ಎನ್ ಆರ್ ಸಿ ನೋಂದಣಿ ಪ್ರಕ್ರಿಯೆ; ವಯಸ್ಸಾದ ನಾಗರಿಕರ ಬಳಿ ಜನನ ಪ್ರಮಾಣ ಪತ್ರವೇ ಇಲ್ಲ

ಎನ್ ಆರ್ ಸಿ ನೋಂದಣಿ ಪ್ರಕ್ರಿಯೆ; ವಯಸ್ಸಾದ ನಾಗರಿಕರ ಬಳಿ ಜನನ ಪ್ರಮಾಣ ಪತ್ರವೇ ಇಲ್ಲ

ದೆಹಲಿ : ರಾಷ್ಟ್ರೀಯ ನಾಗರಿಕ ನೋಂದಣಿಗೆ ಪೌರತ್ವವನ್ನು ಸಾಬೀತು ಪಡಿಸಲು ಜನ್ಮ ದಿನಾಂಕ ಮತ್ತು ಹುಟ್ಟಿದ ಸ್ಥಳ ಸಂಬಂಧಿಸಿದ ಯಾವುದೇ ದಾಖಲೆಯನ್ನು ಸಲ್ಲಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆಯಾದರೂ ಭಾರತದ ಹೆಚ್ಚಿನ ಭಾರತೀಯರು ವಿಶೇಷವಾಗಿ ವಯಸ್ಸಾದ ನಾಗರಿಕರು ಜನನ ಪ್ರಮಾಣ ಪತ್ರಗಳನ್ನು ಹೊಂದಿಲ್ಲ ಎಂಬ ಅಂಶವನ್ನು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ವರದಿ ಹೊರಗೆಡವಿದೆ.

ದೇಶದಲ್ಲಿ ಜನನ ಮತ್ತು ಮರಣಗಳ ನೋಂದಣಿಯ ವ್ಯತ್ಯಾಸಗಳನ್ನು ಗಮನಿಸಿದರೆ ಸರ್ಕಾರಿ ಮೂಲ ಸೌಕರ್ಯಗಳು ಎನ್‌ಆರ್‌ಸಿ ಯನ್ನು ಪ್ರಾರಂಭಿಸಲು ಸೂಕ್ತವಾಗಿಲ್ಲ. ಇದು ಅವ್ಯವಸ್ಥೆಯ ಗೊಂದಲಕ್ಕೆ ಕಾರಣವಾಗುತ್ತದೆ ಎಂದು  ಥಿಂಕ್ ಟ್ಯಾಂಕ್ ಕೂಡ ವರದಿ ಮಾಡಿದೆ.

2005 -06 ರಲ್ಲಿ ಜನನ ನೋಂದಣಿ ಶೇ 26.9 ರಷ್ಟಿತ್ತು. ನಂತರ 2015 -16 ರಲ್ಲಿ ಶೇ 62.3 ರಷ್ಟು ಹೆಚ್ಚಾಗಿದೆ ಎಂದು (ಎನ್ ಎಫ್ ಎಚ್ ಎಸ್-4 ) ವರದಿ ತಿಳಿಸಿದೆ. ಭಾರತದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ 5 ವರ್ಷದೊಳಗಿನ ಎಲ್ಲಾ ಮಕ್ಕಳು ಶೇ 77 ರಷ್ಟು ಜನನ ದಿನಾಂಕಗಳನ್ನು ನೋಂದಾಯಿಸಿಕೊಂಡಿದ್ದಾರೆ. ಮತ್ತು ಜನನ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ಶೇ 56. 4ರಷ್ಟು ನೋಂದಣಿಯಾಗಿದೆ ಎಂದೂ ಎನ್ ಎಚ್ ಎಫ್ ಎಸ್ ವರದಿ ಹೇಳಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಕೇವಲ ಶೇ 55 .6 ರಿಂದ 60.2 ರಷ್ಟು ಮಾತ್ರ ಜನನ ನೋಂದಣಿ ಹಾಗೂ ಜನನ ಪ್ರಮಾಣ ಪತ್ರಗಳನ್ನು ಪಡೆದಿದ್ದರೇ ಇತರೆ ಜಾತಿಗಳಲ್ಲಿ ಶೇ 71. 9 ರಷ್ಟು ನೋಂದಣಿಗಳಾಗಿವೆ ಹಾಗಾಗಿ ಇವುಗಳನ್ನು ಅತ್ಯಂತ ಹಿಂದುಳಿದ ಗುಂಪು ಎಂದು ವರದಿ ವಿವರಿಸಿದೆ.

2005 ಕ್ಕಿಂತ ಮುಂಚಿತವಾಗಿ ಜನಿಸಿದವರು ತಮ್ಮ ಜನನ ಪ್ರಮಾಣಪತ್ರಗಳನ್ನು ಹೊಂದುವ ಸಾಧ್ಯತೆ ತುಂಬಾ ಕಡಿಮೆ. ಏಕೆಂದರೆ ಹೆಚ್ಚಾಗಿ ಬಡ ಕುಟುಂಬಕ್ಕೆ ಸೇರಿದ ಮಕ್ಕಳು, ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಗಳು, ಶಾಲಾ ಶಿಕ್ಷಣವಿಲ್ಲದ ಕುಟುಂಬಗಳು ತಮ್ಮ ಜನನ ಪ್ರಮಾಣ ಪತ್ರವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ ಎಂಬ ಅಂಶ ವರದಿಯಿಂದ ಗೊತ್ತಾಗಿದೆ.

ಅಸ್ಸಾಂ ಎನ್ ಆರ್ ಸಿಯಲ್ಲಿ ಸಾಮಾನ್ಯವಾಗಿ ಜನನ ಪ್ರಮಾಣಪತ್ರವನ್ನು ಹೆಚ್ಚು ಬಳಸಲಾಗುತ್ತದೆ. ಎನ್ ಆರ್ ಸಿ ಗೆ ಸಂಬಂಧಿಸಿದಂತೆ ಜನನ ಪ್ರಮಾಣ ಪತ್ರಗಳು ವ್ಯಕ್ತಿಯ ಜನ್ಮ ದಿನಾಂಕ ಮತ್ತು ಸ್ಥಳದ ಪುರಾವೆಗಾಗಿ ಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಆದರೆ ಇದರ ಜೊತೆಗೆ ಚುನಾವಣಾ ಆಯೋಗ ನೀಡಿರುವ ಗುರುತಿನ ಪತ್ರ, ಪಾಸ್‌ಪೋರ್ಟ್, ಆಧಾರ್‌ಕಾರ್ಡ್, ಚಾಲನೆ ಪರವಾನಿಗೆಗಳು, ವಿಮಾ ಪತ್ರಗಳು ಶಾಲೆ ಬಿಡುವ ಪ್ರಮಾಣ ಪತ್ರಗಳು ಮತ್ತು ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಇದರಲ್ಲಿ ಇನ್ನಿತರ ದಾಖಲೆಗಳಾಗಿ ನೀಡಬೇಕಾಗುತ್ತದೆ.

2019 ರ ಡಿಸೆಂಬರ್ 20 ರಂದು ಪ್ರಕಟವಾದ ಪಿಐಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಇದನ್ನು ಪ್ರಸ್ತಾಪಿಸಿದೆ. ನಿಮ್ಮ ಜನ್ಮ ವಿವರಗಳು ಇಲ್ಲದಿದ್ದರೆ ಪೋಷಕರ ಬಳಿ ದಾಖಲೆ ಪಡೆದು ಸಲ್ಲಿಸಬೇಕಾಗುತ್ತದೆ.

18 ವರ್ಷಕ್ಕಿಂತ ಒಳಗಿರುವ ಮತ ಚಲಾಯಿಸದ ಅಥವಾ ಯಾವುದೇ ಶಾಲಾ ಪ್ರಮಾಣಪತ್ರಗಳನ್ನು ಹೊಂದಿರದ ಮಕ್ಕಳಿಗೆ ಪೋಷಕರೊಂದಿಗೆ ಸಂಪರ್ಕವಿದೆ ಎಂದು ಹೇಳಲು ಇರುವ ಏಕೈಕ ದಾಖಲೆ ಎಂದರೆ ಅದು ಜನನ ಪ್ರಮಾಣಪತ್ರ ಎಂದು ಅಸ್ಸಾಂ ಗುವಾಹಟಿಯ ಮಾನವ ಹಕ್ಕುಗಳ ವಕೀಲ ಅಮನ್ ವಾದುದ್ ತಿಳಿಸಿದ್ದಾರೆ.

ಜನನ ಮತ್ತು ಮರಣಗಳನ್ನು ಇನ್ನೂ ನೋಂದಾಯಿಸಿಲ್ಲ

ಪ್ರಸ್ತುತ ದೇಶದಲ್ಲಿ ಪ್ರತಿ ಜನನ ಮತ್ತು ಮರಣಗಳು ಕ್ರಮಬದ್ಧವಾಗಿ ಇನ್ನೂ ನೋಂದಣಿಯಾಗುತ್ತಿಲ್ಲ. ಆದರೆ ಶಿಶು ಮರಣ ನೋಂದಾಯಿಸುವಲ್ಲಿ ಕಳಪೆ ಮೂಲಸೌಕರ್ಯ ಹೊಂದಿರುವ ರಾಜ್ಯಗಳು ಹೆಚ್ಚಾಗಿ ಶಿಶು ಮರಣ ಪ್ರಮಾಣವನ್ನು ಹೊಂದಿವೆ ಎಂದು ಥಿಂಕ್ ಟ್ಯಾಂಕ್ ನಿರ್ದೇಶಕಿ ಶಮಿಕಾ ರವಿ ಮತ್ತು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ (ಐ ಎಸ್ ಐ) ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಪಕ ಮುದಿತ್ ಕಪೂರ್ ತಮ್ಮ ವರದಿಯಲ್ಲಿ ವಿವರಿಸಿದ್ದಾರೆ.

ಅಸ್ಸಾಂ ನಲ್ಲಿ ನಡೆದ ಅಂತಿಮ ಸಮೀಕ್ಷೆಯಲ್ಲಿ ಸುಮಾರು 40 ಲಕ್ಷ ಜನರನ್ನು ಎನ್‌ಆರ್‌ಸಿ ಪ್ರಕ್ರಿಯೆಯಿಂದಲೇ ಹೊರಗಿಡಸಲಾಯಿತು. ಹೀಗೆ ಹೊರಬಿದ್ದವರ ಪೈಕಿ ಬಹುತೇಕ ಮಕ್ಕಳಿಗೆ ಪೋಷಕರು ತಮ್ಮ ಜನನ ಪ್ರಮಾಣ ಪತ್ರವನ್ನು ನೀಡದೇ ಇರುವುದೇ ಮುಖ್ಯ ಕಾರಣ ಎಂದು ಅಮನ್ ವಾದುದ್ ತಿಳಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯಿದೆ (ಆರ್ ಟಿ ಐ) ಪ್ರಕಾರ ಶಾಲಾ ಪ್ರವೇಶಕ್ಕೆ ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ ಎಂದು ಹೇಳಿತ್ತು.  ಆದರೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಮಕ್ಕಳು ಈಗಲೂ ಸವಾಲುಗಳನ್ನು ಎದುರಿಸುವಂತಹ ಪರಿಸ್ಥಿತಿ ಉಂಟಾಗಿದೆ. ಈಗಾಗಲೇ ದೇಶದಲ್ಲಿ ಎಷ್ಟೋ ಮಕ್ಕಳು ತಮ್ಮ ಜನನ ಪ್ರಮಾಣ ಪತ್ರಗಳಿಲ್ಲದೆ ಅಳಿವಿನ ಅಂಚಿನಲ್ಲಿದ್ದಾರೆ ಎಂದು ದೆಹಲಿಯ ಬಿ ಆರ್ ಅಂಬೇಡ್ಕರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ದೀಪಾ ಸಿನ್ಹಾ ತಿಳಿಸಿದ್ದಾರೆ.

2000ರಲ್ಲಿ ಸಾಂಸ್ಥಿಕ ವಿತರಣೆಗಳು ಹೆಚ್ಚಾದ ನಂತರವೇ ಜನನ ನೋಂದಣಿಯನ್ನು ತೆಗೆದುಕೊಳ್ಳಲಾಗಿದೆ. ಆದರೆ 2000 ಕ್ಕಿಂತ ಮೊದಲು ಜನಿಸಿದ ಅನೇಕ ವಯಸ್ಕರಲ್ಲಿ ಜನನ ಪ್ರಮಾಣಪತ್ರಗಳು ಇರುವುದಿಲ್ಲ. ಅಥವಾ ಶಾಲೆಗಳಲ್ಲಿ ತಮ್ಮ ಜನ್ಮ ದಿನಾಂಕಗಳು ಬೇರೆ ರೀತಿಯಲ್ಲಿ ತೋರಿಸುವ ದಾಖಲೆಗಳನ್ನು ಹೊಂದಿರುತ್ತಾರೆ. ಇವುಗಳು ಯಾವುದೇ ಕೆಟ್ಟ ಉದ್ದೇಶದಿಂದ ಆಗಿರುವುದಲ್ಲ ಬದಲಾಗಿ ಪೋಷಕರು ತಮ್ಮ ಮಕ್ಕಳ ಜನನ ಪ್ರಮಾಣ ಪತ್ರವನ್ನು ಹೊಂದಿರದೇ ಇರುವುದೇ ಮುಖ್ಯ ಕಾರಣ ಎಂದು  ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ನೋಂದಾಯಿಸದ ಮಕ್ಕಳು

1969 ರ ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ ಪ್ರಕಾರ ಪ್ರತಿ ಜನನ ಮತ್ತು ಮರಣ ಸಂಭವಿಸಿದ 21 ದಿನಗಳಲ್ಲಿ ನೋಂದಣಿ ಮಾಡುವುದು ಕಡ್ಡಾಯ. ಆದರೆ 2017 ರಲ್ಲಿ ನೋಂದಣಿಯಾದ ಜನನಗಳಲ್ಲಿ ಶೇ 84. 9,  ಮರಣ ನೋಂದಣಿಯಲ್ಲಿ ಶೇ 79.6 ರಷ್ಟು ಮಾತ್ರ ನೋಂದಣಿಯಾಗಿದೆ ಎಂದು ಭಾರತದ ರಿಜಿಸ್ಟ್ರಾರ್ ಜನರಲ್ ಕಚೇರಿಯ ನಾಗರಿಕ ನೋಂದಣಿ ವ್ಯವಸ್ಥೆಯ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

2019 ರ ಯುನಿಸೆಫ್ ವರದಿಯ ಪ್ರಕಾರ ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ 5 ವರ್ಷದೊಳಗಿನ ಸುಮಾರು 28 ಮಿಲಿಯನ್ ಮಕ್ಕಳು ತಮ್ಮ ಜನನಗಳನ್ನು ನೊಂದಾಯಿಸಿಲ್ಲ ಎಂದು ಯುನಿಸೆಫ್ ವರದಿಯಲ್ಲಿ ಅಂದಾಜಿಸಿದೆ. ಪ್ರತಿ ಮಗುವಿಗೂ ಜನನ ನೋಂದಣಿ ಪ್ರಮುಖ ಪಾತ್ರ ವಹಿಸುತ್ತದೆ. ಜನನ ನೋಂದಣಿ ಮಾಡಿಸುವುದರಿಂದ ಮಗುವಿನ ಇರುವಿಕೆಯ ಜೊತೆಗೆ ಕಾನೂನು ಮಾನ್ಯತೆಯನ್ನು ಒದಗಿಸುತ್ತದೆ. ಹಾಗೂ ಕಾನೂನಿಗೆ ಸಂಬಂಧಿಸಿದಂತೆ ದೇಶದವರು ಎಂಬುದಕ್ಕೆ ಜನನ ಪ್ರಮಾಣಪತ್ರವು ಪ್ರಮುಖ ಸಾಕ್ಷಿಯಾಗಿರುತ್ತದೆ.

ಜನನ ಸಮಯದಲ್ಲಿ ನೋಂದಾಯಿಸದೇ ಇದ್ದರೆ ಮಗುವನ್ನು ನಂತರದ ದಿನಗಳಲ್ಲಿ ಲೆಕ್ಕ ಹಾಕಲಾಗುತ್ತದೆ ಹಾಗೂ ಅವರು ಬದುಕಿದ್ದರೆ ಮಾತ್ರ ಜನಗಣತಿಯಲ್ಲಿ ಎಣಿಸಲ್ಪಡುತ್ತಾರೆ ಎಂದು ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆಯ (ಐಎಸ್ ಐ ) ಕಪೂರ್ ಹೇಳಿದ್ದಾರೆ. ಹುಟ್ಟಿದ ತಕ್ಷಣವೇ ಜನನ ನೋಂದಣಿ ಮಾಡಿಸದಿದ್ದರೂ ನಂತರ ಕುಟುಂಬಕ್ಕೆ ಜನನ ಪ್ರಮಾಣ ಪತ್ರ ಅಗತ್ಯವಿದ್ದರೆ ಜನನ ನಂತರವು ನೋಂದಾಯಿಸಬಹುದು ಎಂದು ಕಪೂರ್ ತಿಳಿಸಿದ್ದಾರೆ.

ದೇಶದಲ್ಲಿ ನಡೆದ ಒಟ್ಟು ಜನನಗಳನ್ನು ಏಕೆ ನೋಂದಾಯಿಸಲಾಗಿಲ್ಲ?

ಕಡಿಮೆ ಜನನ ನೋಂದಣಿ ಮಾಡಿದ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿವೆ. ಅವುಗಳಲ್ಲಿ ನಾಲ್ಕು ದೊಡ್ಡ ರಾಜ್ಯಗಳೇ ಇದ್ದು ಉತ್ತರ ಪ್ರದೇಶ (61.5%) ಬಿಹಾರ (73.7%) ಮಧ್ಯಪ್ರದೇಶ (74.6%) ಮತ್ತು ಜಮ್ಮು ಮತ್ತು ಕಾಶ್ಮೀರ (78.8%) ರಾಜ್ಯಗಳು ಸೇರಿವೆ.

2017 ರ ಸಿ ಆರ್ ಎಸ್ ವರದಿ ಪ್ರಕಾರ ಕೇವಲ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜನನ ಮತ್ತು ಮರಣಗಳ ನೋಂದಣಿಯ ಬಗ್ಗೆ ಮಾಹಿತಿ ನೀಡಿವೆ ಎಂದು ವರದಿ ಹೇಳಿದೆ.

ಜನನಗಳು ನೋಂದಣಿಯಾಗದೇ ಇರಲು ಹಲವು ಕಾರಣಗಳಿವೆ. ಕೆಲವು ರಾಜ್ಯಗಳಲ್ಲಿ ಮೂಲ ಸೌಕರ್ಯಗಳು ಕಳಪೆಯಾಗಿದೆ. ಕುಟುಂಬಗಳು ಹತ್ತಿರದ ನೋಂದಣಿ ಕೇಂದ್ರಗಳಿಗೆ ಹೋಗಲು ಸಾರಿಗೆ ಸಂಪರ್ಕಗಳಿಲ್ಲದೆ ಇರುವುದು ಮುಖ್ಯ ಕಾರಣ. ಹಾಗೆಯೇ ಸರ್ಕಾರ ನೀಡುವ ಕೆಲ ಸಾಮಾಜಿಕ ಸೇವೆಗಳಿಗೆ ಜನನ ಪ್ರಮಾಣಪತ್ರದ ಅವಶ್ಯಕತೆ ಬೇಕಿರುವುದಿಲ್ಲ . ಕೆಳವರ್ಗದ ಮಕ್ಕಳು ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರುವುದು ಅಥವಾ ಪ್ರದೇಶಗಳಲ್ಲಿ ಕಡಿಮೆ ನೋಂದಣಿ ಕೇಂದ್ರಗಳಿರುವುದರಿಂದ ನೋಂದಣಿಗಳಾಗದೇ ಇರುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಯುನಿಸೆಫ್ ವರದಿ ತಿಳಿಸಿದೆ.
ಎನ್ ಆರ್ ಸಿ ಜಾರಿಯಿಂದಾಗಿ ಮಹಾರಾಷ್ಟ್ರ,ಗುಜರಾತ್, ಕೊಲ್ಕಾತ್ತಾದ ಸೂರತ್ ಮತ್ತು ಮೊಡಾಸಾದಲ್ಲಿ ಜನನ ಪ್ರಮಾಣಪತ್ರಕ್ಕಾಗಿ ಅರ್ಜಿಗಳ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ. ಅಸ್ಸಾಂ ಸಹ ಇದರಿಂದ ಹೊರತಾಗಿಲ್ಲ. ಅಲ್ಲಿಯು ಸಹ ಜನನ ಪ್ರಮಾಣ ಪತ್ರಕ್ಕಾಗಿ ಅರ್ಜಿಗಳನ್ನು ಹೆಚ್ಚು ಹಾಕಲಾಗಿದೆ.

ಭಾರತದಲ್ಲಿನ ಪೋಷಕರು ಹೆಚ್ಚಾಗಿ ಹುಟ್ಟಿದ ತಕ್ಷಣ ಜನನ ನೋಂದಣಿ ಮಾಡಿಸುವುದಿಲ್ಲ. ಬದಲಾಗಿ ಕೆಲವು ದಿನಗಳ ನಂತರ ಬೇರೆ ಬೇರೆ ಉದ್ದೇಶಗಳಿಗೆ ಅಗತ್ಯವಿದ್ದರೆ ಮಾತ್ರ ಸಂಗ್ರಹಿಸುವ ಪ್ರಯತ್ನವನ್ನು ಮಾಡುತ್ತಾರೆ ಎಂದು ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ಪಾಪುಲೇಶನ್ ಸೈನ್ಸಸ್ ಪ್ರಾಧ್ಯಾಪಕ ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.