಇರಲಿಲ್ಲ, ಅನ್ನುವ ಸತ್ಯದ ಮಾತು ಮತದಾರನ ಎದೆ ಹೊಕ್ಕಿದೆ. ಒಂದಂತೂ ಸತ್ಯ ಮಂಗಳವಾರದ ಕೊನೆಯ ಅಧಿವೇಶನದಲ್ಲಿ ಮತದಾರರಿಗೆ ಒಂದು ಸಮಗ್ರ ಚಿತ್ರಣ ದೊರಕಿರುವುದಂತು ಸೂರ್ಯ ಚಂದ್ರ ಇರುವಷ್ಟೇ ಸತ್ಯ.   

                                                                    -ಅರವಿಂದಸಾಗರ