ಒನ್ ಲವ್ 2 ಸ್ಟೋರಿ: ಕಾಲೇಜ್ ಕಾರಿಡಾರಿನಲ್ಲಿ ಬದುಕಿನ ದರ್ಶನ!

ಒನ್ ಲವ್ 2 ಸ್ಟೋರಿ: ಕಾಲೇಜ್ ಕಾರಿಡಾರಿನಲ್ಲಿ ಬದುಕಿನ ದರ್ಶನ!

ಈ ಪ್ರೀತಿ ಪ್ರೇಮಗಳಾಗಲಿ, ಕಾಲೇಜು ಕ್ಯಾಂಪಸ್‍ಗಳಾಗಲೀ ಸಿನಿಮಾ ಮಂದಿಯ ಕಣ್ಣಿಗೆ ಸದಾ ಕಲರ್ ಫುಲ್ ಆಗಿಯೇ ಕಾಣಿಸುತ್ತೆ. ಇವೆರಡೂ ಸಿನಿಮಾ ಫ್ರೇಮಿಗೆ ಸದಾ ಹೊಸದಾಗಿಯೇ ಒಗ್ಗಿಕೊಳ್ಳುತ್ತಾ ಬಂದಿವೆ. ಅದರ ಹೊಳಪು, ಪ್ರೇಕ್ಷಕರನ್ನು ಆವರಿಸಿಕೊಳ್ಳೋ ತೀವ್ರತೆಗಳೆಲ್ಲ ಅವರವರ ಪರಿಕಲ್ಪನೆಗೆ ತಕ್ಕುದಾಗಿ ನಿರ್ಧಾರವಾಗುತ್ತೆ. ಆದರೆ ಹೊಸದಾಗಿ ಅಡಿಯಿರಿಸೋ ಯುವ ಮನಸುಗಳು ಪ್ರೇಮಕಥೆಗಳನ್ನು ಹೊಸಾ ಭಾವಗಳೊಂದಿಗೆ ಪ್ರೇಕ್ಷಕರೆದುರು ಅನಾವರಣಗೊಳಿಸುತ್ತಿವೆ. ಅಂಥಾದ್ದೇ ಭರವಸೆಗೆ ಕಾರಣವಾಗಿರೋ ಒನ್ ಲವ್ 2 ಸ್ಟೋರಿ ಚಿತ್ರ ಈ ವಾರ ಬಿಡುಗಡೆಗೆ ರೆಡಿಯಾಗಿದೆ.

ಒನ್ ಲವ್ 2 ಸ್ಟೋರಿ ವಸಿಷ್ಟ ಬಂಟನೂರು ನಿರ್ದೇಶನದ ಚಿತ್ರ. ಇದು ಈ ಚಿತ್ರತಂಡದಲ್ಲಿ ಅನೇಕರಿಗೆ ಮೊದಲ ಹೆಜ್ಜೆ. ಆದರೆ ಈ ಪ್ರಥಮ ಪ್ರಯತ್ನದಲ್ಲಿಯೇ ಈ ತಂಡ ಅಚ್ಚರಿದಾಯಕವಾಗಿ ಸೌಂಡ್ ಮಾಡುತ್ತಿದೆ. ಟ್ರೈಲರ್ ಹಾಗೂ ಹಾಡುಗಳ ಮೂಲಕವೇ ಎಲ್ಲರನ್ನು ಸೆಳೆದುಕೊಳ್ಳುವ ಮೂಲಕ ಎಲ್ಲ ವರ್ಗದ ಪ್ರೇಕ್ಷಕರೂ ಈ ಸಿನಿಮಾದತ್ತ ಕಣ್ಣಿಟ್ಟು ಕಾಯುವಂತಾಗಿದೆ. ಬಿಡುಗಡೆಯ ಕಡೇಯ ಕ್ಷಣಗಳೆಲ್ಲ ಇಂಥಾ ನಿರೀಕ್ಷೆಗಳಿಂದಲೇ ರಂಗು ತುಂಬಿಕೊಂಡಿರೋದರಿಂದ ಸಹಜವಾಗಿಯೇ ಈ ತಂಡ ಸಂತಸದ ಮೂಡಿನಲ್ಲಿದೆ.

ಇದು ಕಾಲೇಜು ಕಾರಿಡಾರಿನಲ್ಲಿ ಜರುಗೋ ಪ್ರೇಮಕಥೆಯಾಧಾರಿತ ಚಿತ್ರ. ಆದರೆ ಇಲ್ಲಿ ಬರೀ ಪ್ರೀತಿ ಪ್ರೇಮಗಳಿಗೆ ಮಾತ್ರವೇ ಪ್ರಾಶಸ್ತ್ಯ ಕೊಡಲಾಗಿದೆ ಅಂದುಕೊಂಡರೆ ತಪ್ಪಾಗುತ್ತೆ. ಯಾಕೆಂದರೆ, ಕಾಲೇಜು ಕಾರಿಡಾರಿನಲ್ಲಿ ಸಿಕ್ಕ ಸಿಕ್ಕ ಹುಡುಗೀರ ಜೊತೆ ಫ್ಲರ್ಟ್ ಮಾಡುತ್ತಾ ಸಾಗೋ ಯುವಕನಿಗೆ ಸೀರಿಯಸ್ ಪ್ರೀತಿಯ ಮೂಲಕ ಬದುಕಿನ ದರ್ಶನವಾಗೋ ವಿಭಿನ್ನ ಕಥೆಯನ್ನೂ ಈ ಚಿತ್ರ ಒಳಗೊಂಡಿದೆ. ಇಲ್ಲಿ ಪ್ರೀತಿ, ಸೆಂಟಿಮೆಂಟ್, ಮನೋರಂಜನೆ ಮತ್ತು ಭರ್ಜರಿ ಆಕ್ಷನ್ ದೃಶ್ಯಾವಳಿಗಳೂ ಮಿಳಿತವಾಗಿವೆ. ಇದೆಲ್ಲದರ ಅಸಲೀ ಮಜಾ ಈ ವಾರವೇ ನಿಮ್ಮೆಲ್ಲರ ಮುಂದೆ ಅವತರಿಸಲಿದೆ.