ಜಮ್ಮು-ಕಾಶ್ಮೀರ: ಫೋನ್ -ಇಂಟರ್ ನೆಟ್ ಸೇವೆ ಆರಂಭ

ಜಮ್ಮು-ಕಾಶ್ಮೀರ: ಫೋನ್ -ಇಂಟರ್ ನೆಟ್ ಸೇವೆ ಆರಂಭ

ದೆಹಲಿ: ಜಮ್ಮು-ಕಾಶ್ಮೀರದಲ್ಲಿ 5 ದಿನಗಳಿಂದ ಫೋನ್, ಇಂಟರ್ ನೆಟ್ ಸೇವೆಗಳನ್ನು ರದ್ದುಗೊಳಿಸಿದ್ದು ಇಂದು ಬೆಳಗ್ಗೆಯಿಂದ ಸೇವೆಗಳನ್ನು ಭಾಗಶಃ ಪುನಃ ಆರಂಭಿಸಲಾಗಿದೆ. ಶುಕ್ರವಾರದ ‍ಪ್ರಾರ್ಥನೆಗೆ ಅನುಕೂಲವಾಗುವಂತೆ ನಿರ್ಬಂಧವನ್ನು ಸಡಿಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು- ಕಾಶ‍್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಲು ಕೇಂದ್ರ ಸರ್ಕಾರದ ಕ್ರಮಕ್ಕೆ ರಾಜ್ಯದಲ್ಲಿ ಯಾವುದೇ ತೊಂದರೆಯಾಗದಂತೆ ಇಂಟರ್ ನೆಟ್ ಸ್ಥಗಿತ ಮತ್ತು  ಸಾವಿರಾರು ಭದ್ರತಾ ಪಡೆಗಳನ್ನು ನೇಮಿಸಲಾಗಿತ್ತು.

ಶ‍್ರೀನಗರದ ಜುಮ್ಮಾ ಮಸೀದಿಯನ್ನು ಮುಚ್ಚಲಾಗಿದೆ.  ನಗರದ ಪ್ರಮುಖ ಮಸೀದಿಗಳಲ್ಲಿ ಪ್ರಾರ್ಥನೆ ಸಾಧ್ಯವಿಲ್ಲ ಎಂಬ ಮಾಹಿತಿ ನೀಡಲಾಗಿದೆ. ಸಣ್ಣ ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ‍ ನೀಡಲಾಗುವುದು.  ಯಾವುದೇ ತೊಂದರೆಗಳಿಲ್ಲದೆ ಪ್ರಾರ್ಥನೆ ನಡೆದರೆ ನಿರ್ಬಂಧಗಳನ್ನು ಮತ್ತಷ್ಟು ಕಡಿತಗೊಳಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆ ಮತ್ತು ರ್ಯಾಲಿಗಳನ್ನು ತಪ್ಪಿಸಲು ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ಒಮರ್ ಅಬ್ದುಲ್ಲ ಸೇರಿದಂತೆ  500 ಕ್ಕೂ ಅಧಿಕ ನಾಯಕರನ್ನು ಗೃಹಬಂಧನದಲ್ಲಿರಿಸಲಾಗಿದೆ. ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಪರಿಸ್ಥಿತಿ ಅವಲೋಕಿಸಿದ್ದು, ಶುಕ್ರವಾರದ ಪ್ರಾರ್ಥನೆ ಮತ್ತು ಈದ್  ಹಬ್ಬಕ್ಕೆ ನಿರ್ಬಂಧಗಳನ್ನು ಸಡಿಲಗೊಳಿಸುವುದಾಗಿ ಭರವಸೆ ನೀಡಿದ್ದಾರೆ.

ಗುರುವಾರ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಈದ್ ಹಬ್ಬದಂದು ಯಾವುದೇ ತೊಂದರೆ ಉಂಟಾಗದಂತೆ ಕೇಂದ್ರ ಖಚಿತ ಪಡಿಸುತ್ತದೆ ಎಂದು ಹೇಳಿದ್ದರು.