ಒನ್ ಲವ್ 2 ಸ್ಟೋರಿ: ಟ್ರೇಲರ್ ಸೃಷ್ಟಿಸಿದ ಕಮಾಲ್!

ಒನ್ ಲವ್ 2 ಸ್ಟೋರಿ: ಟ್ರೇಲರ್ ಸೃಷ್ಟಿಸಿದ ಕಮಾಲ್!

ವಸಿಷ್ಟ ಬಂಟನೂರು ನಿರ್ದೇಶನದ ಒನ್ ಲವ್ 2 ಸ್ಟೋರಿ ಇದೇ ತಿಂಗಳು 16ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಈ ಮೂಲಕ ಸಿನಿಮಾವನ್ನೇ ಧ್ಯಾನಿಸುವ, ಬದುಕು ಎತ್ತೆತ್ತಲೋ ತೊಯ್ದಾಡಿಸಿದರೂ ಮತ್ತೆ ಬಣ್ಣದಲೋಕಕ್ಕೆ ಬಂದು ಸೇರಿದ ಪ್ರತಿಭಾವಂತ ಯುವ ತಂಡವೊಂದು ಚಿತ್ರರಂಗಕ್ಕೆ ಪರಿಚಯವಾಗುತ್ತಿದೆ. ಈ ತಂಡ ತನ್ನ ಕ್ರಿಯೇಟಿವಿಟಿ ಮತ್ತು ಹೊಸ ಬಗೆಯ ಆಲೋಚನಾ ಕ್ರಮಗಳನ್ನು ಟ್ರೇಲರ್ ಮೂಲಕವೇ ಜಾಹೀರು ಮಾಡಿದೆ. ಅಷ್ಟಕ್ಕೂ ಒನ್ ಲವ್ 2 ಸ್ಟೋರಿಯತ್ತ ಪ್ರೇಕ್ಷಕರು ಗಮನ ಹರಿಸಿದ್ದೇ ಈ ಟ್ರೇಲರ್ ಮೂಲಕ!

ಒಂದು ಸಿನಿಮಾವನ್ನು ರೂಪಿಸೋದು ಎಷ್ಟು ಕಷ್ಟದ ಕೆಲಸವೋ ಅದನ್ನು ಕೆಲವೇ ಸೆಕೆಂಡುಗಳ ಟ್ರೇಲರ್ ಮೂಲಕ ಕಟ್ಟಿಕೊಡೋದೂ ಕೂಡಾ ಅಷ್ಟೇ ಸವಾಲಿನ ಕೆಲಸ. ಅದನ್ನು ಪರಿಣಾಮಕಾರಿಯಾಗಿ ರೂಪಿಸಿಬಿಟ್ಟರೆ ಗೆಲುವಿನ ಮೊದಲ ಮೆಟ್ಟಿಲನ್ನು ಹತ್ತಿ ನಿಂತಂತೆಯೇ. ನಿರ್ದೇಶಕ ವಸಿಷ್ಟ ಬಂಟನೂರು ಖಂಡಿತವಾಗಿಯೂ ಅದರಲ್ಲಿ ಗೆದ್ದಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಸ್ವಲ್ವ ಸಮಯದಲ್ಲಿಯೇ ಪ್ರೇಕ್ಷಕರನ್ನೆಲ್ಲ ಸೆಳೆದುಕೊಂಡಿದೆ. ಇದರಲ್ಲಿನ ಡೈಲಾಗ್‍ಗಳಂತೂ ಸಖತ್ ಫೇಮಸ್ ಆಗಿ ಬಿಟ್ಟಿವೆ.

ಒನ್ ಲವ್ 2 ಸ್ಟೋರಿ ಎಂಬ ಹೆಸರು ಕೇಳಿದರೇನೇ ಇದೊಂದು ಪ್ರೇಮ ಕಥಾನಕ ಎಂಬ ಅಂಶ ಸ್ಪಷ್ಟವಾಗುತ್ತದೆ. ಒಟ್ಟಾರೆ ಸಿನಿಮಾದಲ್ಲಿ ಪ್ರೀತಿಯತ್ತ ಫೋಕಸ್ ಮಾಡಿರೋದು ನಿಜವಾದರೂ ಕಥೆಗೆ ಅಂಥಾ ಚೌಕಟ್ಟು ಹಾಕಿಲ್ಲವಂತೆ. ಆದ್ದರಿಂದಲೇ ಅದರಲ್ಲಿ ಎಲ್ಲರ ಬದುಕಿಗೂ ಹತ್ತಿರವಾದ, ಪ್ರತಿಯೊಬ್ಬರಿಗೂ ತಮ್ಮದೇ ಅನ್ನಿಸುವಂಥಾ ವಿಚಾರಗಳನ್ನೂ ಬೆರೆಸಲಾಗಿದೆ. ಎಂಥವರೂ ಥ್ರಿಲ್ ಆಗುವಂಥಾ ಸಾಹಸ ಸನ್ನಿವೇಶಗಳು, ಭರಪೂರ ಮನೋರಂಜನಾತ್ಮಕ ಅಂಶಗಳೊಂದಿಗೆ ಈ ಚಿತ್ರ ಸೊಗಸಾಗಿ ಮೂಡಿ ಬಂದಿದೆಯಂತೆ. ಇದರ ಅಸಲೀ ಕಮಾಲ್ ಯಾವ ರೀತಿಯಿದೆ ಅನ್ನೋದು ವಾರದೊಪ್ಪತ್ತಿನಲ್ಲಿಯೇ ಜಾಹೀರಾಗಲಿದೆ.