ಕಾವ್ಯ ಕೃಷಿಯ ಕೈಗಳೇ ಬೆಳೆದ ‘ಬೇಸಾಯದ ಕತಿ’ಎಂಬ ಗದ್ಯದ ಸಮೃದ್ಧ ಬೆಳೆ

ಕಾವ್ಯ ಕೃಷಿಯ ಕೈಗಳೇ ಬೆಳೆದ ‘ಬೇಸಾಯದ ಕತಿ’ಎಂಬ ಗದ್ಯದ ಸಮೃದ್ಧ ಬೆಳೆ

ಲೇಖಕ : ಚಂದ್ರಶೇಖರ ಸು.ಪಾಟೀಲ

ಪ್ರಕಾಶಕರು : ಅಹನಿರ್ಶಿ ಪ್ರಕಾಶನ

ಬೆಲೆ: 130

ಕೃತಿಯನ್ನು ಓದುತ್ತಾ ಹೋದಂತೆ ಚಂ.ಸು ಪಾಟೀಲ್ ರವರ ಜೀವನ ನನ್ನ ಕಣ್ಣ ಮುಂದೆ ಹಾದುಹೋದಂತೆ ಭಾಸವಾಯಿತು. ನಿಜ, ನಾವೀಗ ಬದುಕುತ್ತಿರುವ ಜೀವನ ಶೈಲಿಯು ಕೃತಕವಾಗಿ ಬಿಟ್ಟಿದೆ. ನಗರಗಳಲ್ಲಿ ಯಂತ್ರಗಳ ಹಾಗೆ ಜೀವಿಸುತ್ತಿದ್ದೇವೆ ಅನ್ನಿಸಿತ್ತು. ಕಮ್ತ ಎಂಬ ಪದವನ್ನು  ನಾನು ಮೊದಲ ಬಾರಿ ಕೇಳಿದ್ದೇ ಈ ಬೇಸಾಯದ ಕತಿಯಲ್ಲಿ.ಅಲ್ಲೇ ಕಮ್ತ ಎಂದರೆ ಕೃಷಿ ಎಂಬ ಅರ್ಥವೂ ಕೊಟ್ಟಿದ್ದರು. ನಾನು ಕೂಡ ಕಮ್ತ ಎಂದೇ ಬಳಸುತ್ತೇನೆ. ಉತ್ತರ ಕರ್ನಾಟಕದ ಕೂನಬೇವು ಗ್ರಾಮದ ಲೇಖಕರಾದ ಚಂ.ಸು.ಪಾಟೀಲರು ಸ್ಥಳೀಯ ಭಾಷೆಯಲ್ಲಿ ಬರೆದಿರುವ ಈ ಕೃತಿ ಅದ್ಭುತ, ಕಮ್ತದ ಬಗ್ಗೆ ಹಲವು ತಜ್ಞರು ಅದರ ಸಾಧಕ- ಭಾಧಕಗಳ ಬಗ್ಗೆ ಬರೆದಿದ್ದಾರೆ, ಅಧ್ಯಯನಗಳನ್ನು ಮಾಡಿದ್ದಾರೆ. ಆದ್ದರಿಂದ ಎಷ್ಟೋ ಬರಹಗಳು ಹೊರಬಂದಿವೆ. ಆದರೆ  ದೂರದಿಂದ ನೋಡಿ ಅದನ್ನು ದಾಖಲಿಸುವುದು ಅಷ್ಟು ಪರಿಣಾಮಕಾರಿಯಾಗುವುದಿಲ್ಲ. ತಮ್ಮ ಜೀವನದ ಅನುಭವದಿಂದ ಮೂಡಿದ ಕೃತಿಗಳು ಮಾತ್ರ ಮನ ಮುಟ್ಟುವಂತೆ ಮೂಡಿ ಬರುತ್ತದೆ. ಅಂತಹ ಕೃತಿಯೇ ಬೇಸಾಯದ ಕತಿ.

ಈ ಕೃತಿಯನ್ನು ಓದುವಾಗ ಜೀವಂತಿಕೆಯ ದರ್ಶನವಾಗಿತ್ತು, ಯಾವುದೇ ಮುಚ್ಚು ಮರೆಗಳಿಲ್ಲದ ಕೃತಿ. ಕುಟುಂಬದವರ ಬಗ್ಗೆ ಬರೆಯುವಾಗಲೂ ನೈಜತೆಗೆ ಕೊರತೆಯಿಲ್ಲದೆ ಬರೆದಿದ್ದಾರೆ. ಇಲ್ಲಿ ಬರೆದಿರುವ ಪ್ರತಿಯೊಂದು ಪದವು ಅನುಭವದ ಅಂಕಿತವಷ್ಟೇ. ಲೇಖಕರು ತಮ್ಮ ಜೀವನದ ಪ್ರತಿಯೊಂದು ಘಟ್ಟವನ್ನು ಬೇಸಾಯದ ಜೊತೆಗೆ ಬೆಸೆದುಕೊಂಡಿದ್ದಾರೆ. ಎಲ್ಲಾ ಸಂಸ್ಕೃತಿ, ನಾಗರೀಕತೆಗಳ ತಾಯಿ ಕೃಷಿಯೇ, ಮಿಶ‍್ರ ಬೆಳೆಗಳನ್ನು ಬೆಳೆಯುತ್ತಾ, ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದ ಕಾಲವನ್ನು ಸವಿವರವಾಗಿ ಬರೆದಿದ್ದಾರೆ. ಆದರೆ ತಂತ್ರಜ್ಞಾನ, ವಿಜ್ಞಾನ ಬೆಳೆದಂತೆ ಭೂಗರ್ಭದಲ್ಲಿ ಹಲವು ಪ್ರಯೋಗವನ್ನು ಮಾಡುತ್ತಾ ರಾಸಾಯನಿಕಗಳ ಬಳಕೆ ಮಾಡುತ್ತಾ, ನಮಗೆ ಇರುವುದು ಒಂದೇ ಭೂಮಿ ಎಂಬುದನ್ನು ಮರೆಯುತ್ತಾ ಬಂದಿದ್ದೇವೆ. ಮುಂದಿನ ಪೀಳಿಗೆಗೆ ನಿರ್ಮಲ ಪ್ರಕೃತಿಯನ್ನು ಉಳಿಸದೆ ಸ್ವಾರ್ಥಿಗಳಾಗಿದ್ದೇವೆ. ಕೃಷಿ ಎಂಬುದು ಮನುಷ್ಯನ ದಿಢೀರ್ ಆವಿಷ್ಕಾರದ ಉದ್ಯೋಗವಲ್ಲ. ಅದು ಇತಿಹಾಸದೊಂದಿಗೆ ಬೆಳೆದುಬಂದಿದೆ. ಮಾನವ ಕುಲದ ಉಗಮದಿಂದ ಕೃಷಿಯು ಜೊತೆ ಜೊತೆಗೆ ಬೆಳೆಯುತ್ತಿದೆ. ಕೃಷಿ ನಷ್ಟದಾಯಕ, ಅಲ್ಲಿ ಉದ್ಯೋಗ ಸೃಷ್ಟಿ ಸಾಧ್ಯವಿಲ್ಲ ಎಂಬ ಮಾತುಗಳು ವಾಸ್ತವದಂತೆ ಕಂಡರೂ, ನಾಗರಿಕತೆಯ ಉಳಿವಿಗಾಗಿ ಇದನ್ನು ಪುನಶ್ಚೇತನಗೊಳಿಸುವುದು ಅಗತ್ಯ. ಗ್ರಾಮ ಭಾರತವೆಂದರೆ ಕೃಷಿ ಮಾತ್ರ ಇದೆ ಎಂದು ಅರ್ಥವಲ್ಲ ಇದರ ಸುತ್ತ ಹಲವು ಬಗೆಯ ವೈವಿಧ್ಯಮಯ ಉದ್ಯೋಗಗಳು ಹೆಣೆದುಕೊಂಡಿದ್ದವು. ಆದರೆ ಇವತ್ತಿನ ಕಾಲಕ್ಕೆ ಅದು ಕಡಿಮೆಯಾಗಿದೆ. ಕೃಷಿ ಎಂಬದು ಇವತ್ತಿಗೆ ಪಾರ್ಟ್ ಟೈಮ್ ಕೆಲಸವಾಗಿ ಮಾತ್ರ ಉಳಿದಿದೆ.

“ಕೃಷಿ ಬೇರೆಲ್ಲ ಉದ್ಯೋಗ, ಕಸುಬುಗಳಂತಲ್ಲ, ಅದು ಬುದ್ಧಿವಂತರನ್ನು ದಡ್ಡರನ್ನಾಗಿಯೂ, ದಡ್ಡರನ್ನು ಬುದ್ಧಿವಂತರನ್ನಾಗಿಯು ಮಾಡಿ ತೋರಿಸಬಲ್ಲದು. ಶ್ರಾವಣದಿಂದ ಮಹಾನವಮಿಯವರೆಗಿನ ಹಬ್ಬಗಳೆಲ್ಲ ಮಣ್ಣನ್ನು ಪೂಜಿಸುವಂಥವೇ. ಮಣ್ಣೆತ್ತಿನ ಅಮವಾಸಿಗೆ ಮಣ್ಣೆತ್ತು ಮಾಡಿ ಪೂಜಿಸುವುದು. ನಾಗರ ಪಂಚಮಿಗೆ ಹುತ್ತಕ್ಕೆ ಹಾಲೆರೆಯುವುದು, ಗಣಪ ಕೂಡ ಮಣ್ಣೇ! ಇದು ಉಂಡುಟ್ಟು ಸಂಭ್ರಮಿಸಲಿಕ್ಕೆ ಮಾತ್ರ ಬೆಳೆದುಬಂದಿರುವ ಪರಂಪರೆಯಲ್ಲ. ನಮ್ಮ ಅಡುಗೆ,ಉಡುಗೆ, ತೊಡುಗೆಗಳಿಗೆ ಬೇಕಾದ ಮೂಲ ಪದಾರ್ಥ, ಪರಿಕರಗಳನ್ನು ಒದಗಿಸುವ ಮಣ್ಣನ್ನು ಪೂಜಿಸುವ, ಮಣ್ಣಿನ ಋಣಕ್ಕೆ ಕೃತಜ್ಞತೆ ಸಲ್ಲಿಸುವ ಅರ್ಥಪೂರ್ಣ ಆಚರಣೆ. ಈ ಆಚರಣೆಗಳನ್ನು ನಾವು ಬಿಟ್ಟಿಲ್ಲ.ಆದರೆ ನಂಬಿಕೆಗಳಿಗೆ ಮಣ್ಣು ಕೊಟ್ಟಿದ್ದೇವೆ” ಎನ್ನುತ್ತಾರೆ ಲೇಖಕರು.

ಕೃಷಿಯ ಕುರಿತಂತೆ ಬರೆಯುವುದೆಂದರೆ, ನಮ್ಮ ಬೇರನ್ನು ನಾವೇ ಹುಡುಕುತ್ತಾ ಸಾಗುವುದು. ಅದರ ಜೊತೆಗೆ ನಮ್ಮ ಪರಂಪರೆ, ಸಂಸ್ಕೃತಿ, ಹಬ್ಬ, ಹರಿದಿನ ಎಲ್ಲವೂ ತಳಕು ಹಾಕಿಕೊಂಡಿರುತ್ತದೆ. ವರ್ತಮಾನದಲ್ಲಿ ಕೃಷಿ ಎದುರಿಸುತ್ತಿರುವ ಬಿಕ್ಕಟ್ಟು ಆರ್ಥಿಕವಾಗಿ ಮಾತ್ರವಲ್ಲ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿಯೂ ತನ್ನ ದುಷ್ಪರಿಣಾಮಗಳನ್ನು ಬೀರುತ್ತಿವೆ. ಕೃಷಿ ಮತ್ತು ರೈತರ ಸಮಸ್ಯೆಗಳ ಬಗ್ಗೆ, ಜಲ, ಅರಣ್ಯಗಳ ಕುರಿತಂತೆ ಬರೆದವರು ಹಲವರು. ರೈತರ ಸಮಸ್ಯೆಗಳನ್ನು ಇಟ್ಟುಕೊಂಡು ಬರೆದವರೂ ಇದ್ದಾರೆ. ಆದರೆ ಅದು ಬೇಸಾಯವನ್ನು ಜೀವನವಿಧಾನವಾಗಿ ಗ್ರಹಿಸಿ ಬರೆದ ಲೇಖನಗಳಲ್ಲ. ಈ ನಿಟ್ಟಿನಲ್ಲಿ ಚಂಸು ಪಾಟೀಲರ ‘ಬೇಸಾಯದ ಕತಿ ಕೃತಿ ತುಸು ವಿಭಿನ್ನವಾಗಿ ನಮ್ಮನ್ನು ತಲುಪುತ್ತದೆ.

                                                                                                  -ಬಿ.ಧನಲಕ್ಷ್ಮಿ

(ದಿ ಡೆಕ್ಕನ್ ನ್ಯೂಸ್ನಲ್ಲಿ ಪುಸ್ತಕ ಪರಿಚಯಕ್ಕಾಗಿ ಲೇಖಕರು ತಮ್ಮ ಇತ್ತೀಚಿನ ಎರಡು ಕೃತಿಗಳನ್ನು ಕಳುಹಿಸಬಹುದು)