ಮಹಾನಗರಕ್ಕೆ ಮಗ್ಗಲಮುಳ್ಳಾಗಿರುವ ಕೊಕ್ಕೆ ಕಳ್ಳರು 

ಸರಕಾರದ ವಿದ್ಯುತ್ ಕಂಬಗಳಿಗೆ ಕೊಕ್ಕೆಹಾಕಿ ಕದ್ದು ಕೇಬಲ್ ಲೈನ್ ಎಳೆದು ಮನೆ ಮನೆಗಳಿಗೆ ವಿದ್ಯುತ್ ಪೂರೈಸುತ್ತಿದ್ದ ’ಪಡ್ಡೆ’’ಗಳ ಜಾಲವಿತ್ತು. ಅಂದಿನ ವಿದ್ಯುತ್ ಕಳ್ಳರಾಗಿದ್ದ ಕಲ್ಲು, ರಾಜೂ ಮುನ್ನಾ ಇವರೇ ನಮಗೆಲ್ಲ ಬೆಳಕು ನೀಡುತ್ತಿದ್ದ ಸೂರ್ಯರು. ಪಡ್ಡೆಗಳೂ ಸ್ಥಳೀಯರಲ್ಲ. ಕೆಲಸವರಸಿ ಬಂದ ಬಿಹಾರಿ ಹುಡುಗರು. ವಿದ್ಯುತ್ ಪೂರೈಸುತ್ತಿದ್ದ ಪುಣ್ಯಾತ್ಮರು

ಮಹಾನಗರಕ್ಕೆ ಮಗ್ಗಲಮುಳ್ಳಾಗಿರುವ ಕೊಕ್ಕೆ ಕಳ್ಳರು 

ನಾನು ಹಿಂದೆ ದಿಲ್ಲಿಯ ಜನನಿಬಿಡ ಪ್ರದೇಶವಾದ ಮಾಲವೀಯ ನಗರದ ಮಗ್ಗಲಿಗೆ ಅಂಟಿಕೊಂಡಿದ್ದ   ಖಿಡಕಿ ಎಕ್ಸಟೆನ್ಷನ್ ಎಂಬಲ್ಲಿ ನಾಲ್ಕು ವರ್ಷ ಕಳೆದಿದ್ದೆ. ಫಿರೋಜ್ ಶಾ ತುಘಲಕ್ ಕಟ್ಟಿಸಿದ ಮಸ್ಜಿದ್ ಹಾಗೂ ತುಘಲಕ್ ಕಾಲದ ಅನೇಕ ಪಾಳುಬಿದ್ದ ಗುಂಬಜ್ ಇಮಾರತ್ತುಗಳಿದ್ದ  ಖಿಡಕಿಗಾಂವ್ ಇಂದು ನೈಜಿರಿಯನ್ ನಿರಾಶ್ರಿತರ ತಾಣವಾಗಿದೆ. ಹಿಂದೆ ಸೋಮನಾಥ್ ಭಾರತಿ ನೈಜಿರಿಯನ್ ವಾಸಿಸುತ್ತಿದ್ದ ಮನೆಗಳ ತಲಾಶಿ ನಡೆಸಿ  ’ಸೆಕ್ಸ್ ರಾಕೆಟ್”ಗಳ ಬಗ್ಗೆ ದೊಡ್ದ ಖುಲಾಸೆ , ಗಲಾಟೆಗಳಾದ ಘಟನೆ ನೆನಪಿರಬಹುದು.

ಇಡೀ ಖಿಡಕಿ ಎಕ್ಶ್ಟೆನ್ಷನ್ ಎಂಬುದು ಮೊದಲು ಕೃಷಿಭೂಮಿಯಾಗಿತ್ತು. ಈ ಜಮೀನನ್ನು ಮಾರಿಕೊಂಡವರು ಹಣವಂತರಾದರು. ಖರೀದಿಸಿದವರು ಈ ಅಕ್ರಮವಾಗಿ ಬೇರೆಯವರಿಗೆ ಮಾರಿಕೊಂಡೋ ಇಲ್ಲಾ ಹಾಗೇ ಕಬಳಿಸಿ ಕುಬೇರರಾದರು. ಇದರಲ್ಲಿ ಹಣಹೂಡಿದವರು ತಾವೇ ಬಿಲ್ಡರುಗಳಾಗಿ ರೈಲು ಡಬ್ಬಿಗಳಂತೆ ಉದ್ದಕ್ಕೂ ಮೂರು ಕೋಣೆಗಳ ಮನೆಯಿರುವ ಮೂರು ನಾಲ್ಕು ಅಂತಸ್ತಿನ ಕಟ್ಟಡಗಳನ್ನು ಕಟ್ಟಿ ನಿಲ್ಲಿಸಿ ರಾತ್ರೋರಾತ್ರಿ ಹೊಸ ಕಾಲೋನಿಯನ್ನು ನಿರ್ಮಿಸಿದ್ದರು. ಹೀಗೆಯೇ ಮೋಸದಿಂದ ಬಣ್ಣದ ಮಾತುಗಳಾಡಿ ನಮಗೆ ತಳಮನೆಯನ್ನು ಮಾರಿ ಕೈತೊಳಕೊಂಡಿದ್ದ ಪಂಜಾಬಿ ಬಿಲ್ಡರ್ ಮೊದಲು ತರಕಾರಿ ಮಾರುತ್ತಿದ್ದನಂತೆ. ಅಂಥವನಿಗೆ ಅದೃಷ್ಟಲಕ್ಷ್ಮಿ ಒಲಿದಳು. ರಿಯಲ್ ಎಸ್ಟೇಟ್ ವ್ಯವಹಾರ ಕುದುರಿ, ಬಹಳಷ್ಟು ಜನರಿಗೆ ಈ ಅನಧಿಕೃತ ಮನೆಗಳನ್ನು ಮಾರಿ ಮುಂಬಾಯಿಯ ಅಂಡರವರ್ಲ್ಡ್  ’ಡಾನ್’ ನಂತೆ ಕೊರಳಿಗೆ ದಪ್ಪ ಬಂಗಾರದ ಸರಪಳಿ ಕೈಬೆರಳುಗಳಲ್ಲಿ ಉಂಗುರಗಳನ್ನು ತೊಟ್ಟು ಓಡಾಡಿಕೊಂಡಿದ್ದ.  

ಸ್ಥಳೀಯ ಪೋಲಿಸರಿಗೆ ಕೈ ಬೆಚ್ಚಗೆ ಮಾಡಿದರೆ ಸಾಕು ಎಂಥ ದುರ್ವ್ಯವಹಾರವನ್ನು ಯಾರೂ ತಡೆಯುವುದಿಲ್ಲ. ಪಕ್ಕಾ ರಸ್ತೆಗಳಿಲ್ಲದ, ನೀರಿನ ವ್ಯವಸ್ಥೆ ಮತ್ತು ವಿದ್ಯುತ್ ವ್ಯವಸ್ಥೆಯಿಲ್ಲದ ಈ ಜಾಗಕ್ಕೆ ನಮ್ಮಂತೆ ಲೋಕದ ಮೋಸವರಿಯದ  ಭೋಳೆ ಜನರೇ ಬೇಸ್ತು ಬಿದ್ದಿದ್ದರೆನ್ನಬಹುದು. ಇಲ್ಲಿ ಬಂದ ಮೇಲೆಯೇ ಇಲ್ಲಿನ ಮೋಸದ ಒಳ ಸುಳಿಗಳು ಅರ್ಥವಾಗತೊಡಗಿದ್ದವು. ಸರಕಾರದ ವಿದ್ಯುತ್ ಕಂಬಗಳಿಗೆ ಕೊಕ್ಕೆಹಾಕಿ ಕದ್ದು ಕೇಬಲ್ ಲೈನ್ ಎಳೆದು ಮನೆ ಮನೆಗಳಿಗೆ ವಿದ್ಯುತ್ ಪೂರೈಸುತ್ತಿದ್ದ ’ಪಡ್ಡೆ’’ಗಳ ಜಾಲವಿತ್ತು. ಅಂದಿನ ವಿದ್ಯುತ್ ಕಳ್ಳರಾಗಿದ್ದ ಕಲ್ಲು, ರಾಜೂ ಮುನ್ನಾ ಇವರೇ ನಮಗೆಲ್ಲ ಬೆಳಕು ನೀಡುತ್ತಿದ್ದ ಸೂರ್ಯರು. ಪಡ್ಡೆಗಳೂ ಸ್ಥಳೀಯರಲ್ಲ. ಕೆಲಸವರಸಿ ಬಂದ ಬಿಹಾರಿ ಹುಡುಗರು. ವಿದ್ಯುತ್ ಪೂರೈಸುತ್ತಿದ್ದ ಪುಣ್ಯಾತ್ಮರು.  ಬಿಲ್ಡರುಗಳು ದೊಡ್ಡ ಡಾನ್ ಗಳಾದರೆ ಇವರು ಸಣ್ಣ ಡಾನ್ ಗಳು ! ಎಡವಟ್ಟಾದರೆ ಈ ಸಣ್ಣ ಡಾನ್‍‍ ಗಳೇ  ಸಿಕ್ಕಿಬೀಳುತ್ತಿದ್ದವು, ದೊಡ್ದ ಡಾನ್‍ ಗಳನ್ನು ಉಳಿಸಲು ದೊಡ್ದ ಅಧಿಕಾರಿಗಳಿದ್ದರು ಆಗಲೂ ಈಗಲೂ ಯಾವಾಗಲೂ !   

ಸಣ್ಣ ಕಿರಿದಾದ ಗಲ್ಲಿಗಳ ಸುತ್ತಲೂ ಎತ್ತರೆತ್ತರ ಕಟ್ಟಡಗಳೇ ಇದ್ದು ಚಳಿಗಾಲದಲ್ಲಿ ಸೂರ್ಯನ ಕಿರಣಗಳೂ ನೆಲಕ್ಕೆ ತಾಗುತ್ತಿದ್ದಿಲ್ಲ. ಸೂರ್ಯನ ಮುಖವೂ ಕಾಣುತ್ತಿದ್ದಿಲ್ಲ.  ಅದಕ್ಕಾಗಿ ಮೂರಂತಸ್ತನ್ನು ಹತ್ತಿಕೊಂಡು ಟೆರೇಸಿಗೆ ಹೋಗಬೇಕಿತ್ತು. ಮತ್ತು ಅಡೆತಡೆಯಿಲ್ಲದ  ವಿದ್ಯುತ್ ಸರಬರಾಜಿಗಾಗಿ ನಾವು  ವಿದ್ಯುತ್ ಕಳ್ಳರನ್ನೇ ಓಲೈಸಿಕೊಂಡಿರಬೇಕಿತ್ತು. ಅವರು ಪಕ್ಕದ ಮಾಲವೀಯನಗರ, ಸಾಕೇತ್, ಹೌಜರಾಣಿ ಪ್ರದೇಶಗಳಿಂದ ಗುಟ್ಟಾಗಿ ವಿದ್ಯುತ್ ತಂತಿಗಳನ್ನು ಹಾಸಿ ಮನೆಮನೆಗಳನ್ನು ಬೆಳಗಿಸುತ್ತಿದ್ದರು. ತಿಂಗಳಿಗೆ ನಾನೂರು ಕೊಟ್ತರೆ ಆಯ್ತು.  

ಆಮೇಲಾಮೇಲೆ ನಾವೂ ( ನಾವೂ ಅಂದರೆ ಅಲ್ಲಿನ ನಿವಾಸಿಗಳು) ಇವರ ಟ್ರಿಕ್ಕುಗಳನ್ನು ಕಲಿತೆವು. ಕಲ್ಲೂನ ಲೈಟ್ ಹೋದರೆ ರಾಜೂನ ಲೈಟಿಗೆ ಸ್ವಿಚ್ ಆಗುತ್ತಿದ್ದೆವು. ಅಂದರೆ ಮಾಲವೀಯ ನಗರದಲ್ಲಿ ಪವರ್ ಹೋಗಿದ್ದರೆ ಆ ತಂತಿ ತೆಗೆದು ಸಾಕೇತ್ ವಿದ್ಯುತ್ ಪೂರೈಕೆಯ ತಂತಿಗೆ ಕೊಕ್ಕೆ ಹಾಕುತ್ತಿದ್ದೆವು. ಪವರ್ ಬಂದ ತರುವಾಯ ಪುನಃ ಮೊದಲಿನ ತಂತಿಗೆ ಕೊಕ್ಕೆ ಹಾಕುವುದು.  ವಿದ್ಯುತ್ ಕಳುವಾಗುವುದರ ಬಗ್ಗೆ ಮಾಹಿತಿಯಿರುವ ವಿದ್ಯುತ್ ಬೋರ್ಡು ಆಗಾಗ ದಿಡೀರ್ ಆಗಿ ಪರಿವೀಕ್ಷಣೆಗೆ ಆಗಮಿಸಿ ಸಿಕ್ಕಿಬಿದ್ದವರಿಗೆ ದಂಡ ಹಾಕುತ್ತಿದ್ದರು. ಆದರೆ ಆ ಹೊತ್ತಿಗೆ ಜನರು ಜಾಣರಾಗಿಬಿಟ್ಟಿದ್ದರು. ಪರಿವೀಕ್ಷಕರ ಆಗಮನದ ವಾಸನೆ ಹೇಗೋ ತಲುಪಿ ಅವರು ನಮ್ಮ ನಮ್ಮ ಓಣಿಗೆ ಬರುವ ಮೊದಲೇ ಎಲ್ಲ ಕೊಕ್ಕೆಗಳನ್ನು ತೆಗೆದು ಅಡಗಿಸಿ ಬಿಡುತ್ತಿದ್ದರು.

ಇದೆಲ್ಲ ಯಾಕೆ ನೆನಪಾಯಿತೆಂದರೆ ಇತ್ತೀಚೆಗೆ ಪತ್ರಿಕೆಯ ವರದಿ ಪ್ರಕಾರ ಸುಮಾರು ಐದು ಸಾವಿರದ ಐನೂರು  ವಿದ್ಯುತ್ ಕಳುವಿನ ಪ್ರಕರಣಗಳು ದಾಖಲಾಗಿವೆ.  ದಿಲ್ಲಿಯಲ್ಲಿಯೇ ಹದಿನೆಂಟು ತಿಂಗಳಾವಧಿಯಲ್ಲಿ ಸುಮಾರು ಐದು ಸಾವಿರದ ಐನೂರು ದೂರು ದಾಖಲಾದ ನಂತರ ನಾಲ್ಕು ಸಾವಿರದ ಐನೂರಕ್ಕೂ ಹೆಚ್ಚು ಪ್ರಾಥಮಿಕ ದೂರುಗಳು ದಾಖಲಾಗಿವೆ. ಈ ಪ್ರಕರಣದಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಜನರನ್ನು ಬಂಧಿಸಲಾಗಿದ್ದು  ಅವರಲ್ಲಿ ಇನ್ನೂರಕ್ಕೂ ಹೆಚ್ಚಿನವರು ದೋಷಿಗಳೆಂದು ಸಾಬೀತಾಗಿದೆಯಂತೆ..

ಹಾಗಿದ್ದಾಗ ಖಾಸಗೀಕರಣವೆಂಬುದು ಕೇವಲ ’ಮಿಥ್’ ಆಗಿದೆಯೇ ? ಇಲ್ಲ ಖಾಸಗೀಕರಣದಿಂದ ನಿಜವಾಗಿಯೂ ಸುಧಾರಣೆಯಾಗುತ್ತಿದೆ ಎಂಬುದನ್ನು ಹೇಗೆ ಕಂಡುಕೊಳ್ಳುವುದು ? .  

ಜೂನ್ 2002 ರಲ್ಲಿ, ದೆಹಲಿ ವಿದ್ಯುತ್ ಸುಧಾರಣಾ ಕಾಯ್ದೆ 2000 ಮತ್ತು ದೆಹಲಿ ವಿದ್ಯುತ್ ಸುಧಾರಣಾ (Transfer Scheme) ನಿಯಮಗಳು, 2001 ರ ನಿಬಂಧನೆಗಳ ಪ್ರಕಾರ ಮೊದಲಿದ್ದ ದೆಹಲಿ ವಿದ್ಯುತ್ ಮಂಡಳಿಯ ( ಡೆಲ್ಲಿ ವಿದ್ಯುತ್ ಬೋರ್ಡ್) ನ್ನು ಖಾಸಗೀಕರಣಗೊಳಿಸಲಾಗಿತ್ತು. ಅಂದಿನಿಂದ ಇದುವರೆಗೆ ದೆಹಲಿ ವಿದ್ಯಾತ್ ಬೋರ್ಡ್ ಅನ್ನು ಬಿಎಸ್ಇಎಸ್ ಲಿಮಿಟೆಡ್ (ಈಗ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್) ಮತ್ತು ಟಾಟಾ ಪವರ್ ಆರು ಘಟಕಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ.  

ದಿಲ್ಲಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಈ ಆರು ಕಂಪನಿಗಳು ಬಿಎಸ್ಇಎಸ್ ರಾಜಧಾನಿ ಪವರ್ ಲಿಮಿಟೆಡ್, ಬಿಎಸ್ಇಎಸ್ ಯಮುನಾ ಪವರ್ ಲಿಮಿಟೆಡ್, ದೆಹಲಿ ಟ್ರಾನ್ಸ್ಕೊ ಲಿಮಿಟೆಡ್, ಇಂದ್ರಪ್ರಸ್ಥ ಪವರ್ ಜನರೇಷನ್ ಕಂಪನಿ ಲಿಮಿಟೆಡ್, ದೆಹಲಿ ಪವರ್ ಕಂಪನಿ ಲಿಮಿಟೆಡ್, ಮತ್ತು ನಾರ್ತ್ ದೆಹಲಿ ಪವರ್ ಲಿಮಿಟೆಡ್ (ಇಂದು ಇದನ್ನು ಟಾಟಾ ಪವರ್ ದೆಹಲಿ ಡಿಸ್ಟ್ರಿಬ್ಯೂಷನ್ ಲಿಮಿಟೆಡ್ ಎಂದು ಕರೆಯಲಾಗುತ್ತದೆ).  ಈ ಕಂಪನಿಗಳು ದೆಹಲಿಯ ಸುಮಾರು ಅರವತ್ತು ಲಕ್ಷ ಬಳಕೆದಾರರಿಗೆ ವಿದ್ಯುತ್ ಪೂರೈಸುತ್ತಿವೆ.     

ಸ್ವಾನುಭವದ ವಿವರಣೆಯಂತೆ ದೆಹಲಿಯಂಥ ಮಹಾನಗರದಲ್ಲಿ ವಿದ್ಯುತ್ ಕದಿಯುವವರು ಬಡವರು, ಮಧ್ಯಮವರ್ಗದರಿಗಿಂತ ಉಳ್ಳವರೇ ಹೆಚ್ಚು, ಕಾಲಾಂತರದಲ್ಲಿ ನಾವು ಅಲ್ಲಿಂದ ಬೇರೆಡೆ ಮನೆ ಬದಲಿಸಿದೆವು. ಆಗ  ಖಿಡಕಿ ಎಕ್ಷ್ಟೆನ್ಷನ್ನಂತೆ ಅನಧಿಕೃತ ವಸತಿಪ್ರದೇಶಗಳ ಪಟ್ಟಿಯಲ್ಲಿದ್ದ ಇತರ ಪ್ರದೇಶಗಳು ಅಧಿಕೃತವಾಗಿ ಸಕ್ರಮಗೊಂಡವು. ವಿದ್ಯುತ್ ಬೋರ್ಡ್ ಅನಧಿಕೃತ ಪ್ರದೇಶದ ಎಲ್ಲ ನಿವಾಸಿಗಳಿಗೆ ಮೀಟರ್ ಒದಗಿಸಿ ಪವರ್ ಸಪ್ಲೈ ಕೂಡ ಬಂತು. ಮಣ್ಣಿನ ರಸ್ತೆಗಳೂ ಡಾಂಬರ್ ರಸ್ತೆಗಳಾದವು. ನಲ್ಲಿಯ ನೀರೂ ಬಂದಿರಬಹುದು. ಇದೆಲ್ಲವುಗಳ ಜೊತೆಗೆ ಕಳ್ಳತನದ ದಾರಿಗಳೂ ಬದಲಾಗುತ್ತಾ ಹೋಗುತ್ತವೆ. ಈ ಕಳ್ಳರಲ್ಲಿ ಯಾವ ಜಾತಿ ಧರ್ಮ ಶ್ರೇಣಿ ವರ್ಣದ ಬೇಧವಿಲ್ಲ. ಎಲ್ಲರೂ ಕಳ್ಳರೇ.  ಬೀದಿಯ ಪಕ್ಕದಲ್ಲಿ,  ದೂರದ ಬಯಲಿನಲ್ಲಿ ಒಂದು ಗುಡಿಸಲು, ಟಿನ್ ಶೀಟಿನ ಟೆಂಟ್ ಮನೆಯಿಂದ ಹಿಡಿದು ಫಾರ್ಮ್ ಹೌಸಿನ ವೈಟ್ ಕಾಲರಿನ ವಿದ್ಯುತ್ ಕಳ್ಳರಿಗೂ ಯಾವ ವ್ಯತ್ಯಾಸವಿಲ್ಲ.  ಬಡವರು ಸಿಕ್ಕಿಬೀಳುತ್ತಾರೆ, ಸಿರಿವಂತರು ನುಣುಚಿಕೊಳ್ಳುತ್ಟಾರೆ.  

ಮಹಾನಗರದ ಈ ವಿದ್ಯುತ್ ಕಂಪನಿಗಳಿಗೆ ವರ್ಷಕ್ಕೆ ಎನಿಲ್ಲವೆಂದರೂ ನಾನೂರು ಕೋಟಿ ರುಪಾಯಿಗಳಿಗೂ ಹೆಚ್ಚು  ನಷ್ಟ ಆಗುತ್ತಿದೆ. ಈ ಕಂಪನಿಗಳು ಹೇಗೆ ವಿದ್ಯುತ್ ಕಳ್ಳರ ಮೇಲೆ ಲಗಾಮು ಹಾಕುತ್ತಿದ್ದಾವೋ ಗೊತ್ತಿಲ್ಲ. ವಿದ್ಯುತ್ ಕಳ್ಳರನ್ನು ಹಿಡಿಯುವ, ಜಪ್ತಿ ಮಾಡುವ  ಪರಿನಿರೀಕ್ಷಕರ ತಂಡದ ಮೇಲೆ ಹಲ್ಲೆಗಳಾಗಿರುವ ಘಟನೆಗಳು ನಡೆದಿವೆ.  

ಮುಂಬರುವ ವಿಧಾನಸಭೆಯ ಚುನಾವಣೆಯ ಟೆಕ್ನಿಕ್ ಈಗಾಗಲೇ ಚುರುಕಾಗಿದೆ. ಕೇಜ್ರಿವಾಲ್ ಸರ್ಕಾರ  ಅನೇಕ ಉಚಿತ ಯೋಜನೆಗಳನ್ನು ಜಾರಿಗೊಳಿಸುತ್ತಲಿದೆ.  ಎಷ್ಟೋ ಲಕ್ಷಗಳ ನೀರಿನ ಬಿಲ್ ಮನ್ನಾ ಮಾಡಿತು. ಈಗ 200 ಯೂನಿಟ್ ವರೆಗಿನ ವಿದ್ಯುತ್ ಬಳಕೆದಾರರಿಗೆ ಶೇ.100 ರಷ್ಟು ಸಬ್ಸಿಡಿಯನ್ನು ನಮ್ಮ ಆಪ್ ಸರಕಾರ ನೀಡಲಿದೆ.  201 ರಿಂದ 400 ಯೂನಿಟ್ ವರೆಗಿನ ವಿದ್ಯುತ್ ಬಳಕೆದಾರರಿಗೆ ಶೆ. 50% ರಷ್ಟು ಲಭಿಸಲಿದೆಯಂತೆ. ಇದಕ್ಕಾಗಿ ಸರಕಾರ 1800 ರಿಂದ 2000ಕೋಟಿ ರುಪಾಯಿಗಳನ್ನು ಭರಿಸುತ್ತದಂತೆ.  ಇದಕ್ಕೂ ಮೊದಲು ಜೂನ್ ನಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸಾರಿಗೆಯಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿತ್ತು.ಆರ್ಥಿಕವಾಗಿ ದುರ್ಬಲರಾದ ಮಹಿಳೆಯರು  ಉಚಿತ ಮೆಟ್ರೋ ಸೌಲಭ್ಯವನ್ನು ಪಡೆಯಬಹುದು. ಇನ್ನುಳಿದವರು ಆರ್ಥಿಕವಾಗಿ ಶಕ್ತರಿರುವ ಮಹಿಳೆಯರು ಬಳಸಬಹುದು ಅಥವಾ ಬಳಸದೇಯೂ ಇರಬಹುದಾಗಿ – ಐಚ್ಛಿಕ ಪ್ರಯೋಜನದ ಕುರಿತು ಬಹಳಷ್ಟು ಚರ್ಚೆಗಳು ನಡೆದವು.  ಕಳೆದ ತಿಂಗಳಷ್ಟೇ ಸುಪ್ರಿಂ ಕೋರ್ಟ್ ಆಮ್ ಆದ್ಮಿ ಪಾರ್ಟಿಗೆ ನಾಗರಿಕರ ಹಣವನ್ನು ಸದ್ಬಳಿಕೆಯಾಗುವಂತೆ ಉಪಯೋಗಿಸಬೇಕೆಂದು ಆದೇಶಿಸಿ , ಉಚಿತ ಮೆಟ್ರೋ ಯೋಜನೆಯಿಂದ ದೆಹಲಿ ಮೆಟ್ರೋ ದಿವಾಳಿಯಾಗಬಹುದು,  ಭಾರಿ ಮೊತ್ತದ ನಷ್ಟವನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ಅಪೆಕ್ಸ್ ಕೊರ್ಟ್ ಎಚ್ಚರಿಸಿದೆ.  

ತಡೆರಹಿತ ವಿದ್ಯುತ್ ಪೂರೈಕೆಯ ಬಗ್ಗೆ ದಿಲ್ಲಿವಾಸಿಗಳಿಗೆ ಯಾವ ತಕರಾರಿಲ್ಲ. ಆಮ್ ಆದ್ಮಿ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜನಹಿತ ಕಾರ್ಯಗಳನ್ನು ಮಾಡಿದೆ. ವಿದ್ಯುತ್ ಕಳ್ಳರಿಗೆ ಭಾರಿ ಮೊತ್ತದ ದಂಡವನ್ನೂ ಐದು ವರ್ಷದ ಜೈಲು  ಶಿಕ್ಷೆಯೂ ಇದೆ. ಇದೇ ವರ್ಷದ ಆಗಸ್ಟ್ ಸೆಪ್ಟೆಂಬರ್ ತಿಂಗಳಿನಲ್ಲಿ ಕಡಕಡದೂಮಾ ವಿಶೇಷ ವಿದ್ಯುತ್ ನ್ಯಾಯಾಲಯದಲ್ಲಿ ವಿದ್ಯುತ್ ಕಳ್ಳತನದ ಪ್ರಕರಣಗಳನ್ನು ವಿಚಾರಣೆಗೊಳಪಡಿಸಿದ್ದು ದಿಲ್ಲಿಯ ಅನೇಕ ಸಂಪತ್ತುಗಳನ್ನು ಜಪ್ತಿ ಮಾಡುವ ನಿರ್ದೇಶನವನ್ನು ನ್ಯಾಯಾಲಯ ಅನುಮೋದಿಸಿದೆ. ಆದರೆ ಇಷ್ಟೇ ತ್ವರಿತವಾಗಿ, ಇಷ್ಟೇ ಬದ್ಧತೆಯಿಂದ ಎಷ್ಟು ಪ್ರಮಾಣದ ಕಾರ್ಯಾಚರಣೆ ಆಗುತ್ತದೆ, ಆ ಕುರಿತ ಅಂಕಿಅಂಶಗಳು, ದಾಖಲೆಗಳು ಏನಾಗುತ್ತವೆ? ಯಾರಿಗೂ ಗೊತ್ತಾಗುವುದಿಲ್ಲ.  

ಹಾಗಿದ್ದರೆ ಈ ಖಾಸಗೀಕರಣದಿಂದಾದ  ಪ್ರಯೋಜನವೇನು ಎಂಬ ಪ್ರಶ್ನೆ ಕಾಡುತ್ತದೆ.  ಇದನ್ನು ಬರಿ ಸಮಸ್ಯೆಯೆಂದು ಪರಿಗಣಿಸದೇ ಗಂಭೀರವಾಗಿ ಚಿಕಿತ್ಸಕ ನೋಟದಿಂದ ಯೋಚಿಸಿ ಅದಕ್ಕೆ ತಕ್ಕ ಪರಿಹಾರವನ್ನೂ ಕಂಡುಕೊಳ್ಳಬೇಕಿದೆ. ಈಗ ಭಾರತೀಯ ರೈಲಿನ ಕೆಲವು ರೈಲುಗಳನ್ನು ಖಾಸಗೀಕರಣಗೊಳಿಸುವ ಬಗ್ಗೆ ಕೇಳುತ್ತಿದ್ದೇವೆ.  ಅದರಿಂದ ಆಗುವ ಲಾಭ  ಯಾರಿಗೆ ? ಯಾತ್ರಿಕರಿಗೋ ರೈಲು ಕಾರ್ಪೋರೇಶನ್ ನ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ತಯಾಗಿರುವ  ಖಾಸಗೀ ಕಂಪನಿಗಳಿಗೋ ಎಂಬುದು ಚರ್ಚೆಯ ವಿಷಯ.