ಅರಮನೆ ಮೈದಾನ ಉಲ್ಲಂಘನೆಗಳ ತಾಣ: ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ನಿತ್ರಾಣ

ಅರಮನೆ ಮೈದಾನ ಉಲ್ಲಂಘನೆಗಳ ತಾಣ: ಕ್ರಮ ಕೈಗೊಳ್ಳಬೇಕಾದ ಸರ್ಕಾರವೇ ನಿತ್ರಾಣ

ಬೆಂಗಳೂರಿನ ಪ್ರತಿಷ್ಠಿತ ಹಾಗೂ ವಿವಾದಿತ ತಾಣ ಎಂದೇ ಕರೆಯಲಾಗಿರುವ ಅರಮನೆ ಮೈದಾನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸ್ವತ್ತಿನಲ್ಲಿ ಅನಧಿಕೃತ ಕಟ್ಟಡಗಳು, ತಾತ್ಕಾಲಿಕ ಶೆಡ್ ನಿರ್ಮಾಣ ವಿಚಾರ ಮುನ್ನೆಲೆಗೆ ಬಂದಿದೆ. ಸರ್ಕಾರದಿಂದ ಅನುಮೋದನೆ ಸಿಗದಿದ್ದರೂ ಅದ್ಧೂರಿ ಕಾರ್ಯಕ್ರಮಗಳು ನಡೆಯುತ್ತಿವೆ .ಪ್ರತಿಷ್ಠಿತ ಹೋಟೆಲ್ ನಡೆಸುತ್ತಿರುವ ಕಂಪನಿಯೊಂದು ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿ ಸುಪ್ರೀಂ ಕೋರ್ಟ್ ಆದೇಶವನ್ನು ತಿಪ್ಪೆಗೆ ಎಸೆದಿದೆ. ಆದರೂ ಇಲಾಖೆ ಸಚಿವರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸೇರಿದಂತೆ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ ಎಂದು ಹೇಳುತ್ತಾರೆ ಜಿ.ಮಹಂತೇಶ್.

ಬೆಂಗಳೂರು ಅರಮನೆ ಮೈದಾನದಲ್ಲಿ ಅನಧಿಕೃತ ಕಟ್ಟಡ, ತಾತ್ಕಾಲಿಕ ಶೆಡ್ ಗಳ ನಿರ್ಮಾಣ ಕಾರ್ಯ ಎಗ್ಗಿಲ್ಲದೆ ಸಾಗಿದೆ. ಸರ್ಕಾರದ ಅನುಮತಿ ಇಲ್ಲದೇ ಇದ್ದರೂ ಅರಮನೆ ಮೈದಾನದಲ್ಲಿ ವೈಭವದ ಅದ್ದೂರಿ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. 


ಮೈದಾನದಲ್ಲಿ ಕಟ್ಟಡ ನಿರ್ಮಾಣವೂ ಸೇರಿದಂತೆ ಇನ್ನಿತರೆ ಚಟುವಟಿಕೆಗಳನ್ನು ನಡೆಸುವ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಮೈದಾನದ ವಾರಸುದಾರರು ಸೇರಿದಂತೆ ಕಾರ್ಯಕ್ರಮ ಆಯೋಜಕರು  ಕಸದ ಬುಟ್ಟಿಗೆ ಎಸೆದಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಶೆಡ್ ಮತ್ತು ಕಟ್ಟಡಗಳನ್ನು ನಿರ್ಮಿಸುತ್ತಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ.


ಬೆಂಗಳೂರು ಅರಮನೆ ಮತ್ತು ಮೈದಾನ ಕುರಿತಾದ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿರುವ ಸಿವಿಲ್ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ 'ಯಥಾಸ್ಥಿತಿ' ಕಾಪಾಡಬೇಕು ಎಂದು ಆದೇಶ ನೀಡಿತ್ತು. ಆದರೀಗ ಆ ಆದೇಶಕ್ಕೆ ಕವಡೆ ಕಾಸಿನ ಬೆಲೆ ಇಲ್ಲದಂತಾಗಿದೆ.


ಬೆಂಗಳೂರು ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಸಂಬಂಧ ಏಕಗವಾಕ್ಷಿ ಸಮಿತಿ ಸಭೆ ನಿಗದಿಪಡಿಸುವ ಸಂಬಂಧ ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಸೂಕ್ತ ಅಭಿಪ್ರಾಯಕ್ಕಾಗಿ ಮಂಡಿಸಿರುವ ಪತ್ರದಿಂದ ಈ ಸಂಗತಿ ತಿಳಿದು ಬಂದಿದೆ.


ಅಪ್ಪಯ್ಯರಾಜು ಚಾಮರಾಜು ಶ್ರೀನಿವಾಸರಾಜು, ಚಾಮರಾಜು ಚಂದ್ರಶೇಖರ ರಾಜು ಮತ್ತು ರಾಜು ಚಾಮರಾಜು ಕೃಷ್ಣ ಅವರು ನಿರ್ದೇಶಕರಾಗಿರುವ ಚಾಮುಂಡಿ ಹೋಟೆಲ್ ಪ್ರೈವೇಟ್ ಲಿಮಿಟೆಡ್, ಸುಪ್ರೀಂ ಕೋರ್ಟ್ ಹೊರಡಿಸಿದ್ದ ಯಥಾಸ್ಥಿತಿ ಆದೇಶವನ್ನು ಉಲ್ಲಂಘಿಸಿ ಹೊಸದಾಗಿ ಕಟ್ಟಡಗಳನ್ನು ನಿರ್ಮಿಸುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆ ಕಾನೂನು ಇಲಾಖೆಯ ಅಭಿಪ್ರಾಯ ಕೋರಿ ಕೈ ತೊಳೆದುಕೊಂಡಿದೆ. ಅಭಿಪ್ರಾಯ ಕೋರಿರುವ ಪ್ರತಿ 'ಡೆಕ್ಕನ್'ನ್ಯೂಸ್' ಗೆ ಲಭ್ಯವಾಗಿದೆ.

ಕಾನೂನೂ ಇಲಾಖೆಯ ಟಿಪ್ಪಣಿಯ ಪ್ರತಿ
ಅದೇ ರೀತಿ ಸರ್ಕಾರದಿಂದ ಅನುಮೋದನೆಯಾಗದ ಕಾರ್ಯಕ್ರಮಗಳನ್ನು ಹೊರತುಪಡಿಸಿ  ಬೆಂಗಳೂರು ಅರಮನೆ ಮೈದಾನದಲ್ಲಿ ಅನಧಿಕೃತ ಕಾರ್ಯಕ್ರಮಗಳೂ ನಡೆದಿವೆ. ಇದೇ ಮೈದಾನದಲ್ಲಿ ಕಾರ್ಯಕ್ರಮ ನಡೆಸಲು "ವಾರಸುದಾರರು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆಯಾಗದೆ  ಮುಖ್ಯಮಂತ್ರಿಯವರಿಂದ ಹಿಂತಿರುಗಿರುವ ಕಾರ್ಯಕ್ರಮಗಳಿಗೆ ಅನುಮತಿ ನೀಡುವ' ಬಗ್ಗೆಯೂ ಕಾನೂನು ಇಲಾಖೆಯ ಅಭಿಪ್ರಾಯ ಕೋರಿದೆ. 


ವಾರಸುದಾರರ ಪೈಕಿ ಕಾಮಾಕ್ಷಿದೇವಿ ಮತ್ತು ವಿಶಾಲಾಕ್ಷಿ ದೇವಿ ಇವರು ಆಗಸ್ಟ್ 2017 ರಿಂದ ಮಾರ್ಚ್ 2018 ರವರೆಗೆ ಅಗ್ನಿ ಸುರಕ್ಷಾ ಸಾಧನಗಳನ್ನು ಅಳವಡಿಸಿಕೊಳ್ಳದ ಕಾರಣ ಅವರಿಗೆ ಕಾರ್ಯಕ್ರಮ ನಡೆಸಲು ಅನುಮತಿಯನ್ನು ತಡೆಹಿಡಿದಿದೆ. 


'ಉಲ್ಲಂಘನೆಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಬೇಕೆನ್ನುವುದನ್ನು ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ 1996 ರಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ ಪ್ರಸ್ತುತ ಈ ಕಾಯ್ದೆಯನ್ನು ಪ್ರಶ್ನಿಸಿರುವ ಸಿವಿಲ್ ದಾವೆ ಸರ್ವೋಚ್ಛ ನ್ಯಾಯಾಲಯದಲ್ಲಿ ಬಾಕಿ ಇದೆ. ಅಲ್ಲದೆ, ಸರ್ವೋಚ್ಛ ನ್ಯಾಯಾಲಯ ಈ ಪ್ರಕರಣದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿರುವುದುರಿಂದ ಪ್ರಸ್ತಾಪಿತ ಉಲ್ಲಂಘನೆಗಳ ಬಗ್ಗೆ ಕಾಯ್ದೆಯ ಕಲಂಗಳಡಿ ಕ್ರಮ ಜರುಗಿಸಲು ಅವಕಾಶ ಇರುವುದಿಲ್ಲ," ಎಂದು ಕಾನೂನು ಇಲಾಖೆ ಅಭಿಪ್ರಾಯಿಸಿದೆ.


ಅಲ್ಲದೆ, ಪ್ರತಿಯೊಂದು ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಸಮಿತಿಯು ಈ ವಿಷಯವನ್ನು ಗಣನೆಗೆ ತೆಗೆದುಕೊಂಡು ಸೂಕ್ತ ಕ್ರಮ ಜರುಗಿಸಬಹುದು ಎಂದು ಅಭಿಪ್ರಾಯಿಸಿರುವ ಕಾನೂನು ಇಲಾಖೆ, ಪ್ರತಿಯೊಂದು ಉಲ್ಲಂಘನೆ ಯಾವುದಾದರೂ ಜಾರಿಯಲ್ಲಿರುವ ನಿಯಮಗಳ ಉಲ್ಲಂಘನೆಯೇ ಎಂದು ಪರಿಶೀಲಿಸಿ ಆ ನಿಯಮದ ಉಲ್ಲಂಘನೆಗೆ ಕ್ರಮ ಕೈಗೊಳ್ಳಬಹುದು. ಅಗ್ನಿ ಸುರಕ್ಷಾ ಸಾಧನ ಅಳವಡಿಸದೇ ಕಾರ್ಯಕ್ರಮಗಳನ್ನು ಆಯೋಜಿಸಿರುವುದಕ್ಕೆ ಅಗ್ನಿ ಸುರಕ್ಷಾ ನಿಯಮಗಳ ಅಡಿಯಲ್ಲಿ ಉಲ್ಲೇಖಿಸಿರುವ ಕ್ರಮ ತೆಗೆದುಕೊಳ್ಳಬಹುದು ಎಂದು ಸಿಬ್ಬಂದಿ ಆಡಳಿತ ಸುಧಾರಣೆ ಇಲಾಖೆಗೆ ತಿಳಿಸಿದೆ.


ಹಾಗೆಯೇ ಡಿಪಿಎಆರ್ ಪ್ರಸ್ತಾಪಿಸಿರುವ ಉಲ್ಲಂಘನೆಗಳ ವಿಷಯವನ್ನು ಹಾಗೂ ಅವುಗಳ ಗಂಭೀರ ಪರಿಣಾಮಗಳನ್ನು ಸಿವಿಲ್ ದಾವೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಗಮನಕ್ಕೆ ತಂದು ಸೂಕ್ತ ನಿರ್ದೇಶನ ಕೋರಬಹುದು ಎಂದು ಅಭಿಪ್ರಾಯಿಸಿದೆ.


ಮೂಲಗಳ ಪ್ರಕಾರ ಬೆಂಗಳೂರು ಅರಮನೆ ಮೈದಾನದಲ್ಲಿ ಕಟ್ಟಡಗಳ ಪೈಕಿ 80 ತಾತ್ಕಾಲಿಕ ಕಟ್ಟಡಗಳು ಅನಧಿಕೃತವಾಗಿವೆ. ಅವುಗಳಿಂದ ಸಿಗುತ್ತಿರುವ ಕೋಟ್ಯಂತರ ರು.ಮೊತ್ತದ ಬಾಡಿಗೆಯಲ್ಲಿ ಸರ್ಕಾರಕ್ಕೆ ಬಿಡಿಗಾಸೂ ಸಿಗುತ್ತಿಲ್ಲ. ಆ ಕಟ್ಟಡಗಳಿಂದ ದಿನಕ್ಕೆ ರು.10 ಲಕ್ಷದವರೆಗೂ ಬಾಡಿಗೆ ವಸೂಲಿಯಾಗುತ್ತಿದ್ದು, ವರ್ಷಕ್ಕೆ ರು.5000 ಕೋಟಿವರೆಗೂ ಸಂಗ್ರಹವಾಗುತ್ತಿದೆ ಎಂದು ಅಂದಾಜಿಸಿದೆ.   ಅರಮನೆ ಸ್ವಾಧೀನಕ್ಕಾಗಿ ಸರ್ಕಾರ 1998ರಲ್ಲಿ ತೀರ್ಮಾನಿಸಿತ್ತು.  ಇದರ ವಿರುದ್ಧ ರಾಜರ ಕುಟುಂಬದವರು ಹೈಕೋರ್ಟ್ ಮೆಟ್ಟಿಲೇರಿದರಲ್ಲದೆ, ಅಲ್ಲಿ ತೀರ್ಪು ಸರ್ಕಾರದ ಪರ ಬಂದ ನಂತರ ಅವರು ಸುಪ್ರೀಂ ಕೋರ್ಟ್ ನಲ್ಲಿ ಹೋರಾಟ ಮುಂದುವರೆಸಿದ್ದಾರೆ. 


ಸುಪ್ರೀಂ ಕೋರ್ಟ್ 1998 ಮತ್ತು 2010 ರಲ್ಲಿ ನೀಡಿದ ಮಧ್ಯಂತರ ಆದೇಶದಂತೆ ರಾಜ ಮನೆತನಕ್ಕೆ ಅರಮನೆಯಲ್ಲಿ ತಾತ್ಕಾಲಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ಸಿಕ್ಕಿತ್ತು. ಅಲ್ಲಿ ನಿರ್ಮಾಣಗೊಂಡಿರುವ  ತಾತ್ಕಾಲಿಕ ಕಟ್ಟಡಗಳಿಂದ ಬರುತ್ತಿರುವ ಬಾಡಿಗೆ ಹಣವು ರಾಜ ವಂಶಸ್ಥರ ಪಾಲಾಗುತ್ತಿದೆ. 


ಆದರೆ ಆ ಕಾರ್ಯಕ್ರಮಗಳಿಗೆ ಅನುಮತಿ ನೀಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ರಚನೆಯಾಗಿರುವ ಸಮಿತಿಯೇ ಅದರ ಮೇಲ್ವಿಚಾರಣೆ ಮಾಡುತ್ತಿದೆ. ಅರಮನೆ ಜಾಗ ಮತ್ತು ಕಟ್ಟಡಗಳ ನಿಯಂತ್ರಣ ಸರ್ಕಾರದ ಬಳಿ ಇದ್ದರೂ ಸ್ವಾಧೀನ ಮಾತ್ರ ರಾಜ ಮನೆತನದವರ ಬಳಿಯೇ ಇದೆ ಎನ್ನಲಾಗಿದೆ.