ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ !

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ !

"ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ" ಎಂದು ನಾವು ಚಿಕ್ಕವರಿದ್ದಾಗ ಪ್ರಜಾಪ್ರಭುತ್ವದ ವ್ಯಾಖ್ಯಾನ ಕುರಿತು ಪೌರನೀತಿಯ ಪಾಠ ಓದಿದ್ದೆವು.ಅದು ಪಾಠದಲ್ಲಷ್ಟೇ ಓದಿ,ಪರೀಕ್ಷೆಯಲ್ಲಿನ ಪ್ರಶ್ನೆಗಳಿಗೆ ಉತ್ತರ ಬರೆಯುವಂಥದ್ದು ಎಂದು ಈಗೀಗ ಸ್ಪಷ್ಟವಾಗುತ್ತಿದೆ. ಇದಕ್ಕೇನೋ ದೇಶ ಸ್ವತಂತ್ರವಾಗಿ ಬೇರೆಯವರಿಂದ ಹೊಡೆತ ತಪ್ಪಿಸಿ ನಮ್ಮವರೇ ನಮ್ಮನ್ನು ಹೊಡೆಯಲಿಕ್ಕೆ ಬೆನ್ನು ಕೊಟ್ಟು ಪ್ರಜೆಗಳು ಮತಗಳ ಸರಕಾಗಿದ್ದು.

ಪ್ರಜಾಪ್ರಭುತ್ವ ಹೊಂದಿದ ಬಹುದೊಡ್ಡ ದೇಶವೆಂದು ಕರೆಯಲ್ಪಡುವ ನಮ್ಮ ದೇಶದ ರಾಜಕಾರಣ ಸಾಗುತ್ತಿರುವ ರೀತಿಗೆ ನಿತ್ಯವೂ ಭೀತಿ ಶುರುವಾಗಿಬಿಟ್ಟಿದೆ.ಇದಕ್ಕೆಲ್ಲ ಯಾರನ್ನು ಯಾವ ರೀತಿ ದೂರುವುದು? ಹೇಗೆ ಸರಿಪಡಿಸುವುದು? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿಕೊಂಡು ಸಾಕಾಗಿ ಹೋಗಿದೆ. ಕಂಡುಕೊಂಡ ಯಾವ ನೈತಿಕ ಉತ್ತರಗಳೂ ನೀತಿಗೆಟ್ಟ ಈ ವ್ಯವಸ್ಥೆಯಲ್ಲಿ ಅಲ್ಪಕಾಲವೂ ಬದುಕುಳಿಯುತ್ತಿಲ್ಲ. ಜನರ ಕಲ್ಯಾಣಕ್ಕೆ ಆರಿಸಿ ಬಂದ ಸರ್ಕಾರಗಳು ಪ್ರಕೃತಿ ಮತ್ತು ಸಮಾಜವನ್ನು ಉಳಿಸಿ ಬೆಳೆಸುವ ಬದಲು ಹೋಳು ಮಾಡಿದವು.ಹಣವನ್ನೇ ಬಹು ದೊಡ್ಡ ಮೌಲ್ಯವಾಗಿಸಿ ಮಾನವ ಸಂಬಂಧಗಳ ಬೆಲೆಯನ್ನು ಮಾರುಕಟ್ಟೆಯ ಮೂಲಕ ಅಳೆದವು. ಆಗಲೇ ಜೀವಂತವಿದ್ದ ಜಾತಿ ಧರ್ಮಗಳನ್ನೂ ಇದೇ ಹಿತಾಸಕ್ತಿಗೆ ಬಳಸಿಕೊಂಡು ಯುವಕರನ್ನು ಬೇಟೆಗಾರರನ್ನಾಗಿಸಿದವು. ಪ್ರೀತಿ ಪ್ರೇಮದಂತಹ ಸಹಜ ನಡವಳಿಕೆಗಳನ್ನೂ ನೇಣುಗಂಬಕ್ಕೇರಿಸಿ ಒಟ್ಟಾರೆ ಸಮಾಜದ ಸ್ವಾಸ್ಥ್ಯ ಕದಡಿ ಒಳ್ಳೆಯದೆಂಬುದು ಈ ನೆಲದ ಮೇಲೆ ಬೆಳೆಯದಂತೆ ವ್ಯವಸ್ಥಿತ ಕುತಂತ್ರಗಳ ಹೆಣೆದವು.ಇದೆಲ್ಲದರ ಬಲಿಪಶು ದುರ್ಬಲರು ಮಾತ್ರ. 

ಎಲ್ಲರಿಗೆ ಅನ್ನ ಬೆಳೆದವನು, ಪಾದಗಳಿಗೆ ರಕ್ಷೆ ಕೊಟ್ಟವನು,ಮೈಗೆ ಬಟ್ಟೆ ಹೊದಿಸಿದವನು, ಹೀಗೆ ಇಲ್ಲಿ ಉಂಡು ಉಸಿರಾಡಿ ಬಾಳುವಂತೆ ಮಾಡಿದವರ ಹೆಣಗಳ ನಡುಬೀದಿಯಲ್ಲಿ ಒಟ್ಟಿ ಸುಟ್ಟರೂ ಅದು ಪ್ರಚಾರ ಸಾಮಗ್ರಿಯಾಯಿತೇ ಹೊರತು ಆಳುವ ವ್ಯವಸ್ಥೆಯ ಅಂತಃಕರಣವನ್ನು ಬೆಳೆಸಲೇ ಇಲ್ಲ. ಹೊರಗಿದ್ದಾಗ ಮನುಷ್ಯರಾಗಿದ್ದವರು,ಆದರ್ಶದ ಮಾತಾಡಿದವರೆಲ್ಲ ಆ ವರ್ತುಲ ಪ್ರವೇಶಿಸಿದೊಡನೆ ಜಾಣ ವ್ಯಾಪಾರಿಗಳಾದರು.ತಾವು ಕಲಿತ ಸಕಲ ಜ್ಞಾನವನ್ನೆಲ್ಲ ನಿತ್ಯ ವಂಚನೆಗೆ ಅತ್ಯಾಕರ್ಷಕ ಸರಕು ಮಾಡಿಕೊಂಡರು. ಒಂದು ವ್ಯವಸ್ಥೆ ಹುಟ್ಟಿ ಬೆಳೆಯುತ್ತಾ ಸುಧಾರಿಸುವ ಬದಲು ಲಜ್ಜೆಗೆಟ್ಟ ಸ್ಥಿತಿಗೆ ತಲುಪುವಂಥಾದದ್ದು ಪ್ರಜಾಪ್ರಭುತ್ವದ ದೌರ್ಭಾಗ್ಯವೇ ಸರಿ‌.

ಇಲ್ಲಿ 'ಅರ್ಥ'ದ ಮುಂದೆ ಎಲ್ಲ ಅರ್ಥಗಳೂ ಕಳೆದು ಹೋಗಿವೆ.ಸುಳ್ಳಿನ ಬಿತ್ತನೆಯೇ ಯಥೇಚ್ಛ ನಡೆದು ಸತ್ವಶಾಲಿಯಾದದ್ದಕ್ಕೆ ಗೆದ್ದಲು ಹಿಡಿದಂತಾಗಿದೆ. ಇದನ್ನೆಲ್ಲ ಹೀಗೆಯೇ ನೋಡುತ್ತಲಿರಬೇಕೆ? ಬದಲಾವಣೆ ಬೇಕಾಗಿ ಜನತೆಯ ಕಡೆ ಮುಖ ಮಾಡಿದರೆ ಅಲ್ಲಿಯೂ ಹಣ ಕೇಂದ್ರಿತ ಆಲೋಚನೆಗಳು ತುಂಬಿ ಒಳ್ಳೆಯ ಗಿಡವೊಂದನ್ನು ನೆಟ್ಟು ಬೆಳೆಸುವುದು ಸುಲಭ ಸಾಧ್ಯವೇನಲ್ಲ. ಚುನಾವಣೆಯ ಸಂದರ್ಭದಲ್ಲಿ ಮತದಾನದ ಪಾವಿತ್ರ್ಯದ ಬಗ್ಗೆ ಅರುಹಿದವರು ಚುನಾಯಿತರ ಅಪವಿತ್ರ ನಡವಳಿಕೆಯನ್ನು ಕಂಡು ಮೌನ ವಹಿಸುತ್ತಾರೆ. ಮತದಾರನಿಗೆ ಉತ್ತರದಾಯಿತ್ವದಿಂದಿರಬೇಕಾದ ಚುನಾಯಿತನಾದವನ ನೈತಿಕತೆಯನ್ನು ಪ್ರಶ್ನಿಸದ ಆ ಅಧಿಕಾರ ಹೊಂದಿದವರ ಜಾಣ ಮೌನ ಅಂತಿಮವಾಗಿ ವಂಚನೆಯ ವ್ಯೂಹವನ್ನೇ ಬಲಪಡಿಸುತ್ತದೆ. ಇಲ್ಲವೇ ಜನಸಾಮಾನ್ಯರ ಎರಡು ದಿನದ ಚರ್ಚೆಯ ವಿಷಯವಾಗಿ ಬಹು ಬೇಗನೆ ಅಸುನೀಗುತ್ತದೆ‌‌.

ಈ ಕೆಲಸವನ್ನು ಮಾಧ್ಯಮಗಳೂ ಗಂಭೀರವಾಗಿ ಮಾಡದೆ ಹಾವು ಏಣಿ ಆಟದ ತಂತ್ರ ಪ್ರತಿತಂತ್ರಗಳನ್ನೇ ರೋಚಕವಾಗಿ ಮುಂದಿಡುತ್ತಾ ಕಡು ಭ್ರಷ್ಟ ಕುಚೋದ್ಯವನ್ನು ಥ್ರಿಲ್ಲರ್ ಸಿನಿಮಾದಂತೆ ತೋರಿಸುತ್ತಾ ತಾವೂ ಕೂಡ ಹಣ ಕೇಂದ್ರಿತ ವ್ಯವಸ್ಥೆಯ ಪಾಲುದಾರರೆಂಬುದನ್ನು ಬಹುಕಾಲದಿಂದಲೂ ದೃಢಪಡಿಸುತ್ತಾ ಬಂದಿವೆ. ಹಾಗಾಗಿ ಈ ರಾಜಕೀಯ, ಆಡಳಿತ, ಮಾಧ್ಯಮ ವ್ಯವಸ್ಥೆಗಳ ದಾರಿ ಬೇರೆ ಬೇರೆಯಾದರೂ ಗುರಿ ಒಂದೇ, ಅದು ಹಣ ಸಂಪಾದನೆ ಮತ್ತು ಸಂಪತ್ತಿನ ಸಂರಕ್ಷಣೆ. ಇಂತಹ ವ್ಯವಸ್ಥೆಯನ್ನು ಬಲಗೊಳಿಸುವುದಕ್ಕಾಗಿ ಜನಸಾಮಾನ್ಯ ತನ್ನ ತೆರಿಗೆಯ ಹಣದಲ್ಲಿ ಚುನಾವಣೆಗಳ ಹೊರುತ್ತಲೇ ಇರಬೇಕು. ಬರಗಾಲದಲ್ಲೂ ಭರಪೂರ ಹುಸಿಗಳ ಉಂಡು ಮಲಗಬೇಕು.ಜಾತಿ ಕಟ್ಟಳೆಗಳ ದಾಟಿ ಜನ ಚಳವಳಿಯೊಂದು ಪ್ರಜಾಸತ್ತೆಯ ಉಳಿಸಿಕೊಳ್ಳಲು ಬೆಳೆಯದಿದ್ದರೆ ಈ ಆತ್ಮವಿನಾಶವೆಂಬ ಸಮೂಹ ಸನ್ನಿ ಕೊನೆಗಾಣಲಾರದು.