ಬದುಕನ್ನು 'ಬದುಕಿ' ಬಂದ ಆ ಒಂದು ದಿನ

ಬದುಕನ್ನು 'ಬದುಕಿ' ಬಂದ ಆ ಒಂದು ದಿನ

"ಅಲ್ಲಿ ಅವಸರವೂ ಸಾವಧಾನದ ಬೆನ್ನೇರಿತ್ತು" -ಕುವೆಂಪು ಅವರ ಸಾಲನ್ನು ಬುದ್ಧ ಹುಟ್ಟಿದ ಆ ದಿನ ಅಕ್ಷರಶಃ ಜೀವಿಸಿದೆವು.


   ಭೀಕರ ಬಿಸಿಲು ಮತ್ತು ಸೆಕೆಯಿಂದ ಬೆಳ್ಳಂಬೆಳಗ್ಗೇನೇ ಹೈರಾಣಾಗಿದ್ದ ನಾವು ಐಷಾರಾಮಿ ಕಟ್ಟಡಗಳ ಸಂದಿನಲ್ಲಿ ನುಸುಳಿ,ಧೂಳಿನಲ್ಲಿ ತೇಲಿ ನಮ್ಮ ಕಾರು ದೇವರ ಬೆಳಕೆರೆ ರಸ್ತೆಯಲ್ಲಿ ಸಾಗುತ್ತಿರುವಾಗಲೂ ಬೆಳೆಯುತ್ತಿರುವ ದಾವಣಗೆರೆ ಹೆಬ್ಬಾವಿನಂತೆ ಗದ್ದೆ ತೋಟಗಳ ನುಂಗುತ್ತಲೇ ಇತ್ತು.


     ಹಣದ ದುರಾಸೆಯ ಪೂರೈಸಲಾರದ ಗದ್ದೆ ತೋಟಗಳು ರಿಯಲ್ ಎಸ್ಟೇಟ್ ಕುಳಗಳ ಪಾಲಾಗಿ ಕೋಟಿ ಕೋಟಿ ನೋಟಾಗಿ, ಟಾರ್ ರಸ್ತೆಗಳಾಗಿ, ಚಿಕ್ಕ, ದೊಡ್ಡ, ಬಹುದೊಡ್ಡ ಬಂಗಲೆಗಳಾಗುತ್ತಿದ್ದವು. ನಿಚ್ಚಳ ನೀಲಾಕಾಶವನ್ನೂ ವಿದ್ಯುತ್ ತಂತಿಗಳು ನೀಳ ನೀಳ ಕುಯ್ದು ಚೂರು ಮಾಡಿದ್ದವು.


     ಆಧುನಿಕ ಜೀವನ ಕ್ರಮದ ದೊಡ್ಡ ಬಳುವಳಿಯೆಂದರೆ ಈ ಹಣ ಸಂಪಾದಿಸುವ,ಅಧಿಕಾರ ಗಿಟ್ಟಿಸುವ ಮಹಾನ್ ರೋಗ. ಇಂದು ಇದು ಸಾಮಾಜಿಕ ಒತ್ತಡವಾಗಿ ಪ್ರತಿಯೊಬ್ಬ ಕೃಷಿಕನನ್ನು ವೇಗಕ್ಕೆ ತಳ್ಳಿದೆ. ಹಾಗಾಗಿ ಕೃಷಿ ಮೂಲಕ ಲಾಭಕ್ಕಿಂತ ನಷ್ಟ ಜಾಸ್ತಿಯಾದರೆ ತನ್ನ ಹೊಲವನ್ನು ತಾನೇ ಸೈಟು ಮಾಡಿ ಮಾರತೊಡಗುತ್ತಾನೆ.ಇಲ್ಲವೇ ಬೇರೊಬ್ಬರಿಗೆ ಮಾರಿ ಬರೋಬ್ಬರಿ ಹಣ ಗಳಿಸಿ ಮಿಥ್ಯ ಸಂತೃಪ್ತನಾಗುತ್ತಿದ್ದಾನೆ.ನಗರದ ಆಸುಪಾಸಿನ ರೈತರ ಕತೆ ಇಂತಾದರೆ ಹಳ್ಳಿಗಳ ರೈತರ ಕತೆ ಸಾಲದ ಸರಪಳಿಯಲ್ಲಿ ಬಿಗಿಸಿಕೊಂಡಿರುವುದು. ಅದಕ್ಕಾಗಿಯೇ ಈಗ ಸರ್ಕಾರಗಳು ಅಧಿಕಾರಕ್ಕೆ ಬರಲು ಸಾಲದ ವಿಷಯವನ್ನೇ ಕೇಂದ್ರ ಕಾಳಜಿ ಮಾಡಿಕೊಂಡಂತೆ ನಟಿಸುತ್ತಿವೆ. ಬರಗಾಲ, ಕುಡಿಯುವ ನೀರಿನ ಸಮಸ್ಯೆ, ಬೆಂಬಲ ಬೆಲೆ ಇವುಗಳೆಲ್ಲ ಪರಿಹಾರ ಕಾಣದ ನಿತ್ಯ ಚರ್ಚೆಯ ವಿಷಯಗಳು. ಎಲ್ಲಿ ಗೋಪಾಲಗೌಡರು? ಎಲ್ಲಿ ಲೋಹಿಯಾ? ಎಲ್ಲಿ ನಂಜುಂಡಸ್ವಾಮಿ? ಇವರು ಚಳವಳಿ ಕಟ್ಟಿ ಬೀದಿಗಿಳಿದರೆ ತಮ್ಮನ್ನೇ ತಾವು ಮುಟ್ಟಿ ನೋಡಿಕೊಳ್ಳುತ್ತಿದ್ದ ರಾಜಕಾರಣಿಗಳು ಇದೀಗ ಚಳವಳಿಗಳನ್ನೇ ದುರ್ಬಲಗೊಳಿಸುವ ಕಲೆಗಾರಿಕೆಯನ್ನು ಕರತಲಾಮಲಕ ಮಾಡಿಕೊಂಡಿದ್ದಾರೆ.ಜಾತ್ಯತೀತತೆ, ಸಮಾಜವಾದ, ಸಮಾನತೆ ಎಂಬ ಸಂವಿಧಾನದ ಧ್ಯೇಯ ವಾಕ್ಯಗಳನ್ನು ಹೊತ್ತ ರಾಷ್ಟ್ರವೊಂದು ಈ ಸರ್ಕಾರಗಳ ಒಳಸಂಚಿನಿಂದ ಕಾರ್ಪೊರೇಟ್ ಪಾದಗಳಿಗೆ ಶರಣಾಗುತ್ತಲೇ ಬರಬರುತ್ತಾ ಸರ್ಕಾರಗಳೇ ಕಾರ್ಪೊರೇಟ್ ಗಳಾಗುತ್ತಿರುವುದು ಹಳ್ಳಿಯಿಂದ ನಗರಕ್ಕೆ ದೌಡಾಯಿಸುವ ಸಾವಿರಾರು ವಾಹನಗಳನ್ನು ನೋಡಿದಾಗ ತಿಳಿಯುವಂತಿತ್ತು.


    ದೇವರಬೆಳಕೆರೆ ಹಿಂದಿಕ್ಕಿ,ಬೂದಿಹಾಳ್ ನೆಹರು ನಗರ ಮಲ್ಲನಾಯಕನಹಳ್ಳಿಗಳನ್ನೂ ದಾಟಿ ಶ್ರೀನಿವಾಸ ನಗರ ಎಂದು ಹೆಸರಿಟ್ಟುಕೊಂಡಿದ್ದ ಪುಟ್ಟ ಹಳ್ಳಿಯ ನಾನು ಮತ್ತು ಗೆಳೆಯ ಸತೀಶ್ ತಲುಪಿದಾಗ ಬೆಳಗ್ಗೆ ಹತ್ತು ಗಂಟೆ. ಆನೆಯೆತ್ತರದ ಕಾಂಪೌಂಡ್, ಸಿರಿವಂತಿಕೆಯ ಬಿಂಕ ಸೂಸುವ ಗೇಟ್ ಇವಾವೂ ಇಲ್ಲದ ತೆಂಗಿನ ಗರಿಯಿಂದ ಮಾಡಿದ್ದ ತೋಟದ ಬಾಗಿಲನ್ನು ತೆರೆದು ಒಳ ಹೋದಾಗ ಒಬ್ಬ ಸಾದಾ ಸೀದಾ ವ್ಯಕ್ತಿ ಬರಮಾಡಿಕೊಂಡರು. ಮರದ ನೆರಳಿನ ಕೆಳಗೆ ವಿರಳ ಎಲೆ ಸುರಿದು ನೆರಳ ರಂಗೋಲಿ ಬರೆದಿದ್ದವು. ಕಲ್ಲು ಚಪ್ಪಡಿ, ಹಳೆಯ ಗೋಡೆಯ ತುಣುಕಿರಿಸಿ ಮಾಡಿದ ಕಟ್ಟೆಯ ಮೇಲೆ ಕೂತು ಸುತ್ತ ನೋಡುವ ಹೊತ್ತಿಗೆ ತಂಗಾಳಿ ಸುಳಿಯಿತು.


    ರಾಘವ್ ರೆಸಾರ್ಟ್ ಗಳ ಮಾತಿನಿಂದ ಶುರು ಮಾಡಿದರು. ಮನಶ್ಶಾಂತಿಗೋ, ನೆಮ್ಮದಿಗೋ,ಮೋಜಿಗೋ ದೊಡ್ಡ ಮೊತ್ತವ ತೆತ್ತು ತೆರಳುವ ಜನ ತಮ್ಮ ಹೊಲವನ್ನೇ ಬದುಕಲು ಸಹ್ಯವೆನಿಸುವಂತೆ  ಪರಿವರ್ತಿಸಿಕೊಂಡರೆ ಹೇಗೆ? ಕೆಂಡ ತೂರುತ್ತಿದ್ದ ಬಿಸಿಲಿಗೆ ಹಸಿರ ಬೊಗಸೆಯೊಡ್ಡಿ ನೆಲಕ್ಕೆ ತಂಪು ಚೆಲ್ಲುತ್ತಿದ್ದ ತೋಟದೊಳಗೆ ರಾಘವ್ ತಲೆ ಮೇಲೊಂದು ಬಿದಿರಿನ ಹ್ಯಾಟ್ ಧರಿಸಿ ಕರೆದುಕೊಂಡು ಹೊರಟರು. ಪೂರ್ವಿಕರ ತೆಂಗಿನ ತೋಟ 1996 ರಿಂದ ರಾಘವ್ ಅವರ ಸುಪರ್ದಿಗೆ ಸಿಕ್ಕಿ ನೆಲ ಹಸಿರಾಗಿದೆ,ಹೂವಾಗಿದೆ,ಹಣ್ಣಾಗಿದೆ.ಮಣ್ಣೆಂದರೆ ಮಣ್ಣಲ್ಲ ಸಜೀವ ಮೃದುವಾಗಿದೆ.ಯಾವುದೇ ವಿಷಕಾರಿ ಔಷಧವಿಲ್ಲದೆ,ರಸಾಯನಿಕ ಗೊಬ್ಬರ ಬಳಸದೆ,ಉಳದೆ,ಕಳೆಯನ್ನೂ ಅದರದರ ಬುಡದಲ್ಲಿ ಗೊಬ್ಬರವಾಗಿಸಿ ಮಾವಿನ ಬೇರೆ ಬೇರೆ ತಳಿಗಳು,ಹಲಸು,ಪೇರಲೆ,ಜಂಬು ನೇರಳೆ,ಮೂಸಂಬಿ,ದಾಳಿಂಬೆ,ಚೆರ್ರಿ,ಬೋರೆ,ಅಂಜೂರ,ಬಾಳೆ,ಸೇಬಿನ ಬೇರೆ ಬೇರೆ ತಳಿಗಳು ಹೀಗೆ ಸುಮಾರು ಎಪ್ಪತ್ತಕ್ಕೂ ಮಿಕ್ಕಿದ ವೈವಿಧ್ಯಮಯ ಹಣ್ಣಿನ ಗಿಡಗಳು ತಂದು ನೆಟ್ಟವುಗಳಾಗಿದ್ದರೂ ಸರ್ವ ಸ್ವತಂತ್ರವಾಗಿ ಸಹಜವಾಗಿ ಬೆಳೆಯುತ್ತಿರುವುದು ಈ ತೋಟದಲ್ಲಿಯೇ. ಕೆಂಡ ಸಂಪಿಗೆ,ದೇವ ಕಣಗಿಲೆ,ಕೆಂಪು ಕಣಗಿಲೆಯಂತಹ ಸುಂದರ ಹೂಗಳು ನಗು ಸೂಸುತ್ತಿರುವುದು ಇಲ್ಲಿಯೇ.ವಿವಿಧ ಬಗೆಯ ಗೆಡ್ಡೆ ಗೆಣಸು,ಚಕ್ಕೆ ಗಿಡ,ಸರ್ವ ಸಾಂಬಾರಿನ ಗಿಡ,ನಿಂಬೆ,ಬೆಟ್ಟದ ನೆಲ್ಲಿ ಇಲ್ಲಿ ಎಲ್ಲೆಂದರೆ ಅಲ್ಲಿ.


      ಕರಬೂಜ ಬಿಸಿಲಿಗೆ ಬೆನ್ನು ಕೊಟ್ಟು ನಿದ್ದೆ ಹೊಡೆಯುತ್ತಿತ್ತು.ಒಂದು ತಳಿಯ ಬತ್ತ ಕುಯ್ಸಿಕೊಂಡು ಬಣವೆಗೊಳ್ಳುತ್ತಿತ್ತು. ಮತ್ತೊಂದು ತಳಿ ಬೆಳೆದು ನಗುತ್ತಿತ್ತು. ಉದುರಿದ ತೆಂಗಿನ ಕಾಯಿ ಅಲ್ಲಲ್ಲೇ ವಿರಾಜಮಾನವಾಗಿದ್ದವು. ಬಿದ್ದ ಗರಿ,ಎಲೆ,ಕಡ್ಡಿ,ರೆಂಬೆ, ಕೊಂಬೆ ಎಲ್ಲವೂ ಮಣ್ಣಲ್ಲಿ ಮಣ್ಣಾಗಲು ಕೊಟ್ಟುಕೊಂಡಿದ್ದವು.ಸಹಜತೆಯೆಂದರೆ ಹೀಗೆ: ಒಂದು ಮೃದುವಾದ ಆರೈಕೆಯಲ್ಲಿ ಅದರದರ ಪಾಡಿಗೆ ಬದುಕುವುದು.


   ಮನೆಗೆ ಬೇಕಾದ ತರಕಾರಿ ಆ ಈ ಗಿಡಗಳ ನಡುವೆ. ಬೇಲಿಯಲ್ಲಿ ಪಡುವಲಾದರೆ, ಬದುವಿನಲ್ಲಿ ಟೊಮ್ಯಾಟೋ,ಮತ್ತೆಲ್ಲೋ ಮೆಣಸಿನ ಗಿಡ,ಕೊತ್ತಂಬರಿ ಕರಿಬೇವಿನಿಂದ ಹಿಡಿದು ಬಸಲೆ ಸೊಪ್ಪಿನವರೆಗೆ ಎಷ್ಟೆಲ್ಲಾ ಸೊಪ್ಪುಗಳು! 
              
   ನಾಗರಿಕರೆನ್ನಿಸಿಕೊಂಡ ನಮಗೆ ಬದುಕಲು ಹಣ ಬೇಕು.ಅದರ ಹಸಿವು ಎಷ್ಟಿದೆಯೆಂದರೆ ಇಹ ಪರ ಗೋರುವ ಪಿಶಾಚಿಯೊಡಲಿನದು!

ಅದಕ್ಕಾಗಿ ಏನೆಲ್ಲ ಮಾಡುತ್ತಿದ್ದೇವೆ.ನಾವು ಕಲಿತ ಶಾಲಾ ಕಾಲೇಜಿನ, ವಿಶ್ವವಿದ್ಯಾಲಯಗಳ ಔಪಚಾರಿಕ ಶಿಕ್ಷಣ ಸಂತೋಷದಿಂದ ಬದುಕಲು ಎಷ್ಟು ಪ್ರಮಾಣದಲ್ಲಿ ನೆರವಾಗಿದೆ? ಎಂಬ ರಾಘವ್ ರ ಪ್ರಶ್ನೆಗೆ ಉತ್ತರ ಹುಡುಕಲು ನಾನು ಮತ್ತು ಸತೀಶ್ ಇಬ್ಬರೂ ಸೋತೆವು.


    ಬದುಕಿನ ಮೂಲಭೂತ ಉದ್ದೇಶ ನೆಮ್ಮದಿಯೆನ್ನುವುದಾದರೆ ಅದು ಯಾವುದರಿಂದ ಸಿಗುತ್ತದೆ? ಎಂಬ ಪ್ರಶ್ನೆ ಕೇಳಿಕೊಂಡ ರಾಘವ್ ಅದಕ್ಕೆ ತಾವೇ ಉತ್ತರವಾಗಿದ್ದರು.ಅಂದರೆ ಇಡೀ ಪ್ರಾಣಿ ಪಕ್ಷಿ ಸಂಕುಲದಲ್ಲಿ ದುಡಿಮೆ ಮಾಡಹೊರಟವರು ಮನುಷ್ಯರು ಮಾತ್ರ. ಉಳಿದವುಗಳಿಗೂ ನಮ್ಮ ಹಾಗೆ ಜೀವವಿದೆ.ಆದರೆ ಅವು ದುಡಿಯದೆಯೂ ಸಹಜವಾಗಿ ಬದುಕುತ್ತಿವೆ.ಮನುಷ್ಯ ಕೂಡ ಹೀಗೆ ಬದುಕಿದ್ದರೆ ಇವತ್ತಿನ ಎಷ್ಟೋ ಸಮಸ್ಯೆಗಳು ಇರುತ್ತಲೇ ಇರುತ್ತಿರಲಿಲ್ಲವೇನೋ!


     ರಾಘವ್ ಮಾರುಕಟ್ಟೆಯಿಂದ ಕೊಂಡು ತರುವುದು ತೀರಾ ಕಡಿಮೆ. ಸದ್ಯ ಒಂದಿಷ್ಟು ರಾಗಿ ಈರುಳ್ಳಿ ಮತ್ತು ಬೆಲ್ಲ ಮಾತ್ರ ಕೊಳ್ಳುತ್ತಿರುವುದು.ಮುಂದಿನ ಬಾರಿ ಅವೂ ತಮ್ಮ ಹೊಲದಲ್ಲೇ ಬೆಳೆಯುತ್ತವೆ. ಅವರಿಗೆ ತಿಂಡಿಯೆಂದರೆ ತೋಟದಲ್ಲಿ ಸಿಗುವ ಹಣ್ಣುಗಳು.ಅವರೇ ಬೆಳೆದ ಪದಾರ್ಥಗಳು ಅಡುಗೆ ಸಾಮಗ್ರಿಗಳು. ಹಾಲು ಮತ್ತು ಅದರ ಉತ್ಪನ್ನಗಳನ್ನು ಅವರು ಉಪಯೋಗಿಸುವುದೇ ಇಲ್ಲ. ಯಾಕೆಂದು ಕೇಳಿದ್ದಕ್ಕೆ ಬಹು ಸ್ವಾರಸ್ಯಕರ ಸಂಗತಿಗಳ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ಕೆಲ ಪ್ರಾಣಿಗಳನ್ನು ನೋಡಿದರೆ ಅವು ಚಿಕ್ಕ ಮಗುವಾಗಿದ್ದಾಗ ಮಾತ್ರ ತಾಯಿಯ ಹಾಲು ಸೇವಿಸುತ್ತವೆ. ನಂತರ ನಿಸರ್ಗದ ಆಹಾರದಿಂದ ಬದುಕುತ್ತವೆ.ಮನುಷ್ಯನೂ ಹಾಗೆ ಬದುಕಲು ಸಾಧ್ಯ. ಎಲುಬು ಗಟ್ಟಿಮುಟ್ಟಾಗಿರಲು ಬೇಕಾದ ಕ್ಯಾಲ್ಷಿಯಂ ಹಾಲಿನ ಹೊರತಾಗಿಯೂ ರಾಗಿ, ನುಗ್ಗೆ ಸೊಪ್ಪು ಮತ್ತಿತರ ಪದಾರ್ಥಗಳಲ್ಲಿ ಸಿಗಬಲ್ಲದೆಂಬ ಅವರ ಮಾತುಗಳು ಅಸಲಿಯೆನಿಸಿದವು.


     ರಾಘವ್ ಗೆ ಇಬ್ಬರು ಮಕ್ಕಳು. ವಿಶಿಷ್ಟ ಎಂಬುವಳು ಮಗಳು. ವರ್ಚಸ್ ಎಂಬ ಮಗ.ಈ ಮಕ್ಕಳದು ಸ್ವಶಿಕ್ಷಣ.ಲಕ್ಷಗಟ್ಟಲೆ ಶುಲ್ಕ, ಯೂನಿಫಾರ್ಮ್,ಹೊರೆಯಾದ ಬ್ಯಾಗ್, ಅವಸರದಿ ತುರುಕುವ ಊಟ,ಸ್ಕೂಲ್ ಬಸ್,ಕಕ್ಕಸಪಡುವ ಆಟೋ ರಿಕ್ಷಾ,ರಾಶಿಗಟ್ಟಲೆ ಹೋಂ ವರ್ಕ್, ವಾರಕ್ಕೊಮ್ಮೆ ಪರೀಕ್ಷೆ, ಟಾಪರ್ ಪಟ್ಟಕ್ಕೆ ಪೈಪೋಟಿ,ಸಂಜೆ ಸಂಗೀತ, ನೃತ್ಯ,ಬೆಳಗ್ಗೆ ಕರಾಟೆ-ಈ ಯಾವುಗಳೂ ಇಲ್ಲದ ಕಲಿಕೆಯೇ ಸ್ವಶಿಕ್ಷಣ. ಮನೆ,ತೋಟ,ಸುತ್ತಮುತ್ತಲಿನ ಭೌಗೋಳಿಕ ಹಾಗೂ ಸಾಮಾಜಿಕ ಪರಿಸರವೇ ಶಾಲೆ. ಅಪ್ಪ ಅಮ್ಮ ಭಾಷೆ ಕಲಿಸುತ್ತಾರೆ. ಮುಂದಿನದು ಅವರಿಗೆ ಬದುಕು, ಬದುಕಿಗೆ ಅವರು ಕೊಟ್ಟು ಪಡೆಯುವ ಕಲಿಕೆ.ಈ ಆಧುನಿಕತೆ ಹೇರಿದ ರೇಜಿಗೆಗಳಾವುವೂ ಆ ಮಕ್ಕಳ ಬಳಿ ಸುಳಿದಿಲ್ಲ.ಅವರ ತೋಟದ ಬೇರಿನಂತೆ,ಮೊಳಕೆಯಂತೆ,ಗಿಡದಂತೆ,ಹೂವಂತೆ,ಕಾಯಿ ಹಣ್ಣಂತೆ ಬೆಳೆಯುತ್ತಿದ್ದಾರೆ. 


     ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಕೃಷಿಯ ಆಸಕ್ತಿಯಿದ್ದವರು ಇವರ ಈ "ಐಕಾಂತಿಕಾ" ತೋಟದಲ್ಲಿ ವಾರಗಟ್ಟಲೆ ತಂಗಿ ರಾಘವ್ ಅವರಿಂದ ಕಲಿತು ಹೋಗುವವರಿದ್ದಾರೆ.  ಬದುಕಿಗೆ ಅನಗತ್ಯವಾದದ್ದನ್ನು ತುರುಕಿಕೊಂಡು ನಾವೆಷ್ಟೇ ಬೀಗಿದರೂ ಅವರ ಸೌಮ್ಯತೆಯೆದುರು ಮಂಡಿಯೂರಬೇಕೆನಿಸುತ್ತದೆ.


    ಈ ಕೋಮುವಾದ,ಜಾತಿವಾದ,ಹೊಲಸು ರಾಜಕಾರಣದ ಅರಾಜಕತೆಗೆ ಅವರ ಬದುಕಿನ ವಲಯದಲ್ಲಿ ಜಾಗವೇ ಇಲ್ಲವೇನೋ ಎಂಬಂತಿದ್ದ ರಾಘವ್ ಅವರನ್ನು ಮನಸ್ಸಿರದೆಯೂ ಇವತ್ತಿನ ರಾಜಕಾರಣ ಕುರಿತು ಮಾತನಾಡುವಂತೆ ಕೇಳಿದೆ. ಇತ್ತೀಚಿನ ದಶಕಗಳ ಸರ್ಕಾರಗಳು ಮಣೆ ಹಾಕಿರುವುದು ಕಾರ್ಪೊರೇಟ್ ಕಂಪನಿಗಳಿಗೆ. ನಮಗೆ ಕಾಣಿಸದ ಹಿಂಬದಿಯ ರಂಗದ ನಾಟಕದ ಪರಿಣಾಮವೇ ಈ ದೇಶದ ಸ್ಥಿತಿ ಎಂಬ ಒಂದೇ ವಾಕ್ಯದಲ್ಲಿ ಎಲ್ಲವನ್ನೂ ಸಾಂದ್ರೀಕರಿಸಿದರು. ಈ ಮಾತುಗಳ ನಡುವೆ ಅವರ ಮಗ ವರ್ಚಸ್ ಬೆಲ್ಲದ ಪಾನಕ ನೀಡಿ ಮುಗುಳಿನಂತೆ ನಕ್ಕು ಹೊರಟ. ನಾವು ತಂಪಾದೆವು.


     ರಾಘವ್ ಮನೆಗೆ ನೀರು ಪೂರೈಸಿಕೊಳ್ಳಲು, ಬೆಳಕಿಗೆ ವಿದ್ಯುತ್ ಬಳಸುತ್ತಾರೆ.ಹಾಗೆಯೇ ಮನೆಯ ಮುಂದೆ ಸ್ನಾನ ಮಾಡಲು ನಿಸರ್ಗಕ್ಕೆ ಹತ್ತಿರವೆನಿಸುವ ಕೊಳವಿದೆ. ಕುಡಿಯಲು,ಬಳಸಲು ನೀರಿಗಾಗಿ ಒಂದು ಪುಟ್ಟ ಬಾವಿ ತೋಡಿಕೊಂಡಿದ್ದಾರೆ. ಕೇವಲ ಹದಿನೈದು ಅಡಿ ಆಳದ ಬಾವಿಯಲ್ಲಿ ಅವರ ಅಗತ್ಯ ಪೂರೈಸಿ ಮಿಕ್ಕುವಷ್ಟು ನೀರಿದೆ.


    ಇನ್ನು ಅವರ ಹಳೆ ಮನೆಯ ಹಿಂಬದಿಗೆ ತಮ್ಮ ನಿಸರ್ಗ ಸ್ನೇಹಿ ಹೊಸ ಮನೆ ನಿರ್ಮಾಣಗೊಳ್ಳುತ್ತಿದೆ. ಅವರ ಕೊಳದ ಕೆಸರಿಗೇ ಬತ್ತದ ಹುಲ್ಲು ಬೆರೆಸಿ ನಿರ್ಮಿಸಿದ ಗೋಡೆಗೆ ಅಲ್ಲೊಂದು ಇಲ್ಲೊಂದು ಕಲ್ಲುಗಳು. ಕಂಬಗಳಿಗೆ, ಸೂರಿಗೆ ಯಾರದೋ ಬೀಳಿಸಿದ ಹಳೆ ಮನೆಯ ಮರ ಮುಟ್ಟು. ನೆಲವೂ ಕೆಸರಿನದೇ. ಗಾಳಿಬೆಳಕಿಗೆ ಕಿಟಕಿ ಮತ್ತು ಮಣ್ಣಿನ ಗೋಡೆಯಲ್ಲಿ ತಳ ಒಡೆದ ಗಾಜಿನ ಬಣ್ಣ ಬಣ್ಣದ ಉದ್ದ ಬಾಟಲಿ ತೂರಿಸಿ ಅದರ ಮೂಲಕ ತಂಪು ಹವೆ ಒಳ ಬರುವಂತೆ ಮಾಡಿಕೊಂಡಿದ್ದಾರೆ.ಮನೆ ಮೇಲೆ ವಿಶಾಲ ಹರವಿನ ಕೆಂಪಂಚಿನ ಸೂರಿದ್ದರೆ, ಕಾಡುಗಲ್ಲಿನಿಂದ ಕೆಸರು ಬಳಸಿ ಕಟ್ಟಿದ  ಕಾಂಪೌಂಡ್ ಹಿಂಬದಿಗೆ ಮತ್ತು ಮನೆಯ ಬಲ ಬದಿಗಿದೆ.ಇಂಥದ್ದೊಂದು ಸಿಮೆಂಟು,ಮರಳು ಅತಿಯಾಗಿ ಬಳಸದ,ದುಬಾರಿ ಹಣ ವ್ಯಯಿಸದ ಮನೆಯ ಅಂಗಳದಲ್ಲಾಡುವ ಬಗೆ ಬಗೆಯ ಕೋಳಿ,ಬಾತು,ನಾಯಿ ಎಲ್ಲವೂ ಸ್ನೇಹಿತರಂತಿವೆ. ಅದನ್ನೆಲ್ಲ ಸರ್ವೇಂದ್ರಿಯಗಳಲ್ಲಿ ತುಂಬಿಕೊಂಡಾಗ:


      "ಸ್ವರ್ಗವೇ ಭೂಮಿಯೊಳಿರದಿರೆ ನೀನು
       ಬೇರೆಲ್ಲಿಯೂ ನೀನಿಲ್ಲ.
  ದೇವತೆಗಳು ನಾವಾಗಲಾರದಿರೆ ದೇವತೆಗಳು ಇನ್ನಿಲ್ಲ."

ಎಂಬ ಕುವೆಂಪು ಗೀತೆ ಅಲ್ಲಿ ಆಗಾಗ ನನ್ನ ಒಳಗಿವಿಯಲ್ಲಿ ಉಳಿಯುತ್ತಲೇ ಇತ್ತು.


     ಆಧುನಿಕತೆ, ಭೂಮಿ ಮತ್ತು ಮನುಷ್ಯನ ಸಂಬಂಧ ಹಾಗೂ ಸಂಕಟಗಳನ್ನು ಕುವೆಂಪು, ಶಿವರಾಮ ಕಾರಂತರು ತಮ್ಮ ಕಾದಂಬರಿಗಳಲ್ಲಿ ಬರೆದಿದ್ದನ್ನು ಓದಿದ್ದೆ. ಅಲ್ಲಿ ಹೋಗಿ ನೆಲದ ಜೊತೆಗೆ ನೆಲದಷ್ಟು ವಿನಯದಿಂದ ಬದುಕುತ್ತಿರುವ ಸಜೀವ ಪಾತ್ರಗಳ ಅರಿವಿನೊಳಗೆ ಬಿಟ್ಟುಕೊಂಡು ನಾನು,ಸತೀಶ್ ಮತ್ತೆ ಈ ನಗರವೆಂಬ ಇಟ್ಟಿಗೆ ಭಟ್ಟಿಗೆ ವಾಪಸ್ಸಾದೆವು. ಗಾಂಧಿಯನ್ನು ನಿತ್ಯ ಕೊಲ್ಲುವ ಮಾತನಾಡುವವರು ಆ ಮಹಾ ಚೇತನವನ್ನು ಎಂದೂ ಕೊಲ್ಲಲಾರರು. ಫುಕವೊಕ ಹಾಕಿದ ದಾರಿ ಮತ್ತು ಗಾಂಧಿಯ ದಾರಿ ಈ ಭೂಲೋಕದಲ್ಲಿ ಅಲ್ಲಲ್ಲಿ ಸಂಧಿಸಿ ಹಸಿರಾಗಿ ಹೊಮುತ್ತಲೇ ಇರುತ್ತವೆ. ಆಧುನಿಕ ಕೃಷಿಯಿಂದ ಹತಾಶರಾದ ಯುವಕರು ಇಂತಹ ಪ್ರಯೋಗಶೀಲತೆಗೆ ಮುಂದಾದರೆ ಫುಕವೊಕ ಅವರ "ವ್ಯವಸಾಯವೆಂದರೆ ಬರೀ ಬೆಳೆ ಬೆಳೆಯುವುದಲ್ಲ.ಅದರ ಮುಖ್ಯ ಗುರಿ ಮನುಷ್ಯ ತನ್ನನ್ನು ಉಳುಮೆ ಮಾಡಿಕೊಳ್ಳುತ್ತಲೇ ಪರಿಪೂರ್ಣತೆ ಸಾಧಿಸುವುದು" ಎಂಬ ಆಶಯ ಸಾರ್ಥಕವಾದೀತು. ಜಿ.ಡಿ.ಪಿ ಎಂಬ ಅಳತೆ ಪಟ್ಟಿ ಹಿಡಿದು ರಾಷ್ಟ್ರದ ಪ್ರಗತಿ ಅಳೆಯುವ ಬದಲು ಸಂತೋಷ ಮತ್ತು ಸಂತೃಪ್ತಿಗಳಿಂದ ಅಳೆಯುವ ನಿಟ್ಟಿನಲ್ಲಿ ಸಾಗಿದರೆ ನೆಲ ನೆಮ್ಮದಿ ಪಡೆದೀತು.