ಸಂತ್ರಸ್ತರ ಜತೆಯಲ್ಲೇ ಅತೃಪ್ತರ ಆರ್ತನಾದ : ನೆರೆಯಲ್ಲೂ ನಿಂತಿಲ್ಲ ಆಪರೇಷನ್ ಕಮಲ

ಸಂತ್ರಸ್ತರ ಜತೆಯಲ್ಲೇ ಅತೃಪ್ತರ ಆರ್ತನಾದ : ನೆರೆಯಲ್ಲೂ ನಿಂತಿಲ್ಲ ಆಪರೇಷನ್ ಕಮಲ

ರಾಜಕೀಯವನ್ನೇ ಉಸಿರಾಡುವವರಿಗೆ ಪ್ರವಾಹವಾಗಲೀ, ಬರ ಪರಿಸ್ಥಿತಿಯಾಗಲೀ ಅಷ್ಟಾಗಿ ಕಾಡುವುದಿಲ್ಲ. ಜನಪರವಾಗಿರುವ ರಾಜಕಾರಣಿಗಳು ಮಾತ್ರ ಈ ಬಗ್ಗೆ ಚಿಂತಿಸುತ್ತಾರೆ. ಇನ್ನು ಯಡಿಯೂರಪ್ಪ ಬೇರೆ ರೀತಿಯಲ್ಲಿ ಇರುವುದು ಸಾಧ್ಯವೇ ಎಂದು ಜಿ.ಆರ್.ಸತ್ಯಲಿಂಗರಾಜು ಪ್ರಶ್ನಿಸಿದ್ದಾರೆ. 

ನೆರೆ ಸಂತ್ರಸ್ತರ ಮೊರೆ ಆಲಿಸುವ ಜತೆಜತೆಯಲ್ಲೇ ವಿಪಕ್ಷಗಳ ಅತೃಪ್ತರನ್ನ ಬಲೆಗೆ ಕೆಡವಿಕೊಳ್ಳುವ ಕಾರ್ಯವನ್ನೂ ಮುಖ್ಯಮಂತ್ರಿ ಸಾಂಗೋಪಾವಾಗಿ ನಡೆಸುತ್ತಿರುವುದು ಅಚ್ಚರಿಯ ಬೆಳವಣಿಗೆಯೇನಲ್ಲ.

ಈಗಾಗಲೇ ಅನರ್ಹಗೊಂಡು, ನ್ಯಾಯಾಲಯದ ಕದ ತಟ್ಟಿರುವ 17 ಮಂದಿಯ ಶಾಸಕತ್ವದ  ಕತೆ ಅಂತ್ಯವಿನ್ನೂ ನಿಗೂಢವಾಗಿದೆ. ಆದರೆ ಈ ಎಲ್ಲ ಅನರ್ಹರು ರಾಜಾರೋಷವಾಗಿಯೇ ಬಿಜೆಪಿಯವರ ಜತೆ ಠಳಾಯಿಸುತ್ತಿದ್ದರೂ, ಬಾಯಲ್ಲಿ ಮಾತ್ರ ನಮಗೂ  ಆ ಪಕ್ಷಕ್ಕೂ ಸಂಬಂಧವೇ ಇಲ್ಲ ಮಾತಿನ ಮಂಕುಬೂದಿ ಎರಚುತ್ತಲೇ ಇದ್ದು, ಇವರಿಗೆ ರಾಜಕೀಯ ಪುನರ್ವಸತಿ ಹೇಗೆಂಬುದಿನ್ನೂ ಅಂತಿಮಗೊಂಡಿಲ್ಲ. ಇದರ ನಡುವೆಯೇ ಮತ್ತೊಂದಿಷ್ಟು ಕಾಂಗ್ರೆಸ್ ಮತ್ತು ದಳದ ಶಾಸಕರು ಯಡಿಯೂರಪ್ಪ ಜತೆ ಸಖ್ಯ ಬೆಳೆಸುತ್ತಿದ್ದಾರೆ.

ದಳದ ಬಗ್ಗೆ ಮೊದಲಿಂದಲೂ ಅಸಮಾಧಾನ ಹೇಳಿಕೊಂಡರೂ, ಮಂತ್ರಿಗಿರಿಯನ್ನ ಎಗ್ಗಿಲ್ಲದೆ ಅನುಭವಿಸಿದ ಜಿ.ಟಿ.ದೇವೇಗೌಡ ಆ ಹುದ್ದೆ ಈಗ ಇಲ್ಲವಾದ್ದರಿಂದ, ಕಮಲ ಪಾಳಯದೆಡೆಗೆ ಚಿತ್ತವಿಟ್ಟಿದ್ದಾರೆ. ಯಾವತ್ತಿದ್ದರೂ ಪಕ್ಷ ಬಿಡುವವರು ಎಂಬ ಪಟ್ಟಿಯಲ್ಲಿರುವ ಇವರೀಗ ಮೈಸೂರು ಹಾಲು ಒಕ್ಕೂಟದ ಚುನಾವಣೆ ಬಗ್ಗೆ ಚರ್ಚಿಸಲು ಬಂದಿದ್ದೆ, ಹುಣಸೂರು ಮಳೆ ನೀರಲ್ಲಿ ತೋಯ್ದಿರುವ ಕುರಿತು ಮಾತಾಡಲು ಬಂದಿದ್ದೆ ಎಂಬಿತ್ಯಾದಿ ತಿಪ್ಪೆ ಸಾರಿಸುವ ಮಾತುಗಳನ್ನು ಹೇಳುತ್ತಿದ್ದಾರೆ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಬಿಜೆಪಿ ಪಡಸಾಲೆ ಪ್ರವೇಶಿಸುವ ನಿಶಾನೆಯನ್ನ ಇದು ತೋರಿಸುತ್ತಲಿದೆ.

ಎಚ್.ವಿಶ್ವನಾಥ್ ನೇತೃತ್ವದಲ್ಲೇ ಮತ್ತಷ್ಟು ಶಾಸಕರನ್ನ ಹೈಜಾಕ್ ಮಾಡುವಂಥದ್ದು ಒಳಗೊಳಗೆಯೇ ತೀವ್ರವಾಗಿ ನಡೆಯುತ್ತಿದೆ. ದಳದ ಭದ್ರಕೋಟೆ . ಮಂಡ್ಯ ಜಿಲ್ಲೆಯಲ್ಲೇ ಈಗ ಕೆ.ಆರ್.ಪೇಟೆ ನಾರಾಯಣಗೌಡ ಹೊರಬಂದಿದ್ದರೆ, ಮುಂದೆ ಮೇಲುಕೋಟೆಯ ಸಿ.ಎಸ್.ಪುಟ್ಟರಾಜು ಕೂಡ ಇದೇ ಮಾರ್ಗ ತುಳಿಯಲಿದ್ದಾರೆಂಬ ವದಂತಿಗಳಿವೆ.

ಕಾಂಗ್ರೆಸ್‍ನಿಂದಲೂ ರಾಜೀನಾಮೆ ನೀಡುವವರನ್ನ ಗುರುತಿಸಿಟ್ಟುಕೊಳ್ಳಲಾಗಿದ್ದು, ಏನೇ ಆಗಲಿ ಉಳಿದಿರುವ ಮೂರೂವರೆ ವರ್ಷ ಪೂರೈಸಲೇಬೇಕೆಂಬ ಹಠದಲ್ಲಿರುವ ಬಿಎಸ್‍ವೈಗೆ, ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ಅನ್ಯಪಕ್ಷದ ಗಿರಾಕಿಗಳ ಮೇಲೆ ಕಣ್ಣು ಹಾಕಿ ಕೂತಿರುವುದು ಸುಸ್ಪಷ್ಟ. ಅದಕ್ಕಾಗಿ ಕುಟಿಲೋಪಾಯಗಳು ನಡೆಯುತ್ತಲೇ ಇವೆ.

ಆದರಿಲ್ಲಿ, ಇದುವರೆಗೆ ಆಪರೇಷನ್‍ನಲ್ಲಿ ಭಾಗಿಯಾಗಿದ್ದವರು ಇವಾಗಿನ ಮತ್ತು ಮುಂದಿನ ಆಪರೇಷನ್‍ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಏಕೆಂದರೆ ಇಷ್ಟೊಂದು ಪ್ರಯತ್ನ ಮಾಡಿಯೂ ಮಂತ್ರಿಗಿರಿ ಸಿಕ್ಕಲ್ಲ, ಪಕ್ಷಾಂತರ ಮಾಡಿ ಬಂದವರಿಗೆ ಮಣೆ ಹಾಕುತ್ತಾ ಹೋದರೆ, ನಾವೇಕೆ ಶ್ರಮ ಪಡಬೇಕು ಎಂಬ ತಾತ್ಸಾರ ಪ್ರದರ್ಶಿಸುತ್ತಿದ್ದಾರೆ. ಸಂಪುಟ ರಚನೆಯಾದ ಬಳಿಕ  ಸ್ವಪಕ್ಷೀಯ ಅಸಮಾಧಾನಿತರ ಬೇಗೆ ಆಧರಿಸಿ, ಆಪರೇಷನ್ ಮುಂದುವರಿಕೆಯನ್ನೇ ಧಗಧಗನೆ ಉರಿಸಿಬಿಡುವಂಥ ಅಪಾಯವೂ ಇದ್ದೇ ಇದೆ. ಅದಕ್ಕಾಗಿಯೇ ಬಿಎಸ್‍ವೈ ಸಂಪುಟದಲ್ಲಿ ಅವಕಾಶ ಸಿಗದವರಿಗೆ ರಾಜಕೀಯ ಸಲಹೆಗಾರ, ರಾಜಕೀಯ ಕಾರ್ಯದರ್ಶಿ ಎಂಬಿತ್ಯಾದಿ ಹುದ್ದೆಗಳಿಗೆಲ್ಲ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಸಮಾಧಾನಗೈಯುವ ಯೋಜನೆ ಹಾಕಿಕೊಂಡಿದ್ದಾರೆ. ಇಂಥವುಗಳನ್ನ ಯಾರಿಗೆ ಕೊಡಬೇಕೆಂಬುದರ ಪಟ್ಟಿಯೂ ಸಜ್ಜಾಗಿದ್ದು, ಸದ್ಯಕ್ಕೆ ರಾಜಕೀಯ ಸಲಹೆಗಾರನಾಗಿ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ.

ಇನ್ನಷ್ಟು ಹುದ್ದೆ, ನಿಗಮ ಮಂಡಳಿಗಳ ನೇಮಕಾತಿಗಾಗಿ ಪಟ್ಟಿ ತಯಾರಾಗಿದ್ದು, ಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಬೇಸರಾದವರಿಗೆ ಇದನ್ನ ಕೊಡುವುದು ನಿಕ್ಕಿಯಾಗಿದೆ. ಇದನ್ನೆಷ್ಟು ಮಂದಿ ಮನ:ಪೂರ್ವಕವಾಗಿ ಒಪ್ಪುವರೋ ಎಂಬುದೇ ಅನುಮಾನ. ಹೀಗೆ ಅಸಮಾಧಾನಿತರು ಮತ್ತಷ್ಟು ಆಪರೇಷನ್‍ಗೆ ಕೈಜೋಡಿಸಲ್ಲ, ಬದಲಿಗೆ ಅಡ್ಡಗಾಲು ಹಾಕುತ್ತಾ ನಿಲ್ಲುತ್ತಾರೆ ಎಂಬ ಆತಂಕಗಳಿವೆ. ಆದರೂ ಭಂಡ ಧೈರ್ಯದಿಂದ ಯಡಿಯೂರಪ್ಪ ಖುದ್ದಾಗಿಯೇ ಅನ್ಯ ಪಕ್ಷದವರನ್ನ ಸೆಳೆಯಲು ನಿಂತಿದ್ದಾರೆ. ಇದಕ್ಕೀಗ ಅನರ್ಹಗೊಂಡಿರುವ ಶಾಸಕರೇ ಕೈಜೋಡಿಸುತ್ತಿರುವುದು ವಿಶೇಷ ಹೇಗೋ, ಅನರ್ಹರನ್ನೇ ಕಟ್ಟಿಕೊಂಡು ಇಂಥದ್ದನ್ನೆಲ್ಲ ಮಾಡುತ್ತಿರುವುದು ಬಿಜೆಪಿಯವರಲ್ಲಿಯೇ ಬೇಗುದಿ ಹೆಚ್ಚಿಸಿದೆ. ಇದು ಅನಿರೀಕ್ಷಿತ ಬೆಳವಣಿಗೆಗೂ ದಾರಿಯಾಗುವಂತಿದೆ ಮಾತ್ರವಲ್ಲ ಕೊನೆಗೆ `ಪ್ರಾರ್ಥಿಸಲು ಹೋದಾಗ ಗೋಪುರವೇ ತಲೆ ಮೇಲೆ ಕುಸಿಯಿತು' ಎಂಬ ಸ್ಥಿತಿ ತಂದಿಟ್ಟರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಅಗತ್ಯವಿಲ್ಲ.