ನಮ್ಮ ಕಡಿಂದ್ ಎರ್ಡ ಸಾವ್ರ ಪಡ್ದಾರ್....ನಮ್ಗ ಹೋಟು ಹೊಡ್ದಾರ್

"ನಮ್ದು ಪ್ರಜಾಪ್ರಭುತ್ವ ರಾಷ್ಟ್ರ, ನಾವು ಸಂವಿಧಾನ ಬಿಟ್ಟು ಹೆಂಗ್ಯ ಬೇಕ್ ಹಂಗ್ ಹೋಗಾಕ್ ಬರಂಗಿಲ್ಲ".  "ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಒಳ್ಗ  ನಾಗರಿಕ ಸಮಾಜಾಗಿ ಮುಂದ್ ವರಿಬೇಕು" ಇಲ್ಲಾಂದ್ರ   "ಕ್ರೂರ ಮೃಗಗಳ ಹಂಗ್  ಮೃಗೀಯ ಸಮಾಜಾಗಿ ಪರಿವರ್ತನೆ ಹೊಂದ ಬೇಕ್" ಅನ್ನೋದನ್  ಇಂತಾ ಸಂಗತಿಗಳು ನಿರ್ಧರಿಸ್ತಾವು"!.

ನಮ್ಮ ಕಡಿಂದ್ ಎರ್ಡ ಸಾವ್ರ ಪಡ್ದಾರ್....ನಮ್ಗ ಹೋಟು ಹೊಡ್ದಾರ್

ಏ.... ಬಸಣ್ಣಾ, ತಡಿಯೋ... ನಿ ಹಿಂಗ್ ಓಡಿದ್ರ ಹೆಂಗ್ಪಾ!, ನಾ ಮದ್ಲ ವಯಸ್ಸಾದವಾಂ?.  ಆರ್ಧಾ  ಹರ್ದಾರಿಯಿಂದಾ ನಿಂದ ನಿನ್ನ ಬೆನ್ನ ಹತ್ತೇನಿ!. ವದ್ರೀದ್ರೂ ಹಂಗ್ ಹೊಂಟೀ....! ಕಿವ್ಯಾಗ್ ಅದೇನ್ ಸಿಗ್ಸಿಗೊಂಡ ಒಬ್ನ ಮತಾಡಕೊಂಡು ಹುಚಪ್ಯಾಲಿ ಹೊಂಟಂಗ್ ಹೊಂಟಿಯಲ್ಲ, ನಿಲ್ಲೋ...ಲೇ...!

ಏನ್ರೀ... ಕಾಕಾರ್ ನಿಮ್ಮ ಕಾಟಾ...!. "ರಾಮೇಶ್ವರಕ್ಕ ಹೋದ್ರು....ತಪ್ಪಲಿಲ್ಲಾ ಶನಿಶ್ವರನ ಕಾಟಾ" ಅನ್ನೊಂಹಂಗ್ "ಹುಡ್ಕೊಂಡ್ ಬಂದ್ ಕಾಟಾ ಕೊಡ್ತಿರಲ್ಲ, ಇದು ನಿಮ್ಗ ಸರಿ ಅನಸತೈತೆನೂ"..?.

ನಂದೇನ್ ಕಾಟೋ ತಮ್ಮಾ, ನಿ ಕೊಡೋ ಕಾಟದ ಮುಂದ್!. ನಿ ಹೊಂಟಿರೋ ಅವ್ಸ್ರಾ ನೋಡಿದ್ರ ನಿಮ್ಮ ಗುರುಗಳಹತ್ರಾ ಹೊಂಟಂಗ್ ಕಾಣತೈತಿ!.

"ನಿಮ್ಮನ್ನ ಬಿಟ್ರ, ನಂಗ್ಯಾರ ಅದಾರ್ರೀ ಗುರ್ಗುಳು"!. "ಎಲ್ಲಾರು ಬರೀ ಗುರ್ರ ಅನ್ನೋ ಗುಳುಗುಳು...." ಅದೇನಂತ್ ಹೇಳ್ರೀ..?. ನಾನು " ಇಲೇಕ್ಷನ್ನಿನ್ ಖರ್ಚಿನ್ ಲೆಕ್ಕಾನ್ ಕೊಡಾಕ್  ಹೋಗಬೇಕ್". "ಚಾವ್ಡಿ ಮುಂದ್ ನಮ್ಮ ಜನಾ ನನ್ನ ಸಲ್ವಾಗಿ ಕಾಯಾಕ ಹತ್ಯಾರಾ!. ನಾನು ಲಗೂನ ಹೋಗಬೇಕು, ಇಷ್ಟತನ್ಕಾ ಅವ್ರ ಪೋನ್ ಮಾಡಿ ಲಗೂನಾ ಬಾ ಬಸಣ್ಣಾ ಅಂತ್ ತಲಿತಿನ್ನಾಕ ಹತ್ತಿದ್ದ್ರೂ"....!.

ಹಂಗ್ ವಿಷ್ಯಾ, ನಾ...ಎಲ್ಲೆ "ಪ್ರಣಯಾನಂದಸ್ವಾಮಿ ಆಮೇರಿಕಾಕ್ಕ ಹೋಗಿ ಅಲ್ಲೇನ... ಹೊಸಾ ದೇಶಾನ ಹುಟ್ಟ ಹಾಕಾಕ್ ಹತ್ಯಾನಂತಲ್ಲ..!. ಅಲ್ಗೆ ನಿ ಹೊಂಟಿರ್ಬೇಕು ಅಂತ್ ನಿನ್ನ ಹುಡ್ಕೋಂಡ್ ಬಂದೆ!". ನಿ ನೋಡಿದ್ರ "ಇಲೇಕ್ಷನ್ನಿನ್ ಖರ್ಚಿನ್ ಲೆಕ್ಕಾ ಕೊಡಾಕ ಹೊಂಟನಿ ಅಂತೀ"!. "ಇಲೇಕ್ಷನ್ಯಾಗ್ ರೊಕ್ಕಾ ಕೆಲ್ಸಾ ಮಾಡೇತಂತಿ"...?.

"ನೋಡ್ರೀದ್ರೆಲ್ಲ್ ಫಲಿತಾಂಶನಾ... 15 ಕ್ಷೇತ್ರದಾಗ್ 12ಕಡೆ  ನಮ್ಮ ಕ್ಯಾಂಡಿಡೇಟ್ ಗೆದ್ದಾರಾ..!  ನಾ ಮೊದ್ಲ ಹೇಳಿದ್ದೇ.. 12ಕಡಿಗೆ ನಮ್ಮವ್ರ ಗೆಲ್ಲೋದು ಅಂತ್!". 

ಹೌದೋ ಅದೆಷ್ಟ ಕರೆಕ್ಟಾಗಿ  ಹನ್ನೇರಡ ಸಿಟ್ ಗೆಲ್ಲೋದು ಅಂತ್ ಹೆಂಗ್ಯ ಹೇಳಿದ್ದೀ...?

ಅಲ್ರೀ "ಒಂದ್ ಹೋಟ್ಗೆ ಎರ್ಡಸಾವ್ರದ್ ಪಿಂಕ್ ನೋಟ್ ಕೊಟ್ಟವೀ, ನಿಮ್ಮರೇನ ಕೊಟ್ಟಾರ್!, ಅದ ಇನ್ನೂರು ರೂಪಾಯಿ...?. "ಜನಾ ನಮ್ಮ ಕಡಿಂದ್ ಎರ್ಡ ಸಾವ್ರ ಪಡ್ದಾರ್ ಹೋಟು ನಮ್ಗ ಹೊಡ್ದಾರ್" ನೋಡ್ರೀ?.  

ಆತ ಬಿಡ್ಪಾ..., "ನಿಮ್ಮ ಪಕ್ಷದವ್ರ ಗೆದ್ದಾರ್" "ನಿಮ್ಮ ಆಕ್ಳಾನ ಮುಂದ್ ಇರ್ಲಿ... ನಮ್ಮ ಹೋರಿನ ಹಿಂದ್ ಇರ್ಲಿ"!  ಏನ್ಪಾ, ನಿಮ್ಮ ಪ್ರಣಾಯಾನಂದಸ್ವಾಮಿದ್ ಹವಾ, ಭಾರೀ ಆತಲ್ಲೋ?. "ಅವುಂಗ್ ಇಲ್ಲೇ ಕಡ್ದ್ ಕಟ್ಟಿ ಹಾಕಿದ್ದ್ ಸಾಕಾಗಲಿಲ್ಲದ್ಗಂಗ್ ಕಾಣತೈತಿ"?.  ಅದ್ಕ , ಅವಾಂ ಅಮೇರಿಕಾಕ್ಕ ಹೋಗಿ ಅಲ್ಲೇನ್ ಜಾಗಾ ತಗೊಂಡು "ಕೈಲಾಸ ದೇಶ" ಅನ್ನೊ ಹೊಸಾ ದೇಶಾನ ಕಟ್ಟಾಗ ಹತ್ಯಾನಂತಲ್ಲೋ..?.

ಅದೇಲ್ಲಾಕ್ಕಾತ್ರೀ... ಕಾಕಾ, "ಪಾಪಿ ಸಮುದ್ರದಾಗ್ ಹೋದ್ರು ಮಣಕಾಲಮಟಾ ನೀರು" ಅನ್ನೋಹಂಗ್ ಈಕ್ಯಾವಿ ಹಾಕ್ಕೊಂಡಿರೋ ಸ್ವಾಮಿ ಇಲ್ಲೆ "ಮಾಡಬಾರ್ದ ಭಾನಗಡಿ ಮಾಡಿದ್ದ್ಕ ಅವ್ನ ಹುಡ್ಕಾಕ್ ಹತ್ತಿದ್ದ್ರೂ. ಇಲ್ಲಿ ಪೊಲೀಸ್ರೂ", "ಇವ್ರ ಸಹ್ವಾಸ್ ಬ್ಯಾಡ್ ತಗಿ ಅಂದು ಕತ್ಲಾದಕೂಡ್ಲೇ ಅಮೇರಿಕಾಕ್ಕ ಓಡಿ ಹೋಗಿ ಇವಾ ಅಲ್ಲೆ ಹೊಸಾ ಆಟ ಸುರ್ವು ಹಚಿಗೆಂಡಿರಬೇಕ್!", ಆದ್ರ "ಇಂಟರ್ ಪೋಲ್‍ನವ್ರು ಇವ್ನ ಬೆನ್ನ ಬಿದ್ದು ಇವ್ನ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಹೊಂಟ್ಸ್ಯಾರ್"!, "ಈಗ ಈ ಆಸಾಮಿ ಇಡಿ ವಿಶ್ವಾನ ಹೊಗ್ಳೋ ನಮ್ಮ ದೇಶದ ಬಗ್ಗೆ ಆ ಬ್ಯಾರೇ ದೇಶ್ದಾಗ್ ಕುತಗಂಡ್ ಬಾಯಿಗೆ ಬಂದಂಗ್ ಮತಾಡ್ಯಾನ ಈಮನ್ಷ್ಯಾ" ?.

ಹೌದ್... ಹಂಗಾರ್ "ಈವಿಷ್ಯಾಯ ನಮ್ಮ ದೇಶಭಕ್ತರಿಗೆ ಗೊತ್ತಿಲ್ಲನೂ"..?.

ಗೊತ್ಯಾಕ ಇಲ್ರೀ....! ಗೊತ್ತೈತಿ...! . ಟಿವ್ಯಾಗ್ ಸುದ್ದಿ ಬಂದೈತಿ, ಆದ್ರು "ಅವ್ರು ಇವ್ನ ಬಗ್ಗೆ ಬಾಯಿ ಬಿಡಂಗಿಲ್ಲ"?. ಅಂತಾದ್ದೇನ್ ಮೋಡಿ ಮ್ಯಾಡಾನೋ ಗೊತ್ತಿಲ್ಲ ನೋಡ್ರೀ..?

ಮೋಡಿ ಮಡ್ತಾನ್ ಬಿಡ್ಪಾ ಇವಾ...! ಅದೇನೋ "ಹೈದ್ರಾಬಾದಿನ್ಯಾಗ್ ನಡ್ದಿರೊ ಎನ್‍ಕಂಟರ್" !.

ಅದರೀ... "ಅಮಾಯಕ ಮಹಿಳಾ ಡಾಕ್ಟರ್ನ್  ಅತ್ಯಾಚಾರ ಮಾಡಿ ಕೊಲೆಮಾಡಿದ್ರಲ್ಲ",. "ಆ ನಾಲ್ಕ ಕೆಟ್ಟ ಹುಳಗಳ್ನ ನಮ್ಮ ಹುಬ್ಬಳ್ಳಿ ಹುಲಿ ಸಜ್ಜನರ್ ನೇತೃತ್ವದ  ಹೈದ್ರಾಬಾದಿನ ಪೊಲೀಸ್  ತಂಡಾ ಹೊಸ್ಕಿ ಹಾಕೇತಿ"!. 

"ಭೇಷ್ಯಾತ್ ಬಿಡು...ಇನ್ನು ಮುಂದ್ ಹೆಣ್ಮಕ್ಳ ಮ್ಯಾಲ್ ಕಣ್ಣ ಹಾಕೋ ಬದ್ಮಾಸ್ ಸುಳೆಮಕ್ಕಳ್ನ ಹಿಂಗ್ ಹೊಸ್ಕಿ ಹಾಕಬೇಕ್ ನೋಡ್".

ಹಂಗ್ ಅಂದ್ರ ಹೆಂಗ್ಯರಿ ಕಾಕಾ, "ಕಾಯ್ದೆ-ಕಾನೂನು ಇರೋದ್ ಯಾಕ್ ಹೇಳ್ರೀ"..?. "ಎಲ್ಲಾರ್ನು ಹಂಗ್ ಗುಂಡಿನಿಂದ ಹೊಡ್ದ ಸಾಯಸ್ಸೋದ ಆಗಿದ್ರ... ಈಬಾಬ್ರೀ ಮಸೀದಿ ಕೆಡ್ವಿದ್ರಲ್ ಅದ್ರಾಗ್ ಎಂತೆಂಥಾ  ಘಟನಾನು ಘಟಿಗಳು ಅದಾರಲ್ಲ, ಅವ್ರಿಗೆ ಇನ್ನು ಶಿಕ್ಷೆಯಾಕ ಆಗಿಲ್ಲ... ಅನ್ನೋದನ್ನ ಮೊದ್ಲ ಹೇಳ್ರೀ"?. ಅದು ಹೋಗ್ಲಿ,  "ಬೆಂಗ್ಳೂರಾಗ್ ಗೌರಿ ಲಂಕೇಶ್‍ಅವ್ರ ಹತ್ಯೆ, ಧಾರ್ವಾಡ್ದಾಗ ನಡ್ದ ಎಮ್. ಎಮ್. ಕಲ್ಬುರ್ಗಿ  ಅವ್ರ ಹತ್ಯೆಗಳ  ಬಗ್ಗೆ ನಿವೇನ್ ಹೇಳ್ತೀರಿ"?.

ಹಂಗಲ್ಲೋ,  "ಅತ್ಯಾಚಾರದ ಆರೋಪಿಗಳ್ನ ನ್ಯಾಯಾಂಗ ವಿಚಾರಣೆ ಮಾಡ್ದ  ಕೊಂದಹಾಕಿರದ್ನ  ಸಮರ್ಥನೆ ಮಾಡಕಹತ್ಯಾರ್ ಜನ"!, ಬರೆ ಜನಾ ಆಗಿದ್ರ ನಾ ಏನು ಹೇಳ್ತಿತ್ತಿದ್ದೀಲ್ಲಾ?. ಆದ್ರ "ಲೋಕಸಭೆ ಒಳ್ಗ  ಜಯಾ ಬಚನ್ ಸಹಿತ ಕೆಲ್ವು ಎಂಪಿಗಳೂ ಈ ಆರೋಪಿಗಳ್ನ  ಜನ್ರ ಮುಂದ್ ಹತ್ಯೆಮಾಡಬೇಕು" ಅಂತ್ ಹೇಳ್ಯಾರಲ್ಲ!.  "ಇಂತಾ ಆಕ್ರೋಶದ  ಮಾತುಗಳು ನಮ್ಮ ಸಂವಿಧಾನಕ್ಕ  ವ್ಯತಿರಿಕ್ತವಾದ ಮಾತು".!   "ಸಾಮಾನ್ಯ ಜನ್ರು ಇಂತಾ ಮಾತ್ ಆಡಿದ್ರ   ಅಮಾನುಷ  ಅಪರಾಧ ಕೃತ್ಯಗಳ್ನ ಭಾವೋದ್ವೇಗದಿಂದ ಕಂಡು ಹಿಂಗ್ ಅಂದಾರ ಅಂತ್  ಸುಮ್ಮನಾಗಬಹುದು"?.  ಆದ್ರ... "ಈ ಮಾತಗಳ್ನ ಜನಪ್ರತಿನಿಧಿಗಳು ಲೋಕಸಭೆ ಒಳ್ಗ ಮಂಡಿಸಿದಾಗ ಅದು ದಾಖಲಾಗಿ ಹೊಕ್ಕೈತಿ"?.  ಇಂತಾ "ಎನ್‍ಕೌಂಟರ್‍ಗಳ ಸಂಖ್ಯಾ ಹೆಚ್ಚಾದ್ರು ಆಗಬಹುದು"!.   "ಸಂಬಂಧ ಪಟ್ಟ ಅಧಿಕಾರಿಗಳು ಕಾನೂನಾತ್ಮಕ  ಕ್ರಿಯೆಗಳನ್ನ  ಎನ್‍ಕೌಂಟರ್ ಹೆಸ್ರಿನ್ಯಾಗ ಮುಗ್ಸಿದ್ರ ಇಂತಾದ್ದನ್ನ    ನಾಗರಿಕ ಸಮಾಜ ಒಪ್ಪಿಕೊಳ್ಳುವಂಥದಲ್ಲಾ"?.

ಹಂಗ್ ಅಂದ್ರ, ಏನ್ ಮಾಡಬೇಕಾಗಿತ್ತು ಅಂತೀರಿ....?.

"ಗೋಹತ್ಯೆ ಆರೋಪದಾಗೂ ಇಂತಾದ್ದ ವಿಚಾರ  ಸಾರ್ವಜನಿಕರಿಂದ ವ್ಯಕ್ತಾಗಿ ದೇಶದ ನಾನಾ ಕಡೆ  ಗೋಹತ್ಯೆ  ಆರೋಪಿಗಳೆಂದ್ ಸಿಕ್ಕಸಿಕ್ಕರ್ನ   ಬಡ್ಗಿ, ಕೊಡ್ಲಿ, ಕುಡಗೋಲ್‍ಗಳಿಂದ ಹೊಡ್ದ ಕೊಂದಿದ್ದನ್ನ ನಾನು-ನೀನು ಟಿವಿಯೋಳ್ಗ ನೋಡೇವ್ ಇಲ್ಲ"?. "ಇಂತಾ ಹತ್ಯೆಗಳ್ನ  ವೈಭಿಕರ್ಸೀ  ಇದ್ನ ದೇಶ ಪ್ರೇಮ ಅನ್ನೊಹಂಗ್  ಈ ನವ ಮಾಧ್ಯಮಗಳ ಮೂಲ್ಕ  ಬಿಂಬಿಸಿದ್ದಾತು"?.  "ಹಿಂಗ್ ಮುಂದುವರ್ದ್ರ ನಮ್ಗ  ಕಾನೂನು , ನ್ಯಾಯಾಲಯಗಳು ಯಾಕಬೇಕ್"?.  "ಎಲ್ಲ ರೀತಿ ನೈಜ ಅಪರಾಧಗಳ್ನ  ಕಲ್ಪಿತ ಅಪರಾಧಗಳಿಗೆ ಕೊಲ್ಲುವುದೊಂದೇ ನ್ಯಾಯ ಅನ್ನೋ  ಸಾಮೂಹಿಕ ಮನಸ್ಥಿತಿಗೆ  ನಾವು ತಲ್ಪವೇನೋ ಅನ್ನೋ ಅನುಮಾನ ನನ್ಗ ಕಾಡಾಕ ಹತ್ತೇತಿ"?.

"ಕಾಕಾರ ನನ್ಗ ನೀವು ಹೇಳಾಕ ಹತ್ತೀರೋ ಮಾತಿನ ಅರ್ಥಾ ತಿಳ್ಯಾಕ ವಲ್ದು..!. "ಸ್ವಲ್ಪ ನಮ್ಮ ಭಾಷೆದಾಗ ಹೇಳ್ರೀ..."!  

"ಲೇ ತಮ್ಮಾ, ನಾ ಏನ್ ಉರ್ದುದಾಗ ಹೇಳ್ಯಾಕ ಹತ್ತೇನಿ ಅಂತ್ ಮಾಡಿಯೇನ್"!,  "ಈ ಸುದ್ದಿ  ಆಳಕ್ಕಿಳ್ದು ಹೇಳಬೇಕಾತ್ ನೋಡ್"!. ಅಲ್ಲೋ "ಈ ವಿಷ್ಯಾ ಹುಡ್ಗಾಟ್ಕಿದಲ್ಲೋ... ಬಾಳಾ ಗಂಭೀರ ಐತಿ". "ಗಂಭೀರ್ನೋ, ಸೆಹವಾಗ್ನೋ? ನನ್ಗ ಗೊತ್ತಿಲ್ರೀ". "ನನ್ಗ ಪಟಾ-ಪಟ್ ಕೊಯ್ಲಿ ಸಿಕ್ಸರ್ ಹೊಡ್ದಂಗ್ ಇರ್ಬೇಕು ಹಂಗ್ ಹೇಳ್ರೀ". 

ಇವಂದ್ ಒಳ್ಳೆಕತಿಯಾತಲ್ಲೋ...?. "ಇದೇನ್ ಕ್ರಿಕೆಟ್ ಆಟಾ ಅಂತ್ ತಿಳ್ಕಂಡಿಯೇನ್!. ನಿನ್ನಂತಾ ಎಡ ಬಿಡಂಗಿಗಳು ಈ ವಿಚಾರ ಪುರ್ತಿ ತಿಳ್ಕಾಬೇಕ್". ಇಲ್ಲಾಂದ್ರ ಅನಾಹುತಾ ಆಕ್ಕಾವು?. "ಕೇಳಿಲ್ಲೆಇದು ನಾವು ಗಂಭೀರವಾಗಿ ವಿಚಾರ ಮಾಡಬೇಕಾದ ಸಂಗ್ತಿ"!. "ನಮ್ದು ಪ್ರಜಾಪ್ರಭುತ್ವ ರಾಷ್ಟ್ರ, ನಾವು ಸಂವಿಧಾನ ಬಿಟ್ಟು ಹೆಂಗ್ಯ ಬೇಕ್ ಹಂಗ್ ಹೋಗಾಕ್ ಬರಂಗಿಲ್ಲ".  "ನಾವು ಪ್ರಜಾಪ್ರಭುತ್ವ ವ್ಯವಸ್ಥೆ ಒಳ್ಗ  ನಾಗರಿಕ ಸಮಾಜಾಗಿ ಮುಂದ್ ವರಿಬೇಕು" ಇಲ್ಲಾಂದ್ರ   "ಕ್ರೂರ ಮೃಗಗಳ ಹಂಗ್  ಮೃಗೀಯ ಸಮಾಜಾಗಿ ಪರಿವರ್ತನೆ ಹೊಂದ ಬೇಕ್" ಅನ್ನೋದನ್  ಇಂತಾ ಸಂಗತಿಗಳು ನಿರ್ಧರಿಸ್ತಾವು"!.

ಈಗಾಗಲ್ಲೇ "ಸರಕಾರ್ದಾಗಿರೊ ದೊಡ್ಡ.. ದೊಡ್ಡ ಮಂದಿ ಮಾಡೊ ಸಣ್ಣ, ಸಣ್ಣ ಕೆಲ್ಸಾನ್  ದೇಶದ ಆರ್ಥಿಕ ಸ್ಥಿತಿ ಕುಸ್ದಿರೋದ್ನ ಟೀಕಾ ಮಾಡ್ದಿದವ್ರನ್ನ ದೇಶ ದ್ರೋಹಿ ಅಂತ್ ಕರೆಯೋ ಮಂದಿಗೇನು ಕಮ್ಮಿಯಿಲ್ಲಾ"? . ಹಿಂಗ್ "ಟೀಕಾ ಮಾಡೋರನ್ನ ಹಿಡ್ದು  ವಿಚಾರಣೆ ಮಾಡ್ದನ್   ಗಲ್ಲಿಗೆ ಹಾಕಬೇಕು ಅನ್ನೋ ಜಾನು ಹುಟಿಗೆಂಡಾರ್"?.  ಇದ್ಕ ಬೆಂಬ್ಲಾಗಿ  ಹಿಂದ್-ಮುಂದ್ ಏನು ಗೊತ್ತಿಲ್ದ್ ಒಂದಿಷ್ಟ ಜನಾ ನಿತಗಂಡ ಬಿಟ್ಟಾರ್!, ಹಿಂಗ್ ಮುಂದವರ್ದ್ರ ಹೆಂಗ್ ಅನ್ನೋ ಆತಂಕಾ ನಂದು!.

ನಿಮ್ಮ ಮಾತು ಕರೆ ಐತ್ರೀ ಕಾಕಾ, "ಆದ್ರ ಇದ್ನೇನ್ನೆಲ್ಲಾ ವಿಚಾರಾ ಮಾಡುವಷ್ಟು ತಾಳ್ಮಿ,ತಲಿ ಎರ್ಡು ಇಲ್ದಕ್ ಎಡವಟ್ಟಾ ಗಾಹತ್ಯಾವು ನೋಡ್ರಿ.....?. ಆದ್ರ ಕಾಕಾರ ಹೈದ್ರಾಬಾದಿನ್ಯಾಗ್ ನಡ್ದಿರೋ ಘಟನೆ ಬಗ್ಗೆ ನಾ ಕೇಳಿದ್ದು,  "ವಿಚಾರಣೆಗಂತ್ ಪೊಲೀಸ್ರೂ ಸ್ಥಳ ಪರಿಶೀಲ್ನಾ ನಡ್ಸಾಕಂತ್ ಈ ಬದ್ಮಾಸ್‍ಗಳನ್ನ ಇವ್ರು ಡಾಕ್ಟರಮ್ಮನ ಕೊಲೆಮಾಡಿ ಸುಟ್ಟಾಕಿದ್ದ ಸ್ಥಳಕ್ಕ ಕರ್ಕೋಂಡ್ ಹೋದ ವೇಳ್ಯಾದಾಗ' "ಈಪಾಪಿ ಸುಳೆಮಕ್ಳು ಪೊಲೀಸ್ರಮ್ಯಾಗ್ ಕೈಮಾಡಿದ್ದರಂತ್" ?.   "ಪೊಲೀಸ್ರ ಕೈಗೆ ಬಂದೂಕ್ ಸುಮ್ಮ್ನ ಕೊಟ್ಟಿರತಾರ್? ಸರ್ಕಾದವ್ರು". "ಪೊಲೀಸ್ರೂ  ಬಡಾ.. ಬಡಾ ಬಂದೂಕ್ ಹೊರ್ಗ ತಗ್ದು ಈನಾಲ್ಕು ಕೆಟ್ಟ ಹುಳಗಳೆ"್ಗ "ನೀವು ಇರೋ ಲೋಕ ಇದಲ್ಲರ್ಲೇ" ಬ್ಯಾರೇನ್ ಐತಿ  ಅಂತ್ "ನಾಲ್ಕುಮಂದಿಗೂ ನರಕದ ಬಾಗ್ಲಾ ತೋರ್ಯಾಸ್ ನೋಡ್ರೀ'. ಅವರ ಮಾಡಿದ್ದೂ ಬರೋಬ್ಬರಿ ಐತಿ.

ಇದ ಆತಂಕಾ ನಂದು, "ಯಾವ್ದ ನ್ಯಾಯ ವಿಚಾರಣೆ ನಡ್ಸ್ದ  ಆರೋಪಿಗಳ್ನ ಕೊಂದಿದ್ಕ ದೇಶದ ತುಂಬಾ  ಹರ್ಷ ವ್ಯಕ್ತಾಗಾಕ ಹತ್ತೇತಿ"?.  "ಈ ಪ್ರಕರಣ ಬೆಳ್ಕಿಗೆ ಬಂದಾಗಿಂದಾ  ಸಾಮಾಜಿಕ ಜಾಲ ತಾಣದಾಗ  ಸಾರ್ವಜನಿಕ ವೇದ್ಕಿ ಒಳ್ಗ ಬಾಳಷ್ಟ ಜನ್ರು   ಆರೋಪಿಗಳ್ನ   ವಿಚಾರಣೆ ಇಲ್ದ್  ಕೊಲ್ಲಬೇಕ್, ಗಲ್ಲಿಗೇರಿಸಬೇಕ್ ಆನ್ನೋ ಮಾತ ಬಾಳಾಗ್ಯಾವು?".  

ಹಂಗಾರ ಈಘಟ್ನೆ ಬಗ್ಗೆ ನಿಮ್ಮ ಅಭಿಪ್ರಾಯಾ ಏನು..?.

"ನೋಡ್ಪಾ  ನಾನು ಹೈದ್ರಾಬಾದಿನ್ಯಾಗ್ ನಡ್ದಿರೋ ಎನ್ಕೌಂಟರ್‍ನ ವಿರೋಧಾ ಮಡ್ತಾ ಇಲ್ಲಾ"?.  "ಹಲ್ಕಟ್ಟ ಕಾಮುಕ ಹೊಲ್ಸ್ ಸುಳೇ ಮಕ್ಳು ಮಾಡಾಬಾರ್ದನ್ ಮಾಡ್ಯಾರ್". "ಈಗ ಗುಂಡೇಟ್ ತಿಂದ್ ಶೆಟ್ದ ಹೋಗ್ಯಾರ್". ಆದ್ರ "ಹಿಂಗ್ ಮುಂದವರ್ಕೋತ ಹೋದ್ರ ದೇಶದ ಗತಿ ಏನು?, ಅನ್ನೋದ ನನ್ನ ಚಿಂತಿ"?. "ಅದ್ರಾಗೂ ನಿನ್ನಂತ ಅರ್ಧ-ಮರ್ಧಾ ತಿಳವಳಿಕಸ್ಥರ ಸಂಖ್ಯೆನ ಬಾಳಾಗಾಕ ಹತ್ತೇತಿ"?. ಇಂತಾದ್ರ ಬಗ್ಗೆ "ವಿಚಾರ ಮಾಡಿ ತಲಿಮ್ಯಾಲಿನ ಇದ್ದನಾಲ್ಕ ಕೂದ್ಲಾನೂ ಉದ್ರಾಕ್ ಹತ್ಯಾವು  ನಡಿ ಅತ್ಲಾಗ್"?.

ಹೌದ್ರೀ, ಮತ್ತ ನಿವ್ ಅಲ್ದ ಚಿಂತಿ ಯಾರ ಮಾಡಾಕ್ ಆಕ್ಕತೀ?.  ನೀವು ತಿಳ್ಸಿ ಹೇಳಿದ್ರ ನಮ್ಮ ತಿಳಿತೇತಿ...!.

"ಅಂತು -ಇಂತೂ  ರಿಜೆಲ್ಟೂ....ನಿಮ್ಮ ಪರವಾಗಿ ಬಂದೈತಿ....! ಏನೇರ್ ನಿಮ್ಮ ಪಕ್ಷಕ್ಕ ಲಾಭ ಆಕೈತೋ, ಏನ್ ಲುಕ್ಷ್ಯಾಣಿ ಆಕೈತೋ"..?

"ಕಾಕಾರ ನೀವು ಇಷ್ಟ್ಯಾಕ್ ಅವ್ಸ್ರಾ ಮಾಡ್ತೀರಿ...! ತಡಕೊಳ್ಳ್ರೀ, ನಿಮ್ಗ ಗೊತ್ತಾಕ್ಕೇತಿ".  "ನಮ್ಮ ಸರ್ಕಾರಾನ್ ಮುಂದ ಮೂರುವರಿ ವರ್ಷ ಮುಂದುವರಿತೈತಿ"!, ನಮ್ಮ ಯಡೆಯೂರ್ಸಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರಿತ್ಯಾರ್ ನೋಡ್ರಿ". ಕಾಕಾ ಹೊತ್ತ ಮುಳ್ಗೆ ಹೋತು, 'ನಮ್ಮ ಜನಾ ಪೋನ್ ಮ್ಯಾಲ್ ಪೋನ ಹಚ್ಚಾಕ ಹತ್ಯಾರ್' ನಾ ಇನ್ನ ಬರ್ತನಿ ಮಾತಾಡಿ ಮಾತಾಡಿ ನಾಲ್ಗೆ ಬ್ಯಾರೇ ಒಣಗೇತಿ ಎಂದ್ ಬಸ್ಯಾ ಅಲ್ಲಿಂದ ಕಂಬಿ ಕಿತ್ತಾ.....!