ಪಾಕ್ ಗೆ ಬೆಂಬಿಡದ ವಿಶ್ವ ಕಪ್ ಭೂತ : ಮೂರನೇ ಸ್ಥಾನಕ್ಕೆ ಜಿಗಿದ ಭಾರತ

ಪಾಕ್  ಗೆ ಬೆಂಬಿಡದ ವಿಶ್ವ ಕಪ್ ಭೂತ : ಮೂರನೇ ಸ್ಥಾನಕ್ಕೆ ಜಿಗಿದ ಭಾರತ

ಭಾರತದ ಇನ್ನಿಂಗ್ಸ್ ಇನ್ನೂ 25 ಓವರ್ ಗಳು ಪೂರೈಸಿರಲಿಲ್ಲ, ಆಗಲೇ ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗಳು ಪಾಕಿಸ್ತಾನ ತಂಡದ ನಾಯಕ ಸರ್ಫ್ರಾಜ್ ಅಹ್ಮದ್ ಗೆ  ಉಗಿದು ಉಪ್ಪಿನಕಾಯಿ ಹಾಕಲಾರಂಭಿಸಿದ್ದರು.1992 ರಲ್ಲಿ ರಾಷ್ಟ್ರಕ್ಕೆ ವಿಶ್ವ ಕಪ್ ಗೆದ್ದು ಕೊಟ್ಟ ನಾಯಕ ಹಾಗೂ ಪ್ರಧಾನಿ ಇಮ್ರಾನ್ ಖಾನ್ ಇಂದಿನ ಪಂದ್ಯಕ್ಕೆ ಮೊದಲೇ ಟ್ವೀಟ್ ಮಾಡಿ, ಟಾಸ್ ಗೆದ್ದರೆ ಮೊದಲು ಬ್ಯಾಟ್ ಮಾಡಬೇಕೆಂದು ತಮ್ಮ ತಂಡದ ನಾಯಕನಿಗೆ ತಿಳುವಳಿಕೆ ನೀಡಿದ್ದರು. ಅನುಭವಿ ಹಿರಿಯನ ಮಾತು ಕೇಳಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತಾದರೂ ಟಾಸ್ ನಂತರ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಸಹಾ ತಾನೇ ಟಾಸ್ ಗೆದ್ದಿದ್ದರೆ ತಾನು ಕೂಡ ಫೀಲ್ಡಿಂಗ್ ಆಯ್ಕೆ ಮಾಡುತ್ತಿದ್ದೆ ಎಂದು ಹೇಳಿದ್ದನ್ನು ಗಮನಿಸಬೇಕು. 

ಕಳೆದ ಮೂರು ದಿನ ಮ್ಯಾಂಚೆಸ್ಟರ್ ನಲ್ಲಿ ಮಳೆ ಬಂದ್ದಿದ್ದರಿಂದ, ಬೌಲರ್ ಗಳಿಗೆ ಸಹಾಯವಾಗುವ ವಾತಾವರಣವನ್ನು ನಿರೀಕ್ಷಿಸಿ ಎದುರಾಳಿ ತಂಡವನ್ನು ಬ್ಯಾಟ್ ಮಾಡಲು ಆಹ್ವಾನಿಸಿದ್ದು ಸರಿ ಅನಿಸಬಹುದು. ಆದರೆ, ಮಳೆ ಬಂದು ಪಂದ್ಯ ಪೂರ್ಣವಾಗದಿದ್ದ ಸಂದರ್ಭದಲ್ಲಿ ರನ್ ಬೆನ್ನತ್ತಿದ ತಂಡಕ್ಕೆ ಡಕ್ವರ್ತ್-ಲೂಯಿಸ್ ಲೆಕ್ಕಾಚಾರ ಬಹುತೇಕ ಕಂಟಕವೇ. ಮಳೆಯ ನಿರೀಕ್ಷೆಯಲ್ಲಿ, ಮೊದಲು ಬ್ಯಾಟ್ ಮಾಡುವ ನಿರ್ಧಾರ ಸರಿ ಇರುತ್ತಿತ್ತೇನೋ. ಪಂದ್ಯದ ಒಂದು ಹಂತದಲ್ಲಿ ಅದೇ ಡಕ್ವರ್ತ್-ಲೂಯಿಸ್ ನಿಯಮದ ಅನ್ವಯ ಪಾಕಿಸ್ತಾನ ಗೆಲ್ಲುವ ಸಂಭವ ಕಂಡಿತ್ತು. ಆದರೆ, ಅದು ಮರೀಚಿಕೆಯಾಗಿ ಪರಿಣಮಿಸಿತು. 35 ಓವರ್ ಗಳ ನಂತರ, ಮಳೆರಾಯ ಪಂದ್ಯಕ್ಕೆ ಅಡ್ಡಿಪಡಿಸಿ ಪಾಕಿಸ್ತಾನ ಇನ್ನಿಂಗ್ಸ್ ಮುಂದುವರಿಸಿದಾಗ ಅದಕ್ಕಿದ್ದ ಸವಾಲು 30 ಬಾಲ್ ಗಳಲ್ಲಿ 136 ರನ್ ಗಳಿಸುವುದು. ಆರು ಜನ ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳು ಸ್ವಸ್ಥಾನ ಸೇರಿಕೊಂಡಾಗಿತ್ತು. 

ವಿಶ್ವ ಕಪ್ ಗೆ ಆ ಪಾಕಿಸ್ತಾನದಿಂದ ಹೊರಡುವುದಕ್ಕೆ ಮುನ್ನ ಇಮ್ರಾನ್ ಖಾನ್ ರನ್ನು ಕಂಡು, ಹಿತವಚನ ಪಡೆದಿದ್ದ ತಂಡಕ್ಕೆ ಆತ ಹೇಳಿದ್ದು "ಭಾರತದ ವಿರುದ್ಧ 25 ಪಂದ್ಯಗಳಲ್ಲಿ ನಾನು ನಾಯಕತ್ವ ವಹಿಸಿದ್ದೆ. ಅದರಲ್ಲಿ 21 ಬಾರಿ ಗೆದ್ದಿದ್ದೇವೆ." ಅಷ್ಟೇ ಏಕೆ? ಎರಡು ವರ್ಷಗಳ ಹಿಂದೆ ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಪಾಕಿಸ್ತಾನ ಭಾರತವನ್ನು ರುಸ್ತುಮ್ ಆಗಿ ಸೋಲಿಸಿತ್ತು. ಆದರೆ, ಅದೇನು ಪ್ರತೀತಿಯೋ, ವಿಶ್ವ ಕಪ್ ನ ಯಾವುದೇ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನು ಸೋಲಿಸಿಲ್ಲ. ಒಟ್ಟು 7 ಬಾರಿ ನಡೆದಿರುವ ಸೆಣಸಾಟದಲ್ಲಿ ಪಾಕಿಸ್ತಾನ ನೆಲ ಕಚ್ಚುತ್ತಲೇ ಬಂದಿದೆ. 

ಚಾಮರಾಜನಗರಕ್ಕೆ ಕರ್ನಾಟಕದ ಮುಖ್ಯಮಂತ್ರಿ ಪದವಿ ಅಲಂಕರಿಸಿದವರು ಭೇಟಿ ನೀಡಿದರೆ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಅನ್ನುವ ಮೂಢನಂಬಿಕೆ ರಾಜ್ಯದ  ಅನೇಕ ಮುಖ್ಯಮಂತ್ರಿಗಳನ್ನು ಕಾಡಿತ್ತು. ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿ ಆ ನಂಬಿಕೆ ಸುಳ್ಳೆಂದು ಸಾಧಿಸಿದ್ದರು. ವಿಶ್ವ ಕಪ್ ನಲ್ಲಿ ಭಾರತವನ್ನು ಮಣಿಸುವುದು ಸಾಧ್ಯವೇ ಇಲ್ಲ ಎಂಬ ನಂಬಿಕೆ 

ಇದೀಗ ಪಾಕಿಸ್ತಾನವನ್ನು ಕಾಡುತ್ತಿದೆ. ಇಲ್ಲದಿದ್ದರೆ ಕಪ್ ಈ ಬಾರಿ ತನ್ನದೇ ಎಂಬ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಇಂಗ್ಲೆಂಡ್ ನಂತಹ ಅತ್ಯುತ್ತಮ ತಂಡದ ವಿರುದ್ಧ ಮೊನ್ನೆ ಮೊನ್ನೆ 348 ರನ್ ಗಳಿಸಿ ಅದನ್ನು ಸೋಲಿಸಲಾಗುತ್ತಿರಲಿಲ್ಲ. 

ಟಾಸ್ ಸಮಯದಲ್ಲಿ ಪಾಕಿಸ್ತಾನದ ಮಾಜಿ ಬ್ಯಾಟ್ಸ್ ಮ್ಯಾನ್ ರಮೀಜ್ ರಾಜ, ಸರ್ಫ್ರಾಜ್  ಅಹ್ಮದ್ ರನ್ನು ಕಿಚಾಯಿಸುವಂತೆ ಇದುವರೆವಿಗೂ ಪಾಕಿಸ್ತಾನ ವಿಶ್ವ ಕಪ್ ನಲ್ಲಿ ಭಾರತದ ವಿರುದ್ಧ ಆರು ಬಾರಿ ಸೋತಿರುವುದರ ಬಗ್ಗೆ ಕೇಳಿ, ತಂಡದ ನಾಯಕ ಉತ್ತರಿಸುವ ಮೊದಲೇ "ಅದಕ್ಕೆ ನಿನ್ನೊಬ್ಬನನ್ನೇ ಹೊಣೆಗಾರನನ್ನಾಗಿಸುವುದು ಸರಿಯಲ್ಲ" ಎಂದಿದ್ದರು.

ಅದೇ ರಾಜ, ನೆನ್ನೆಯ ಪಂದ್ಯಕ್ಕೆ ಮುಂಚೆ, ಪಾಕಿಸ್ತಾನ ಇಡೀ ಟೂರ್ನಮೆಂಟ್ ಸೋತರೂ ಪರವಾಗಿಲ್ಲ, ಆದರೆ ಭಾರತದ ವಿರುದ್ಧ ಸೋಲುವುದನ್ನು ತನ್ನ ನಾಡಿನ ಜನ ಸಹಿಸಲಾರರು. ಅದೇ ಮಾತು ಭಾರತದ ಕ್ರೀಡಾಭಿಮಾನಿಗಳಿಗೂ ಅನ್ವಯಿಸುತ್ತದೆ ಎಂದಿದ್ದರು.

ಯಾರು ಅದೆಷ್ಟೇ ಸಮಚಿತ್ತತೆಯನ್ನು ಬೋಧಿಸಿದರೂ ಎರಡೂ ದೇಶದ ಕ್ರೀಡಾಭಿಮಾನಿಗಳಿಗೆ ಈ ಎರಡೂ ತಂಡಗಳು ಸೆಣಸುವ ದಿನ ಯೋಗಿಯಂತಿರಲಾಗದು,  ಇದ್ದರೆ ಅದನ್ನು ಮೀರಿದ ನೀರವತೆ ಮತ್ತೊಂದಿರಲಾರದು. ಭಾರತ ಗೆದ್ದಿದ್ದು ಸಂತೋಷವೇ, ಸಡಗರ ಪಡೋಣ. ಆದರೆ ಪಾಕಿಸ್ತಾನ ಸೋತದ್ದನ್ನು ಸಂಭ್ರಮಿಸಬೇಕೇ?  ಅದೇ ರೀತಿ, ಪಾಕಿಸ್ತಾನದ ಕ್ರೀಡಾಸಕ್ತರು ಕೂಡ ತಮ್ಮ ಹತಾಶೆಯನ್ನು ಟಿವಿ ಸೆಟ್ ಒಡೆಯುವ ಮೂಲಕ, ತಮ್ಮ ಆಟಗಾರರ ವಿರುದ್ಧ ಪ್ರತಿಭಟಿಸುವುದರ ಮೂಲಕ ವ್ಯಕಪಡಿಸುವ ಪ್ರವೃತ್ತಿಯಿಂದ ಹೊರಬರುವಂತಾಗಲಿ. 

ಪಾಕಿಸ್ತಾನದ ದೃಷ್ಟಿಯಿಂದ, ನೆನ್ನೆಯ ಫಲಿತಾಂಶ ಆ ತಂಡಕ್ಕೆ ಸಮಾಧಾನ ಒದಗಿಸಬೇಕಾದದ್ದು ಮೊಹಮದ್ ಅಮೀರ್ನ ಅಪೂರ್ವ ಬೌಲಿಂಗ್ ಸಾಧನೆಯಿಂದ. ಭಾರತದ ಗಳಿಕೆ 300 ರನ್ ಮೀರಿದ ಸಂದರ್ಭದಲ್ಲೂ ಅಮೀರ್ ಬ್ಯಾಟ್ಸ್ ಮ್ಯಾನ್ ಗಳಿಗೆ ಕಡಿವಾಣ ಹಾಕಿದ್ದರು. ಅವರ ಬೌಲಿಂಗ್ ನಲ್ಲಿ ಮೊದಲ ಬೌಂಡರಿ ಬಂದದ್ದು ಅವರ ಮೂರನೇ ಸ್ಪೆಲ್ ನಲ್ಲಿ. ಎಲ್ಲಿ ಅವರ ಎಸೆತಗಳನ್ನು ಮುಟ್ಟಿದರೆ ಶಾಕ್ ಹೊಡೆಯುವುದೋ ಅನ್ನುವಷ್ಟು ಜಾಗರೂಕರಾಗಿ ಬ್ಯಾಟ್ಸ್ ಮ್ಯಾನ್ ಗಳು ಆಡಿದರು. 10 ಓವರ್ ಗಳನ್ನು ಪೂರೈಸಿದ ಮತ್ತೊಬ್ಬ ಪಾಕ್ ಬೌಲರ್ ಇಮಾದ್ ವಸೀಮ್ ಕೂಡ ಅಮೀರ್ನಷ್ಟೇ ನಾಜೂಕಾಗಿ ಬೌಲ್ ಮಾಡಿದರು, ಆದರೆ ವಿಕೆಟ್ ಪಡೆಯಲಾಗಲಿಲ್ಲ. ಅಗ್ರಶ್ರೇಣಿಯ ವೇಗಿ ವಾಹಬ್ ರಿಯಾಜ್ ಬ್ಯಾಟ್ಸ್ ಮ್ಯಾನ್ ಗಳ ಮೇಲೆ ಗಣನೀಯವಾಗಿ ಪರಿಣಾಮ ಬೀರಲಾಗಲಿಲ್ಲ. 

ಹನ್ನೆರಡನೇ ಓವರ್ ಅಷ್ಟು ಹೊತ್ತಿಗಾಗಲೇ ಪಾಕ್ ತನ್ನ ಐದನೇ ಬೌಲರನ್ನು ಪರಿಚಯಿಸಿತ್ತೆಂದರೆ ಭಾರತದ ಸಾಧನೆಯ ಪರಿಚಯವಾಗುತ್ತದೆ. ಆದರೆ, ಅಷ್ಟು ಹೊತ್ತಿಗಾಗಲೇ ಅಮಿರ್ ಎರಡು ಬಾರಿ ನಿರ್ಬಂಧಿತ ಪ್ರದೇಶದಲ್ಲಿ ಅತಿಕ್ರಮಣವಾಗಿ ಕಾಲಿರಿಸಿ ಅಂಪೈರ್ ನ ಎಚ್ಚರಿಕೆ ಪಡೆದಿದ್ದರು. ಮತ್ತೊಂದು ಬಾರಿ ಡೇಂಜರ್ ಏರಿಯಾನಲ್ಲಿ ಕಾಲಿರಿಸಿದ್ದಿದ್ದರೆ, ಉಲ್ಲಂಘನೆಗಾಗಿ ಅವರ ಬೌಲಿಂಗ್ ಮೇಲೆ ನಿಷೇಧ ಹೇರುವ ಸಾಧ್ಯತೆಯಿದ್ದುದ್ದರಿಂದ ಅವರ ಬೌಲಿಂಗನ್ನು ಮುಂದುವರಿಸದಿರುವ ನಿರ್ಣಯ ತೆಗೆದುಕೊಂಡಿರಲೂ ಸಾಕು.  ರಿಯಾಜ್ ವಾಹಬ್ ಕೂಡ ಅದೇ ರೀತಿಯ ಅತಿಕ್ರಮಣವನ್ನೆಸಗಿದರು.

ಶದಬ್ ಖಾನ್ ಕೆಟ್ಟ ಮೊದಲನೇ ಓವರ್ ಎಸೆದರಾದರೂ ಶೀಘ್ರದಲ್ಲೇ ತಮ್ಮ ಬೌಲಿಂಗ್ ಮೇಲೆ ತಕ್ಕ ಮಟ್ಟಿನ ನಿಯಂತ್ರಣ ಪಡೆದರು. ಮತ್ತೊಂದು ತುದಿಯಲ್ಲಿ ಅವರಿಗೆ ಸಾಥ್ ನೀಡುತ್ತಿದ್ದವರು ಇಮಾದ್ ವಸೀಮ್. ಇದ್ದುದರಲ್ಲಿ ಬ್ಯಾಟ್ಸ್ ಮ್ಯಾನ್ ಗಳ ಮೇಲೆ ಒತ್ತಡ ಹೇರಿದ್ದ ಈ ಇಬ್ಬರು ಬೌಲರ್ ಗಳನ್ನು ಬದಲಾಯಿಸಿ ಇಬ್ಬರು ಆಫ್ ಬ್ರೇಕ್ ಬೌಲರ್ ಗಳಾದ ಶೋಯೆಬ್ ಮಾಲಿಕ್ ಮತ್ತು ಮೊಹಮ್ಮದ್ ಹಫೀಜ್ ರನ್ನು ಪರಿಚಯಿಸಿದ್ದು ಸರ್ಫ್ರಾಜ್ ರ ಅನುಭವಿ ನಾಯಕತ್ವಕ್ಕೆ ಉದಾಹರಣೆ ಒದಗಿಸಿತ್ತು. ಆಗ ಬ್ಯಾಟ್ ಮಾಡುತ್ತಿದ್ದ ಇಬ್ಬರೂ ಬಲಗೈ ಆಟಗಾರರು. ಈ ಇಬ್ಬರು ಹೊಸ ಬೌಲರ್ ಗಳು ಮಾಡಿದ ಒಂದು ಓವರ್ ನಲ್ಲಿ ನೀಡಿದ್ದು ತಲಾ 11 ರನ್.   

ಎರಡನೇ ವಿಕೆಟ್ ಗಿಂತ ಜತೆಯಾದ ಫಕರ್ ಝಮಾನ್ ಮತ್ತು ಬಾಬರ್ ಅಜಮ್ ಮೂಡಿಸಿದ ಆಶಾಭಾವನೆ ಬಿಟ್ಟರೆ ಪಾಕಿಸ್ತಾನ ಗೆಲ್ಲುವಂಥ ಯಾವುದೇ ಲಕ್ಷಣ ಇಡೀ ಮ್ಯಾಚ್ ನಲ್ಲಿ ಕಂಡು ಬರಲಿಲ್ಲ. 

"ರೆ"ಗಳು ಯಾವುದೇ ಗತಘಟನೆಯನ್ನು ಬದಲಿಸಲಾರದು. ಒಂದು ವೇಳೆ, ಆಗಿನ್ನೂ  ಐವತ್ತು ರನ್ಗಳನ್ನೂ ಗಳಿಸಿರದಿದ್ದ ರೋಹಿತ್ ಶರ್ಮ ರನ್ ಔಟ್ ಆಗಿಬಿಟ್ಟಿದ್ದ"ರೆ", ಭಾರತ ಅಷ್ಟು ಬೃಹತ್ ಸ್ಕೋರ್ ಪೇರಿಸುತ್ತಿತ್ತೇ?  ಔಟ್ ಆದೆನೆಂದೆಣಿಸಿ ವಿರಾಟ್ ವಿನಾ ಕಾರಣ ಪೆವಿಲಿಯನ್ ಗೆ  ವಾಪಸಾಗದಿದ್ದ"ರೆ" ಭಾರತ 350 ರನ್ ಗಳಿಸುತ್ತಿತ್ತೇ? ಈ ಮುಂತಾದ ಪ್ರಶ್ನೆಗಳನ್ನು ಯಾರೂ ಸಮರ್ಪಕವಾಗಿ ಉತ್ತರಿಸಲಾರರು. 

ಮತ್ತೆ ಭಾರತದ ಆಟವನ್ನು ಗಮನಿಸೋಣ. ಆಕ್ರಮಣಶೀಲತೆಯೊಂದಿಗೆ ಗುರುತಿಸಿಕೊಂಡಿರುವ ಲೋಕೇಶ್ ರಾಹುಲ್ ಮೊತ್ತ ಮೊದಲ ಬಾರಿಗೆ ವಿಶ್ವ ಕಪ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಬಡ್ತಿ ಪಡೆದರು. ತಮ್ಮ ಆಕ್ರಮಣ ಪ್ರವೃತ್ತಿಯನ್ನು ಬದಿಗಿಟ್ಟು ಸಂದರ್ಭಕ್ಕೆ ತಕ್ಕಂತೆ ಆಡಿ, ತಮ್ಮ ಜವಾಬ್ದಾರಿಯುತ ನಡವಳಿಕೆಯನ್ನು ಪ್ರದರ್ಶಿಸಿದ್ದಾರೆ. ಮೂಳೆ ಮುರಿತದಿಂದ ಸದ್ಯಕ್ಕೆ ಅಲಭ್ಯವಾಗಿರುವ ಶಿಖರ್ ಧಾವನ್ ಕೂಡ  ಆಕ್ರಮಣ ಪ್ರವೃತ್ತಿಯವರೇ. ಅವರ ಜತೆ ಆಡುವಾಗ, ತಣ್ಣಗೆಯೇ ತನ್ನ ಇನ್ನಿಂಗ್ಸ್ ಆರಂಭಿಸಿ, ಆ ನಂತರ ಹೊಡೆತಕ್ಕೆ ಮುಂದಾಗುವ ರೋಹಿತ್ ಕೂಡ ತನ್ನ ಆಟದ ಗತಿಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಾಯಿಸಿದ್ದು ನೆನ್ನೆಯ ವೈಶಿಷ್ಠ್ಯ. ಸೂಕ್ತ ಸಮಯದಲ್ಲಿ, ಆ ಗತಿಯನ್ನು ಮತ್ತಷ್ಟು ಚುರುಕುಗೊಳಿಸುವ ಯತ್ನದಲ್ಲಿ ವಿಕೆಟ್ ಒಪ್ಪಿಸಿದರೇ ಹೊರತು, ಪಾಕಿಸ್ತಾನದ ಬೌಲರ್ ಗಳ ಒತ್ತಡದಿಂದಲ್ಲ. 

ವಿರಾಟ್ ತಮ್ಮ ಎಂದಿನ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ರೋಹಿತ್ ದ್ವಿಶತಕ ಗಳಿಸಿ, ವಿರಾಟ್ ಶತಕ ಗಳಿಸಿದ್ದರೆ ಅದು ಅವರಿಬ್ಬರೂ ತಮ್ಮ ತಂಡಕ್ಕೆ ನೀಡಿದ ಕಾಣಿಕೆಗೆ ಮತ್ತಷ್ಟು ಮೆರುಗು ಕೊಡುತ್ತಿತ್ತು ಅನ್ನುವುದು ನಿರ್ವಿವಾದ. 

ವಿಜಯ್ ಶಂಕರ್ ತಮ್ಮ ಚೊಚ್ಚಲ ವಿಶ್ವ ಕಪ್ ಪಂದ್ಯವನ್ನಾಡಿದರು. ಅವರು ಮತ್ತು ಕೇದಾರ್ ಜಾಧವ್ ಇನ್ನೂ ರಭಸವಾಗಿ ಆಡಬಹುದಿತ್ತೇನೋ. ಕಾಲುನೋವಿನಿಂದ ಭುವನೇಶ್ವರ್ ಕುಮಾರ್ ತಮ್ಮ ಓವರ್ ಮಧ್ಯದಲ್ಲೇ ಪೆವಿಲಿಯನ್ಗೆನ ವಾಪಸ್ ತೆರಳಬೇಕಾದ್ದರಿಂದ ಓವರ್ ಪೂರೈಸಲು ಬಂದ ವಿಜಯ್ ಮೊದಲ ಎಸೆತದಲ್ಲೇ ವಿಕೆಟ್ ಪಡೆದದ್ದು ಹೆಗ್ಗಳಿಕೆಯೇ ಸರಿ. ಮುಂದಿನ ಒಂದೆರಡು ಪಂದ್ಯಗಳಲ್ಲಿ ಭುವಿ ಆಡದ ಕಾರಣ ತಂಡದ ಬೌಲಿಂಗ್ ಮೇಲೆ ಬೀರುವ ಒತ್ತಡ ವಿಜಯಶಂಕರ್ ಸಾಧನೆಯಿಂದ ತಕ್ಕ ಮಟ್ಟಿಗೆ ಕಡಿಮೆಯಾಗಿದೆ. ಕರಾರುವಕ್ಕಾಗಿ ಬೌಲ್ ಮಾಡುತ್ತಿದ್ದ ಯಜುವೇಂದ್ರ ಚಹಲ್ ತಮ್ಮ ಇಂದಿನ ನಿಯಂತ್ರಣ ಕಳೆದುಕೊಂಡರೆ ಅಷ್ಟೇನೂ ಪ್ರಭಾವ ಬೀರದಿದ್ದ ಕುಲದೀಪ್ ಯಾದವ್ ನೆನ್ನೆ ಉತ್ತಮ ಪ್ರದರ್ಶನ ನೀಡಿದರು. ಈ ಎಲ್ಲದರ ನಡುವೆ ಅದ್ವಿತೀಯ ಬೌಲರ್ ಜಸ್ಪ್ರೀತ್ ಬುಮ್ರಾ ಎಂಟು ಓವರ್ ಗಳಲ್ಲಿ 52 ರನ್ ಚೆಲ್ಲಿದ್ದಾಗಲೀ, ವಿಕೆಟ್ಟೇ ಪಡೆಯದಿದ್ದುದನ್ನಾಗಲೀ ಯಾರೂ ಗಮನಿಸಿದಂತಿಲ್ಲ.     

ಏತನ್ಮಧ್ಯೆ, ಭುವಿಯ ಸ್ಥಾನವನ್ನು ಮೊಹಮದ್ ಶಮಿ ತುಂಬುವುದರಿಂದ ಯಾವುದೇ ಆತಂಕಕ್ಕೆ ಕಾರಣವಿಲ್ಲ ಎಂಬ ಆತ್ಮ ವಿಶ್ವಾಸವನ್ನು ವಿರಾಟ್ ವ್ಯಕ್ತಪಡಿಸಿದ್ದಾರೆ. 

ಒಂದೂ ಪಂದ್ಯವನ್ನೂ ಸೋಲದ ಎರಡು ತಂಡಗಳಾದ ನ್ಯೂಜಿಲ್ಯಾಂಡ್ ಮತ್ತು ಭಾರತ ಅಂಕಪಟ್ಟಿಯಲ್ಲಿ ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿವೆ. ನ್ಯೂಜಿಲ್ಯಾಂಡ್ ಮೇಲೆ ಆಸ್ಟ್ರೇಲಿಯಾ ಇದ್ದರೆ ಭಾರತದ ಬುಡದಲ್ಲೇ ಇಂಗ್ಲೆಂಡ್ ಇದೆ. ಈ ನಾಲ್ಕು ತಂಡಗಳೂ ಯಾರು ಯಾರ ಮೇಲೆ ಎಂದು ಬೇಕಾದರೂ ವಿಕ್ರಮ ಸಾಧಿಸಬಹುದು ಎನ್ನುವಂಥ  ಸಮಬಲವನ್ನು ಪಡೆದಿವೆ.