ಈ  ಆತ್ಮಹತ್ಯೆಗೆ ಕಾರಣಗಳೇನು?

ಈ  ಆತ್ಮಹತ್ಯೆಗೆ ಕಾರಣಗಳೇನು?

ಕರ್ನಾಟಕದ ಸುಮಾರು ಐವತ್ತು ಸಾವಿರ ಮಂದಿ ಯುವಕರಿಗೆ ಉದ್ಯೋಗ ನೀಡಿ ಅಷ್ಟು ಕುಟುಂಬಗಳು ಒಂದು ಸುಸ್ಥಿರ ಬದುಕನ್ನು ಕಟ್ಟಿಕೊಳ್ಳುವಂತೆ ಮಾಡುವುದು ಸುಲಭದ ಕೆಲಸವಲ್ಲ. ಅಷ್ಟು ಜನರ ಮನೆಗಳ ದೀಪ ಹಚ್ಚಿದ್ದ ದೇಶ ವಿದೇಶದಲ್ಲಿ ಕಾಫಿ ಉದ್ಯಮಕ್ಕೆ ಹೊಸತನ ತಂದುಕೊಟ್ಟ ಕೀರ್ತಿ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರದ್ದು. ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದ ಸಂದರ್ಭವನ್ನು ಬಳಸಿಕೊಂಡು ಹೊಸ ತನಗಳಿಗೆ ಮತ್ತು ವಿಶ್ವ ಮಟ್ಟದಲ್ಲಿ ಸ್ಪರ್ಧೆಗೆ ಮೈವೊಡ್ಡಿದ ಸಿದ್ದಾರ್ಥ ಕರ್ನಾಟಕದ ಕಾಫಿ ಬೆಳೆ ಮತ್ತು ಉದ್ಯಮಕ್ಕೆ ಹೊಸ ಆಯಾಮವನ್ನೇ ತಂದುಕೊಟ್ಟವರು.

ಸಿದ್ದಾರ್ಥ ಅವರು “ಕೆಫೆ ಕಾಫಿ ಡೇ” ಆರಂಭಿಸುವ ಮುನ್ನ ಕಾಫಿ ಬೆಳೆಗಾರರು ಪ್ರತಿ ವರ್ಷವೂ ಕೇಂದ್ರ ಸರ್ಕಾರದ ಹಣಕಾಸು ಮತ್ತು ವಾಣಿಜ್ಯ ಸಚಿವಾಲಯಗಳ ಬಾಗಿಲು ತಟ್ಟುವುದು ನಿಂತಿರಲಿಲ್ಲ. ಸಕಾಲದಲ್ಲಿ ಮಳೆ ಬಾರದೆ ಬೆಳೆ ನಾಶದ ಅಂಚಿನಲ್ಲಿದ್ದಾಗ ಇಲ್ಲವೇ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಕುಸಿತವಾದಾಗ ಸಬ್ಸಿಡಿ ಬೇಡಿಕೆ ಮತ್ತು ಬ್ಯಾಂಕುಗಳಿಂದ ಕಡಿಮೆ ಬಡ್ಡಿ ಸಾಲದ ಮೊರೆ ಹೋಗುತ್ತಿದ್ದದ್ದು ಮಾಮೂಲಿ ಆಗಿತ್ತು. ಆದರೆ ಸಿದ್ದಾರ್ಥ ಅವರು ಕಾಫಿ ಡೇ ಉದ್ಯಮವನ್ನು ಒಂದು ಸರಣಿ ಹೋಟೆಲುಗಳಾಗಿ ದೇಶದಾದ್ಯಂತ ಮಾಡಿದ ಮೇಲೆ ಬೆಳೆಗಾರರಿಂದಲೇ ಸಾಕಷ್ಟು ಕಾಫಿ ಬೀಜವನ್ನು ಖರೀದಿಸುವ ಮೂಲಕ ಬೆಳೆಗಾರರ ಅರ್ಧ ಹೊರೆಯನ್ನು ಇಳಿಸಿದರು. ಅಲ್ಲಿಯವರೆಗೆ ಚಿಕ್ಕಮಗಳೂರು ಮತ್ತು ಕೊಡಗಿನ ಕಾಫಿ ಬೆಳೆಗಾರರ ಹೋರಾಟ ಕಾಫಿ ಮಂಡಳಿಯ ವಿರುದ್ಧ ನಿರಂತರವಾಗಿ ನಡೆಯುತ್ತಿತ್ತು. ಕಾಫಿ ಮಂಡಳಿಯ ಕೃಪೆಯಿಂದ ಕಾಫಿ ಉದ್ಯಮದ ವ್ಯವಹಾರ ನಡೆಯುವಂತಾಗಿತ್ತು.

ಕರ್ನಾಟಕದ ಕಾಫಿ ಬೆಳೆಗಾರರ ರಕ್ಷಣೆಗೆನ್ನುವಂತೆ ಕಾಣಿಸಿಕೊಂಡ ಸಿದ್ಧಾರ್ಥ ಹೊಸ ಆಶಾಕಿರಣವಾಗಿ ಉದಯಿಸಿದರು. ಅವರು ಕಾಫಿ ಕ್ಷೇತ್ರಕ್ಕೆ ಕಾಲಿಟ್ಟ ಮೇಲೆ ಅದು ಅಕ್ಷರಶಃ ನಿಜವೂ ಆಯಿತು. ಬೆಳೆಗಾರರೂ ಸಹ ಸ್ವಲ್ಪಮಟ್ಟಿಗೆ ನಿಟ್ಟಿಸಿರು ಬಿಟ್ಟರು. ಕಾಫಿ ಬೆಳೆ ಮತ್ತು ಮಾರಾಟ ಸುಗಮವಾಗಿ ನಡೆಯುವ ದಿನಗಳು ಆರಂಭವಾದವು.

ಈ ಬದಲಾವಣೆ ತಂದು ಕರ್ನಾಟಕದ ಕಾಫಿಯನ್ನು ದೇಶದಾದ್ಯಂತ ಮತ್ತು ಅದರ ಪ್ರಾಮುಖ್ಯವನ್ನು ವಿದೇಶಕ್ಕೂ ಹಬ್ಬಿಸಿದ ಅದನ್ನು ಒಂದು ದೊಡ್ಡ ಉದ್ದಿಮೆಯಾಗಿ ಮಾಡಿದ ಸಿದ್ದಾರ್ಥ ಅವರ ಅನಿರೀಕ್ಷಿತ ಆತ್ಮಹತ್ಯೆಯ ನೋವು ಈಗ ರಾಜ್ಯದ ಲಕ್ಷಾಂತರ ಮಂದಿಯ ದುಃಖ ಮಡುಗಟ್ಟುವಂತೆ ಮಾಡಿದೆ. ಕಾಫಿ ಉದ್ಯಮವಲ್ಲದೆ ಸಾಫ್ಟ್ ವೇರ್ ಉದ್ಯಮ ಹಾಗೂ ಇತರೆ ಕ್ಷೇತ್ರಗಳಿಗೂ ಕಾಲಿಟ್ಟಿದ್ದ ಸಿದ್ದಾರ್ಥ ಅವರು ಬೆಳೆದು ಬಂದ ಬದುಕಿನ ಹೆಜ್ಜೆಗಳನ್ನು ನೋಡಿದರೆ ಸುಸಂಸ್ಕೃತ, ಸಜ್ಜನ ಮತ್ತು ಹೊಸತನಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಿದ್ದ ಅಪ್ರತಿಮ ಪ್ರತಿಭಾವಂತ.

ಉದ್ಯಮಕ್ಕೆಂದೆ ಬರುವ ಯುವಜನರಿಗೆ ಆದರ್ಶಪ್ರಾಯವಾಗಿದ್ದ ಸಿದ್ದಾರ್ಥ ಏಕೆ ಆತ್ಮಹತ್ಯೆ ಮಾಡಿಕೊಂಡರು? ಅದಕ್ಕೆ ನಿಜವಾದ ಕಾರಣಗಳೇನು? ನೇರವಾಗಿ ಐವತ್ತು ಸಾವಿರ ಮಂದಿಯ ಮನೆಯ ದೀಪ ಹಚ್ಚಿದ ಅವರು ತಮ್ಮ ಮನೆಯ ದೀಪವನ್ನು ಆರಿಸಿಕೊಂಡಿದ್ದೇಕೆ ಎಂಬುದರ  ಸೂಕ್ತ ತನಿಖೆ ಆಗಬೇಕಿದೆ. ಉದ್ಯಮದಲ್ಲಿನ ಏಳು-ಬೀಳು ಕಾರಣ ಸಹಜ. ಆದರೆ ಅವರೇ ತಮ್ಮ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿರುವಂತೆ ಎರಡು ವರ್ಷಗಳ ಹಿಂದೆ ನಡೆದ ಆದಾಯ ತೆರಿಗೆ ದಾಳಿಯ ಹಿನ್ನೆಲೆಯಲ್ಲಿ ಮುಂದುವರಿದ “ಕಿರುಕುಳ”ವು ಅವರನ್ನು ಅಧೀರರನ್ನಾಗಿ ಮಾಡಿತ್ತು. ಆದರೆ ಈ ಸಮಸ್ಯೆಯನ್ನು  ಎದುರಿಸಲು ಅವರೇಕೆ ಅಸಮರ್ಥರಾದರು? ಆದಾಯ ತೆರಿಗೆ ಬಾಕಿ ಮತ್ತು ತಾವು ವಿವಿಧ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲ ಕೇವಲ 8000 ಕೋಟಿ. ಆದರೆ ಅವರ ಬಳಿ ಇದ್ದ ಆಸ್ತಿ-ಪಾಸ್ತಿಯೇ ಸಾಲಕ್ಕಿಂತ ಮೂರುಪಟ್ಟು ಇತ್ತಾದರೂ ಅದನ್ನು ಹೇಗಾದರೂ ಮಾಡಿ ಅಂದರೆ ಕೆಲವು ಆಸ್ತಿ ಪಾಸ್ತಿಯನ್ನು ಮಾರಾಟ ಮಾಡಿ ಋಣಮುಕ್ತರಾಗಬಹುದಿತ್ತು ಎಂದು ಸಹಜವಾಗಿಯೇ ಜನರು ಮಾತನಾಡಿಕೊಳ್ಳುತ್ತಾರೆ. ಆದರೆ ಅವರಿಗೆ ಅದು ಸಹಾ ಅಷ್ಟು ಸುಲಭವಾಗಿರಲಿಲ್ಲ ಎನ್ನುವುದು ಅವರ ಪತ್ರವನ್ನು ಓದಿದರೆ ಅರ್ಥವಾದೀತು.

ಇತ್ತ ಆದಾಯ ತೆರಿಗೆ ಇಲಾಖೆಯು, ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿಲ್ಲ. ಕೇವಲ ಆಡಳಿತ ಮತ್ತು ಕಾನೂನು ಕ್ರಮ” ಎಂದು ಸ್ಪಷ್ಟೀಕರಣ ನೀಡಿ ಕೈ ತೊಳೆದುಕೊಂಡಿದೆ. ಆದರೆ ಅಷ್ಟಕ್ಕೆ ಈ ಕಥೆ ಮುಗಿಯುವುದಿಲ್ಲ. ಸಿದ್ದಾರ್ಥ ಅವರ ಕಾಫಿ ವಹಿವಾಟು ವ್ಯವಹಾರದಲ್ಲಿ ಏನೇನು ನಡೆದಿದೆ. ಅವರು ಎಲ್ಲಿ ಎಡವಿದರೋ ಅಥವಾ ಅವರನ್ನು ದಾರಿ ತಪ್ಪಿಸಲಾಯಿತೇ ಅಥವಾ ಅವರಿಗೆ ಆದಾಯ ತೆರಿಗೆ ಇಲಾಖೆಯಿಂದ ನಿಜವಾಗಿಯೂ “ಕಿರುಕುಳ” ಆಗಿದೆಯೇ ಎನ್ನುವುದು ತನಿಖೆಗೆ ಅರ್ಹವಾದ ವಿಷಯ.

       ಆತ್ಮಹತ್ಯೆ ಎನ್ನುವುದು ಮನುಷ್ಯ ಖಿನ್ನತೆಗೆ ಒಳಗಾದಾಗ ಅವನೊಳಗಿರುವ “ಕೊಲೆಗಾರ”. ಸಮಸ್ಯೆಯನ್ನು ಎದುರಿಸಲಾಗದೆ ಮಾನಸಿಕವಾಗಿ ಇನ್ನು ಬದುಕೇ ಬೇಡ ಎನ್ನುವ ಖಿನ್ನತೆಗೆ ಒಳಗಾದವರ ಈ ಶತ್ರು ಮನಸ್ಸು ದುರ್ಬಲವಾದಾಗ ಇದು ಆಕ್ರಮಣ ನಡೆಸುತ್ತದೆ. ಅದರ ದಾಳಿಗೆ ಸಿಕ್ಕಾಗ ಮನೆ ಮಠ, ಹೆಂಡತಿ ಮಕ್ಕಳು, ತಂದೆ ತಾಯಿ, ಕುಟುಂಬ ಮತ್ತು ಸಮಾಜ ಯಾವುದೂ ಕಾಣುವುದಿಲ್ಲ. ಇನ್ನು ಈ ಜೀವನ ಸಾಕು ಎನಿಸಿ ಬಿಡುತ್ತದೆ. ಒಂಟಿತನದಲ್ಲಿ ಬದುಕುವ ಮತ್ತು ತಮ್ಮನ್ನು ಆಕ್ರಮಿಸಿದ ಮನಸ್ಸಿನೊಳಗೇ ಕೊರೆಯುವ ಸಮಸ್ಯೆಗಳನ್ನು ಆಪ್ತರೊಡನೆ ಹಂಚಿಕೊಂಡು ಪರಿಹಾರ ಕಾಣದೆ ಹೋದರೆ ಈ ಆತ್ಮಹತ್ಯೆ ಎನ್ನುವ ಆಂತರಿಕ ಕೊಲೆಗಾರ ಯಾರನ್ನೂ ಬಿಡುವುದಿಲ್ಲ. ನನಗೆ ನೆನಪಿರುವಂತೆ ಹತ್ತದಿನೈದು ವರ್ಷಗಳ ಹಿಂದೆ ದಾವಣಗೆರೆಯಿಂದ ಮನೋ ವೈದ್ಯರಾಗಿದ್ದ ಮಹಿಳೆಯೊಬ್ಬರು ವಾರಕ್ಕೊಮ್ಮೆ ಬೆಂಗಳೂರಿನ ನಿಮ್ಹಾನ್ಸ್ ಗೆ ಬಂದು ಖಿನ್ನತೆಗೆ ಒಳಗಾದವರು ಮತ್ತು ಆತ್ಮಹತ್ಯೆಯ ಹಾದಿ ಹಿಡಿಯುತ್ತಿದ್ದವರಿಗೆ ಕೌನ್ಸೆಲಿಂಗ್ ಮಾಡುತ್ತಿದ್ದರು. ದುರದೃಷ್ಟಕರ ಸಂಗತಿ ಎಂದರೆ ಒಂದು ದಿನ ಅವರೇ ಆತ್ಮಹತ್ಯೆಗೆ ಶರಣಾದರು !!

     ಸಿದ್ದಾರ್ಥ ಅವರು ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಅಳಿಯ ಎನ್ನುವುದು ಸಹಾ ಮುಖ್ಯ. ಬಹಳ ಮಂದಿ ಸಿದ್ದಾರ್ಥ ಅವರು ಕೃಷ್ಣ ಅವರ ಅಳಿಯ ಎಂದು ಕೇಳಿದ್ದಾರೆಯೇ ಹೊರತು ಅವರ ಮುಖಪರಿಚಯ ಅಷ್ಟಾಗಿರಲಿಲ್ಲ. ಅವರ ಸಹವಾಸದಲ್ಲಿದ್ದವರು ಮತ್ತು ಮಲೆನಾಡಿನ ಜನರಿಗಷ್ಟೇ ಪರಿಚಯವಿದ್ದರೂ, ಸಾರ್ವಜನಿಕವಾಗಿ ಹೆಚ್ಚಾಗಿ ಗುರುತಿಸಿಕೊಂಡವರಲ್ಲ. ಅವರ ವೈಯಕ್ತಿಕ ಬದುಕನ್ನು ಹತ್ತಿರದಿಂದ ನೋಡಿದ ಹಲವರಿಂದ ಅವರೊಬ್ಬ ಮಾನವೀಯ ವ್ಯಕ್ತಿತ್ವವುಳ್ಳ ಸಜ್ಜನ ಎಂಬುದು ಅನಾವರಣವಾಗಿದೆ. ಅವರ ಸಾವಿನ ನಂತರ ಅವರ ನಿಜವಾದ ಬದುಕಿನ ಬಗೆಗೆ ಕೇಳಿ ಬರುತ್ತಿರುವ ಸಂಗತಿಗಳು ಅಚ್ಚರಿ ಉಂಟು ಮಾಡುತ್ತವೆ. ಅವರು ವಾಣಿಜ್ಯ ವಹಿವಾಟು, ಅವರ ಮುಂದಾಲೋಚನೆ, ಸಾರ್ವಜನಿಕವಾಗಿ ನಡೆಸಿಕೊಂಡು ಬಂದ ಸಜ್ಜನಿಕೆ ಬದುಕು, ಯುವಕರಿಗೆ ಉದ್ಯೋಗ ನೀಡಿಕೆ ಇವೆಲ್ಲವನ್ನೂ ನೋಡಿದಾಗ ಅವರಿನ್ನೂ ನಮ್ಮ ಸಮಾಜಕ್ಕೆ ಹತ್ತಾರು ವರ್ಷ ಬೇಕಾದವರಾಗಿದ್ದು, ಯುವಜನತೆಗೆ ಆಶಾದಾಯಕವಾಗಿದ್ದರು ಎನ್ನುವುದು ಮುಖ್ಯ..

ಹಲವಾರು ಉದ್ದಿಮೆಗಳನ್ನು ನಡೆಸುವಾಗ ಕೆಲವೊಮ್ಮೆ ಆರ್ಥಿಕ ಶಿಸ್ತು ದಾರಿ ತಪ್ಪುತ್ತದೆ. ಅಂತಹ ಸಂದರ್ಭದಲ್ಲಿಯೇ ಆದಾಯ ತೆರಿಗೆ ಮುಂತಾದವು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಸಮರ್ಥವಾಗಿ ಹಣಕಾಸು ನೋಡಿಕೊಳ್ಳುವವರು ಇದ್ದಾಗ ಇಂತಹ ಸಮಸ್ಯೆಗಳು ಎದುರಾಗುವುದಿಲ್ಲ. ಯಾವುದೇ ಉದ್ಯಮ ನಡೆಸುವವರಿಗೆ ಇದೆಲ್ಲ ಗೊತ್ತಿಲ್ಲ ಎಂದೇನಲ್ಲ.  ದೊಡ್ಡ ಉದ್ದಿಮೆದಾರರು ಸರಿಯಾಗಿ ಪ್ರಾಮಾಣಿಕವಾಗಿ ಆದಾಯ ತೆರಿಗೆ ಪಾವತಿಸುವ ಮಂದಿಗೆ ಆದಾಯ ತೆರಿಗೆ ಇಲಾಖೆಯೇ ಗುರುತಿಸಿ ಸನ್ಮಾನ ಮಾಡುವುದುಂಟು.

ನಾವು ಕಂಡಂತೆ ಹಲವು ಉದ್ಯಮಿಗಳು ತಾವಾಯಿತು. ತಮ್ಮ ಉದ್ಯಮವಾಯಿತು ಎಂದುಕೊಂಡವರಿದ್ದಾರೆ. ಅವರು ಹತ್ತಾರು ನೂರಾರು ಅಥವಾ ಸಾವಿರಾರು ಜನರಿಗೆ ಉದ್ಯೋಗಗಳನ್ನೂ ಕೊಟ್ಟಿದ್ದಾರೆ. ಅನೇಕ ಕಡೆಗಳಲ್ಲಿ ನೌಕರರು ಮತ್ತು ಕಾರ್ಮಿಕರ ಶೋಷಣೆ ನಿರಂತರವಾಗಿ ನಡೆಯುವುದ ಉಂಟು. ಅಂತಹದ್ದೇ ಸಮಸ್ಯೆಗಳು ಬೆಳಕಿಗೆ ಬಂದು ಉದ್ಯೋಗದಾತರ ಒಳ್ಳೆಯ ಕೆಲಸಗಳು ಸಮಾಜದ ಮೆಚ್ಚುಗೆ ಗಳಿಸಲು ವಿಫಲವಾಗಿವೆ. ಇದು ನಿಜಕ್ಕೂ ದುರಂತ.

ಇಂದು ಸರ್ಕಾರವೇ ಎಲ್ಲರಿಗೂ ಉದ್ಯೋಗ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಮುಕ್ತ ಆರ್ಥಿಕ ನೀತಿ ಜಾರಿಗೆ ಬಂದು ಖಾಸಗೀಕರಣಕ್ಕೆ ಒತ್ತು ನೀಡುವ ನಮ್ಮ ಆರ್ಥಿಕ ನೀತಿಯಿಂದಾಗಿ, ಸಾವಿರಾರು ಯುವಕರು ಓದಿ ಬೀದಿಯಲ್ಲಿ ಅಲೆಯುವ ಪರಿಸ್ಥಿತಿ ಬಂದಿರುವಾಗ ದುಡಿಯುವ ದಾರಿ ತೋರುವುದು ನಿಜಕ್ಕೂ ಅದಕ್ಕಿಂತ ಉತ್ತಮ ಕೆಲಸ ಮತ್ತೊಂದಿರಲಾರದು.

ಈ ದಿಕ್ಕಿನಲ್ಲಿ ರಾಜ್ಯದಲ್ಲಿ ನೂರಾರು ವಿದ್ಯಾಸಂಸ್ಥೆಗಳು, ಖಾಸಗಿ ಉದ್ದಿಮೆಗಳು, ಆಸ್ಪತ್ರೆಗಳು, ಪತ್ರಿಕಾ ಮತ್ತು ಮಾಧ್ಯಮ ಸಂಸ್ಥೆಗಳು ಹೀಗೆ ಹಲವಾರು ಸೇವಾ ಸಂಸ್ಥೆಗಳನ್ನು ತೆರೆದು ಯುವಕರು ಬದುಕನ್ನು ಕಟ್ಟಿಕೊಳ್ಳಲು ನೆರವಾಗಿರುವುದು ಶ್ಲಾಘನೀಯ. ಇಂತಹ ಉದ್ಯಮಗಳಲ್ಲಿದ್ದು ಸಾರ್ವಜನಿಕ ಹಾಗು ರಾಜಕೀಯ ಕ್ಷೇತ್ರಗಳಿಗೆ ಬಂದಿರುವ ಹಲವರ ಕೆಲವು ತಪ್ಪು ನಡೆಗಳನ್ನು ನೋಡಿ ಟೀಕಿಸುವ ನಾವು ತಮ್ಮಿಂದ ನೂರಾರು ಮತ್ತು ಸಾವಿರಾರು ಕುಟುಂಬಗಳು ಬದುಕುತ್ತಿರುವ ಅಂಶಗಳನ್ನು ಮಾಧ್ಯಮಗಳು ಗಮನಿಸದೇ ಇರುವುದು ವಿಪರ್ಯಾಸ.

ಉದಾಹರಣೆಗೆ ಒಂದು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ಕಾಲೇಜು ಕಟ್ಟಿದರೆ ಅಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತದೆ. ಅದಷ್ಟೇ ಅಲ್ಲ. ಅಲ್ಲಿ ಅಷ್ಟೇ ಮಂದಿಗೆ ಉದ್ಯೋಗ ಸಿಗುತ್ತದೆ. ಹೀಗೆ ಉದ್ಯೋಗ ಪಡೆದ ಕುಟುಂಬಗಳಿಗೆ ಆಸರೆ ಸಿಗುವುದಲ್ಲದೆ ಅವರನ್ನೇ ನಂಬಿದ ಜನರಿಗೂ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಇದು ನೇರ ಉದ್ಯೋಗಾವಕಾಶವಾದರೆ ಮತ್ತೊಂದು ಕಡೆ ಪರೋಕ್ಷವಾಗಿ ಆ ಶಿಕ್ಷಣ ಸಂಸ್ಥೆಯ ಆಸುಪಾಸಿನಲ್ಲಿ ಅಂಗಡಿ ಮುಂಗಟ್ಟುಗಳು, ಹೋಟೆಲುಗಳು, ಬೀದಿ ಬದಿಯ ವ್ಯಾಪಾರಿಗಳು ಮತ್ತು ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಬೇಕಾದ ವಸತಿ ಸೌಲಭ್ಯ ಒದಗಿಸಲು ಬಾಡಿಗೆಗಾಗಿ ಮನೆಗಳ ನಿರ್ಮಾಣವಾಗುತ್ತವೆ. ಇಡೀ ಆ ಪ್ರದೇಶದ ಅಭಿವೃದ್ಧಿಯಾಗುತ್ತದೆ. ಹೀಗೆ ದುಡಿಮೆಯ ಅವಕಾಶಗಳು ತೆರೆದುಕೊಳ್ಳುತ್ತವೆ. ಈ ಬಗೆಯ ನೆರವು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಈ ಎಲ್ಲ ಅವಕಾಶಗಳನ್ನು ಸರ್ಕಾರವೇ ಒದಗಿಸಲಾರದು.

ಈ ನಿಟ್ಟಿನಲ್ಲಿ ಸಿದ್ದಾರ್ಥ ಅವರು ಕೆಫೆ ಕಾಫಿ ಡೇ ಮತ್ತಿತರ ಉದ್ದಿಮೆಗಳನ್ನು ಸ್ಥಾಪಿಸಿ ರಾಜ್ಯದ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಿದ್ದನ್ನು ಮರೆಯಲಾಗದು. ಅವರ ಕನಸಿನ ಇನ್ನೂ ಹಲವು ಯೋಜನೆಗಳನ್ನು ಅವರ ಉತ್ತರಾಧಿಕಾರಿಯಾಗಿ ಬರುವವರು ಮತ್ತು ಆಡಳಿತ ಮಂಡಳಿ ಮಾಡಬೇಕಿದೆ. ಆಗ ಅಪೂರ್ಣಗೊಳಿಸಿದ ಅವರ ಕಾರ್ಯ ಪೂರ್ಣಗೊಳ್ಳಬಹುದು. ಆ ಮೂಲಕ ಅವರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಒಟ್ಟಾರೆ ಸಿದ್ದಾರ್ಥ ಅವರ ಸಾಧನೆ ಹೊಸ ಹೊಸ ಸಾಹಸಕ್ಕೆ ಕೈ ಹಾಕುವ ಯುವಕರಿಗೆ ದಾರಿದೀಪವಾಗಬೇಕು. ಅವರ ಸಾವಿಗೆ ಕಾರಣವಾದ ಅಂಶಗಳು ಎಚ್ಚರಿಕೆಯ ಪಾಠವನ್ನೂ ಕಲಿಸುತ್ತದೆ. ಯುವಕರಿಗೆ ವಿಪುಲವಾದ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಟ್ಟ ಮತ್ತು ಕಾಫಿ ರುಚಿಯನ್ನು ಇಡೀ ದೇಶ ಮತ್ತು ಹಲವು ರಾಷ್ಟ್ರಗಳಿಗೆ ಪರಿಚಯಿಸಿದ ಸಿದ್ಧಾರ್ಥ ಇನ್ನೂ ಹತ್ತಾರು ವರ್ಷ ಬದುಕಬೇಕಿತ್ತು.