ಕ್ರೌರ್ಯದ ಕುಲುಮೆಯಲ್ಲಿ ಬೆಂದುಹೋದವರು

ಒಬ್ಬ ಮಹಿಳೆ ಸುಶಿಕ್ಷಿತಳಾದಲ್ಲಿ ಇಡೀ ಸಮಾಜವೇ ಸುಧಾರಿಸಬಲ್ಲದು ಎಂದು ಅಂಬೇಡ್ಕರ್ ನಂಬಿದ್ದರು. ಆದರೆ ಅದೆಲ್ಲವನ್ನೂ ಹುಸಿಯಾಗಿಸುವಂತೆ ಇಲ್ಲಿ ಎಷ್ಟೆ ವಿದ್ಯಾವಂತಳಾಗಿದ್ದರೂ ಸಹ ಆಕೆಯನ್ನು ಇಲ್ಲಿನ ಗಂಡು ಸಮಾಜ ಅವಳ ಸ್ಥಾನ ಗಂಡಿನ ಕೆಳಗೇ ಇರಬೇಕಾದದ್ದು ಎಂದು ತುಚ್ಛವಾಗಿ ಕಾಣುತ್ತದೆ.

ಕ್ರೌರ್ಯದ ಕುಲುಮೆಯಲ್ಲಿ ಬೆಂದುಹೋದವರು

ದೇಶದ ಪ್ರಥಮ ಪ್ರಧಾನಿ ಪಂಡಿತ ಜವಾಹರಲಾಲ್ ನೆಹರೂ.ಅಟಲ್ ಬಿಹಾರಿ ವಾಜಪೇಯಿ ಸ್ವಾತಂತ್ರ್ಯ ಹೋರಾಟಗಾರ ಚಂದ್ರಶೇಖರ್ ಆಜಾದ್, ಅಶ್ಫಾಕುಲ್ಲಾ ಖಾನ್, ಅನೇಕ ಲೇಖಕರು, ಕಲಾವಿದರು, ಸಂಗೀತಗಾರರು ಹೀಗೆ ಒಂದು ಕಾಲದಲ್ಲಿ ಕಲೆ ಸಂಸ್ಕೃತಿ, ರ‍್ದು ತಹಜೀಬ್ ,ತತ್ತ್ವಚಿಂತನೆಗಳ ಜನ್ಮಸ್ಥಳವಾಗಿದ್ದ  ರಾಜ್ಯ  ಇಂದು ಅನಕ್ಷರತೆ ಮತ್ತು ಯಜಮಾನಿಕೆಯ ಕೊಳಕು ಮನಸ್ಥಿತಿಯಿಂದ ಬಳಲುತ್ತಿದೆ !  

ಉತ್ತರ ಪ್ರದೇಶದಲ್ಲಿನ  ಮಹಿಳೆಯರ ಸ್ಥಿತಿಗತಿ ಈಗಲೂ ಅತ್ಯಂತ ಕೆಳಸ್ತರದಲ್ಲಿದೆ.  ಉಳಿದ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿನ ಮಹಿಳೆ ಹೆಚ್ಚು ಸಶಕ್ತಳಾಗಿದ್ದಾರೆ. ಗೋವಾ ಮಹಾರಾಷ್ಟ ಸೇರಿಸಿ ಒಟ್ಟಾರೆ ದಕ್ಷಿಣ ರಾಜ್ಯಗಳ ಮಹಿಳೆಯರಿಗೆ ಶಿಕ್ಷಣ ಸಾಮಾಜಿಕ ನ್ಯಾಯವನ್ನು ಒದಗಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ವಿಶಾಲ ರಾಜ್ಯದ ಹೆಣ್ಣುಮಕ್ಕಳ ದುರ್ದೆಶೆಯ ಮುಖ್ಯ ಕಾರಣ ಪುರುಷಪ್ರಭುತ್ವ, ಅನಕ್ಷರತೆ ಮತ್ತು ಮೌಢ್ಯ !  ಗಂಡಾಳಿಕೆಯೇ  ಪ್ರಧಾನವಾಗಿರುವ ಉತ್ತರಪ್ರದೇಶದಲ್ಲಿನ  ಮಹಿಳೆಯರು ಸಮಾಜ ವ್ಯವಸ್ಥೆಯಲ್ಲಿ ಅತ್ಯಂತ ಹಿಂದುಳಿದ ವ್ಯಕ್ತಿ. ಈ ಮಾತನ್ನು ಬಾಬಾಸಾಹೇಬರು ಎಂದೋ ಗುರುತಿಸಿದ್ದರು ಮತ್ತು ಪ್ರಜಾಪ್ರಭುತ್ವದ ದೇಶದಲ್ಲಿ ಸಾಂವಿಧಾನಿಕವಾಗಿ ಲಭಿಸುವ ಎಲ್ಲಾ ಹಕ್ಕುಗಳಿಗೂ ಮಹಿಳೆ ಪುರಷನಷ್ಟೆ ಭಾದ್ಯಸ್ತಳು ಎಂದಿದ್ದರು, ಜೀವನಪರ್ಯಂತ ಅದಕ್ಕಾಗಿಯೇ ದುಡಿದರು.  ಒಬ್ಬ ಮಹಿಳೆ ಸುಶಿಕ್ಷಿತಳಾದಲ್ಲಿ ಇಡೀ ಸಮಾಜವೇ ಸುಧಾರಿಸಬಲ್ಲದು ಎಂದು ನಂಬಿದ್ದರು.  ಆದರೆ ಅದೆಲ್ಲವನ್ನೂ ಹುಸಿಯಾಗಿಸುವಂತೆ ಇಲ್ಲಿ ಎಷ್ಟೆ ವಿದ್ಯಾವಂತಳಾಗಿದ್ದರೂ ಸಹ ಆಕೆಯನ್ನು ಇಲ್ಲಿನ ಗಂಡು ಸಮಾಜ ಅವಳ ಸ್ಥಾನ ಗಂಡಿನ ಕೆಳಗೇ ಇರಬೇಕಾದದ್ದು ಎಂದು ತುಚ್ಛವಾಗಿ ಕಾಣುತ್ತದೆ.  ಪ್ರಶ್ನಿಸಿದರೆ - ಇಲ್ಲಿ “ಐಸಾ ಹೀ ಚಲತಾ ಹೈ ಮೇಡಂ…! ಎಂಬ ಉತ್ತರ ಬರುತ್ತದೆ, 

ಇತ್ತೀಚೆಗೆ ಉನ್ನಾವೊ ಪ್ರಕರಣವನ್ನು ಕುರಿತು “ನನ್ನ ಅಭಿಪ್ರಾಯದಲ್ಲಿ, ತನಿಖೆಯು ಲೈಂಗಿಕ ದೌರ್ಜನ್ಯದ ಸಮಸ್ಯೆಗಳನ್ನು ತಳ್ಳಿ ಹಾಕುವಲ್ಲಿ, ಪಿತೃಪ್ರಭುತ್ವದ ವಿಧಾನ ಅಥವಾ ಅಂತರ್ಗತ ದೃಷ್ಟಿಕೋನದಿಂದ ಬಳಲುತ್ತಿದೆ ಎಂದು ನ್ಯಾಯವಾದಿಗಳೇ ಅಭಿಪ್ರಾಯಪಟ್ಟಿದ್ದಾರೆ. ಸಾಕ್ಷ್ಯಾಧಾರಗಳ ಕೊರತೆಯ ಸೂಕ್ಷ್ಮತೆಯಿಂದ  ಸಂತ್ರಸ್ತೆ ಮತ್ತು ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ನ್ಯಾಯಾಲಯವೇ ಹೇಳಿದೆ.

ಉನ್ನಾವಿನ ಮೂರು ಕೇಸುಗಳ ನಂತರ ಉತ್ತರಪ್ರದೇಶದ ತಾಯಂದಿರು ನೆಮ್ಮದಿಯಿಂದ ನಿದ್ದೆ ಮಾಡಿರಲಾರರು. ಇಲ್ಲಿನ ತಾಯಂದಿರ ಅಂತರಂಗದ ಮಾತುಗಳಿಂದ ಯಾವ ಲಾಭವೂ ಇಲ್ಲ. ಅವರ ಮತ್ತು ಟಿ ಆರ್ ಪಿ ಹೆಚ್ಚಿಸದ ಇಂಥ ಬೇಕಾರ್ ಸುದ್ದಿಗಳನ್ನು ಮಾಧ್ಯಮಗಳು ಬಹಿರಂಗಪಡಿಸುವುದೂ ಇಲ್ಲ.  ಅವುಗಳಿಗೆ ಬೇಕಾಗಿಯೂ ಇಲ್ಲ.

ಬುಲಂದಶಹರಿನಿಂದ ದೇವಲಾಕ್ಕೆ ಬರುವ ನಮ್ಮ ಅಕೌಂಟ್ಸ್ ಡಿಪಾರ್ಟಮೆಂಟಿನ  ಸಪ್ನಾಳನ್ನು ಕೆಲಸಬಿಡುವಂತೆ ಅವರಮ್ಮ ಒತ್ತಾಯಿಸುತ್ತಿದ್ದಾರೆ. ದುಪ್ಪಟ್ಟಾದಿಂದ ಮುಖಮುಚ್ಚಿಕೊಂಡಿರು, ಐದುಗಂಟೆಗೇ ಆಫೀಸ್ ಬಿಡು, ಈಗ ಚಳಿಗಾಲದಲ್ಲಿ ಬೇಗ  ಕತ್ತಲಾವರಿಸಿಕೊಳ್ಳುವುದೂ ಒಂದು ಸಮಸ್ಯೆ. ಪಕ್ಕದಲ್ಲಿ ನಿಂತ ವ್ಯಕ್ತಿಯನ್ನೂ ನಂಬಲಾಗದ ಸ್ಥಿತಿ. ಹಳ್ಳಿಯಲ್ಲಿ  ಹುಡುಗಿಯೊಬ್ಬಳು ಜೀನ್ಸ್ ತೊಟ್ಟರೆ, ಅವಳನ್ನು  ನೋಡುವ ಅಳೆಯುವ ಕಣ್ಣುಗಳು ಬೇರೆಯೇ ಆಗುತ್ತವೆ.

ಇನ್ನು ಹಳ್ಳಿಗಳ ಹೆಣ್ಣುಮಕ್ಕಳ ಬದುಕು ಅತ್ಯಂತ ಶೋಚನೀಯವಾಗಿದೆ. ಜಾತಿ ವ್ಯವಸ್ಥೆಯಲ್ಲಿ ಉಚ್ಛ ವರ್ಗದ ಪುರುಷರು ಕೆಳವರ್ಗದ ಹೆಣ್ಣುಮಕ್ಕಳಿರುವುದೇ ಅವರ ಬಯಕೆಗಳನ್ನು ಪೂರೈಸುವುದಕ್ಕೆ ಎಂಬಂಥ ಮನೋಭಾವನೆಗಳೇ ಉನ್ನಾವಿನ ಮೂರೂ ಪ್ರಕರಣದಲ್ಲಿ ನಾವು ಕಾಣುತ್ತೇವೆ. ಮತ್ತು ಆರೋಪಿಗಳನ್ನು ವಹಿಸಿಕೊಳ್ಳುವವರೂ ಮಹಿಳೆಯರೇ ಎನ್ನುವುದೂ ಕ್ರೂರ ಸತ್ಯ. ಮಹಿಳೆಯೇ ಮಹಿಳೆಯ ಶತ್ರುಗಳು. ಮಹಾಭಾರತ ಘಟಿಸಿದ ಪ್ರದೇಶವಲ್ಲವೇ ಇದು? ಇಲ್ಲಿ ಜೂಜಾಡಿ ಸೋತು ಹೆಂಡತಿಯನ್ನೇ ಪಣಕ್ಕೊಡ್ಡಿ ಸೋತ ನಂತರ ಹೆಂಡತಿಯನ್ನು ಗೆದ್ದವನಿಗೆ ಒಪ್ಪಿಸುವ ಭಂಡರಿದ್ದಾರೆ.  ಕೆಲಸದ ಸುನೀತಾಳಿಂದ  ಕಿವಿಯಾರೆ ಕೇಳಿದ್ದೇನೆ. ಹೆಣ್ಣು ಅಸ್ತಿತ್ವವೇ ಇಲ್ಲದ ಒಂದು ಉಪಭೋಗದ ವಸ್ತು !

ಬಿಜೆಪಿ ಸಂಸದ ಕುದೀಪ್ ಸೆಂಗರಿಂದ ದೌರ್ಜನ್ಯಕ್ಕೊಳಗಾದ ನಿರ್ಭಯಾಳ ಬದುಕು  ಅಪ್ರಾಪ್ತ ವಯಸ್ಸಿನಿಂದಲೇ ಆಕೆಗೆ ಸಂಕಷ್ಟಗಳಿಗೆ ನೂಕಿದೆ. 2017ರಲ್ಲಿ ಒಬ್ಬ ಮಹಿಳೆ ಮತ್ತು ಅವಳ ಮಗ ಶುಭಂ ಸಿಂಗ್ ಕೆಲಸ ಕೊಡಿಸುವುದಾಗಿ ಕಾನ್ಪುರ್ ಗೆ ಬಾ ಎಂದು  ಕರೆಸಿಕೊಂಡು ಶುಭಂ ಮತ್ತು ಅವನ ಡ್ರೈವರ್ ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗುತ್ತಾರೆ. ನಂತರ ಅರವತ್ತು ಸಾವಿರ ರೂಪಾಯಿಗಳಿಗೆ ಅವಳನ್ನು ಮತ್ತೊಬ್ಬನಿಗೆ ಮಾರುತ್ತಾರೆ. ಶುಭಂ ಸಿಂಗ್ ಮತ್ತು ಅವಧೇಶ್ ತಿವಾರಿ ವಿರುದ್ಧ 20 ಜೂನ್ 2017 ರಂದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 363 ಮತ್ತು 366 ರ ಅಡಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ನೋಂದಾಯಿಸಲಾಯ್ತು.  ಆರೋಪಿಗಳನ್ನು ವಶಕ್ಕೆ ತಗೆದುಕೊಳ್ಳಲಾಯ್ತು.

ಈ ಘಟನೆಗೆ ಮೊದಲೇ  ಭಾರತೀಯ ಜನತಾ ಪಕ್ಷದ ಸದಸ್ಯ ಸೆಂಗಾರ್ ಅವರ ಮನೆಯಲ್ಲಿ ಉದ್ಯೋಗದ ನೆಪದಲ್ಲಿ  ಸೆಂಗಾರ್ ಮತ್ತು ಅವನ ಸೋದರನಿಂದ ಅತ್ಯಾಚಾರಕ್ಕೊಳಪಟ್ಟಿದ್ದಳು.  ಪೋಲಿಸರು ಜೂನ್ 22ರಂದು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡರೂ ಆಕೆಯ ಹಲ್ಲೆಕೋರನನ್ನು ಹೆಸರಿಸಲು ಆಕೆಗೆ ಅವಕಾಶ ನೀಡಲಿಲ್ಲ.  ಸೆಂಗಾರ್ ಸೋದರ ಮತ್ತು  ಬೆಂಬಲಿಗರಿಂದ ಹಲ್ಲೆಗೊಳಗಾದ ಅವಳ ತಂದೆಯೂ ನಿಧನರಾದರು.  ಆಗಲೂ ದೂರಿನ ಪ್ರತಿಕ್ರಿಯೆಯಾಗಿ ಆರೋಪಿಗಳ ವಿರುದ್ಧ ಪೋಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಸಂತ್ರಸ್ತೆ ಮುಖ್ಯಮಂತ್ರಿ ಯೋಗಿ ನಿವಾಸದ ಮುಂದೆ ಬೆಂಕಿಹಚ್ಚಿಕೊಂಡು ಆತ್ಮಾಹುತಿಗೆ ಪ್ರಯತ್ನಿಸಿದ ನಂತರವೇ ಇದು ರಾಷ್ಟ್ರೀಯ ಸುದ್ದಿಯಾಗಿ ಕುಲದೀಪ್ ಸೇಂಗರನ ಹೆಸರು ಬೆಳಕಿಗೆ ಬಂದದ್ದು ಮತ್ತು ಎಫ್ ಐ ಆರ್ ದಾಖಲಾದದ್ದು.

ಇದೂ ಸಾಲದೆಂಬಂತೆ ರಾಯಬರೇಲಿ ಕೋರ್ಟಿಗೆ ತನ್ನ ವಕೀಲರೊಂದಿಗೆ ಹಾಜರಾಗಲು ಹೊರಟಾಗ ಟ್ರಕ್ ಹಾಯಿಸಿ ಕೊಲ್ಲುವ ಪ್ರಯತ್ನವನ್ನೂ ಮಾಡಿದರು. ಸಧ್ಯಕ್ಕೆ ನಿರ್ಭಯಾ ಬಿಗಿ ಸುರಕ್ಷತೆಯಲ್ಲಿ ದಿಲ್ಲಿಯಲ್ಲಿದ್ದಾಳೆ. ಕುಲದೀಪ್ ಸೇಂಗರಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಪೋಕ್ಸೋ ಕಾಯ್ದೆಯಡಿ ಅವನಿಗೆ ಮರಣದಂಡನೆಯನ್ನು ವಿಧಿಸಬೇಕಿತ್ತು ಎನ್ನುವುದು ಜನಾಭಿಪ್ರಾಯ.

.ಡಿಸೆಂಬರ 2ರಂದು ಜಮಾನತ್ತು ಪಡೆದು ಹೊರಬಂದಿದ್ದ ಇದೇ ಉನ್ನಾವಿನ ಇನ್ನೊಬ್ಬ ದಾಮಿನಿಯ ಅತ್ಯಾಚಾರಿಗಳು ರಾಯಬರೇಲಿಗೆ ಕೇಸ್ ಬಗ್ಗೆ ವಿಚಾರಿಸಲು ಹೊರಟ ಸಂತ್ರಸ್ತೆಯನ್ನು  ಹೊಲದಲ್ಲಿ ಎಳೆದೊಯ್ದು ಪೆಟ್ರೋಲ್ ಸುರಿದು ಬೆಂಕಿಹಚ್ಚಿದ್ದ  ಘಟನೆ ಇಡೀ ದೇಶವನ್ನೇ ನಡುಗಿಸಿತ್ತು. ಆಕೆ ಬೆಂಕಿಯಲ್ಲಿ ದಹಿಸಿಕೊಳ್ಳುತ್ತಲೇ  ಕಿಲೋಮೀಟರ್ ವರೆಗೆ ಓಡಿದರೂ ಊರಲ್ಲಿ ಒಬ್ಬನೇ ಒಬ್ಬನೂ ಆಕೆಯ ಸಹಾಯಕ್ಕೆ ಬರಲಿಲ್ಲವೆಂದರೆ ಮಾನವೀಯತೆಯುಳ್ಳ ಒಬ್ಬನೂ ಊರಲ್ಲಿದ್ದಿಲ್ಲವೇ ? ಕೊನೆಗೂ ದಾಮಿನಿ ಬದುಕುಳಿಯಲಿಲ್ಲ. 

ಉನ್ನಾವಿನ ಜನರು ಕೋಮುವಾದ, ಮೇಲ್ಜಾತಿ ರಾಜಕಾರಣದಲ್ಲಿ ಕಲ್ಲಾಗಿಹೋಗಿದ್ದಾರೆ. ಜೀವಂತ ವ್ಯಕ್ತಿಯನ್ನು ಸುಟ್ಟುಹಾಕುವಂಥ ಧೈರ್ಯ ಎಲ್ಲಿಂದ ಬಂತು ? ಕಾನೂನಿನ ಭಯವಿಲ್ಲದೇ ತಾವು ಏನುಮಾಡಿದರೂ ನುಣುಚಿಕೊಳ್ಳಬಹುದು ಎಂಬ ಧಿಮಾಕೇ ?

ಉನ್ನಾವಿನ ಈ ಮಗಳನ್ನು ಸುಟ್ಟ ಕ್ರೂರಿಗಳಿಗೆ ಅಪರಾಧದಲ್ಲಿ ನೆರೆವಾದವರು ತಮ್ಮ ಚಿಕ್ಕಪ್ಪ, ಅಪ್ಪ, ನೆರೆಯವರೇ.  ಅವರು ಉಚ್ಚ ಜಾತಿಯವರಾಗಿದುದ್ದಕ್ಕೆ ಇಡೀ ಊರೇ ಅವರ ಪರ.  ಆರೋಪಿಯ ತಾಯಿ ತನ್ನ ಮಗ ಈ ದರ‍್ಘಟನೆ ನಡೆದಾಗ ಮನೆಯಲ್ಲಿದ್ದ ಅನ್ನುತ್ತಾಳಲ್ಲಾ ಆಕೆಯದು ತಾಯಿಕರುಳಾದರೆ ಮಗಳನ್ನು ಕಳೆದುಕೊಂಡ ತಾಯಿಯ ದುಃಖ ಎಷ್ಟಿರಬಾರದು ? ಆರೋಪಿಯನ್ನು ಹಿಸುಕಿ ಸಾಯಿಸಬೇಕು ಎನ್ನುವ ಅವಳ ಸಂಕಟ ಎಷ್ಟಿರಬಾರದು ?

ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳಳು ಹರಿಶಂಕರ್‌ ತ್ರಿವೇದಿ, ರಾಮ್‌ ಕಿಶೋರ್‌ ತ್ರಿವೇದಿ, ಉಮೇಶ್‌ ಬಾಜಪೇಯಿ, ಶಿವಂ ತ್ರಿವೇದಿ ಮತ್ತು ಶುಭಂ ತ್ರಿವೇದಿ. ಇದೇ ಶಿವಂ ತ್ರಿವೇದಿ ಸಂತ್ರಸ್ತೆಯ ಬೆನ್ನುಬಿದ್ದು ಪ್ರೇಮ ಪ್ರೀತಿ ಎಂದು ನಂಬಿಸಿ ನಿರಂತರವಾಗಿ ಆತ್ಯಾಚಾರ ನಡೆಸಿದ್ದ.  ರಾಯಬರೇಲಿಯಲ್ಲಿ ಕೆಲದಿನ ಬಾಡಿಗೆ ಮನೆಯಲ್ಲೂ ಇಟ್ಟಿದ್ದ ಮದುವೆಯಾಗುವುದಾಗಿ ನಂಬಿಸಿ.  ಅಲ್ಲಿಂದ ಆಕೆ ಬೇರೆ ಊರಿಗೆ ಹೋಗಿದ್ದರೂ ಅಲ್ಲಿಗೂ ಬೆನ್ನುಬಿಡದ ಬೇತಾಳನಂತೆ ವಕ್ರಿಸಿ  ಶಿವಂ ಶುಭಂ ಇಬ್ಬರೂ ಅತ್ಯಾಚಾರ ನಡೆಸುತ್ತಾರೆ.  ನಿರಂತರವಾಗಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ಸಹಿಸಿಕೊಂಡ ಆಕೆಗೆ ನ್ಯಾಯ ಒದಗಿಸಬೇಕಾದ ಪೋಲೀಸರ ಅಸಡ್ದೆ , ಬೇಜವಾಬ್ದಾರಿ ನಡತೆಯೇ ಸಂತ್ರಸ್ತೆಯರನ್ನು ಸಾವಿನ ದವಡೆಗೆ ನೂಕುತ್ತಿದೆ.

ಡಿ. 16 ರಂದು ಇನ್ನೊಬ್ಬ ಮೂರನೇ ನಿರ್ಭಯಾ ಕಾನ್ ಪುರ ಎಸ್ಪಿ ಕಚೇರಿಯ ಮುಂದೆ  ಬೆಂಕಿ ಹಚ್ಚಿಕೊಂಡು ಸತ್ತಳು.  ಕಾರಣ ಪೋಲೀಸರು ಆಕೆಯ ಆರೋಪಕ್ಕೆ ಸರಿಯಾಗಿ ಸ್ಪಂದಿಸದೇ ಆರೋಪಿ ಅವದೇಶ ಕುಮಾರನನ್ನು ಜಮಾನತ್ತು ನೀಡಿದ್ದನ್ನು ಆಕೆ ಪ್ರತಿಭಟಿಸಿದ್ದಳು.  ಇಲ್ಲೂ ಅವದೇಶಕುಮಾರ  ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟಿದ್ದ.

ಉತ್ತರಪ್ರದೇಶದಂಥ ಹಳ್ಳಿಗಳಲ್ಲಿ ಪ್ರೀತಿ ಪ್ರೇಮದ ಹೆಸರಿನಲ್ಲಿ ಘಟಿಸಿದ ಈ  ಆತ್ಯಾಚಾರಗಳ ಸ್ವರೂಪ ಒಂದೇ.  ಉಚ್ಚಜಾತಿಯ ಗಂಡುಮಕ್ಕಳು ಏನು ಮಾಡಿದರೂ ಅದು ಪೌರುಷದ ಸಂಕೇತ. ಇದೇ ಸಮಾಜವಾದಿ ಪಕ್ಷದ ಹಿರಿಯ ನಾಯಕ ಅತ್ಯಾಚಾರ ಪ್ರಕರಣಗಳಿಗೆ “ ಹುಡುಗರಿದ್ದಾರೆ ತಪ್ಪು ಆಗುತ್ತದೆ , ಲಡಕೇ ಹೈ ಗಲತೀ ಹೋ ಜಾತಿ ಹೈ” ಎಂಭ ಹೇಳಿದ್ದು ನೆನಪಿರಬಹುದು. ಇದೇ ಮನಸ್ಥಿತಿ ಬಹುತೇಕ ಗಂಡುಗಳಲ್ಲಿದೆ. ಪುರುಷನ ಮೋಸಕ್ಕೆ ಬಲಿಯಾದವಳಿಗೆ ಮರ್ಯಾದೆ ಹತ್ಯೆ. ಇಲ್ಲ ಜೀವಂತ ದಹನ. ಅವನಿಗೆ ಮಾತ್ರ ಗೌರವದ ಹಾರ ತುರಾಯಿ.

ಉತ್ತರಪ್ರದೇಶದಂಥ ಅರಾಜಕತೆ ತಾಂಡವವಾಡುವ ರಾಜ್ಯದಲ್ಲಿ ಪೋಲಿಸ್ ವ್ಯವಸ್ಥೆಯೇ ಇನ್ನೊಂದು ಕೂಪಕಾಂಡ.  ಜಾತಿ ವರ್ಗಗಳ ಪ್ರಾಬಲ್ಯವೇ ಪ್ರಧಾನವಾಗಿರುವ ಈ ನಾಡಿನಲ್ಲಿ ಅಪರಾಧ ದಾಖಲೆಯೂ ಆಗುವುದಿಲ್ಲ.  ರಾಜಕೀಯ ಕೈವಾಡಗಳು ನೂರಾರು. ಅಪರಾಧಿಗಳು ಯಾರ ಕಾನೂನಿನ ಭಯವಿಲ್ಲದೇ ನುಣುಚಿಕೊಂಡು ಪಾರಾಗುತ್ತಾರೆ.  ಕೆಲಕಾಲ ಕಾದು ನೋಡಿ ಕುಲದೀಪ್ ಸೇಂಗರ್ ಜೈಲಿನ ಸರಳುಗಳನ್ನು ದಾಟಿ ಹೊರಬರುತ್ತಾನೆ. ಮಂಕು ಬಡಿದ ಜನರೂ ಹಾರ ಹಾಕಿ ಡೋಲ್ ಬಾರಿಸಿ ಕುಣಿಯುತ್ತಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾವೆಲ್ಲ ಅವನನ್ನು ಟಿವಿ ಪರದೆಯ ಮೇಲೆ ಕಾಣುತ್ತಿರುತ್ತೇವೆ.