ರಮ್ಯಾ ಎಂಬ ಪೊಲೀಸ್ ನಾಯಿ !

ರಮ್ಯಾ ಎಂಬ ಪೊಲೀಸ್ ನಾಯಿ !

ಸಾವು ಸದ್ದು ಮಾಡುವುದಿಲ್ಲ. ಅಲ್ಲಿ ಮುಕ್ತಾಯದ ಬೆರಗಿರುತ್ತೆ. ‘ಇಷ್ಟೇನಾ?!’ ಎಂಬ ಪ್ರಶ್ನೆಯೂ ಅಚ್ಚರಿಯೂ ಇರುತ್ತೆ. ಸತ್ತವರ ಸನಿಹದಲ್ಲಿ ನಿಂತು ನೋಡಿ; ಅಲ್ಲಿ ನೆನಪುಗಳ ಸಂಸ್ಕರಣೆ ನಡೆದಿರುತ್ತೆ. ಎಲ್ಲೋ ಅವಿತಿರಬಹುದಾದ ಆತ್ಮವನ್ನು ಎಳೆತಂದು ಕಟಕಟೆಯಲ್ಲಿ ನಿಲ್ಲಿಸಿ, ಏಕಾಂಗಿ ದಾಳಿಗೆ ಒಳಪಡಿಸಿಬಿಟ್ಟಿರುತ್ತೇವೆ. ಸಾವಿಗೆ ಹೋದಾಗಲೇ ಗೊತ್ತಾಗೋದು; ನಮ್ಮೊಳಗಿನ ಪ್ರೀತಿ, ಪ್ರೇಮ, ಕೋಪ, ತಾಪ, ಮತ್ಸರ, ತಕರಾರು ಏನೆಂಬುದು! ಹಾಗಾಗಿ, ಒಂದು ಜೀವದ ಸಾವು ಇನ್ನೊಂದು ಜೀವದ ಉದ್ಧಾರವೂ ವಿನಾಶವೂ ಆಗಿಬಿಡಬಹುದು...

ಶಿವಮೊಗ್ಗದ ಡಿ.ಎ.ಆರ್. ಪೊಲೀಸ್ ಗ್ರೌಂಡಿನಲ್ಲಿ ಇತ್ತೀಚೆಗೆ ಸಾವಿನ ಸಂತಾಪದ ವಾತಾವರಣವೊಂದು ಸೃಷ್ಟಿಯಾಗಿತ್ತು. ಸುಂದರವಾದ, ಪ್ರಕೃತಿ ಸೊಬಗಿನ ಶಾಂತ ವಾತಾವರಣದಲ್ಲಿ ಸ್ವತಃ ಪೊಲೀಸರೇ ಕಣ್ಣೀರು ಹಾಕುತ್ತಾ ನಿಂತಿದ್ದರು. ಪೊಲೀಸರು ಕಣ್ಣೀರು ಹಾಕುವುದನ್ನು ಯಾವಾಗ, ಯಾರು ತಾನೇ ನೋಡಿರಲು ಸಾಧ್ಯ? ಆ ಇಲಾಖೆಯವರ ಕಣ್ಣೀರು ಬತ್ತಿಹೋಗಿ ದಶಕ-ದಶಕಗಳೇ ಕಳೆದು ಹೋಗಿರಬಹುದು. ಆದರೆ ಈಗ, ಇದೇನಿದು, ಹೀಗೆ ಕಣ್ಣೀರ ಧಾರೆ... ಅದೂ ಪೊಲೀಸರ ಕಣ್ಣುಗಳಿಂದ  ಜಲಧಾರೆ... `ನಿನ್ನ ನೆನಪುಗಳು ಕಾಡದೇ ಬಿಡವು ನನ್ನ’ ಎಂಬಂತೆ ಅಲ್ಲಿದ್ದ ಪೊಲೀಸರು ಒಂಟಿತನ ಅನುಭವಿಸುತ್ತಿದ್ದರು. ಅವರನ್ನು ಅನಾಥಪ್ರಜ್ಞೆ ಅಕ್ಷರಶಃ ಕಾಡುತ್ತಿತ್ತು.

`ಯಾವಾಗ್ಲೂ ಕಾರಂಜಿ ಹಂಗೆ ಚಿಮ್ತಿದ್ಲು ಸಾರ್... ಈಗ ಅಲ್ಲಾಡ್ತಾನೇ ಇಲ್ವಲ್ಲ ಸಾರ್...’ 

ಎಂದೊಬ್ಬ ಪೇದೆ ಗೊಳೋ ಎಂದು ಗೋಳಾಡ್ತಿದ್ದ. ಅಂಥದ್ದೇನಾಗಿದೆ ಅಲ್ಲಿ? ಏನು ದುರಂತ ಸಂಭವಿಸಿತೋ? ಯಾರಾದ್ರೂ ಈ ಪೇದೆ ಕಡೇವ್ರು ಹೋಗ್ಬಿಟ್ರಾ?- ಪ್ರಶ್ನೆಗಳು ಆ ಪೇದೆಯ ಗೋಳಾಟ ನೋಡಿ ಸಾಮಾನ್ಯವಾಗಿ ಹುಟ್ಟುತ್ತಿದ್ದವು. ಆದರೆ, ಅಲ್ಲಿ ಆ ಪೇದೆಯ ಯಾವ ಸಂಬಂಧಿಯೂ ಸತ್ತಿರಲಿಲ್ಲ. ಪೇದೆಯ ಗೋಳಾಟದ ಸದ್ದಿಗೆ ದಾರಿಯಲ್ಲಿ ಹೋಗಿಬರುವ ಜನರೆಲ್ಲ ಗುಡ್ಡೆಯಾಗಿದ್ದು ಮಾತ್ರ ನಿಜ. ಆದರೆ, ಅಲ್ಲಿನ ವಾತಾವರಣ ನೋಡಿ ಮನಸೋತು ಕಣ್ಣೀರಿನ ಒಂದು ಹನಿಯನ್ನಾದರೂ ಬೀಳಿಸಿಕೊಂಡು ಹೋಗದಿರಲು ಸಾಧ್ಯವೇ ಇರಲಿಲ್ಲ.

ಅವಳು ರಮ್ಯಾ!

ಹೃದಯಾಘಾತವಾಗಿತ್ತು ಅವಳಿಗೆ. ಸುಂದರವಾಗಿದ್ದಳು. ಆಕರ್ಷಕ ಮೈಮಾಟ. ಪಾದರಸದಂತೆ ಓಡಾಡಿಕೊಂಡಿದ್ದವಳು. ಇಂಥವಳಿಗೆ ಹೃದಯಾಘಾತವೇ? ಸಾವಿಗೆ ಹೃದಯವೇ ಇಲ್ಲವೇ? ಅಷ್ಟು ಕಠೋರವೇ ಸಾವು? ಜೊತೆಗಿರುವವರನ್ನೇ ಹೊತ್ತೊಯ್ದು ಮಣ್ಣು ಮಾಡಿಬಿಡುತ್ತದಲ್ಲ, ಜೊತೆಗಿರುವ ಜೀವಗಳ ಆತ್ಮಗಳನ್ನೇ ಜಿಂಜೋಡಿಬಿಡುತ್ತದಲ್ಲ- ರಮ್ಯಾ ನಿದ್ದೆ ಬಂದು ಮಲಗಿದವಳಂತೆಯೇ ಕಾಣುತ್ತಿದ್ದಳು. ಅವಳ ದೇಹದ ಮೇಲೆ ಸಾವಿನ ಕಿಂಚಿತ್ತು ಛಾಯೆಯೂ ಇರಲಿಲ್ಲ; ಕಾಣುತ್ತಲೇ ಇರಲಿಲ್ಲ ಅಲ್ಲಿ ಸಾವು.

ಅವಳು  ರಮ್ಯಾ. ಪೊಲೀಸರ ಅಣು ಅಣುವಿನಲ್ಲೂ ಬೆರೆತು ಹೋಗಿದ್ದಳು. ತಾನು ಹುಟ್ಟಿದ ನಾಲ್ಕೇ ತಿಂಗಳಿಗೆ ಸರ್ಕಾರಿ ಕೆಲಸ ಗಿಟ್ಟಿಸಿದ್ದಳು. ಸತತವಾಗಿ, ಹಗಲು-ರಾತ್ರಿ ಎನ್ನದೇ ಕೆಲಸ ಮಾಡುವ ಜೀವ ತನ್ನ ಹನ್ನೆರಡನೇ ವಯಸ್ಸಲ್ಲಿ ಸಾವು ಕಂಡಿದ್ದಾಳೆ, ತೀರಿಕೊಂಡಿದ್ದಾಳೆ, ಇಲ್ಲವಾಗಿದ್ದಾಳೆ, ಇನ್ನು ಮರಳಿ ಬರುವುದಿಲ್ಲ ಎಂಬಂಥ ಪ್ರಪಂಚಕ್ಕೆ ದಾಟಿದ್ದಾಳೆ. ಇಷ್ಟೊಂದು ಸಣ್ಣ ವಯಸ್ಸಿಗೆ ಹೃದಯಹೀನ ಹೃದಯಾಘಾತವೇ!

ಶಿವಮೊಗ್ಗದ ಪೊಲೀಸ್ ಇಲಾಖೆಯ ಶ್ವಾನದಳ (ಡಾಗ್‍ಸ್ಕ್ವಾಡ್)ದಲ್ಲಿ ರಮ್ಯಾಳೇ ಸೀನಿಯರ್. ನಿಯತ್ತಿನ ನಾಯಿ ಎಂದೇನಾದರೂ ಕರೆಯುವುದಿದ್ದರೆ ಅದಕ್ಕೆ ತಕ್ಕ ನಾಯಿ ರಮ್ಯಾ. ಪೊಲೀಸರ ಕ್ವಾಟ್ರಸ್ಸಿನಲ್ಲಿ ಮನೆ ಮನೆಗೂ ಚಿರಪರಿಚಿತೆ. ಹುಟ್ಟಿದಾಗ ಸುಂದರವಾಗಿದ್ದಳೆಂಬ ಕಾರಣಕ್ಕೆ ‘ರಮ್ಯಾ’ ಹೆಸರಿಡಲಾಯಿತಂತೆ. ಲ್ಯಾಬ್ರಡರ್ ತಳಿಯ ಹೆಣ್ಣು ನಾಯಿಯಾಗಿದ್ದ ರಮ್ಯಾಳ ಸಾಹಸಗಾಥೆಗಳು ಕಡಿಮೆ ಏನಿಲ್ಲ...

ರಿಪ್ಪನ್‍ಪೇಟೆ ಹೊಸನಗರ ತಾಲ್ಲೂಕಿನ ಹೋಬಳಿ. ಅಲ್ಲಿನ ಮನೆಯಲ್ಲಿ ಇಟ್ಟಿದ್ದ ಅಡಕೆ ಚೀಲಗಳು ಕಳ್ಳತನವಾದವು. ಪೊಲೀಸರಿಗೆ ದೂರು ಕೊಟ್ಟಾಗ ಅಲ್ಲಿ ರಮ್ಯಾ ಹಾಜರಾದಳು. ತನ್ನ ಕೆಲಸ ಆರಂಭಿಸಿದಳು. ಉಸಿರು ಬಿಗಿಹಿಡಿದು, ಒಂದೇ ಉಸಿರಿನಲ್ಲಿ ಬರೋಬ್ಬರಿ ನಾಲ್ಕು ಕಿಲೋಮೀಟರ್ ಓಡಿದಳು. ಸುಮ್ಮನೆ ಓಡಿದಳಾ? ಓಡಿ ಹೋಗಿ ನಿಂತಿದ್ದು ಕಳವಾಗಿ ಬಚ್ಚಿಟ್ಟಿದ್ದ ಅಡಕೆ ಚೀಲಗಳ ಬಳಿ!

ಹಾಗೇನೇ, ಸಾಗರದ ಅಡಕೆ ತೋಟದಲ್ಲೂ ಕಳ್ಳತನವಾಗಿ ದೂರು ದಾಖಲಾಗಿತ್ತು; ಅಲ್ಲೂ ರಮ್ಯಾ ಅಡಕೆಗಳ ಮೂಟೆ ಹುಡುಕಿಕೊಟ್ಟಳು. ಭದ್ರಾವತಿಯ ಮನೆಕಳ್ಳರನ್ನು ಜೈಲುಕಂಬಿಗಳ ಹಿಂದೆ ತಲುಪಿಸಿದ್ದು ಇದೇ ರಮ್ಯಾ. ಹೊಳೆಹೊನ್ನೂರಿನ ತಿಮ್ಲಾಪುರದಲ್ಲಿ ನಡೆದ ನಿಗೂಢ ಕೊಲೆಯನ್ನು ಭೇದಿಸಿದ್ದಳು ಹಿಂದೆ ಈ ರಮ್ಯಾ.

ಡಾಗ್‍ಸ್ಕ್ವಾಡ್‍ನ ಹೆಡ್ ಕಾನ್ಸ್ಟೆಬಲ್ ಶಾಂತಕುಮಾರ್ ತಮ್ಮದೇ ಮಗು ಕಳೆದುಕೊಂಡಂತೆ ಅಳುತ್ತಿದ್ದರು. ಮುಖದ ತುಂಬೆಲ್ಲ ಕಣ್ಣೀರ ಕೋಡಿ. ಇದೇ ಶಾಂತಕುಮಾರ್ ರಮ್ಯಾಳ ಹ್ಯಾಂಡ್ಲರ್. ಇವರ ಅಸಿಸ್ಟೆಂಟ್ ಪ್ರಸನ್ನ ಕಳೆದ ಹದಿಮೂರು ವರ್ಷಗಳಲ್ಲಿ ರಮ್ಯಾಳ ಕಷ್ಟ ಸುಖಗಳನ್ನು ನೋಡಿಕೊಳ್ಳುತ್ತಲೇ `ರಮ್ಯಾ ಭೇಷ್’ ಎಂಬಂತೆ ಬೆಳೆಸಿದವರು; ಅವತ್ತು ನಿಂತ ನೆಲ ಕುಸಿದಂತೆ ಶಾಕ್‍ಗೆ ಒಳಗಾಗಿದ್ದರು. ರಮ್ಯಾ ತೀರಿಕೊಂಡ ಸುದ್ದಿ ಎಲ್ಲೆಡೆಯೂ ಹಬ್ಬಿ ಪೊಲೀಸರಷ್ಟೇ ಅಲ್ಲ ಜನರೂ ಅಂತಿಮದರ್ಶನ ಪಡೆದರು. ಜನರಿಗೆ ಬೇಕಾದ ಮಹಾತ್ಮನೊಬ್ಬ ತೀರಿಕೊಂಡಾಗ ದುಃಖಪಡುತ್ತಾರಲ್ಲ, ಹಾಗಿತ್ತು ಅಲ್ಲಿ ದೃಶ್ಯ. ಬಂದ ಬಂದವರ ಕೈಗಳಲ್ಲೆಲ್ಲ ಹಾರಗಳಿದ್ದವು. ಅವು ರಮ್ಯಾಳ ನಿಶ್ಚಲ ಮೈ ಸಿಂಗರಿಸುತ್ತಿದ್ದವು.

ದುಃಖತಪ್ತ ಘಳಿಗೆ ದಾಟಿದ ಮೇಲೆ ರಮ್ಯಾಳ ಜೀವನದ ಘಟನೆಗಳನ್ನು ಹೆಕ್ಕಿದೆ. ರಮ್ಯಾ ಪಕ್ಕಾ ಖಾಕಿ ಅವತಾರ್. ಬರೋಬ್ಬರಿ 32 ಪ್ರಕರಣಗಳನ್ನು ತನ್ನ 12 ವರ್ಷದ ಕೆಲಸದ ಅವಧಿಯಲ್ಲಿ ಭೇದಿಸಿದ್ದಳು. ಅಪರಾಧ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚುವುದರಲ್ಲಿ ರಮ್ಯಾಳದ್ದು ಥೇಟು ಜೇಮ್ಸ್ಬಾಂಡ್ ಶೈಲಿ. `ಅಪರಾಧ ಪತ್ತೆ ಶ್ವಾನ’ ಎಂದೇ ಖ್ಯಾತಳಾಗಿದ್ದಳು ರಮ್ಯಾ. 2007ರ ಜನವರಿ 10ಕ್ಕೆ ಹುಟ್ಟಿ, 12ವರ್ಷ 8 ತಿಂಗಳ ರಮ್ಯಾ ಜೀವವನ್ನೇ ಬಿಟ್ಟು ಬದುಕಿನಿಂದಲೇ ನಿವೃತ್ತಳಾಗಿಬಿಟ್ಟಳಲ್ಲ... ಇನ್ನೊಂದು ಆಶ್ಚರ್ಯದ ಸಂಗತಿ ಎಂದರೆ, ಎರಡು ಬಾರಿ ನಗದು ಪುರಸ್ಕಾರ ಗೆದ್ದಿದ್ದಳು ರಮ್ಯಾ! ಎಸ್.ಪಿ. ರಮಣಗುಪ್ತ ಮತ್ತು ಎಸ್‍ಪಿ ಅಭಿನವ ಖರೆ ಕಾಲದಲ್ಲಿ ನಗದು ಗೆದ್ದಿದ್ದ ರಮ್ಯಾ ನೆಗೆನೆಗೆದು ಸಂಭ್ರಮಿಸಿದ್ದಳು. ಆ `ನಗದು’ ಆಮೇಲೇನಾಯ್ತೋ?

ಶಿವಮೊಗ್ಗದ ಡಿಎಆರ್ ಗ್ರೌಂಡಿನಲ್ಲಿ ಗಣರಾಜ್ಯೋತ್ಸವದ ಪರೇಡ್ ನಡೆದಿತ್ತು. ಅಪರಾಧಿಗಳನ್ನು ಕಂಡರೆ ಹೇಗೆ ಉಚ್ಚೆ ಹೊಯ್ಸುತ್ತಿದ್ದಳೋ ಹಾಗೇನೇ ರಮ್ಯಾಳಿಗೆ ಮಕ್ಕಳೆಂದರೆ ಬಹುಪ್ರೀತಿ. ಆ ಪರೇಡ್‍ನಲ್ಲಿ ಮಕ್ಕಳ ಜೊತೆ ತಾನೊಂದು ಮಗುವಾಗಿಯೇ ಅತ್ಯಂತ ಚಟುವಟಿಕೆಯಿಂದ ಆಟವಾಡುತ್ತಿದ್ದ ರಮ್ಯಾ ಗಮನಸೆಳೆದಿದ್ದು ಧ್ವಜಾರೋಹಣಕ್ಕೆ ಬಂದಿದ್ದ ಅತಿಥಿ, ಸಚಿವರಾಗಿದ್ದ ಕಿಮ್ಮನೆ ರತ್ನಾಕರ್‍ರವರದ್ದು. ಕಿಮ್ಮನೆ ಕೂಡಲೇ ರಮ್ಯಾಳನ್ನು ಬರಮಾಡಿಕೊಂಡು `ಭೇಷ್ ಮಗಳೇ’ ಎಂದು ಬೆನ್ನು ಸವರಿದ್ದರು. 9 ಅಪರಾಧ ಪ್ರಕರಣಗಳ ಫೈಲ್ ಮುಚ್ಚುವ ಹಂತದಲ್ಲಿದ್ದಾಗ ಅದರ ಅಪರಾಧಿಗಳನ್ನು ಹುಡುಕಿದ ರಮ್ಯಾ ಪೊಲೀಸರ ಪ್ರೀತಿಯ ನಾಯಿ. ಈಕೆಯ ಸರ್ವಿಸ್ ರೆಕಾರ್ಡ್ ತೆರೆದು ನೋಡಿದಾಗ ಮತ್ತಷ್ಟು ಆಶ್ಚರ್ಯ- ರಮ್ಯಾ 540 ಕ್ಕೂ ಹೆಚ್ಚಿನ ಪ್ರಕರಣಗಳ ತನಿಖೆಯಲ್ಲಿ ಭಾಗಿಯಾಗಿದ್ದಳು!     

ಸಕಲ ವಿಧಿ ವಿಧಾನದ ಅಂತ್ಯಸಂಸ್ಕಾರದ ಭಾಗ್ಯ ರಮ್ಯಾಳಿಗೆ ದೊರೆಯಿತೋ... ಅದನ್ನೆಲ್ಲ ಮಾಡಬೇಕಾದ ಭಾಗ್ಯ ಮನುಷ್ಯನಿಗೆ ದೊರೆಯಿತೋ... ಎಲ್ಲಾ ಸಾವುಗಳೂ ಬಹುಜನರ ಕಣ್ಣೀರಿನ ಅದೃಷ್ಟ ಪಡೆದಿರುವುದಿಲ್ಲ.

ರಮ್ಯಾ ನನಗೊಂದು ಬೆರಗು, ಪೊಲೀಸರಿಗೂ ಕೂಡ!