ಖೂಳರ ಬಲೆಗೆ ಬಿದ್ದ ಪಾರಿವಾಳ!

ಕಷ್ಟಪಟ್ಟು ಮೇಲೆ ಬರಬೇಕೆನ್ನುವವರ ಹಾದಿಗೆ ಕಲ್ಲುಮುಳ್ಳು ಸುರಿಯುವವರೆ ಬಹಳ. ಚಿಕ್ಕಣ್ಣನ ವಿಷಯದಲ್ಲೂ ಇದು ಹಾಗೇ ಆಯಿತು. ಒಂದುವರೆ ತಿಂಗಳಲ್ಲೆ  ಇಡೀ ಹೊಲ ನಟ್ಟುಕಡಿದು ಈರುಳ್ಳಿ ಬೆಳೆದು ಎತ್ತು ತಂದು ಕಮ್ಮತಕ್ಕೆ ನಿಂತಿದ್ದ ಚಿಕ್ಕಣ್ಣನ ಶ್ರೇಯಸ್ಸು ಹಲವರ ಪಾಲಿಗೆ ನುಂಗಲಾರದ ತುತ್ತಾಗಿತ್ತು.

ಖೂಳರ ಬಲೆಗೆ ಬಿದ್ದ ಪಾರಿವಾಳ!

ದೊಡ್ಡ ಅಪರಾಧವನ್ನೇನು ಮಾಡಿರದಿದ್ದ ಚಿಕ್ಕಣ್ಣ ಬಳ್ಳಾರಿ ಜೈಲು ಸೇರಿದ್ದು ಆಕಸ್ಮಿಕ ಘಟನೆಯಾಗಿರಲಿಲ್ಲ. ಆಗಿನ ಮುಲ್ಕಿ ಪರೀಕ್ಷೆಯಲ್ಲಿ ಬುದ್ಧಿವಂತ ಹುಡುಗ ಎನಿಸಿಕೊಂಡಿದ್ದ ಅವನು, ಅಲ್ಲಿಗೇ ಓದಿಗೆ ಶರಣು ಹೇಳಿದ್ದ. ಮನಸು ಮಾಡಿದ್ದರೆ ನೌಕರಿ ಸೇರಲು ಆ ಕಾಲಕ್ಕೆ ಅಷ್ಟೆ ವಿದ್ಯಾರ್ಹತೆ ಸಾಕಾಗಿತ್ತು. ಶಾಲೆಯಲ್ಲಿ ಶ್ಯಾಣ್ಯಾ ಅನ್ನಿಸಿಕೊಳ್ಳುವುದರ ಜೊತೆಗೆ ಮಹಾಉಢಾಳ ಎಂಬ ಬಿರುದಿಗೂ ಪಾತ್ರನಾಗಿದ್ದ. ಮನೆಯಲ್ಲಿದ್ದ ದನಕರುಗಳನ್ನು ಮೇಯಿಸಿಕೊಂಡೇ ಬೆಳೆದಿದ್ದ ಚಿಕ್ಕಣ್ಣನ ಪಾಲಿಗೆ ದನಕರುಗಳ ಜೊತೆಗೆ ಪ್ರಾಣಿಪಕ್ಷಿಗಳ ಜಗತ್ತು ನಿತ್ಯ ವಿಸ್ಮಯವನ್ನುಂಟು ಮಾಡುತಿತ್ತು. ಶಾಲೆಗೆ ಹೋಗುವಾಗಲೇ ದನ ಕಾಯುತಿದ್ದ ಅವನು ಮನೆಯ ಮುಂದೆ ಒಂದು ಪೆಟ್ಟಿಗೆಯನ್ನಿಟ್ಟು ಹತ್ತಾರು ಪಾರಿವಾಳಗಳನ್ನೂ ಸಾಕಿದ್ದ. ವೇಳೆಗೆ ಸರಿಯಾಗಿ ಅವುಗಳಿಗೆ ಕಾಳುಕಡಿ ಹಾಕಿ ನೀರು ಕುಡಿಸದಿದ್ದರೆ ಅವನಿಗೆ ವ್ಯವಧಾನವೇ ಇರುತ್ತಿರಲಿಲ್ಲ. ಮೂಕ ಪ್ರಾಣಿಪಕ್ಷಿಗಳೆಂದರೆ ಜೀವದಂತೆ ಪ್ರೀತಿಸುತಿದ್ದ ಚಿಕ್ಕಣ್ಣ ಅವುಗಳಿಗೆ ಯಾರಿಂದಲಾದರೂ ಕೇಡಾದರೆ ಅವರ ಪಾಲಿಗೆ ಯಮನಾಗುತಿದ್ದ. ಹಿಂದೆ ಮುಂದೆ ನೋಡದೆ ಹೊಡದೇ ಬಿಡುತಿದ್ದ. ಇಂಥ ಕಾರಣಕ್ಕಾಗಿಯೆ ಅವನ ಅಣ್ಣತಮ್ಮಂದಿರು ಅನೇಕ ಬಾರಿ ಇವನ ಕೈಲಿ ಥಳಿಸಿಕೊಂಡಿದ್ದರು. 

ತನ್ನ ಒರಟು ಸ್ವಭಾವದ ಕಾರಣಕ್ಕೆ ಚಿಕ್ಕಣ್ಣ, ಅವರಿವರೊಡನೆ ಆಗೀಗ ಮನಸ್ತಾಪ ಕಟ್ಟಿಕೊಳ್ಳುತಿದ್ದರೂ ಇದೆಲ್ಲ ಸಹಜವೆ ಎಂಬಂತಿರುತಿದ್ದ. ಇವನು ಅತಿಯಾಗಿ ಹಚ್ಚಿಕೊಂಡಿದ್ದ ಪಾರಿವಾಳಗಳು ಹೆಗಲ ಮೇಲೆ ಬಂದು ಕೂತರೆ ಇವನು ಊರವರ ಕಂಗಳಲ್ಲಿ ಕಸ್ತೂರಿ ನಿವಾಸದ ರಾಜಣ್ಣನೇ ಆಗಿಬಿಡುತಿದ್ದ. ವಿಪರ್ಯಾಸವೆಂದರೆ, ಅದೇ ಚಿಕ್ಕಣ್ಣ ಚೂರಿ ಚಿಕ್ಕಣ್ಣನಾದದ್ದು!

ಇಂಥ ಚಿಕ್ಕಣ್ಣನಿಗೆ ಕಮ್ತ ಮಾಡುವ ಹುಚ್ಚು ಹತ್ತಿ ಬಿಟ್ಟಿತ್ತು. ಊರಮುಂದಿನ ಹಳ್ಳದ ದಂಡೆಗೆ ಇವರ ಹೊಲವಿತ್ತು. ಅದೋ ಕರಿಕಿ ದಡ್ಡು. ಈಗಿನಂತೆ ಆಗ ಟ್ರ್ಯಾಕ್ಟರ್ ಇರಲಿಲ್ಲ. ಅದೂ ದೊಡ್ಡ ಕಮ್ತಿಗರು ಎರಡು ಜತೀ ಎತ್ತು ಹೂಡಿ ಕಬ್ಬಿಣರಂಟಿ ಅಂತ ಹೊಡೆಯುತ್ತಿದ್ದರು. ಇವರವು ಎತ್ತು ಇರಲಿಲ್ಲವಾಗಿ ಕರಕೀಯನ್ನು ಕಡಿದೇ ಹೊಲ ಹಸನು ಮಾಡಬೇಕಿತ್ತು. ಹೇಗಾದರೂ ಮಾಡಿ ಈ ಕರಿಕಿ ತೆಗೆಯಬೇಕೆಂದು ನಿರ್ಧರಿಸಿದ ಚಿಕ್ಕಣ್ಣ. ಗುದ್ದಲಿ ಹಣಿಸಿಕೊಂಡು ತಯಾರಾದ. ಬೇಸಗೆಯ ಒಂದು ದಿನ ಬೆಳಿಗ್ಗೆ ನಾಲ್ಕಕ್ಕೆ ಎದ್ದು ಹೊಲ ತಲುಪಿ ಗುದ್ದಲಿ ಹಾಕಿದ. ನಟ್ಟು ಕಡಿಯಲು ಆರಂಭಿಸಿಯೇ ಬಿಟ್ಟ. ಮಣ್ಣಿನಾಳಕ್ಕೆ ಇಳಿದಿರುವ ಕರಕೀಯ ಬೇರುಗಳನ್ನು ಸೋಸಿ ಕರಕಿಯನ್ನು ಬುಡ ಸಮೇತ ಎಬ್ಬಿ ಮಣ್ಣು ತಿರುವಿ ಹಾಕುವುದಕ್ಕೆ ನಟ್ಟು ಕಡಿಯುವುದು ಎನ್ನುತ್ತಾರೆ. ಬೇಸಗೆಯಲ್ಲಿ ಹಲವಾರು ಕೂಲಿಕಾರ್ಮಿಕರ ಬದುಕಿಗೆ ಇದು ಆಸರೆಯಾಗಿತ್ತು. ನಟ್ಟು ಕಡಿಯಲು ಬಹಳಷ್ಟು ಶಕ್ತಿಶಾಲಿಗಳಾಗಿರಬೇಕಿತ್ತು. ಹೀಗೆ ದಿನಂಪ್ರತಿ ಬೆಳಿಗ್ಗೆ ನಾಲ್ಕರಿಂದ ಬಿಸಿಲು ಏರುವ ಹೊತ್ತಿನವರೆಗೆ ಅಂದರೆ, ಒಂಭತ್ತು ಹತ್ತು ಗಂಟೆವರೆಗೂ ನಟ್ಟು ಕಡಿಯುತಿದ್ದ. ಇದನ್ನು ಕಂಡ ಕೆಲವರು `ನಾಕೇ ದಿನಕ್ಕೆ ಕೈ ಬಿಡ್ತಾನೆ' ಇವನು ಎಂದು ಆಡಿಕೊಂಡರು. `ನಟ್ಟು ಕಡಿಯೋದಂದ್ರ ಅದೇನ್ ಹುಡುಗಾಟೇನ್ ಇದೆಲ್ಲ ಆರಂಭಶೂರತ್ವ, ನೋಡೀರಂಥ ಎರಡ ದಿನಕ ಗುದ್ಲಿ ಮೂಲೀ ಸೇರ್ತೈತಿ' ಅಂತ ಮತ್ತೆ ಕೆಲವರು ನಗಾಡಿದರು‌. ಇವನು ಮಾತ್ರ ಅಂಥ ಯಾವ ಮಾತಿಗೂ ಕಿವಿಗೊಡದೆ, ಗುದ್ದಲಿ ಎತ್ತಿ ಕರಕಿಗೆ ರಣವೀಳ್ಯ ಕೊಟ್ಟವನಂತೆ ಇಡೀ ಹೊಲವನ್ನೇ ತಿರುವಿ ಹಾಕುತ್ತ ನಡೆದಿದ್ದ‌. ಒಂದುವರೆ ಎರಡು ತಿಂಗಳಲ್ಲಿ ಇಡೀ ಹೊಲವನ್ನೆ ನಟ್ಟು ಕಡಿದ ಚಿಕ್ಕಣ್ಣ ಎಲ್ಲರನ್ನೂ ಬೆಚ್ಚಿಬೀಳಿಸಿದ್ದ. ಹಿರಿಯರಾದಿಯಾಗಿ ಎಲ್ಲರೂ ಇವನಿಗೆ `ಭಪ್ಪರೇ' ಎನ್ನುವವರೇ! ಮಾರನೇ ವರ್ಷವೇ ಆ ಹೊಲಕ್ಕೆ ಉಳ್ಳಗಡ್ಡಿ(ಈರುಳ್ಳಿ) ಚೆಲ್ಲಿದರೆ, ಉಳ್ಳಾಗಡ್ಡಿ ಕಣ್ಮುಚ್ಚಿಕೊಂಡು ಬೆಳೆದಿತ್ತು. ನೂರಾರು ಚೀಲ ಉಳ್ಳಾಗಡ್ಡಿ ಬಂದಿತ್ತು. ಇದರಿಂದ ಗೆಲುವಾದ ಚಿಕ್ಕಣ್ಣ ಅದೇ ವರ್ಷ ಹೊಸ ಎತ್ತು ತಂದು ಕಮ್ತಕ್ಕೆ ಚಾಲನೆ ನೀಡಿದ್ದ. ಅವನ ಈ ವರಸೆಗೆ ಊರಿಗೆ ಊರೇ ಮೂಕವಿಸ್ಮಿತವಾಗಿತ್ತು!

ಗುಡಿಯ ಹತ್ತಿರದಲ್ಲೆ ಚಿಕ್ಕಣ್ಣನ ಮನೆ. ಬಿಡುವಾದಾಗೆಲ್ಲ ಅಲ್ಲಿ ಹೋಗಿ ಕೂರುವುದು, ಪಂಟು ಹೊಡೆವುದು ಇವನ ರೂಢಿಯಾಗಿತ್ತು‌. ಅಲ್ಲಿ ಕೆಲ ಗಾಂಜಾಭಕ್ತರು ಆಗಾಗ ಸೇರುತ್ತ ಭಂಗಿ ಸೇದುತಿದ್ದರು. ಇವನಿನ್ನೂ ಚಿಕ್ಕವನಾಗಿದ್ದರೂ ಅವರ ಸೇವೆ ಮಾಡುತ್ತ ಅಂದರೆ, ನೀರು ಪಾರು ತಂದು ಕೊಡುವುದು, ಗಾಂಜಾ ತಂದು ಕೊಡುವುದು ಅದು ಇದು ಮಾಡುತ್ತ ಅವರಲ್ಲೊಬ್ಬನಾಗಿಬಿಟ್ಟ. ಅದು ಹೇಗೋ ಇವನಿಗೂ ಭಂಗಿಯ ಗುಂಗು ಹಿಡಿದುಬಿಟ್ಟಿತು‌.

ಮೊದಲೇ ಮುಂಗೋಪಿಯಾಗಿದ್ದ ಚಿಕ್ಕಣ್ಣ ಶರೀಪಜ್ಜನ ಶಿಷ್ಯರೊಂದಿಗೆ ಸೇರಿದ ಮೇಲೆ ಭಾವಾವೇಶಕ್ಕೆ ಒಳಗಾಗಿ ತಾನೇನು ಮಾಡುತಿದ್ದೇನೆ ಎಂಬುದನ್ನೆ ಮರೆತು ಬಿಡುತಿದ್ದ. ಇಂಥ ಸಮಯದಲ್ಲಿ ಅಣ್ಣತಮ್ಮಂದಿರ ಮಧ್ಯೆ ಹೆಚ್ಚೆಚ್ಚು ಮನಸ್ತಾಪ ಬೆಳೆಯತೊಡಗಿತು. ಅಣ್ಣಂದಿರು ಮನೆಯ ಕೆಲಸಕಾರ್ಯಗಳಲ್ಲಿ ಸಹಕರಿಸದ ಕಾರಣಕ್ಕೆ ಬೇಸರಿಸಿದ ಚಿಕ್ಕಣ್ಣ ಅವರ ಬಗ್ಗೆ ಅಸಹನೆ ಬೆಳೆಸಿಕೊಂಡ. ಇದು ಅವರ ಮಧ್ಯೆ ಕೈಕೈ ಮಿಲಾಯಿಸುವ, ಮಾರಾಮಾರಿಯಾಗುವ ಹಂತಕ್ಕೆ ತಲುಪಿತು.

ಕಷ್ಟಪಟ್ಟು ಮೇಲೆ ಬರಬೇಕೆನ್ನುವವರ ಹಾದಿಗೆ ಕಲ್ಲುಮುಳ್ಳು ಸುರಿಯುವವರೆ ಬಹಳ. ಚಿಕ್ಕಣ್ಣನ ವಿಷಯದಲ್ಲೂ ಇದು ಹಾಗೇ ಆಯಿತು. ಒಂದುವರೆ ತಿಂಗಳಲ್ಲೆ  ಇಡೀ ಹೊಲ ನಟ್ಟುಕಡಿದು ಈರುಳ್ಳಿ ಬೆಳೆದು ಎತ್ತು ತಂದು ಕಮ್ಮತಕ್ಕೆ ನಿಂತಿದ್ದ ಚಿಕ್ಕಣ್ಣನ ಶ್ರೇಯಸ್ಸು ಹಲವರ ಪಾಲಿಗೆ ನುಂಗಲಾರದ ತುತ್ತಾಗಿತ್ತು.
ಈ ಸಹೋದರರ ಮಧ್ಯದ ವೈಮನಸ್ಸನ್ನೆ ದಾಳವಾಗಿಸಿಕೊಂಡ ಇಂಥ ಕೆಲವರು, ಚಿಕ್ಕಣ್ಣನ ತಲೆಕೆಟ್ಟಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ಅದನ್ನು ಅವನ ಸೋದರರ ತಲೆಗೂ ತುಂಬುವಲ್ಲಿ ಯಶಸ್ವಿಯಾದರು. 

ಹುಚ್ಚು ಹಿಡಿದಿರುವುದು ನಿಜವೆಂದೇ ನಂಬಿದ ಚಿಕ್ಕಣ್ಣನ ಸೋದರರು ಉಪಾಯದಿಂದ ಅವನನ್ನು ಹಿಡಿದು ಅವನ ಮೂಗಿನಲ್ಲಿ ನಿಂಬೆರಸ ಹಿಂಡುವುದರಿಂದ ಹಿಡಿದು ಮಂತ್ರ ಮಾಟಾದಿ ವಿಧಿವಿಧಾನಗಳನ್ನೆಲ್ಲ ಪೂರೈಸಿ ನಿಟ್ಟುಸಿರಿಟ್ಟರು. ಇದೆಲ್ಲದರಿಂದ ರೋಸಿ ಹೋದ ಚಿಕ್ಕಣ್ಣ ರೊಚ್ಚಿನಿಂದ ಕುದಿಯತೊಡಗಿದ. ಅವನ ರೋಷಕ್ಕೆ ಬೆಚ್ಚಿ `ಮತ್ತೇನಾದರೂ ಅನಾಹುತ ಮಾಡಿಯಾನು' ಎಂದು ಭೀತರಾಗಿ ಅವನ ಸೋದರರು ಮನೆಯೊಂದರ ಕೋಣೆಯಲ್ಲಿ ಹಗ್ಗ ಕಟ್ಟಿ ಚಿಕ್ಕಣ್ಣನನ್ನು ಕೂಡಿ ಹಾಕಿಬಿಟ್ಟರು.

ಹಕ್ಕಿಯಂತೆ ಹಾರಾಡಿಕೊಂಡಿದ್ದ ಸ್ವತಂತ್ರ ಜೀವ ಅದು. ಗೃಹಬಂಧನದ ಈ ದೆಸೆಯಿಂದ ಮಾನಸಿಕ ಸ್ಥಿಮಿತವೆ ತಪ್ಪಿ ಹೋಯಿತು. ತಿಂಗಳೊಪ್ಪತ್ತಿನ ಈ ಬಂಧನ ಚಿಕ್ಕಣ್ಣನ ಪಾಲಿಗೆ ಅಕ್ಷರಶಃ ಯಮಯಾತನೆಯೆ ಆಗಿತ್ತು. ಅದೊಂದು ತರ ಜೈಲುಶಿಕ್ಷೆಯೆ! ಊಟ ಕೊಟ್ಟಾಗ ಊಟ, ನೀರು ಕೊಟ್ಟಾಗ ನೀರು , ಅಲ್ಲೆ ಒಂದಕ್ಕೆ ಮಾಡುವುದು, ಹಾಳೆಪಾಳೆಯಲ್ಲಿ ಎರಡೂ ಮಾಡಿ ಆಚೆ ಚೆಲ್ಲುವುದು. ಮೂಢರ ಜಗತ್ತಿನ ಮೂರ್ಖತನಕ್ಕೆ ಅಂದು ಮುಗ್ಧನೊಬ್ಬ ಬಲಿಯಾಗಿ ಹೋಗಿದ್ದ.

ಬರುಬರುತ್ತ ಚಿತ್ತವಿಕಲ್ಪಕ್ಕೆ ತುತ್ತಾದ ಚಿಕ್ಕಣ್ಣ ಕಾಡುಮೃಗದಂತೆ ವರ್ತಿಸತೊಡಗಿದ. ಅರಚುವುದು ಚೀರುವುದು ಹೀಗೆ ಮಾಡುತ್ತ ಹಗ್ಗವನ್ನೇ ಹರಿದು, ಬಾಗಿಲು ಮುರಿದು ಆ ಮನೆಯಿಂದ ಪಾರಾಗಿ ಬಿಟ್ಟ. 

ಎದುರಿಗೆ ಸಿಕ್ಕವನೇ ಹಿರಿಯಣ್ಣ, ತನ್ನ ಮೇಲೆ ವೃಥಾ ದ್ವೇಷ ಸಾಧಿಸಿ, ಅವರಿವರ ಮಾತು ಕೇಳಿ ತನಗೆ ಏನೆಲ್ಲ ಮಾಡಿಬಿಟ್ಟರಲ್ಲ ಎಂದುಕೊಂಡವನೇ ಅವನ ಮೇಲೆ ಏರಿ ಹೋದ. ಅಷ್ಟೇ ಏನಾಯಿತೆಂಬುದು ತಿಳಿಯುವಷ್ಟರಲ್ಲಿ ಅವನಿಗೆ ಚೂರಿ ಹಾಕಿದ್ದ. ಜನರ ಮಧ್ಯೆ ಇದ್ದನಾಗಿ ಉಳಿದೆಲ್ಲರೂ ಇವನನ್ನು ಗಪ್ಪನೆ ಹಿಡಿದರು. ಅದೇ ಪೊಲೀಸ್ ಕಂಪ್ಲೇಂಟ್ ಆಯಿತು. ಚಿಕ್ಕಣ್ಣನ ಬದುಕಿನಲ್ಲಿ ಆಟವಾಡಿದ ಎಲ್ಲರಿಗೂ ನಿದ್ದೆಯೆ ಬಾರದಾಯಿತು. ಇವನೇನಾದರೂ ಆಕಸ್ಮಾತ್ ಊರಿಗೆ ವಾಪಸಾದರೆ ತಮಗೆ ಉಳಿಗಾಲವಿಲ್ಲ ಎಂಬುದು ಅವರಿಗೆ ಖಚಿತವಾಗಿತ್ತು.

ಪಿಎಸ್ಐ ಬಳಿ ತೆರಳಿದ ಅವರು, ಅತ್ತು ಅಲವತ್ತು ತಮಗೆ ಪ್ರಾಣಭಿಕ್ಷೆ ಕೊಡಿ ಎಂದು ಬೇಡಿಕೊಂಡರು. ಇವರಿಂದ ಪಡೆಯಬಹುದಾದ್ದನ್ನೆಲ್ಲ ಪಡೆದುಕೊಂಡ ಪೊಲೀಸರು,  ಚಿಕ್ಕಣ್ಣ ಗಾಂಜಾ ಸೇದುತಿದ್ದ ಎಂಬ ಪಿಳ್ಳೆನೆವವನ್ನೆ ಮುಂದುಮಾಡಿ ಅವನನ್ನು ಅಂತಾರಾಜ್ಯ ಮಾದಕ ವಸ್ತು ಸಾಗಾಣಿಕೆ ಪ್ರಕರಣದಲ್ಲಿ ಶಾಮೀಲು ಮಾಡಿ ಕೈ ತೊಳೆದುಕೊಂಡರು. ತನ್ನ ಪಾಡಿಗೆ ತಾನು ಹಾರಿ, ಹಾಡಿಕೊಂಡಿದ್ದ ಪಾರಿವಾಳವೊಂದು ತನಗರಿವಿಲ್ಲದೇ ಖೂಳರ ಬಲೆಗೆ ಬಿದ್ದಂತೆ ಚಿಕ್ಕಣ್ಣ ಬಳ್ಳಾರಿ ಜೈಲು ಸೇರಿದ್ದ!