ನಿಮ್ಮ ಅಡುಗೆಗೆ ಅತ್ಯಗತ್ಯವಾಗಿರುವ ಈರುಳ್ಳಿಯ ಬಗ್ಗೆ ನಿಮಗೆಷ್ಟು ಗೊತ್ತು?

ಭಾರತದಲ್ಲಿ ತಿರಸ್ಕಾರಕ್ಕೆ ಒಳಗಾಗಿದ್ದ ಈರುಳ್ಳಿ ಮೊಘಲರ ಆಗಮನದ ನಂತರ ಮುಖ್ಯವಾಹಿನಿಗೆ ಬಂದಿತು.

ನಿಮ್ಮ ಅಡುಗೆಗೆ ಅತ್ಯಗತ್ಯವಾಗಿರುವ ಈರುಳ್ಳಿಯ ಬಗ್ಗೆ ನಿಮಗೆಷ್ಟು ಗೊತ್ತು?

ಈರುಳ್ಳಿ ಅಂದ್ರೆ ಬರೀ ಈರುಳ್ಳಿ, ಅಲ್ವಾ? ಹಾಗೆ ನೀವು ಕೇಳುವಹಾಗಿಲ್ಲ. ಪ್ರಸ್ತುತ ಭಾರತ ಈರುಳ್ಳಿಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ದೇಶದ ಕೆಲವು ಭಾಗಗಳಲ್ಲಿ ಪ್ರತಿ ಕೆಜಿ ಈರುಳ್ಳಿಗೆ 100 ರೂ.ಗಿಂತ ಹೆಚ್ಚಿನ ದರವಿದೆ. ಮತ್ತು ಈ ಬಿಕ್ಕಟ್ಟನ್ನು ನಿವಾರಿಸಲು ಮತ್ತು ನಾಗರಿಕರನ್ನು ಸಮಾಧಾನದಿಂದಿಡಲು ಭಾರತ, ಈಜಿಪ್ಟ್ ಮತ್ತು ಟರ್ಕಿಯಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಆದರೆ ಅವು ಭಾರತೀಯ ಪಾಕ ಶಾಸ್ತ್ರಕ್ಕೆ ಸರಿಹೊಂದಬಹುದೇ ಎಂಬ ಪ್ರಶ್ನೆ ಈಗ ಭಾರತೀಯ ಆಹಾರ ತಜ್ಞರನ್ನು ಕಾಡುತ್ತಿದೆ.

ಖಂಡಿತವಾಗಿಯೂ ಎಲ್ಲಾ ಈರುಳ್ಳಿಗಳು ಒಂದೇ ರೀತಿಯ ರುಚಿ ನೀಡಲಾರದು. ಒಂದೊಂದು ಈರುಳ್ಳಿಯದ್ದು ಒಂದೊಂದು ರುಚಿ. ನಿಮಗೆ ಗೊತ್ತಿದೆಯೇ?  ಭಾರತದಲ್ಲಿಯೇ ಕನಿಷ್ಟ 30 ಬಗೆಯ ಈರುಳ್ಳಿಗಳನ್ನು ಬೆಳೆಯಲಾಗುತ್ತದೆ. ಇದು ಹೆಚ್ಚಾಗಿ ಗಾಢ ನೇರಳೆ ಬಣ್ಣ ಮತ್ತು ಹಳದಿ-ಬಿಳಿ ಬಣ್ಣದ್ದಾಗಿರುತ್ತದೆ. ಆದರೆ ಪ್ರತಿಯೊಂದೂ ಈರುಳ್ಳಿಯೂ ತನ್ನದೇ ಆದ ವಿಶಿಷ್ಟ ಪರಿಮಳವನ್ನು ಹೊಂದಿರುತ್ತದೆ.

ಈರುಳ್ಳಿಯ ಸಂಕ್ಷಿಪ್ತ ಇತಿಹಾಸ

ಶತಮಾನಗಳಿಂದ ಈರುಳ್ಳಿ ಭಾರತೀಯ ಆಹಾರದ ತಳಪಾಯ ಮತ್ತು ಬೆನ್ನೆಲುಬಾಗಿ ಬಿಟ್ಟಿದೆ. ಈ ಅನಿವಾರ್ಯತೆಯೇ ಸದ್ಯದ ಈರುಳ್ಳಿ ಬೇಡಿಕೆ ಈಡೇರಿಸುವ ಸಲುವಾಗಿ  ಏಕಾಏಕಿಯಾಗಿ ಈರುಳ್ಳಿಯ ರಫ್ತು ನಿಷೇಧಿಸುವುದು ಮತ್ತು ಆಮದು ಹೆಚ್ಚಿಸುವುದು ಮುಂತಾದ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದೆ.

ನಿಜವಾಗಿ ನೋಡುವುದಾದರೆ ಈರುಳ್ಳಿ ಹಿಂದೆಲ್ಲ ಭಾರತೀಯ ಸಮಾಜದಲ್ಲಿ ಈಗಿನ ಹಾಗೆಯೇ ಉತ್ಕ್ರಷ್ಟ ಸ್ಥಾನವನ್ನು ಹೊಂದಿರಲಿಲ್ಲ.ಎಷ್ಟೆಂದರೆ ಸಾವಿರಾರು ವರ್ಷಗಳ ಹಿಂದೆ, ಈರುಳ್ಳಿ ಪೂರೈಕೆಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲೇ ಇಲ್ಲ. ಏಕೆಂದರೆ ಅವುಗಳಿಗೆ ಅಷ್ಟೊಂದು ಬೇಡಿಕೆಯೇ ಇರಲಿಲ್ಲ. ವಾಸ್ತವವಾಗಿ, ಈರುಳ್ಳಿ ಬಹಳ ಸಮಯದ ವರೆಗೂ ಭಾರತದಲ್ಲಿ ತಿರಸ್ಕಾರದಿಂದಲೇ ನೋಡಲಾಗುತ್ತಿತ್ತು.

ಭಾರತಕ್ಕೆ ಮೊಘಲರು ಬರುವ ಮೊದಲು ಭಾರತ  ಶುಂಠಿ ಆಧಾರಿತ ಆಹಾರವನ್ನು ಹೆಚ್ಚು ಅವಲಂಬಿಸಿತ್ತು. ಆಗ ಭಾರತದಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯ ಬಳಕೆಯೇ ಇರಲಿಲ್ಲ. ಎಂದು ಆಹಾರ ಇತಿಹಾಸಕಾರ ಸೇನ್ ಹೇಳುತ್ತಾರೆ.

2,000 ವರ್ಷಗಳ ಹಿಂದೆ, ಆಯುರ್ವೇದದ ಪಿತಾಮಹ ಚರಕ ತನ್ನ ಚರಕ ಸಂಹಿತಾ ಎಂಬ ಗ್ರಂಥದಲ್ಲಿ ಈರುಳ್ಳಿಯನ್ನು ಕೀಲು ನೋವುಗಳನ್ನು ಗುಣಪಡಿಸುವ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ತರಕಾರಿ ಎಂದು ವೈಭವೀಕರಿಸಿದ್ದ.

ಆದರೆ ನಾಲ್ಕು ಶತಮಾನಗಳ ನಂತರ, ಇತರ ಆಯುರ್ವೇದ ಗ್ರಂಥಗಳು ಈರುಳ್ಳಿಯನ್ನು ಬಹಿಷ್ಕರಿಸಿದ್ದವು ಮಾತ್ರವಲ್ಲ ಅವುಗಳನ್ನು ಆಲಸ್ಯ ಮತ್ತು ಕಾಮಕ್ಕೆ ಪ್ರೇರಣೆ ನೀಡುವ ‘ತಾಮಸಿಕ’ ಆಹಾರ ಎಂದು ಕರೆದಿದ್ದವು.

ಕ್ರಿ.ಶ ಏಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಚೀನಾದ ಪ್ರವಾಸಿ ಹ್ಯುಯೆನ್ ತ್ಸಾಂಗ್ (ಕ್ಸುವಾನ್ಜಾಂಗ್ ಅಥವಾ ಹ್ಸುವಾನ್ ತ್ಸಾಂಗ್ ಎಂದೂ ಕರೆಯುತ್ತಾರೆ)ಕೆಲವರು ಈರುಳ್ಳಿ ತಿನ್ನುತ್ತಿದ್ದರು ಮತ್ತು ಅಂತವರು ಪತ್ತೆಯಾದರೆ ಆ ಊರಿನ ಆಡಳಿತ ಅವರನ್ನು ಪಟ್ಟಣದಿಂದಲೇ ಹೊರಹಾಕುತ್ತಿತ್ತು ಎಂದು ಬರೆದಿದ್ದಾನೆ. 

1526 ಮತ್ತು 1556 ರ ನಡುವೆ ಮೊಘಲರು ಬಂದ ನಂತರವಷ್ಟೇ , ಭಾರತದಲ್ಲಿ ಈರುಳ್ಳಿ ಮುಖ್ಯವಾಹಿನಿಗೆ ಬಂದಿತ್ತು. ಆದರೆ ಕೆಲವು ಪಂಥಗಳು ಈಗಲೂ ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಬಳಸುತ್ತಿಲ್ಲ. ಉದಾಹರಣೆಗೆ ಧಾರ್ಮಿಕ ಬ್ರಾಹ್ಮಣರು ಮತ್ತು ಜೈನರು.

“ನನಗೊಬ್ಬ ತಮಿಳು ಬ್ರಾಹ್ಮಣ ಸ್ನೇಹಿತನಿದ್ದ, ಅವನು ಕೆಂಪು ಈರುಳ್ಳಿಯನ್ನು ಮುಟ್ಟುವುದೂ ಇಲ್ಲ ಏಕೆಂದರೆ ಅವುಗಳನ್ನು ‘ತಾಮಸಿಕ’ ಎಂದು ಪರಿಗಣಿಸಲಾಗುತ್ತದೆ ಎನ್ನುತ್ತಾನೆ. ಆದರೆ, ಕೆಲವು ಸಂದರ್ಭಗಳಲ್ಲಿ, ಆತ ಮದ್ರಾಸ್ ಅಂಗಡಿಗಳಲ್ಲಿ ಲಭ್ಯವಿರುವ ಸಣ್ಣ ಬಿಳಿ ಈರುಳ್ಳಿಯನ್ನು ಬಳಸುತ್ತಿದ್ದ ಅದು ತೀಕ್ಷ್ಣವಾದದ್ದಲ್ಲ ಮತ್ತು ಅದನ್ನು ‘ತಾಮಸಿಕ’ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳುತ್ತಿದ್ದ. ಎಂದು ಆಹಾರ ವಿಮರ್ಶಕ ಮತ್ತು ಬರಹಗಾರ ಮರಿಯಮ್ ರೆಶಿ ಹೇಳುತ್ತಾರೆ.

ಋತುಮಾನ,  ಗಾತ್ರ, ಬಣ್ಣ ಮತ್ತು ರುಚಿ

ಈರುಳ್ಳಿಯ ಪ್ರಕಾರಗಳು (ಕೆಂಪು ಅಥವಾ ಬಿಳಿ), ಅದನ್ನು ಬಿತ್ತಿದ ಋತು, ಯಾವ ಹಂತದಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಅದನ್ನು ಬೆಳೆಸುವ ಹವಾಮಾನ ಪರಿಸ್ಥಿತಿ, ಇವೆಲ್ಲವೂ  ಈರುಳ್ಳಿಯ ರುಚಿಯ ಮೇಲೆ ಪ್ರಭಾವ ಬೀರುತ್ತದೆ.

ಭಾರತದಲ್ಲಿ ವರ್ಷಪೂರ್ತಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ ಮತ್ತು ವರ್ಷಕ್ಕೆ ಮೂರು ಬಾರಿ ಈ ಬೆಳೆಯನ್ನು ಸಂಗ್ರಹಿಸಲಾಗುತ್ತದೆ. ಅವೆಂದರೆ ಮುಂಗಾರು ಹಂಗಾಮು, ಮುಂಗಾರು ನಂತರದ ಹಂಗಾಮು ಮತ್ತು ಹಿಂಗಾರು ಹಂಗಾಮು. ಹೀಗೆ ವರ್ಷದಲ್ಲಿ ಮೂರು ಬಾರಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ.

ಭಾರತ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್)ದ ಹಿರಿಯ ಅಧಿಕಾರಿಯೊಬ್ಬರು ಹೀಗೆ ಹೇಳುತ್ತಾರೆ: “ಮುಂಗಾರು ಹಂಗಾಮಿನ ಈರುಳ್ಳಿ ಹೆಚ್ಚಿನ ತೇವಾಂಶವನ್ನು ಹೊಂದಿರುತ್ತದೆ ಮತ್ತು ಬೇಗ ಹಾಳಾಗುತ್ತದೆ. ಆದರೆ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಈರುಳ್ಳಿ ಕಡಿಮೆ ತೇವಾಂಶವನ್ನು ಹೊಂದಿರುತ್ತವೆ ಮತ್ತು ಹೆಚ್ಚಿನ ಸಮಯದವರೆಗೆ ಸಂಗ್ರಹಿಸಬಹುದು.

ಈರುಳ್ಳಿ ಬೆಲೆಗಳು ಗಗನಕ್ಕೇರುತ್ತಿದ್ದಂತೆ ಮತ್ತು ಅವುಗಳ ಗಾತ್ರಗಳು ಚಿಕ್ಕದಾಗುತ್ತಾ ಹೋಗುತ್ತಿದೆ. ಇದೆಲ್ಲವೂ ಹವಾಮಾನಕ್ಕೆ ಸಂಬಂಧಿಸಿದ್ದಾಗಿದೆ ಎಂದು ಹೇಳುತ್ತಾರೆ ರಫ್ತುದಾರ ದೀಪಕ್ ರಾಯ್.

ಈರುಳ್ಳಿಯನ್ನು ಅಕಾಲಿಕವಾಗಿ ಕಟಾವು ಮಾಡುವುದರಿಂದ ಅದು ಗಾಢ ವಾಸನೆ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುತ್ತದೆ. ಇತ್ತೀಚಿಗೆ ಭಾರತದ ಬಹುಪಾಲು ಈರುಳ್ಳಿ ಬೆಳೆಯುವ ಮಹಾರಾಷ್ಟ್ರವನ್ನು ಮುಳುಗಿಸಿದ ಮಳೆಯು, ಈರುಳ್ಳಿ ಸಂಪೂರ್ಣವಾಗಿ ಪಕ್ವವಾಗುವ ಮೊದಲೇ ಅವುಗಳನ್ನು ಕಟಾವು ಮಾಡುವಂತೆ ರೈತರನ್ನು ಪ್ರೇರೇಪಿಸಿತ್ತು.

ಹೆಚ್ಚಿನ ತೇವಾಂಶ ಹೊಂದಿರುವ ಈರುಳ್ಳಿ ಗುಲಾಬಿ ಬಣ್ಣದಿಂದ ಬಿಳಿ ಬಣ್ಣಕ್ಕಿರುತ್ತದೆ ಮತ್ತು ಕಡಿಮೆ “ಮಸಾಲೆಯುಕ್ತ” ವಾಗಿರುತ್ತದೆ. ಕಡಿಮೆ ತೇವಾಂಶ ಇರುವವು ಗಾಢ ವಾಗಿರುತ್ತದೆ ಮತ್ತು ಹೆಚ್ಚು ಕಹಿಯಾಗಿರುತ್ತಾದೆ.

“ಭಾರತೀಯ ಈರುಳ್ಳಿಯು ಮಾಂಸ, ಬೇಳೆ ಮತ್ತು ಇತರ ಪ್ರಧಾನ ಆಹಾರಗಳನ್ನು ಬೇಯಿಸಲು ಸೂಕ್ತವಾಗಿವೆ. ನಾವು ಈಗ ಮೊದಲ ಬಾರಿಗೆ ಟರ್ಕಿ ದೇಶದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ ಮತ್ತು ಅವು ನಮ್ಮ ಪಾಕಪದ್ಧತಿಗೆ ಸಮನಾಗಿ ಹೊಂದುತ್ತವೆಯೇ ಎಂದು ನಾವು ಇನ್ನೂ ಕಾದು ನೋಡಬೇಕಾಗಿದೆ ಎಂದು ನಾಫೆಡ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಅಧಿಕಾರಿಯ ಪ್ರಕಾರ, ಟರ್ಕಿಯ ಈರುಳ್ಳಿಯಲ್ಲಿ ತೇವಾಂಶ ಹೆಚ್ಚು, ಮತ್ತು ಸಾಕಷ್ಟು ತೀವ್ರವಾಗಿರುವುದಿಲ್ಲಈಜಿಪ್ಟಿನ ಈರುಳ್ಳಿ ಭಾರತೀಯರು ಬಳಸುವುದಕ್ಕಿಂತ ಕಹಿಯಾಗಿರುತ್ತದೆ. ಭಾರತದ ಈರುಳ್ಳಿಗೆ ಹೆಚ್ಚು ಹೋಲಿಸಬಹುದಾದ ಈರುಳ್ಳಿ ಎಂದರೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಬರುವ ಈರುಳ್ಳಿ.

ವಿಭಿನ್ನ ಸ್ಥಳಗಳು, ವಿಭಿನ್ನ ಶೈಲಿಗಳು

ಕೆಲವು ರಾಜ್ಯಗಳು ನಿರ್ದಿಷ್ಟ ರೀತಿಯ ಈರುಳ್ಳಿಯನ್ನು ಬಳಸುತ್ತವೆ - ತಮಿಳುನಾಡಿನಲ್ಲಿ, ಗುಲಾಬಿ ಬಣ್ಣದ ಬಳ್ಳಾರಿ ಈರುಳ್ಳಿ ಮೇಲುಗೈ ಸಾಧಿಸಿದರೆ, ಕರ್ನಾಟಕದಲ್ಲಿ ಬಳಕೆಯಲ್ಲಿರುವುದು ಹೆಚ್ಚು ಗೋಳಾಕಾರದ ಗುಲಾಬಿ ಈರುಳ್ಳಿ. (ಇದು 2015 ರಲ್ಲಿ ಜಿಐ ಟ್ಯಾಗ್ ಗಳಿಸಿತು).

ಇನ್ನೊಂದು ವಿಶೇಷವೆಂದರೆ ಈರುಳ್ಳಿಯಿಂದ ತಯಾರಿಸಲಾಗುವ ‘ಈರುಳ್ಳಿ ಪಾಯೇಶ್’ ಪಶ್ಚಿಮ ಬಂಗಾಳದಲ್ಲಿ ಜನಪ್ರಿಯ ಖಾದ್ಯವಾಗಿದೆ. ಹೀಗೆ ವಿವಿಧ ಪ್ರದೇಶಗಳಲ್ಲಿ ಈರುಳ್ಳಿಗಳ ಬಣ್ಣ, ಗಾತ್ರ, ಗುಣ ಭಿನ್ನವಾಗಿರುತ್ತದೆ ಮತ್ತು ಅದರ ಬಳಕೆ ಕೂಡ ವಿಭಿನ್ನವಾಗಿರುತ್ತದೆ.   

(ಸೌಜನ್ಯ : ಸಿಮ್ರನ್ ಸಿರೂರ್, ದಿ ಪ್ರಿಂಟ್)