ಪಡಿತರದಲ್ಲಿ ಸಿಗುತ್ತೆ ಮೊಟ್ಟೆ, ಮೀನು, ಮಾಂಸ

ನಮ್ಮ ರಾಷ್ಟ್ರದಲ್ಲಿ ಕೋಟ್ಯಂತರ ಜನ ಅದರಲ್ಲೂ ಮಕ್ಕಳು ಪೋಷಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ,  ಇದು ಬೇರೆ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಸ್ವಲ್ಪ ಜಾಸ್ತಿಯೇ ಇದೆ.

ಪಡಿತರದಲ್ಲಿ ಸಿಗುತ್ತೆ ಮೊಟ್ಟೆ, ಮೀನು, ಮಾಂಸ

ಜನರ ಕೈಯಲ್ಲಿ ಕಾಸು ಓಡಾಡುತ್ತಿದ್ದರೂ, ಫಿಜ್ಜಾ, ಬರ್ಗರ್ ಇತ್ಯಾದಿಯಂಥ ಮಸಾಲಾ ಆಹಾರ, ಎಣ್ಣೆ, ಸಕ್ಕರೆ, ಕೊಬ್ಬಿನ ಆಹಾರದೆಡೆಗೆ ಹೆಚ್ಚು ಲೋಲುಪರಾಗುತ್ತಿದ್ದಾರೆ ಹೊರತು ಪೌಷ್ಠಿಕ ಆಹಾರ ತಿನ್ನಬೇಕು ಎಂಬುದನ್ನೇ ಮರೆಯುತ್ತಿದ್ದಾರೆ. ಇದರಿಂದಾಗಿ ನಮ್ಮ ರಾಷ್ಟ್ರದಲ್ಲಿ ಕೋಟ್ಯಂತರ ಜನ ಅದರಲ್ಲೂ ಮಕ್ಕಳು ಪೋಷಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ,  ಇದು ಬೇರೆ ರಾಷ್ಟ್ರಗಳಿಗೆ ಹೋಲಿಸಿಕೊಂಡರೆ ಸ್ವಲ್ಪ ಜಾಸ್ತಿಯೇ ಇದೆ.

ಇದನ್ನೇ ಆಧಾರವಾಗಿಟ್ಟುಕೊಂಡು ನೀತಿ ಆಯೋಗ, ಪಡಿತರ ವ್ಯವಸ್ಥೆಯಲ್ಲಿ ಮೊಟ್ಟೆ, ಮೀನು, ಕೋಳಿ ಮತ್ತು ಕುರಿ ಮಾಂಸ ವಿತರಿಸುವ ಶಿಫಾರಸನ್ನು ಸರ್ಕಾರಕ್ಕೆ ಮಾಡಲು ಮುಂದಾಗಿದೆ. ಬಡಜನರಿಗೆ ರಿಯಾಯಿತಿ ದರದಲ್ಲಿ ಅಗತ್ಯ ಆಹಾರ ಧಾನ್ಯ ದೊರಕಿಸುವುದಕ್ಕಾಗಿ ಪ್ರಸಕ್ತ ಸಾಲಿನಲ್ಲಿ 1.84 ಲಕ್ಷ ಕೋಟಿ ರೂಪಾಯಿಗಳಷ್ಟು ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಕೊಡುತ್ತಿದೆ. ಈ ಪಟ್ಟಿಗೀಗ ಮೊಟ್ಟೆ ಮಾಂಸ ಮೀನನ್ನೂ ಸೇರಿಸುವ ತನ್ನ ಹದಿನೈದು ವರ್ಷಗಳ ದೃಷ್ಟಿಕೋನದಲ್ಲಿ  ಪ್ರಸ್ತಾಪವನ್ನೊಂದಿದೆ.

ನೀತಿ ಆಯೋಗ ಈ ಚಿಂತನೆಯನ್ನು ಹೊಂದಿರುವುದು ಹೊಸದಾದರೂ, ನಮ್ಮ ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ, ಅನ್ನಭಾಗ್ಯ, ಕ್ಷೀರಭಾಗ್ಯ ಯೋಜನೆಗಳನ್ನು ತಂದ ಮಾದರಿಯಲ್ಲೇ, ಕುರಿ ಅಭಿವೃದ್ದಿ ನಿಗಮದ ಮೂಲಕ ಕುರಿ ಮಾಂಸ ಮಾರಾಟದ ಮಳಿಗೆಗಳನ್ನು ರಾಜ್ಯದಾದ್ಯಂತ ಆರಂಭಿಸಬೇಕು, ಆ ಮೂಲಕ ಉತ್ತಮ ಮಾಂಸ  ಕಡಿಮೆ ಬೆಲೆಯಲ್ಲಿ ಜನರಿಗೆ ದೊರೆವಂತಾಗುವ ಜತೆಯಲ್ಲೇ ಕುರಿ ಸಾಕಣೆದಾರರಿಗೆ ನೆರವಾಗುತ್ತೆ, ಜತೆಗೆ ಕುರುಬ ಕುಲವೃತ್ತಿಗೂ ಒಳ್ಳೆಯ ಕೆಲಸ ಮಾಡಿದಂತಾಗುತ್ತೆ ಎಂಬ ಚಿಂತನೆಯನ್ನು ಹೊಂದಿದ್ದರು. ಆ ಕುರಿತು ತನ್ನ ಆಪ್ತ ಬಳಗದ ಜತೆ ಚರ್ಚಿಸಿಯೂ ಇದ್ದರು. ಆದರೆ ಕಾರ್ಯ ಅನುಷ್ಠಾನಕ್ಕೆ ಬರಲಿಲ್ಲ ಅಷ್ಟೇ.

ಈಗ ನೀತಿ ಆಯೋಗ ಇದೇ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿರುವುದು ವಿಶೇಷ.  ಆದರೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮೊಟ್ಟೆ ಕೊಡುವ ಪ್ರಸ್ತಾಪಕ್ಕೆ ದೊಡ್ಡ ಮಟ್ಟದಲ್ಲೇ ವಿರೋಧವೂ ವ್ಯಕ್ತವಾಗಿದ್ದವು. ಬಿಸಿಯೂಟದಲ್ಲಿ ಈಗಲೂ ಕೆಲವೆಡೆ ತಾಮಸಕಾರಿಯಾದ  ಈರುಳ್ಳಿ, ಬೆಳ್ಳುಳ್ಳಿಯನ್ನೂ ಬಳಸದಿರುವ ಪ್ರಕರಣಗಳೂ ವರದಿಯಾಗುತ್ತಲೇ ಇವೆ.  ಇಂಥ ಎಡಬಿಡಂಗಿ ಹೋರಾಟಗಳು ಕೊಂಕುಗಳು ಪ್ರಚಲಿತದಲ್ಲಿರುವಾಗ `ಒಂದೇ ದೇಶ ಒಂದೇ ಕಾರ್ಡು' ಎಂದು ಪಡಿತರ ವ್ಯವಸ್ಥೆಯನ್ನು ಬದಲಾಯಿಸುತ್ತಾ ಹೋಗುತ್ತಿರುವಾಗ, ಇದರಲ್ಲಿ ಮೊಟ್ಟೆ ಮೀನು ಮಾಂಸ ವಿತರಣೆಯನ್ನು ಸೇರಿಸಿದರೆ ಅದೆಷ್ಟು ಪ್ರತಿರೋಧಗಳು ವ್ಯಕ್ತವಾಗುತ್ತವೋ ಬಲ್ಲವರಿಲ್ಲ.