ತಂತಿಮಾತು ಸಿಬಿಐಗಾದ್ರ...... ಕಂತಿ, ಕಂತಿ....ಮಾತು ಯಾವ್

ತಂತಿಮಾತು ಸಿಬಿಐಗಾದ್ರ...... ಕಂತಿ, ಕಂತಿ....ಮಾತು ಯಾವ್

ಯಾಕೋ ಬಸಣ್ಣ ಹಿಂಗ್ಯಾಕ್ ಸೊಂಡಿ ಸಿಂಡ್ರ್ಸಿಗೆಂಡ್ ಹೊಂಟಿ?, ಯಾಕ್ ಮೈಯಾಗ ಸರಿ ಐತಿಲ್ಲೋ.?. ನಿನ್ನ ಮಖಾ ನೋಡಿದ್ರ ಜ್ವರಾ ಬಂದಂಗ್ ಕಾಣತೈತಿ!. ಅದು ಅಲ್ದ ಬೆಳಿಗ್ಗೆ...ಬೆಳಿಗ್ಗೆ ಬ್ಯಾರೆ ರಸ್ತೆ ಹಿಡ್ದ ಬರಕಾಹತ್ತಿ?.  ಆ ಮನಿಗೆ ಹೋಗಿದ್ದ್ಯಾ ಹೆಂಗ್ಯ?.

"ಕಾಕಾರ ನೀವು ವಾಸ್ನಿ ಹಿಡೇದ್ರಾಗ ನಾಯಿನ ಮೀರಿಸ್ತೀರಿ"!, ಅಲ್ಲಾ ನಾ ದಾರಿ ಬದ್ಲ ಮಾಡಿದ್ರ ಅದಕ್ಕು ಕಾರ್ಣಾ ಕಂಡ ಹಿಡೀತಿರಲ್ಲ... "ಹಿಂದಿನ ಜನ್ಮದಾಗ ಪೊಲೀಸ್ ನಾಯಿ ಆಗಿದ್ದ್ರೋ ಏನೋ"?.

ಲೇ...ಲೇ...ಕಬರ್ಗೇಡಿ, ಇದ್ರಾಗ ಕಂಡ ಹಿಡೇದು ಏನೈತೋ!. ನಿನ್ನೆ, ನಿನ್ನ ಹೆಂಡ್ತಿ ನಿನ್ನ ಮಕ್ಕಳನ್ನ ಕರ್ಕೊಂಡು ನಮ್ಮ ಮನಿಗೆ ಬಂದಿದ್ಲೂ. "ಇತ್ತೀತ್ಲಾಗ್ ಅವ್ರು ಸರಿಯಾಗಿ ಮನ್ಯಾಗ ಇರವಲ್ರು', "ರಾತ್ರಿ ಎಷ್ಟತ್ತನ್ಯಾಗರ ಬರ್ತಾರ, ಹೊಕ್ಕಾರ. ಅವ್ರ ಹಕಿಕತ್ತ ತಿಳಿವಲ್ದು"?. "ಕೇಳಿದ್ರ ಹೆಂಗ್ಯಬೇಕಂಗ್ ಒದ್ರತಾರ್"...... "ಮನ್ಯಾಗ ಕೂಳು ತಿನವಲ್ರು, ನೀರು ಕುಡಿವಲ್ರು".... "ಯಾವಾಗ ನೋಡಿದ್ರು ಮೊಬೈಲ್ ಕಿವ್ಯಾಗ ಇಟಗೊಂಡು ಹೂಂ, ಉಹೂಂ ಅನ್ನಕಂತನ್ ಇರ್ತಾರ". ಯಾರ್ದ್ರೀ ಪೋನು ಅಂದ್ರ..... "ನಿನಗ್ಯಾಗ ಅದೇಲ್ಲಾ ನನ್ನ್ವು ನೋರಾ ಎಂಟ್ ಇರ್ತಾವು" ಅಂತ್ ನನ್ನ ಜಬ್ರ್ಸಿ ಬಾಯಿ ಮುಚ್ಚಿಸಿಬಿಡ್ತಾರ!. ಅವ್ರ್ನ ಕರ್ದು ಬುದ್ದಿ ಹೇಳ್ರೀ... ನಿಮ್ಮ ಮಾತಲ್ದ ಅವ್ರು ಬ್ಯಾರೇ ಯಾರ್ ಮಾತು ಕೇಳೋಂಗಿಲ್ಲ ಅಂತ್ ಹೇಳಿಹೋದ್ಲು.
ಇಲ್ಗೂ ಬಂದಿದ್ಲೇನ್ರೀ ಆಕಿ, ಇಷ್ಟ ಹೇಳ್ಯಾಳ ಮತ್ತೇನರ್ ಹೇಳಾಳ......?.

"ಲೇ... ತಮ್ಮ ಹಂಗೆಲ್ಲಾ ಕಟಿಗೊಂಡು ಹೆಂಡ್ತಿಗೆ ಮೋಸಾ ಮಾಡಬ್ಯಾಡೋ"....!, "ಕಾಮಿ ಕಣ್ಣ..ಮುಚುಗೊಂಡು ಹಾಲ ಕುಡ್ದ್ರ ಯಾರ್ಗೂ ಗೊತ್ತಾಗೋದಿಲ್ಲ" ಅಂತ್ ತಿಳ್ಕಂಡಿಯೇನ್ ಮಗ್ನ!. "ನಿನ್ನ ಕಣ್ಣು ಮುಚ್ಚಾಲೆ ನವರಂಗಿ ಆಟ ನಿನ್ನ ಮನಿಗಷ್ಟ ಅಲ್ಲ, ಊರತುಂಬಾನು ಡಂಗ್ರಾ ಹೊಡ್ಯಾಕ ಹತ್ಯಾರ ಮಗ್ನ". ನೆಟ್ಗ ಬಾಳೆ ಮಾಡಿಕೊಂಡು ಹೋಗು.... ಈ "ಹಗ್ಗಾ ಕಡೆಚಾಳಿ ಒಳ್ಳೆದಲ್ಲ. ಅಲ್ಲಲೇ ಕಟ್ಗಿಗೊಂಡವ್ಳು ಕಡೆ ತನ್ಕ, ಇಟ್ಟಗೊಂಡವಳ್ಳು ಇರೋತನ್ಕಾ" ತಿಳ್ಕಾ, ಅಲ್ಲಲೇ "ಬಂಗಾರದಂತಾ ಹೆಂಡ್ತಿ, ಚಿನ್ನದಂತಾ ಮಕ್ಳು ಅದಾವು, ಇನ್ನೇನ್ ಬೇಕ್ಲೇ ನಿನ್ಗ"?. "ನೆಟ್ಗ ಸಂಸಾರ ನಡ್ಸು ಮಗ್ನ, ಇಲ್ಲಾಂದ್ರ ಮೂರು ಕಾಸ್ಗಿಗೆ ನಿನ್ನ ಇದ್ದ-ಬದ್ದ ಮರ್ಯಾದಿನ್ ಹರಾಜ್‍ಹಾಕ್ಸಿ ಬಿಡ್ತನಿ ನೋಡು"!. 

ಏ....ತಡ್ರೀ ಕಾಕಾ, ಬಾಯಿ ಐತಂತ್ ಏನೇನರ್ ಮಾತಾಡಾಕ ಹತ್ತೀರಲ್ಲ!. ನನ್ನ ವ್ಯಯಕ್ತಿಕ ವಿಚಾರಕ್ಕ ಬರಬ್ಯಾಡ್ರೀ...., ಕಟ್ಗಿ ಬಾಯಿ ಆಗಿದ್ರ ಒಡ್ದುಹೊಕ್ಕೀತ್ತು... ಅಲ್ರೀ ನಾ...ಏನ್ ಅಂತ್ ಮಾಡಬಾರ್ದು ಮಾಡೇನಿ.....!. 

ಅಲ್ಲಲೇ ಹಲ್ಕಟ್ಟ, ಇನ್ನು ಏನ್‍ಮಾಡಬೇಕಂತ್ ಮಾಡೀ.?. "ಈಗ ಹೋಗಿರೋ ಮಾನ ಸಾಕಾಗಿಲ್ಲನೂ".?. "ನಿ... ಇನ್ನೊಂದು ಮನಿಗೆ ಹೋದ ಹೊತ್ತಿನ್ಯಾಗ ನಿನ್ನ ಮಕ್ಳು..., ಆ ಮನಿಗೆ ಬಂದು ನಿನ್ನ ಮರ್ಯಾದಿ ಕಳ್ದು, ನಿನ್ನ ಹೊತ್ಗಂಡ ಮಂದ್ಯಾಗ್ ಮೆರವಣ್ಗಿ   ಮಾಡಿಕೊಂಡು ಬರ್ತಾರ ನೋಡು, ಅವಾಗ ಗೊತ್ತಾಕ್ಕೇತಿ ನಿನ್ಗ, ನಿ...ಮಾಡಿರೋ ಹಲಕಟ್ ಕೆಲ್ಸಾ ಎಂತಾದ್ದೂ ಅಂತ್"...

ಹಂಗೇಲ್ಲಾ ಮಾಡ್ಸಾಕ ಹೋಗಬ್ಯಾಡ್ರೀ ಕಾಕಾ....

ಹಂಗ್ಬಾ ದಾರಿಗೆ, ಅಲ್ಲಲೇ "ಒಬ್ಬಕಿ ಕಡ್ಗೊಂಡ್ ಸಂಸಾರ ನಿಬಾಯ್ಸಾಕ ಆಗವಲ್ದು".  ನಿಮ್ಮಂತವ್ರೂ  ಅದೇಂಗ್ ಎರ್ಡಡೆರ್ಡ್ ಸಂಸಾರ ನಿಬಾಯ್ಸಿತಿರೋ."?

"ಅದು ಒಂದ ಕಲೆರೀ.... ಕಾಕಾರ, ನಿಮ್ಮಂತವ್ರಿಗೆ ಗೊತ್ತಾಗಿದಿಲ್ಲ ಬಿಡ್ರೀ..!. ಇದ್ಕೆಲ್ಲಾ ದೊಡ್ಡ ದೊಡ್ಡೋರು ಕಾರ್ಣ ಆಗ್ಯಾರ!. "ಅವ್ರು ಹಾಕಿಕೊಟ್ಟ ನೀತಿ ಪಾಠ ಐತಿ. ಅದ್ನ ನೋಡಿ ದೊಡ್ಡೋರ ದೊಡ್ಡ, ದೊಡ್ಡ ಕೆಲ್ಸಾ ಮಾಡ್ಯಾರ್". "ನಾ ಯಾಕ ಮಾಡಬರ್ದು ಅಂತ್ ನಾನು ಮಣ್ಣೋ ತಿನ್ನೋ ಕೆಲ್ಸಾ ಮಾಡಾಕ ಹೋಗಿ ಸಿಕ್ಕಹಾಕ್ಕಾಂಡು ನಿಮ್ಮಂತವ್ರು ಕಡಿಂಡ ಚೀ..ತೂ..ಅನಿಸಿ ಕೊಳ್ಳಾಕ ಹತ್ತೇನಿ ನೋಡ್ರೀ"..

."ಅಲ್ಲಲೇ ದೊಡ್ಡೋರ ಹೆಂಗ್ಯೋ ನಿಬಾಯ್ಸತಾರಾ!, ಅವ್ರ ಹತ್ರಾ ಕಂಡಾ-ಬಟ್ಟೆ ರೊಕ್ಕ ಇರತೈತಿ, ನಿಂದನ್ಲೇ..? ಅದರ್ಲೀ ನಿನ್ನ ಪ್ರಕರ್ಣ ಹೆಂಗ್ಯ ಹೊರ್ಗ ಬಿತ್ತೋ"..?

ಅದ್...ನನ್ಗು ಗೊತ್ತಾಗವಲ್ದು ನೋಡ್ರೀ..! ನಮ್ಮ "ಮನ್ಯಾಗ ಪೋನ್‍ನ್ಯಾಗ್  ನಾ ಮಾತಾಡ ಹೊತ್ತಿನ್ಯಾಗ ನಮ್ಮ ಮನಿಯಾಕಿ ಹೆಂಗೋ ಕಳ್ಳಕಿವಿಲೇ ಕೇಳ್ಸಿಕೊಂಡು ಬಿಟ್ಟಾಳ್ರೀ.! ಅಕೀದ ಇದು ಗದ್ಲ"!. ಅದ್ಕ ಆಕಿ ನಾ ಬಚ್ಚಲಕ್ಕ, ಹಿತ್ಲಕಡಿಗೆ ಹೋದ ಹೊತ್ತಿನ್ಯಾಗ ನನ್ನ ಮೊಬೈಲ್ ಚೆಕ್ ಮಾಡತಿದ್ಲು.... ಈಗ ಗೊತ್ತಾಗಾಕ ಹತ್ತೇತಿ ಅದ್ರಾಗಿನ ಮರ್ಮಾ"!. ಅದ್ರಾಗ "ನಾ ಯಾರಿಗೆ ಕರೆ ಮಾಡೇನಿ, ಅಂತ್ ಚಕ್ ಮಾಡ್ಸಿ'..  "ಆ ನಂಬರ್ಗೆ ನನ್ನ ಸಣ್ಣ ಮಗ್ನಕಡಿಂದ ಪೋನ ಮಾಡ್ಸಿ, "ನಮ್ಮ ಅಪ್ಪಾ ಅದಾನೇನ್ರೀ.....ಪೋನು ಮನ್ಯಾಗ ಬಿಟ್ಟಹೋಗಾನ್ "ನನ್ನ ಪೋನ್ಗೂ ಕಳ್ಳಗೀವಿ ಬೆನ್ನ ಹತ್ಯಾವು ಅಂತ್" ಆದ್ರ ನಾ ಯಾವಾಗರ ಅವ್ಸ್ರದಾಗ ಮನ್ಯಾಗ ಪೋನು ಬಿಟ್ಟಿ ಹೋಗಿರತಿದ್ದೆ, ಆವಾಗೇನ ಮಕ್ಳು ಪೋನು ಹಚ್ಚಿರಬೋದು ಅಂತ್ ಸುಮ್ಕಿದ್ದೆ. ಅದ ನನ್ಗ ಮುಳ್ವಾಗಿಬಿಟ್ಟೇತಿ ನೋಡ್ರೀ....

ಅಂತು ನೀನು ಕಳ್ಳಕೀವಿಗೆ ಸಿಕ್ಕಹಾಕ್ಕೊಂಡಿ ಅನ್ನೊಂಹಂಗಾತು....?

"ಸಿಕ್ಕಹಾಕ್ಕೋಳದ್ದೇನ್ರೀ ಬಕಬಾರ್ಲೇ ಬಿದ್ದಂಗ್ ಆಗೇತಿ."..! ನಂದು ಬಿಡ್ರೀ. ನಂದೇನ್ ಮಾಹಾ! ಗಾಳಿಮಾತು, "ಈ ಹಿಂದಿನ ಸರ್ಕಾರದಾಗ ಪೋನ್ ಕದ್ದಾಲ್ಸಿದ್ರಂತಲ್ರೀ... ಅವ್ರದ್ ಹೇಳ್ರೀ"....?.

ನಿಂದಂತು ಆತು ಬಿಡೂ, "ಪೋನ ತಂತಿ ಕದ್ದಾಲ್ಸಿ ಹಿಂದ್ ಹೆಗ್ಡೆ ಅವ್ರು ಕೆಟ್ರು", "ಈಗ ಯಾರ್ಯಾರು ಸಿಕ್ಕಾಂತರೋ, ಹೊಕ್ಕಾಂತರೋ ಗೊತ್ತಿಲ್ಲ.... "ಈ ತಂತಿ ಅನ್ನೋದು ಐತೆಲ್ಲ ಇದು ಬಾಳ ಕೆಟ್ಟದ್ದು, ತಂತಿ ಕದ್ದಾಲ್ಸಿದ ಪ್ರಕರ್ಣಾನ ಯಡಿಯೂರ್ಸ್ ಸಿಬಿಐ ವಹಿಸ್ಸೇತಿ, "ಸಿಬಿಐನವರು ತಮ್ಮ "ಐ"ಗೆ ಎಣ್ಣಿಬಿಟಗೊಂಡ ತಂತಿಕದ್ದಾಲ್ಸಿದ್ವರು ಯಾರ್ಯಾರು...? "ತಂತೀನ ಹಂಗ್ ಮುಟ್ಟಿಹಿಂದ್ ಸರ್ದವ್ರು ಯಾರು?. ತಂತಿ ಮಾತಕೇಳ್ಸಿಗೊಂಡು ಹೊರ್ಗಿನ ತಂತೀ... ಒಳ್ಳೀನ ತಂತಿ.... ಗಟ್ಟಿಮಾಡಿಕೊಂಡರು ಯಾರು?. ತಂತಿ ಹರ್ಕೊಂಡವ್ರು ಯಾರು?, ಇದ್ರಾಗ ಹೋರಗಿನವ್ರು ಅದಾರೋ? ಬರಿ ಒಳ್ಗಿನವ್ರು ಅದಾರೋ? ಅನ್ನೋದನ್ನ ಪತ್ತೆ ಹಚ್ಚತಾರ"!. ಅಲ್ಲಿಮಟಾ ಅವ್ರನ್ ಇವ್ರು ಬೇಯತಾರ, ಇವ್ರ್ನ ಅವ್ರು ಬೇಯತಾರ. "ಒಟ್ಟಿನ್ಯಾಗ ತಂತಿ ಗದ್ಲದ ತಂತಿಮಾತಿನೊಳ್ಗ  ಪ್ರವಾಹದಿಂದ ಜನ್ರು ಬದ್ಕು ಅನ್ನೋದ ಹರ್ದೋದ ತಂತಿ ಹಂಗ್ ಆಗೇತಿ ನೋಡು.

ಅಂದಂಗ್ "ಈ ತಂತಿಮಾತು ಒಂದ್ಕಡೆ ಆದ್ರ ಈ ಕಂತಿ, ಕಂತಿ ರೊಕ್ಕದ ತನಿಖೆ ಮಾಡೋರು ಯಾರು ಇಲ್ಲನ್ರೀ"...?

"ಅದೇಲ್ಲಾ ಟಾಪ್ ಸಿಕ್ರೇಟ್! ಅದ್ನೆಲ್ಲಾ ಬಹಿರಂಗ ಪಡ್ಸಾಕ ಆಗೋದಿಲ್ಲ?. ಅದು ಕಂತಿ ಕಂತಿ ರೊಕ್ಕಾ ಎಣ್ಸಿಕೊಂಡೋರಿಗೆ ಗೊತ್ತು", ಎಣ್ಸಿಕೊಟ್ಟೋರಿಗೆ ಗೊತ್ತು. ಅದ್ನ ತನಿಖೆ ಮಾಡಾಕ ಯಾವ ಸಿಬಿಐ ಇಂದಲ್ಲಾ ಯಾವ"ಐ"ದಿಂದಾನು ಸಾಧ್ಯನ ಇಲ್ಲಾ?."

"ಹೋಗ್ಲಿ ಬಿಡ್ರೀ ಸಿದ್ದ್ರಾಮಣ್ಣ  ತಂತಿಮಾತು ತನಿಖೆ ಆಗ್ಲಿ ಅಂದ್ರಂತ್...? ಅದ್ಕ ಯಡೆಯೂರ್ ಸಿದ್ದ್ರಾಮಣ್ಣ ತಂತಿ ಮಾತು  ತನ್ಖಿ ಆಗ್ಲಿ ಅಂತ್ ಹೇಳಿ, ಈ ತಂತಿ ತನ್ಖಿ ಮಾಡಾಕ ಸಿಬಿಐಗೆ ಹೇಳೇನಿ ಅಂತ್ ಹೇಳ್ಕಿಕೊಟೈತಿ!".

ಇದ್ಕ ಸಿದ್ದ್ರಾಮಣ್ಣ ಏನಂತು..?

ಅದೇನ ಅಂತತೈತಿ.... "ಸಿಬಿಐ ತನಿಖೆಗೆ ಸ್ವಾಗತಾರ್ಹ, ನನ್ನ ಪೋನನ್ನು ಸಹ ಕದ್ದಾಲಿಸಲಾಗಿದೆ. ಈ ಬಗ್ಗೆಯು ಸಹ ತನಿಖೆಯಾಗಬೇಕು. ಯಾರೆ ತಪ್ಪು ಮಾಡಿದ್ರು ತಪ್ಪು ತಪ್ಪೇ ಅಂತ್ ಹೇಳಿಕೆ ನೀಡೈತಿ". ಆದ್ರ ದೊಡ್ಡಗೌಡ್ರ ಮಾತ್ರ "ತಂತಿಮಾತಿನ ಸಿಬಿಐ ತನಿಖೆ ಬಗ್ಗೆ ಕೇಳಿದ್ದಕ್ ಬಿಜೆಪಿಯವ್ರು ಎಂಎಲ್‍ಎಗಳನ್ನ ಹೊತಗಂಡ ಹೋಗ್ಯಾರಲ್ಲ ಅದು ತನಿಖೆ ಆಗ್ಲಿ ಅಂದ್ರ, ಈ ಗುಂಡುರಾವು, ಡಾ.ಪರಮೇಶ್ವರು, ಉಗ್ರಪ್ಪ ತನ್ಕಿಗೆ ಪಟ್ಟಹಿಡ್ದಾರ"...
ಕುಮಾರಣ್ಣ ಏನಂತು...?

"ಕುಮಾರಣ್ಣ ಸಿಬಿಐ ತನಿಖೆ ಬಾಳಾ ಕಮ್ಮಿದಾತು, ಇದ್ನ "ಅಮೇರಿಕಾದ ಟ್ರಂಪ್ಗ ಹೇಳಿ ಅಮೇರಿಕಾದ ತನಿಖಾ ಸಂಸ್ಥೆಯಿಂದ ತನಿಖೆ ಮಾಡ್ಸಬೇಕು" ಅಂದ್ರ, ತನಿಖೆ ಬರೋಬ್ಬರೀ ಆಗತೈತಿ. ಅದ್ಕ ಇದ್ನ ಟ್ರಂಪ್  ಕಡಿಂದ ತನಿಖೆ ಮಾಡ್ಸಿ ಅಂತ್ ಹೇಳಿ ನಕ್ಕ್ ಬಿಟೈತಿ"!. "ಈ ಅಶೋಕು, ನಮ್ಮ ಹಲ್ಲುಕಾಕಾ ಬಾಯಿಗೆ ಬಂದಂಗ್ ಹೇಳ್ಕಿಕೊಟ್ಟಾರ".

ಈ ಹಲ್ಲುಕಾಕಾ ಯಾರ್ಲೇಪಾ...?

ಏನ್ರೀ ನೀವು... "ಹಲ್ಲು ಕಾಕಾ ಅಂದ್ರ ನಿಮ್ಮನ್ನ ಅನ್ನಾಕ ಆಕೈತೇನ್ರೀ....! ಅದರೀ ಕೇಂದ್ರ ಮಂತ್ರಿ ಸದಾನಂದಗೌಡ್ರು, ಅವ್ವ್ರನ್ ಬಿಟ್ರ್ ಮತ್ಯಾರದಾರ್ರೀ ಹಲ್ಲುಕಾಕಾ"!. 

ಓಹೋ ನಮ್ಮ ಮಾ.ಮು.ನಾ

ಅವ್ರ ಯಾವಾಗ ನಿಮ್ಮ ಮಾ.ಮು ಆದ್ರೀ..?

ಲೇ ಲೇ "ಮಾ.ಮು. ಅಂದ್ರ ಮಾಜಿ ಮುಖ್ಯಮಂತ್ರಿ ಅಂತ್ ಅರ್ಥ. ತಿಳ್ಕಾ .ನಿ....ಏನೇನರ್ ಅರ್ಥಮಾಡ್ಕೋಬ್ಯಾಡ್".

ಆತು ಬಿಡ್ರೀ "ಒಟ್ಟಿನ್ಯಾಗ ನಿಮ್ಮ ಯಡೆಯೂರ್ಸು ಸಿಎಂ ಆಗಿ ಒಂದತಿಂಗ್ಳದಾಗ ತಂತಿಮಾತಗಳನ್ನ ಸಿಬಿಐ ತನಿಖೆಮಾಡ್ಸಾಕ ಹೊಂಟೈತಿ. ಅದ್ಕ ಒಳ್ಳೇದಾಗ್ಲಿ. 

"ಲೇ ಬಸ್ಯಾ ಎಲ್ಲಿಗೆ ಬಂತ್ಪಾ ಮಂತ್ರಿಮಂಡ್ಲಾ ರಚನಾ".?

ಅಂತು-ಇಂತು ಯಡೆಯೂರ್ಸ್ ಮಂತ್ರಿಮಂಡ್ಲಾ ವಿಸ್ತರಣೆ ಮಾಡೇತಿ, "ಕೆಲ್ವು ಜಿಲ್ಲಾದ ಇಬ್ರಿಗೆ ಮಂತ್ರಿ ಪಟ್ಟಾ ಸಿಕ್ಕರ, ಇನ್ನು ಕೆಲ್ವು ಜಿಲ್ಲಾಕ ಮಂತ್ರಿ ಪಟ್ಟ ಸಿಕ್ಕಿಲ್ಲಾ"!. "ಅದ್ರಾಗು ಯಡೆಯೂರ್ಸ ಎಡಗೈ-ಬಲಗೈ ಹಂಗ್ ಇದ್ದೋರ್ಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ....! "ಇದ್ರಾಗ ದಿಲ್ಲಿ ಹೈಕಮಾಂಡ್ ಇಂತಿಂತ್ವರ್ನ ಮಂತ್ರಿ ಮಾಡ್ರೀ ಅಂತ್ ಚೀಟಿ ಬರ್ದು ಲಕೋಟಿ ಒಳ್ಗ ಇಟ್ಟು ಯಡೆಯೂರ್ಸಗ ಕಳ್ಸಿದ್ರಿಂದಾ" "ದಿಲ್ಲಿಯವ್ರು ಹೇಳಿದವ್ರನ್ ಇವ್ರು ಮಂತ್ರಿ ಮಾಡಿ ಸದ್ಯಕ್ಕ ಕೈತೊಳ್ಕಂಡರಾ". ಮುಂದಿಂದು ಕಾದನೋಡಬೇಕು ನೋಡ್ರೀ.

ಅತು ಬಿಡಲೇಪಾ "ಹೆಂಗ್ಯರ ಆಗ್ಲಿ ಸಂಪುಟ ವಿಸ್ತರಣೆ ಆತಲ್ಲ!. 17 ಮಂದಿಗೆ ಗುಟದ ಕಾರು ಸಿಕ್ಕಾವಲ್ಲ" ಇನ್ನರ ಈ ಬಿಜೆಪಿ ಸರ್ಕಾರದವ್ರು ಜನ್ರ ಕಷ್ಟಕ್ಕ ಸ್ಪಂದಸಾಕ ಹೇಳಬೇಕು". "ಇವೇನಾದ್ರು ಅಡ್ಡಹಾದಿ ಹಿಡದ್ರ ಜನ ಇವ್ರಿಗೆ ಉದ್ದದಾರಿ ತೋರ್ಸತಾರ"!. 

ಅಲ್ರೀ ಈ "ಲಕ್ಷ್ಮಣ ರವದಿ, ಸಿಸಿ ಪಾಟೀಲರನ್ ಮಂತ್ರಿ ಮಡ್ಯಾರಲ್ಲ! ಇದು ಅಡ್ಡಹಾದಿ ಅಲ್ಲನೂ..?

ಅಲ್ಲೋ ಪಾಪಾ "ಲಕ್ಷ್ಮಣ ಸವದಿಗೆ ಯಾಕೋ ರವದಿ ಅಂತೀ"..? "ಸಿಸಿ ಪಾಟೀಲರ್ನ ಯಾಕ ಹೇಸಿ ಪಾಟೀಲ ಅಂತಿಯೋ"..?

ಅಲ್ರೀ ಕಾಕಾ "ಈ ಇಬ್ರು ಪುಣ್ಯಾತ್ಮರು ಈ ಹಿಂದೆ ಯಡೆಯೂರಪ್ಪನ ಗೌರ್ನಮೆಂಟಿನ್ಯಾಗ ವಿಧಾನಸೌಧದೊಳ್ಗ ಮೊಬೈಲ್ನಾಗ ಏನೇನ್ ನೋಡಿದ್ರು"... ಅನ್ನೋದನ್ನ "ಟವಿಯೋಳ್ಗ ಒಂದಂದನ್ನ ತೋರ್ಸಿ ಇವ್ರ ಮೈಮ್ಯಾಗಿನ ಬಟ್ಟಿ ಕಳ್ಚಿದ್ದನ್ನ ನೀವು ಮರ್ತರ ಬಹ್ಬು....ಆದ್ರ ನಮ್ಮ ಜನಾ ಇನ್ನು ಮರ್ತಿಲ್ಲಾ..! "ಇನ್ನ ಈ ಲಕ್ಷ್ಮಣ ಸವ್ದಿ ಶಾಸಕನು ಅಲ್ಲಾ ಎಂಎಲ್ಸಿನೂ ಅಲ್ಲ.. ಆದ್ರು ಮಂತ್ರಿ ಆಕ್ಯಾನ ಅಂದ್ರ ಏನದು ಇದರ ಹಿಂದಿನ ಅರ್ಥ?. ಹಿಂದ್ ಹಂಗ್ ಮಾಡ್ದವ್ರು ಮುಂದ್ ಹೆಂಗ್ಯೋ ಏನೋ"...?

ಲೇ... ಲೇ.... "ಶಾಸಕ, ಎಂಎಲ್‍ಸಿ ಆಗದಿದ್ರೂ ಮಂತ್ರಿ ಆಗಬಹ್ದು, ಆದ್ರ ಆರತಿಂಗಳೊಳ್ಗ ಮೇಲಿನಮನಿದರ ಆಗ್ಲಿ, ಕೆಳಗಿನಮನಿದರ ಆಗ್ಲಿ ಎರ್ಡಾರಾಗ ಒಂದ್ ಮನಿ ಸದಸ್ಯ ಆಗಾಕಬೇಕು". ಇದು ಕಾನೂನು. "ಸವ್ದಿ ನಿಮ್ಮ ಬಿಎಸ್‍ವೈಗೆ, ಬಿಜೆಪಿ ಹೈಕಮಾಂಡ್‍ಗೆ ಬೇಕಾಗಿರಬೇಕು! ಅದ್ಕ ಅವ್ನ ಮಂತ್ರಿ ಮಾಡ್ಯಾರ, ನಿಂಗ್ಯಾಕ ಉರಿ"....?

ಉರಿ ಅಲ್ಲ್ರೀ ಹೊಟ್ಟಿ ಉರಿತೈತಿ....!.  ಪಾಪಾ "ನಮ್ಮ ಹೊನ್ನಾಳಿ ಹೋರಿಕರಾ, ಬೆಳಗಾವಿ ಸಾವ್ಕಾರು, ಸುರುಪುರದ ರಾಜಾ!, ಒಬ್ರ-ಇಬ್ರ! ಎಲ್ಲಾರ್ಗೂ ಗೂಟದ ಕಾರ್ ಹತ್ತಬೇಕಂತ್ ಆಸೆ ಇರ್ತತೈತಿ!. ಪಾಪಾ ಅವರ್ನೆಲ್ಲಾ ಬಿಟ್ಟು ಸಂಪುಟಾ ರಚ್ನೆ ಮಾಡಿದ್ದು ನನ್ಗ ಸರಿ ಬರ್ಲಿಲ್ಲ"!.

"ಹೋಗ್ಲಿ ಬಿಡೋ ಈಗ ಎಲ್ಲಾನು ಮುಗ್ದಿಲ್ಲ..... ಇನ್ನು ಸಿನ್ಮಾ ಬಾಕಿ ಐತಿ....! ಮುಂದ ಅವ್ರಿಗೂ ಕಾಲ ಬರ್ತತೈತಿ.... ಈಗೇನಿದ್ರು ತಡ್ಕೋ ಯೋಜನೆಪಾ, ತಡ್ಕಾಬೇಕು"....! ಹಂಗ ನೀನು ತಡ್ಕಾಬೇಕು. "ಅಡ್ಡದಾರಿ ಹಿಡಿಬ್ಯಾಡ!, ನೆಟ್ಟಗ ನಿನ್ನ ಮನಿಗೆ ಹೋಗೂ , ಮತ್ತ ಅಪ್ಪಿತಪ್ಪಿ ಅಡ್ಡದಾರಿ ಹಿಡ್ದಿ ಅಂದ್ರ ನಿನ್ನ ಮಕ್ಕಳ ನಿನ್ಗ ಉದ್ದದಾರಿ ತೋರ್ಸತಾರ ನೋಡು" ಎನ್ನುತ್ತಾ ಇಬ್ರು ತಮ್ಮ ತಮ್ಮ ದಾರಿ ಹಿಡಿದರು.