ಭದ್ರತಾ ಕೊಠಡಿಗಳ ಬಳಿ ರಾತ್ರಿ ಪೂರ್ತಿ ಮೊಕ್ಕಾಂ ಹೂಡಿದ ವಿರೋಧ ಪಕ್ಷದ ನಾಯಕರು

ಭದ್ರತಾ ಕೊಠಡಿಗಳ ಬಳಿ ರಾತ್ರಿ ಪೂರ್ತಿ ಮೊಕ್ಕಾಂ ಹೂಡಿದ ವಿರೋಧ ಪಕ್ಷದ ನಾಯಕರು

ದೆಹಲಿ: ಇವಿಎಂಗಳನ್ನು ವಿರೂಪಗೊಳಿಸಿರುವ ಕುರಿತು ವಿಡಿಯೊ ವೈರಲ್‌ ಆದ ಬೆನ್ನಲ್ಲೆ ಉತ್ತರ ಪ್ರದೇಶದಲ್ಲಿನ ವಿರೋಧ ಪಕ್ಷದ ನಾಯಕರು ಇವಿಎಂ ಇರಿಸಿರುವ ಭದ್ರತಾ ಕೊಠಡಿ (ಸ್ಟ್ರಾಂಗ್‌ ರೂಂ)ಗಳ ಮುಂದೆ ರಾತ್ರಿ ಇಡೀ ಕಾವಲು ಕಾಯುತ್ತಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮಧ್ಯಪ್ರದೇಶದ ಭೋಪಾಲ್‌ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ದಿಗ್ವಿಜಯ್‌ ಸಿಂಗ್‌ ಅವರು ತಮ್ಮ ಪತ್ನಿಯೊಂದಿಗೆ ತೆರಳಿ ತಡರಾತ್ರಿ ಕೇಂದ್ರ ಕಾರಾಗೃಹದ ಬಳಿ ಇರುವ ಸ್ಟ್ರಾಂಗ್‌ ರೂಂಗೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

ಸೋನಿಯಾ ಗಾಂಧಿ ಅವರು ಮರು ಚುನಾವಣೆ ನಡೆಸಬೇಕೆಂದು ಮನವಿ ಮಾಡಿದ್ದ ರಾಯಬರೇಲಿ ಹಾಗೂ ಮೀರತ್‌ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಇವಿಎಂಗಳಿರುವ ಕೊಠಡಿ ಹೊರಗಡೆ ಕಾವಲು ಕಾಯುತ್ತಿದ್ದಾರೆ. ಅಲ್ಲದೆ, ಚಂಡೀಗಢದಲ್ಲೂ ಕಾಂಗ್ರೆಸ್‌ ಕಾರ್ಯರ್ತರು ಸ್ಟ್ರಾಂಗ್‌ ರೂಂ ಬಿಟ್ಟು ಕದಲಿಲ್ಲ ಎಂಬ ವರದಿಗಳು ಬಂದಿವೆ.

ಮಂಗಳವಾರ ವಿರೋಧ ಪಕ್ಷದ 22ನಾಯಕರು ಚುನಾವಣಾ ಆಯುಕ್ತರನ್ನು ಭೇಟಿ ಮಾಡಿ, ರಾಜ್ಯಗಳಲ್ಲಿ ಇವಿಎಂಗಳನ್ನು ಸ್ಥಳಾಂತರಿಸಿರುವ ವಿಡಿಯೊ ಕುರಿತು ದೂರು ನೀಡಿ ಚರ್ಚಿಸಿದ್ದು, ಇವಿಎಂಗಳ ಬದಲು ವಿವಿಪ್ಯಾಟ್‌ಗಳನ್ನು ಮೊದಲು ಗಣನೆಗೆ ತೆಗೆದುಕೊಳ್ಳಬೇಕು ಎಂದಿದ್ದಾರೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಎಲ್ಲ ಇವಿಎಂಗಳನ್ನು ವಿವಿಪ್ಯಾಟ್‌ನೊಂದಿಗೆ ಹೊಂದಾಣಿಕೆ ಮಾಡಿ ಪರಿಶೀಲಿಸಬೇಕು ಎಂದು ವಿರೋಧ ಪಕ್ಷಗಳು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೆ, ಇದು ಒಂದು ರೀತಿಯ ಅಜ್ಞಾನದ ಪರಮಾವಧಿ ಎಂದು ಹೇಳಿತ್ತು.