ಗ್ರಂಥಾಲಯದಲ್ಲಿ ಪುಸ್ತಕ ಖರೀದಿಗೆ ವಿಘ್ನ : ಓದುವ ಸಂಸ್ಕೃತಿಗೆ ಬೀಳಲಿದೆ ಗುನ್ನಾ

ಪುಸ್ತಕ ಖರೀದಿಯಲ್ಲಿ ಉಪೇಕ್ಷೆಗಳು ಹೀಗೇ ಮುಂದುವರಿದರೆ, ಸಾಕ್ಷರತಾ ಲೋಕಕ್ಕೂ, ಗ್ರಂಥಾಲಯಗಳಿಗೂ ಗರ ಬಡಿಯುವುದು ಖಚಿತ.

ಗ್ರಂಥಾಲಯದಲ್ಲಿ ಪುಸ್ತಕ  ಖರೀದಿಗೆ ವಿಘ್ನ  : ಓದುವ ಸಂಸ್ಕೃತಿಗೆ  ಬೀಳಲಿದೆ ಗುನ್ನಾ

ಜ್ಞಾನದ ಖಜಾನೆ, ಮನು ಕುಲದ ಅಭಿವೃದ್ದಿಯ ದ್ಯೋತಕ, ಅತ್ಯುತ್ತಮ ಜೀವನ ಸಂಗಾತಿ ಹೀಗೇ ಹೇಗೆಲ್ಲ ಬೇಕಾದರೂ ಕರೆಸಿಕೊಳ್ಳಬಹುದಾದ ಪುಸ್ತಕಗಳು ಮತ್ತು ಅದು ಸಾರ್ವಜನಿಕವಾಗಿ ಸಿಗುವ ಗ್ರಂಥಾಲಯಗಳು ತನ್ನದೇ ಆದ ಪರಂಪರೆ -ಇತಿಹಾಸವನ್ನೊಂದಿವೆ.

1836 ರಲ್ಲೇ ಸಾರ್ವಜನಿಕ ಗ್ರಂಥಾಲಯವನ್ನ ದ್ವಾರಕಾನಾಥ್ ಟಾಗೂರ್ ಆರಂಭಿಸಿದ್ದರು. 1946 -47 ರ ಅವಧಿಯಲ್ಲೇ ವಿಶ್ವವಿದ್ಯಾಲಯಗಳಲ್ಲಿ ಗ್ರಂಥಾಲಯ ಕುರಿತ ಸ್ನಾತಕೋತ್ತರ ಡಿಪ್ಲೊಮೊ ಕೋರ್ಸುಗಳು ಆರಂಭಗೊಂಡವು. ಭಾರತದ ಗ್ರಂಥಾಲಯಗಳ ಪಿತಾಮಹ  ಎಸ್.ಆರ್.ರಂಗನಾಥನ್ ಅವರಿಂದಾಗಿ ನಮ್ಮ ರಾಷ್ಟ್ರದಲ್ಲಿ ಪುಸ್ತಕ ಸಂಸ್ಕೃತಿ ಗಟ್ಟಿಯಾಗಿ ಬೆಳೆದಿದೆ.

ಕರ್ನಾಟಕದಲ್ಲೂ ಕೂಡ ಓದಿನ ಅಭಿರುಚಿ ಬೆಳೆಸಲು, ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನೂ, ಸಗಟು ಹಾಗು ಇತ್ಯಾದಿ ಪುಸ್ತಕ ಖರೀದಿ ಯೋಜನೆಗಳನ್ನೂ ಜಾರಿಗೆ ತಂದಿದೆ.  ಪಾಲಿಕೆಗಳು ಸ್ಥಳೀಯ ಸಂಸ್ಥೆಗಳು  ಗ್ರಂಥಾಲಯ ಕರವನ್ನೂ ಸಾರ್ವಜನಿಕರಿಂದ ವಸೂಲಿ ಮಾಡುತ್ತವೆ. ಅದನ್ನ ಮತ್ತು ಸರ್ಕಾರದ ಅನುದಾನವನ್ನ ಪುಸ್ತಕ ಖರೀದಿಗೆ ಬಳಸಬೇಕು ಎಂಬ ಕಾನೂನಿದೆ.

ಇದರನುಸಾರ ಬಿಬಿಎಂಪಿ ವ್ಯಾಪ್ತಿಯಲ್ಲೇ 250 ಗ್ರಂಥಾಲಯಗಳಿದ್ದು, ಬೇರೆ ಬೇರೆ ಕಡೆ 26 ನಗರ ಕೇಂದ್ರ ಗ್ರಂಥಾಲಯಗಳು, ಅದರ 490 ಶಾಖೆಗಳೂ ಇವೆ.  ಪಂಚಾಯತ್ ರಾಜ್ ಅಡಿಯಲ್ಲಿ 5766 ಗ್ರಾಮಪಂಚಾಯತ್ ಗ್ರಂಥಾಲಯಗಳಿವೆ. ಇವೆಲ್ಲಕ್ಕೂ ಪುಸ್ತಕ ಖರೀದಿಗೆ ಸರ್ಕಾರೀ ಅನುದಾನವೂ ಇದೆ, ಸ್ಥಳೀಯವಾಗಿ ಸಂಗ್ರಹಿಸುವ ಶುಲ್ಕವೂ ಇದೆ. ಹೀಗೆ ಪ್ರತಿ ವರ್ಷ 25 ಕೋಟಿ ರು.ಗೂ ಹೆಚ್ಚಿನ ಪುಸ್ತಕಗಳನ್ನ ಖರೀದಿಸಲಾಗುತ್ತೆ.

2006 ಇಸವಿವರೆಗೂ ಒಂದು ಪ್ರಕಾಶನ ಸಂಸ್ಥೆಯಿಂದ ಗರಿಷ್ಟ ರು.50 ಸಾವಿರವರೆಗೆ ಗ್ರಂಥ ಖರೀದಿಸಲಾಗುತ್ತಿತ್ತು, ಈ ಗರಿಷ್ಠ ಮೊತ್ತ ಈಗ ಒಂದು ಲಕ್ಷ ರು.ಗಳಾಗಿದೆ.  ಪುಸ್ತಕ ಆಯ್ಕೆಗಾಗಿಯೇ ಸರ್ಕಾರವೇ ಸಮಿತಿಯನ್ನೂ ರಚಿಸುತ್ತೆ. ಕನಿಷ್ಟವೆಂದರೂ ವರ್ಷಕ್ಕೆ ಹೊಸದಾಗಿ ಎರಡೂವರೆಯಿಂದ ಮೂರು ಸಾವಿರದಷ್ಟು ಹೊಸಾ ಪುಸ್ತಕಗಳು ಬರುತ್ತವೆ. ಇಷ್ಟೂ ಪುಸ್ತಕಗಳನ್ನ ಆಯ್ಕೆ ಸಮಿತಿ ಓದಲಾಗಲ್ಲ, ಹೀಗಾಗಿ ರಕ್ಷಾಪುಟ ಬದಲಿಕೆ, ಶೀರ್ಷಿಕೆಯಲ್ಲಿ ಬದಲಾವಣೆ, ಅಧ್ಯಾಯಗಳನ್ನ ಹಿಂದೆ ಮುಂದೆ ಮಾಡುವುದು ಇತ್ಯಾದಿಯಂಥ ಅಡ್ಡ ಮಾರ್ಗದ ಮೂಲಕ ಹಣ ಮಾಡಿಕೊಳ್ಳುವ ಪುಸ್ತಕ ಪ್ರಕಾಶಕರ ಧಂದೆಯೂ ಇದೆ. ಕೇವಲ ಗ್ರಂಥಾಲಯ ಖರೀದಿಯನ್ನೇ ನೆಚ್ಚಿಕೊಂಡಿರುವ ಸಂಸ್ಥೆಗಳೂ ಅನೇಕವಿವೆ.

ಪುಸ್ತಕ ಖರೀದಿಯನ್ನ ಗ್ರಂಥಾಲಯ ಇಲಾಖೆಯೇ ಮಾಡಬೇಕು ಎಂಬುದನ್ನೀಗ ವಿಕೇಂದ್ರೀಕರಣಗೊಳಿಸಲು, ಆಯಾ ಜಿಲ್ಲಾ ಮಟ್ಟಕ್ಕೆ ಇದನ್ನ ಸೀಮಿತಗೊಳಿಸುವ ಉದ್ದೇಶವೂ ಇದೆ, ಕೆಲವಷ್ಟು ಗ್ರಂಥಾಲಯಗಳ ಖರೀದಿಯನ್ನ ಕೇಂದ್ರೀಕೃತ ವ್ಯವಸ್ಥೆಯಿಂದ ಹೊರಗಿಡಲಾಗಿದೆ.  ಪಂಚಾಯತ್ ರಾಜ್ ಇಲಾಖೆಯವರು ನಮ್ಮ ಹಣ ಕೊಟ್ಟು, ಗ್ರಂಥಾಲಯ ಇಲಾಖೆ ಆರಿಸಿದ ಪುಸ್ತಕ ಏಕೆ ಪಡೆಯಬೇಕು, ನಮ್ಮ ಹಣ,,ಆಯ್ಕೆಯೂ ನಮ್ಮದೇ ಇರಬೇಕು ಎಂಬ ವಾದವಿಟ್ಟಿರುವುದರಿಂದ ಆಯಾ ಜಿಲ್ಲಾ ಪಂಚಾಯತ್‍ಗಳು, ಪುರಸಭೆ, ಮಹಾನಗರಪಾಲಿಕೆಗಳಿಗೇ ಆಯ್ಕೆ ಮತ್ತು ಖರೀದಿ ಅಧಿಕಾರ ಕೊಡುವ ಸಂಬಂಧದ ಪ್ರಸ್ತಾಪಗಳಿವೆ. ಇಂಥ ವಿಕೇಂದ್ರೀಕರಣ ವ್ಯವಸ್ಥೆಯಾದರೆ, ಪ್ರಕಾಶಕರು ತಮ್ಮ ಗ್ರಂಥಗಳ ಖರೀದಿಗಾಗಿ ಪ್ರತೀ ಜಿಲ್ಲೆಗೂ ಓಡಾಡಬೇಕಾಗುತ್ತೆ. ಈಗ ಒಂದೇ ಕಡೆ ಆಯ್ಕೆಯಾಗಿ, ಒಂದೇ ಕಡೆಗೆ ಪುಸ್ತಕಗಳನ್ನ ಕೊಟ್ಟರೆ, ಅದನ್ನ ರಾಜ್ಯದಾದ್ಯಂತ ವಿತರಿಸುವ ಕೆಲಸ ಗ್ರಂಥಾಲಯ ಇಲಾಖೆಯೇ ಮಾಡುತ್ತಿದೆ. ಹೀಗೆ ಪುಸ್ತಕ ಇಟ್ಟುಕೊಳ್ಳಲು ತನ್ನದೇ ದೊಡ್ಡ ಸಂಗ್ರಹ ಸ್ಥಳವನ್ನೊಂದಿರುವ ಜತೆಗೆ, ಕಲ್ಯಾಣ ಮಂಟಪವನ್ನ ಬಾಡಿಗೆಗೆ ತೆಗೆದುಕೊಳ್ಳುವಂಥದೂ ಇದೆ. 

ಗ್ರಂಥ ಖರೀದಿಗೆ ಕೊಡುವ ಅನುದಾನವನ್ನ ಪುಸ್ತಕ ಸಾಗಣೆಗೆ, ಹಂಚಿಕೆಗೆ ವ್ಯಯ ಮಾಡುವುದೇಕೆ  ಎಂಬ ತಕರಾರನ್ನ ಲೆಕ್ಕ ಪರಿಶೋಧಕರು ಎತ್ತಿರುವಂಥದ್ದೂ ಇದೆ.

ಇವೆಲ್ಲಕ್ಕಿಂತ ಮುಖ್ಯವಾಗಿ ವಾರ್ಷಿಕವಾಗಿ ಇಪ್ಪತ್ತೈದಕ್ಕೂ ಹೆಚ್ಚು ಕೋಟ್ಯಂತರ ರೂಪಾಯಿ ವಹಿವಾಟಿರುವ ಇಲ್ಲಿ, ಪ್ರಕಾಶಕರು ಹೇಗೆ ಹಣ ಮಾಡಿಕೊಳ್ಳಲು ಅಡ್ಡದಾರಿ ಕಂಡುಕೊಂಡಿದ್ದಾರೋ, ಇಲಾಖೆಯವರೂ ಅಂಥದ್ದರಲ್ಲಿ ಹಿಂದೆ ಬಿದ್ದಿಲ್ಲ.  ಇಂಥದ್ದರ ಕುರುಹಾಗಿಯೇ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್ ಕುಮಾರ್ ಎಸ್. ಹೊಸಮನಿ ಅಮಾನತಿಗಾಗಿ ಶಿಫಾರಸು ಮಾಡಿದ್ದಾರೆ (ಪತ್ರ ಸಂಖ್ಯೆ 15630/2019  02/03/2019) ಆದರೆ ಕ್ರಮ ಜರುಗಿಸಿಲ್ಲ. ಇದು ಒಂದು ಕತೆ.

ಮತ್ತೊಂದು ಕತೆ ಎಂದರೆ, 2015-16-17 ರ ಸಾಲಿನ ಪುಸ್ತಕ ಖರೀದಿಯ ಬಿಲ್‍ಗಳನ್ನೆ ಪಾವತಿಸಿಲ್ಲ.  ಬಿಬಿಎಂಪಿಯೊಂದರಿಂದಲೇ ಗ್ರಂಥಾಲಯ ಕರ ಬಾಬ್ತಿನಲ್ಲಿ 350 ಕೋಟಿ ರು. ಬಾಕಿಯಿದೆ. ಜತೆಗೆ ಪ್ರಕಾಶಕರು ಗರಿಷ್ಟ ಮೊತ್ತ ಮಿತಿ ಹೆಚ್ಚಿಸಿ, ಖರೀದಿ ದರವನ್ನ ಹೆಚ್ಚಿಸಿ ಎಂದು ಅವಲತ್ತುಕೊಳ್ಳುತ್ತಲೇ ಇದ್ದಾರೆ. ಶಿಕ್ಷಣ ಇಲಾಖೆ ಸಚಿವರು ಇತ್ತ ಗಮನಿಸುತ್ತಲೂ ಇಲ್ಲ. ಬದಲಿಗೆ ಯಾವ ಊರಿಗೋದೆ, ಯಾವ ರಸ್ತೆಯಲ್ಲಿ ಯಾರು ಸಿಕ್ಕಿದರು ಎಂಬುದರ ವಿವರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪಕ್ಕೆ ತುತ್ತಾಗಿದ್ದಾರೆ

ಹಳೆಯ ಪುಸ್ತಕಗಳನ್ನ ಇಡುವುದಕ್ಕೇ ಜಾಗ ಇಲ್ಲ, ಇನ್ನು ಹೊಸದಾಗಿ ಖರೀದಿಸಿ ಏನು ಮಾಡುವುದು ಎಂಬ ಕಾರಣ ಹಾಗು ಇದಕ್ಕೂ ಮಿಗಿಲಾಗಿ ಡಿಜಿಟಲ್‍ಮಯವಾಗುತ್ತಿರುವುದರಿಂದ ಪುಸ್ತಕ ಖರೀದಿ ಸಂಖ್ಯೆ ಇಳಿಸುತ್ತಾ ಹೋಗಬೇಕು ಎಂದು ಇಲಾಖಾ ಕಾರ್ಯದರ್ಶಿ ಆಲೋಚಿಸಿರುವುದರಿಂದಾಗಿ ಪುಸ್ತಕ ಪ್ರಪಂಚಕ್ಕೆ ಗ್ರಹಣ ಯಾವಾಗ ಬೇಕಾದರೂ ಕವಿಯಬಹುದೆಂಬ ದಿಗಿಲುಗಳಿವೆ.

ಪುಸ್ತಕ ಖರೀದಿಯಲ್ಲಿ ಉಪೇಕ್ಷೆಗಳು ಹೀಗೇ ಮುಂದುವರಿದರೆ, ಸಾಕ್ಷರತಾ ಲೋಕಕ್ಕೂ, ಗ್ರಂಥಾಲಯಗಳಿಗೂ ಗರ ಬಡಿಯುವುದು ಖಚಿತ.  ಶಾಲಾ ಕಾಲೇಜುಗಳ ಗ್ರಂಥಾಲಯಗಳಿಗೆ ಸರ್ಕಾರ ಅನುದಾನ ನೀಡುವುದನ್ನೆ ನಿಲ್ಲಿಸಿದೆ. ಈಗ ಪುಸ್ತಕ-ಗ್ರಂಥಾಲಯ ವಿಚಾರದಲ್ಲೂ ಅನಾಧರ ತೋರಿಸುತ್ತಿರುವುದು ಸುಲಕ್ಷಣವೇನಲ್ಲ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗಾಭರಣ, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಬಿ.ವಿ. ವಸಂತಕುಮಾರ್ ಕೂಡ ಪುಸ್ತಕ ಖರೀದಿ ವಿಚಾರದತ್ತ ಮೂಗು ತೂರಿಸಬೇಕಾದ ಅನಿವಾರ್ಯತೆ ಇದೆ.