ಕವಿತೆಯ ಚುಂಗು; ಅಮ್ಮನ ಗುಂಗು..!

ನಿತ್ಯವೂ ಕ್ಷಣಕ್ಷಣವೂ ನಮ್ಮ ಕಣ್ಣ ಮುಂದೆ ಹಿಂದೆ, ಎಡ ಬಲ, ಕಣ್ಣು ಹಾಯಿಸಿದಷ್ಟೂ ದೂರವೂ ಜಗದಗಲವೂ ಈ ಅಮ್ಮತನದ್ದೇ ಸಾಮ್ರಾಜ್ಯ ಆಳುತ್ತಿದೆ. ಅತ್ತವರನ್ನು ನಗಿಸುತ್ತ, ಸಾಂತ್ವನದ ಹಾಲ ಊಡುತ್ತ ಈ ಜಗವನಾಳುವ, ಬೆಳೆಸುವ, ಹೊಸ ಹುರುಪು ಕಸುವು; ಸಾಧನೆಗೆ ಕಣ್ಣಾಗುತ್ತ ಸಾಗುತ್ತಲೇ ಇರುವ ಅಮ್ಮತನಕ್ಕೆಂದೂ ಸಾವೇ ಇಲ್ಲ

ಕವಿತೆಯ ಚುಂಗು; ಅಮ್ಮನ ಗುಂಗು..!

ಅಮ್ಮ ಎಂದೂ ಸಾಯುವುದೇ ಇಲ್ಲ. ಸಾಯುವಂಥ ಜೀವ ಅಥವಾ ಪದ ಅದು ಅಲ್ಲವೇ ಅಲ್ಲ. `ತಾನು ಕವಿತೆಯಾಗಿ..' ಎಂಬ ಸತ್ಯಾನಂದ ಪಾತ್ರೋಟರ ದೀರ್ಘ ಕಾವ್ಯ ಓದಿದಾಗ ಅಮ್ಮ ನನ್ನೊಳಗೆ ಮತ್ತಷ್ಟು ಉದ್ಧವಾಗತೊಡಗಿದಳು. ಜಗದಗಲವಾಗತೊಡಗಿದಳು. ಮುಗಿಲಗಲ ಹಾರಾಡಿದಳು. ಪಾತಾಳದಾಳ ಇಳಿಯತೊಡಗಿದಳು. ಅಮ್ಮ ಕವಿತೆಯೋ ಕಥೆಯೋ ಕಾದಂಬರಿಯೋ ಮಹಾಕಾವ್ಯವೋ ಅನ್ನುವುದಕ್ಕಿಂತ, ಇದೆಲ್ಲವನ್ನೂ ಮೀರಿದ ಒಂದು ಮಹಾನ ಶಕ್ತಿ. ನಾವಂದುಕೊಂಡಂತೆಯೇ ಹಿಡಿಯಲು ಸಿಗಳು. ಆದರೆ, ಅವಳನ್ನು ನಮ್ಮ ಮಾತಲ್ಲೇ ಹಿಡಿದು ಒಳಗೊಳಿಸಿಕೊಳ್ಳಲು ಒಂದು ಪುಟ್ಟ ಕಸರತ್ತು ಈ ಮುಖೇನ..!

ಅವಳು ಏನಲ್ಲ? ಏನೆಲ್ಲವೂ ಹೌದು. ಜಗದ ಸಕಲ ಸಂಕಟಗಳನ್ನು ಉಂಡು ನಮ್ಮೊಳಗೆ ನಗೆಯಾಗಿ ಹುಟ್ಟಿದವಳು. ಹಾಗಾದರೆ ಅವಳು ನಮ್ಮ ಕೂಸೂ ಹೌದು. ನಮ್ಮ ಮನೆಯ ಹುಡುಗಿಯೂ ಹೌದು, ಮನೆಯ ಜಂತಿಯೂ ಹೌದು.. ಇತ್ಯಾದಿಯಾಗಿ ಸದಾ ನಮ್ಮನ್ನು ಕಾಡುವವಳು. ಪ್ರಕೃತಿಯ ಮಹಾನ್ ಕೊಡುಗೆಯೇ ಅಮ್ಮ ಅನ್ನುವದಕ್ಕಿಂತ ನಮ್ಮ ಪಾಲಿನ ಪ್ರಕೃತಿಯೇ ಅವಳು. ವಿಕೋಪ ಪ್ರಕೋಪಗಳನೂ ಕುಡಿದು ಜೀರ್ಣಿಸಿಕೊಂಡವಳು. ತುತ್ತುಣಿಸಿದವಳು. ಕಣ್ಣೀರು ಒರೆಸಿದವಳು. ಎಲ್ಲ ಸರಿಯೇ? ಆದರೆ ಆ ಅಮ್ಮನೆಂಬ ಜೀವತತ್ವದ ಕಣ್ಣೀರು ಒರೆಸಿದವರೆಷ್ಟು ಮಂದಿ ನಾವಿದ್ದೇವೆ..?!

ಬಿರುಗಾಳಿಯನೇ ಹೆದರಿಸಿದಳು
ಸುಡುವ ಕಡುಬಿಸಿಲನ್ನೇ ಒದ್ದೊಡಿಸಿದಳು
ಸುರಿವ ಮಳೆಯನ್ನೇ ಗಟಗಟನೇ ಕುಡಿದು
ಬಂಡೆಗಲ್ಲಾಗಿ ಮಹಾಪುರವನೇ ನಡುಗಿಸಿದಳು...

ಇಷ್ಟೆಲ್ಲವನ್ನೂ ಒಬ್ಬ ಕವಿಯಾಗಿ ನಾವೇಕೆ ಆ ಅಷ್ಟೊಂದು ಪ್ರಮಾಣದಲ್ಲಿ ಅಪ್ಪನನ್ನು ಅಪ್ಪಿಕೊಳ್ಳಲಾಗುತ್ತಿಲ್ಲ. ಇದಕ್ಕೆ ಉತ್ತರ ಅವನು ಅಪ್ಪನಷ್ಟೇ..!

ಪಾತ್ರೋಟರ ಇಡೀ ಕಾವ್ಯ ಅಮ್ಮನನ್ನು ಕಳಕೊಂಡ ಹೊತ್ತಲ್ಲಿ ಉಕ್ಕುಕ್ಕಿ ಹರಿಗಡೆಯದೇ ಪ್ರವಹಿಸಿದೆ. ಕಾವ್ಯಕ್ಕೆ, ಅಮ್ಮನಿಗೆ ಏಕಕಾಲಕ್ಕೇ ತಕ್ಕುದಾದ ಮರ್ಯಾದೆಯನ್ನು ದಯಪಾಲಿಸಿದೆ. ಕಾವ್ಯ ಮನೋಧರ್ಮದ ಚೌಕಟ್ಟನ್ನು ಬಿಟ್ಟುಕೊಡದೇ `ಲಂಕೇಶರ ಅವ್ವನಂತೆ' ನಮ್ಮವ್ವನನ್ನು ನಮ್ಮೊಳಗೆ ಮತ್ತಷ್ಟು ಗಟ್ಟಿಯಾಗಿ ನೆಲೆಯುರಿಸುತ್ತದೆ. ಭಿನ್ನ ಭೇದವೆಣಿಸದ, ಕುಲದ ಮೂಲ ಕೆದಕದ ಅದಮ್ಯ ಪ್ರೀತಿ-ವಾತ್ಸಲ್ಯವನ್ನು ಈ ಅವ್ವನಷ್ಟೇ ನೀಡಬಲ್ಲಳು. ಅದಕ್ಕೇ ಅವಳು ಅಮ್ಮ..!  ಗಂಡ-ಮಕ್ಕಳು ಒದ್ದರೂ, ದೇವರು ದಿಂಡಿರುಗಳು ಕೈ ಹಿಡಿದು ಕಾಪಾಡದಿದ್ದರೂ ಅವಳು ಅವಳಂತೆಯೇ ಅವರನ್ನೆಲ್ಲ ಕಟ್ಟಿಕೊಂಡೇ ಅಡಿಯಿಡಲು, ಬಾಳಲು ಬಯಸುತ್ತಾಳೆ. ಅವರು ನಿರುಕಿಸಲಾರದಷ್ಟು ಅಮ್ಮತನವನ್ನು ಊಡಿಯೇ ದೈಹಿಕವಾಗಿ ನಿರ್ಗಮಿಸುತ್ತಾಳೆ. ಆದರೆ, ಖಂಡಿತ ಅಮ್ಮ ಸಾಯುವುದೇ ಇಲ್ಲ..! ಈ ಜಗದ ಉಳಿವಿನತನಕ ಅಮ್ಮ ಅಳಿಸಲಾರದ ಬಿಗಿಬಂಧ, ನೆಲಾನುಬಂಧದಂತೆಯೇ.!

ಅವಳನ್ನು ಭೂಮಿಗೆ ಹೋಲಿಸುತ್ತೇವೆ. ತುಳಿಯುತ್ತಲೂ ಇರುತ್ತೇವೆ. ಬೇಡವಾದದ್ದನ್ನು ಅವಳ ಮೇಲೆಯೇ ಚೆಲ್ಲುತ್ತೇವೆ. ಅವಳ ಒಡಲಲ್ಲೇ ಹುಗಿಯುತ್ತೇವೆ. ಅವಳ ಆರೋಗ್ಯವನು ಕೊಂದು ಕೇಕೆ ಹಾಕಿ ನಗೆಯಾಡುತ್ತೇವೆ. ಹಾಡ ಕಟ್ಟುತ್ತೇವೆ; ಅವಳ ಪಾಡೇನು? ಮರೆಯುತ್ತೇವೆ. ಭಾರೀ ಭಾಷಣ ಹೊಡೆಯುತ್ತೇವೆ; ಚೌಕಟ್ಟನಡಿಯಲ್ಲೇ ಹೆಡಮುರುಗಿ ಕಟ್ಟುತ್ತೇವೆ.. ಹೀಗೇ, ಅಮ್ಮನನ್ನು ನಾವು ಪ್ರೀತಿಸುವುದಕ್ಕಿಂತ ದೂಷಿಸಿದ್ದೇ ಜಾಸ್ತಿ. ಹಿಂಸಿಸಿದ್ದೇ ಜಾಸ್ತಿ. ಸಂಕಟಗಳ ಉಣಿಸಿ ನೆರಿಗೆ ಮೂಡಿಸಿದ್ದೇ ಹೆಚ್ಚು.. ಆದರೂ ಅವಳು ಸಾಯಲಾರಳು. ಅವಳು ಅಮ್ಮ ಅವ್ವ ತಾಯಿ ದೇವತೆ; ಕನಿಕರ ಕಕ್ಕುಲಾತಿ ಪ್ರೀತಿ ವಿಶ್ವಾಸಗಳ ಮೂಟೆ. ನಾವು ಕೊಡದಿದ್ದರೂ ಅವಳು ಕೊಡುತ್ತಾಳೆ. ಕೊಡುವುದು ಅವಳ ಧರ್ಮ; ನಮ್ಮದ್ಯಾವ ಧರ್ಮ..?- ನಾವೇ ತಲೆಕೆರೆದುಕೊಂಡು ಕೊನೆಗೊಮ್ಮೆಯಾದರೂ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣವಾಗಬೇಕು; ತದನಂತರವಾದರೂ ಅವಳ ತ್ಯಾಗಮಯೀ ವ್ಯಕ್ತಿತ್ವಕ್ಕೆ ಪೂರಕವಾಗಿ ನಾವೇನು ಕೊಟ್ಟಿದ್ದೇವೆ ಮನವರಿಕೆಯಾದೀತಲ್ಲವೆ?

ಐದು ನಿಮಿಷದ ಹಿಂದೆ ಇದ್ದವಳು; 
ಈಗ ಮಟಾಮಾಯ!
ಬಯಲಿಗೂ ಜೀವಕಳೆ ತಂದ ನನ್ನವ್ವ
ಬಯಲಿನಲಿ ಬಟಾಬಯಲಾಗಿ
ನಡದೇಬಿಟ್ಟಳು;
ತಾನು ಕವಿತೆಯಾಗಿ
ನನ್ನನ್ನು ಕವಿಯಾಗಿಸಿ..  

ಪಾತ್ರೋಟರ ಈ ಸಾಲುಗಳು ಅಮ್ಮನನ್ನು ಕಳಕೊಂಡ ಆ ಕ್ಷಣದ ಭಾವತೀವ್ರತೆಯ ಪ್ರತಿಫಲನಗಳು. ನಿಜಕಾವ್ಯದ ತೂಕ ಹೆಚ್ಚಿಸುವಲ್ಲಿ ಕನ್ನಡ ಕಾವ್ಯವಿಸ್ತಾರಕ್ಕೆ ನೀಡಿದ ಅಪೂರ್ವ ಕೊಡುಗೆಯೆಂದೂ ಹೇಳಬಹುದು. ಈ ಪದ್ಯವನ್ನು ಓದಿ ಮುಗಿದಾದ ಮೇಲೆಯೂ ಈ ಅಮ್ಮ ಅವ್ವ ತಾಯ್ತನ ಅಮ್ಮತನದ ಕುರಿತು ಈ ನೆಪದಲ್ಲಿ ಒಂದಷ್ಟು ನಮ್ಮದೇ ಆದ ಅಕ್ಷರರಾರ್ಪಣೆ ಗೈಯ್ಯಬೇಕೆನಿಸುತ್ತದೆ. 

ಅಮ್ಮತನ ಎಂಬುದು ಒಂದು ತತ್ವವು ಹೌದು; ಜೀವಲೋಕದ ಒಂದು ಅಪೂರ್ವ ಕಾಣಿಕೆಯು ಹೌದು. ಅರಿವಿನ ಮತ್ತೊಂದು ಹೆಸರೇ ಈ ಅಮ್ಮ ಅರ್ಥಾತ್ ಅಮ್ಮತನ. ಅನ್ನ ಹಾಲು ಗಾಳಿ ನೀರು ಬಿಸಿಲು ಚಳಿ ನೆರಳು ನೆಲ ಗಿಡ ಮರ ಹೂ ಇತ್ಯಾದಿ ರೂಪಾನುರೂಪಗಳ ಆಪ್ತ ಮೊತ್ತವೇ ಅಮ್ಮತನ. ಹುಟ್ಟಿನಿಂದಲೇ ಅಮ್ಮತನ ಎಂಬ ಜೀವರಸವು ವಿಶೇಷವಾಗಿ ಪ್ರತಿ ಹೆಣ್ಣಿನ ಮೈಮನಗಳಾದಿಯಲ್ಲಿ ಹರಿಯುತ್ತಲೇ ಇರುತ್ತದೆ.

ಈ ಅಮ್ಮತನ ರೂಢಿಸಿಕೊಂಡಿರುವ ಒಳಗೊಂಡಿರುವ ಗಂಡುಜೀವ ಎಂದೆಂದಿಗೂ ರಾಕ್ಷಸೀ ಗುಣ ಹೊಂದಿರಲು ಸಾಧ್ಯವೇ ಇಲ್ಲ. ಅಕ್ಕರೆ ವಾತ್ಸಲ್ಯ ಮಾನವೀಯ ತುಡಿತದ ಒಳಗು ಗಂಡಿಗಿಂತ ಹೆಣ್ಣಿನಲ್ಲೇ ಒಂದು ಕೈ ಮಿಗಿಲು; ತೀಕ್ಷ್ಣ, ಪ್ರಖರವೂ. ಪ್ರಾಣಿ ಪಕ್ಷಿ ಮನುಕುಲದ ಏಳಿಗೆಯು ಸಹ ಈ ಅಮ್ಮತನವೆಂಬ ಅಪೂರ್ವತೆಯಲ್ಲಿಯೇ ಅಡಗಿದೆ. ಸಿಟ್ಟು ಸೆಡವು ಬೈಗುಳ ಬಡಿತಗಳ ಮಧ್ಯೆಯೂ ಅರಳುವ ಈ ಅಮ್ಮತನಕ್ಕೆ ಹಸಿವು ಇಂಗಿಸುವ, ನೋವು ನಿವಾರಿಸುವ, ನೆಮ್ಮದಿಯೂಡುವ, ನಿರೋಗಿಯಾಗಿಡುವ ಉದಾತ್ತವಾದ ತಾಕತ್ತಿದೆ. ಬುದ್ಧಿವಾದ ತಿಳುವಳಿಕೆ ಜ್ಞಾನದ ಹರವು ಈ ಅಮ್ಮನೆಂಬ ಸದಾ ಹರಿವ ನದಿಯಿಂದಲೇ ಪ್ರಾಪ್ತಿಯಾಗಬಲ್ಲದು. ಜೀವಜಲವೇ ಆಗಿರುವ ಅಮ್ಮತನಕ್ಕಿಂತ ದೊಡ್ಡ ಸಿರಿವಂತಿಕೆ, ಸಂಪತ್ತು, ಸಂಪನ್ಮೂಲ ಈ ಲೋಕದಲ್ಲಿ ಇನ್ನೆಲ್ಲಿಯಾದರೂ ಇರಲುಂಟೇ?

ನಿತ್ಯವೂ ಕ್ಷಣಕ್ಷಣವೂ ನಮ್ಮ ಕಣ್ಣ ಮುಂದೆ ಹಿಂದೆ, ಎಡ ಬಲ, ಕಣ್ಣು ಹಾಯಿಸಿದಷ್ಟೂ ದೂರವೂ ಜಗದಗಲವೂ ಈ ಅಮ್ಮತನದ್ದೇ ಸಾಮ್ರಾಜ್ಯ ಆಳುತ್ತಿದೆ. ಅತ್ತವರನ್ನು ನಗಿಸುತ್ತ, ಸಾಂತ್ವನದ ಹಾಲ ಊಡುತ್ತ ಈ ಜಗವನಾಳುವ, ಬೆಳೆಸುವ, ಹೊಸ ಹುರುಪು ಕಸುವು; ಸಾಧನೆಗೆ ಕಣ್ಣಾಗುತ್ತ ಸಾಗುತ್ತಲೇ ಇರುವ ಅಮ್ಮತನಕ್ಕೆಂದೂ ಸಾವೇ ಇಲ್ಲ. ಅದೊಂದು ಸಜೀವ ಸೆಲೆ ಅಲೆ; ಅಸಾಧಾರಣ ಅನ್ನಿಸುವಂಥ ಒಂದು ಸಬಲತೆ-ಸದೃಢತೆ-ಸಮಗ್ರತೆ-ಎಲ್ಲರೂ ಎಲ್ಲದೂ ಒಂದೆನ್ನೆವ ಈ ಜಗದ ಏಕೈಕ ಭಾವವೇ ಅಮ್ಮತನ. ಕರುಣೆಯ ಬೆಳಕು ಈ ಅಮ್ಮತನದ ಧಾರಾಳ ಕೊಡುಗೆಯೇ.

ಈ ಅಮ್ಮತನದ ಸಮೃದ್ಧಿ ಎಷ್ಟೆಂದರೆ, ಈ ಜಗದ ಎಲ್ಲ ಜನಭಾಷೆಗಳ ಸಾಹಿತ್ಯದಲ್ಲೂ ಈ ಅಮ್ಮತನ ತತ್ವ-ಅಮೃತತ್ವಕ್ಕೆ ಸಿಕ್ಕಷ್ಟು ಜಾಗೆ ಬೇರಾವುದೇ ವಿಷಯಕ್ಕೆ ಸಿಕ್ಕಿಲ್ಲ. ಬರೆದಷ್ಟೂ ಹಿಗ್ಗುವ, ಅನುಭವಿಸಿದಷ್ಟೂ ಬೇಕೆನಿಸುವ ಈ ಅಮ್ಮತನವೆಂಬ ಹರುಷಕ್ಕೆ, ಏರುವಿಕೆಗೆ, ಆಳಕ್ಕಿಳಿಯುವಿಕೆಗೆ ಎಣೆಯೇ ಇಲ್ಲ. ಇದರ ವಿಸ್ತಾರಕ್ಕೆ ಮಿತಿಯಿಲ್ಲ. ತಾತ್ಸಾರವಂತೂ ಇಲ್ಲವೇ ಇಲ್ಲ. ತರತಮವೆಂದೂ ಆಗಿ ಬರುವುದೇ ಇಲ್ಲ. ಅಮ್ಮತನ ಎಂಬುದೇ ಬಹುದೊಡ್ಡ ಬೆಂಬಲವಾಗಿರುವಾಗ ಆ ತನ ಈ ತನ ಹಲವು ತನಗಳ, ತಾರತಮ್ಯಗಳ, ಭೇದಭಾವಗಳ, ಸಣ್ಣತನಗಳ ಹಂಬಲ ನಮಗೇಕೆ ಬೇಕು. ಅಮ್ಮತನವೆಂಬ ದೊಡ್ಡತನಕ್ಕೆ ತಲೆಬಾಗಿ ತನುಬಾಗಿ ಮನಬಾಗಿಸಿ ನಡೆದರೆ, ನುಡಿದರೆ ಇನ್ಯಾವ ಮಹಾದೇವನ ಕರುಣೆಯ ಆಸರೆಯೂ ನಮಗೆ ಬೇಡ, ಅಲ್ಲವೆ?

ಸದ್ಯದ ಈ ಲೋಕದ ಎಲ್ಲ ಬಿಕ್ಕಟ್ಟುಗಳಿಗೆ ಏಕೈಕ ಪರಿಹಾರವೇ `ಅಮ್ಮತನ'. ಬನ್ನಿ ಈ ಅಮ್ಮತನವನ್ನು  ನಾವೆಲ್ಲ ನಮ್ಮೊಳಗೆ ಆವ್ಹಾನಿಸಿಕೊಳ್ಳೋಣ; ನಮ್ಮೊಳಗಿನ ಜಾಡ್ಯ, ಮೌಢ್ಯಗಳೆಲ್ಲವಕ್ಕೂ ಈ ಅಮ್ಮತನದ ಒಳಗೊಳ್ಳುವಿಕೆಯೊಂದೇ ಮದ್ದು-ಮುದ್ದು. ಅಮ್ಮತನದ ಸದ್ದಿನಿಂದ ಈ ನೆಲದ ವಿಷಮ-ಅಸಮ-ತರತಮಗಳೆಲ್ಲ ನಶಿಸಿ ಹೋಗಲಿ ಎಂದು ನಮ್ಮ ಅಮ್ಮಂದಿರ ಕಾಲು ಹಿಡಿದು ಮತ್ತೊಮ್ಮೆ ಮಗದೊಮ್ಮೆ ಬೇಡಿಕೊಳ್ಳೋಣ; ಅಮ್ಮತನವೇ ಶಾಶ್ವತ ತತ್ವ ಎಂದೆಣಿಸಿ ಬಾಳೋಣ.. ಎಂದರೆ ಇದು ಭಾಷಣವಾಗುವುದಿಲ್ಲ ತಾನೇ..?