ಸಹನೆ, ಅಗ್ನಿ ಪರೀಕ್ಷೆ ಮತ್ತು ಯಡಿಯೂರಪ್ಪ

ಕೇಂದ್ರದ ನೆರವಿಲ್ಲದೆ ಜಲಪ್ರಳಯ ಸಂತ್ರಸ್ತರಿಗೆ ಬದುಕು ಕಟ್ಟಿಕೊಡುವ ಹೊಣೆಗಾರಿಕೆಯ ಜೊತೆಗೆ ಅನೇಕ ಸಂಕಷ್ಟಗಳು ರಾಜಾ ಹುಲಿಯ ಮುಂದಿನ ಮೂರು ವರ್ಷದ ಹುಲಿ ಸವಾರಿ ಪರ್ಯಾಯ ರಾಜಕೀಯಕ್ಕೆ ನಾಂದಿ ಹಾಡಬಹುದು.

ಸಹನೆ, ಅಗ್ನಿ ಪರೀಕ್ಷೆ ಮತ್ತು ಯಡಿಯೂರಪ್ಪ

ಕರ್ನಾಟಕ ಮೌನವಾಗಿ ಯಡಿಯೂರಪ್ಪ ಅವರ ಗೆಲುವನ್ನು ಹರ್ಷಿಸುತ್ತದೆ. ಬಿಜೆಪಿ ಹಿಂದುತ್ವ ಮತ್ತು ಕೇಂದ್ರ ಸರ್ಕಾರದ ಆರ್ಥಿಕ ಹಿಂಜರಿತ ಲೆಕ್ಕಿಸದೇ ಪಕ್ಷ ರಾಜಕಾರಣ ಕೈ ಬಿಟ್ಟು ವ್ಯಕ್ತಿ ರಾಜಕಾರಣಕ್ಕೆ ಮಣೆ ಹಾಕಲು ಯಡಿಯೂರಪ್ಪನವರ ವೈಯಕ್ತಿಕ ವರ್ಚಸ್ಸು ಮತ್ತು ಸಾತ್ವಿಕ ಹಟವೇ ಕಾರಣ. ‌

ಹೊಸ ಸರಕಾರ ಸುಭದ್ರ ಅನಿಸುವ ನಿರಾಳ ವಾತಾವರಣವನ್ನು ಮತದಾರ ಕಲ್ಪಿಸಿಕೊಟ್ಟಿದ್ದಾನೆ. ಗೆದ್ದದ್ದು ಹೈಕಮಾಂಡ್ ಮಾಡಿದ ಅವಮಾನದ ವಿರುದ್ಧ. ಆಪರೇಶನ್ ಕಮಲಕ್ಕೆ ಒಪ್ಪದೆ, ಹೊಸ ಸರಕಾರ ಮಾಡಲು ನಿರುತ್ಸಾಹ ತೋರಿ ಲೋಕಸಭಾ ಚುನಾವಣೆ ನಂತರ ಜಲಪ್ರಳಯಕ್ಕೂ ನೆರವು ನೀಡದ ದೆಹಲಿ ಜೋಡೆತ್ತುಗಳು ಯಡಿಯೂರಪ್ಪ ಅವರನ್ನು ನಿರಂತರ ಅವಮಾನಿಸಿದ್ದನ್ನು ಮತದಾರ ಮರೆಯಲಿಲ್ಲ.

ಕೇಂದ್ರ ಸರ್ಕಾರದ ಯಾವುದೇ ನಾಯಕರು ರಾಜ್ಯದ ಕಡೆ ಮುಖ ಮಾಡುವ ನೈತಿಕ ತಾಕತ್ತು ಇರಲಿಲ್ಲ. ರಾಷ್ಟ್ರೀಯ ನಾಯಕರ ನೆರವಿಲ್ಲದೆ ಒಂಟಿ ಹೋರಾಟದ ಗೆಲುವು ಇದಾಗಿದೆ.

ಜಾತಿ ಸಮೀಕರಣ ಮೀರಿದ ಸೈದ್ಧಾಂತಿಕ ನೆಪದ ಶೂದ್ರ ವಿರೋಧಿ ಹಿಂದುತ್ವವನ್ನು ಮಹಾರಾಷ್ಟ್ರ ಮತದಾರ ಒಪ್ಪಲಿಲ್ಲ. ರಾತ್ರೋ ರಾತ್ರಿ ಮಹಾರಾಷ್ಟ್ರ ಆಪರೇಶನ್ ಕಮಲಕ್ಕೆ ಒಪ್ಪಿದ್ದ ಕೇಂದ್ರ ಸರಕಾರ ಕರ್ನಾಟಕದ ಆಪರೇಶನ್ ವಿರೋಧಿಸಿದ್ದು ವಿಪರ್ಯಾಸ.

ಆದರೆ ಸುದೀರ್ಘ ರಾಜಕೀಯ ಅನುಭವ ಮತ್ತು ಆರ್.ಎಸ್.ಎಸ್. ಒಳಮರ್ಮ‌ ಅರಿತಿದ್ದ ಯಡಿಯೂರಪ್ಪ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ತಾವೇ ಮಾಡಿದ್ದ ಆಪರೇಶನ್ ಯಶಸ್ವಿಗೊಳಿಸಲು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು.

ಇತರ ಪಕ್ಷಗಳಿಂದ ಬಂದ ವಲಸಿಗರಿಗೆ ಯಡಿಯೂರಪ್ಪ ಮಾತಿಗೆ ತಪ್ಪುವುದಿಲ್ಲ ಎಂಬ ವಿಶ್ವಾಸ ಮೂಡಿಸಲು ಯಶಸ್ವಿಯಾದರು. ಯಾರೋ ದುರ್ಬಲ ವ್ಯಕ್ತಿಯ ಮಾತು ನಂಬಿ ರಾಜ್ಯದ ಮುಖ್ಯಮಂತ್ರಿಯನ್ನು ಅವಮಾನಿಸಿದ ಕೇಂದ್ರ ನಾಯಕರಿಗೆ ಮಹಾರಾಷ್ಟ್ರ ರಾಜಕಾರಣ ಪಾಠ ಕಲಿಸಿದೆ.

ನೈತಿಕ ಪಾಠ ಹೇಳುವ ನೈತಿಕತೆ ಕಳೆದುಕೊಂಡ ಹೈ ಕಮಾಂಡ್ ಇನ್ನಾದರೂ ಮೌನವಾಗಿ ಯಡಿಯೂರಪ್ಪ ಅವರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು.ಈಗ ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳಿಗೆ ಬೆಲೆ ಇಲ್ಲ, ಕೇವಲ ಚುನಾವಣಾ ರಾಜಕಾರಣದಲ್ಲಿ ಗೆದ್ದು ಜನಪರ ಕೆಲಸ ಮಾಡಬೇಕೆಂದು ಮತದಾರ ಬಯಸುತ್ತಾನೆ.

ಈಗ ಇದೊಂದು ರೀತಿಯಲ್ಲಿ ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರಕಾರ ಇದ್ದಂತೆ, ಗೆದ್ದವರು ಅನರ್ಹರೆನಿಸಿಕೊಂಡರೂ ಯಡಿಯೂರಪ್ಪ ಅವರ ಮಾತು ನಂಬಿ ಅರ್ಹರಾಗಿರುವುದು ರಾಜಕೀಯ ವ್ಯಂಗ್ಯ. ವಲಸಿಗರೆಲ್ಲ ಈಗ ಮಂತ್ರಿಗಳಾಗುವ ಯೋಗ, ಮೂಲ ಬಿಜೆಪಿ ಶಾಸಕರು ಅನಿವಾರ್ಯ ಎಂಬಂತೆ ಮೌನವಾಗಿರಲೇಬೇಕು.

ಯಡಿಯೂರಪ್ಪ ತಮಗೆ‌  ಆದ ವಿಪರೀತ ಅವಮಾನಗಳಿಂದ ದೊಡ್ಡ ಪಾಠ ಕಲಿತಿದ್ದಾರೆ. ತಮ್ಮದೇ ಪಕ್ಷದ ಕೆಲವು ಅನಾರೋಗ್ಯ ಮನಸುಗಳ ಕಿರುಕುಳಕ್ಕೆ ಅವರ ದಿವ್ಯ ಮೌನವೇ ಉತ್ತರ. ತೀವ್ರ ಆರೋಪಕ್ಕೆ ಗುರಿಯಾಗಿದ್ದ ಶೋಭಾ ಅವರನ್ನು ಅಧಿಕಾರದಿಂದ ದೂರ ಸರಿಸಿದ್ದಾರೆ.

ಆಂತರಿಕ ಕಳ್ಳಾಟ ಆಡಲು ಬಯಸಿದ್ದ ಕೆಲವು ಮಂತ್ರಿಗಳನ್ನು ಸರಿ ದಾರಿಗೆ ಎಳೆದು ತಂದು ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ನೋಡಲಿಕ್ಕೆ ಇದೊಂದು ಟೀಮ್ ವರ್ಕ್ ಆದರೆ ಆಟ ಆಡಿದ್ದು ಮಾತ್ರ ಯಡಿಯೂರಪ್ಪ.

ಯಡಿಯೂರಪ್ಪ ಈಗ ಕೇವಲ ಲಿಂಗಾಯತ ನಾಯಕ ಅನಿಸಿಕೊಳ್ಳದೇ ಜನ ನಾಯಕನಾಗಲು ಅವರ ಸಹನೆಯೇ ಶ್ರೀರಕ್ಷೆ. ಈಗ ದೇಶದಲ್ಲಿ ಶೂದ್ರ ಹಿಂದುತ್ವದ ಚಿಂತನೆ ಆರಂಭವಾದ ಪ್ರತಿಫಲವೇ ಶಿವಸೇನೆ ಅಧಿಕಾರ ಹಿಡಿಯಲು ಕಾರಣವಾಗಿದೆ. ಕರ್ನಾಟಕದ ಯಡಿಯೂರಪ್ಪ ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಮತ್ತು ಆಪರೇಶನ್ ಮೂಲಕ ಅಧಿಕಾರ ಗಿಟ್ಟಿಸಿಕೊಂಡ ಆಪರೇಶನ್ ಕಮಲದ ಆದ್ಯರೂ ಆಗಿದ್ದಾರೆ.

ಹಿಂದಿನ ಸಮ್ಮಿಶ್ರ ಸರಕಾರದ ಕುಟುಂಬ ಮತ್ತು ಜಗಳದ ಆಡಳಿತ ಬೇಡವಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಆಪರೇಶನ್ ಯಶಸ್ವಿಯಾಗಲು ಮತದಾರ ನೆರವಾಗಿದ್ದಾನೆ. ಹಣ, ಹೆಂಡ ಮತ್ತು ಸಿದ್ಧಾಂತದ ಆಚೆಗಿನ ಗೆಲುವಿನ ಹೊಸ ವ್ಯಾಖ್ಯಾನವಿದು.

ಹಾಗಂತ ಎಲ್ಲ ಸಾಂಗವಾಗಿ ಸಾಗುತ್ತದೆ ಎಂದು ಅರ್ಥವಲ್ಲ‌‌. ಸರಕಾರ ರಚಿಸಲು ಕಾರಣರಾದ ಅರ್ಹರು ಪ್ರಮುಖ ಖಾತೆಗಳಿಗೆ ತಕರಾರು ತೆಗೆಯಬಹುದು, ಪಕ್ಷದಲ್ಲಿ ಇರುವ ಯಡಿಯೂರಪ್ಪ ವಿರೋಧಿ ಬಣ ಹೈಕಮಾಂಡ್ ನೆರವಿನ ಮೂಲಕ ಕಾಲೆಳೆಯುವ ಕಾರ್ಯ ನಿಲ್ಲಿಸದೇ ಇರಬಹುದು.

ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಇದ್ದರೂ ನಿರಂತರ ಬೇಗುದಿಯಂತು‌ ತಪ್ಪಿದ್ದಲ್ಲ.ಕುಟುಂಬ ರಾಜಕಾರಣ ಪಕ್ಷದ ಶಾಸಕರ ಬಹು ದೊಡ್ಡ ತಂಡ ಯಡಿಯೂರಪ್ಪ ಅವರ ಕಡೆ ಮುಖ ಮಾಡಿ ನಿಂತಿರುವುದು ಹೊಸ ಸವಾಲಾಗುತ್ತದೆ. ಹೊಸ ಆಪರೇಶನ್ ತಂಟೆಗೆ ಹೋಗದೇ ಪಕ್ಷಕ್ಕೆ ಬರುವ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಉಂಟಾಗಬಹುದು.

ಯಡಿಯೂರಪ್ಪನವರ ವಯಸ್ಸಿನ ನೆಪ ಇಟ್ಟುಕೊಂಡು ಸರಕಾರ ಅಲುಗಾಡಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆಗ ಉಪಯೋಗಕ್ಕೆ ಬರಲಿ ಎಂಬ ಕಾರಣದಿಂದ ಶಾಸಕರ ಪಕ್ಷಾಂತರ ಪರ್ವ ಮುಂದುವರೆಯುತ್ತದೆ.

ದೇವೇಗೌಡರ‌ ಮಾತು ನಂಬಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಹಿನ್ನಡೆ ಅನುಭವಿಸಿರುವುದು ಕಾಂಗ್ರೆಸ್ ಶಾಸಕರ ಆತ್ಮವಿಶ್ವಾಸ ಕುಗ್ಗಿಸಿದೆ. ದೇವೇಗೌಡರ ಪರಿವಾರದ ಬೆನ್ನು ಕಟ್ಟಿದ ಕನಕಪುರ ಬಂಡೆ ಅಲುಗಾಡುತ್ತಲಿದೆ.

ಮೂಲ ಕಾಂಗ್ರೆಸ್ಸಿಗರ ಅಸಮಾಧಾನ ಸಿದ್ದರಾಮಯ್ಯನವರ ಬಲಿ ತೆಗೆದುಕೊಂಡಿದೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯ ಎಂಬುದನ್ನು ಮೂಲದವರು‌ ಒಪ್ಪಿಕೊಳ್ಳುತ್ತಿಲ್ಲ. ಪರ್ಯಾಯ ನಾಯಕತ್ವದ ಕೊರತೆ ನೀಗಿಸುವ ಸಾಮರ್ಥ್ಯವನ್ನು ಪಕ್ಷ ಕಳೆದುಕೊಂಡಿದೆ.

ಮೇಲಿನ ಎಲ್ಲ ನಕಾರಾತ್ಮಕ ಸಂಗತಿಗಳು ಕೂಡ ಯಡಿಯೂರಪ್ಪನವರ ಜವಾಬ್ದಾರಿ ಹೆಚ್ಚಿಸಿವೆ. ಬಿಜೆಪಿಯ ಎರಡನೇ ಸಾಲಿನ ನಾಯಕರಿಗೆ ಯಡಿಯೂರಪ್ಪ ಅವರಿಗೆ ಇರುವ ಸಾಮರ್ಥ್ಯ ಮತ್ತು ಸಾಮೂಹಿಕ ನಾಯಕತ್ವದ ಲಕ್ಷಣಗಳಿಲ್ಲದಿರುವುದು ರಾಜ್ಯ ರಾಜಕಾರಣದ ದುರಂತ.