ಫೊಟೋಗಳೆಂಬ ಭಾವ ಜಗತ್ತು

ಫೊಟೋಗಳೆಂಬ ಭಾವ ಜಗತ್ತು

ಫೊಟೋಗಳಿಗೂ ಜೀವ ಇದೆ ಅಂತ ಎಷ್ಟೋ ಸಲ ನನಗನ್ನಿಸಿದೆ. ನಮ್ಮ ತಂದೆ ಬಾಲ್ಯದಲ್ಲಿ ತೆಗೆದ ನಾನು ನನ್ನ ಸಹೋದರಿ ಗುಣ ಮತ್ತು ಸಹೋದರ ನವೀನನ ಬ್ಲ್ಯಾಕ್ ಅಂಡ್ ವೈಟ್ ಫೊಟೋಗಳು ನಮ್ಮ ವರ್ಣರಂಜಿತ ಬದುಕಿಗಿಂತ ಜೀವಂತ.

ಆ ಫೊಟೋಗಳನ್ನೆಲ್ಲ ನೋಡುವಾಗ ಬಾಲ್ಯಕ್ಕೆ ಮತ್ತೆ ಹೋಗಬೇಕೆನಿಸುತ್ತೆ. ಯಾವುದೇ ಲೆಕ್ಕಾಚಾರ, ಸ್ವಾರ್ಥಗಳಿಲ್ಲಿದ ನಿಷ್ಕಲ್ಮಶ ಬದುಕಿನ ಘಟ್ಟ ಅದು. ಅದು ಬ್ಲ್ಯಾಕ್ ಅಂಡ್ ವೈಟ್ ಫೊಟೋಗಳೇ ಆಗಿದ್ದರೂ ಜೋಪಾನದಿಂದ ಕಾಪಾಡಿಕೊಂಡಿದ್ದೇನೆ.

ಯಾಕೆಂದರೆ ಅದು ನಮ್ಮ ಅಣ್ಣ(ತಂದೆ) ತೆಗೆದ ಫೊಟೋ. ಅದಕ್ಯಾವ ಬೆಲೆ ಕಟ್ಡುವುದು ಸಾಧ್ಯ? ಕಾಲಾಂತರದಲ್ಲಿ ನಮ್ಮ ಅಣ್ಣ ತೆಗೆಯುತ್ತಿದ್ದ ಫೊಟೋಗಳಿಗಿಂತ ಅವರ ಬಳಿ ಇದ್ದ ಆ ಪುರಾತನ (ಆ ದಿನಗಳಲ್ಲಿ ಅದು ಅತ್ಯುತ್ತಮ) ಕ್ಯಾಮರಾ ನಮ್ಮ ಮನೆಯ ಅಟ್ಟ ಸೇರಿ ಹೊಸ ಕ್ಯಾಮರಾ ಬಂದರೂ ಹಳೆಯ ಕ್ಯಾಮರಾ ನಮ್ಮೊಳಗೆ ಸೃಷ್ಟಿಸಿದ್ದ ಭಾವ ಜಗತ್ತು ಇದೆಯಲ್ಲಾ, ಅದನ್ನು ಅಕ್ಷರಶಃ ವರ್ಣಿಸುವುದು ಅಷ್ಟು ಸುಲಭವಲ್ಲ.

ನಮ್ಮ ಅಣ್ಣ, ಅಮ್ಮನ ಮದುವೆ ಫೊಟೋ, ಅಮ್ಮನ ಊರಿನಲ್ಲಿ ಅವರ ಸೋದರಿಯರ ಜತೆ ನನ್ನ ಅಣ್ಣ ಅಮ್ಮ ಜತೆಯಾಗಿಯೇ ತೆಗೆಸಿಕೊಂಡಿದ್ದ ಫೊಟೋ ಒಂದು ಕುಟುಂಬದ ಇತಿಹಾಸವನ್ನಷ್ಟೇ ಹೇಳುವುದಿಲ್ಲ, ಆ ಕಾಲ ಘಟ್ಟದ ಸಾಮಾಜಿಕ ಬದುಕನ್ನೂ ನಮಗೆ ಚಿತ್ರಗಳ ಮೂಲಕ ವಿವರಿಸುತ್ತದೆ.

ಅದು ಎಲ್ಲರಿಗೂ ದೊರೆಯುವಂಥದ್ದಲ್ಲ. ಮಡಿಕೇರಿಯಲ್ಲಿ ಆ ದಿನಗಳಲ್ಲಿ ಪ್ರಖ್ಯಾತವಾಗಿದ್ದ ವಾಸು ಫೊಟೋ ಸ್ಟುಡಿಯೋದಲ್ಲಿ ನಾವು ಮನೆಯವರೆಲ್ಲ ನಮ್ಮ ಬಾಲ್ಯದಲ್ಲಿ ತೆಗೆಸಿಕೊಂಡಿದ್ದ ಫೊಟೋಗಳು ಬೆಂಗಳೂರಿಗೆ ನನ್ನ ಜತೆ ಪ್ರಯಾಣಿಸಲೇ ಇಲ್ಲ. ಅಪ್ಪ ಅಮ್ಮನ ಕಣ್ಮರೆ ನಂತರ ಅವುಗಳನ್ನು ಬಂಧಿಸಿಡಲಾಗಿತ್ತು.ಅಣ್ಣ, ಅಮ್ಮ ಹೋದ ನಂತರ ಅವುಗಳಾದರೂ ನನ್ನ ಬಳಿ ಇರಲಿ ಎಂದು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾಗಿ ನೋವಷ್ಟೇ ಉಳಿಯುವಂತಾಗಿತ್ತು.

ನಾನು, ನಮ್ಮ ಗುಣ ಪಂಜಾಬಿ ಡ್ರೆಸ್ ಹಾಕಿಕೊಂಡು ತೆಗೆಸಿದ್ದ ಫೊಟೋ, ನಾನು ನಮ್ಮ ನವೀನ ಸ್ಕೂಟರ್ ಮೇಲೆ ಕುಳಿತುಕೊಂಡು ತೆಗೆಸಿಕೊಂಡಿದ್ದ ಫೊಟೋ ಅವುಗಳಾವುವೂ ಈಗ ನನ್ನ ಬಳಿ ಇಲ್ಲ. ಕೋಟಿ ಕೊಟ್ಟರೂ ಸಿಗಲಾರದ ಆಸ್ತಿ ಅದು.

ಈ ಫೊಟೋಗಳು ನನ್ನ ಅಂತರಂಗದಲ್ಲೇ ಇದ್ದು ಆಗಿಂದಾಗ್ಗೆ ಎದೆಯ ಕದವನ್ನು ತಟ್ಟುತ್ತಲೇ ಇರುತ್ತವೆ. ನನ್ನ ಮದುವೆಯ ನಂತರ ನನ್ನ ಮಗ ಅಗ್ನಿತೇಜ್(ಈಗ ಡಾ.ಅಗ್ನಿತೇಜ್)ನ ಬಾಲ್ಯದ ಫೊಟೋಗಳನ್ನೆಲ್ಲ ತೆಗೆದಿದ್ದು ನನ್ನ ಪತ್ನಿ ಸರಸ್ವತಿ. ನನ್ನ ಮಗ ಮಾರ್ಥಾಸ್ ಆಸ್ಪತ್ರೆಯಲ್ಲಿ ಹುಟ್ಟಿದ ದಿನವೇ ಹುಟ್ಟಿದ ಇತರ ಮಕ್ಕಳನ್ನೆಲ್ಲ ಸ್ನಾನಕ್ಕೆಂದು ಟಬ್ ನಲ್ಲಿಟ್ಟಿದ್ದಾಗ ಅದ್ಯಾರೋ ಅಪರಿಚಿತರು ತೆಗೆದ ಫೊಟೋ ಈಗಲೂ ನಮ್ಮ ಬಳಿ ಇದೆ. ಅದು ಯಾರೋ ಏನೋ. ಯಾವ ಸಂಬಂಧವೂ ಇಲ್ಲದ ಅವರನ್ನು ನಾನು, ನನ್ನ ಪತ್ನಿ ಈಗಲೂ ನೆನಪಿಸಿಕೊಳ್ಳುತ್ತೇವೆ.

ಉಳಿದಂತೆ ಅವನ ಪ್ರತಿ ದಿನದ ಬೆಳವಣಿಗೆಗಳ ಫೊಟೋಗಳ ರಾಶಿಯೇ ನಮ್ಮ ಮನೆಯಲ್ಲಿರುವುದಕ್ಜೆ ನನ್ನ ಸರಸ್ವತಿಯೇ ಕಾರಣ. ಹಾಗೇ ನಮ್ಮ ಮದುವೆಯಾದ ಆರಂಭದ ದಿನಗಳಲ್ಲಿ ಗೆಳೆಯ ಶ್ಯಾಮ್ ಭಟ್, ಅವರ ಚಿಕ್ಕಪ್ಪ ನರಸಿಂಹ ಭಟ್ , ಮಂಗಳೂರಿನಲ್ಲಿ ಪ್ರಖ್ಯಾತ ಛಾಯಾಗ್ರಾಹಕ ಯಜ್ಞ ತೆಗೆದ ಎಲ್ಲ ಫೊಟೋಗಳೂ ಇವತ್ತಿಗೂ ನಮ್ಮೊಂದಿಗೆ ಮಾತಾಡುತ್ತವೆ. ನನ್ನ ಪತ್ನಿ ಮಲಗಿದ್ದಾಗ, ನನ್ನ ಮಗ ಕ್ಲಿನಿಕ್ ಗೆ ಹೋಗಿದ್ದಾಗ ನಾನೊಬ್ಬನೇ ಇದ್ದರೆ ಅವುಗಳ ಜತೆ ನನ್ನ ಮಾತುಕತೆ ನಡೆಯುತ್ತಲೇ ಇರುತ್ತದೆ.

ಲಂಕೇಶ್ ಪತ್ರಿಕೆಯಲ್ಲಿ ನಾನಿದ್ದ ದಿನಗಳಲ್ಲಿ ಲಂಕೇಶ್ ಸೆರೆ ಹಿಡಿದ ನನ್ನ ಫೊಟೋಗಳಂತೂ ನನಗೆ ಜೀವಕ್ಕಿಂತ ಹೆಚ್ಚು ಬೆಲೆಯುಳ್ಳದ್ದು. ಯಾವುದೇ ಒಂದು ಸಂದರ್ಭವಾದರೂ ಲಂಕೇಶ್ ಫೊಟೋ ಸೆಷನ್ ನೆನಪಿಸುತ್ತಿದ್ದರು. ಅದರ ಬೆಲೆ ಅವರಿಗೆ ಗೊತ್ತಿತ್ತು.ಗೆಳೆಯ, ಕಲಾವಿದ ಎಂ.ಎಸ್.ಮೂರ್ತಿ ಸೆರೆ ಹಿಡಿದ ನಾನು ಮತ್ತು ನನ್ನ ಪತ್ನಿಯ ಫೊಟೋ ಕೂಡ ನನ್ನನ್ನು ಈಗಲೂ ಕಾಡುತ್ತಾ ಹಳೆಯ ದಿನಗಳಿಗೆ ಕರೆದೊಯ್ಯುತ್ತದೆ. ಇತ್ತೀಚೆಗೆ ಲಂಕೇಶ್ ಪತ್ರಿಕೆಯಲ್ಲಿ ನನ್ನ ಸಹೋದ್ಯೋಗಿಯೂ, ಗೆಳೆಯನೂ ಆಗಿದ್ದ ಸತೀಶ್,ಲಂಕೇಶ್ ತೆಗೆದಿದ್ದ ನನ್ನ ಒಂದು ಫೊಟೋ ಕೊಟ್ಟಾಗ ಆದ ಸಂತೋಷ ಅಷ್ಟಿಷ್ಟಲ್ಲ.

ನಮ್ಮ ಮನೆಯ ಎದುರು ನಮ್ಮ ಕುಟುಂಬದ ಸದಸ್ಯರೆಲ್ಲ ಒಟ್ಟಾಗಿ ನಿಂತಿದ್ದ ಫೊಟೋ ತೆಗೆದಿದ್ದ ಆಶಾ ಸ್ಟುಡಿಯೋ ಮಾಲೀಕರಾದ ಮೊಹ್ಮದಣ್ಣನನ್ನು ನಾನು ಜೀವನದ ಕೊನೇ ಗಳಿಗೆವರೆಗೆ ಮರೆಯುವುದು ಸಾಧ್ಯವೇ ಇಲ್ಲ. ಈಗ ಮೊಹ್ಮದಣ್ಣ ಇಲ್ಲ. ಅವರ ಸ್ಟುಡಿಯೋ ಇದೆ.ಮಕ್ಕಳು ನಡೆಸುತ್ತಿದ್ದಾರೆ.

.ನಾನು ಮಂಗಳೂರಿನಲ್ಲಿ ಮುಂಗಾರು ಪತ್ರಿಕೆಯಲ್ಲಿದ್ದ ದಿನಗಳಲ್ಲಿ ಪ್ರಖ್ಯಾತ ಛಾಯಾಗ್ರಾಹಕ ದಿವಂಗತ ಕೇಶವ ವಿಟ್ಲ, ಬಿ.ಎಂ.ಹನೀಫ್, ಪಂಜು ಗಂಗೊಳ್ಳಿ ಒಮ್ಮೆ ದಸರಾ ಸಂದರ್ಭದಲ್ಲಿ ಮಡಿಕೇರಿಗೆ ಬಂದು ನಮ್ಮ ಮನೆಯಲ್ಲಿ ತಂಗಿದ್ದಾಗ ಕೇಶವ ವಿಟ್ಲ ತೆಗೆದಿದ್ದ ನಮ್ಮ ಕುಟುಂಬ ಸದಸ್ಯರ ಫೊಟೋ ತೆಗೆದು ಅದನ್ನು ವರ್ಷಗಟ್ಟಲೆ ಕೊಡದೇ ಇದ್ದಾಗ, ಆತ ಫೊಟೋ ತೆಗೆದೇ ಇಲ್ಲ ಎಂದು ನಾವೆಲ್ಲ ಭಾವಿಸಿ ಮರೆತಿದ್ದ ಸಂದರ್ಭದಲ್ಲಿ ಕೇಶವ ವಿಟ್ಲ ಆ ಫೊಟೋ ಕೊಟ್ಟಾಗ ನಮಗಾದ ಸಂತೋಷ ಇದೆಯಲ್ಲಾ ಅದು ವರ್ಣನಾತೀತ. ಮಾಜಿ ಮುಖ್ಯಮಂತ್ರಿ ಆರ್. ಗುಂಡೂರಾವ್ ಅವರ ಖಾಸಗೀ ಫೊಟೋಗ್ರಾಫರ್ ನವಾಜ್ ಅವರ ಸ್ಟುಡಿಯೋದ ಎದುರು ತೆಗೆದಿದ್ದ ನನ್ನ ಗಡ್ಡಧಾರಿ ಫೊಟೋ ಈಗಲೂ ನನ್ನ ಅಮೂಲ್ಯ ಆಸ್ತಿ.ನಮ್ಮಲ್ಲೊಂದು ಭಾವಕೋಶ ಇರುವುದಕ್ಕೆ ಈ ಫೊಟೋಗಳಿಗೂ ಜೀವ ಇದೆ ಎನ್ನುವುದು ನಮಗೆ ಗೊತ್ತಿದೆ ಅಥವಾ ಹಾಗೆ ಭಾವಿಸಿದ್ದೇವೆ. ನನ್ನ ಮಗ ಅಗ್ನಿತೇಜ್ ಕೂಡ ಒಳ್ಳೆ ಫೊಟೋಗ್ರಾಫರ್. ಅವನು ಕೂಡ ಪ್ರಕೃತಿಯ ಅದೆಷ್ಟೋ ಫೊಟೋಗಳನ್ನು ಸೆರೆ ಹಿಡಿದಿದ್ದಾನೆ. ಸಂಕೋಚದ ಸ್ವಭಾವದಿಂದಾಗಿ ಅದನ್ನೆಂದೂ ಆತ ಪ್ರದರ್ಶಿಸುವುದೂ ಇಲ್ಲ, ಹೇಳಿಕೊಳ್ಳುವುದೂ ಇಲ್ಲ. 


ನಾನು ಕೂಡ ಫೊಟೋ ಆಗಿಂದಾಗ್ಗೆ ತೆಗೆಯುತ್ತಿರುತ್ತೇನೆ. ಹೀಗೆ ಒಮ್ಮೆ ನಾನು ತುಂಬ ಇಷ್ಟಪಡುವ ವ್ಯಕ್ತಿಯೊಬ್ಬರ ಫೊಟೋ ತೆಗೆದಿದ್ದೆ. ಅದು ನನಗೆ ಎಷ್ಟು ಖುಷಿ ಕೊಟ್ಟಿತ್ತೆಂದರೆ ಅಷ್ಟು ಸುಂದರವಾದ ಫೊಟೋ ನಾನು ಈವರೆಗೆ ತೆಗೆದೇ ಇಲ್ಲವೇನೋ ಎನ್ನುವಂಥ ಖುಷಿ. ಆ ವ್ಯಕ್ತಿಗೂ ನಾನು ತೆಗೆದ ಅವರ ವಿವಿಧ ಭಂಗಿಗಳ ಫೊಟೋ ಕೊಟ್ಟಿದ್ದೆ. ಅದು ಹೇಗೋ ನನ್ನ ಸಂಗ್ರಹದಿಂದ ಡಿಲೀಟ್ ಆಯಿತೋ ಗೊತ್ತಿಲ್ಲ. ಅವರ ಬಳಿಯಾದರೂ ಇರುತ್ತದಲ್ಲಾ ಎಂಬ ನಂಬಿಕೆಯಿಂದ ಕೇಳಿದೆ. "ನೀವು ತೆಗೆದ ನನ್ನ ಫೊಟೋಗಳ್ಯಾವುವೂ ನನ್ನ ಬಳಿ ಇಲ್ಲ. ಡಿಲೀಟ್ ಮಾಡಿಬಿಟ್ಟಿದ್ದೇನೆ" ಎಂದರು. ಆ ಉತ್ತರ ಕೇಳಿ ನನಗೆ ಅಚ್ಚರಿ, ಆಘಾತ. ಸಂಬಂಧಗಳಿಗೆ ಬೆಲೆಯೇ ಇಲ್ಲದಂತೆ, ಅವುಗಳ ಮೌಲ್ಯದ ಅರಿವೂ ಇಲ್ಲದಂತೆ ಪ್ರತಿಕ್ರಿಯಿಸಿದ್ದನ್ನು ಕೇಳಿ ತುಂಬ ಭಾವನಾತ್ಮಕ ಜೀವಿಯಾದ ನನಗೆ ಕಣ್ಣಂಚಿನಲ್ಲಿ ನೀರು ಒತ್ತರಿಸಿತು. ನಾನೇನಾದರೂ ಕಣ್ಣೀರಿಟ್ಟರೆ ನನ್ನ ಬಳಿ ಇರುವ ಇತರ ಫೊಟೋಗಳೂ ಕಣ್ಣೀರಿಟ್ಟು ಆತ್ಮಹತ್ಯೆ ಮಾಡಿಕೊಂಡಾವು ಎಂಬ ಆತಂಕದಿಂದ ಕಣ್ಣಂಚನ್ನು ಒರೆಸಿಕೊಂಡೆ. ಭಾವಕೋಶವೇ ಇಲ್ಲದ ಯಂತ್ರವೊಂದರ ಫೊಟೋವನ್ನೇನಾದರೂ ನಾನು ತೆಗೆದೆನೇನೋ ಅನ್ನಿಸಿತು.

ನಿರಕ್ಷರಕುಕ್ಷಿಗಳೂ, ಭಾವನೆಗಳೇ ಇಲ್ಲದವರೂ, ಸಂಬಂಧಗಳನ್ನೂ ಗೌರವಿಸದವರೂ, ವ್ಯಕ್ತಿತ್ವಕ್ಕೂ ಬೆಲೆ ಕೊಡದವರೂ ಹೀಗಿರಬಲ್ಲರು. ಅಪಾತ್ರರ ಜತೆ ಸಂಬಂಧ ಹುಡುಕುವ ನನ್ನ ಬಗ್ಗೆಯೇ ನನಗೆ ಅಸಹ್ಯವಾಯಿತು.ವ್ಯಾವಹಾರಿಕ ಸಂಬಂಧ ಇರಿಸಿಕೊಂಡವರಿಂದ ಭಾವನಾತ್ಮಕ ಸಂಬಂಧ ನಿರೀಕ್ಷಿಸಬಾರದು. ಅದು ಅವರ ತಪ್ಪಲ್ಲ, ನನ್ನದೇ ತಪ್ಪು.ಫೊಟೋಗಳೆಂದರೆ ಕೇವಲ ಛಾಯಾಪ್ರತಿಯಲ್ಲ,  ಫೊಟೋಗಳಿಗೂ ಜೀವ, ರಕ್ತ, ಮಾಂಸವಿದೆ, ಅವುಗಳೊಂದಿಗೆ ಸಂವಾದ ಸಾಧ್ಯವಿದೆ, ಅವುಗಳೂ ಇತಿಹಾಸವನ್ನು ಹೇಳಬಲ್ಲವು. ಫೊಟೋಗಳು ವಾಸ್ತವದ ಕತೆಯನ್ನೂ ನೆನಪಿಸಬಲ್ಲವು, ಕನಸಿನ ಲೋಕಕ್ಕೂ ಕರೆದೊಯ್ಯಬಲ್ಲವು. ಮಾಂತ್ರಿಕ ಜಗತ್ತನ್ನೇ ಸೃಷ್ಟಿಸಬಲ್ಲವು. ಕಾಡುವ ನೆನಪುಗಳೂ ಆ ದಿನಗಳಿಗೆ ಹೋಗಿ ಫೊಟೋಗಳೊಂದಿಗೆ ಸಂವಾದಿಸುತ್ತವೆ. ಇಂಥ ಫೊಟೋಗಳಿಗೆ ಬೆಲೆ ಕಟ್ಟಲಾದೀತೇ? ಅವುಗಳ ಮೌಲ್ಯ ಅರಿಯದವರು ಬದುಕಿನ ಮೌಲ್ಯವನ್ನೂ ಅರಿತಿರಲಾರರು.

ಫೊಟೋಗಳ ಭಾವಕೋಶದಲ್ಲಿ ನೀವೂ ಒಮ್ಮೆ ಪಯಣಿಸಿ. ಅದರ ಸುಖ, ಗತ್ತು, ಗಮ್ಮತ್ತು ಅನುಭವಿಸಿ. ಇನ್ನೆಂದೂ ಆ ಸಾಂಗತ್ಯದಿಂದ ದೂರ ಇರಲಾರಿರಿ. ಯಾಕೆಂದರೆ ಫೊಟೋಗಳಲ್ಲಿ ಅಪೂರ್ವ ಜೀವ ಪ್ರಭೆ ಇದೆ. ಅದನ್ನು ನೋಡುವ ಹೃದಯ ಮತ್ತು ಕಣ್ಣು ಬೇಕಷ್ಟೇ. ಮಳೆ, ಚಳಿ ಹೀಗೆ ವಿವಿಧ ಋತುಗಳಲ್ಲಿ ಫೊಟೋಗಳೂ ನಶಿಸಿ ಹೋಗಬಹುದು. ಹೆತ್ತವರು, ಒಡಹುಟ್ಟಿದವರು, ಗುರುಶಿಷ್ಯರು...ಹೀಗೆ ಎಲ್ಲ ಸಂಬಂಧಗಳು ದುರ್ಬಲವಾಗುತ್ತಿರುವ ಈ ಕಾಲಘಟ್ಟದಲ್ಲಿ ನನ್ನ ಭಾವಕೋಶದ ಪದರಗಳಲ್ಲಿ ಎಲ್ಲ  ಭದ್ರವಾಗಿಟ್ಟಿದ್ದೇನೆ.