ನಾಟಕೀಯ ಆರಂಭ, ಸರಣಿ ಆಘಾತ, ಕೊನೆವರೆಗೂ ಕುತೂಹಲ : ಅದೇ ‘ಆಪರೇಷನ್ ನಕ್ಷತ್ರ’

ನಾಟಕೀಯ ಆರಂಭ, ಸರಣಿ ಆಘಾತ, ಕೊನೆವರೆಗೂ ಕುತೂಹಲ : ಅದೇ  ‘ಆಪರೇಷನ್ ನಕ್ಷತ್ರ’

ಪ್ರತಿಯೊಬ್ರು ಬದುಕಲ್ಲಿ ಒಂದಲ್ಲ ಒಂದು ಬಾರಿ ಮೋಸ ಹೋಗಿರ್ತಾರೆ.  ಅದ್ರಲ್ಲಿ ಕೆಲವ್ರು ತಮಗಾದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳೋ ಹಠಕ್ಕೆ ಬೀಳ್ತಾರೆ.  ಇನ್ನು ಕೆಲವ್ರು ಅಸಹಾಯಕತೆಯಿಂದ ಸುಮ್ಮನಿದ್ದು ಬಿಡ್ತಾರೆ. ಆದ್ರೆ ಮೋಸ ಮಾಡಿದವ್ರಿಗೆ ಎಂದಿಗೂ ನೆಮ್ಮದಿ ಇರಲ್ಲ. ಜತೆಗೆ ಒಂದಲ್ಲ ಒಂದು ದಿನ ಅವ್ರು ಕೂಡ ನೋವು ಅನುಭವಿಸಲೇ ಬೇಕಾಗತ್ತೆ. ಇವತ್ತು ತೆರೆಕಂಡ ಆಪರೇಷನ್ ನಕ್ಷತ್ರ ಸಿನಿಮಾ ಕೂಡ ಇದೇ ಅಂಶಗಳನ್ನು ಹೊತ್ತುತಂದಿದೆ. ಆಪರೇ‍ಷನ್ ನಕ್ಷತ್ರ ಅನ್ನೋ ವಿಭಿನ್ನ ಟೈಟಲ್ ನೊಂದಿಗೆ ನಿರ್ದೇಶಕ ಕೆ ಆರ್ ಮಧುಸೂದನ್ ಒಂದು ಕಥೆಯನ್ನು ಹೆಣೆದು ತಂದಿದ್ದಾರೆ.

ಸಿನಿಮಾದ ಕಥೆ  ವಿಚಾರಕ್ಕೆ ಬಂದ್ರೆ,  ಶ್ರೀಕಂಠ ಗ್ರೂಪ್ ಆಫ್ ಕಂಪೆನಿಯ ಮಾಲೀಕ ಶ್ರೀಕಂಠ ಆಗರ್ಭ ಶ್ರೀಮಂತನಾಗಿರ್ತಾನೆ. ಆತನಲ್ಲಿದ್ದ ಕೋಟಿ ಕೋಟಿ ಹಣವನ್ನು ಆತ ಕಷ್ಟಪಟ್ಟು ಸಂಪಾದಿಸಿರ್ತಾನೆ. ಶ್ರೀಕಂಠನಿಗೆ ರೋಷಿಣಿ ಎಂಬ ಮುದ್ದಿನ ಮಗಳಿರ್ತಾಳೆ. ಚಿಕ್ಕ ವಯಸ್ಸಿನಲ್ಲೇ ಆಕೆ ತಾಯಿಯನ್ನು ಕಳೆದುಕೊಂಡಿದ್ರಿಂದ ತಂದೆಯೇ ರೋಷಿಣಿಗೆ ಎಲ್ಲವೂ ಆಗಿರ್ತಾರೆ. ಶ್ರೀಕಂಠ ತನ್ನ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದ ಸ್ಮಿತಾಳನ್ನೇ ಎರಡನೇ ಮದುವೆಯಾಗಿರ್ತಾರೆ. ಈ ಮದುವೆ ಶ್ರೀಕಂಠನ ಮಗಳು ರೋಷಿಣಿಗೆ ಅಷ್ಟೇನು ಇಷ್ಟವಿಲ್ಲದೇ ಹೋದ್ರು, ಶ್ರೀಕಂಠನ ತಾಯಿ ಜಾನಕಮ್ಮ ಸ್ಮಿತಾರನ್ನು ಮನಃತುಂಬಿ ಸೊಸೆಯಾಗಿ ಸ್ವೀಕರಿಸ್ತಾರೆ.  ಅಪ್ಪ, ಚಿಕ್ಕಮ್ಮ, ಅಜ್ಜಿಯ ಆಶ್ರಯದಲ್ಲಿದ್ದ ರೋಷಿಣಿ ಸಾಮಾನ್ಯ ಜಿಮ್ ಟ್ರೇನರ್ ನೊಂದಿಗೆ ಪ್ರೀತಿಯಲ್ಲಿ ಬೀಳ್ತಾಳೆ. ಚಿಕ್ಕಂದಿನಿಂದ ಮಗಳನ್ನು ಪ್ರೀತಿಯಿಂದ ಸಾಕಿದ ತಂದೆಗೆ ಮಗಳು ಮಿಡಲ್ ಕ್ಲಾಸ್ ಹುಡುಗನೊಂದಿಗೆ ಪ್ರೀತಿಗೆ ಬಿದ್ದಿದ್ದು ಬೇಸರ ತರಿಸತ್ತೆ. ಮನುಷ್ಯರನ್ನು ತಾನು ಹಣದಿಂದಲೇ ಅಳೆಯೋದಾಗಿ ಶ್ರೀಕಂಠ ಹೇಳ್ತಾನೆ. ರೋಷಿಣಿ ಹಾಗೂ ಅಜಯ್ ಪ್ರೀತಿಯನ್ನು ಚಿಕ್ಕಮ್ಮ ಸ್ಮಿತಾ, ಅಜ್ಜಿ ಜಾನಕಮ್ಮ ಒಪ್ಪಿಕೊಂಡ್ರು ಶ್ರೀಕಂಠ ಒಪ್ಪಿಕೊಳ್ಳೋ ಸ್ಥಿತಿಯಲ್ಲಿರೋದಿಲ್ಲ. ಹೀಗಿರುವಾಗಲೇ ಅಜಯ್ ನನ್ನು ಮನೆಗೆ ಕರೆಯಿಸಿ ಶ್ರೀಕಂಠ ಅಜಯ್ ಗೆ ಒಂದು ಚಾಲೆಂಜ್ ಅನ್ನು ನೀಡ್ತಾನೆ. ಒಂದು ಕೋಟಿ ಚೆಕ್ ನೀಡಿ ಒಂದೇ ತಿಂಗಳಲ್ಲಿ ಇದನ್ನು ಡಬಲ್ ಮಾಡಬೇಕಾಗಿ ಡಿಮ್ಯಾಂಡ್ ಮಾಡ್ತಾನೆ. ಹಣಕ್ಕಿಂತ ಪ್ರೀತಿನೇ ಮುಖ್ಯ, ನಾನು ಹಣ ಸಂಪಾದಿಸಿಯೇ ತೀರ್ತಿನಿ ಅಂತ ಅಜಯ್ ಹೊರಡ್ತಾನೆ. ಪ್ರೀತಿಗೆ ಅಪ್ಪನ ವಿರೋಧವಿದ್ರು, ತಾಯಿ ಸ್ಮಿತಾ ರೋಷಿಣಿಗೆ ಸಪೋರ್ಟ್ ಮಾಡ್ತಾಳೆ. ಚಿಕ್ಕಮ್ಮನ ಬಗ್ಗೆ ಇದ್ದ ತಾತ್ಸಾರ ಮನೋಭಾವ ರೋಷಿಣಿ ಮನಸ್ಸಿನಿಂದ ದೂರವಾಗತ್ತೆ. ಆದ್ರೆ ಪ್ರೀತಿಸಿದ ಹುಡುಗನಿಗೆ ಒಂದು ಕೋಟಿ ಸಂಪಾದಿಸೋಕೆ ಆಗತ್ತಾ ಇಲ್ವಾ ಅನ್ನೋ ಚಿಂತೆಯಲ್ಲೇ ಸಾಗ್ತಿದ್ದ ರೋಷಿಣಿ, ರಸ್ತೆ ಅಪಘಾತದಲ್ಲಿ ಸಾವಿಗೀಡಾಗ್ತಾಳೆ. ಮಗಳ ಸಾವನ್ನು ಕಂಡು ತಂದೆ ಕೂಡ ಹೃದಯಾಘಾತಕ್ಕೆ ಒಳಗಾಗಿ ಮೃತಪಡ್ತಾನೆ. ಇತ್ತ ಅಜ್ಜಿ ಜಾನಕಮ್ಮ ಕೂಡ ಈ ಎಲ್ಲಾ ಶಾಕ್ ನಿಂದ ಸಾವನ್ನಪ್ಪುತ್ತಾರೆ. ಎಲ್ಲರನ್ನುಕಳೆದುಕೊಂಡ ಸ್ಮಿತಾ ಒಂಟಿಯಾಗ್ತಾಳೆ. ಈ ಎಲ್ಲಾ ಸಾವುಗಳು ಹೇಗೆ ಸಂಭವಿಸಿದ್ವು ಅಂತ ವಿಚಾರಣೆ ನಡೆಸೋಕೆ ಪೊಲೀಸ್ ಇಲಾಖೆ ರಮಣ ಅನ್ನೋ ಪೊಲೀಸ್ ಆಫೀಸರ್ ಅನ್ನು ನಿಯೋಜಿಸ್ತಾರೆ. ಇನ್ನೊಂದೆಡೆ ಮೂರು ಸಾವಿಗೆ ಪರೋಕ್ಷವಾಗಿ ಕಾರಣನಾದ ಅಜಯ್ ನನ್ನು ಸುಮ್ಮನೇ ಬಿಡಬಾರದು ಅಂತ ಮನೆ ಕೆಲಸದಾಕೆ, ಡ್ರೈವರ್ ಗೊಣಗ್ತಾರೆ. ಇದನ್ನೇ ಸೀರಿಯಸ್ ಆಗಿ ತೆಗೆದುಕೊಳ್ಳೋ ಸ್ಮಿತಾ ತನ್ನ ತಮ್ಮನ ಸಹಾಯದಿಂದ ಗನ್ ಪಡೆದು ಅಜಯ್ ನನ್ನು ಸಾಯಿಸೋಕೆ ಹೊರಡ್ತಾಳೆ. ಆದ್ರೆ ಅಲ್ಲಿ ಯಾರು ಊಹಿಸದ ಒಂದು ದೃಶ್ಯ ನಮಗೆ ಕಾಣಸಿಗತ್ತೆ.  ಹಾಗಾದ್ರೆ ಆ ಸರ್ಪ್ರೈಸ್ ದೃಶ್ಯವೇನು..? ಗನ್ ಹಿಡಿದುಕೊಂಡು ಹೋದ ಸ್ಮಿತಾ ಅಜಯ್ ನನ್ನು ಸಾಯಿಸ್ತಾಳಾ..? ಒಂದೇ ಕುಟುಂಬದಲ್ಲಾದ ಮೂರು ಸರಣಿ ಸಾವು ಸಹಜ ಸಾವಾ..? ಅಥವಾ ಇದ್ರ ಹಿಂದೆ ಬೇರೆ ಯಾರಾದ್ರೂ ಇದ್ದಾರಾ..? ಈ ಎಲ್ಲಾ ಕ್ಯೂರಿಯಾಸಿಟಿಗೆ ಉತ್ತರ ಕಂಡುಕೊಳ್ಳಬೇಕು ಅಂದ್ರೆ ಆಪರೇಷನ್ ನಕ್ಷತ್ರ ಸಿನಿಮಾ ನೋಡಬೇಕು.

ಸಿನಿಮಾದ ಮೊದಲಾರ್ಧದಲ್ಲಿ ಕೆಲ ಘಟನೆಗಳು ತುಂಬಾ ನಾಟಕೀಯ ಅನಿಸತ್ತೆ. ಆದ್ರೆ ದ್ವಿತೀಯಾರ್ಧ ಈ ಎಲ್ಲಾ ಘಟನೆಗಳಿಗೆ ಉತ್ತರ ಸಿಗತ್ತೆ. ಸಿನಿಮಾದ ನಾಲ್ಕು ಬೇರೆ ಬೇರೆ ಪಾತ್ರಗಳಿಗೆ ಎರಡು ಶೇಡ್ ಗಳಿವೆ.  ಒಳ್ಳೆಯವರು ಒಳ್ಳೆಯವ್ರಲ್ಲ ಅನ್ನೋ ಮುಖವಾಡ ದ್ವಿತೀಯಾರ್ಧದಲ್ಲಿ ಕಳಚಿ ಬೀಳತ್ತೆ. ಟ್ರೇಲರ್, ಟೀಸರ್ ನೋಡಿ ಹೋಗೋವ್ರಿಗೆ ಸಿನಿಮಾದ ಮಧ್ಯದಲ್ಲೇ ಸಣ್ಣ ಹಿಂಟ್ ಸಿಗತ್ತೆ. ಇಂಟರ್ವಲ್ ವರೆಗೂ ಕೊಂಚ ಲ್ಯಾಗ್ ಅನಿಸಿದ್ರು, ಸೆಕೆಂಡ್ ಹಾಲ್ಫ್ ನ ಕಥೆ ಬೇಗ ಸಾಗತ್ತೆ. ಸಿನಿಮಾದಲ್ಲಿ ಸ್ಮಿತಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ, ರೋಷಿಣಿಯಾಗಿ ಅದಿತಿ ಪ್ರಭುದೇವ, ಅಜಯ್ ಆಗಿ ನಿರಂಜನ್ ಒಡೆಯರ್, ಶ್ರೀಕಂಠನಾಗಿ ದೀಪಕ್ ಶೆಟ್ಟಿ, ರಮಣನಾಗಿ ಲಿಖಿತ್, ಅಜಯ್ ಸ್ನೇಹಿತನಾಗಿ ಗೋವಿಂದೇ ಗೌಡ ಹಾಗೂ ಇನ್ನಿತರರು ಅಭಿನಯಿಸಿದ್ದಾರೆ. ಎಲ್ಲಾ ಪಾತ್ರವರ್ಗಗಳು ಅಚ್ಚುಕಟ್ಟಾಗಿ ತಮ್ಮ ಅಭಿನಯ ತೋರಿಸಿದ್ದಾರೆ. ಯಜ್ಞಾ ಶೆಟ್ಟಿ ಹಾಗೂ ಅದಿತಿ ಪ್ರಭುದೇವ ಎರಡೂ ಶೇಡ್ ಗಳಲ್ಲೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಯಜ್ಞಾ ಮತ್ತೆ ತಮ್ಮ ನಟನಾ ಛಾಪನ್ನು ಪ್ರೂವ್ ಮಾಡಿದ್ದಾರೆ.  ಅದಿತಿ ಈ ಸಿನಿಮಾ ಮೂಲಕ ಮತ್ತಷ್ಟು ಪ್ರಾಮಿಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ.  

ರಘು ಸಮರ್ಥ ಸಂಗೀತ ಸಂಯೋಜನೆಯ ನಾ ಪರಿಚಯವಾಗದೇ ಹಾಡು ಸಂಜಿತ್ ಹೆಗಡೆ ಧ್ವನಿಯಲ್ಲಿ ಮೂಡಿಬಂದಿದೆ. ಸಿನಿಮಾ ಆರಂಭ ಆಗಿ ಕೆಲವೇ ಹೊತ್ತಿಗೆ ಹಾಡು ಮೂಡಿಬರೋದ್ರಿಂದ ಪ್ರೀತಿ ಪ್ರೇಮ ಅನ್ನೋ ಅಂಶವನ್ನು ತುಂಬಾ  ನಾಟಕೀಯವಾಗಿ ಕಟ್ಟಿಕೊಟ್ಟಂತಿದೆ. ಆದ್ರೆ ಹಾಡಿನಲ್ಲಿ ಅಜಯ್ ಹಾಗೂ ಅದಿತಿ ಇಬ್ಬರೂ ಚೆನ್ನಾಗಿಯೇ ಅಭಿನಯಿಸಿದ್ದಾರೆ. ಇನ್ನು ದ್ವಿತೀಯಾರ್ಧದಲ್ಲಿ ಬರೋ ಮುದ್ದು ಮುದ್ದು ಹುಡುಗ ಹಾಡಿಗೆ ಯಜ್ಞಾ ಶೆಟ್ಟಿ ಮುದ್ದು ಮುದ್ದಾಗಿಯೇ ಹೆಜ್ಜೆ ಹಾಕಿದ್ದಾರೆ. ಸಿನಿಮಾ ಶೂಟ್ ಆಗಿರೋ ಲೋಕೆಷನ್ ಗಳು, ಕೆಲವೊಂದು ರಿಚನೆಸ್ ಅಂಶಗನ್ನು ಸಿನಿಮ್ಯಾಟೋಗ್ರಾಫರ್ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ.  ಸಿನಿಮಾದಿಂದ ಮೆಸೇಜ್ ಅಂತ ಏನು ಇಲ್ಲ ಬದಲಾಗಿ ಮನರಂಜನೆಯಿದೆ ಅಂತ ಸಿನಿಮಾ ತಂಡ ಈ ಹಿಂದೆ ಹೇಳಿಕೊಂಡಿದ್ರು ಆದ್ರೆ ಮನರಂಜನೆ, ಸಂದೇಶ ಎರಡನ್ನು ಚಿತ್ರ ಹೊತ್ತು ತಂದಿದೆ.