ಸಂಸತ್ ಕಲಾಪ ಇನ್ನಾದರೂ ಹಳಿ ತಪ್ಪದಿರಲಿ

ಸಂಸತ್ ಕಲಾಪ ಇನ್ನಾದರೂ ಹಳಿ ತಪ್ಪದಿರಲಿ


ಸಿಪಿಐನ ಇಂದ್ರಜಿತ್ ಗುಪ್ತ ಮತ್ತು ಸಿಪಿಎಂ ನ ಸೋಮನಾಥ ಚಟರ್ಜಿ ಅವರಂತಹ ತಿಳಿದಂತಹವರು ಮಾತನಾಡಿದರೆ ಇಡೀ ಸದನ ತದೇಕಚಿತ್ತದಿಂದ ಆಲಿಸುತ್ತಿತ್ತು. ಅಂತಹ ಪ್ರಬುದ್ಧ ಸದಸ್ಯರನ್ನು ಹೊಂದಿರುತ್ತಿದ್ದ ಸಿಪಿಎಂ ಇಂದು ಪಶ್ಚಿಮ ಬಂಗಾಳದಿಂದ ಒಬ್ಬರೂ ಗೆದ್ದು ಬಂದಿಲ್ಲ ಎಂದರೆ ಸಂಸದೀಯ ಕಲಾಪದ ಬಗೆಗೆ ಗೌರವ ಹೊಂದಿರುವವರಿಗೆ ನೋವಾಗುತ್ತದೆ ಎನ್ನುತ್ತಾರೆ ಶಿವಾಜಿ ಗಣೇಶನ್.


ಚುನಾವಣೆ ನಡೆದು ಈಗ ಹದಿನೇಳನೇ ಲೋಕಸಭೆ ಅಸ್ತಿತ್ವಕ್ಕೆ ಬಂದಿದೆ. ನರೇಂದ್ರ ದಾಮೋದರ ದಾಸ್ ಮೋದಿ ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷವು ಕಳೆದ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 303 ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಎರಡನೇ ಬಾರಿಗೆ ಪಕ್ಷವನ್ನು ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ತಂದ ಮೋದಿ ಮತ್ತು ಬಿಜೆಪಿ ನಾಯಕರೇ ಫಲಿತಾಂಶದ ಬಗೆಗೆ ಅಚ್ಚರಿಗೊಂಡಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗಳಿಸಿತ್ತು. ಈ ಸಲ ಕಳೆದ ಚುನಾವಣೆಗಿಂತ 21 ಹೆಚ್ಚು ಸ್ಥಾನಗಳನ್ನು ಗೆದ್ದು  ಬಿಜೆಪಿ ಸ್ಪಷ್ಟ ಬಹುಮತ ಗಳಿಸಿದೆ. 
2004 ಮತ್ತು 2009ರಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು 2014ರಲ್ಲಿ ಕೇವಲ 44 ಸ್ಥಾನಗಳನ್ನು ಪಡೆದು ಶೋಚನೀಯವಾಗಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನವೂ ಇಲ್ಲದೆ ಅವಮಾನ ಅನುಭವಿಸುವಂತಾಯಿತು. ಅದೇ ಸ್ಥಿತಿ ಈಗಲೂ ಆಗಿದೆ. ಕಳೆದ ಬಾರಿಗಿಂತ ಈ ಸಲ ಎಂಟು ಹೆಚ್ಚು ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ತೃಪ್ತಿಕಂಡುಕೊಂಡಿದೆ. ಐವತ್ತೆರಡು ಸ್ಥಾನ ಗಳಿಸಿದ್ದರೂ ಈಗಲೂ ಕಾಂಗ್ರೆಸ್ಸಿಗೆ ಅಧಿಕೃತ ವಿರೋಧ ಪಕ್ಷದ ಮಾನ್ಯತೆ ಇಲ್ಲದಿರುವುದು ಆ ಪಕ್ಷ ಅಧೋಗತಿಗೆ ಜಾರುತ್ತಿರುವ ಸೂಚನೆಯೇ ಎಂದು ಗಂಭೀರವಾಗಿ ಯೋಚಿಸುವ ಕಾಲ ಬಂದಿದೆ.


ದೇಶದ ಜನರು ಪ್ರಧಾನಿ ಮೋದಿ ಅವರ ಆಡಳಿತ ಮತ್ತು ನಾಯಕತ್ವವನ್ನು ಮೆಚ್ಚಿರುವುದನ್ನು 2019ರ ಲೋಕಸಭೆ ಚುನಾವಣೆಯಿಂದ ಅರ್ಥವಾಗುತ್ತದೆ. ಕಳೆದ ಬಾರಿ 282 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿಗಿಂತ 21 ಹೆಚ್ಚು ಸ್ಥಾನಗಳನ್ನು ಗಳಿಸಿ ತನ್ನ ಪಾರಮ್ಯವನ್ನು ಮೆರೆದಿದೆ.
ಮೋದಿ ಅವರು 2014ರಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು (ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ)ದ ಸಂಸದೀಯ ನಾಯಕನ ಆಯ್ಕೆಗಾಗಿ ಸಂಸತ್ ಭವನವನ್ನು ಪ್ರವೇಶಿಸುವಾಗ ಮುಖ್ಯದ್ವಾರದ ಮೆಟ್ಟಿಲುಗಳಿಗೆ ಮೈಬಗ್ಗಿ ನಮಸ್ಕರಿಸಿದ್ದರು. ಈ ಬಾರಿ ಅವರು ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದ ಸಂಸದೀಯ ನಾಯಕನ ಆಯ್ಕೆಯ ಸಮಾರಂಭದಲ್ಲಿ ಸಂವಿಧಾನದ ಕೃತಿಗೆ ನಮಸ್ಕರಿಸಿ ಅಚ್ಚರಿ ಮೂಡಿಸಿದ್ದಾರೆ.

 

ಚುನಾವಣೆಗೆ ಮುನ್ನಾ ದಿನಗಳಲ್ಲಿ “ಸಂವಿಧಾನ ಬದಲಿಸಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು” ಎಂದು ಸಚಿವರೊಬ್ಬರು ಹೇಳಿದರೆ, “ಸಂವಿಧಾನ ಬದಲಿಸುವ ಉದ್ದೇಶ ನಮ್ಮದು, ಈ ಸಂವಿಧಾನಕ್ಕೆ ಭಾರತೀಯ ಸಂಪ್ರದಾಯದ ಸೊಗಡು ಇಲ್ಲ” ಹೀಗೆ ಹಲವರು ಮನಸ್ಸಿಗೆ ಬಂದಂತೆ ಹೇಳಿದ್ದು ಈಗ ಇತಿಹಾಸ. ಆದರೆ ಪ್ರಧಾನಿ ಮೋದಿ ಅವರು ಮಾತ್ರ ಈ ಎಲ್ಲ ಹೇಳಿಕೆಗಳಿಗೆ ಮೌನ ಸೂಚಿಸಿದ್ದರು. ಆದರೆ ಬದಲಾದ ಅವರ ಈಗಿನ ಮನಸ್ಥಿತಿ, ಸಂವಿಧಾನದ ಕೃತಿಗೆ ನಮಿಸಿ ಸಲ್ಲಿಸಿದ ಗೌರವ ಈ ಹಿಂದೆ ಸಂವಿಧಾನದ ವಿರುದ್ಧವಾಗಿ ಮಾತನಾಡಿದವರಿಗೆಲ್ಲ ಉತ್ತರವಿರಬಹುದೇ ಅಥವಾ ಇನ್ನು ಮುಂದೆ ಸಂವಿಧಾನ ಕುರಿತು ಲಘುವಾಗಿ ಮಾತನಾಡಬಾರದೆಂಬ ಸೂಚ್ಯ ಸಂದೇಶವೇ ತಿಳಿಯದು. ಹೀಗೆ ಸಂವಿಧಾನದ ವಿರುದ್ಧ ಮಾತನಾಡಿದವರೆಲ್ಲರಿಗೂ ಬಿಜೆಪಿಯ ತಳಹದಿಯ ಸಿದ್ಧಾಂತವನ್ನು ಬೋಧಿಸುವ ಆರ್ ಎಸ್ ಎಸ್ ಬೆಂಬಲ ಇದ್ದಿರಬಹುದೇ ಎನ್ನುವ ಜನಸಾಮಾನ್ಯರಿಗೆ ಇರುವ ಶಂಕೆ ಮಾತ್ರ ಹೋಗಿಲ್ಲ.
 

“ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಮಾತ್ರ ತಾನು ಪ್ರಧಾನಿ ಆಗಲು ಸಾಧ್ಯವಾಗಿದೆ” ಎಂದು ಮೋದಿ ಅವರು ಅನೇಕ ಬಾರಿ ಮಾತನ್ನಾಡಿರುವುದಿದೆ. ಒಟ್ಟಾರೆ ಮೋದಿ ಅವರು ಸಂವಿಧಾನದ ಗ್ರಂಥಕ್ಕೆ ನಮಿಸುವ ಮೂಲಕ ಬಿಜೆಪಿಯ ಸಂವಿಧಾನ ವಿರೋಧಿಗಳ ಬಾಯಿಗೆ ಬೀಗ ಹಾಕಿದಂತಾಗಿದೆ ಎಂದು ತಿಳಿಯಬಹುದಷ್ಟೆ.

ಚುನಾವಣಾ ಪ್ರಚಾರದ ಕಾಲದಲ್ಲಿ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳನ್ನು ಹಿಗ್ಗಾಮುಗ್ಗಾ ಟೀಕಿಸಿದ್ದ ಅವರು, “ನಮಗೆ ಸಂಖ್ಯಾಬಲ ಇಲ್ಲ ಎಂದು ಮುಜುಗರ ಪಟ್ಟುಕೊಳ್ಳಬೇಡಿ; ನಿಮ್ಮ ಪ್ರತಿಯೊಬ್ಬರ ಅಭಿಪ್ರಾಯವನ್ನು ಸರ್ಕಾರ ಕೇಳಲಿದೆ” ಎಂದು ಅಧೀರಗೊಂಡಿರುವ ಕಾಂಗ್ರೆಸ್ ಮತ್ತು ಇತರೆ ವಿರೋಧ ಪಕ್ಷಗಳಿಗೆ ಸಾಂತ್ವನದ ಮಾತನ್ನಾಡುವ ಮೂಲಕ ಪ್ರಜಾತಂತ್ರದ ಬಗೆಗೆ ವಿಶ್ವಾಸ ಮೂಡಿಸುವ ಭರವಸೆ ಉಂಟುಮಾಡಿದ್ದಾರೆ.
ಸಂಸತ್ ನಮ್ಮ ದೇಶದ ಆಡಳಿತವನ್ನು ನಿರ್ವಹಿಸಲು ಬೇಕಾದ ಕಾಯ್ದೆಯನ್ನು ರೂಪಿಸುವ ಸ್ಥಳ. ಅಲ್ಲಿ ರೂಪುಗೊಳ್ಳುವ ಕಾಯ್ದೆ ಕಾನೂನೇ ಮುಂದೆ ದೇಶದ ಆಡಳಿತಕ್ಕೆ ದಿಕ್ಸೂಚಿ. ಮೋದಿ ಅವರು 2014ರ ಚುನಾವಣೆಯಲ್ಲಿ ನೀಡಿದ ಕೆಲವು ಪ್ರಮುಖ ಭರವಸೆಗಳನ್ನು ಈಡೇರಿಸಲಾಗಿಲ್ಲ. ಉದಾಹರಣೆಗೆ ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರು ಇಟ್ಟಿರುವ ಕೋಟ್ಯಂತರ ರೂಪಾಯಿಯ ಕಳ್ಳ ಹಣವನ್ನು ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿದ್ದರು. ಈ ಹೇಳಿಕೆ ಕಳೆದ ಚುನಾವಣೆವರೆಗೂ ಅವರನ್ನು ಅವಹೇಳನ ಮಾಡಲು ಬಳಸಿಕೊಂಡ ಒಂದು ಅಸ್ತ್ರವಾಗಿತ್ತು.

ಅದೇ ರೀತಿ 500 ಮತ್ತು 1000 ರೂ. ನೋಟುಗಳ ಅಮಾನ್ಯೀಕರಣ. ಅದರಿಂದ ಜನಸಾಮಾನ್ಯರಿಗೆ ಉಂಟಾದ ತೊಂದರೆ ಮೋದಿ ಅವರಿಗೆ ಹೇಳಿಕೊಳ್ಳುವಂತಹ ಹೆಸರು ತರಲಿಲ್ಲ. ಹಾಗೆಯೇ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದ ಚುನಾವಣಾ ಘೋಷವಾಕ್ಯವಾಗಿದ್ದ “ಇಂಡಿಯಾ ಶೈನಿಂಗ್”: “ಫೀಲ್ ಗುಡ್” ಜನರ ಲೇವಡಿಗೆ ಗುರಿಯಾಗಿದ್ದವು.
 

ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೇಳಿ ಪ್ರಚಂಡ ಭಾಷಣಕಾರರು. ಒಂದು ಗುಟುಕು ನೀರು ಕುಡಿಯದೇ ಗಂಟೆ ಗಟ್ಟಲೆ ನಿರರ್ಗಳವಾಗಿ ಜನರನ್ನು ಮೋಡಿ ಮಾಡುವಂತಹ ಭಾಷಣ ಮಾಡುವುದರಲ್ಲಿ ನಿಪುಣರು. ಅವರು ಸಂಸತ್ತಿನ ಕಲಾಪಗಳಲ್ಲಿಯೂ, ಬಜೆಟ್ ಮುಂತಾದ ವಿಷಯಗಳ ಮೇಲೆ ಕಳೆದ ಬಾರಿ ಚರ್ಚೆಗೆ ನೀಡುವ ಉತ್ತರವೂ ಸಾರ್ವಜನಿಕ ಭಾಷಣದಂತೆಯೇ ಇತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ.
 

ಪ್ರಧಾನಿ ಮೋದಿ ಅವರು ಮಾತನಾಡಲು ನಿಂತರೆ ಕಾಂಗ್ರೆಸ್ ಪಕ್ಷವೇ ಅವರಿಗೆ ಟಾರ್ಗೆಟ್. ಆ ಪಕ್ಷವನ್ನು ಅವಮಾನಗೊಳಿಸುವಂತೆ ಮಾತಿನಲ್ಲೇ ಅಸ್ರ್ರ ಪ್ರಯೋಗಿಸುತ್ತಿದ್ದರು. ಇವರ ಮಾತಿಗೆ ಅವರ ಹಿಂದೆ ಕುಳಿತ ಆಡಳಿತ ಪಕ್ಷದ ಸದಸ್ಯರು ದನಿಗೂಡಿಸಿ ಮೇಜು ಕುಟ್ಟುವ ಮತ್ತು ಘೋಷಣೆಗಳನ್ನು ಕೂಗುವ ಮೂಲಕ ತಾವು ಕೂಗು ಮಾರಿಗಳು ಎನ್ನುವುದಷ್ಟನ್ನೇ ಸಾಬೀತು ಮಾಡಿದಂತಾಗಿತ್ತು. 
 

ಪ್ರಧಾನಿ ಅವರ ಈ ಭಾಷಣವನ್ನು ಸಂಸತ್  ಕಲಾಪದ ಅರಿವಿಲ್ಲದವರಿಗೆ ಖುಷಿಕೊಡುವ ಸಂಗತಿ. ಆದರೆ ಸಂಸತ್ ಕಲಾಪಕ್ಕೆ ಒಂದು ಘನತೆ ಮತ್ತು  ಗಾಂಭೀರ್ಯ ಇದೆ. ಲೋಕಸಭೆಯಾಗಲಿ ರಾಜ್ಯಸಭೆಯಾಗಲಿ ಅವುಗಳು ಆರಂಭದ  ದಿನಗಳಿಂದ ಇಂದಿನವರೆಗೂ ದೇಶ ಉತ್ತಮ ಸಂಸದೀಯ ಪಟುಗಳನ್ನು ನೋಡಿದೆ. ಸಂಸತ್ ಕಲಾಪ ನಡೆಸುವುದೇ ಕಾಯ್ದೆ, ಕಾನೂನು ರಚಿಸುವ ಮತ್ತು ಇತರೆ ವಿಷಯಗಳ ಮೇಲೆ ಬೆಳಕು ಚೆಲ್ಲುವುದಕ್ಕೆ,

 ಆಧಾರಸಹಿತ ಮಾತನಾಡುವ ಸಂಸದೀಯ ಪಟುಗಳ ವಾಕ್ಚಾತುರ್ಯವನ್ನೂ ಸಂಸತ್ತು ನೋಡುತ್ತಾ ಬಂದಿದೆ. 1960-70ರ ದಶಕಗಳಲ್ಲಿ ಅಶೋಕ್ ಮೆಹತಾ, ಪೀಲೂ ಮೋದಿ, ರಾಮ್ ಮನೋಹರ್ ಲೋಹಿಯಾ, ಸ್ವಾತಂತ್ರ್ಯ ಬಂದ ದಿನಗಳಲ್ಲಿ ಕಾನೂನು ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಪ್ರಧಾನಿ ಜವಹಾರ್ ಲಾಲ್ ನೆಹರೂ, ರಾಜಾಜಿ ಆ ನಂತರದ ದಿನಗಳಲ್ಲಿ ಎ.ಕೆ ಗೋಪಾಲನ್, ಎಸ್.ಎ ಡಾಂಗೆ, ಮಧುಲಿಮೆಯೇ, ಮಧು ದಂಡವತೆ, ಜಾರ್ಜ್ ಫರ್ನಾಂಡೀಸ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿ, ಜಗನ್ನಾಥರಾವ್ ಜೋಷಿ, ಮುಂತಾದವರು ಮಾತನಾಡಲು ನಿಂತರೆ ಇಡೀ ಸದನ ತದೇಕಚಿತ್ತದಿಂದ ಆಲಿಸುತ್ತಿತ್ತು.
 

1994ರಿಂದ 2000ದ ಆರಂಭದವರೆಗೆ ನಾನು ಪ್ರಜಾವಾಣಿಯ ವರದಿಗಾರನಾಗಿ ಸಂಸತ್ ಕಲಾಪವನ್ನು ವರದಿ ಮಾಡಿರುವೆ. ಆಗಲೂ  ಇಂದರ್ ಜಿತ್ ಗುಪ್ತ, ಸೋಮನಾಥ ಚಟರ್ಜಿ ಮುಂತಾದ  ಎಡಪಕ್ಷಗಳ ಸದಸ್ಯರು ಮಾತನಾಡಿದರೆ ಆ ಚರ್ಚೆಗೆ ಒಂದು ಗಮ್ಮತ್ತು ಇರುತ್ತಿತ್ತು. ಸಂಸತ್ ಭವನದಲ್ಲಿ ಗ್ರಂಥಾಲಯವಿದೆ. ಅಲ್ಲಿ  ಮಧ್ಯಾಹ್ನ 1 ಗಂಟೆ ಹೊತ್ತಿಗೆ ವಿವಿಧ ರಾಜ್ಯಗಳ ಆಯಾ ಭಾಷಾ ಪತ್ರಿಕೆಗಳು ಬರುತ್ತವೆ. ಈ ಪತ್ರಿಕೆಗಳನ್ನು ಓದಲು ಕೆಲವು ಆಸಕ್ತ ಸದಸ್ಯರು ಕಲಾಪಕ್ಕೆ ಬಿಡುವು ನೀಡಿ ಬರುತ್ತಾರೆ.
 

ಎಚ್.ಡಿ. ದೇವೇಗೌಡರು 1991ರಲ್ಲಿ ಮೊದಲ ಬಾರಿಗೆ ಲೋಕಸಭೆ ಸದಸ್ಯರಾಗಿದ್ದರು. ಆಗ ಪಿ.ವಿ. ನರಸಿಂಹರಾವ್ ಪ್ರಧಾನ ಮಂತ್ರಿ. ಒಂದು ದಿನ ನಾನು ಮೊದಲೇ ಹೇಳಿದಂತೆ ಗೌಡರು ಗ್ರಂಥಾಲಯಕ್ಕೆ ಬಂದು ಕನ್ನಡ ಪತ್ರಿಕೆ ನೋಡುತ್ತಿದ್ದರು. ಆ ವೇಳೆಗೆ ಸದನದ ಒಳಗೆ ಸಿಪಿಐನ ಆಗ ಸದನದ ತಂದೆ (ಫಾದರ್ ಆಫ್ ಹೌಸ್ ) ಎಂದು ಕರೆಸಿಕೊಳ್ಳುತ್ತಿದ್ದ ಇಂದರ್ ಜಿತ್ ಗುಪ್ತ ಅವರು ಮಾತನಾಡಲು ಆರಂಭಿಸಿದ್ದರು. ಸಂಸತ್ ಭವನದ ಎಲ್ಲ ಭಾಗಗಳಲ್ಲಿಯೂ ಸದನದಲ್ಲಿ ಮಾತನಾಡುವವರ ಮಾತು ಪಿಸುದನಿಯಲ್ಲಿ ಕೇಳುವಂತಹ ಮೈಕ್ ವ್ಯವಸ್ಥೆ ಇರುತ್ತದೆ. ಇಂದರ್ ಜಿತ್ ಗುಪ್ತ ಅವರು ಮಾತನಾಡುತ್ತಿದ್ದುದನ್ನು ಕೇಳಿಸಿಕೊಂಡ ಗೌಡರು, “ಬರ್ತೀನಿ, ಇಂದರ್ ಜಿತ್ ಗುಪ್ತಾ ಅವರು ಮಾತನಾಡುತ್ತಿದ್ದಾರೆ” ಎಂದು ಸದನಕ್ಕೆ ಹೊರಟರು. ಹಾಗೆಯೇ ಹಾಸ್ಯಭರಿತವಾಗಿ ಮಧ್ಯೆ ಮಧ್ಯೆ ಹಿಂದಿ ಕವನಗಳನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣ ಕೇಳಲು ಪಕ್ಷಾತೀತವಾಗಿ ಸದಸ್ಯರು ಹಾಜರಿರುತ್ತಿದ್ದರು.
 

ಇನ್ನು ಸದನದಲ್ಲಿ ಪ್ರಧಾನಿ ಅವರು ಹಾಜರಿದ್ದಾರೆಂದರೆ ಅದಕ್ಕೊಂದು ಘನತೆ ಮತ್ತು ಗೌರವ ತಾನಾಗಿಯೇ ಬರುತ್ತದೆ.ಇನ್ನು ಯಾವುದಾದರೂ ಚರ್ಚೆಯಾದ ವಿಷಯದ ಮೇಲೆ ಪ್ರಧಾನಿ ಅವರು ಮಾತನಾಡಲು ನಿಂತರೆ ಪಿನ್ ಡ್ರಾಪ್ ಸೈಲೆನ್ಸ್ ಇರುತ್ತಿತ್ತು. ನಾನು ಕಂಡಂತೆ ಪಿ.ವಿ. ನರಸಿಂಹರಾವ್, ವಾಜಪೇಯಿ, ದೇವೇಗೌಡ ಮತ್ತು ಇಂದರ್ ಕುಮಾರ್ ಗುಜ್ರಾಲ್ ಮತ್ತು ಡಾ. ಮನಮೋಹನ ಸಿಂಗ್ ಅವರು ಮಾತನಾಡಲು ನಿಂತರೆ ಇಡೀ ಸದನ ನಿಶ್ಯಬ್ಧದಿಂದ ಕೂಡಿರುತ್ತಿತ್ತಲ್ಲದೆ,  ಸದಸ್ಯರು ಪ್ರಧಾನಿ ಅವರತ್ತ ತದೇಕಚಿತ್ತದಿಂದ ಆಲಿಸುತ್ತಿದ್ದರು. ಅಷ್ಟು ಗಾಂಭೀರ್ಯ ಎದ್ದು ಕಾಣುತ್ತಿತ್ತು.
 

ಆದರೆ ಇದಕ್ಕೆ ತದ್ವಿರುದ್ಧವಾದ ಘಟನೆ ಪ್ರಧಾನಿ ಮೋದಿ ಅವರದ್ದು. ಸಾರ್ವಜನಿಕ ಸಭೆಯಲ್ಲಿ ಮಾತನಾಡಿದಂತೆ ನಿರರ್ಗಳವಾಗಿ ಮಾಡುವ ಭಾಷಣದಿಂದ ಪ್ರತಿ ಮಾತಿಗೂ ಹುಮ್ಮಸ್ಸಿನಿಂದ ಆಡುವ ಮಾತಿಗೆ ಬಿಜೆಪಿ ಸದಸ್ಯರು ಕಿವಿಗಡಚಿಕ್ಕುವಂತೆ ಘೋಷಣೆ ಮತ್ತು ಮೇಜು ಕುಟ್ಟುವುದು. ಇದರಿಂದ ಪ್ರಚೋದಿತಗೊಂಡ ಪ್ರತಿ ಪಕ್ಷಗಳ ಸದಸ್ಯರು ಸಹ ತಾವೇನೂ ಕಡಿಮೆ ಇಲ್ಲವೆನ್ನುವುದನ್ನು ತೋರಿಸಿಕೊಳ್ಳಲು ನಿಂತು ಕೂಗಾಡುವುದೇ ಹೆಚ್ಚಾಗಿ ನಡೆಯಿತು. ಇದು ಸಂಸತ್ ಕಲಾಪದ ಗುಣಮಟ್ಟವನ್ನು ಹೆಚ್ಚಿಸಲಾರದು. ಈ ಎರಡು ದಶಕಗಳಿಂದೀಚೆಗೆ ಸದನದ ಕಲಾಪವನ್ನು ಟಿವಿಗಳಲ್ಲಿ ನೇರ ಪ್ರಸಾರ ಮಾಡುವ ಪದ್ಧತಿ ಜಾರಿಗೆ ಬಂದ ಮೇಲೆ ಈ ಬೆಳವಣಿಗೆ ಕಾಣತೊಡಗಿದೆ. ಎಲ್ಲ ಸದಸ್ಯರು ತಮ್ಮ ಕ್ಷೇತ್ರದ ಜನರು ನೋಡಲೆಂದೇ ಟಿವಿಗಳಲ್ಲಿ ಕಾಣಸಿಕೊಳ್ಳುವ ಪ್ರಯತ್ನ ಮಾಡುತ್ತಿರುತ್ತಾರೆ.
 

ಯಾರು ಒಪ್ಪಲಿ ಬಿಡಲಿ, ಸಂಸತ್ ಕಲಾಪದಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಂಡು ಯಾವುದೇ ಒಂದು ವಿಷಯವನ್ನು ಆಳವಾಗಿ ಅಧ್ಯಯನ ಮಾಡಿ ಮಾತನಾಡುವವರು ಎಡಪಕ್ಷಗಳ (ಸಿಪಿಎಂ, ಸಿಪಿಐ) ಸದಸ್ಯರು ಎಂದರೆ ಅಚ್ಚರಿಯನ್ನಾಗಲಿ ಹೊಟ್ಟೆಕಿಚ್ಚನ್ನಾಗಲಿ ಪಡಬೇಕಾಗಿಲ್ಲ. ಇವರ ಈ ಸಂಖ್ಯೆ ಈಗ ಶೋಚನೀಯವಾಗಿ ಕಡಿಮೆ ಆಗುತ್ತಾ ಬರುತ್ತಿರುವುದು ದುರಂತ. ಲೋಕಸಭೆಯ ಇತಿಹಾಸದತ್ತ ಗಮನಿಸಿದರೆ 1967ರಲ್ಲಿ 19 ಸದಸ್ಯರು , 1971ರಲ್ಲಿ 25, 1977ರಲ್ಲಿ 29, 1980ರಲ್ಲಿ 36, ನಂತರ 1990ರಲ್ಲಿ 49 ಸದಸ್ಯರು ಇದ್ದವರು 2014ರಲ್ಲಿ ಕೇವಲ 9 ಮತ್ತು 2019ರ ಈಗಿನ ಚುನಾವಣೆಯಲ್ಲಿ 4ಕ್ಕೆ ಇಳಿದಿದ್ದಾರೆ. ಎಡಪಕ್ಷಗಳ ಭದ್ರ ಬುನಾದಿ ಇದ್ದ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳಿಂದ ಒಬ್ಬರೂ ಗೆಲ್ಲದೇ ಹೋಗಿರುವುದು ನಿಜಕ್ಕೂ ದುರಂತ. ಇದು ಆ ರಾಜ್ಯದಲ್ಲಿ ಪಕ್ಷದ ನಾಮಾವಶೇಷದ ಸೂಚನೆ ಇರಬಹುದೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
 

ನಾನಿಲ್ಲಿ ಎಡಪಕ್ಷಗಳ ಸಂಖ್ಯಾಬಲವನ್ನೇ ಪ್ರಮುಖವಾಗಿ ತೆಗೆದುಕೊಳ್ಳಲು ಕಾರಣ ಎಂದರೆ ಸಂಸತ್ನಲ್ಲಿ ಯಾವುದೇ ವಿಷಯದ ಮೇಲೂ ಆಳವಾಗಿ ಮತ್ತು ಅರ್ಥಪೂರ್ಣವಾಗಿ ಚರ್ಚಿಸುವ ಛಾತಿಯನ್ನು ಈ ಪಕ್ಷಗಳ ಸದಸ್ಯರು ಹೊಂದಿದ್ದಾರೆ.
 

ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿದ್ದ 1990-95ರ ಅವಧಿಯಲ್ಲಿ ವಿಶ್ವ ವಾಣಿಜ್ಯ ಒಪ್ಪಂದ, ಗ್ಯಾಟ್ ಕುರಿತಂತೆ ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಚರ್ಚೆ ನಡೆದಿತ್ತು. ನರಸಿಂಹರಾವ್ ಮತ್ತು ಆಗ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಗ್ಯಾಟ್ ಒಪ್ಪಂದ ಕುರಿತಂತೆ ಎಲ್ಲ ಮಾಹಿತಿ ಇತ್ತಾದರೂ ಉಳಿದ ಸದಸ್ಯರಿಗೆ ಅಷ್ಟಾಗಿ ಅರಿವಿರಲಿಲ್ಲ. ಆದರೆ ತಿಂಗಳುಗಟ್ಟಲೆ ನಡೆದ ಈ ಚರ್ಚೆಯಲ್ಲಿ ಎಡಪಕ್ಷಗಳ ಸದಸ್ಯರು ವಹಿಸಿದ ಪಾತ್ರವನ್ನು ಮರೆಯಲಾಗದು. ಸರ್ಕಾರವನ್ನು ತುದಿಗಾಲಲ್ಲಿ ನಿಲ್ಲುವಂತೆ ವಿಶ್ವ ವಾಣಿಜ್ಯ ಒಪ್ಪಂದದಿಂದ ಆಗಬಹುದಾದ ಒಳಿತು ಮತ್ತು ಕೆಡಕುಗಳನ್ನು ಎಳೆ ಎಳೆಯಾಗಿ ಬಿಡಿಸಿ ಚರ್ಚಿಸುತ್ತಿದ್ದರು. ಅದರಲ್ಲೂ ಔಷಧ ಉದ್ಯಮ ಮತ್ತು ವ್ಯಾಪಾರ ಕುರಿತಂತೆ ಜಾಧವಪುರ ವಿಶ್ವ ವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಸಿಪಿಎಂ ನಿಂದ ಆರಿಸಿ ಬಂದಿದ್ದ ಡಾ. ಮಾಲಿನಿ ಭಟ್ಟಾಚಾರ್ಯ ಅವರೊಬ್ಬರೇ ಹೆಚ್ಚಾಗಿ ಮಾತನಾಡುತ್ತಿದ್ದರು . ಅವರು ಮಾತನಾಡಲು ಕೈ ಎತ್ತಿದರೆ ಆಗಿನ ಸಭಾಧ್ಯಕ್ಷರಾಗಿದ್ದ ಶಿವರಾಜ ಪಾಟೀಲ್ ಇಲ್ಲ ಎನ್ನುತ್ತಿರಲಿಲ್ಲ. ಪ್ರೊ. ಮಾಲಿನಿ ಭಟ್ಟಾಚಾರ್ಯ ಅವರು ಎಷ್ಟು ಹೊತ್ತು ಮಾತನಾಡಿದರೂ ಅವರನ್ನು ಸಾಕು ಕುಳಿತುಕೊಳ್ಳಿ ಎನ್ನುತ್ತಿರಲಿಲ್ಲ. ಅವರ ಒಂದೊಂದು ಮಾತು, ವ್ಯಾಖ್ಯಾನವೂ ಸಂಸದೀಯ ಕಲಾಪ ಮಾತ್ರವಲ್ಲ ಆ ಗಂಭೀರ ವಿಷಯದ ಮೇಲೆ ಬೆಳಕು ಚೆಲ್ಲುತ್ತಿದ್ದರು. 
 

ಸಿಪಿಐನ ಇಂದ್ರಜಿತ್ ಗುಪ್ತ ಮತ್ತು ಸಿಪಿಎಂ ನ ಸೋಮನಾಥ ಚಟರ್ಜಿ ಅವರಂತಹ ತಿಳಿದಂತಹವರು ಮಾತನಾಡಿದರೆ ಇಡೀ ಸದನ ತದೇಕಚಿತ್ತದಿಂದ ಆಲಿಸುತ್ತಿತ್ತು. ಅಂತಹ ಪ್ರಬುದ್ಧ ಸದಸ್ಯರನ್ನು ಹೊಂದಿರುತ್ತಿದ್ದ ಸಿಪಿಎಂ ಇಂದು ಪಶ್ಚಿಮ ಬಂಗಾಳದಿಂದ ಒಬ್ಬರೂ ಗೆದ್ದು ಬಂದಿಲ್ಲ ಎಂದರೆ ಸಂಸದೀಯ ಕಲಾಪದ ಬಗೆಗೆ ಗೌರವ ಹೊಂದಿರುವವರಿಗೆ ನೋವಾಗುತ್ತದೆ.
 

ಅಂದಿನ ದಿನಗಳ ಸದನದ ಕಲಾಪಗಳಲ್ಲಿ ನಡೆಯುವ ಚರ್ಚೆಗೆ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಉತ್ತರ ಕೊಡಲು ನಿಂತರೆ ಇಡೀ ಸದನ ಪಿನ್ ಡ್ರಾಪ್ ಸೈಲೆನ್ಸ್ ಆಗಿರುತ್ತಿತ್ತು. ನಂತರದ ದಿನಗಳಲ್ಲಿ ಬಂದ ದೇವೇಗೌಡ, ಐ.ಕೆ. ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಮತ್ತು ಡಾ. ಮನಮೋಹನ್ ಸಿಂಗ್ ಅವರಂತಹ ಪ್ರಬುದ್ಧ ಪ್ರಧಾನಿಗಳು ಮಾತನಾಡುವಾಗ ಸದನ ತದೇಕ ಚಿತ್ತದಿಂದ ಇರುತ್ತಿದ್ದದ್ದು ಸಂಸದೀಯ ವ್ಯವಸ್ಥೆಯ ಬಗೆಗೆ ಗೌರವ ಹೆಚ್ಚುತ್ತಿತ್ತು.
 

ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ಜೊತೆ ವಾಗ್ವಾದ ಮತ್ತು ಜಗಳಕ್ಕೆ ನಿಲ್ಲದೆ ಪ್ರಮುಖ ವಿಷಯಗಳ ಮೇಲಾದರೂ ಗಾಂಭೀರ್ಯದಿಂದ ಉತ್ತರ ನೀಡಬಹುದೆಂದು ಈ ಬಾರಿಯಾದರೂ ನಿರೀಕ್ಷೆ ಮಾಡಬಹುದು ಎನ್ನುವ ವಿಶ್ವಾಸವನ್ನು ಇಟ್ಟುಕೊಳ್ಳೋಣ. ಏಕೆಂದರೆ ಅವರ ಪ್ರಿಯವಾದ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್” ಅಕ್ಷರಶಃ ಸಾಕಾರಗೊಳ್ಳಬೇಕಾದರೆ ಸಂಸತ್ತಿನಲ್ಲಿ ಗುಣಮಟ್ಟದ ಚರ್ಚೆ ನಡೆಯಬೇಕು. ಆಗ ಮಾತ್ರ ಪ್ರಮುಖ ಕಾಯ್ದೆಗಳಿಗೆ ಸದನದ ಒಮ್ಮತದ ಬೆಂಬಲ ಸಿಗಬಹುದು.