ಜೀವನ್ಮುಖಿ

ಜೀವನ್ಮುಖಿ

ಕವಿ ಸತ್ತಾಗ
ವಿಧವೆ ಕಾವ್ಯ
ಶವದ ಬಳಿ ಕುಳಿತು
ರೋಧಿಸುತ್ತಿತ್ತು

ಚೂರು-ಚೂರಾಗಿ
ಚಿಲ್ಲಾಪಿಲ್ಲೆಯಾಗಿ
ಬಿದ್ದ ಅಕ್ಷರದ
ಬಳೆ ಚೂರುಗಳು
ಅವಳೆದೆಯ
ನೋವಿಗೆ ಮೂಕ
ಸಾಕ್ಷಿಯಾಗಿದ್ದವು

ಚಿರನಿದ್ರೆಗೆ
ಜಾರಿದವನ
ಮುಖದ ಮೇಲೆ
ಬುದ್ಧನ
ಮಂದಹಾಸ !!
ಬಹುಶಃ
ಜೀವನ್ಮುಕ್ತಿಯ
ಖುಷಿಯವನಿಗೆ

ಇದ್ದಾಗ
ಪರಿಪರಿಯಾಗಿ
ಕಾಡಿದಾಕೆ
ಅವನಿಲ್ಲದ
ಬಂಜರು-ಬದುಕು
ಕಲ್ಪಿಸಿಕೊಂಡು
ಕಂಪಿಸುತ್ತಿದ್ದಳು

ಕಣ್ಣಂಚಿನಿಂದ
ಇಳಿಯುತ್ತಿದ್ದ
ಕಂಬನಿ ಧಾರೆ
ಕೆನ್ನೆಯಿಂದಿಳಿದು
ಎದೆಯ ಮೇಲೆ
ಸಾಗರವಾಗುತ್ತಿತ್ತು

ಇದ್ದಾಗ
ಲೋಕದ ಚಿಂತೆ
ಮಾಡಿದಾತ
ಈಗ ಇದ್ಯಾವದರ
ಪರ್ವೆಯಿಲ್ಲದೆ ಮಲಗಿದ
ಧ್ಯಾನಸ್ಥ ಸಂತ

ಅಮರ ಕವಿಯಾತ್ಮ
ಜಗದ ಮೋಹ
ಮಾಯೆ ಮರೆತು
ಅಲೌಕಿಕ ಸುಖ
ಅನುಭವಿಸುತ್ತಿತ್ತು

ಅವನೊಂದಿಗೆ
ನಿತ್ಯ ಸತ್ತು-ಸತ್ತು
ಬದುಕುಳಿದ ಕವಿತೆ
ತಬ್ಬಲಿಯಾಗಿ
ಅತ್ತು-ಅತ್ತು
ಸುಸ್ತಾಗಿತ್ತು

ಹಸಿವಿನಿಂದ ಕಂಗೆಟ್ಟವಳ
ಒಡಲ ಬೆಂಕಿ
ಅದ್ಯಾರೋ ಸುರಿಸಿದ
ಸಾಂತ್ವನದ ಮಾತು
ಮಳೆಗೆ ತಣ್ಣಗಾಗಿ
ಜೀವ ಸಂತೃಪ್ತವಾಗಿ
ಚಿಗುರೊಡೆದ ಬದುಕು
ಜವಾಬ್ಧಾರಿ
ಜಾಗೃತಗೊಂಡು ಮತ್ತೇ
ಚಲಿಸಲಾರಂಭಿಸಿತು
ಜೀವ…(ನ) !!!!!!!!!

                                                                                             -ಅಶ್ಫಾಕ್ ಪೀರಜಾದೆ