ರಾಜಕಾರ್ಣಿಗಳು ಮಾಡಿರೋ ಹೊಲ್ಸ ತೊಳ್ಯಾಕ ಐದ ವರ್ಷಲ್ಲಾ... ಆರವತ್ತವರ್ಷಾದ್ರು ಆಗಂಗಿಲ್ಲ..

ರಾಜಕಾರ್ಣಿಗಳು ಮಾಡಿರೋ ಹೊಲ್ಸ ತೊಳ್ಯಾಕ ಐದ ವರ್ಷಲ್ಲಾ... ಆರವತ್ತವರ್ಷಾದ್ರು ಆಗಂಗಿಲ್ಲ..

ಮಳ್ಯಾಗ ಎಲ್ಗೆ ಹೊಂಟೀಪಾ ಬಸ್ವಾ, ಪಂಚ್ಮಿ ಹಬ್ಬಾ ಜೋರನು, ಯಾಕೋ ಮೊಸ್ಡಿ ಸಣ್ಣದಮಾಡಿಯಲ್ಲ !, ಉಂಡಿ ತಿಂದಿಯಿಲ್ಲ...?. ಎಲ್ಗೆ ಬಂತ್ಪಾ ನಿಮ್ಮ ಮಿನಿಸ್ಟರ್ ಸುದ್ದಿ.....ಮಂತ್ರಿಗಳನ್ನ ಕ್ಯಾಬಿನೇಟ್ಗೆ ಸೇರ್ಸಿಕೊಳ್ಳತಾರ ಇಲ್ಲೋ ನಿಮ್ಮ ಯಡೆಯೂರ್ಸು....?.

ಕಾಕಾರ ನೀವು ಅವ್ಸರಾ ಮಾಡ್ತೀರಿ, ಅಲ್ರೀ ಇಗರ ಮದ್ವಿ ಆಗೇತಿ, "ಒಮ್ಮೇಕಲೇ ಮಕ್ಕಳ ಹಡಿ ಅಂದ್ರ ಹೆಂಗ್ಯ?. ಅದ್ಕು ಟಾಯಮ್ ಬೇಕಲ್ರೀ...ಟಾಯಿಮ್ಮು"...! "ದಿನಾ ತುಂಬಬೇಕು, ಬ್ಯಾನಿ ತಿನ್ನಬೇಕು, ಅಷ್ಟ ಸರಳೈತೇನ್ರೀ....ನೀವು ತಿಳ್ದರ ಅದೀರಿ ಹೇಳ್ರಲ್ಲ"....?

ಅದೇಂತಾದ್ದಲೇ ಟಾಯಿಮ್ಮು.., ಆಲ್ಲಾ ನಿಮ್ಮ ಯಡೆಯೂರ್ಸ ಹೇಳಿ- ಕೇಳಿ ರಾಜಾಹುಲಿ ಅಂತ್ ನಿ ಕೊಚಗೊಳ್ಳತಿದ್ದೀ....! ಈಗ ನೋಡಿದ್ರ "ಮದ್ವಿಯಾಗಿ ಹುಡ್ಗಿ ಬಾಳೆಮಾಡಕಾ ಬರವಲ್ಲೂ ಅನ್ನೊಹಂಗ್ ಆಗೇತಲ್ಲೋ."? ಮದ್ಲ ನಿಮ್ಮ ಯಡೆಯೂರ್ಸಗೆ ವಯಸ್ಸಾತೇತಿ, ಒಬ್ಬಂಟಿ ಬ್ಯಾರೇ? ಎತ್ಲಾಗಂತ್ ಒಂದ ಬಡದೈತಿ..!

ಒಬ್ರ ಅನಬ್ಯಾಡ್ರೀ, ಅವ್ರಹಿಂದ್ ದೊಡ್ಡ ಹಿಂಡ್ ಐತಿ...!

"ಎದ್ಕ ಜೀವಾ ಹಿಂಡಾಕ್" ಹಿಂದ ನಿಮ್ಮ "ಯಡೆಯೂರ್ಸ ಸಿಎಂ ಆಗಿದ್ದ ವೇಳ್ಯಾದಾಗ ಯಾರ್ಯಾರು ಏನೇನ ಮಾಡಿದ್ರು.... ಅನ್ನೋದೂ  ನನ್ಗ ಅಷ್ಟ ಅಲ್ಲಾ ಈಡಿ ಕರ್ನಾಟಕದ ಜನ್ರೀಗೆ ಗೊತ್ತೈತಿ" ಬೀಡೋ ಮಾರಾಯಾ.

ಕಾಕಾರ ನೀವು ಕೊಪ್ಪಳಕ್ಕ ಹೋಗಿದ್ರೆನು..? ಯಾಕ ನನ್ಗ ಡೌಟ ಬರಾಕ ಹತ್ತೇತಿ.....!. ನಿಮ್ಮ ಮಾತಿನ ದಾಟಿ ನೋಡಿದ್ರ ನೀವು ಕೊಪ್ಪಳಕ್ಕ ಹೋಗಿ ಬಂದೀರಾಕ ಬೇಕು !, ಖರೆ ಹೇಳ್ರೀ...

ಇದ್ರಾಗ ಸುಳ್ಳ ಹೇಳೋದು ಎಲ್ಲಿಂದಾ ಬಂತ್ಲೇ...., ಖರೆನ ನಾ ಕೊಪ್ಪಳಕ್ಕ ಹೋಗಿದ್ದೆ. ಸಿಎಂ.ಇಬ್ರಾಹಿಂ ಸಾಹೇಬ್ರ ಭಾಷ್ಣಾ ಕೇಳಿಬಂದೆ ಏನಿಗ್..?

ಅದ್ಕ ಅನಕಂಡ್ರಿ ನಾ, ನೀವು ಮಾತಾಡಾಕ ಹತ್ತಿದ್ದ ದಾಟಿ ನೋಡಿ ಎಲ್ಲೆ ಇವ್ರು ಇಬ್ರಾಹಿಂನ್ ಉಚ್ಚಿದಾಟೆ ಬಂದಾರ ಅಂತ...!

ನಾ ಯಾಕ ಅವ್ನ ಉಚ್ಚಿದಾಟ್ಲಿ, ಮೊನ್ನೆ  ಕೊರಗಲ್ಲ ವಿರುಪಾಕ್ಷಪ್ಪನ ಪುಸ್ತಕ ಬಿಡುಗಡೆ ಸಮಾರಂಭ ಕೊಪ್ಳದಾಗ ಇತ್ತು.., ಕಾಕಾ ನೀ ಬರಾಕ ಬೇಕು, ಅಲ್ಲೆ ನಿನ್ನ ಅಭಿಮಾನಿಗಳು ಬಾಳಾ ಅದಾರ, ಕಾಕಾನ ತಪ್ದ ಕರಕ್ಕೊಂಡ ಬರ್ರೀ ಅಂತ್ ಹೇಳಿದ್ರಂತ್. ಅದ್ಕ ಅವ್ರು ನನ್ನ ಕರ್ದ್ರು ಅಂತ್ ಅಲ್ಗೆ ಹೋಗಿದ್ದೆ, ಕಾರ್ಯಕ್ರಮ ಆರಂಭಾಗೋದು ತಡಾ ಅಂತ ಗೊತ್ತಾತು. ಇಲ್ಲರ ಕುಂತು ಏನ್‍ಮಾಡೋದು ಅಂತ್ ಚಾ ಕುಡದ್ರಾತು ಅಂತ್ ಹಂಗ್ ಸಭಾಭವ್ನದಿಂದಾ ಹೊರಗ ಬಂದೆ, ಈ ಇಬ್ರಾಹಿಂ ಒಂದ್ ಸಮ್ನ ಮೈಕ್‍ನ್ಯಾಗ ಕೂಗಾಡಾಕ ಹತ್ತಿತ್ತು..... ನಾಎಲ್ಲೆ ಪ್ರಾಣೇಶ ಮತ್ತ ಅವ್ನ ತಂಡದವ್ರು ಕಾರ್ಯಕ್ರಮ ನೀಡಾಕ ಹತ್ಯಾರ ಅಂತ್ ನೋಡಾಕ ಹೋದ್ರ ಇಬ್ರಾಹಿಂ ಮಾತಾಡಾಕ ಹತ್ತಿತ್ತು. ಇನ್ನ ಇದ್ರಭಾಷ್ಣಾ ಕೇಳ್ತಿಯ..? ಹಂಗ್ ನಿಮ್ಮ "ಯಡೆಯೂರ್ಸನ್ ಹರಗಿದ್ದ.... ಹರಗಿದ್ದು....ಒಂದ ಸಮ್ನ ನಾಲ್ಕರ ಕುಂಟಿ ಹಾಕ್ಕೊಂಡು ಗಳೆ ಹೊಡ್ದಂಗ ಇತ್ತು ಅದ್ರ ಮಾತು".  "ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಸಪೂರ್ಟ ಮಾಡ್ಯಾರಲ್ಲ 15 ಮಂದಿ ಅನರ್ಹ ಶಾಸಕರು ಅವರು ನಾವು ಹುಟ್ಸಿದ ಮಕ್ಕಳು, ತಾಕತ್ತಿದ್ರ ನೀವು ಮಕ್ಕಳನ್ನ ಹುಟ್ಟಸರಿ, ನಾವು ಹುಟ್ಸಿದವರ್ನ ಕರಕ್ಕೊಂಡ್ ಹೋಗಿ ಸರ್ಕಾರ ಮಾಡಿಕೊಂಡಿರಿ  ಅಂತ್ ಎರ್ರಾಬಿರ್ರಿ ಕೊಡ್ವಾಕ ಹತ್ತಿತ್ತು ನೋಡು". 

ಆದ್ರು ನೀವ್ ಏನ ಅನ್ರೀ... ಇಬ್ರಾಹಿಂನ್ ಮಾತ...ಮಾತ ಬಿಡ್ರೀ...!  ಟವಲ್ನಾಗ ಟಿಂ.ಟಿಂ...ಕಟ್ಟಿ ಹೊಡ್ದಂಗ್ ಮಾತಾಡ್ತಾನ., ಏನಂತಿರಿ ಕಾಕಾ..!

ಹಾಳಾಗಿ ಹೋಗ್ಲಿ ಬಿಡ್ಲೇ, "ಊರು  ಸುದ್ದಿ ತಗೋಂಡು ಮುಲ್ಲಾ ಸೊಗಿದ್ನಂತ್! ಈ ಮುಲ್ಲಾನ ಸುದ್ದಿ ತಗೊಂಡ್ ನಾವ್ ಯಾಕ ಗಂಟ್ಲಾ ಹರಕೊಳ್ಳೋಣು ಬಿಡು ಅತ್ಲಾಗ್".  ಸಚಿವ ಸಂಪುಟ ವಿಸ್ತರಣೆ ಯಾವಗಂತ್ಪಾ....?. ತಂದ್ ಅಷ್ಟ ಆದ್ರ ಸಾಕನು, "ಯಡೆಯೂರ್ಸ ಸಿಎಂ ಆಗಾಕ ಬಾಳಷ್ಟ ಮಂದಿ ಏನೇನೋ ಹೊತ್ತಾರ!, ಅವ್ರು ಮಂತ್ರಿ ಆಗಿ ಮೇರೆದು ಬ್ಯಾಡನು ಮತ್ತ.....? ಪಾಪ "ಯಡೆಯೂರ್ಸನ್ ಸಿಎಂ ಮಾಡಾಕಂತ್ ಮುಂಬೈದಾಗ ಹೋಟೆಲನ್ಯಾಗ ಇದ್ದು ತಮ್ಮ ಎಮ್‍ಎಲ್‍ಎ ಗಿರಿ ಒತ್ತಿ ಇಟ್ಟದ್ರಲ್ಲ ಅವ್ರ ಗತಿ ಏನೋ"?.

ಅವ್ರ ಗತಿ, ಸದ್ಯಕ ಏನು ಕೇಳಬ್ಯಾಡ್ರಿ,  "ಒಬ್ಬಬ್ಬರ್ ವಲ್ಸಾಕ ಊರಿಗೆ ಬರಾಕ ಹತ್ಯಾರ?. "ಇನ್ ಐದ್ ತಿಂಗ್ಳಿಗೆ ಇಲೇಕ್ಷನ್ ಬರತೈತಿ, ಅದು ಬರದ್ರೋಳ್ಗ ಕ್ಷೇತ್ರದಾಗ ಕಳ್ಕೊಂಡಿರೋ ಮಾನಮಾರ್ಯಾದಿನ ಹುಡ್ಕಿಕೊಂಡು ತಮ್ಮ ಜೊತಗಿರೋ ಗಟ್ಟಿಗಾಳ ಕಾರ್ಯಕರ್ತರನ್ನು ಗಟ್ಟಿಮಾಡಿಕೊಂಡು ಮತ್ತ ತೊಡಿತಟ್ಟಾಕ ಸಿದ್ದಾಗಾಕ ಹತ್ಯಾರ".

"ಅಲ್ಲೋ ತಮ್ಮ ಈ ಮಾನಾ- ಮರ್ಯಾದಿ ಅಂದೆಲ್ಲ, ಅದೇನು ರೊಕ್ಕಾ ಕೊಟ್ರ ಶೆಟ್ರ ಅಂಗಡ್ಯಾಗ ಸಿಗತೈನು".? "ಎಷ್ಟು ಸರಳಾಗಿ ಹೇಳ್ತಿ, ಕಳ್ಕೊಂಡಿರೋ ಮಾನಮರ್ಯಾದಿ ಹುಡ್ಕತಾರ ಅಂತ್"!. ಹೋಗ್ಲೀ ಬಿಡೋ "ಇದೇನ್ ಗಬ್ಬ ವಾಸ್ನಿ ಹರ್ಡಿಲೇಪಾ, ಪಂಚ್ಮಿ ಉಂಡಿ ಎರ್ರಾಬಿರ್ರೀ ತಿಂದ್ ಹಿಂಗ್ ಹವಾಮನಾ ಹದಗೆಡ್ಸದ್"...!

ಹೌದ್ರೀ... ಮೊದ್ಲ ನನ್ಗ ಗ್ಯಾಸ್ಟ್ರಿಕ್,  "ಹೊತ್ತಿಗೆ ಸರಿಯಾಗಿ ಹೊಟ್ಟಿಗೆ ತಿನ್ನಲಿಲ್ಲಾಂದ್ರ ಗ್ಯಾಸ್ಟ್ರಿಕ್ ಸಮಸ್ಯೆ"!. "ಪಂಚ್ಮಿ ಹಬ್ಬದಾಗ ನಮ್ಮ ಮನಿಯಾಕಿ ಲಗೋ ಪೂಜಾ ಮುಗ್ಸಲಿಲ್ಲ". ಮಧ್ಯಾಹ್ನ ಮೂರಾದ್ರು ಕೂಳಹಾಕವಲ್ಲೂ...., "ಆ ದೇವ್ರು, ಈ ದೇವ್ರು ಅಂತ್ ದೇವ್ರಗೆ ತಂಡಿ ಹತ್ತೋಮಟ ಹಾಲ ಹಾಕಿದ್ದ ಹಾಕಿದ್ದೂ"  "ಏ ಮಾರಾಳ ಹೊಟ್ಟಿ ಹಸದೈತಿ, ಮೊದ್ಲ ಕೂಳಹಾಕಬಾ ಅಂದ್ರು ಕೇಳವಲ್ಲೂ ಏ ತಡ್ರೀ ನಿಮ್ಮದು ದಿನಾ ಇದ್ದದ್ದ, ಹಬ್ಬ-ಹರಿದಿನಾ ಅಂತ್ ಯಾಕ ಮಾಡ್ಯಾರ ಅಂತ್ ಗೊತ್ತಿಲ್ಲ ನಿಮ್ಗ"!. "ತಡ್ರೀ ದೇವ್ರ ಪೂಜಾ ಆಗೇಹೋತು, ನಾಗಪ್ಪಗ ಹಾಲೆರ್ದು ನಿಮ್ಗ ಊಣ್ಣಾಕ ಇಕ್ಕತನಿ" ಅಂತ್ ಕಲ್ಲಿನ ನಾಗಪ್ಪಗ ಹಾಲು ಎರ್ಯಾಕ ತಂಬ್ಗಿ ತುಂಬಾ ಹಾಲು ತುಂಬಿಕೊಂಡು ಮಕ್ಕಳನ್ನ ಕರ್ಕೊಂಡು ಹೋರ್ಗ ಹೋದ್ಲು.

ಅಲ್ಲೋ "ಕಲ್ಲಿನ ನಾಗಪ್ಪಗ ಹಾಲೆರ್ದ್ರ ಹಾಲು ಹರ್ದು ಗಟಾರ ಸೇರ್ತತಿ" ಅಂತ ಹೇಳಬೇಕಿಲ್ಲ, ಅದು ಅಲ್ದ "ಹಾಲು ಹಾವಿನ ಆಹಾರನ ಅಲ್ಲ". "ಹಾವು ಹುಳಾ -ಹುಪ್ಪ್ಡಿ ತಿನ್ನತೈತಿ. ಇಂತಾದ್ರಾಗ ಜನ್ರು ಲಕ್ಷಗಟ್ಟ್ಲೆ ಲೀಟರ್ ಹಾಲನ್ನು ನಮ್ಮ ಜನಾ ದೇವ್ರ ಹೆಸರ್ಯಾಗ ಕಲ್ಲಿಗೆ ಸುರ್ದು ಹಾಳಾ ಮಾಡ್ತಾರಲ್ಲ, ಇವ್ರುನ್ ಯಾರಿಂದಾನು ತಿದ್ದಾಕ ಆಗೋದಿಲ್ಲೋ". 

ಅಯ್ಯೋ ಊರ ತಿದ್ದಾಕ ಹೊಂಟ್ರೀ ಕಾಕಾ ನೀವು..., ಬಸವಣ್ಣ ಎಂಟನೂರ ವರ್ಷದ ಹಿಂದ ಹೇಳಿದ್ದ "ಕಲ್ಲ ನಾಗರಕೆ ಹಾಲನೆರವರು, ದಿಟದ ನಾಗರವ ಕಂಡರೆ  ಕಲ್ಲನೆಸೆವರು, ಉಣದ ಲಿಂಗಕ್ಕೆ ಭೋನವ ಹಿಡಿವರು, ಉಂಬುವ ಜಂಗಮ ಬಂದ್ರ ಮುಂದಕ್ಕ ಹೋಗು ಎನ್ನುವರು" ಅಂತ್ ಹೇಳಿದ್ರು. "ಆದ್ರು ನಮ್ಮ ಜನಾ ಮೂಢನಂಬ್ಕಿಂದಾ ಹೋರ್ಗ ಬರಾಕ ವಲ್ರು!" "ವರ್ಷದಿಂದಾ ವರ್ಷಕ್ಕ ಈಮೂಢ ಣಂಬ್ಕಿ ಆಚರಣೆ ಹೆಚ್ಚಾಗಾಕಹತ್ಯಾವು, ಹೊಸ ಹೊಸಾ ದೇವ್ರು ಓಣಿಗೆ ನಾಲ್ಕಾರು ನಾಯಿಕೊಡಿ ಹಂಗ ತಲಿಎತ್ತಾಕ ಹತ್ಯಾವು".  ಆ ದೇವ್ರ ಪೂಜಾ ಮಾಡಕಾ ಪೂಜಾರ್ರು, ಪೂಜಾ ಮಾಡಾಕ ನಾನಾ ನಮೂನಿ ಭಕ್ತರ ಸುಲಿತ್ಯಾರ?. "ದೇವ್ರ ಹೆಸ್ರನ್ಯಾಗ ಈಪೂಜಾರಿಗಳು, ಜ್ಯೋತಿಷ್ಯಾ ಹೇಳೋರು ವರ್ಷದಾಗ ಒಂದೊಂದ ಕಡೆ ಸೈಟ್ ಹಿಡ್ದು ಮನಿ, ಅಂಗ್ಡಿ ಕಟ್ಟಿಸಿ ಬಾಡಗಿ ರೊಕ್ಕಾ ಎಣ್ಸಿಕೊಂಡು ಭರ್ಜರಿ ಜೀವ್ನಾ ನಡ್ಸಾಕಹತ್ಯಾರ".  ಆದ್ರ ದೇವ್ರನ ಪೂಜಾ ಮಾಡ್ಸತಾ ಜನ್ರು ರೊಕ್ಕಾನ ಈಪಾಜಾರಿಗಳು, ಜ್ಯೋತಿಷಿಗಳ ಹೆಣಕ್ಕ ಇಟ್ಟು ಇವು ಬೇವರ್ಸಿಹಂಗ್ ಆಗ್ಯಾವು"!. "ಒಬ್ರು ಉದ್ದಾರಾಗಿದ್ದು ನಾ ಅಂತು ನೋಡಿಲ್ಲ...!.

ದೇವ್ರನ ನಂಬಿಕೊಂಡ ಕುತಗೊಂಡ್ರ ಯಾರು ಉದ್ದಾರಾಗೋದಿಲ್ಲೋ, ನಮ್ಮ ಉದ್ದಾರ ನಮ್ಮ ಕೈಒಳ್ಗ ಐತಿ, ಬಸವಣ್ಣ ಹೇಳಿಲ್ಲನೂ ಕಾಯಕವೇ ಕೈಲಾಸ ಅಂತ್" ಆ ಮಾತಿನಹಂಗ್ "ಕಾಯ್ಕಾಮಾಡಿ ಜೀವ್ನ ನಡ್ಸಬೇಕು. ಮೈಮುರ್ದ ದುಡಿಬೇಕು, ಹೊಟ್ಟುತುಂಬಾ ಹೊಡಿಬೇಕು, ಅವಾ ಕರ್ದಾಗ ನಡಿಬೇಕು. ಇಷ್ಟ ನೋಡು ಬದ್ಕು ಅಂದ್ರ". ಅದ್ನ ಬಿಟ್ಟು "ಈ ಕಾಳಿ, ಬೋಳಿ, ಮರಾ, ಮಣ್ಣು-ಕಲ್ಲು ಅಂತ್ ಕಂಡ್ ಕಂಡ್ ದೇವ್ರುಗಳನ್ನ ನಮ್ಮನ್ನ ಉದ್ದಾರ ಮಾಡ್ರೀ ಅಂತ್ ಹೋಗಿ ಅಡ್ಡಬಿದ್ರ.... ಉದ್ದಾರಾಗೋದು ಇರ್ಲಿ ಇದ್ದ-ಬದ್ದ ರೊಕ್ಕಾ, ಅಳ್ದ-ಉಳ್ದ ಆಸ್ತಿ ಕರ್ಗಿ ಈ ಪೂಜಾರು, ಜ್ಯೋತಿಷಿಗಳು ಉದ್ದಾರಾಕ್ಕಾರ". "ಇದ್ನ ಯಾವಾ ಭಾಷಾದಾಗ ನಮ್ಮ ಜನ್ರಿಗೆ ಹೇಳಬೇಕೋ ನನ್ಗಂತು ತಿಳಿದಂಗ್ ಆಗೇತಿ ನೋಡು". ಆತು ಬಿಡು ಹಬ್ಬದಾಗ ನಿನ್ನ ಹೆಂಡ್ತಿ ಕಡಿಗೂ ಕೂಳ ಹಾಕಿದ್ಲ.... !.

ಎಲ್ಲೆ ಹಾಕ್ತಾಳ್ರೀ, "ಊಣ್ಣಾಕ ಹಾಕದ್ರಾಗ್ ಬರೋಬ್ಬರಿ ನಾಲ್ಕ ಹೊಡ್ದಿತ್ತು. ಅವಾಗ್ ನಾಲ್ಕ ಶೇಂಗಾ ಉಂಡಿ, ನಾಕ ಎಳ್ಳುಂಡಿ, ನಾಕ ಕಡ್ಲಿ ಉಂಡಿ, ಕಡ್ಲಿಕಾಳ ಉಸ್ಳಿ, ಮೂರ ರೊಟ್ಟಿ, ಮ್ಯಾಲ್ ನಾಲ್ಕ ನಾಕ ಕಡ್ಬು ತಿಂದ್ ಒಂದಹಿಡಿ ಅನ್ನಾ ಉಂಡೆ ನೋಡ್ರಿ"...!

ಅಲ್ಲೋ "ನಿಂದೇನು ಹೊಟ್ಟೆ ಹುರಳಿ ಕುಪ್ಪಿಯವ್ರ ಗೋಡಾನೂ? ಇದ್ನೆಲ್ಲಾ ಒಬ್ನ ತಿಂದ್ಯಾ..? ಅದ್ಕ ವಾತಾವರ್ಣ ಇಷ್ಟ ಹದಗೆಟ್ಟೈತಿ". 

"ನಂದ್ಯಾವ ಲೆಕ್ಕ ಬಿಡ್ರೀ,  ನಾ ಬಿಟ್ಟ  ಹೂಸಿನಿಂದ ಬರಿ ಸುತ್ತಮುತ್ಲ  ವಾತಾವರ್ಣ ನಾರಾಕ ಹತ್ತೇತಿ...., ಆದ್ರ ಈರಾಜಕಾರ್ಣಿಗಳು ಬೆಟ್ಟ-ಗುಡ್ಡಾ, ಗಿಡಾ-ಗಂಟಿ, ಊರು-ಕೇರಿ, ಕೆರಿಕಟ್ಟಿ, ಹಳ್ಳಾ-ಕೊಳ್ಳ ಬಿಡ್ದಂಗ್ ನುಂಗಿ ನೀರ ಕುಡ್ದಾರ"!. "ಅವ್ರಿಂದ ಆಗಿರೂ ಹೋಲ್ಸ್ ತೊಳ್ಯಾಕ 5 ವರ್ಷ ಅಲ್ಲಾ ಇನ್ನು ಆರವತ್ತ ವರ್ಷಾದ್ರು ಆಗಂಗಿಲ್ಲ"?. ಬರ್ರೀ ಬರ್ರೀ ಹೆಂಗ್ಯೂ ಮನಿ ಹತ್ರ ಐತಿ, ಮನಿಕಡಿಗೆ ಹೋಗೋಣ ನಡ್ರಿ ನೀವು ನಾಲ್ಕ ಉಂಡಿ ತಿಂದು ಹೋಗವಂತ್ರಿ ಬರ್ರೀ ಎನ್ನುತ್ತಾ ಬಸ್ಯಾ ಕಾಕಾನ್ ಕೈಹಿಡ್ಕೊಂಡು ತನ್ನ ಮನೆಕಡಿಗೆ ಕರೆದೊಯ್ದ.