ನಮ್ಮ ಕಣ್ಣಳತೆಗೆ ಸಿಕ್ಕ ಪ್ರತಿಭಟನೆ, ಬಂಧನದ ದೃಶ್ಯಗಳು..!

"ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು" ಎಂಬಂತೆ ಎಲ್ಲೆಡೆಯಿಂದ ಬರುತ್ತಿದ್ದ  ಆ ಜನಸಾಗರದಲ್ಲಿ ಕಳೆದು ಹೋದೆ..!! ಹೊರಬರುವಷ್ಟರಲ್ಲಿ ಸಂಜೆಯಾಗಿತ್ತು. ಒಬ್ಬ ಸರಿಯಾದ ನಾಯಕನೂ ಇಲ್ಲದೆ ಒಂದು ಹೋರಾಟ ಇಡೀ ದೇಶಾದ್ಯಂತ ಹರಳುಗಟ್ಟುತ್ತಿದೆ ಎಂದರೆ ಎಂತಾ ಬೆರಗು ಮತ್ತು ಆಶ್ಚರ್ಯ!!

ನಮ್ಮ ಕಣ್ಣಳತೆಗೆ ಸಿಕ್ಕ ಪ್ರತಿಭಟನೆ, ಬಂಧನದ ದೃಶ್ಯಗಳು..!

ಬೆಂಗಳೂರಿನಲ್ಲಿ ಡಿಸೆಂಬರ್ 19ರಂದು ನಿಷೇದಾಜ್ಞೆ ವಿಧಿಸಿದ್ದರೂ ಯಾವ ಪ್ರತಿಭಟನಕಾರರೂ ಕೇರ್ ಮಾಡದೆ ಬೀದಿಗೆ ಬಂದಿದ್ದರು! ನಾನು ಮತ್ತು ಹಿಂದೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಬಿ.ಟಿ.ವೆಂಕಟೇಶ್ ನಮ್ಮ ವಕೀಲಿ ಡ್ರೆಸ್ ನಲ್ಲಿಯೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಟೌನ್ ಹಾಲ್ ಬಳಿಗೆ ಬಂದೆವು. ಟೌನ್ ಹಾಲ್ ಬಳಿ ಬ್ಯಾರೀಕೇಟ್ ಗಳನ್ನು ಹಾಕಿ ಪೋಲೀಸ್ ತಡೆಗೋಡೆ ಕಟ್ಟಿದ್ದರಿಂದ ಪ್ರತಿಭಟನಕಾರರು ಟೌನ್ ಹಾಲ್ ಎದುರಲ್ಲಿದ್ದ ಕೆನರಾ ಬ್ಯಾಂಕ್ ಬಳಿ ಪುಟ್ ಪಾತಿನಲ್ಲಿ ನಿಂತು ಘೋಷಣೆ ಕೂಗುತ್ತಾ ಪ್ರತಿಭಟಿಸುತಿದ್ದರು. ನಾವು ಅವರೊಂದಿಗೆ ಸೇರಿಕೊಂಡೆವು, ಧಿಕ್ಕಾರ ಕೂಗಿದೆವು.. ನಿಷೇದಾಜ್ನೆಯನ್ನು ದಿಕ್ಕರಿಸಿದೆವು! ಎಲ್ಲಾ ಪ್ರತಿಭಟನೆಕಾರರನ್ನು ಬಂಧಿಸಿದ ಪೊಲೀಸರು ಯಾಕೋ ನಮ್ಮನ್ನು ಬಂಧಿಸುವ ಧೈರ್ಯ ಮಾಡಲಿಲ್ಲ!

ನಾವು ಮತ್ತೇ ಟೌನ್ ಹಾಲ್ ಕಡೆ ಹೊರಟೆವು, ನಮ್ಮಂತೆ ಪ್ರತಿಭಟನೆಗೆ ಬಂದಿದ್ದ outlook ಪತ್ರಿಕೆಯ ಸಹಸಂಪಾದಕರಾಗಿದ್ದು, ನಂತರ ವಿಜಯಕರ್ನಾಟಕ, ಕನ್ನಡಫ್ರಭ ಮತ್ತು‌ ಏಸಿಯನೆಟ್ಟಿನ ಸಂಪಾದಕರಾಗಿದ್ದ ಸುಗತ ಶ್ರೀನಿವಾಸರಾಜು ಮತ್ತು ನಮ್ಮ ಲಂಕೇಶ್ ಪತ್ರಿಕೆಯ(ಈಗ ವಾರ್ತಾ ಭಾರತಿ)ಬಸವರಾಜು ಸಿಕ್ಕರು, ಅವರೊಂದಿಗೆ ಸದಾ ಕಪ್ಪು ಕನ್ನಡಕ‌ ಮತ್ತು ಬಿಳೀ ಶರ್ಟಿನ ವಿಶೇಷ 'ಅಸ್ಮಿತೆ'ಯಲ್ಲಿರುವ ನಮ್ಮ ಪ್ರತಿಭಟನಕಾರರ ನಿರಂತರ ಸಂಗಾತಿ ಪೆರಿಯಾರ್ ಮೂರ್ತಿ(ನರಸಿಂಹಮೂರ್ತಿ) ಸೇರಿಕೊಂಡರು. ಬಹುತೇಕ ವಿದ್ಯಾರ್ಥಿಗಳು, ಯುವಕರೇ ಪಾಲ್ಗೊಂಡಿದ್ದ ಪ್ರತಿಭಟನಕಾರರನ್ನು ಬಂಧಿಸಿರುವ ಪ್ರತಿ ಪೋಲೀಸ್ ಠಾಣೆಗೆ ಹೋಗಿ ಅವರ ಯೋಗ ಕ್ಷೇಮ ವಿಚಾರಿಸುವುದು, ಕಾನೂನಿನ ನೆರವು ನೀಡುವುದು ಮತ್ತು ಬಂಧಿತರಿಗೆ ನೈತಿಕ ಧೈರ್ಯ ತುಂಬುವುದು, ಅವರ ಮೇಲೆ ಪೋಲೀಸರು ಹಲ್ಲೆ ಮಾಡದಂತೆ ನೋಡಿಕೊಳ್ಳುವುದು ಮತ್ತು ಅವರಿಗೆ ಊಟ, ನೀರು, ಕಾಫಿ ತಲುಪಿಸುವುದೇ ಮುಂತಾದ ಜವಾಬ್ದಾರಿ ಹೊತ್ತು ನಾವು ಠಾಣೆಗಳಿಗೆ ಹೊರಟೆವು.

ಅದೊಂದು ಅಪೂರ್ವ ಅನುಭವ! ಎಸ್.ಜೆ.ಪಾರ್ಕ್ ಠಾಣೆಯಿಂದ ನಮ್ಮ ಪಯಣ ಆರಂಭವಾಯಿತು. ಸುಮಾರು ಜನ ಇತರೆ ವಿದ್ಯಾರ್ಥಿಗಳು ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ವಿದ್ಯಾರ್ಥಿಗಳೊಂದಿಗೆ ನಮ್ಮ ಯುವ ಕವಿಯತ್ರಿ ನಜ್ಮಾ ಬಂದಿತಳಾಗಿದ್ದಳು. ಇಪ್ಪತ್ತರ ಅರೆಯದ ಈ ಹೆಣ್ಣು ಮಗಳಿಗಿರುವ ಕಮಿಟ್ಮೆಂಟ್ ಅನ್ನು ಬೇರೆಲ್ಲೂ ನೋಡಲಿಲ್ಲ! ಆಶ್ಚರ್ಯವೆಂಬಂತೆ ಬಂಧನಕ್ಕೊಳಗಾದವರಲ್ಲಿ ಯಾರೋ ಅನಾಮಿಕರಂತಿದ್ದ ಹೆಣ್ಣುಮಗಳೊಬ್ಬರನ್ನು ಸುಗತ ರವರು ಗುರುತಿಸಿ ನಮಗೆ ಪರಿಚಯ ಮಾಡಿಸಿದರು. ಈಕೆ ಪ್ರೊ.ಎ.ಆರ್.ವಾಸವಿ ಎಂಬ ಸಮಾಜವಿಜ್ಞಾನದಲ್ಲಿ ಇನ್ಪೋಸಿಸ್ ಪ್ರಶಸ್ತಿ ವಿಚೇತರಾದವರು, millet drought ವಿಷಯದಲ್ಲಿ PhD ಪಡೆದವರು,  ಎನ್.ಐ.ಎ.ಎಸ್.ನಲ್ಲಿ ಕೆಲಸ ಮಾಡುತ್ತಾರೆ. ಸುಗತ ಪರಿಚಯಿಸುವವರೆಗೂ ನಮಗೆ ಈಕೆ ತಿಳಿಯಲೇ ಇಲ್ಲ! ಮೈಕ್ ಸಿಕ್ಕಾಗಲೆಲ್ಲ ಕ್ರಾಂತಿಕಾರಿ ಬಾಷಣಮಾಡುತ್ತಿದ್ದ ನಮ್ಮ 'ಪ್ರಗತಿಪರ' ಪ್ರೊಫೆಸರ್ ಗಳು, ಪತ್ರಕರ್ತರು,  ಸಾಹಿತಿಗಳು ನಿಷೇದಾಜ್ಞೆ ಎಂದಾಕ್ಷಣ ಸಿಕ್ಕಸಿಕ್ಕ ಬಿಲಗಳನ್ನು ಸೇರಿಕೊಂಡ ವಿಷಯ ತಿಳಿದಿದ್ದ ನಮಗೆ ಪ್ರೊ.ವಾಸವಿಯವರ‌ ತಣ್ಣಗಿನ‌ ಅನಾಮಿಕ ಪ್ರತಿಭಟನೆ ನಿಜಕ್ಕೂ ನಮ್ಮಲ್ಲಿ ಭರವಸೆಯನ್ನು ಮೂಡಿಸಿತು!

ಅದೇ ಠಾಣೆಯಲ್ಲಿ ಬಂಧಿತರಾಗಿದ್ದ ವಿದ್ಯಾರ್ಥಿಗಳ ಸೆಲ್ ಪೋನ್ ಗಳನ್ನು ಪೋಲಿಸರು ಕಿತ್ತು ಇಟ್ಟುಕೊಂಡಿದ್ದರು. ಇದರಿಂದಾಗಿ ಅವರಿಗೆ‌ ಹೊರಗಿನ ಸಂಪರ್ಕವೇ ಇರಲಿಲ್ಲ. ಠಾಣೆಯ ಹೊರಗೆ ನಿಂತಿದ್ದ ತಮ್ಮ ಸಹಪಾಠಿಗಳೊಂದಿಗೂ ಇವರು ಮಾತಾಡುವಂತಿರಲಿಲ್ಲ.‌ ಪೋಲೀಸರೊಂದಿಗೆ ಮಾತಾಡಿ ಎಲ್ಲರಿಗೂ ಸೆಲ್ ಪೋನ್ ಗಳನ್ನು ವಾಪಸ್ಸು ಕೊಡಿಸಿದ್ದರಿಂದ ಅವರ ಮುಖದಲ್ಲಿ ಕೊಂಚ‌ ಗೆಲುವಿನ ನಗೆ ಮೂಡಿತು. ಅವರಿಗೆ ಊಟದ ವ್ಯವಸ್ಥೆ  ಮಾಡಲು ಪೋಲಿಸರಿಗೆ ತಿಳಿಸಿ ಮುಂದಿನ ಠಾಣೆಗೆ ಹೊರಟೆವು. ಈ ಮಧ್ಯೆ ಸುಗತ ಅವರು ನಾವು ಕಂಡ ಪರಿಸ್ಥಿತಿಗಳನ್ನು 'ಟ್ವೀಟ್' ಮಾಡುತಿದ್ದರು. ಸುಗತ‌ ಅವರ ಟ್ವೀಟಿಗೆ ಸಿದ್ದರಾಮಯ್ಯ, ಎಂ.ಬಿ.ಪಾಟೀಲ್, ದಿನೇಶ್ ಗುಂಡೂರಾವ್ ಅವರೊಂದಿಗೆ ಅನೇಕ ಮಂದಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರು ಸ್ಪಂದಿಸ ತೊಡಗಿದರು!

ಆಡುಗೋಡಿ ಠಾಣೆಯಲ್ಲಿ ಬಂಧಿತರಾಗಿದ್ದ ಖ್ಯಾತ ಇತಿಹಾಸ ಬರಹಗಾರ ರಾಮಚಂದ್ರ ಗುಹ ಅವರನ್ನು ಭೇಟಿ ಮಾಡಿದೆವು. ಅಲ್ಲಿ ಸಿ.ಪಿ.ಎಂ.ನ ಜಿ.ಎನ್.ನಾಗರಾಜ್ ರೊಂದಿಗೆ ಅನೇಕ ಮಂದಿ ನಾಯಕರು, ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದರು. ಅವರೊಂದಿಗೆ ಚಿತ್ರಾನ್ನ ತಿನ್ನುತ್ತಾ ಕುಶಲೋಪರಿ ವಿಚಾರಿಸಿದೆವು.

ಗುಹ ಅವರೊಂದಿಗೆ ಮಾತನಾಡುವಾಗ ದೆಹಲಿ ಪೊಲೀಸರ ವೇಶದಲ್ಲಿದ್ದ ಮತಾಂಧರು ಜಾಮಿಯ ಮಿಲಿಯ ವಿಶ್ವವಿದ್ಯಾಲಯದ ಲೈಬ್ರರಿಯನ್ನು ಧ್ವಂಸ ಮಾಡಿದ್ದ ವಿಷಯ‌ ಚರ್ಚೆಗೆ ಬಂತು.‌ "ಇಡೀ ಸ್ವತಂತ್ರ ಚಳುವಳಿಯಲ್ಲಿ ಯಾರೂ ಲೈಬ್ರರಿಯನ್ನು ಧ್ವಂಸ ಮಾಡಿದ ಸನ್ನಿವೇಶ ಇರಲಿಲ್ಲ ಯಾಕೆಂದರೆ ಸ್ವತಂತ್ರ ಚಳುವಳಿಯಲ್ಲಿದ್ದವರೆಲ್ಲಾ ಪುಸ್ತಕ ಓದುವ ಪುಸ್ತಕ ಪ್ರೇಮಿಗಳಾಗಿದ್ದರು.  ತುರ್ತು ಪರಿಸ್ಥಿತಿಯಲ್ಲೂ ಯಾರೂ ಲೈಬ್ರರಿಗಳ ತಂಟೆಗೆ ಹೋಗಿರಲಿಲ್ಲ, ಆಗಿನ ಹೋರಾಟಗಾರರೂ‌ ಕೂಡ ಓದುವ ಅಭ್ಯಾಸವಿದ್ದ ಪುಸ್ತಕ ಪ್ರೇಮಿಗಳಾಗಿದ್ದದ್ದು ಇದಕ್ಕೆ ಕಾರಣವಾಗಿತ್ತು. ಈಗ ಈ ಕಾಲಘಟ್ಟದಲ್ಲಿ ಲೈಬ್ರರಿಯನ್ನು ಧ್ವಂಸ ಮಾಡಿದ್ದಾರೆಂದರೆ ಅರ್ಥಮಾಡಿಕೊಳ್ಳಿ‌." ಎಂದು ಗುಹ ಸಾಂಕೇತಿಕವಾಗಿ ಹೇಳುತ್ತಾ ಬೇಸರದಿಂದ ನಗುತಿದ್ದರು.

ಕೈಯಲ್ಲಿ ಅಂಬೇಡ್ಕರ್ ಪೋಸ್ಟರ್ ಒಂದನ್ನು ಹಿಡಿದೇ ಬಂಧನಕ್ಕೊಳಗಾಗಿದ್ದ ರಾಮಚಂದ್ರ ಗುಹ‌ ಬಂಧೀಖಾನೆಯಲ್ಲೂ ಪೋಸ್ಟರ್ ಒಂದನ್ನು ಹಿಡಿದೇ ಸುಗತ ಹಿಡಿದ ಪೋಟೋಗೆ ಫೋಸ್ ಕೊಟ್ಟರು!

ಮಿಕ್ಕಂತೆ ಬಂಧನದಲ್ಲಿದ್ದ ಕಾಮ್ರೇಡ್ ಗಳನ್ನು ಮಾತಿಗೆಳೆದಾಗ ಅನೇಕ ವಿಷಯಗಳ ಬಗ್ಗೆ ಮಾತಾಡುತ್ತಾ "ಕಾಂಗ್ರೆಸ್ಸಿಗೆ ಇದು ಎಂತಹ ಅವಕಾಶ ಸರ್.. ಅವರು ಬಳಸಿಕೊಳ್ಳುತ್ತಿಲ್ಲ ನೋಡಿ.. ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ‌ ಅಂತವರಿಗೆ ಎಷ್ಟು ಚಿಕ್ಕ ವಯಸ್ಸಿಗೆಲ್ಲ ಎಂತೆಂತಹ‌ ಅಧಿಕಾರ ಸಿಕ್ಕಿ ಎಂಜಾಯ್ ಮಾಡಿದ್ದಾರೆ. ಈಗ ಎಂತಾ ಅವಕಾಶವಿತ್ತು..? ಇವರಿಗೆಲ್ಲಾ ಏನು ರೋಗ.. ಬೀದಿಗೆ ಬರೋಕೆ..?" ಎಂದಾಗ ಬಹುಶಃ ಅಂತ ಹೋರಾಟಗಳೆಲ್ಲಾ ಸಿದ್ದರಾಮಯ್ಯನವರ ಕಾಲಕ್ಕೇ ಮುಗಿದು ಹೋಗುತ್ತೇನೋ.." ಎಂಬ‌ ನಿಟ್ಟುಸಿರಿನೊಂದಿಗೆ ಕಾಂಗ್ರೆಸ್, ದಳಗಳಿಗೆ ಸಂತಾಪ ಸೂಚಿಸುತ್ತಾ ಹೊರಟೆವು. ಅಲ್ಲಿದ್ದ ಒಬ್ಬ ಪೋಲಿಸ್ ಪೇದೆ ನಮ್ಮ ಹತ್ತಿರ ಪ್ರೀತಿಯಿಂದ ಮಾತನಾಡುತ್ತಾ "ನಿಮ್ಮನ್ನೆಲ್ಲಾ ನೋಡಿ ಖುಷಿಯಾಯಿತು ಸಾರ್..  ಏನ್ ಸಾರ್ ಈ ಮುಂಡೇ ಮಕ್ಕಳು ಜಾತಿ ಮತ ಅಂತ ಈ ದೇಶಾನೇ ಒಡೆದಾಕ್ತಾರಲ್ಲ ಸಾರ್..?! ನನಗೆ ಈ ಕೆಲಸ ಇಲ್ಲದಿದ್ದಿದ್ದರೆ ನಿಮ್ಮ ಜತೆ ಹೋರಾಟದಲ್ಲಿರ್ತಿದ್ದೆ ಸರ್.." ಎಂದರು. "ನಿಮಗಿದ್ದಷ್ಟು ಅರಿವು, ಕಾಳಜಿಗಳು ನಿಮ್ಮ ಕಮೀಷನರ್ ಗೆ ಇದಿದ್ದರೆ ಎಷ್ಟು ಚೆನ್ನಾಗಿರ್ತಿತ್ತಪ್ಪ.." ಅಂದೆ. "ಹೋಗ್ಲಿ ಬಿಡಿ ಸರ್ ಹೊರಗಡೆ ಇದನ್ನ ಹೇಳಬೇಡಿ .." ಎಂದರು.

‌ಅಷ್ಟರಲ್ಲಿ "ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಒಂದಷ್ಟು ಮಂದಿಯಿದ್ದಾರೆ‌ ಅವರನ್ನು ನೀವು ನೋಡೋದು ಒಳ್ಳೆಯದು.." ಎಂದು ಯಾರೋ ಹೇಳಿದರು. ಅತ್ತ ಹೊರಟೆವು.. ಅಲ್ಲಿ ಬಂಧಿತರಾದವರು ಯುವ ಟೆಕ್ಕೀಗಳು. ಒಬ್ಬರಿಗೊಬ್ಬರು ಪರಿಚಯ ಇಲ್ಲದಿದ್ದರೂ ಅವರೆಲ್ಲಾ ಬೇರೆ ಬೇರೆ ಕಡೆ ಬಂಧಿತರಾಗಿ ಆ ಠಾಣೆಗೆ ಬಂದಿದ್ದರು.‌ ಅಲ್ಲಿ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡಿದ್ದರು. ಒಂದು ಒಳ್ಳೇ ಉದ್ದೇಶ ಅವರನ್ನೆಲ್ಲಾ ಅಲ್ಲಿಗೆ ತಂದು ಬೆಸೆದಿತ್ತು!  ಅವರಿಗ್ಯಾರಿಗೂ ನಮ್ಮ ಪರಿಚಯವಿರಲಿಲ್ಲ. ಅವರನ್ನು ಪರಿಚಯಿಸಿಕೊಂಡು ಅವರಿಗೆ ಧೈರ್ಯ ಹೇಳಿ ಪೋಲೀಸರೊಂದಿಗೆ ಮಾತನಾಡಿ ಟೀ ತರಿಸಿಕೊಟ್ಟು ಮುಂದಕ್ಕೆ ಹೊರಟೆವು.

ಕೆಲವು ಠಾಣೆಗಳ ಸಮಸ್ಯೆಗಳನ್ನು ಪೋನಿನಲ್ಲೇ ನಿಭಾಯಿಸಿದೆವು. ಮಾರನೇ ದಿನ ಪ್ರತಿಭಟಿಸುತ್ತಿದ್ದ ಸ್ಥಳಗಳಿಗೆಲ್ಲಾ ಭೇಟಿ ನೀಡುತ್ತಾ ಸಂಜೆ ಆರ್ಟ್ಸ್ ಕಾಲೇಜಿನ ಪುಟ್ ಪಾತಿನಲ್ಲಿ ಕೇವಲ ಮೂರು ಮಂದಿ ವಿದ್ಯಾರ್ಥಿನಿಯರು ಪ್ರತಿಭಟನಾ ಫಲಕ ಮತ್ತು ಭಾರತದ ಭಾವುಟ ಹಿಡಿದು ನಿಂತಿದ್ದರು. ಅವರೊಂದಿಗೆ ಪೊಲೀಸರು ಬಿಸಿಬಿಸಿ ವಾಗ್ವಾದ ನಡೆಸುತಿದ್ದರು. ಅಲ್ಲಿಗೆ ಹೋದೆ.. ಆಶ್ಚರ್ಯ! ಪೋಲಿಸರು "ನಿಷೇದಾಜ್ಞೆ ಇದೆ ಇಲ್ಲಿ ಪ್ರತಿಭಟನೆ ಮಾಡುವಂತಿಲ್ಲ" ಎಂದರೆ, ಆ ಹುಡುಗಿಯರು "ನಾವು ಮೂರು ಜನ ಇದ್ದೇವೆ. ನಾಲ್ಕು ಜನಕ್ಕಿಂತಲೂ ಹೆಚ್ಚಿದ್ದರೆ ನಿಷೇಧಾಜ್ಞೆ ಮೀರಿದಂತೆ" ಎಂದು ಕಾನೂನು ಉದ್ದರಿಸಿ ವಾದಿಸುತಿದ್ದರು. ನನಗಂತೂ ತೀರ ಖುಷಿಯಾಯಿತು! ಈ ಮಕ್ಕಳ ಧೈರ್ಯ ಮತ್ತು ಕಾನೂನಿನ ಅರಿವು ನನ್ನನ್ನು ಮೂಖನನ್ನಾಗಿಸಿತ್ತು! ಜನಪರ ಹೋರಾಟವೊಂದು ಎಷ್ಟೆಲ್ಲಾ ಪಾಠಗಳನ್ನು ಕಲಿಸುತ್ತದಲ್ಲವೆ..? 

ಇಂದು ಶಿವಾಜಿನಗರದ ಕಡೆ ಹೊರಟೆ.. "ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು" ಎಂಬಂತೆ ಎಲ್ಲೆಡೆಯಿಂದ ಬರುತ್ತಿದ್ದ  ಆ ಜನಸಾಗರದಲ್ಲಿ ಕಳೆದು ಹೋದೆ..!! ಹೊರಬರುವಷ್ಟರಲ್ಲಿ ಸಂಜೆಯಾಗಿತ್ತು. ಒಬ್ಬ ಸರಿಯಾದ ನಾಯಕನೂ ಇಲ್ಲದೆ ಒಂದು ಹೋರಾಟ ಇಡೀ ದೇಶಾದ್ಯಂತ ಹರಳುಗಟ್ಟುತ್ತಿದೆ ಎಂದರೆ ಎಂತಾ ಬೆರಗು ಮತ್ತು ಆಶ್ಚರ್ಯ!!

ಮಧ್ಯೆ ಯಾರೋ ಹೇಳಿದರು ಪಂಕ್ಚರ್ ಹಾಕುವವರನ್ನು, ಅನಕ್ಷರಸ್ತರನ್ನು ಯಾವನೋ ಹಿಯಾಳಿಸುತಿದ್ದಾನೆಂದರು. ನನಗೆ ಏನೂ ಅನ್ನಿಸಲಿಲ್ಲ "ಹೊಟ್ಟೆಗೆ ಅನ್ನ ತಿನ್ನುವವರು ಈ ರೀತಿ ಮಾತಾಡಲ್ಲ.. ಉಗಿದು ಬಿಡ್ರಿ.." ಅಂದವನು ಮತ್ತೇ "ಉಗೀಬೇಡಿ ಬಿಡಿ, ಅವನಿಗೆ ಉಗಿದು ನಿಮ್ಮ ಎಂಜಲು ಯಾಕೆ ಗಲೀಜು ಮಾಡ್ಕೋತೀರಿ..?" ಎಂದು ಮುಂದೆ ಹೊರಟೆ..