ಅಧಿಕಾರದ ಬಳಕೆ, ದುರ್ಬಳಕೆ

ಒಂದು ಪ್ರಭುತ್ವ ತನ್ನನ್ನು ವಿಮರ್ಶಿಸುವ ಮಂದಿ ತನ್ನ ಸುತ್ತ ಇರಲೇ ಬಾರದು ಎಂಬ ಆಗ್ರಹ ಬೆಳೆಸಿಕೊಂಡರೆ ಅದರಿಂದ ಸಮಾಜಕ್ಕೂ ಮತ್ತು ಪ್ರಭುತ್ವಕ್ಕೂ ಹಾನಿಯೇ ಆಗುತ್ತದೆ.

ಅಧಿಕಾರದ ಬಳಕೆ, ದುರ್ಬಳಕೆ

ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯವು ರೋಮಿಲಾ ಥಾಪರ್ ಮತ್ತು ಇತರ ಹನ್ನೆರಡು ಎಮಿರೆಟಸ್ ಪ್ರೊಫೆಸರುಗಳಿಗೆ ತಮ್ಮ ತಮ್ಮ ಸ್ವವಿವರ ಸಲ್ಲಿಸಲು ಸೂಚಿಸಿದೆ. ರೋಮಿಲಾರ ಬೆಂಬಲಿಗರು ರೋಷಾವೇಶದಿಂದ ಇದೆಲ್ಲ ಕೇಸರೀಕರಣದ ಹುನ್ನಾರವೆಂದು ಕೂಗಾಡುತ್ತಿರುವುದು, ಬಲಪಂಥೀಯರು ರೋಮಿಲಾರ ಸಂಶೋಧನೆಗಳ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುತ್ತಿರುವುದು ವಿಷಮಕರ ಬೆಳವಣಿಗೆಗಳಾಗಿವೆ. ಈ ಮಧ್ಯೆ ಎಂಎಚ್ಆರ್ ಡಿ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯಂ ‘ವಿಶ್ವವಿದ್ಯಾಲಯಕ್ಕೆ ರೋಮಿಲಾ ಥಾಪರ್ ರನ್ನು ತೆಗೆದು ಹಾಕುವ ಉದ್ದೇಶವಿಲ್ಲ, ಇದು ವಿಶ್ವವಿದ್ಯಾಲಯದ ಆಡಳಿತಾತ್ಮಕ ಪ್ರಕ್ರಿಯೆ ಅಷ್ಟೇ’ ಎಂದು ಟ್ವೀಟ್ ಮಾಡಿದ್ದರು. ಆದರೆ ಎಮಿರೆಟಸ್ ಪ್ರಾಧ್ಯಾಪಕರ ಅರ್ಹತೆಯನ್ನು ಕಾಲ ಕಾಲಕ್ಕೆ ಪರಿಶೀಲಿಸುತ್ತಿರಬೇಕೆಂದು ವಿಶ್ವವಿದ್ಯಾಲಯದ ಯಾವ ನಿಯಮಾವಳಿ ಹೇಳುತ್ತದೆಂದು ಅವರು ಸ್ಪಷ್ಟಪಡಿಸಿಲ್ಲ. 

ಒಂದು ಸ್ವತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಯಾವುದೇ ಸಾರ್ವಜನಿಕ ವ್ಯಕ್ತಿಯ ವಿವರವನ್ನು,ದೇಶದ ಪ್ರಧಾನಿಯ ವಿವರವನ್ನು ಸಹ ಕೇಳಿ ತಿಳಿಯುವ ಹಕ್ಕಿರುತ್ತದೆ. ಈ ಹಿಂದೆ ಸ್ಮೃತಿ ಇರಾನಿ ಅವರ ವಿದ್ಯಾರ್ಹತೆಯನ್ನೂ ಹೀಗೇ ಕೆದಕಲಾಗಿತ್ತು, ಕೊನೆಗೆ ಅವರು ತಮ್ಮ ಸಚಿವೆಯ ಸ್ಥಾನವನ್ನೇ ಬಿಟ್ಟುಕೊಡಬೇಕಾಯಿತು. ಹೀಗಿರುವಾಗ ಒಬ್ಬ ಪ್ರಾಧ್ಯಾಪಕರ ವಿವರಗಳನ್ನು ಕೇಳಿದರೆ ಅದು ಖಂಡಿತವಾಗಿ ಅಪಚಾರವಾಗುವುದಿಲ್ಲ. ಆದರೆ ಪ್ರಶ್ನೆ ಅದಲ್ಲ. ಹೀಗೆ ಸ್ವವಿವರವನ್ನು ಕೇಳುವುದರ ಹಿಂದಿನ ಉದ್ದೇಶವೇನು ಎಂಬ ಪ್ರಶ್ನೆಯನ್ನು ನಾವಿಂದು ಕೇಳಬೇಕಾಗಿದೆ.

ಒಂದು ವಿಶ್ವವಿದ್ಯಾಲಯ ತನ್ನ ಘನತೆಯನ್ನು ಉಳಿಸಿ ಬೆಳೆಸಿಕೊಳ್ಳಲು ಇಂತಹವರನ್ನು ಆಶ್ರಯಿಸುತ್ತದೆಯೇ ವಿನಾ 87ರ ಹರೆಯದ ರೋಮಿಲಾ ಥಾಪರ್ ಗೆ ವಿಶ್ವವಿದ್ಯಾಲಯದಿಂದ ಏನೂ ಆಗಬೇಕಿಲ್ಲ. ತೊಂಬತ್ತರ ದಶಕದಲ್ಲಿ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭವಾದಾಗ ಅಲ್ಲಿಯ ಕನ್ನಡ ವಿಭಾಗವು ಕಿರಂ ನಾಗರಾಜ, ಎಚ್.ಎಸ್. ರಾಘವೇಂದ್ರ ರಾವ್, ಓ.ಎಲ್. ನಾಗಭೂಷಣ ಸ್ವಾಮಿ ಮುಂತಾದ ನಾಡಿನ ಹೆಸರಾಂತ ವಿದ್ವಾಂಸರುಗಳನ್ನು ಆಶ್ರಯಿಸಿತ್ತು. ಕನ್ನಡ ವಿಮರ್ಶೆಯ ವಾಙ್ಮಯ ಪರಂಪರೆಯ ಪ್ರವರ್ತಕರಾದ ಕಿ.ರಂ. ನಾಗರಾಜರ ಕುರಿತು ಆಗ ಉಪಕುಲಪತಿಗಳಾಗಿದ್ದ ಕಂಬಾರರು “ಕಿರಂ ಒಂದು ವಿಶ್ವವಿದ್ಯಾಲಯದ ಆವರಣದಲ್ಲಿ ತನ್ನ ಪಾಡಿಗೆ ತಾನು ಮಾತಾಡಿಕೊಂಡಿದ್ದರೂ ಸಾಕು, ಆ ವಿಶ್ವವಿದ್ಯಾಲಯ ತಾನಾಗೇ ಬೆಳೆಯುತ್ತದೆ” ಎಂದಿದ್ದರು.

ಜೆಎನ್ ಯು ನಿಯಮಾವಳಿಗಳ ಪ್ರಕಾರ ಒಮ್ಮೆ ಎಮಿರೆಟಸ್ ದರ್ಜೆಗೇರಿದವರು ಜೀವಿತಾವಧಿಯವರೆಗೂ ಆ ಹುದ್ದೆಯಲ್ಲಿ ಮುಂದುವರಿಯುತ್ತಾರೆ. ಆ ಹುದ್ದೆಗೆ ಯಾವುದೇ ಸಂಬಳ, ಸೌಲಭ್ಯಗಳಿರುವುದಿಲ್ಲ, ಹುದ್ದೆಯ ನೇಮಕಾತಿಗೆ ನಿರ್ದಿಷ್ಟ ಸಂಖ್ಯಾಮಿತಿಯೂ ಇರುವುದಿಲ್ಲ. ಹೀಗಿರುವಾಗ ಎಮಿರೆಟಸ್ ಪ್ರೊಫೆಸರ್ ಆದ ವ್ಯಕ್ತಿ ವಿಶ್ವವಿದ್ಯಾಲಯಕ್ಕೆ ಹೊರೆಯಂತೂ ಆಗುವುದಿಲ್ಲ. ಪ್ರತಿಭಾವಂತ, ಕ್ರಿಯಾಶೀಲ ಹಿರಿಯ ಪ್ರೊಫೆಸರುಗಳ ಸೇವೆ ಸಾಧನೆಗಳು ನಿರಂತರವಾಗಿ ತನಗೆ ದಕ್ಕುತ್ತಿರಲಿ ಎಂಬ ಉದ್ದೇಶದಿಂದ ವಿಶ್ವವಿದ್ಯಾಲಯಗಳು ಇಂತಹ ಸ್ಥಾನಮಾನಗಳನ್ನು ಸೃಷ್ಟಿಸಿ ಅವರನ್ನು ಶಾಶ್ವತವಾಗಿ ತನ್ನಲ್ಲಿ ಉಳಿಸಿಕೊಳ್ಳುತ್ತವೆ. ಜಗತ್ತಿನ ಎಲ್ಲ ಶ್ರೇಷ್ಠ ವಿಶ್ವವಿದ್ಯಾಲಯಗಳೂ ಈ ಪದ್ಧತಿಯನ್ನು ಅನುಸರಿಸಿಕೊಂಡು ಬಂದಿವೆ.

ಇಂತಹ ನಿವೃತ್ತ ಪ್ರೊಫೆಸರುಗಳನ್ನು ಗುರುತರವಾದ ಕಾರಣಗಳಿಲ್ಲದೆ ಸುಮ್ಮನೆ ವಜಾ ಮಾಡಲಾಗದು. ಹೀಗೆ ತೇಜೋವಧೆ ಅನುಭವಿಸಿದ ಮೇಲಾದರೂ ಅವರು ತಾವಾಗೇ ಜಾಗ ಖಾಲಿ ಮಾಡಲಿ ಎಂಬ ಉದ್ದೇಶ ಈ ಬಗೆಯ ಆದೇಶದ ಹಿಂದೆ ಕೆಲಸ ಮಾಡುತ್ತಿರುವಂತೆ ತೋರುತ್ತದೆ. ಐಡಿಯಾಲಜಿಯ ನೆಪದಲ್ಲಿ ನೀಡಲಾಗುವ ಇಂತಹ ಕಿರುಕುಳವನ್ನು ರೋಮಿಲಾ ಮಾತ್ರವಲ್ಲ ಕಿರಂರನ್ನೂ ಒಳಗೊಂಡಂತೆ ಹಲವಾರು ನಿವೃತ್ತ ಪ್ರಾಧ್ಯಾಪಕರುಗಳು ಅನುಭವಿಸಿದ್ದಾರೆ (ಕಿರಂ ಹೋದ ಮೇಲೆ ತನಗೆ ಲಾಭವಾಯಿತೇ ಇಲ್ಲವೇ ಎಂಬ ಬಗ್ಗೆ ಅವರನ್ನು ಉಚ್ಚಾಟಿಸಿದ ಸಂಸ್ಥೆಯೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ).   

ರೋಮಿಲಾರಿಗೆ ಇದೇ ಮೊದಲ ಅನುಭವವೇನಲ್ಲ. ಈ ಹಿಂದೆ 2014ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರ ವಹಿಸಿಕೊಂಡ ಕೆಲವೇ ತಿಂಗಳಲ್ಲಿ ಐಸಿಎಚ್ಆರ್ ನ ಉನ್ನತ ಸ್ಥಾನ ವಹಿಸಿಕೊಂಡಿದ್ದ ರೋಮಿಲಾರನ್ನು ಆ ಸ್ಥಾನದಿಂದ ತೆಗೆದು ಹಾಕಲಾಗಿತ್ತು. ಅದಕ್ಕೂ ಹಿಂದೆ 1999ರಲ್ಲಿ ಬಿಜೆಪಿ ಅಧಿಕಾರ ವಹಿಸಿಕೊಂಡ ಸಮಯದಲ್ಲೂ ರೋಮಿಲಾರನ್ನು ಐಸಿಎಚ್ಆರ್ ನಿಂದ ಆ ಕಾರಣವಾಗಿ ಕಿತ್ತುಹಾಕಲಾಗಿತ್ತು. 70ರ ದಶಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಸ್.ಎಲ್. ಭೈರಪ್ಪನವರನ್ನೂ ಇದೇ ರೀತಿ ಯಾವುದೇ ವಿವರಣೆ ನೀಡದೆ ಎನ್ ಸಿಇಆರ್ ಟಿಯಿಂದ ಹೊರಹಾಕಲಾಗಿತ್ತು. ಯಾವುದೇ ಪಕ್ಷ ಅಧಿಕಾರಕ್ಕೆ ಬಂದ ಕೂಡಲೆ ತನ್ನ ಸಿದ್ಧಾಂತವನ್ನು ಅನುಮೋದಿಸದವರನ್ನು ಉಚ್ಚಾಟಿಸುವುದು ಸಾಮಾನ್ಯ ಮತ್ತು ನಿರೀಕ್ಷಿತ. 

ಪ್ರಸ್ತುತ ರೋಮಿಲಾ ಥಾಪರ್ ಹಿಂದುತ್ವವಾದೀ ಚಿಂತನೆಗಳನ್ನು ಮೊದಲಿನಿಂದಲೂ ಖಂಡಿಸುತ್ತ ಬಂದಿರುವುದಲ್ಲದೆ ಹಾಲಿ ಇರುವ ಸರ್ಕಾರದ ಕಠೋರ ವಿಮರ್ಶಕಿಯೂ ಹೌದು. ಒಂದು ಪ್ರಭುತ್ವ ತನ್ನನ್ನು ವಿಮರ್ಶಿಸುವ ಮಂದಿ ತನ್ನ ಸುತ್ತ ಇರಲೇ ಬಾರದು ಎಂಬ ಆಗ್ರಹ ಬೆಳೆಸಿಕೊಂಡರೆ ಅದರಿಂದ ಸಮಾಜಕ್ಕೂ ಮತ್ತು ಪ್ರಭುತ್ವಕ್ಕೂ ಹಾನಿಯೇ ಆಗುತ್ತದೆ. ಸಮಾಜ ಗುಲಾಮತನದತ್ತ ನಡೆದರೆ ಪ್ರಭುತ್ವ ಸರ್ವಾಧಿಕಾರದತ್ತ ಹೆಜ್ಜೆ ಹಾಕುತ್ತದೆ. ವಿಮರ್ಶೆಯನ್ನು ಸಂಯಮದಿಂದ ಸ್ವೀಕರಿಸಿ ಆ ಕುರಿತು ಗಂಭೀರವಾಗಿ ಯೋಚಿಸುವ ಬದಲು ಅಪಮಾರ್ಗದಿಂದ ವಿಮರ್ಶೆ, ಟೀಕೆಗಳ ಸದ್ದಡಗಿಸಲು ಪ್ರಯತ್ನಿಸಿದರೆ ಅದು ನಮ್ಮ ವೈಚಾರಿಕ ದಾರಿದ್ರ್ಯವನ್ನು ಸೂಚಿಸುತ್ತದೆ. ಎದುರಾಳಿಯ ವಿಮರ್ಶೆಗೆ ತಕ್ಕ ಸ್ಪಂದನೆ ಅಥವಾ ಪ್ರತ್ಯುತ್ತರ ನಮ್ಮ ಬಳಿ ಇಲ್ಲ ಎಂಬ ಸಂದೇಶ ನೀಡಿದಂತಾಗುತ್ತದೆ.

ಇತಿಹಾಸ ರಚನೆ ಯಾವ ಕಾಲಕ್ಕೂ ಪರಿಪೂರ್ಣ ಎನಿಸಿಕೊಂಡಿಲ್ಲ. ಅಂತೆಯೇ ರೋಮಿಲಾ ಥಾಪರ್ ಅವರ ಐತಿಹಾಸಿಕ ಸಂಶೋಧನೆಗಳೂ ಪರಿಪೂರ್ಣವಲ್ಲ, ಪ್ರಶ್ನಾತೀತವಲ್ಲ. ಆರ್ಯರ ಮೂಲದ ಕುರಿತ ಅವರ ವಿಚಾರಗಳು ನೂರಾರು ವರ್ಷಗಳ ಹಿಂದಿನ ಬ್ರಿಟಿಷರ ಕಾಲದ ಸಂಶೋಧನೆಗಳನ್ನೇ ಈಗಲೂ ಪ್ರತಿಪಾದಿಸುತ್ತದೆ. 8ನೇ ಶತಮಾನದಲ್ಲಿ ಕಾಶ್ಮೀರವನ್ನಾಳಿದ ಲಲಿತಾದಿತ್ಯ ತನ್ನ ಸಾಮ್ರಾಜ್ಯವನ್ನು ಪಶ್ಚಿಮದಲ್ಲಿ ಸಿರಿಯಾದವರೆಗೂ, ಪೂರ್ವದಲ್ಲಿ ಚೀನಾದವರೆಗೂ ವಿಸ್ತರಿಸಿದ್ದ. ರೋಮಿಲಾರ ಭಾರತದ ಇತಿಹಾಸದಲ್ಲಿ ಲಲಿತಾದಿತ್ಯನಂತಹ ಸಾರ್ವಭೌಮನ ಮತ್ತು ಅಂತಹ ಇನ್ನೂ ಹಲವು ಮಹತ್ವದ ವ್ಯಕ್ತಿಗಳ ಮತ್ತು ರಾಜಸಂಸ್ಥಾನಗಳ ವಿವರಗಳೇ ಕಾಣಿಸುವುದಿಲ್ಲ. ಇಂತಹ ಇನ್ನೂ ಹಲವು ಸಮಸ್ಯೆಗಳು ಅವರ ಸಂಶೋಧನೆಗಳಲ್ಲಿವೆ.

ಆದರೆ ಇವೆಲ್ಲ ಚರ್ಚೆ ಸಂವಾದಗಳಿಂದ ಬಗೆಹರಿಯಬಹುದಾದ ವಿಷಯಗಳಾಗಿವೆ. ಒಂದು ವಿಶ್ವವಿದ್ಯಾಲಯದಲ್ಲಿ ಎಲ್ಲ ಚಿಂತನಾ ಧಾರೆಗಳಿಗೂ ಸಮಾನ ಅವಕಾಶವಿದ್ದಾಗ ಮಾತ್ರ ಅಂತಹ ಚರ್ಚೆ ಸಂವಾದಗಳು ಸಾಧ್ಯವಾಗುತ್ತದೆ. ಎಡ ಬಲ ಎಂಬ ಪದಗಳಲ್ಲೇ ಅಸಮಗ್ರತೆಯ, ಅಪೂರ್ಣತೆಯ ಧ್ವನಿಯಿದೆ. ರೋಮಿಲಾರಿಗಿಂತ ಭಿನ್ನವಾಗಿ ಯೋಚಿಸಬಲ್ಲ, ಅವರ ಸಂಶೋಧನೆಯಲ್ಲಿನ ಕೊರತೆಗಳನ್ನು ತುಂಬಿಸಬಲ್ಲ ವೆಂಡಿ ಡಾನಿಗರ್, ರಾಜೀವ್ ಮಲ್ಹೋತ್ರಾ, ಕೋಟಾ ವೆಂಕಟಾಚಲಂ, ಎನ್.ಎಸ್. ರಾಜಾರಾಮ್ ಮುಂತಾದ ಹಲವು ಇತಿಹಾಸಜ್ಞರು ನಮ್ಮಲ್ಲಿದ್ದಾರೆ. ವಿಶ್ವವಿದ್ಯಾಲಯಗಳು ನಿರ್ದಿಷ್ಟ ಐಡಿಯಾಲಜಿಗೆ ಸವಾರಿಗುದುರೆಯಾಗದೆ ವಿವಿಧ ವಾಗ್ವಾದಗಳಿಗೆ ಒಂದು ವೇದಿಕೆಯಾಗಬೇಕಾಗುತ್ತದೆ. 

ಜಿ.ಎಸ್. ಶಿವರುದ್ರಪ್ಪನವರು ಬೆಂ.ವಿ.ವಿ. ಕನ್ನಡ ವಿಭಾಗದ ನಿರ್ದೇಶಕರಾಗಿದ್ದಾಗ ಸಾಹಿತ್ಯವಲಯದಲ್ಲಿ ತೀವ್ರವಾದ ಚರ್ಚೆಗಳಾಗುತ್ತಿದ್ದವು. ತರಹಾವರಿ ವೈಚಾರಿಕತೆಗಳಿಗೆ, ವೈರುದ್ಧ್ಯಕರ ಚಿಂತನಾಧಾರೆಗಳಿಗೆ ಅವರ ಕಾಲದಲ್ಲಿ ಅವಕಾಶವಿತ್ತು. ಡಿ.ಆರ್. ನಾಗರಾಜ್ ರ ವಿದ್ವತ್ಪೂರ್ಣತೆ, ಸಿದ್ಧಲಿಂಗಯ್ಯನವರ ದಲಿತ ಕಾವ್ಯ, ಬರಗೂರರ ಬಂಡಾಯ ಸಾಹಿತ್ಯ ಚಳವಳಿ, ಎಂ. ಚಿದಾನಂದಮೂರ್ತಿಯವರ ಕನ್ನಡ ರಾಷ್ಟ್ರೀಯತೆ, ಕಂಬಾರರ ಜಾನಪದ ಪ್ರತಿಭೆ, ಕಲ್ಗುಡಿಯವರ ಸಂಶೋಧನೆ ಮುಂತಾದವು ಸಮಾನ ಆಶ್ರಯ, ಪ್ರವರ್ಧನೆ ಪಡೆದುದರಿಂದಲೇ ಆ ಕಾಲಾವಧಿಗೆ ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಾಯಿತು. ಇಂದು ಸೈದ್ಧಾಂತಿಕ ಜಡತ್ವ ಹತ್ತಿಸಿಕೊಂಡ ನಾವು ಇತಿಹಾಸವನ್ನು ಸೃಷ್ಟಿಸಲಾಗದೆ ಇತಿಹಾಸವನ್ನು ನೆನೆಯುವುದರಲ್ಲೇ ಸಂತೃಪ್ತರಾಗಿಬಿಡುವ ಆತಂಕದ ಸ್ಥಿತಿ ನಿರ್ಮಾಣವಾಗಿದೆ.