ಗುಳೆ ಹೊರಟವರ ಹಾಡುಪಾಡು!

ಗುಳೆ ಹೊರಟವರ ಹಾಡುಪಾಡು!

ಸಹೃದಯಿ ಗೆಳೆಯ ರಾಮಪ್ಪ ಮಾದರ ನನಗೆ ಪರಿಚಯ ಆಗಿದ್ದು ಕವಿಮಿತ್ರ ಫೀರ ಭಾಷಾ ಮೂಲಕ. 2002/3ರಲ್ಲೊಮ್ಮೆ  ಸಮಕಾಲೀನ ಸಾಹಿತ್ಯಿಕ, ಸಾಂಸ್ಕೃತಿಕ ಸಂಗತಿ, ದಿಕ್ಕುದೆಸೆಗಳನ್ನು ಚರ್ಚಿಸುವ ನೆಪದಲ್ಲಿ ಕನ್ನಡದ ಯುವ ಬರಹಗಾರರನ್ನು ಒಂದೆಡೆ ಸೇರಿಸುವ ಪ್ರಯತ್ನವನ್ನು ಅವರು ಮಾಡಿದ್ದರು.  ಆಗ ಒಂದು ದಿನ ನಾನು ಹೂವಿನಹಡಗಲಿಯಲ್ಲೆ ಉಳಿದು ಬಂದಿದ್ದರಿಂದ ರಾಮಪ್ಪ ಮಾದರ ಹೆಚ್ಚು ಆಪ್ತರಾಗಿದ್ದರು. ಆಗಲೇ ಕವನ ಸಂಕಲನವೊಂದನ್ನೂ ಪ್ರಕಟಿಸಿದ್ದ ರಾಮಪ್ಪ ಶೋಷಿತ ವರ್ಗದ ಆರ್ತ ದನಿಯನ್ನು ಕನ್ನಡದಲ್ಲಿ ಅನುರಣಿಸಿದ್ದರು.

ಇದಾಗಿ ಐದಾರು ವರುಷಗಳ ನಂತರ ಸುಣಕಲ್ ಬಿದರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಅದೇ ಆಗ ವೃತ್ತಿ ಜೀವನ ಆರಂಭಿಸಿದ್ದ ಕವಿಮಿತ್ರ ಮಲ್ಲಿಕಾರ್ಜುನ‌ಗೌಡರೂ ರಾಣೇಬೆನ್ನೂರಿಗೆ ಬಂದರು. ಅದೇ ಸಂದರ್ಭದಲ್ಲಿ ರಾಮಪ್ಪ ಮಾದರ ಕೂಡ ರಾಣೇಬೆನ್ನೂರಿನ ಕಾಲೇಜೊಂದರಲ್ಲಿ ತಾತ್ಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ವಿಷಯವನ್ನು ನನಗೆ ಹೇಳಿದರು. ರಾಣೇಬೆನ್ನೂರಿನ ದೊಡ್ಡಪೇಟೆಯಲ್ಲಿ ರೂಮ್ ಮಾಡಿಕೊಂಡಿದ್ದ ರಾಮಪ್ಪ ಅವರನ್ನು ಭೇಟಿಯಾಗಲು ನಾನು ಮಲ್ಲಿಕಾರ್ಜುನಗೌಡರು ಆಗಾಗ ಅಲ್ಲಿಗೆ ಹೋಗುತಿದ್ದೆವು. ತಳ ಸಮುದಾಯದಲ್ಲಿ ಹುಟ್ಟಿ ಬೆಳೆದ ರಾಮಪ್ಪರ ಬದುಕಿನ ತಲ್ಲಣ, ತಳಮಳಗಳು, ಎದುರಿಸಿದ ಆತಂಕ, ಅಡೆತಡೆಗಳು ನಮ್ಮನ್ನು ವಿಷಣ್ಣರನ್ನಾಗಿಸುತಿದ್ದವು. ಎಲ್ಲ ಸಂಕಷ್ಟಗಳನ್ನೂ ಮೆಟ್ಟಿ ಬದುಕನ್ನು ಕಟ್ಟಿಕೊಳ್ಳುವ ಹಾದಿಯಲ್ಲಿ ಅವರು ತೋರಿದ ತಾಳ್ಮೆ, ನಿಭಾಯಿಸಿದ ಹೊಣೆಗಾರಿಕೆಗಳನ್ನು ನೆನೆದಾಗೆಲ್ಲ ನಾನು ಮೂಕವಿಸ್ಮಿತನಾಗುತ್ತೇನೆ.

ರಾಮಪ್ಪರ ಊರು ಹೂವಿನಹಡಗಲಿ ತಾಲೂಕು ಕೋಟಿಹಾಳ. ಕತ್ತೆಬೆನ್ನೂರು, ಮಕರಬ್ಬಿ, ಹೀರೆಬನ್ನಿಮಟ್ಟಿ ಸುತ್ತಮುತ್ತಲಿನ ಊರುಗಳು. ಕೋಟಿಹಾಳ ಹೂವಿನ ಹಡಗಲಿ ತಾಲೂಕಿಗೆ ಸೇರಿದ್ದರೂ, ಆ ಭಾಗದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಹೆಚ್ಚಾಗಿ ರಾಣೇಬೆನ್ನೂರು, ಹಾವೇರಿ ಮಾರುಕಟ್ಟೆ‌ಗಳಿಗೆ ಒಯ್ಯುತಿದ್ದರಿಂದ ತುಂಗಭದ್ರಾ ನದಿಯ ಈಚೆಯ ಸಂಸ್ಕೃತಿ, ಆಚಾರವಿಚಾರಗಳು ಅವರ ನಡೆನುಡಿ, ವ್ಯವಹಾರಗಳಲ್ಲಿ ಪ್ರತಿಫಲಿಸುತ್ತವೆ. ಕೋಟಿಹಾಳ ಕೂಡ ಇದಕ್ಕೆ ಹೊರತಾಗಿರಲಿಲ್ಲ. ನಗರಪಟ್ಟಣಗಳಿಂದ ಬಹುದೂರ ಇರುವ ಇಂಥ ಹಳ್ಳಿಗಳಲ್ಲಿ ಕೃಷಿಯೇ ಮುಖ್ಯ ಕಸುಬು. ಹೀಗಾಗಿ ಇಲ್ಲಿನ ಕೃಷಿಕಾರ್ಮಿಕರದು ಸದಾ ಸಂಧಿಗ್ದ ಸ್ಥಿತಿ. ಆ ವರ್ಷ ಮಳೆ ಬೆಳೆ ಚೆನ್ನಾದರೆ ಮಾತ್ರ ಇವರಿಗೆ ಸಾಕಷ್ಟು ಕೆಲಸ ಸಿಗುತ್ತವೆ. ಬರಗಾಲ ಬಿದ್ದರೆ ಕೆಲಸ ಹುಡುಕಿಕೊಂಡು ಬೇರೆಡೆಗೆ ಹೋಗಲೇಬೇಕಾದ ಅನಿವಾರ್ಯ.

ಮೆಣಸಿನಕಾಯಿ ಬಿಡಿಸಲು ಇವರು ಎರೆಸೀಮೆಯತ್ತ ನಡೆದರೆ ಅದೆ ಮೆಣಸಿನ ಸುಗ್ಗಿ.  ಶೇಂಗಾ ಕೀಳಲು, ಕಾಯಿ ಹರಿಯಲು ಹೊಳೆಸಾಲ ಹಳ್ಳಿಗಳಿಗೆ ತೆರಳಿದರೆ ಅದೇ ಇವರಿಗೆ ಶೇಂಗಾ ಸುಗ್ಗಿ. ಇದಲ್ಲದೇ ಕೆಲವರು ಗುಂಪು ಗುಂಪಾಗಿ ಕಾಫಿಸೀಮೆಗೋ, ಗೋವಾಕ್ಕೊ ಗುಳೆ ಹೋಗುವುದೂ ಇಲ್ಲಿ ಸಾಮಾನ್ಯ. 

ರಾಮಪ್ಪ ರ ಅಪ್ಪನ ಹೆಸರು ಯಮುನಪ್ಪ, ತಾಯಿ ಮೈಲವ್ವ. ಈ ದಂಪತಿಗೆ ಮೂವರು ಹೆಣ್ಣುಮಕ್ಕಳು ಸೇರಿದಂತೆ ಎಂಟುಜನ ಮಕ್ಕಳು. ರಾಮಪ್ಪ ಹಿರಿಯ ಮಗ. ಆ ಊರಲ್ಲಿ ಹರಿಜನರ ನಾಲ್ಕಾರು ಕುಟುಂಬಗಳನ್ನು ಬಿಟ್ಟರೆ ತಳವಾರ ಹಾಗೂ ಜಂಗಮರ ಸಮುದಾಯದ ಕುಟುಂಬಗಳೆ ಹೆಚ್ಚಿದ್ದವು.

ಯಮುನಪ್ಪ ಮತ್ತು ಮೈಲಮ್ಮ ಇಬ್ಬರು ಕೂಲಿ ಮಾಡಿಯೇ  ಜೀವನ ನಿರ್ವಹಿಸಬೇಕಿತ್ತು. ನಾಲ್ಕೈದು ವರ್ಷದವನಿರುತ್ತಲೇ ರಾಮಪ್ಪನಿಗೆ ಆಡು ಮೇಯಿಸುವ ಜವಾಬ್ದಾರಿ ಬಿತ್ತು. ಅದು ತಮ್ಮಂದಿರಿಗೆ ವರ್ಗಾವಣೆಯಾಗುತ್ತ ದೊಡ್ಡವರಾದವರು ಅಪ್ಪ ಅವ್ವನ ಜೊತೆಗೆ ಕೂಲಿ ಕೆಲಸಕ್ಕೆ ಹೋಗಬೇಕಾಗಿತ್ತು. ಆಯಾ ಸುಗ್ಗಿಗೆ ಪರವೂರುಗಳಿಗೆ, ಬರ ಬಿದ್ದು ಗುಳೆ ಹೊರಟರೆ ದೂರದ ಊರುಗಳಿಗೂ ಇಡೀ ಕುಟುಂಬವೇ ವಲಸೆ ಹೋಗುತಿತ್ತು.

ಕೋಟಿಹಾಳದಲ್ಲಿ ಕಿರಿಯ ಪ್ರಾಥಮಿಕ ಶಾಲೆಯಷ್ಟೇ ಇತ್ತು. ಸಂಜೆ ಮುಂಜಾನೆ ಕಾಡುಮೇಡು ಅಲೆದು ಆಡು ಮೇಯಿಸುತ್ತಲೆ ರಾಮಪ್ಪ ಮೂರನೇಯ ಇಯುತ್ತೆಯನ್ನೂ ಪಾಸಾದ. ನಾಲ್ಕನೇಯ ತರಗತಿಗೆ ಹೋಗಬೇಕೆಂದರೆ ಸಮೀಪದ ಮಕರಬ್ಬಿಗೆ ಹೋಗಬೇಕಿತ್ತು. ಮಕರಬ್ಬಿಯ ಹಿರಿಯ ಪ್ರಾಥಮಿಕ ಶಾಲೆಯನ್ನೇನೋ ಸೇರಿದ್ದಾಯ್ತು. ಸಾಲಿ ಯಾವಾಗ ಬಿಡಿಸುತ್ತಾರೋ ಎಂಬ ಆತಂಕವೂ ಜೊತೆಗೆ ಇತ್ತು. ಇಂಥ ಸಂದರ್ಭದಲ್ಲಿ ಅಲ್ಲಿನ ವೀರಾಚಾರಿ ಎಂಬ ಶಿಕ್ಷಕರು ರಾಮಪ್ಪನ ಅಕ್ಷರಪ್ರೀತಿಗೆ ಮಾರು ಹೋದರು. ಕೆಲಸಕ್ಕೆಂದು ಮಕರಬ್ಬಿಗೆ ಬರುತಿದ್ದ ಯಮುನಪ್ಪನನ್ನು ಶಾಲೆಗೆ ಕರೆಸಿಕೊಂಡ ಅವರು,` ನಿಮ್ಮ ಹುಡುಗ ಬುದ್ಧಿವಂತನಿದ್ದಾನೆ, ಅಭ್ಯಾಸದಲ್ಲಿ ಮುಂದಿದ್ದಾನೆ. ನಿಮ್ಮ ಕಷ್ಟ ಕಾರ್ಪಣ್ಯದ ಮಧ್ಯೆ ಅವನ ಶಿಕ್ಷಣವನ್ನು ನಿಲ್ಲಿಸಬೇಡಿ. ಹೂವಿನ ಹಡಗಲಿಯಲ್ಲಿ ಹೀಗೆ ಬಡಮಕ್ಕಳಿಗಾಗಿಯೆ ಹಾಸ್ಟೇಲ್ ಇದೆ. ಅಲ್ಲಿ ನಿಮ್ಮ ಹುಡುಗನನ್ನು ಸೇರಿಸಿ. ಅವನು ನಿಮಗೂ ಭಾರವಾಗುವುದಿಲ್ಲ, ಯಾವುದೇ ಕಾರಣಕ್ಕೂ ರಾಮಪ್ಪನ ಶಿಕ್ಷಣಕ್ಕೆ ಅಡ್ಡಿಯಾಗಬೇಡಿ' ಎಂದು ತಿಳಿ ಹೇಳಿದರು. ಯಮೂನಪ್ಪನಿಗೂ ಮಾಸ್ತರು ಹೇಳಿದ ಮಾತು ಸರಿ ಎಣಿಸಿ, ರಾಮಪ್ಪನಿಗೆ ಹೂವಿನಹಡಗಲಿಯಲ್ಲಿ ವಿದ್ಯಾಭ್ಯಾಸ ಮುಂದುವರೆಸಲು ಅನುವು ಮಾಡಿಕೊಟ್ಟರು.

ಅದೊಂದು ಬೇಸಿಗೆಯಲ್ಲಿ ಕೆಲಸದಿಂದ ಬಂದು ಗುಡಿಸಲ ಬಳಿ ಕೈಕಾಲು ತೊಳೆದುಕೊಳ್ಳುತಿದ್ದ ಯಮುನಪ್ಪನಿಗೆ ಹಾವೊಂದು ಕಚ್ಚಿಬಿಟ್ಟಿತು. ಊರಲ್ಲಿ ಆಸ್ಪತ್ರೆ ಇಲ್ಲ. ಜಡ್ಡುಜಾಪತ್ರೆ ಏನೆ ಆದರು ಆ ಊರಿನವರು ಹತ್ತಾರು ಕಿಮೀ ದೂರದ ಹೊಳಲು ಇಲ್ಲವೇ ಹೀರೇ ಹಡಗಲಿಗೆ ಹೋಗಬೇಕು. ಯಾರನ್ನೋ ಕೇಳಿ, ಅವರ ಬೈಕು ಪಡೆದ ರಾಮಪ್ಪ ಅಪ್ಪನನ್ನು ಹೊಳಲಿಗೆ ಕರೆದುಕೊಂಡು ಬಂದ. ಅಲ್ಲಿ ವೈದ್ಯರು ತುರ್ತು ಚಿಕಿತ್ಸೆ ನೀಡಿ, `ಇಲ್ಲಿ ಹೆಚ್ಚಿನ ಔಷಧಿ, ಚುಚ್ಚುಮದ್ದುಗಳಿಲ್ಲ, ತಕ್ಷಣ ಅವರನ್ನು ದಾವಣಗೆರೆಗೆ ಕರೆದುಕೊಂಡು ಹೋಗಿ' ಎಂದರು.

ರಾಮಪ್ಪನ ಬಳಿ ನಯಾಪೈಸೆಯೂ ಇಲ್ಲ. ಹೊಳಲಿನಲ್ಲಿದ್ದ ಪರಿಚಿತರೊಬ್ಬರ ಬಳಿ ಪರಸ್ಥಿತಿಯನ್ನು ವಿವರಿಸಿ` ಒಂದಿಷ್ಟು ಹಣ ಸಾಲ ಕೊಡಿ, ಆಡು ಮಾರಿ ತೀರಿಸುತ್ತೇನೆ' ಎಂದರು. ಆತ ಊಂ ಎಂದು ಒಪ್ಪಿಕೊಂಡ. ಕೂಡಲೇ ಆಂಬುಲೆನ್ಸ್ ಕರೆಸಿ ಅಪ್ಪನನ್ನು ಹತ್ತಿಸಿ, ಆ ಮನುಷ್ಯನಲ್ಲಿಗೆ ಹಣ ಕೇಳಲು ಹೋದರೆ ಅವನು ಕೈಯೆತ್ತಿಬಿಟ್ಟ. ಅವತ್ತು ರಾತ್ರಿಯಿಡೀ ಅಲ್ಲೇ ಕಳೆದು , ಕೈಯಲ್ಲಿ ಕಾಸಿಲ್ಲದ ಕಾರಣಕ್ಕೆ ಅಪ್ಪನನ್ನು ಹೇಗೋ ಮರಳಿ ಮನೆಗೆ ಕರೆದುಕೊಂಡು ಬಂದಿದ್ದೇ ಸಮಾಧಾನದ ಸಂಗತಿಯಾಗಿತ್ತು. ಪುಣ್ಯಕ್ಕೆ ಕಚ್ಚಿದ್ದು ಅದ್ಯಾವುದೊ ಕೆರಿಗೊಡ್ಡು ಹಾವಾಗಿತ್ತೇನೋ. ಯಮುನಪ್ಪ ಅಷ್ಟಕ್ಕೆ ಆರಾಮವಾದ. ಆದರೆ ಹಾವು ಕಚ್ಚಿದ್ದ ಕಾಲು ದಿನದಿನಕ್ಕೆ ಬಾವು ಬರತೊಡಗಿತು. ಹಾಗೇ ಕೊಳೆಯತೊಡಗಿತು. ಮತ್ತೆ ಹೊಳಲಿನ ಆಸ್ಪತ್ರೆಯೇ ಗತಿಯಾಯ್ತು. ವೈದ್ಯರು ಕೊಳೆತ ಕಾಲಿನ ಭಾಗವನ್ನು ಕತ್ತರಿಸುವುದು ಅನಿವಾರ್ಯ ಎಂದರು. ಆನಂತರವೇ ಅದು ಮಾಯ್ದು ಯಮುನಪ್ಪ ಆರಾಮವಾದರು.

ರಾಮಪ್ಪ ಬಿಎಡ್ ವ್ಯಾಸಂಗ ಮಾಡುತ್ತಿರುವಾಗ ಊರಿನಲ್ಲೊಂದು ಅನಿರೀಕ್ಷಿತ ಘಟನೆ ಜರುಗಿತು. ರಾಮಪ್ಪನ ಸೋದರಸಂಬಂಧಿ ಹುಡುಗನೊಬ್ಬ ತಳವಾರ ಸಮುದಾಯದ ಯುವತಿಯೊಬ್ಬಳನ್ನು ಪ್ರೀತಿಸಿ ಅವರಿಬ್ಬರೂ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು. ರಾಮಪ್ಪ ಆ ಯುವತಿಯ ಮನೆಗೆ ತೆರಳಿ 'ಇದು ನಮಗೂ ಅನಿರೀಕ್ಷಿತ. ಇದರಲ್ಲಿ ನಮ್ಮ ಪಾತ್ರವೇನೂ ಇಲ್ಲ' ಎಂದು ಹೇಳಿ ಮಾತಾಡಿ ಬಂದಿದ್ದರು. ಆನಂತರದ ನಾಲ್ಕಾರು ದಿನಗಳಲ್ಲಿ ಊರಿನ ವಾತಾವರಣವೇ ಬದಲಾಗಿ ಬಿಟ್ಟಿತು. ಬಹುಸಂಖ್ಯಾತರಾಗಿದ್ದ ಅವರು ಬಂದು ಇವರ ಮೇಲೆ ದೌರ್ಜನ್ಯ ಮಾಡತೊಡಗಿದರು. ಅದು ಬರುಬರುತ್ತ ಅತಿಯಾಗಿ ಇನ್ನು ನಾವಿಲ್ಲಿ ಬದುಕುವುದೇ ಅಸಾಧ್ಯ ಎಂಬಲ್ಲಿಗೆ ಬಂದು ನಿಂತಿತು. ಆಗ ರಾಮಪ್ಪ ತಂದೆ ಹಾಗೂ ತಮ್ಮ, ತಂಗಿಯರನ್ನು ಕರೆದುಕೊಂಡು ಬ್ಯಾಲಹುಣಶಿ ಎಂಬ ಹಳ್ಳಿಗೆ ಬಂದು ಅಲ್ಲೆ ನೆಲೆಯೂರಬೇಕಾಯಿತು. ಅವ್ವ ನೀಲಮ್ಮನನ್ನು ಆಕೆಯ ತವರುಮನೆ ಹೊಳೆ ಇಟಗಿಗೆ ಕಳಿಸಿದರು. ಈ ಎಲ್ಲವನ್ನು ಕಂಡು ರೊಚ್ಚಿಗೆದ್ದ ರಾಮಪ್ಪ ಜಾತಿನಿಂದನೆ ಹಾಗೂ ದೌರ್ಜನ್ಯ‌ದ ಪ್ರಕರಣ ದಾಖಲಿಸಿದರು. ಅವರು ಇವರ ಮೇಲೆ ಹಲ್ಲೆ, ಕೊಲೆ ಯತ್ನದ ಪ್ರಕರಣ ದಾಖಲಿಸಿದರು. ಪ್ರತಿಷ್ಟೆ, ಪ್ರಭಾವಗಳ ಮುಂದೆ ಅಂತಃಕರಣವೇ ಕುರುಡಾಗಿ, ಮಾನವೀಯತೆಯೆ ಮುಸುಕಾಗಿ ನ್ಯಾಯ ನಿಲುಕದ ನಕ್ಷತ್ರವಾಗಿತ್ತು. ಹಲವಾರು ವರ್ಷಗಳ ಕೋರ್ಟು ಕಚೇರಿಗಳ ಅಲೆದಾಟದ ಕೊನೆಗೆ  ಪ್ರೇಮಿಗಳಿಬ್ಬರನ್ನು ಬೇರ್ಪಡಿಸುವಲ್ಲಿಗೆ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿತ್ತು‌.

ರಾಮಪ್ಪ ಮಾದರ ಈಗ ಹೂವಿನ ಹಡಗಲಿಯ ಉತ್ತಂಗಿಯಲ್ಲಿ ಪ್ರೌಢಶಾಲೆ‌ಯಲ್ಲಿ ಶಿಕ್ಷಕರಾಗಿದ್ದಾರೆ. ಅವರ ಬದುಕಿನೆಡೆಗೆ ಹೊರಳಿ ನೋಡಿದಾಗೆಲ್ಲ ಅವರು ಎದುರಿಸಿದ ಸಂಕಟಗಳೆಲ್ಲ ನಮ್ಮ ಸಾಮಾಜಿಕ ಬದುಕಿನ ವೈರುಧ್ಯಗಳಿಗೆ ಕನ್ನಡಿ ಹಿಡಿದಂತಾಗಿ, ನಮ್ಮೆಲ್ಲರ ಪರಮ ಉದಾಸೀನತೆಯ ಪರಿಣಾಮ ಕೈ ಜಾರಿ ಬಿದ್ದು ಒಡೆದ ಆ ಕನ್ನಡಿಯ ಚೂರುಗಳಲ್ಲಿ ನಮ್ಮ ಬಿಂಬವೇ ಕಂಡಂತಾಗಿ ಒಂದು ಕ್ಷಣ ಕತ್ತಲೆ ಕವಿದಂತಾಗುತ್ತದೆ