ರಾಷ್ಟ್ರಪತಿಯಾಗಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದ ಮಹಾನ್ ಚೇತನ ಪ್ರಣಬ್ ಮುಖರ್ಜಿ

ರಾಷ್ಟ್ರಪತಿಯಾಗಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದಿದ್ದ ಮಹಾನ್ ಚೇತನ ಪ್ರಣಬ್ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು, ಭಾರತದ ಮುತ್ಸದ್ದಿ ರಾಜಕೀಯ ನಾಯಕ. ಅವರು ರಾಷ್ಟ್ರಪತಿಗಳಾದ ನಂತರ ಕೆಲ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದರು. ಆಡಂಬರದ ಜೀವನ, ಒಣ ಪ್ರತಿಷ್ಠೆ ಮುಂತಾದುವುಗಳನ್ನು ಇಷ್ಟಪಡದ ಮುಖರ್ಜಿ, ರಾಷ್ಟ್ರಪತಿ ಹುದ್ದೆ ಹಾಗೂ ರಾಷ್ಟ್ರಪತಿ ಭವನಕ್ಕೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರು.

ಪ್ರಣಬ್ ತಾವು ರಾಷ್ಟ್ರಪತಿಯಾಗಿ ಒಂದು ವರ್ಷ ಅಧಿಕಾರ ಪೂರೈಸಿದ ಸಂದರ್ಭದಲ್ಲಿ, ರಾಷ್ಟ್ರಪತಿ ಹುದ್ದೆಯ ಸಂಬೋಧನೆಯ ಕುರಿತು ಮಹತ್ವದ ಬದಲಾವಣೆ ಮಾಡಿದರು. ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿಗಳನ್ನು ಸಂಬೋಧಿಸುವಾಗ ಯಾವಾಗಲೂ ರಾಷ್ಟ್ರಪತಿಗಳ ಹೆಸರಿನ ಹಿಂದೆ 'ಘನತೆವೆತ್ತ' ಎಂಬ ಗೌರವವಾಚಕವನ್ನು ಬಳಸಲಾಗುತ್ತಿತ್ತು. ಆದರೆ ಪ್ರಣಬ್ ಮುಖರ್ಜಿಯವರು ಇನ್ನು ಮುಂದೆ ರಾಷ್ಟ್ರಪತಿಗಳಿಗೆ ಈ ರೀತಿ ಗೌರವಸೂಚಕ ವಿಶೇಷಣವನ್ನು ಬಳಸುವ ಅಗತ್ಯವಿಲ್ಲ ಎಂದು ಆದೇಶ ಹೊರಡಿಸಿದರು. ಮಾತ್ರವಲ್ಲದೇ ರಾಜ್ಯಗಳ ರಾಜ್ಯಪಾಲರು ಸಹ ಇದೇ ಕ್ರಮವನ್ನು ಅನುಸರಿಸುವಂತೆ ಉತ್ತೇಜಿಸಿದ್ದರು.

ರಾಷ್ಟ್ರಪತಿ ಭವನದ ಭೇಟಿಗೆ ಆಗಮಿಸುವ ಅತಿಥಿಗಳ ಶಿಷ್ಟಾಚಾರ ನಿಯಮಗಳು ಹಾಗೂ ಸುರಕ್ಷತಾ ನಿಯಮಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸರಳಗೊಳಿಸಿದರು. ಈ ಮೊದಲು ರಾಷ್ಟ್ರಪತಿಗಳಾಗಿದ್ದವರು ದೆಹಲಿಯಲ್ಲಿ ನಡೆಯುವ ಹಲವಾರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿದ್ದರು. ಹೀಗೆ ರಾಷ್ಟ್ರಪತಿಗಳು ಸಮಾರಂಭಕ್ಕೆ ಹೋಗುವಾಗ, ಹಲವು ಕಡೆ ಭದ್ರತಾ ನಿಯಮಗಳ ಜಾರಿಯಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ್ದ ಪ್ರಣಬ್, ಆದಷ್ಟೂ ಕಾರ್ಯಕ್ರಮಗಳನ್ನು ರಾಷ್ಟ್ರಪತಿ ಭವನದೊಳಗಡೆಯೇ ಏರ್ಪಡಿಸುವಂತೆ ಮಾಡಿ, ಜನರಿಗೆ ತೊಂದರೆಯಾಗದಂತೆ ಕಾಳಜಿ ವಹಿಸಿದ್ದರು.