ನಮ್ಮ ಕಾಲಘಟ್ಟದಲೊಬ್ಬ ನೀತಿವಂತ..!!

ನಮ್ಮ ಕಾಲಘಟ್ಟದಲೊಬ್ಬ ನೀತಿವಂತ..!!

ಕಳೆದ ಒಂದೆರಡು ವಾರಗಳಿಂದ ಸದನವನ್ನು ನೋಡುತಿದ್ದೇವೆ .ಅನೇಕ ರೀತಿಯ ಘಟನಾವಳಿಗಳು ನಾಟಕೀಯ ತಿರುವುಗಳನ್ನು ಅಲ್ಲಿ ಕಾಣುತಿದ್ದೇವೆ! ಈ ಮಧ್ಯೆ ಸ್ಪೀಕರ್ ರಮೇಶ್ ಕುಮಾರ್ ರವರು ತಮ್ಮ ನಿಷ್ಠುರತೆ, ನ್ಯಾಯಪರತೆ, ಪ್ರಾಮಾಣಿಕತೆ, ಸರಳತೆಯೇ ಮುಂತಾದುವಕ್ಕೆ ಸಂಬಂಧಪಟ್ಟಂತೆ  ತಮ್ಮ ಬಗ್ಗೆ  ಕರುಳಿನಾಳದಿಂದ ಹೇಳಿಕೊಳ್ಳುವಂತಹ ಕರುಣಾಜನಕ ಮಾತುಗಳನ್ನು ಕೇಳಿ ಕರ್ನಾಟಕದ ಜನ ಅವರನ್ನು ಹಾಡಿ ಹೊಗಳುತಿದ್ದಾರೆ! "ಇಂಥವರೊಬ್ಬರು ಈ ನಾಡಿನಲ್ಲಿ ಜನಿಸಿದ್ದು ನಮ್ಮ ಪುಣ್ಯ.." ಎಂದು ಕೊಂಡಾಡುತಿದ್ದಾರೆ!  "ಪ್ರಾಮಾಣಿಕರು (ನಮ್ಮಂತಹ) ಈ ದೇಶದಲ್ಲಿ ಬದುಕಲೇ ಬಾರದೆ.." ಎಂದು ರಮೇಶ್ ಕುಮಾರ್ ಗದ್ಗರಿತರಾದಾಗ  ಟಿವಿ ವೀಕ್ಷಕರನೇಕರು ಸಾಯಿಪ್ರಕಾಶ್ ನಿರ್ದೇಶನದ ತಾಯಿ ಕರುಳಿಗೆ ಸಂಬಂಧಿಸಿದ ಯಾವುದೋ  ಸಿನಿಮಾದಲ್ಲಿ ಕುಂತು ಅತ್ತಂತೆ ಸೊರಸೊರ ಎಂದು ಮೂಗಿನ ಸಿಂಬಳ ಗಂಟಲಿಗೆ ಎಳೆಯುತ್ತಾ ಕಣ್ಣೀರಿಡುತಿದ್ದರು! 

"ಹರಿದ ಬಟ್ಟೆ ಹೊಲಿಸಿಕೊಳ್ಳಲು ಟೈಲರ್ ಬಳಿ ಹೋಗಿದ್ದೆ.." ಎಂದಾಗ ಕರ್ನಾಟಕದ ಕರುಳಿಗೇ ಸುರ್ ಸುರ್ ಬತ್ತಿ ಇಟ್ಟಂತೆ ಕನ್ನಡದ ಜನತೆಯ ಕರುಳು ಚುರ್ ಎಂದಿತು!!

"ನನ್ನ ಬದುಕು ನಿಮಗೆ ಗೊತ್ತೇನ್ರಿ..? ನನ್ನ ಕಾರಿನ ಮೇಲಿದ್ದ ಕೆಂಪು ದೀಪವನ್ನು ತೆಗೆಸಿ, ಯಾವ ಜೀರೋ ಟ್ರಾಫಿಕ್ಕೂ ಇಲ್ಲದೆ ಸರಳವಾಗಿ ಬದುಕುತಿದ್ದೇನೆ.. ನನ್ನ ಕಡೆ ಕೈತೋರುವ ಮುಂಚೆ ನಿಮ್ಮ ಹಿನ್ನೆಲೆಗಳನ್ನು ಒಮ್ಮೆ ನೋಡಿಕೊಳ್ಳಿ.." ಎಂದು ಗುಡುಗಿದಾಗ ಇಡೀ ಸದನ ಮರುಮಾತಾಡದೆ ಮೌನವಾಗಿ ತಲೆತಗ್ಗಿಸಿತ್ತು! "ನಾವೂ ನಿಮ್ಮಷ್ಟೇ ಪ್ರಾಮಾಣಿಕವಾಗಿ ಬದುಕುತಿದ್ದೇವೆ" ಎಂದು ಹೇಳುವ ಧೈರ್ಯ ಅಲ್ಲಿದ್ದ‌ ಸುಮಾರು ಇನ್ನೂರಕ್ಕೂ ಮೀರಿ ಇದ್ದ ಶಾಸಕರಲ್ಲಿ ಯಾರಿಗೂ ಇಲ್ಲದಂತಾಯಿತು!!

ಇಡೀ ಸದನದ ಹಿರಿಯ ಸದಸ್ಯರು ರಮೇಶ್ ಕುಮಾರ್ ರವರ ನಿಷ್ಠುರತೆ, ನೇರ ಮಾತುಗಳನ್ನು ಕುರಿತು ಪ್ರಶಂಸಿಸುವುದು ಅವಕಾಶ ಸಿಕ್ಕಂತೆ ರಮೇಶ್ ಕುಮಾರ್ ಅವರು ಸದನದಲ್ಲಿ ಇರುವ ಹಿರಿಯರನ್ನು ಉದಾಹರಿಸುವುದು . ಈ ಮದ್ಯೆ‌ ರಮೇಶ್ ಕುಮಾರ್ ರವರು ಶಾಂತವೇರಿ ಗೋಪಾಲಗೌಡ, ಶ್ಯಾಂ ಪ್ರಸಾದ್ ಮುಖರ್ಜಿ, ಸುಂದರಯ್ಯ, ಇಂದಿರಾಗಾಂಧಿ, ಕೆ.ಎಚ್.ರಂಗನಾಥ್, ದೇವೇಗೌಡರಾದಿಯಾಗಿ ಎಲ್ಲಾ ಪಕ್ಷಗಳಿಗೆ ಸೇರಿದ, ಜಾತಿಗಳಿಗೆ ಸೇರಿದ ನಾಯಕರನ್ನು ಜಾತಿಭೇದ, ಪಕ್ಷಭೇದಗಳನ್ನು ಬದಿಗೊತ್ತಿ ಇತಿಹಾಸದ ಪಾಠಗಳನ್ನು ನೆನಪಿಸುವುದು, ಅವರೊಂದಿಗೆ ತಮ್ಮನ್ನು ಇಟ್ಟು ನೋಡಿಕೊಳ್ಳುವುದು, ಅವಕಾಶ ಸಿಕ್ಕಿ ಬಾವುಕರಾದಾಗ ಕಣ್ಣಲ್ಲಿ ನೀರು ಹಾಕಿಕೊಳ್ಳುವುದು, ಸದನದಲ್ಲಿ ಬೋರ್ ಆಗಬಾರದೆಂದು ಹಾಸ್ಯಪ್ರಜ್ಞೆ ಯಿಂದ ಜೋಕ್ ಮಾಡುವುದು, ಎಂದೋ ಎಲ್ಲೋ ನಡೆದ ಹಳೆಯ ಘಟನಾವಳಿಗಳನ್ನು ಸಾಂದರ್ಭಿಕವಾಗಿ  ನೆನಪಿಸುವುದು, ಭಾವುಕರಾಗುವುದು, ಬೇಸರವಾದಾಗ ಬೇಸರ ಮಾಡಿಕೊಳ್ಳುವುದು,ಕೋಪಬಂದಾಗ ಕೋಪಿಸಿಕೊಳ್ಳುವುದು, ಎಲ್ಲವನ್ನೂ ನಿರ್ಲಕ್ಷಿಸಿದಂತೆ ಮುಖಭಾವ ಹೊಂದುವುದು. ಸಮಯ ಸಿಕ್ಕರೆ ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪರಂತವರನ್ನು  ಅವರಿಗೆ ಮುಜುಗರ‌ ಆಗದಂತೆ ಸಕಾಲಿಕವಾಗಿ ಮುಖಸ್ತುತಿ ಮಾಡುವುದು. ತಮ್ಮ ಸರಳತೆ, ಪ್ರಾಮಾಣಿಕತೆಗಳ ಬಗ್ಗೆ  ಅವಶ್ಯವಿದ್ದಾಗ ಮಾತ್ರ ಮತ್ತೆ ಮತ್ತೆ ಹೇಳುವುದು, ತಾವು ನಿಷ್ಠುರತೆಯಿಂದ ಬದುಕುತ್ತಿರುವುದಾಗಿ ಸದನಕ್ಕೆ ಆಗಿಂದಾಗ್ಗೆ ಮನವರಿಕೆ ಮಾಡುವುದು... ಹೀಗೆ ಒಂದಲ್ಲ ನೂರಾರು ರೀತಿಗಳಲ್ಲಿ ಸದನವನ್ನು ನಿಭಾಯಿಸುತ್ತಾ ಸದನ ಹಾಗೂ ಬಾಹ್ಯ ಜಗತ್ತಿನಲ್ಲಿ ತಮ್ಮ ಬಗ್ಗೆ ಒಂದು ಸರ್ವೋನ್ನತವಾದ ಇಮೇಜ್ ವೊಂದನ್ನು ಸೃಷ್ಟಿಸಿಕೊಂಡಿದ್ದಾರೆ.

ಒಂದೇ ಮಾತಿನಲ್ಲಿ ಹೇಳುವುದಾದರೆ ಟಿ.ಎನ್.ಸೀತಾರಾಮ್ ರವರ 'ಮುಕ್ತ ಮುಕ್ತ' ದಾರವಾಹಿಯಲ್ಲಿ "ಇವರು ನಟಿಸಲೇಯಿಲ್ಲ ಸಹಜವಾಗಿ ನಡೆದುಕೊಂಡಂತಿದ್ದರು‌" ಎನ್ನುತಿದ್ದ ಜನ ಈಗ ಸದನದಲ್ಲಿ ಅವರ ಹಾವಭಾವ, ಮೋಡಿ, ಮಾತು ನೋಡಿ ಮಂತ್ರಮುಗ್ದರಾಗಿ 'ಅದ್ಬುತವಾಗಿ ನಟಿಸಿದರು..!" ಎಂದು ಉದ್ಗಾರ ತೆಗೆಯುತ್ತಿದ್ದಾರೆ..!

ರಮೇಶ್ ಕುಮಾರ್ ರವರ ರಾಜಕಾರಣದ ಬಗ್ಗೆ ಕನಿಷ್ಟ ಎರಡು ದಶಕಗಳ ಕಾಲ 'ಲಂಕೇಶ್ ಪತ್ರಿಕೆ'ಗೆ ವರದಿ ಮಾಡಿದ್ದೇನೆ. ಈತ ಶ್ರೀನಿವಾಸಪುರದ ಶಾಸಕರಾಗಿ, ಜನಪ್ರಿಯರಾಗಿ ಸತತವಾಗಿ ನಾಕಾರು ಸಲ ಗೆದ್ದು, ಸ್ವಲ್ಪ ಹೆಚ್ಚುಕಡಿಮೆ ಅಷ್ಟೇ ಸಲ ಸೋತು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಯ ಕಾರ್ಯಗಳ ಬಗ್ಗೆ ಆಸಕ್ತರು ಒಮ್ಮೆ ನೋಡಿ ಬರಬೇಕು..! ನೀವೇ ದಂಗಾಗುತ್ತೀರಿ!

ಇವರನ್ನು ಇವರ ವಿರೋಧಿಗಳು ಎಂದೂ ಸುಮ್ಮನೆ ಬಿಡಲಿಲ್ಲ! ಇಲ್ಲಿನ ಕೊಲೆಗಡುಕ ರಕ್ತಸಿಕ್ತ ರಾಜಕಾರಣದಲ್ಲಿ ಇವರ ಹೆಸರು ಸದಾ ಅವ್ಯಾಹತವಾಗಿ ಹರಿದಾಡುವಂತೆ ಮಾಡಿದರು! ಇವರು 61 ಎಕರೆ ಅರಣ್ಯ ಭೂಮಿಯನ್ನು ಕಬಳಿಸಿದ ಬಗ್ಗೆ ದೊಡ್ಡ ಹಗರಣವನ್ನೇ ಮಾಡಿದರು, ಆ ಹಗರಣದ ಇಲಾಖೆಯ ದಾಖಲೆಗಳು ಮತ್ತು ಕಾನೂನು ಹಾದಿಯನ್ನು ಯಾರಾದರೂ ಒಮ್ಮೆ ಬಗೆದು ನೋಡಬೇಕು..? ನಿಮಗೆ ಸತ್ಯದ ದರ್ಶನವಾಗುತ್ತದೆ!

ಹಿಂದೊಮ್ಮೆ ರಮೇಶ್ ಕುಮಾರ್ ಪಿಸ್ತೂಲು ಹಿಡಿದು ಕೋಲಾರದ ಎಸ್.ಪಿ.ಆಫೀಸಿಗೆ ನುಗ್ಗಿದ್ದು, ಈಚೆಗೆ ಚಪ್ಪಲಿ ಕೈಯಲ್ಲಿ ಹಿಡಿದು ದೃಶ್ಯ ಮಾಧ್ಯಮದ ಆಫೀಸಿಗೆ ನುಗ್ಗಿದ್ದು!! ಅವರು ಅನ್ಯಾಯವನ್ನು ಸಹಿಸುವುದಿಲ್ಲ ಎಂಬುದನ್ನು ಸಾಬೀತು  ಮಾಡಿವೆ!

ಮಾತುಮಾತಿಗೂ ದೇವರಾಜ ಅರಸು ಹೆಸರು ಹೇಳುವ ಇವರು ಅರಸರ ಕಟ್ಟಾ ಅನುಯಾಯಿ ಆದರೂ ಇವರು ಅರಸರಿಂದ ಹೇಗೆ ಹೊರಬಂದರು? ರಾಮಕೃಷ್ಣ ಹೆಗಡೆಯವರ ಅನುಯಾಯಿಯೂ ಆಗಿದ್ದ ಇವರು ಹೆಗಡೆಯವರಿಂದ ಹೇಗೆ ಹೊರಬಂದರು? ಈ ಇತಿಹಾಸವನ್ನು ಒಮ್ಮೆ ಕೆಣಕಿದರೆ ಇವರ ಪ್ರಾಮಾಣಿಕತೆಯ ಅನಾವರಣವಾಗುತ್ತೆ!?

ಒಮ್ಮೆ ಸ್ವತಂತ್ರವಾಗಿ, ಮತ್ತೊಮ್ಮೆ ‌ಮಗದೊಮ್ಮೆ ಜನತಾ ಅಥವಾ ಜೆಡಿಎಸ್ ನಿಂದ, ನಂತರ ಕಾಂಗ್ರೆಸ್ ನಿಂದ ನಿಂತು ಸೋತು ಗೆದ್ದು ಶಾಸಕರಾದವರು ಹಿಂದೊಮ್ಮೆ ಸ್ಪೀಕರ್‌ ಆಗಿ ನಂತರ ಮಂತ್ರಿಯಾದರು. ಮಂತ್ರಿ ಆಗುವ ಮುಂಚೆ ಈತ ಸತತವಾಗಿ ತಮ್ಮದೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು "ಅಧಿಕಾರಕ್ಕಾಗಿ ಗೂಟ ಹೊಡೆದುಕೊಂಡು ಸುಮ್ಮನೆ ಕೂರುವವನಲ್ಲ.." ಎಂದು ಹೇಳುತ್ತಲೇ ಮಂತ್ರಿ ಗಿರಿ ಸಿಕ್ಕಾಕ್ಷಣ ಸರ್ಕಾರಕ್ಕೆ ಮುಜುಗರವಾಗಬಾರದೆಂದು ತಣ್ಣಗಾಗಿದ್ದು ಇವರ ಸಮಯಪ್ರಜ್ನೆಯನ್ನು ತೋರುತ್ತದೆ.

ಈಚೆಗೆ ಕೆ.ಎಚ್.ಮುನಿಯಪ್ಪನವರ 'ಕೆಟ್ಟ' ರಾಜಕಾರಣದಿಂದ ಬೇಸತ್ತು ಪಕ್ಷಬೇದ ತೊರೆದು ತನ್ನದೇ ಪಕ್ಷದ ಕೆ.ಎಚ್.ಮುನಿಯಪ್ಪನವರನ್ನು ಸೋಲಿಸಲು ಬಿ.ಜೆ.ಪಿ.ಯ ಮುನಿಸ್ವಾಮಿಗೆ ನೇರವಾಗಿ ಕೆಲಸ ಮಾಡಿದ್ದನ್ನು ನಮ್ಮ ಜಿಲ್ಲೆಯ ಜನ ಹತ್ತಿರದಿಂದ ನೋಡಿದ್ದಾರೆ! ಬಿ.ಜೆ.ಪಿ ಯಿಂದ ಮುನಿಸ್ವಾಮಿಯನ್ನು ಗೆಲ್ಲಿಸಿಕೊಂಡು ಸ್ಪೀಕರ್ ಸ್ಥಾನದಲ್ಲಿ ಇದ್ದುಕೊಂಡೇ ತನ್ನ ಸ್ಥಾನದ ಘನತೆಯನ್ನೂ ಲೆಕ್ಕಿಸದೆ ಅತ್ಯಂತ ಸರಳ ಸಾಧಾರಣ ವ್ಯಕ್ತಿಯಾಗಿ ಕೇಂದ್ರ ಸಚಿವ ಗಡ್ಕರಿಯವರನ್ನು ಮುನಿಸ್ವಾಮಿಯವರ ಜತೆಯೇ ಭೇಟಿ ಮಾಡಿದ ಚಿತ್ರಗಳನ್ನು ಇವರಿಗೆ ಆಗದವರು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ!

ಇವರು ಸ್ಪೀಕರ್ ಆಗಿ ದೋಸ್ತಿ ಪಕ್ಷಗಳಿಗೆ ಪರೋಕ್ಷವಾಗಿ ಬೆಂಬಲಿಸುತಿದ್ದಾರೆ ಎಂಬ ಆರೋಪ ಮಾಡಿದವರೇ ತಲೆತಗ್ಗಿಸುವಂತೆ "ಹೊರ ಹೋದವರು ಬಂದರೆ ಮತ್ತೆ ಸೇರಿಸಿಕೊಳ್ಳುತ್ತೀರ..?" ಎಂದು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರಿಗೆ ಸದನದಲ್ಲೇ ಪ್ರಶ್ನಿಸಿ "ಯಾವ ಕಾರಣಕ್ಕೂ ಸೇರಿಸಿಕೊಳ್ಳಲ್ಲ" ಎಂದು ಸದನದಲ್ಲಿ ಕಮಿಟ್ ಮಾಡಿಸುವುದರ ಮೂಲಕ ಯಡಿಯೂರಪ್ಪನವರಿಗೂ ಪರೋಕ್ಷವಾಗಿ ಸಹಾಯ ಮಾಡಿದರು!

"ರಾಜೀನಾಮೆ ಕೊಡಲೂ ನಿಯಮಗಳಿವೆ" ಎಂದು ಅತೃಪ್ತರ ವಿಷಯದಲ್ಲಿ ಕ್ರಮಗಳನ್ನು ಮಾತನಾಡುತ್ತಲೇ ತಮ್ಮ ರಾಜೀನಾಮೆ ಪತ್ರವನ್ನು ಅರ್ಧ ಶೀಟ್ ಹಾಳೆಯಲ್ಲಿ ಬರೆದು ಜೇಬಲ್ಲಿಟ್ಟುಕೊಂಡು ಬಂದು ಸದನದಲ್ಲಿ ತೋರಿಸಿ ತಮ್ಮ ಸರಳತೆಯನ್ನು ಮೆರೆದರು!

ರಮೇಶ್ ಕುಮಾರ್‌ ಅವರ ಬಗ್ಗೆ ಯಾರೂ ಮಾತಾಡಲು ಸಾದ್ಯವಿಲ್ಲ!? ಅವರು ಬೆಂಕಿಯ ಕೆಂಡವಿದ್ದಂತೆ! ಯಾರಿಗೂ ಮುಲಾಜು ನೋಡಲ್ಲ! ಯಾರ ಹಂಗಿಗೂ ಬೀಳಲ್ಲ! ಅವರ ಸರಳತೆ, ನಿಷ್ಠುರತೆಗಳಷ್ಟೇ ಅಲ್ಲ ,ಅವರ ಜ್ಞಾನದ ಬಗ್ಗೆಯೂ ಯಾರೂ ಪ್ರಶ್ನಿಸುವಂತಿಲ್ಲ! ಅವರಿಗೆ ಸತ್ಯ ಹೇಳಲು ಯಾವುದೇ ಕಟ್ಟುಪಾಡುಗಳಿಲ್ಲ! ಸೈದ್ದಾಂತಿಕ ಅಡ್ಡಿ ಆತಂಕಗಳೂ ಇಲ್ಲ, ನೀವು ಅವರನ್ನು ಕೇಶವಶಿಲ್ಪಕ್ಕೆ ಕರೆಯಿರಿ ಅವರು ಹೆಡೆಗೇವಾರ್, ಗೋಳ್ವಾಲ್ಕರ್ ಬಗ್ಗೆ ಅದ್ಭುತವಾಗಿ ಮಾತಾಡಬಲ್ಲರು! ಅದೇ ರೀತಿ ಅವರನ್ನು ನಂಬೂದರೀಪಾಡ್ ಭವನಕ್ಕೆ ಕರೆಯಿರಿ ಅಷ್ಟೇ ಅದ್ಭುತವಾಗಿ ಮಾರ್ಕ್ಸ್, ಲೆನಿನ್ ಗಳ ಬಗ್ಗೆಯೂ  ಮಾತಾಡಬಲ್ಲರು!

ನಮ್ಮ ಕಾಲಘಟ್ಟದಲ್ಲಿ ಇಂತಹವರೊಬ್ಬರಿದ್ದಾರಲ್ಲ ಎಂಬುದೇ ನಮ್ಮ ಭಾಗ್ಯ!! ಅಂತೆಯೇ ಮುಂದಿನ ತಲೆಮಾರಿಗೆ ಇಂಥವರೊಬ್ಬರು ಇದ್ದರಂತೆ, ಅವರು ಈ ಭೂಮಿಯ ಮೇಲೆ ನಡೆದಾಡಿದರಂತೆ ಅನ್ನುವುದೇ ಆ ತಲೆಮಾರಿನ ಪುಣ್ಯ..!!