ರೋಗಿಗಳನ್ನು ಭೇಟಿ ಮಾಡುವಾಗ...

ರೋಗಿಗಳನ್ನು ಭೇಟಿ ಮಾಡುವಾಗ...

ನಮಗೆಲ್ಲ ಒಂದಲ್ಲ ಒಂದು ಸಲ ರೋಗಿಗಳನ್ನು ಭೇಟಿ ಮಾಡಬೇಕಾಗುತ್ತದೆ. ಕಾಯಿಲೆಯಿಂದ ನರಳುತ್ತಿರುವ ನಮ್ಮ ಸಂಬಂಧಿಕರಿಗೋ ನಿಕಟವರ್ತಿಗಳಿಗೋ ಸಾಂತ್ವನ ನೀಡಿ, ಉತ್ತೇಜನ ಕೊಡುವುದೇ ಎಲ್ಲಾ ಸಜ್ಜನರ ಸದುದ್ದೇಶ. ಆದರೆ, ನಮ್ಮ ಸಮಾಜದಲ್ಲಿ ಈ ಬಗ್ಗೆ ತಿಳಿವಳಿಕೆ ಮತ್ತು ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬ ಅರಿವು ಇರುವಂತೆ ಕಾಣಬರುವುದಿಲ್ಲ. ಈ ಮುಖ್ಯ ವಿಷಯದ ಬಗ್ಗೆ ವಿಷದೀಕರಿಸುವದೇ ಈ ಲೇಖನದ ಉದ್ದೇಶ.

ಆಸ್ಪತ್ರೆ ಅಥವಾ ನರ್ಸಿಂಗ್ ಹೋಂ ನಲ್ಲಿ ದಾಖಲಾಗಿರುವ ರೋಗಿಗಳಿಗೆ ಆತಂಕ ಸಹಜ. ಚಿಕಿತ್ಸೆ ಹಾಗೂ ಪರೀಕ್ಷಾ ವಿಧಾನಗಳು ನಡೆಯುತ್ತಿರುವಾಗ ರೋಗಿಗೆ ವಿಶ್ರಾಂತಿಯ ಅವಶ್ಯಕತೆ ಬಹು ಪ್ರಧಾನ. ಇದರಿಂದಲೇ ಭೇಟಿಯ ವೇಳೆ ನಿಗದಿತವಾಗಿರುವುದು. ತುರ್ತು ಚಿಕಿತ್ಸಾ ವಿಭಾಗದಲ್ಲಂತೂ ಇದು ಬಹು ನಿಷ್ಠೆಯಿಂದ ಪಾಲಿಸ ಬೇಕಾದ ನಿಯಮ. ನಮ್ಮ ಆತಂಕದಿಂದಾಗಿ ಗಂಟೆ ಗಂಟೆಗೂ ರೋಗಿಗಳನ್ನು ನೋಡ ಬಯಸಿ ನರ್ಸುಗಳು ಹಾಗೂ ವೈದ್ಯರ ಸಹನೆಯನ್ನು ಪರೀಕ್ಷೆ ಮಾಡುವುದು ತರವಲ್ಲ. ಇನ್ನೊಂದು ಮುಖ್ಯ ವಿಷಯವೆಂದರೆ ಯಾವುದೇ ಸಂಸಾರದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದರೆ, ಅವನ ಬಗ್ಗೆ ಮಾಹಿತಿ ಪಡೆಯಲು ಹಲವಾರು ಜನ ಬರುವುದರ ಔಚಿತ್ಯ, ದಿನಕ್ಕೆ ನಾಲ್ಕು, ಐದು ಜನ ಬಂದು, ವೈದ್ಯರ ಸಮಯವನ್ನು ಹಾಳು ಮಾಡುವುದರ ಬದಲು, ಒಬ್ಬರು ಅಥವಾ ಇಬ್ಬರು ಹಿರಿಯರನ್ನು ಪ್ರತಿನಿಧಿಯಾಗಿ ಇರುವಂತೆ, ಹಾಗೂ ಅವರು ನಿಗಧಿತ ವೇಳೆಯಲ್ಲಿ ವೈದ್ಯರನ್ನು ಭೇಟಿ ಮಾಡುವಂತೆ ಮಾಡುವುದು ಅತ್ಯವಶ್ಯಕ, ರೋಗಿಗಳ ನಿಕಟ ಸಂಬಂಧಿಗಳು ಮಾತ್ರ ವೈದ್ಯರೊಡನೆ ಸಮಾಲೋಚನೆ ಮಾಡಬೇಕು. ಸ್ನೇಹಿತರು, ಸಹೋದ್ಯೋಗಿಗಳು, ಮತ್ತಿತರ ವ್ಯಕ್ತಿಗಳೆಲ್ಲ ಬಂದು ಆಸ್ಪತ್ರೆಯಲ್ಲೇ ಬಹುಕಾಲ ವ್ಯಯಮಾಡುವುದು ಅಗತ್ಯವಲ್ಲ.

ಯಾವುದೇ ರೋಗಿಯನ್ನು ಸಾಂತ್ವನಗೊಳಿಸಲು ಅವನೊಡನೆ ಬಹುಕಾಲ ಕಳೆಯಬೇಕಾಗಿಲ್ಲ. ನಮ್ಮ ಸಮಾಜದಲ್ಲಂತೂ, ರೋಗ ವೈಯಕ್ತಿಕ ಸಂಗತಿ ಅಲ್ಲದೇ, ಹಲವಾರು ಜನ ಚರ್ಚಿಸುವ, ವ್ಯಾಖ್ಯಾನ ಮಾಡುವ ಸನ್ನಿವೇಶ ಸಾಮಾನ್ಯ.`ನಿಮಗೇಕೆ ಈ ಕಾಯಿಲೆ ಬಂತು ? ಹೇಗೆ ಶುರುವಾಯಿತು, ಮೊದಲೇ ವೈದ್ಯರಿಗೆ ತೋರಿಸಲಿಲ್ಲವೆ? “-ಇತ್ಯಾದಿ ರೋಗಿಗೆ ಕಿರಿಕಿರಿ ಮಾಡುವಂತೆ ಪ್ರಶ್ನಾವಳಿಯನ್ನು ಆರಂಭಿಸುವುದು ಅಸಮಂಜಸ. ರೋಗಿಗಳಿಗೆ ನಿದ್ರೆ ಹಾಗೂ ವಿಶ್ರಾಂತಿಯ ಅಗತ್ಯವನ್ನು ಅರಿತು, ಭೇಟಿಯ ಕಾಲವನ್ನು ಮೊಟಕುಗೊಳಿಸುವುದು ಬಹುಸೂಕ್ತ. ``ನಿಮ್ಮ ಅನಾರೋಗ್ಯದ ಬಗ್ಗೆ ತಿಳಿದು ಬೇಸರವಾಯಿತು; ಒಳ್ಳೆಯ ವೈದ್ಯರು ಹಾಗೂ ಆಸ್ಪತ್ರೆಯ ಚಿಕಿತ್ಸೆಯಿಂದ ಬೇಗ ಗುಣಮುಖರಾಗಿ! ನಮ್ಮೆಲ್ಲರ ಶುಭಾಶಯ ಮತ್ತು ಭಗವಂತನ ಕೃಪೆಯಿಂದ ಎಲ್ಲ ಸರಿಹೋಗುತ್ತದೆ. ನಮ್ಮಿಂದ ಏನಾದರೂ ಸಹಾಯ ಬೇಕಿದ್ದರೆ, ಕೇಳಲು ಹಿಂಜರಿಯಬೇಡಿ’’ ಎಂದಷ್ಟು ಹೇಳಿ ಉತ್ತೇಜನ ನೀಡುವುದು ಸಜ್ಜನಿಕೆ ಹಾಗೂ ಸಾಂತ್ವನ ನೀಡುವ ರೀತಿ. ಇದು ಜನ ಸಾಮಾನ್ಯರಿಗೆ ಮನದಟ್ಟಾಗುವುದು ಮುಖ್ಯ.

ರೋಗಿಯ ಕಾಯಿಲೆಯ ಬಗ್ಗೆ ತಿಳಿದಾಗ, ಯಾವ ಆಸ್ಪತ್ರೆಗೆ ಹೋಗಬೇಕು, ಯಾವ ವೈದ್ಯಕೀಯ ತಜ್ಞರು ಸೂಕ್ತ ಎಂಬ ನಿರ್ಧಾರಗಳ್ನು ರೋಗಿ ಹಾಗೂ ಅವನ ಆಪ್ತರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಸಂದರ್ಭಗಳಲ್ಲಿ, ``ಇತರರು’’ ರೋಗಿಯ ಪರವಾಗಿ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಅಥವಾ ಆರ್ಥಿಕವಾಗಿ ಸಹಾಯ ಕೊಡಲು ಹಿಂಜರಿಯುತ್ತಾರೆ. ಒಂದು ಆಸ್ಪತ್ರೆಯಿಂದ ಬೇರೆ ಕೇಂದ್ರಕ್ಕೆ ಕೆಲವು ವೇಳೆ ರೋಗಿಗಳನ್ನು ಚಿಕಿತ್ಸೆಗಾಗಿ ಕಳಿಸಬೇಕಾಗುತ್ತದೆ. ಈ ಸನ್ನಿವೇಶಗಳಲ್ಲೂ, ರೋಗಿ ಹಾಗೂ ಆತನ ನಿಕಟ ಸಂಬಂಧಿಗಳು ಮಾತ್ರ ನಿರ್ಧಾರ ಮಾಡುವುದರಿಂದ ವೈದ್ಯರೂ ವಿಳಂಬ ಇಲ್ಲದೆ ಕಾರ್ಯಗತರಾಗಲು ಸಾಧ್ಯವಾಗುತ್ತದೆ.

ಆಧುನಿಕ ವೈದ್ಯ ವಿಜ್ಞಾನದಲ್ಲಿ ಆಗುತ್ತಿರುವ ಬೆಳವಣಿಗೆಗಳಿಂದ, ವಿಶೇಷ ವಿಭಾಗಗಳು ಮತ್ತು ತಜ್ಞರು ಲಭ್ಯ. ಆದರೆ ಇರುವ  ಸಂಧರ್ಭದಲ್ಲಿ ರೋಗಿಗೆ ಸಾಂತ್ವನ ನೀಡಿ, ವೈದ್ಯರ ಕಾರ್ಯವನ್ನು ಸುಲಭಗೊಳಿಸುವುದೇ ಎಲ್ಲ ನಾಗರಿಕರ ಕರ್ತವ್ಯ.