ರಿಯಲ್ ಎಸ್ಟೇಟ್ ಸರ್ಕಾರವೋ, ದಲ್ಲಾಳಿ ಸರ್ಕಾರವೋ ?

ರಿಯಲ್ ಎಸ್ಟೇಟ್ ಸರ್ಕಾರವೋ, ದಲ್ಲಾಳಿ ಸರ್ಕಾರವೋ ?

ಸಾರ್ವಜನಿಕ ಸ್ವಾಮ್ಯದ ಆಸ್ತಿ ಮಾರಾಟ ಪ್ರಕ್ರಿಯೆಯಲ್ಲಿ ತೊಡಗಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದಲ್ಲಾಳಿಯಂತೆ ವರ್ತಿಸುತ್ತಿದೆ. ಈ ಕುರಿತು ಜಿ.ಆರ್.ಸತ್ಯಲಿಂಗರಾಜು ವರದಿ.

ಸಾರ್ವಜನಿಕ ವಲಯದ ಹೂಡಿಕೆಯಲ್ಲಿ 2019-20 ರ ಸಾಲಿನಲ್ಲಿ 1.05 ಲಕ್ಷ ಕೋಟಿ ರು.ಗಳ ಬಂಡವಾಳ ಹಿಂಪಡೆಯಲು ಯೋಜಿಸಿರುವ ಸರ್ಕಾರ, ಯಾವುದನ್ನೆಲ್ಲ ಖಾಸಗಿಯವರಿಗೆ ಮಾರಾಟ ಅಥವಾ ಗುತ್ತಿಗೆ ಕೊಡಬಹುದು ಎಂಬ ಪಟ್ಟಿ ತಯಾರಿಸಲು ತಜ್ಞರ ಸಮಿತಿ ರಚಿಸಿದೆ.

ಸದರಿ ಸಮಿತಿ 1,45,400 ಕಿಮೀ ಉದ್ದವಿರುವ ಪವರ್ ಗ್ರಿಡ್, 11,500 ಕಿಮೀ ಇರುವ ಅನಿಲ ಪೂರೈಕೆಯ ಕೊಳವೆ ಮಾರ್ಗ, ಬಿಎಸ್‍ಎನ್‍ಎಲ್‍ನ 1305 ಟವರ್ ಗಳು, ಎಂಎನ್‍ಟಿಎಲ್‍ನ 392 ಟವರ್ ಗಳು, ಆಯ್ದ ನಗರಗಳಲ್ಲಿನ ವಿಮಾನ ನಿಲ್ದಾಣಗಳ ಮಾರಾಟ ಅಥವಾ ಗುತ್ತಿಗೆ ಕೊಡುವ ಮೂಲಕ 3 ಲಕ್ಷ ಕೋಟಿ ರು. ಪಡೆಯುವ ಬಗ್ಗೆ ವರದಿಕೊಟ್ಟಿದೆ.

ಜತೆಗೆ ಭಾರತೀಯ ಜವಳಿ ನಿಗಮ, ಹಿಂದೂಸ್ತಾನ್ ಆಂಟಿಬಯೋಟಿಕ್ ಸೇರಿದಂತೆ ಹಲ ಸಂಸ್ಥೆಗಳ ಅಧೀನದಲ್ಲಿರುವ ಭೂಮಿಯನ್ನ ರಿಯಲ್ ಎಸ್ಟೇಟ್‍ಗೆ ಬಳಸಿಕೊಳ್ಳುವ ಪ್ರಸ್ತಾಪ ಕೊಟ್ಟಿದೆ.

ಅನಿಲ ಪೂರೈಕೆ ಕೊಳವೆ ಮಾರ್ಗದಲ್ಲಿ ಈಗಾಗಲೇ 1400 ಕಿ.ಮೀ ನಷ್ಟವನ್ನ ರಿಲಯನ್ಸ್ ಹೊಂದಿತ್ತು, ಅದನ್ನ ಕೆನಡ ಮೂಲದ ಬ್ರೂಕ್‍ಫೀಲ್ಡ್ ಸಂಸ್ಥೆ 13 ಸಾವಿರ ಕೋಟಿ ರು.ಗೆ ತನ್ನದಾಗಿಸಿಕೊಂಡಿದೆ. ಯಾವುದನ್ನ ಮಾರಬೇಕು, ಯಾವುದನ್ನ ಗುತ್ತಿಗೆಗೆ ಕೊಡಬೇಕು ಎಂಬುದರ ನಿರ್ಣಯವಾದೊಡನೆ ಸಂಬಂಧಿಸಿದ ಪ್ರಕ್ರಿಯೆಗಳು ಆರಂಭವಾಗಲಿದೆ. ವಿವಿಧ ಸಂಸ್ಥೆಗಳ ಹೆಸರಲ್ಲಿರುವ ಭೂಮಿಯನ್ನೂ ದೊಡ್ಡ ಮಟ್ಟದಲ್ಲೇ  ವಿಲೇವಾರಿ ಮಾಡುವುದು ಬಹುತೇಕ ಖಚಿತವಾಗಿದ್ದು, ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಕ್ಷೇತ್ರ ಖಾಸಗಿಕರಣಗೊಳ್ಳುವುದು ಬಹುತೇಕವಾಗಿ ಖಚಿತ.

ಜಮ್ಮುಕಾಶ್ಮೀರ,  ಲಡಾಖ್ ಸ್ವಾಯತ್ತತೆ ಹೋಗಿರುವುದರಿಂದ, ಈ ಕೇಂದ್ರಾಡಳಿತ ಪ್ರದೇಶಗಳಲ್ಲು  ನರೇಂದ್ರ ಮೋದಿಯವರೊಡನೆ ಉತ್ತಮ ಸಂಬಂಧ ಇಟ್ಟುಕೊಂಡಿರುವ ಕಾರ್ಪೊರೇಟ್ ಸಂಸ್ಥೆಗಳು, ಅಮಿತ್ ಷಾ ಅವರ ಪುತ್ರನ ಸಂಸ್ಥೆಗಳು ವಹಿವಾಟು ಆರಂಭಿಸುವ ಸಾಧ್ಯತೆಗಳು ದಟ್ಟವಾಗುತ್ತಿದ್ದು, ಒಂದೆಡೆ ಆರ್ಥಿಕ ಮುಗ್ಗಟ್ಟಿನ ಪಯಣ, ಮತ್ತೊಂದೆಡೆ ಖಾಸಗಿ ವಲಯವನ್ನಾಗಿಸಲು ಕಂಕಣಬದ್ದವಾಗಿರುವುದು, ಸರ್ಕಾರಕ್ಕೆ ಸನಿಹವಾಗಿರುವವರಿಗೆ ಸೌಲಭ್ಯಗಳು ದಕ್ಕುವಂತೆ ನೀತಿಗಳನ್ನ ಹೊಂದುತ್ತಿರುವುದು ಉದ್ಯಮ ವಲಯದಲ್ಲೀಗ ಭಾರೀ ಚರ್ಚೆಗೆ ಎಡೆಮಾಡಿದೆ. ಸಾರ್ವಜನಿಕ ವಲಯವನ್ನ ಕ್ರಮೇಣ ಖಾಸಗಿಯವರಿಗೆ ವಹಿಸಿಕೊಡುವುದರ ವಿರುದ್ದ ಕಾರ್ಮಿಕ ಸಂಘಟನೆಗಳು ಸಮರ ಸಾರುತ್ತಿದ್ದರೂ, ಪ್ರಯೋಜನ ಮಾತ್ರ ಶೂನ್ಯ.