ಮೈತ್ರಿ ಸರ್ಕಾರದ ಮುಂಗಡಪತ್ರದಲ್ಲಿ ಘೋಷಣೆಗಳ ಉತ್ಪಾದನೆ : ಭಂಡ ಅಧಿಕಾರಿಶಾಹಿಯಿಂದ ಆದೇಶ ಹೊರಡದೇ ಶೂನ್ಯ ಸಂಪಾದನೆ

ಮೈತ್ರಿ ಸರ್ಕಾರದ ಮುಂಗಡಪತ್ರದಲ್ಲಿ ಘೋಷಣೆಗಳ ಉತ್ಪಾದನೆ : ಭಂಡ ಅಧಿಕಾರಿಶಾಹಿಯಿಂದ ಆದೇಶ ಹೊರಡದೇ   ಶೂನ್ಯ ಸಂಪಾದನೆ

ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಮೈತ್ರಿ ಸರ್ಕಾರ ಜನ್ಮತಾಳಿದ ಸಂದರ್ಭದಲ್ಲೇ ಅದರ ಆಯಸ್ಸನ್ನೂ ಊಹಿಸಿದಂತಿದ್ದ ಅಧಿಕಾರಶಾಹಿ, ಹೊಸದಾಗಿ ಘೋಷಿಸಿದ್ದ ಯಾವ ಯೋಜನೆಗಳನ್ನೂ ಅನುಷ್ಠಾನಕ್ಕೆ ತರಲು ಮುಂದಾಗಲಿಲ್ಲ. ಇದೆಲ್ಲದರ ಒಟ್ಟು ಪರಿಣಾಮ ಆಡಳಿತದ ಮೇಲಷ್ಟೇ ಅಲ್ಲ, ಮೈತ್ರಿ ಸರ್ಕಾರ ಮಂಡಿಸಿದ್ದ ಆಯವ್ಯಯದ ಘೋಷಣೆಗಳ ಮೇಲೂ ಗಂಭೀರವಾಗಿಯೇ ಆಗಿದೆ.. 2019-20ನೇ ಸಾಲಿನ ಆಯವ್ಯಯದಲ್ಲಿ ಮಾಡಿದ್ದ ಬಹುತೇಕ ಘೋಷಣೆಗಳಿಗೆ ಸರ್ಕಾರಿ ಆದೇಶ ಹೊರಬಿದ್ದಿಲ್ಲ. ಇದರ ಅರ್ಥ ಇಲಾಖೆಗಳಲ್ಲಾಗಿರುವುದು ಶೂನ್ಯ ಸಂಪಾದನೆಯಷ್ಟೇ ಎನ್ನುತ್ತಾರೆ ಜಿ.ಮಹಂತೇಶ್.

ಅಸ್ಥಿರತೆಯ ನೆರಳಿನಲ್ಲಿಯೇ ಒಂದು ವರ್ಷ ಪೂರೈಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅದನ್ನು ಸಂಭ್ರಮಿಸುವ ಸ್ಥಿತಿಯಲಿಲ್ಲ. ಮೈತ್ರಿ ಸರ್ಕಾರ ರಚನೆಯಾದ ದಿನದಿಂದಲೇ ಭಿನ್ನಮತೀಯ ಚಟುವಟಿಕೆಗಳು ನಡೆಯುತ್ತಿದ್ದರೂ ಕಡಿವಾಣ ಹಾಕುವಲ್ಲಿ ಉಭಯ ಪಕ್ಷಗಳ ಮುಖಂಡರು ವಿಫಲರಾದರು. ಅಸ್ಥಿರತೆ ಛಾಯೆಯಿಂದ ಹೊರಬರಲು ನಡೆಸಿದ ಯಾವ ಪ್ರಯತ್ನವೂ ಫಲ ಕೊಡುತ್ತಿಲ್ಲ.

ಇದೆಲ್ಲದರ ಒಟ್ಟು ಪರಿಣಾಮ ಸಾರ್ವಜನಿಕ ಆಡಳಿತದ ಮೇಲಷ್ಟೇ ಅಲ್ಲ, ಆಯವ್ಯಯದಲ್ಲಿ ಘೋಷಣೆಗಳ ಮೇಲೂ ಬೀರಿದೆ. ಅಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಅಧಿಕಾರಶಾಹಿಯೂ ಆಯವ್ಯಯದಲ್ಲಿ ಮಾಡಿದ್ದ ಘೋಷಣೆಗಳನ್ನು ಜಾರಿಗೊಳಿಸುವ ಕೆಲಸಕ್ಕೆ ಕೈ ಹಾಕಲೇ ಇಲ್ಲ.
ಮೈತ್ರಿ ಸರ್ಕಾರದ ಪಾಲುದಾರಿಕೆ ಪಕ್ಷದೊಳಗೆ ನಡೆಯುತ್ತಿದ್ದ ಮುಸುಕಿನ ಗುದ್ದಾಟ ಅಧಿಕಾರಶಾಹಿಯನ್ನು  ಮನರಂಜಿಸಿತ್ತು. ಈಗಲೂ ಅದೇ ರಾಜಕೀಯ ಮನರಂಜನೆಯಲ್ಲೇ ಮುಳುಗಿ ಅದನ್ನೇ ಉಂಡು ಉಸಿರಾಡುತ್ತಿರುವ  ಅಧಿಕಾರಶಾಹಿ ಶುದ್ಧ ಮೈಗಳ್ಳತನದಿಂದ ವರ್ತಿಸುತ್ತಿದೆಯಲ್ಲದೆ, ಆ ಗುಂಗಿನಿಂದ ಈಗಲೂ ಹೊರಬಂದಿಲ್ಲ. 

ಹೀಗಾಗಿಯೇ 2019-20ನೇ ಸಾಲಿನ ಆಯವ್ಯಯದ ಘೋಷಣೆಗಳ ಮೇಲೆ ಅಧಿಕಾರಶಾಹಿ ಯಾವ ಕ್ರಮಗಳನ್ನೂ ಕೈಗೊಂಡಿಲ್ಲ.  ಘೋಷಣೆಗಳ ಜಾರಿ ಮಾಡುವ ವಿಚಾರದಲ್ಲಿ ಅನೇಕ ಇಲಾಖೆಗಳದ್ದು ಶೂನ್ಯ ಸಂಪಾದನೆ! ಜಲಸಂಪನ್ಮೂಲ, ಕನ್ನಡ ಸಂಸ್ಕೃತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ವೈದ್ಯಕೀಯ ಶಿಕ್ಷಣ, ಅರಣ್ಯ, ಅಲ್ಪಸಂಖ್ಯಾತರ ಕಲ್ಯಾಣ, ಕಾರ್ಮಿಕ, ಯುವಜನಸೇವೆ, ಪ್ರವಾಸೋದ್ಯಮ, ಒಳಾಡಳಿತ, ರೇಷ್ಮೆ, ನಗರಾಭಿವೃದ್ಧಿ,(ಪೌರಾಡಳಿತ), ಸಮಾಜ ಕಲ್ಯಾಣ, ಸಾರಿಗೆ, ಕೌಶಲ್ಯಾಭಿವೃದ್ಧಿ, ಆಹಾರ ಇಲಾಖೆಗಳಿಗೆ ಸಂಬಂಧಿಸಿದ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಾಡಿದ್ದ ಘೋಷಣೆಗಳನ್ನು ಕುರಿತ ಒಂದೇ ಒಂದು ಆದೇಶವೂ ಕಳೆದ ಮೇ ಅಂತ್ಯದವರೆಗೂ ಹೊರಬಿದ್ದಿಲ್ಲ. 

2019-20ನೇ ಸಾಲಿನ ಆಯವ್ಯಯ ಘೋಷಣೆಗಳ ಮೇಲೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ನಡೆಸಿರುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಹಲವು ಇಲಾಖೆಗಳು ಶೂನ್ಯ ಸಂಪಾದಿಸಿರುವುದು ತಿಳಿದು ಬಂದಿದೆ.ಒಟ್ಟು 40 ಇಲಾಖೆಗಳಿಗೆ ಸಂಬಂಧಿಸಿದಂತೆ 341 ಘೋಷಣೆಗಳನ್ನು ಮಾಡಲಾಗಿತ್ತು. ಈ ಪೈಕಿ 73 ಘೋಷಣೆಗಳಿಗಷ್ಟೇ ಸರ್ಕಾರಿ ಆದೇಶ ಹೊರಬಿದ್ದಿದೆ. ಬಾಕಿ 268 ಘೋಷಣೆಗಳಿಗೆ ಸಂಬಂಧಿಸಿದಂತೆ 2019ರ ಮೇ ಅಂತ್ಯದವರೆಗೂ ಒಂದೇ ಒಂದು ಸರ್ಕಾರಿ ಆದೇಶ ಹೊರಬಿದ್ದಿಲ್ಲ. ಹಾಗೆಯೇ 341 ಘೋಷಣೆಗಳ ಪೈಕಿ ಯೋಜನೆ ಇಲಾಖೆಗೆ ತಲುಪಿರುವುದು ಕೇವಲ 108 ಘೋಷಣೆಗಳು ಮಾತ್ರ. ಇವುಗಳಲ್ಲಿ ಆರ್ಥಿಕ ಇಲಾಖೆಯಿಂದ 22 ಘೋಷಣೆಗಳಿಗಷ್ಟೇ ಸಹಮತ ದೊರೆತಿದೆ. 

ಡಿ ಕೆ ಶಿವಕುಮಾರ್ ಸಚಿವರಾಗಿರುವ ಜಲ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 71 ಘೋಷಣೆಗಳನ್ನು ಮಾಡಲಾಗಿತ್ತು. ಈ ಪೈಕಿ ಒಂದೇ ಒಂದು ಘೋಷಣೆ ಯೋಜನೆ ಇಲಾಖೆಯಲ್ಲಿ ಸ್ವೀಕೃತವಾಗದ ಕಾರಣ  71 ಘೋಷಣೆಗಳೂ ಬಾಕಿ ಇವೆ. ಹೀಗಾಗಿ ಸರ್ಕಾರಿ ಆದೇಶವೂ ಹೊರಬಿದ್ದಿಲ್ಲ. 
ಜಲಸಂಪನ್ಮೂಲ ಇಲಾಖೆ ವ್ಯಾಪ್ತಿಯಲ್ಲಿ 1,563 ಕೋಟಿ ರು.ವೆಚ್ಚದಲ್ಲಿ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಆಯವ್ಯಯದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದರು. ಈ ಪೈಕಿ ಕೆರೂರ ಏತ ನೀರಾವರಿ ಯೋಜನೆ(300 ಕೋಟಿ ರು.), ನಂದವಾಡಗಿ ಏತ ನೀರಾವರಿ ಯೋಜನೆ(200 ಕೋಟಿ ರು.,), ಕೊಪ್ಪಳ ಏತ ನೀರಾವರಿ ಯೋಜನೆ(210 ಕೋಟಿ ರು.), ಹೊರ್ತಿ-ರೇವಣಸಿದ್ದೇಶ್ವರ(250 ಕೋಟಿ ರು.,) ಕಂಪ್ಲಿ ಏತ ನೀರಾವರಿ ಯೋಜನೆ(75 ಕೋಟಿ ರು.,) ಸಿದ್ದಾಪುರ ಸೌಕೂರು ಏತ ನೀರಾವರಿ ಯೋಜನೆ(50 ಕೋಟಿ) ಸೇರಿದಂತೆ ಒಟ್ಟು 69,500 ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಹಲವು ಏತ ನೀರಾವರಿ ಯೋಜನೆಗಳನ್ನು ಘೋಷಿಸಲಾಗಿತ್ತು. 

ಹಾಗೆಯೇ 1,680 ಕೋಟಿ ರು.ವೆಚ್ಚದಲ್ಲಿ ಕೆರೆ ತುಂಬಿಸುವ ಯೋಜನೆ, 445 ಕೋಟಿ ರು.ವೆಚ್ಚದಲ್ಲಿ ಕೆರೆಗಳ ಸಮಗ್ರ ಅಭಿವೃದ್ಧಿ ಕಾಮಗಾರಿ, 477 ಕೋಟಿ ರು.ವೆಚ್ಚದಲ್ಲಿ ನೀರಾವರಿ ಯೋಜನೆ, 860 ಕೋಟಿ ರು.ವೆಚ್ಚದಲ್ಲಿ ಕಾಲುವೆ ಆಧುನೀಕರಣ ಕಾಮಗಾರಿ, ಭಾರೀ ಮತ್ತು ಮಧ್ಯಮ ನೀರಾವರಿ ಯೋಜನೆಗಳ ವ್ಯಾಪ್ತಿಯಲ್ಲಿ 506 ಕೋಟಿ ರು.ವೆಚ್ಚದಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಸೇರಿದಂತೆ ಒಟ್ಟು 71 ಯೋಜನೆಗಳನ್ನು ಘೋಷಿಸಲಾಗಿತ್ತು.  ಆದರೆ ಈ ಸಂಬಂಧ ಒಂದೇ ಒಂದು ಕ್ರಿಯಾ ಯೋಜನೆ ಯೋಜನೆ ಇಲಾಖೆಗೆ ತಲುಪಿಲ್ಲ ಎಂಬುದು ಯೋಜನೆ, ಸಾಂಖ್ಯಿಕ ಇಲಾಖೆಯ ಪ್ರಗತಿ ಪರಿಶೀಲನೆಯಿಂದ ಗೊತ್ತಾಗಿದೆ.

ಅದೇ ರೀತಿ ಕನ್ನಡ ಸಂಸ್ಕೃತಿ ಇಲಾಖೆಗೆ ಸಂಬಂಧಿಸಿದಂತೆ 14 ಘೋಷಣೆಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ 12, ಹಿಂದುಳಿದ ವರ್ಗಗಳ ಕಲ್ಯಾಣ 9, ಅರಣ್ಯ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ, ಕಾರ್ಮಿಕ, ಯುವಜನಸೇವೆ, ಒಳಾಡಳಿತ, ರೇಷ್ಮೆ ಇಲಾಖೆಗಳಿಗೆ ತಲಾ 7 , ತೋಟಗಾರಿಕೆ 5, ಪಶುಸಂಗೋಪನೆ 5, ನಗರಾಭಿವೃದ್ಧಿ(ಪೌರಾಡಳಿತ) 4, ಸಮಾಜ ಕಲ್ಯಾಣ 3, ಸಾರಿಗೆ 3, ಕೌಶಲ್ಯಾಭಿವೃದ್ಧಿ 2, ಆಹಾರ ಇಲಾಖೆಗೆ 2 ಘೋಷಣೆ ಮಾಡಲಾಗಿತ್ತಾದರೂ ಈ ಪೈಕಿ ಒಂದೇ ಒಂದು ಸರ್ಕಾರಿ ಆದೇಶ ಹೊರಬಿದ್ದಿಲ್ಲ
.
ಇನ್ನು, 2019-20ನೇ ಸಾಲಿನ ಮಹಿಳಾ ಉದ್ದೇಶಿತ ಆಯವ್ಯಯದ 'ಬಿ'ವರ್ಗೀಕರಣದ ಕಥೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಆಹಾರ ಇಲಾಖೆ ಸೇರಿದಂತೆ ಒಟ್ಟು 32 ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು ಒದಗಿಸಿದ್ದ 47,466.11 ಕೋಟಿ ರು.ಅನುದಾನದ ಪೈಕಿ 9,512.94 ಕೋಟಿ ರು.ಮಾತ್ರ ಮಹಿಳೆಯರಿಗೆ ಮೀಸಲಿಡಲಾಗಿದೆ. ಇದರಲ್ಲಿ ಬಿಡುಗಡೆಯಾಗಿದ್ದು 2,156 ಕೋಟಿ ರು.ಮಾತ್ರ. ಆಹಾರ ಇಲಾಖೆಯಲ್ಲಿ 3,874.69 ಕೋಟಿ ರು., ಕಾನೂನು ಇಲಾಖೆ 3 ಕೋಟಿ ರು, ಸಾರಿಗೆ ಇಲಾಖೆ 423.45 ಕೋಟಿ ರು., ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆ 13 ಕೋಟಿ ರು., ಕಾರ್ಮಿಕ 172.73 ಕೋಟಿ ರು., ವೈದ್ಯಕೀಯ ಶಿಕ್ಷಣ 2,018.30 ಕೋಟಿ ರು., ಮುಜರಾಯಿ 15.80 ಕೋಟಿ ರು., ನಗರಾಭಿವೃದ್ಧಿ ಇಲಾಖೆಗೆ 51 ಕೋಟಿ ರು.ಅನುದಾನ ಒದಗಿಸಿತ್ತಾದರೂ ಈ ಪೈಕಿ ಬಿಡಿಗಾಸನ್ನೂ ಮಹಿಳೆಯರಿಗಾಗಿ ಮೀಸಲಿಡದಿರುವುದು ದಾಖಲೆಯಿಂದ ತಿಳಿದು ಬಂದಿದೆ.

47,466.11 ಕೋಟಿ ರು.ಪೈಕಿ ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯದವರೆಗೆ ಆಗಿರುವ ಒಟ್ಟು ಖರ್ಚು 699.54 ಕೋಟಿ ರು.ಮಾತ್ರ. ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ವಸತಿ ಶಾಲೆಗಳ ನಿರ್ಮಾಣ, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ವಿದೇಶಿ ವ್ಯಾಸಂಗ ವಿದ್ಯಾರ್ಥಿ ವೇತನ, ನಾಗರಿಕ ಸೇವಾ ತರಬೇತಿ, ಗಂಗಾ ಕಲ್ಯಾಣ, ಸ್ವ ಉದ್ಯೋಗ ಯೋಜನೆ, ಭೂ ಖರೀದಿ ಯೋಜನೆಗೆ ವಾರ್ಷಿಕ ಅನುದಾನವೆಂದು ಒಟ್ಟು 942.5 ಕೋಟಿ ರು.ಗಳನ್ನು ಒದಗಿಸಲಾಗಿದೆಯಾದರೂ 2019ರ ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯದವರೆಗೆ ಆರ್ಥಿಕ ಪ್ರಗತಿಯಲ್ಲಿ ಆಗಿರುವುದು ಶೂನ್ಯ ಸಂಪಾದನೆಯಷ್ಟೇ. 

ಹಾಗೆಯೇ ಕೌಶಲ್ಯಾಭಿವೃದ್ಧಿ ಇಲಾಖೆಗೆ ವಿವಿಧ ಯೋಜನೆಗಳಿಗೆ 359.09 ಕೋಟಿ ರು. ವಾರ್ಷಿಕ ಅನುದಾನ ಪೈಕಿ ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯಕ್ಕೆ  10.46 ಕೋಟಿ ರು.ಖರ್ಚಾಗಿರುವುದು ತಿಳಿದು ಬಂದಿದೆ.