ಕೇರಳ ಜೈಲಿನಿಂದ ಆನ್ ಲೈನ್ ಬಿರಿಯಾನಿ ಮಾರಾಟ ಆರಂಭ

ಕೇರಳ ಜೈಲಿನಿಂದ ಆನ್ ಲೈನ್ ಬಿರಿಯಾನಿ ಮಾರಾಟ ಆರಂಭ

ಹೆಚ್ಚು ಜನಪ್ರಿಯವಾದ ಆನ್ ಲೈನ್ ಆಹಾರ ಮಾರುಕಟ್ಟೆಯನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇರಳದ ಜೈಲು ಅಧಿಕಾರಿಗಳು ಮುಂದಡಿ ಇರಿಸಿದ್ದಾರೆ.

ಕೈದಿಗಳು ಸಿದ್ದಪಡಿಸಿದ ಬಿಸಿ ಬಿರಿಯಾನಿಯ ಆನ್ಲೈನ್ ಮಾರಾಟವನ್ನು ಗುರುವಾರ ಆರಂಭಿಸಿದರು. ಮೊದಲ ಹಂತದಲ್ಲಿ ಒಂದು ತಟ್ಟೆ ಬಿರಿಯಾನಿ ಕಾಂಬೋಗೆ 127 ರೂ. ನಿಗದಿಪಡಿಸಿದ್ದಾರೆ. ಆನ್ ಲೈನ್ ಮಾರಾಟಕ್ಕಾಗಿ ಈ ಕಾಂಬೋದಲ್ಲಿ 300 ಗ್ರಾಂ ಬಿರಿಯಾನಿ ರೈಸ್, ಒಂದು ಚಿಕನ್ ಲೆಗ್, ಮೂರು ಚಪಾತಿ, ಒಂದು ಕಪ್ ಕೇಕ್, ಸಲಾಡ್ , ಉಪ್ಪಿನಕಾಯಿ, ಮತ್ತು ಒಂದು ಲೀಟರ್ ನೀರು ಮತ್ತು ಬಾಳೆಎಲೆ ಇದ್ದು, ಪ್ರಾಯೋಗಿಕವಾಗಿ ತ್ರಿಶೂರ್ ಜಿಲ್ಲೆಯ ವಿಯ್ಯೂರ್ ಕೇಂದ್ರ ಕಾರಾಗೃಹದಲ್ಲಿ ಬಿರಿಯಾನಿ ಆನ್ಲೈನ್ ಮಾರಾಟ ಆರಂಭಿಸಲಾಗಿದೆ. ಸೆರೆಮನೆ ಕೈದಿಗಳು ಸಿದ್ಧಪಡಿಸಿದ ಆಹಾರವನ್ನು ಫ್ರೀಡಂ ಫುಡ್ ಫ್ಯಾಕ್ಟರಿ 2011 ರಲ್ಲೇ ಮಾರಾಟ ಮಾಡಲು ಆರಂಭಿಸಿತ್ತು.

ನಾವು ಮೊದಲ ಬಾರಿಗೆ ಆನ್ ಲೈನ್ ಮಾರಾಟ ಮಾಡಲು ಹೊರಟಿದ್ದೇವೆ. ಇದು ಸೆರೆಮನೆಯ ಪೊಲೀಸ್ ಮಹಾನಿರ್ದೇಶಕ ರಿಷಿರಾಜ್ ಸಿಂಗ್ ಅವರ ಚಿಂತನೆಯ ಫಲ ಎಂದು ವಿಯ್ಯೂರ್ ಕೇಂದ್ರ ಕಾರಾಗೃಹದ ಅಧೀಕ್ಷಕ ನಿರ್ಮಲಾನಂದನ್ ಪಿಟಿಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಜೈಲಿನಲ್ಲಿ ಸಿದ್ಧಪಡಿಸುತ್ತಿರುವ ಆಹಾರ ತನ್ನ ಗುಣಮಟ್ಟ ಮತ್ತು ಕಡಿಮೆ ಬೆಲೆಯಿಂದಾಗಿ ಜನರಲ್ಲಿ ಯಶಸ್ವಿಯಾಯಿತು  ನಾವು ಈಗಾಗಲೇ ವಿಯ್ಯೂರ್ ಜೈಲಿನಿಂದ ವಿವಿಧ ಬಿರಿಯಾನಿಗಳು, ಮಾಂಸಹಾರಿ ಊಟ, ಬೇಕರಿ ತಿನಿಸುಗಳು ಮತ್ತು ಇತರ ವಸ್ತುಗಳನ್ನಮಾರಾಟ ಮಾಡುತ್ತಿದ್ದೇವೆ. ನಮ್ಮಲ್ಲಿ ಕೌಂಟರ್ ಮಾರಾಟವೂ ಇದೆ. ಆದರೆ ಈಗ ನಾವು ಆನ್ ಲೈನ್ ನಲ್ಲಿ ಕಾಂಬೋ ಮಾರಾಟ ಮಾಡಲು ನಿರ್ಧರಿಸಿದ್ದೇವೆ ಎಂದರು.
ಪ್ರಸ್ತುತವಾಗಿ ಜೈಲಿನಲ್ಲಿ ಸುಮಾರು 25 ಸಾವಿರ ಚಪಾತಿಗಳು ತಯಾರಾಗುತ್ತವೆ ಮತ್ತು ದಿನಕ್ಕೆ 500ಕ್ಕೂ ಹೆಚ್ಚು ಬಿರಿಯಾನಿಗಳನ್ನು ಮಾರಾಟ ಮಾಡುತ್ತಿದ್ದು, ಇವುಗಳನ್ನು  ಸುಮಾರು 100 ಕೈದಿಗಳು ತಯಾರಿಸುತ್ತಾರೆ

ಶುಲ್ಕ ವಿಧಿಸುವ ಮೂಲಕ  ಸೆರೆಮನೆ ಅನುಭವ ಪಡೆಯಲು ಜನಸಾಮಾನ್ಯರಿಗಾಗಿ ಪೋರ್ಟಲ್ ಗಳನ್ನು ಆರಂಭಿಸಲು ರಾಜ್ಯ ಜೈಲು ಇಲಾಖೆ ಚಿಂತನೆ ನಡೆಸುತ್ತಿದೆ.

ತ್ರಿಶೂರ್ ಜಿಲ್ಲೆಯ ವಿಯ್ಯೂರ್ ಕೇಂದ್ರ ಕಾರಾಗೃಹದ ಆವರಣದಲ್ಲಿ ಬರಲಿರುವ ವಿಶಿಷ್ಟ  ಜೈಲು ವಸ್ತು ಸಂಗ್ರಹಾಲಯದ ಭಾಗವಾಗಿ ಪೇ  ಅಂಡ್ ಸ್ಟೇ ಉಪಕ್ರಮವನ್ನು ಯೋಜಿಸಲಾಗಿದೆ.