ಆಕಾಡೆಮಿಗಳ ನೇಮಕಾತಿಯಲ್ಲೂ ರಾಜಕೀಯ! ಮುಖವಿಲ್ಲದವರಿಗೇ ಮಣೆ

ಸಾಂಸ್ಕೃತಿಕ ವಲಯದಲ್ಲೂ ವಿಶೇಷ ಕೊಡುಗೆ ನೀಡಿದವರಿಗೆ ಮಣೆ ಹಾಕುವ ಬದಲು ತಮ್ಮ ಪಕ್ಷದ ಅನುಯಾಯಿಗಳನ್ನು ಗುರುತಿಸುವುದರಿಂದ ಮುಖವಿಲ್ಲದವರೇ ಮುಖ್ಯವಾಗಿರುವಂತೆ ಗೋಚರಿಸುತ್ತಾರೆ. ದುರ್ಬಲ ನಾಯಕತ್ವ ಅಕಾಡೆಮಿಗಳ ಆತ್ಮವನ್ನೇ ಕಲುಷಿತಗೊಳಿಸಿ ನಿಸ್ತೇಜಗೊಳಿಸಿಬಿಡುತ್ತದೆ.

ಆಕಾಡೆಮಿಗಳ ನೇಮಕಾತಿಯಲ್ಲೂ ರಾಜಕೀಯ! ಮುಖವಿಲ್ಲದವರಿಗೇ ಮಣೆ

ರಾಜ್ಯ ಬಿಜೆಪಿ ಸರ್ಕಾರ 16 ಆಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರ ಪಟ್ಟಿ ಬಿಡುಗಡೆಗೊಳಿಸಿದ್ದು ಇದರಲ್ಲಿ ಅನೇಕ ಮಂದಿ ಅಪರಿಚಿತರೇ ಇದ್ದಾರೆ. ಮುಖವಿಲ್ಲದವರೇ ಬಹುತೇಕ ತುಂಬಿ ಹೋಗಿರುವುದರಿಂದ ರಾಜ್ಯ ಸರ್ಕಾರದ ಪ್ರತಿಭೆಯ ಮಾನದಂಡದ ಬಗ್ಗೆಯೇ ಅನುಮಾನ ಹುಟ್ಟುತ್ತದೆ. ದಕ್ಷರು, ಕ್ರಿಯಾಶೀಲರು, ಸಮರ್ಥರು, ಪ್ರತಿಭಾವಂತರ ಹೆಸರುಗಳನ್ನು ಭೂತಕನ್ನಡಿ ಹಿಡಿದುಕೊಂಡು ಹುಡುಕಬೇಕಾಗಿದೆ.  

ಎಬಿವಿಪಿ ಮತ್ತು ಸಂಘಪರಿವಾರದ ಭಾಗವಾಗಿರುವವರನ್ನೇ ತೆಗೆದುಕೊಂಡಿರುವ ಕಾರಣ ಬಿಜೆಪಿ ಜತೆ ಗುರುತಿಸಿಕೊಂಡಿರುವ ಸಾಹಿತ್ಯ ಮತ್ತು ಸಂಸ್ಕೃತಿ ಕ್ಷೇತ್ರದ  ಶ್ರೇಷ್ಠರು ಹೋಗಲಿ ಪರಿಚಿತರ ಕೊರತೆ ಸಾಕಷ್ಟಿದೆ ಎನ್ನುವುದು ಗೊತ್ತಾಗುತ್ತದೆ.

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ ಟಿ ಎಸ್ ನಾಗಭರಣ ಅವರನ್ನು ಆಯ್ಕೆ ಮಾಡಲಾಗಿದೆ ಟಿ ಎಸ್ ನಾಗಭರಣ ಈಗಾಗಲೇ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು.  ಕಿರುತೆರೆ ಮತ್ತು ಬೆಳ್ಳಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿ ಮನೆಮಾತಾದವರು.  ಆದರೆ ಇಂತಹ ಪ್ರತಿಭಾವಂತರ ಆಯ್ಕೆ ಈ ಬಾರಿಯ ಆಕಾಡಮಿ ನೇಮಕಾತಿಯಲ್ಲಿ ತುಂಬಾ ಕಡಿಮೆ.

ಕನ್ನಡ ಅಭಿವೃದ್ದಿ ಪ್ರಾಧಿಕಾರದಲ್ಲಿ ಸದಸ್ಯರಾಗಿ ಕಬ್ಬಿನಾಲೆ ವಂಸತ್ ಭಾರದ್ವಜ, ಡಾ ವಿಜಯಲಕ್ಷ್ಮೀ ಬಾಳೇಕುಂದ್ರಿ, ಅಬ್ದುಲ್ ರೆಹಮಾನ್ ಪಾಷಾ, ಎನ್ ಆರ್ ವಿಶುಕುಮಾರ್ ಅವರಂಥ ಪರಿಚಿತ ಮುಖಗಳು ಸದಸ್ಯರಾಗಿದ್ದಾರೆ. ಇದರಲ್ಲಿ ರೋಹಿತ್  ಚರ್ಕವರ್ತಿ ಸಂಘ ಪರಿವಾರದ ಸಾಮಾಜಿಕ ಜಾಲ ತಾಣದ ಮುಖ. ಕನ್ನಡಕ್ಕಾಗಿ ಅವರ ಕೊಡುಗೆ ಇನ್ನಷ್ಟೇ ಗೊತ್ತಾಗಬೇಕಿದೆ.   ಹಾಗೆ ನೋಡಿದರೆ ವಾರ್ತಾ ಮತ್ತು ಪ್ರಚಾರ ಇಲಾಖೆ ನಿರ್ದೇಶಕರಾಗಿ ನಿವೃತ್ತರಾದ ಎನ್ ಆರ್ ವಿಶುಕುಮಾರ್  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಹೆಚ್ಚಿನ ಒಡನಾಟ ಇರಿಸಿಕೊಂಡಿದ್ದವರು. ಅವರ ಆಯ್ಕೆ ನಿಜಕ್ಕೂ ಅಚ್ಚರಿ ಉಂಟುಮಾಡಿದೆ.

ಕನ್ನಡ ಸಾಹಿತ್ಯ ಆಕಾಡೆಮಿಯಲ್ಲಿ ಅಧ್ಯಕ್ಷರು ಮತ್ತು ಬಹುತೇಕ ಸದಸ್ಯರು ಜಿಲ್ಲಾ ಮಟ್ಟದಲ್ಲಿ ಗುರುತಿಸಿಕೊಂಡಿರುವವರು ಇದ್ದಾರೆಯೇ ಹೊರತು ಸಾಹಿತ್ಯ ಕೃಷಿಯಲ್ಲಿ ಮಹತ್ಸಾಧನೆ ಮಾಡಿದ ಮುಖಗಳೇ ಇಲ್ಲ.

ಹೊಸಬರ ಜೊತೆಗೆ ಕನ್ನಡ ಜಾನಪದ ಆಕಾಡಮಿಯ ಅಧ್ಯಕ್ಷರನ್ನಾಗಿ ಮಂಜಮ್ಮ ಜೋಗತಿಯನ್ನು ಮಾಡಿರುವುದು ಉತ್ತಮ ಆಯ್ಕೆ ಎಂದರೆ ತಪ್ಪಗಲಾರದು ಮೊದಲ ಬಾರಿಗೆ ತೃತೀಯ ಲಿಂಗಿಗೆ ಅವಕಾಶ ನೀಡಿ ಪ್ರೋತ್ಸಾಹಿಸಿರುವುದು ಉಳಿದ ಆಕಾಡಮಿಗಳಿಗೆ ಹೊಲಿಸಿಕೊಂಡರೆ ಉತ್ತಮ ಎನಿಸುತ್ತದೆ

ಕರ್ನಾಟಕ ಬಯಲ ಆಕಾಡೆಮಿಗೆ ‘ಟಿ.ಬಿ.ಸೊಲಬಕ್ಕ’ನವರ ನೇಮಕ ಸ್ವಾಗತಾರ್ಹವಾಗಿದೆ ಪ್ರಗತಿ ಪರ ಚಿಂತಕರಾಗಿರುವ ಅವರ ಆಯ್ಕೆ ಬೇರೆಲ್ಲ ಆಕಾಡಮಿಗಳಿಗಿಂತ ಭಿನ್ನ ಎಂದು ಹೇಳಬಹುದು

ಭಾಗಶಃ 16 ಆಕಾಡಮಿಗಳಲ್ಲಿ ಬಿಜೆಪಿ ಕುರುಹು ಇರುವವರೇ ಹೆಚ್ಚಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದ್ದು ತಮ್ಮ ಸುತ್ತಮುತ್ತಿನವರಿಗೆ ನೇಮಕಾತಿ ನೀಡಿರುವುದು ಈ ಹಿಂದಿನ ಸರ್ಕಾರಕ್ಕೆ ಹೋಲಿಸಿಕೊಂಡರೆ ಈ ಬಾರಿ ನೇಮಕಾತಿಯಲ್ಲಿ ರಾಜಕೀಯ ಲೇಪನ ಇದ್ದವವರಿಗೆ ಹೆಚ್ಚು ಮಾನ್ಯತೆ ನೀಡಲಾಗಿದ್ದು ಪ್ರತಿಭಾವಂತರಿಗೆ ಅವಕಾಶ ನೀಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ.

ಕನ್ನಡದ ಮಹತ್ವದ ಕವಿ, ಉಪನ್ಯಾಸಕ ಮಲ್ಲಿಕಾರ್ಜುನ ತೊಲಹಳ್ಳಿ “ಜಾನಪದ ಅಕಾಡೆಮಿ, ಬಯಲಾಟ ಅಕಾಡೆಮಿ ಮತ್ತು ಯಕ್ಷಗಾನ ಅಕಾಡೆಮಿಗಳಂತಹ ಮೂರ್ನಾಲ್ಕು ಅಧ್ಯಕ್ಷರ ನೇಮಕಾತಿ ಹೊರತುಪಡಿಸಿದರೆ ಉಳಿದವುಗಳು ರಾಜಕೀಯ ಪ್ರಭಾವ ವಲಯದ ನಿರ್ಧಾರಗಳೇ ಆಗಿವೆ. ಇದು ಕನ್ನಡದಂತಹ ಬಹುಮುಖಿ ಸಂಸ್ಕೃತಿಗೆ ಅಷ್ಟು ಸೂಕ್ತ ನಿರ್ಧಾರ ಅಲ್ಲ.” ಎಂದು ಪ್ರತಿಕ್ರಿಯಿಸಿದ್ದಾರೆ 

ಅಂಕಣಕಾರ, ಉಪನ್ಯಾಸಕ ಟಿ,ಎನ್ ವಾಸುದೇವಮೂರ್ತಿ “ಸರ್ಕಾರಗಳು ಬದಲಾದಂತೆ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರುಗಳೂ ಬದಲಾಗುವುದು ಸಾಮಾನ್ಯ. ಆದರೆ ಈ ಪರಿಪಾಠ ನಿಜಕ್ಕೂ ಖಂಡನೀಯ. ಅಧಿಕಾರಕ್ಕೆ ಬರುವ ರಾಜಕಾರಣಿಗಳು ತಮಗೆ ಅನುಕೂಲಕರವಾದ ಪೊಲೀಸರನ್ನು ಮತ್ತು ಅಧಿಕಾರಿಗಳನ್ನು ತಮ್ಮಿಚ್ಛೆಯ ಕ್ಷೇತ್ರಗಳಿಗೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಅಧಿಕಾರವರ್ಗ ಸರ್ಕಾರದ ಮುಲಾಜಿನಲ್ಲಿ ಬದುಕುವ ಕಾರಣ ಇಚ್ಛೆ ಇದ್ದೋ, ಇಲ್ಲದೆಯೋ ಇಂತಹ ಬೇಕಾಬಿಟ್ಟಿ ವರ್ಗಾವಣೆಗಳನ್ನು, ರಾಜಕಾರಣಿಗಳ ಅವಿವೇಕದ ನಿರ್ಧಾರಗಳನ್ನು ಅವರು ಒಪ್ಪಲೇ ಬೇಕಾಗುತ್ತದೆ. ಆದರೆ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರುಗಳಿಗೆ ಇಂತಹ ಯಾವ ಮುಲಾಜೂ ಇರುವುದಿಲ್ಲ. ರಾಜಕಾರಣಿಗಳ ನಿರ್ಧಾರವನ್ನು ತಿದ್ದುವ, ಪ್ರಶ್ನಿಸುವ, ನಿರಾಕರಿಸುವ, ಪುನರಾಲೋಚಿಸುವ ಅಧಿಕಾರ ಅವರಿಗೆ ಇರುತ್ತದೆ.” ಎಂದರು

ಇನ್ನು ಕೊಡವ,ಕೊಂಕಣಿ,ಅರೆಭಾಷೆ ಸಾಹಿತ್ಯ, ಬ್ಯಾರಿ ಸಾಹಿತ್ಯ ಆಕಾಡಮಿ,ತುಳು ಸಾಹಿತ್ಯ ಆಕಾಡಮಿ ಇನ್ನುಳಿದ ಆಕಾಡಮಿಗಳು ಸಹ ಆ ಪ್ರಾಂತ್ಯಕ್ಕೆ ತಕ್ಕ ಹಾಗೆ ನೇಮಕಾತಿ ಮಾಡಿಕೊಂಡಿರುವುದನ್ನು ನೋಡಬಹುದಾಗಿದೆ.

ಪ್ರತಿ ಬಾರಿಯು ಸರ್ಕಾರಗಳು ಬರುತ್ತಿರುತ್ತವೆ ತಮ್ಮದೆ ಆದ ತಮಗೆ ಸೂಕ್ತ ಅನ್ನಿಸಿದಂತೆ ನೇಮಕಾತಿಗಳನ್ನು ಮಾಡಿಕೊಳ್ಳುತ್ತವೆ. ಅದು ಅಧಿಕಾರಿಗಳ ವಿಷಯದಲ್ಲೂ ಆಗಬಾರದು, ಸಾಂಸ್ಕೃತಿಕ ವಲಯದಲ್ಲೂ ಆಗಬಾರದು. ಅಧಿಕಾರಿಗಳು ಒಂದು ಜಾತಿಗೆ ಸೀಮಿತವಾದಂತೆ, ಕಾರ್ಯ ನಿರ್ವಹಿಸುವಂತೆ ಮಾಡುವಲ್ಲಿ ರಾಜಕಾರಣಿಗಳ ಪಾಲು ಹೆಚ್ಚಿನದು. ಸಾಂಸ್ಕೃತಿಕ ವಲಯದಲ್ಲೂ ವಿಶೇಷ ಕೊಡುಗೆ ನೀಡಿದವರಿಗೆ ಮಣೆ ಹಾಕುವ ಬದಲು   ತಮ್ಮ ಪಕ್ಷದ ಅನುಯಾಯಿಗಳನ್ನು ಗುರುತಿಸುವುದರಿಂದ ಮುಖವಿಲ್ಲದವರೇ ಮುಖ್ಯವಾಗಿರುವಂತೆ ಗೋಚರಿಸುತ್ತಾರೆ. ದುರ್ಬಲ ನಾಯಕತ್ವ ಅಕಾಡೆಮಿಗಳ ಆತ್ಮವನ್ನೇ ಕಲುಷಿತಗೊಳಿಸಿ ನಿಸ್ತೇಜಗೊಳಿಸಿಬಿಡುತ್ತದೆ.