ಸಾಗರಮಾಲಾ ಯೋಜನೆಗೆ ವಿರೋಧ: ಸಂಸದ, ಶಾಸಕಿ ಭಾವಚಿತ್ರಕ್ಕೆ ಸೆಗಣಿ ಮೆತ್ತಿ, ಚಪ್ಪಲಿ ಹಾರ

ಸಾಗರಮಾಲಾ ಯೋಜನೆಗೆ ವಿರೋಧ: ಸಂಸದ, ಶಾಸಕಿ ಭಾವಚಿತ್ರಕ್ಕೆ ಸೆಗಣಿ ಮೆತ್ತಿ, ಚಪ್ಪಲಿ ಹಾರ

ಕಾರವಾರ: ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತರಣೆ ವಿರೋಧಿಸಿ ನಗರದ ಮೀನು ಮಾರುಕಟ್ಟೆ ಬಂದ್ ಮಾಡಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಿಳಾ ಮೀನುಗಾರರು ಸಂಸದ ಅನಂತ ಕುಮಾರ ಹೆಗಡೆ ಮತ್ತು ಸ್ಥಳೀಯ ಶಾಸಕಿ ರೂಪಾಲಿ ನಾಯ್ಕಾ ಅವರ ಭಾವಚಿತ್ರಕ್ಕೆ ಸೆಗಣಿ ಮೆತ್ತಿ ಮತ್ತು ಚಪ್ಪಲಿ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಮೀನುಗಾರರ ಭಾರೀ ವಿರೋಧದಿಂದಾಗಿ ಕೆಲವು ದಿನ ಮುಂದೂಡಲಾಗಿದ್ದ ಸಾಗರಮಾಲಾ ಯೋಜನೆಯಡಿಯಲ್ಲಿ ನಡೆಯುವ ಬ್ರೇಕ್ ವಾಟರ್ ಕಾಮಗಾರಿ ಸೋಮವಾರದಿಂದ ಮತ್ತೆ ಪ್ರಾರಂಭಗೊಂಡಿತ್ತು. ಇದರ ವಿರುದ್ಧ ಮತ್ತೆ ಸಿಡಿದೆದ್ದ ಸ್ಥಳೀಯರು, ಮೀನುಗಾರರು ಏಕಾಏಕಿ ಕಾರವಾರ್ ಬಂದ್ ಮಾಡಿ ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿ ಬೃಹತ್ ಪ್ರತಿಭಟನೆ ನಡೆಸಿದ್ದರು. 

ವಾಣಿಜ್ಯ ಬಂದರಿನ ವಿಸ್ತರಣೆಯಿಂದ ಮೀನುಗಾರಿಕಾ ಉದ್ಯಮಕ್ಕೆ ಹೊಡೆತ ಬೀಳಲಿದೆ. ಅಲ್ಲದೇ ಕಾರವಾರದ ಏಕೈಕ ಕಡಲತೀರಕ್ಕೆ ಮತ್ತು ನಗರ ಸೌಂದರ್ಯಕ್ಕೆ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿ ಮೀನುಗಾರರು ಕಾಮಗಾರಿಯನ್ನು ವಿರೋಧಿಸುತ್ತಿದ್ದಾರೆ.